Friday, August 15, 2008

ದೇವರು ದೇವರ ಭಕ್ತರು ಮತ್ತು............

ನನಗೂ ದೇವರಿಗೂ ಅಂತಹ ಒಳ್ಳೆಯ ಸಂಬಂಧ ಇಲ್ಲ. ದೇವರನ್ನು ನಾನು ನೋಡುವ ರೀತಿಯೇ ಬೇರೆ ಆಗಿರುವುದರಿಂದ ಸಾಮಾನ್ಯ ಜನ ನಂಬಿರುವ ದೇವರ ಜೊತೆ ಈ ಹಿಂದೆಯೇ ನಾನೊಂದು ಮಾತನ್ನು ಹೇಳಿದ್ದೆ.
"ನೀನು ನನ್ನ ತಂಟೆಗೆ ಬರಬೇಡ. ನಾನು ನಿನ್ನ ತಂಟೆಗೆ ಬರೋದಿಲ್ಲ "
ನಾನು ಅಷ್ಟಾಗಿ ದೇವರ ತಂಟೆಗೆ ಹೋಗಿಲ್ಲ. ಆತನೂ ಅಷ್ಟೇ. ನನ್ನ ತಂಟೆಗೆ ಬಂದಿಲ್ಲ. ಆದರೆ, ಈ ದೇವರ ಭಕ್ತರ ಸಮಸ್ಯೆ ಮಾತ್ರ ನನಗೆಂದೂ ತಪ್ಪಿಲ್ಲ. ನಮ್ಮ ಮನೆಯ ಸುತ್ತಮುತ್ತ ಮಹಾನ್ ದೈವ ಭಕ್ತರಿದ್ದಾರೆ. ಶನಿವಾರ ರಾತ್ರಿಯೆಲ್ಲ ಹರಿ ಕಥೆಯ ವ್ಯವಸ್ಥೆ ಮಾಡಿ, ದಾಸರು ಹೇಳುವ ಕಥೆ ಇಡೀ ಜಗತ್ತಿಗೆ ಕೇಳಲಿ ಎಂದು ಮೈಕ್ ಹಾಕಿ ಬಿಡುತ್ತಾರೆ. ಹಾಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಮಸೀದಿಯಿದೆ. ಅವರು ಬೆಳಿಗ್ಗೆ ಮೈಕ್ ಹಾಕಿಯೇ ದೇವರ ಪ್ರಾರ್ಥನೆ ಮಾಡುತ್ತಾರೆ. ದೇವರು, ದೇವರ ಬಕ್ತರು ಮತ್ತು ಮೈಕಿನ ಸಮಸ್ಯೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.
ದೇವರನ್ನು ದೇವರು ಎಂದು ನಾವು ಒಪ್ಪಿಕೊಳ್ಳುವುದಾದರೆ ಆತ ಶಕ್ತಿವಂತ. ಆತ ಸರ್ವವ್ಯಾಪಿ,ಸರ್ವಶಕ್ತ . ಆತನಿಗೆ ಕಿವಿಯ ಸಮಸ್ಯೆ ಇರುವುದು ಸಾಧ್ಯವಿಲ್ಲ. ಹಾಗೆ ಆತನ ಪ್ರಾರ್ಥನೆಯನ್ನು ಮೈಕಿನ ಮೂಲಕ ಮಾಡುವ ಅಗತ್ಯವಿಲ್ಲ. ನಾವು ಮನಸ್ಸಿನಲ್ಲಿ ಮಾಡಿದ ಪ್ರಾರ್ಥನೆ ಆತನಿಗೆ ತಲುಪಬೇಕು. ಅತನಿಗೆ ನಾವು ಏನು ಯೋಚನೆ ಮಾಡುತ್ತೇವೆ ಎಂಬುದು ಅರ್ಥವಾಗಬೇಕು, ಅದಿಲ್ಲದಿದ್ದರೆ ಆತ ದೇವನಲ್ಲ.
