ಮಂತ್ರಗಳು ಪವಿತ್ರವಾ ? ಅಪವಿತ್ರವಾ ? ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇದನ್ನೆಲ್ಲ ನಾನು ನೋಡುವ ರೀತಿಯೇ ಬೇರೆ. ಪವಿತ್ರ ಅಪವಿತ್ರ ಎಂಬುದು ಅವರವರ ಭಾವಕ್ಕೆ ಭಕುತಿಗೆ ಸಂಬಂಧಿಸಿದ್ದು. ಹೀಗಾಗಿ ಪವಿತ್ರವೋ ಅಲ್ಲವೋ ಅನ್ನುವುದು ನನಗೆ ಅಷ್ಠು ಮುಖ್ಯವಲ್ಲ. ಆದರೆ ನಾನು ಶಬ್ದಗಳನ್ನು ಕೇವಲ ಅಕ್ಷರಗಳ ಸಮೂಹ ಎಂದು ನಾನು ಭಾವಿಸಿಲ್ಲ. ಶಬ್ದಗಳು ಬಳಕೆಯಿಂದ ಅರ್ಥವನ್ನು ಪಡೆಯುತ್ತವೆ. ಹಾಗೆ ಶಬ್ದಕ್ಕೆ ಭಾವ ತುಂಬುವುದು ಎಂದರೆ, ಅದಕ್ಕೆ ಜೀವವನ್ನು ತುಂಬುವುದು. ಜೀವ ಪಡೆದ ಶಬ್ದಗಳು ವಿಭಿನ್ನ ಶಕ್ತಿಯನ್ನು ಹೊಂದುತ್ತವೆ.
ನನಗೆ ಈ ವಿಚಾರದಲ್ಲಿ ಕುತೂಹಲವಿದೆ. ಒಂದು ಶಬ್ದ ಎಂದರೆ ನಾದವೂ ಸಹ. ಹಾಗೆ ಸ್ವರ. ಶಬ್ದದ ಸತತವಾದ ಉಚ್ಚಾರ ಆಶಬ್ದವನ್ನು ಸಬಲಗೊಳಿಸುತ್ತದೆಯಾ ? ಆ ಶಬ್ದಕ್ಕೆ ಉಚ್ಚಾರಣೆ ನೀಡುವಕೊದುಗೆಯಾವರೀತಿಯದು ? ನಾವು ಯಾವುದೇ ಶಬ್ದವನ್ನು ಉಚ್ಚರಿಸಲಿ, ಹೀಗೆ ಉಚ್ಚಾರಣೆ ಮಾಡುವಾಗ ನಾವು ಕೆಲವೊಮ್ಮೆ ಗಾಳಿಯನ್ನು ಒಳಗೆ ಎಳೆದುಕೊಂಡರೆ, ಕೆಲವೊಮ್ಮೆ ಹೊರಕ್ಕೆ ಬಿಡುತ್ತೇವೆ. ಅಂದರೆ ಪ್ರತಿ ಶಬ್ದದ ಉಚ್ಚಾರಣೆ ಕೂಡ ಬೇರೆ ಬೇರೆ ರೀತಿಯ ಉಚ್ವಾಸ ಮತ್ತು ನಿಶ್ವಾಸಕ್ಕೆ ಕಾರಣವಾಗಿರುತ್ತದೆ, ಒಂದು ಶಬ್ದವನ್ನು ಉಚ್ಚರಿಸುವಾಗ ನಾವು ತೆಗೆದುಕೊಳ್ಳುವ ಮತ್ತು ಬಿಡುವ ಶ್ವಾಸದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಶಬ್ದದ ಉಚ್ಚಾರಣೆ ಮತ್ತು ಸ್ವೀಕಾರದ ಅನುಭವ ಇನ್ನೊಂದು ಶಬ್ದಕ್ಕೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ಶಬ್ದಕ್ಕೂ ಪ್ರತ್ಯೇಕವಾದ ಅರ್ಥವಿರುವಂತೆ ಪ್ರತ್ಯೇಕವಾದ ಭಾವ ಶಕ್ತಿಯೂ ಇರುತ್ತದೆ.
