Saturday, November 29, 2008

ದೇವರ ಬಳಿ ಹೋಗುವುದು ಒಳ್ಳೆಯದು...

ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಒಂದು ಅಧ್ಯಾಯ ಮುಗಿದಿದೆ. ಆದರೆ ಈ ಕಥೆ ಮುಗಿದಿಲ್ಲ. ಸುಮಾರು ೨೦೦ ಜನ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ನಾವು ಶ್ಲಾಘಿಸಲೇಬೇಕು. ಆದರೆ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ.
ಇಲ್ಲಿನ ರಾಜಕಾರಣಿಗಳು. ಇವರಿಗೆ ಮನುಷ್ಯರೆಲ್ಲ ಕಾಣುವುದು ಓಟುಗಳಾಗಿ. ಮತದ ರಾಜಕಾರಣವನ್ನು ಬಿಟ್ಟು ಯೋಚನೆ ಮಾಡದ ಜನ ಇವರು. ನಮ್ಮ ಯಡೀಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಇವರು ಇಂದು ಬೆಳಿಗ್ಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದ ಸಂದೀಪ್ ಉನ್ನಿಕೃಷ್ಣನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಹೀಗೆ ಬಂದವರು ಅವರ ಶವದ ಮೇಲೆ ಹೂಗುಚ್ಛ ಇರಿಸಿ ಟಿವಿಗಳಿಗೆ ಬೈಟ್ ನೀಡಿ ಹೊರಟು ಬಿಟ್ಟರು. ಕನಿಷ್ಟ ಈ ಯೋಧನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವವರೆಗೆ ಇರುವ ವ್ಯವಧಾನ ಸಮಯ ಕೂಡ ಅವರಿಗೆ ಇರಲಿಲ್ಲ.
ಇನ್ನು ಶಿವರಾಜ್ ಪಾಟೀಲ್ ಎಂಬ ದೇಶದ ಗೃಹ ಸಚಿವರು. ಇವರಿಗೆ ಸೋನಿಯಾ ಗಾಂಧಿ ಅವರ ಸೆರಗು ಹಿಡಿದುಕೊಂಡು ಓಡಾಡುವುದೇ ಬಹುಮುಖ್ಯ ಕೆಲಸ. ದೇಶದ ಆಂತರಿಕ ಭದ್ರತೆಯ ದೋಷವನ್ನು ಸರಿಪಡಿಸುವುದಕ್ಕೂ ಸಮಯವಿಲ್ಲ. ಜೊತೆಗೆ ಇಂತಹ ಘಟನೆ ನಡೆದಾಗ ಮಾನ ಮರ್ಯಾದಿ ಇರುವ ಸಚಿವರಾಗಿದ್ದರೆ, ರಾಜೀನಾಮೆ ನೀಡಿ ಮನೆಗೆ ಹೋಗುತ್ತಿದ್ದರು. ಇವರು ಆ ಕೆಲಸವನ್ನು ಮಾಡಲಿಲ್ಲ. ಕಾಂಗ್ರೆಸ್ ವರಿಷ್ಠೆ ಏನು ಮಾಡಬಹುದು ಎಂದು ಕಾಯುತ್ತ ಕುಳಿತಿದ್ದಾರೆ. ಇಂತಹ ರಾಜಕಾರಣಿಗಳು ನಮ್ಮ ದೇಶವನ್ನು ಆಳುತ್ತಿದ್ದಾರೆ.
ಈ ಘಟನೆಯನ್ನೇ ನೋಡಿ. ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಉಗ್ರಗಾಮಿಗಳು ಆರು ತಿಂಗಳ ಹಿಂದೆ ದೋಣಿಯಲ್ಲಿ ಬಂದು ಮುಂಬೈ ಸೇರುತ್ತಾರೆ. ಹೋಟೆಲ್ ನಲ್ಲಿ ತಮ್ಮ ಕೇಂದ್ರ ಸ್ಥಾಪಿಸುತ್ತಾರೆ. ಶಸ್ತ್ರಾಸ್ತ್ರಗಳನ್ನು ಸಲೀಸಾಗಿ ತಂದು ದಾಸ್ತಾನು ಮಾಡುತ್ತಾರೆ. ಇದು ನಮ್ಮ ಬೇಹುಗಾರಿಕಾ ಪಡೆಗೆ ತಿಳಿಯುವುದಿಲ್ಲ.