ಆದರೆ ದೇವರ ಭಕ್ತರು ಮಾತ್ರ ಮೈಕಿನ ಮೊರೆ ಹೋಗುತ್ತಾರೆ. ಹಬ್ಬ ಹರಿದಿನಗಳಲ್ಲಿ ಸಿನೆಮಾ ಹಾಡುಗಳನ್ನು ಹಾಕಿ ಶಾಂತಿಪ್ರಿಯರ ತಲೆ ತಿನ್ನುತ್ತಾರೆ. ಮಂತ್ರಗಳ ರಿಕಾರ್ಡ್ ಹಾಕಿ ಅದರ ಪಾವಿತ್ರತೆಯನ್ನು ಹಾಳುಗೆಡವುತ್ತಾರೆ. ಆದರೆ ಧರ್ಮವನ್ನು ಹೀಗೆ ಬೀದಿಗೆ ತಂದು ಬಿಕರಿ ಮಾಡುವುದನ್ನು ನೋಡುತ್ತ ಕುಳಿತುಕೊಳ್ಳುವುದು ನಮ್ಮ ಸರ್ಕಾರ. ಪೊಲೀಸರು ಕೂಡ ಇಂತಹ ಪಬ್ಲಿಕ್ ನ್ಯೂಸೆನ್ಸ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ. ದೇವರಿಗೆ ಹೆದರದ ಈ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಪೊಲೀಸ್ ವ್ಯವಸ್ಥೆ ದೇವರ ಭಕ್ತರಿಗೆ ಹೆದರುತ್ತಾರೆ.
ದೇವರು ಅನ್ನುವವನಿದ್ದರೆ ಅತನ ಜೊತೆ ನಮ್ಮ ಸಂವಾದ ಮೌನವಾಗಿ ನಡೆಯಬೇಕು. ಅಲ್ಲಿ ಮಾತಿಗೆ ಶಬ್ದಕ್ಕೆ ಅರ್ಥವಿಲ್ಲ. ಅಲ್ಲಿ ಮೌಕಿಕವಾಗಿ ನಡೆಯುವುದು ಏನೂ ಇಲ್ಲ. ಎಲ್ಲವೂ ಒಂದು ನದಿ ಹರಿಯುವ ಹಾಗೆ ಗಾಳಿ ಬೀಸುವ ಹಾಗೆ, ನಡೆಯಬೇಕು. ಮೌನದ ಸೌಂದರ್ಯ ಅನಾವರಣಗೊಳ್ಳಬೇಕು. ಗದ್ದಲದಲ್ಲಿ ದೇವರು ಇರುವುದು ಸಾಧ್ಯವಿಲ್ಲ.
ದೇವರ ಮುಂದಿರುವ ಈಗಿನ ಮಹತ್ವದ ಕೆಲಸ ಎಂದರೆ ತನ್ನ ಭಕ್ತರಿಗೆ ಬುದ್ದಿ ಹೇಳುವುದು. ನೀವು ನನ್ನ ಪೂಜೆ ಮಾಡುವುದಿದ್ದರೆ ರಸ್ತೆಯಲ್ಲಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಬೇಕು. ನನಗೆ ಮೈಕ್ ಎಂದರೆ ಆಗುವುದಿಲ್ಲ, ನೀವು ಮೈಕ್ ಹಾಕಿದರೆ ನಿಮ್ಮ ಬೇಡಿಕೆಯನ್ನು ಈಡೇರಿಸುವುದಿಲ್ಲ ಎಂದು ಬೆದರಿಕೆ ಒಡ್ಡಬೇಕು. ಆಗಲಾದರೂ ಭಕ್ತರು ಬದಲಾಗಬಹುದು. ಭಕ್ತರು ಬದಲಾದರೆ, ದೇವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

5 comments:

ಹಳ್ಳಿಕನ್ನಡ said...