ಹೀಗೆ ಪ್ರತ್ಯೇಕ ಅಸ್ಥಿತ್ವವನ್ನು ಹೊಂದಿರುವ ಶಬ್ದಗಳು ಉಂಟು ಮಾಡುವ ಪರಿಣಾಮ ಕೂಡ ಬೇರೆ. ಒಬ್ಬನಿಗೆ ಸೂ.. ಮಗ ಎಂದು ಬೈದರೆ ಆತನಿಗೆ ಸಿಟ್ಟು ಬರುತ್ತದೆ. ಐ ಲವ್ ಯೂ ಎಂದರೆ ಸಂತೋಷವಾಗುತ್ತದೆ. ಯಾಕೆ ? ಈ ಶಬ್ದಗಳು ಬಳಕೆಯಿಂದ ಪಡೆದುಕೊಂಡ ಅರ್ಥ ಇದೆಯಲ್ಲ ಅದು ನಮ್ಮ ಮನಸ್ಸಿನಲ್ಲಿ ಮೂಡಿಸುವ ಪರಿಣಾಮವೇ ಇದಕ್ಕೆ ಕಾರಣ ಅಲ್ಲವೆ ? ಹಾಗಿದ್ದರೆ ಬೇರೆ ಬೇರೆ ಶಬ್ದಗಳು ನಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವ ತರಂಗಗಳು ಬೇರೆ ಬೇರೆಯಾಗಿರುತ್ತದೆ ಎಂದಂತಾಯಿತು. ಆದರೆ ಈ ವಿಚಾರದಲ್ಲಿಯೂ ಏಕರೂಪತೆ ಅನ್ನುವುದಿಲ್ಲ. ಒಂದು ಶಬ್ದ ಒಬ್ಬನಲ್ಲಿ ಮೂಡಿಸುವ ಭಾವ ಪ್ರತಿಕ್ರಿಯೆ ಇನ್ನೊಬ್ಬನಲ್ಲಿ ಮೂಡಿಸುವ ಪ್ರತಿಕ್ರಿಯೆಗಿಂತ ಬೇರೆ. ಅಂದರೆ ಒಂದು ಶಬ್ದವನ್ನು ಬಳಸುವವ ಒಂದು ಅರ್ಥದಲ್ಲಿ ಬಳಸಿದರೆ ಅದನ್ನು ಕೇಳಿಸಿಕೊಂಡವ ಬೇರೆ ಅರ್ಥದಲ್ಲಿ ಅದನ್ನು ಸ್ವೀಕರಿಸಬಹುದು. ಅಂದರೆ ಒಂದು ಶಬ್ದಕ್ಕೆ ನಿಶ್ಚಿತವಾದ ಅರ್ಥ ಇದೆ ಎಂದುಕೊಂಡರೂ ಅದು ಶಬ್ದವನ್ನು ಕೇಳಿಸಿಕೊಳ್ಳುವವರು ಮತ್ತು ಬಳಸುವವರು ಹೊಸ ಹೊಸ ಅರ್ಥಗಳನ್ನು ನೀಡುತ್ತ ಆ ಶಬ್ದವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಲೇ ಇರುತ್ತಾರೆ. ಹೀಗಾಗಿ ಶಬ್ದವನ್ನು ಬಳಸುವವನೆಗೆ ಒಂದು ಶಬ್ದ ನೀಡುವ ಅನುಭವ ಒಂದಾದರೆ, ಅದನ್ನು ಕೇಳಿಸಿಕೊಂಡವನಿಗೆ ನೀಡುವ ಅನುಭವವೇ ಬೇರೆ. ಪ್ರತಿ ಶಬ್ದವನ್ನು ನಾವು ಬಳಸುವುದು ಮತ್ತು ಅರ್ಥೈಸುವುದು ನಮ್ಮ ಅನುಭವದದ ಆಧಾರದ ಮೇಲೆ. ಬೇರೊಬ್ಬರ ಅನುಭವದ ಆಧಾರದ ಮೇಲೆ ಬಳಸಲ್ಪಡುವ ಶಬ್ದ ನಮಗೆ ಅದೇ ಅರ್ಥವನ್ನು ನೀಡಲಾರದು. ಯಾಕೆಂದರೆ ಇನ್ನೊಬ್ಬರ ಅನುಭವ ಎಂದೂ ನಮ್ಮ ಅನುಭವವಾಗಲಾರದು.
ಇದನ್ನೆಲ್ಲ ನೋಡಿದರೆ ಒಂದಂತೂ ಸ್ಪಷ್ಟ. ಶಬ್ದಗಳು ಎಂದರೆ ಅದು ಕೇವಲ ಅಕ್ಷರಗಳ ಜೋಡಣೆ ಮಾತ್ರವಲ್ಲ. ಹಾಗೆ ಶಬ್ದಗಳನ್ನು ಪೊಣಿಸಿ ಸಿದ್ದಪಡಿಸುವ ವಾಕ್ಯಗಳು ಕೂಡ. ಇಂತಹ ಶಬ್ದ ಮತ್ತು ವಾಕ್ಯಗಳು ಮನಸ್ಸಿನಲ್ಲಿ ರೂಪಗೊಂಡ ಹೊರಬರುತ್ತವೆ. ಹಾಗಿದ್ದರೆ, ಶಬ್ದ ಮತ್ತು ವಾಕ್ಯವನ್ನು ಜೋಡಿಸುವ ಮನಸ್ಸು ತನ್ನೆಲ್ಲ ಶಕ್ತಿಯನ್ನು ಈ ಕ್ರಿಯೆಯಲ್ಲಿ ತೊಡಗಿಸುವುದಿಲ್ಲವೆ ? ಹಾಗೆ ತೊಡಗಿಸಿದರೆ ಆ ಮನಸ್ಸಿನಲ್ಲಿ ಶಕ್ತಿ, ಶಬ್ದ ಮತ್ತು ವಾಕ್ಯದಲ್ಲಿ ಪ್ರತಿಬಿಂಬಿತವಾಗಬಲ್ಲದೆ ?
ಹೀಗೆ ಮನಸ್ಸಿನಲ್ಲಿ ಆಕಾರ ಪಡೆದು ಮನಸ್ಸಿನ ಎಲ್ಲ ಶಕ್ತಿಯನ್ನು ತುಂಬಿಸಿಕೊಂಡ ಎಲ್ಲ ಶಬ್ದಗಳೂ ಪವಿತ್ರವೇ ಅಲ್ಲವೆ ?