ನಮ್ಮ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಇಂತಹ ವಿಚಾರಗಳಲ್ಲಿ ಹಿಂದೂ ಮತದ ಬ್ಯಾಂಕ್ ಅನ್ನು ಲಕ್ಶ್ಯದಲ್ಲಿರಿಸಿಕೊಂಡು ಮಾತನಾಡುತ್ತದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ವರ್ತಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಬಿಜೆಪಿ ಮುಸ್ಲಿರೆಲ್ಲ ಭಯೋತ್ಪಾದರು ಎಂದು ಹೇಳಿದರೆ, ಯಾವ ಮುಸ್ಲಿಮ್ ನೂ ಭಯೋತ್ಪಾದಕನಲ್ಲ ಎಂದು ಕಾಂಗ್ರೆಸ್ ವಾದಿಸುತ್ತದೆ. ಈ ಮೂಲಕ ಎರಡೂ ಪಕ್ಷಗಳು ಸುಳ್ಳಿನ ಮೇಲೆ ಅರಮನೆ ಕಟ್ಟಲು ಹೊರಡುತ್ತವೆ. ಇವರ ದೃಷ್ಟಿಯಲ್ಲಿ ದೇಶ ಎಂದರೆ ಏನು ಎಂಬುದೇ ತಿಳಿಯುವುದಿಲ್ಲ. ಬಿಜೆಪಿಗೆ ದೇಶ ಎಂದರೆ ಅತೀ ಭಾವುಕತೆ. ಕಾಂಗ್ರೆಸ್ ಪಕ್ಷಕ್ಕೆ ದೇಶ ಎಂದರೆ ಎಲ್ಲರೂ ತಮಗೆ ಬೇಕಾದಂತೆ ವರ್ತಿಸಬಹುದಾದ ಓಪನ್ ಫೀಲ್ಡ್. ಆದರೆ ಅದು ಹಾಗಲ್ಲ. ದೇಶ ಎಂದರೆ ಹಲವು ಭಾಷೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಒಂದು ವೈವಿದ್ಯಪೂರ್ಣ ಬದುಕಿನ ಮೊತ್ತ. ವಿಭಿನ್ನ ವಿಚಾರಧಾರೆ, ಹಿನ್ನೆಲೆ, ಧರ್ಮಗಳನ್ನು ಒಳಗೊಂಡವರು ಏಕತೆಯಿಂದ ಬದುಕುವ ತಾಣ.
ಮುಂಬೈನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಉಗ್ರಗಾಮಿಯೊಬ್ಬ ವಾಹಿನಿಯೊಂದಕ್ಕೆ ನೀಡಿದ್ದ ಫೋನೋ ಕೇಳಿದೆ. ಅವನು ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ನಾವು ತಡೆಯುತ್ತೇವೆ ಎಂದು ಹೇಳಿದ್ದ, ಅವನಿಗೆ ಬದುಕಿಗಿಂತ ಇಸ್ಲಾಮ್ ದೊಡ್ದದಾಗಿತ್ತು. ಇಸ್ಲಾಮ್ ಧರ್ಮವನ್ನು ಉಳಿಸುವುದಕ್ಕಾಗಿ ಆತ ಜನರ ಕಗ್ಗೊಲೆ ಮಾಡಲು ಸಿದ್ಧನಾಗಿದ್ದ. ಯಾರು ಬದುಕಿಗಿಂತ ಧರ್ಮ ದೊಡ್ದದು ಎಂದುಕೊಳ್ಳುತ್ತಾರೋ ಅವರು ಅಯೋಗ್ಯರು. ನಮ್ಮ ಕಣ್ಣೆದುರಿಗಿರುವ ಜನರಿಗಿಂತ ಕಾಣದ ಅಲ್ಲಾ, ದೇವರುಗಳು ಮುಖ್ಯರಾದರೆ ಅವರು ಇಲ್ಲಿ ಬದುಕುವುದಕ್ಕೆ ಯೋಗ್ಯರಲ್ಲ. ರಕ್ತದ ಕಲೆಗಳ ಮೇಲೆ ಧರ್ಮವನ್ನು ಉಳಿಸಲು ಹೊರಟರೆ, ಅವರು ಇಲ್ಲಿರುವುದಕ್ಕಿಂತ ಆ ದೇವರ ಹೋಗುವುದು ಒಳ್ಳೆಯದು.