" ಮಂತ್ರಗಳ ರಿಕಾರ್ಡ್ ಹಾಕಿ ಅದರ ಪಾವಿತ್ರತೆಯನ್ನು ಹಾಳುಗೆಡವುತ್ತಾರೆ"
ಯಾಕೋ ಈ ಮಂತ್ರಗಳ ಪಾವಿತ್ರತೆ ಬಗ್ಗೆ ಅನುಮಾನ.

Chamaraj Savadi said...

ದೇವರೊಂದಿಗಿನ ಪ್ರಾರ್ಥನೆ ಮನಸ್ಸಿನ ವಿಷಯ ಎಂಬುದು ನಿಜ ಸರ್‌. ಆದರೆ, ಜನರಿಗೆ ಭಕ್ತಿಗಿಂತ ಪ್ರದರ್ಶನ ಹೆಚ್ಚು ಇಷ್ಟ. ಪ್ರದರ್ಶನ ತೀವ್ರವಾದಷ್ಟೂ ಅದು ಭಕ್ತಿಯ ತೀವ್ರತೆ ತೋರುತ್ತದೆ ಎಂದು ನಂಬಿಕೊಂಡಿದ್ದಾರೆ. ಹೀಗಾಗಿಯೇ ಧಾರ್ಮಿಕ ಅಂಧಶ್ರದ್ಧೆಗಳು ಬೆಳೆದಿರುವುದು.

ಗಾಂಧೀಜಿ ಹೇಳಿದಂತೆ, ಪ್ರಾರ್ಥನೆ ತುಟಿಯಿಂದಲ್ಲ, ಹೃದಯದಿಂದ ಮಾಡುವ ಕ್ರಿಯೆ ಎಂಬುದು ಇಂಥವರಿಗೆ ಅರ್ಥವಾಗುವುದಿಲ್ಲ. ಹಾಗೆ ಮೌನ ಪ್ರಾರ್ಥನೆ ಸಲ್ಲಿಸಿದರೆ ಇವರಿಗೆ ಪ್ರಚಾರ ಸಿಗುವುದು ಹೇಗೆ? ಕಾಲಾಂತರದಲ್ಲಿ ಪ್ರತಿಯೊಂದು ಉದಾತ್ತ ವಿಷಯವೂ ವಾಣಿಜ್ಯೀಕರಣಗೊಳ್ಳುತ್ತದೆ. ಹಾಗೆ ಬದಲಾದ ಮೊದಲ ಉದಾತ್ತ ವಿಷಯ ಎಂದರೆ ಧರ್ಮ.

ಧಾರ್ಮಿಕ ಶ್ರದ್ಧೆ, ಆಚರಣೆ ಮುಂತಾದವು ನೂರಕ್ಕೆ ನೂರು ಖಾಸಗಿ ವಿಷಯಗಳು. ಅವು ಬಯಲಿಗೆ ಬಂದರೆ, ಅವುಗಳ ಮೂಲ ಸತ್ವ ಉಳಿಯುವುದಿಲ್ಲ. ಕಲ್ಲಿನ ದೇವರ ತಲೆಗೆ ಚಿನ್ನದ ಕಿರೀಟ ಇಡುವುದು, ಬಾಗಿಲಿಗೆ ಚಿನ್ನದ ಹಾಳೆ ಹೊದಿಸುವುದು, ಗಂಟೆಗಟ್ಟಲೇ ಬಹಿರಂಗ ಪೂಜೆ ಮಾಡುವಂಥ ಅತಿರೇಕಗಳು ಬಲುಬೇಗ ಸಾಮಾನ್ಯ ಮನಃಸ್ಥಿತಿಯವರನ್ನು ಆಕರ್ಷಿಸುತ್ತವೆ. ಅಲ್ಲಿ ವ್ಯಾಪಾರ ಸೃಷ್ಟಿಯಾಗುತ್ತದೆ. ಪವಾಡಗಳು ಬೆಳೆಯುತ್ತವೆ. ಧಾರ್ಮಿಕ ನಂಬಿಕೆ ಹುಟ್ಟಿಸಬಹುದಾದ ಶಾಂತಿ ಒಂದು ಬಿಟ್ಟು ಎಲ್ಲ ಅತಿರೇಕಗಳು ಬೆಳೆದು ನಿಲ್ಲುತ್ತವೆ. ಪರಿಹಾರ ನೀಡಬೇಕಾದ ವಿಷಯವೇ ಸಮಸ್ಯೆಗಳಿಗೆ ಕಾರಣವಾಗಿಬಿಡುತ್ತದೆ.

ಮನದ ಮೌನ ವಿವೇಕದ ಮಾತು ಯಾರಿಗೆ ಅರ್ಥವಾಗಬೇಕು?

- ಚಾಮರಾಜ ಸವಡಿ

ಆಲಾಪಿನಿ said...

ಸರ್‌,
ತನ್ನಂತೆಯೇ ದೇವರು ಎಂದುಕೊಂಡಿದ್ದಾನೆ ಮನುಷ್ಯ. ಇತರರ ಹೊಗಳಿಕೆ,ಬಣ್ಣದ ಮಾತಿಗೆ ತಾನು ಮರುಳಾದಂತೆ ದೇವರು ಮರುಳಾದಾನು. ಮರುಳಾಗಿ ವರ ಕೊಟ್ಟಾನು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ : ತೋರಿಕೆಯ ಈ ಪೂಜೆ, ಪ್ರಾರ್ಥನೆಯಿಂದ ತಾನು ಅವನ ಸಾಮಿಪ್ಯದಿಂದ ದೂರ ದೂರ ಸರಿಯುತ್ತಿದ್ದೇನೆ ಎನ್ನುವ ವಾಸ್ತವ ಮರೆತು. ತನ್ನೊಳಗಿನ ದೇವರನ್ನು ನಂಬದೇ ಕಲ್ಲು ದೇವರ ನಂಬಿ ಕಂಗಾಲಾಗುತ್ತಿದ್ದಾನೆ. ಕಾಣದ ದೇವರಿಗಾಗಿ ಹಂಬಲಿಸುತ್ತಿದ್ದಾನೆ. ನಿಜವಾದ ಭಕ್ತಿ, ಪ್ರೀತಿ ಯಾವ ಪ್ರಾರ್ಥನೆಯನ್ನೂ ಬೇಡುವುದಿಲ್ಲ. ಅದು ನಿರಾಕಾರ. ನಿಶ್ವಬ್ದ. ಮೌನದೊಳಗಿನ ಮಾಯೆಯದು. ಮಾಯೆಯೊಳಗಿನ ಮೋಹವದು. ಮೋಹದೊಳಗಿನ ಶಕ್ತಿಯದು. ಶಕ್ತಿಯೊಳಗಿನ ಭಕ್ತಿಯದು. ಭಕ್ತಿಯೊಳಗಿನ ಪ್ರೀತಿಯದು.

ತೇಜಸ್ವಿನಿ ಹೆಗಡೆ said...

ಶಶಿಧರ್ ಅವರೆ,

ಮೈಕಾಸುರನಿಂದ ಎಂದು ನಮಗೆ ಬಿಡುಗಡೆಯಾಗುವುದೋ ಕಾಣೆ! ಬಹುಶಃ ಶಬ್ದಮಾಲಿನ್ಯದಮೂಲಕ ಇಂತಹವರು ತಮ್ಮೊಳಗೆ ತಾವೇ ಒಂದು ಭದ್ರತೆಯನ್ನು ತಂದುಕೊಳ್ಳಲು ಯತ್ನಿಸುತ್ತಾರೇನೋ. ತಾವು ಭಗವಂತನಿಗೆ ಹತ್ತಿರದವರು ಎಂಬ ಭ್ರಮೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಯತ್ನವೂ ಇರಬಹುದು.