4 comments:

ಡಿ.ಎಸ್.ರಾಮಸ್ವಾಮಿ said...

ಪ್ರಿಯ ಭಟ್ಟರೆ,
ಸುವರ್ಣ ಚ್ಯಾನೆಲ್ಲಿನಲ್ಲಿ ನಿಮ್ಮ ಅಸ್ಖಲಿತ ಮಾತು ಕೇಳಿ/ನೋಡಿದ್ದಕ್ಕಿಂತ ಈ ಬ್ಲಾಗಿನ ಲೇಖನಗಳೇ ಇಷ್ಟವಾದುವು. ಮತಾಂತರದ ಬಗ್ಎಗಿನ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ. ನಿನ್ನೆ ಮೌನವಾಗಿರೋಣ ಎಂದವರು ಈ ದಿನ ದೇವರ ಬಳಿ ಹೋಗೋಣ ಎಂದಿದ್ದೀರಿ. ಈ ರಕ್ತಪಾತ, ಅಶಾಂತಿ, ಧರ್ಮಕಾರಣದ ರಾಜಕೀಯ, ದೇವರೇ ನಮ್ಮನ್ನು ಕಾಪಾಡು.-ಡಿ.ಎಸ್.ರಾಮಸ್ವಾಮಿ

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

www.kumararaitha.com said...

ಭಾರತೀಯ ರಾಜಕೀಯ ಸಂದರ್ಭದ ಸೂಕ್ಷ ನೋಟ ಮತ್ತು ಧರ್ಮಾಂಧರ ಕುರಿತ ವಿಡಂಬನಾತ್ಮಕ ನಿಷ್ಠುರ ಮಾತು'ದೇವರ
ಬಳಿ ಹೋಗುವುದು ಒಳ್ಳೆಯದು'ಬರಹದಲ್ಲಿದೆ.

ಭಾರತ ಇಂದು ಸಾಕಷ್ಟು ಹಾಳಾಗಿರುವುದಕ್ಕೆ ಮತ್ತು ಇದೇ ಹಾದಿಯಲ್ಲಿ ವೇಗವಾಗಿ ಸಾಗುತ್ತಿರುವುದಕ್ಕೆ ಕಾರಣ ಆಂತರಿಕ ಮತ್ತು ವಿದೇಶಾಂಗ ಕುರಿತು ನಿಖರ ನೀತಿ-ನಿಲುವು ಇಲ್ಲದಿರುವುದು.ಸ್ವತಂತ್ರ ಕೊಟ್ಟಾಗ(ಗಳಿಸಲಿಲ್ಲ ಎನ್ನುವುದು
ಈ ಸನ್ನಿವೇಶದ ಭಾವ)ಭ್ರಮಾತ್ಮಕವಾಗಿ ದೇಶ ಕಟ್ಟಲು ಹೊರಟಿದ್ದು.ಹೀಗಾಗಿ ದೇಶ ಹುಸಿ ಜಾತ್ಯತೀತತೆ ಮುಖವಾಡ
ಧರಿಸಿತು.ಇದು'ಮಲ್ಟಿಸೆಕ್ಯುಲರ್'ಆಯಿತು.ಇದೇ ಭಾರಿ ಅಪಾಯಕ್ಕೆ ನಾಂದಿಯೂ ಆಯಿತು.ನಿಜ ಜಾತ್ಯತೀತತೆ ಸಾ್ಯವಾಗಲೇ ಇಲ್ಲ.ಇದಕ್ಕೆ ಕಾರಣ ನೀವು ಹೇಳಿದಂತೆ ಓಟ್
ಬ್ಯಾಂಕ್ ರಾಜಕಾರಣ.ಇದಕ್ಕೆ ಯಾವ ಪಕ್ಷವೂ ಹೊರತಲ್ಲ.
ಇದೇ ಪಕ್ಷಗಳು ಮುಂದೆಯೂ ಇರುವುದರಿಂದ ಭವಿಷ್ಯ ಭಯಾನಕ

ashokamedia said...

Respected sir,
WISH YOU HAPPY BIRTHDAY,December,4.
God is live within you sir.
Swamy vivekananda also told that God is live within our body.
Sirsi nature, Sirsi people, Sirsi culture are nice sir.
-ASHOKA D.M.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...