ಶ್ರೀದೇವಿಯವರ ಹಾಗೂ ಸವಡಿಯವರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ.
ನನ್ನ ಪ್ರಕಾರ ಭಗವಂತ ನಿರ್ವಿಕಾರ, ನಿರ್ಮೋಹ, ಬಂಧನಾರಹಿತ. ಹಾಗಾಗಿ ದೇವರೊಂದಿಗೆ ಸಂಬಂಧದ ಕಲ್ಪನೆಯೇ ಒಂದು ಹುಚ್ಚುತನ ಎನ್ನಬಹುದು. ಧ್ಯಾನವೊಂದೇ ನಮ್ಮನ್ನು ನಮ್ಮಿಂದ ಬಿಡುಗಡೆಗೊಳಿಸಬಲ್ಲದು. ನಿರ್ವಂಚನೆಯಿಂದ, ಪ್ರಾಮಾಣಿಕತೆಯಿಂದ ಮಾಡುವ ಪ್ರತಿಯೊಂದು ಕೆಲಸವೂ ನಮ್ಮನ್ನು ಆತನೊಂದಿಗೆ ಬೆಸೆಯುತ್ತದೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ.


ಮಂಜುನಾಥ ಅವರೆ,

ನಿಜ. ಮಂತ್ರಕ್ಕೆ ಪಾವಿತ್ರ್ಯತೆ ಇರುವುದಿಲ್ಲ. ಅದರಿಂದ ನಾವು ನಮ್ಮ ಮನಸ್ಸಿಗೆ ಪಾವಿತ್ರ್ಯತೆ ತಂದುಕೊಳ್ಳಬಹುದು. ಇದು ಮಾತ್ರ ಶತಃಸಿದ್ಧ. ಮಂತ್ರಗಳೊಳಗಿನ ಅರ್ಥಗಳನ್ನು ಅರಿತರೆ ನಿಮಗೂ ಅನಿಸುವುದು ಅವುಗಳಲ್ಲಿ ಎಂತಹ ಶಕ್ತಿಯಡಗಿದೆ ಎಂದು. ನಾಸ್ತಿಕತೆ ಎಂದರೆ ಆಸ್ತಿಕತೆಯನ್ನು ಪ್ರಶ್ನಿಸುವುದಲ್ಲ ಅಲ್ಲವೇ?

ಗಿರೀಶ್ ರಾವ್, ಎಚ್ (ಜೋಗಿ) said...

ಮಂತ್ರಗಳು ಪವಿತ್ರವೋ ಅಲ್ಲವೋ ನನಗೆ ಗೊತ್ತಿಲ್ಲ. ಅದು ಅವರವರ ನಂಬುಗೆ. ಮಗುವಿನ ಅಳು, ನಗು, ತೊದಲು ಮಾತು ಕಿವಿಗೆ ಹಿತವಾಗಿರುತ್ತೆ ನಿಜ. ಹಾಗಂತ ಅದನ್ನು ರೆಕಾರ್ಡ್ ಮಾಡಿ ಹಾಕಿದರೆ ಹಿಂಸೆಯಾಗುತ್ತೆ. ಹಾಗೇ ಮಂತ್ರಗಳು ಕೂಡ. ಅದಕ್ಕೊಂದು ಸಂದರ್ಭ ಸಮಯ ಎಲ್ಲವೂ ಇರುತ್ತೆ.
ಆಯಾ ಪರಿಸರದಲ್ಲಷ್ಟೇ ಅದು ಹಿತವಾಗಿ ಕೇಳುತ್ತೆ. ಅಂತ ಆಂಬಿಯೆನ್ಸನ್ನು ಮೈಕ್ ರೆಕಾರ್ಡರ್ ಹಾಳು ಮಾಡುತ್ತೆ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...