ಸಾಧಾರಣವಾಗಿ ಮಠಗಳಿಗೆ ನಾನು ಹೋಗುವುದಿಲ್ಲ. ಸ್ವಾಮೀಜಿಗಳ ಕಾಲಿಗೂ ಬೀಳುವಿದಿಲ್ಲ. ಯಾಕೆಂದರೆ ಕಾಲಿಗೆ ಬೀಳುವುದೆಂದರೆ ಸಂಪೂರ್ಣ ಶರಣಾಗತಿ. ನನಗೆ ಈ ಶರಣಾಗತಿಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಅನುಭವ ಇದ್ದರೂ ಇದ್ದೀತು. ೮೦ ರ ದಶಕದಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ನಾನು ಊರಿಗೆ ಬಂದಾಗ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ್ದು ಬಂಡಾಯ ಮತ್ತಿ ರೈತ ಚಳವಳಿಗಳು. ಈ ಕಾರಣದಿಂದ ನನ್ನ ಮೊದಲು ಹೋರಾಟ ಪ್ರಾರಂಭವಾಗಿದ್ದು ರಾಮಚಂದ್ರಮಠದ ಅಂದಿನ ಸ್ವಾಮೀಜಿಯ ವಿರುದ್ಧ. ಬರವಣಿಗೆಯ ಮೂಲಕ ಪ್ರಾರಂಭವಾದ ಈ ಹೋರಾಟ ಮಠದ ಭಕ್ತರು ನನ್ನ ಮೇಲೆ ಧಾಳಿ ನಡೆಸಲು ಯೋಜನೆಯನ್ನು ರೂಪಿಸುವವರೆಗೆ ಬೆಳೆಯಿತು.
ಆಗ ಆ ಸ್ವಾಮೀಜಿ ನನಗೆ ಶಾಪ ಹಾಕಿದರು. ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವುದಾಗಿ ಘೋಷಿಸಿದರು. ಸ್ವಜಾತಿಯ ಜನ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದರು. ಅವರ ಈ ಕಿರುಕುಳವನ್ನು ಎದುರಿಸಲಾಗದೇ ನಾನು ಬೆಂಗಳೂರಿಗೆ ಬಂದಿದ್ದು, ಪತ್ರಿಕೋದ್ಯಮಿಯಾಗಿದ್ದು. ಇಲ್ಲದಿದ್ದರೆ ನಾನು ಊರು ಬಿಟ್ಟು ಬರುತ್ತಲೇ ಇರಲಿಲ್ಲ. ನನಗೆ ಶಾಪ ಹಾಕಿ ಊರು ಬಿಡಿಸಿದ ಕಾರಣಕ್ಕಾಗಿ ಮತ್ತು ಅವರು ಶಾಪ ನೀಡಿದ ಮೇಲೆ ನನಗೆ ಒಳ್ಳೆಯದಾಗಿದ್ದಕ್ಕಾಗಿ ನಾನು ಈಗಲೂ ಅವರಿಗೆ ಕೃತಜ್ನನಾಗಿದ್ದೇನೆ.
ಪತ್ರಿಕೋದ್ಯಮಿಯಾದ ಮೇಲೆ ನಾನು ಕರ್ನಾಟಕದ ಬಹುತೇಕ ಪ್ರಮುಖ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಯಾಕೋ ನನಗೆ ಗೌರವ ಬರುಂತಹ ಸ್ವಾಮಿಗಳು ನನಗೆ ಸಿಕ್ಕಿಲ್ಲ. ಮಂತ್ರಾಕ್ಷತೆ ನೀಡುವಾಗ ಮಹಿಳೆಯರಾದರೆ ಅವರ ಕೈ ಮುಟ್ಟಿ ನೀಡುವ, ಪುರುಷರಾದರೆ ದೂರದಿಂದ ಒಗೆಯುವ ಸ್ವಾಮಿಗಳನ್ನು ನಾನು ನೋಡಿದ್ಡೇನೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಬ್ಲೂ ಫಿಲ್ಮ್ ನೋಡುವ ಸ್ವಾಮಿಗಳು ನನಗೆ ಗೊತ್ತು. ಹಾಗೆ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅಂಗಡಿ ತೆರೆದಿರುವ ಮಠಾಧಿಪತಿಗಳು ನಮ್ಮ ನಡುವೆ ಇದ್ದಾರೆ. ರಾಜಕೀಯ ಮಧ್ಯಸ್ಥಿಕೆ ಮಾಡುವವರು, ಇನ್ನು ಏನೇನೋ ಮಾಡುವವರು ಎಲ್ಲ ಈ ಧರ್ಮದ ಜಗತ್ತಿನಲ್ಲಿ ತುಂಬಿ ಹೋಗಿದ್ದಾರೆ.
ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸಿದ್ದಗಂಗೆಯ ಡಾ. ಶಿವಕುಮಾರ್ ಸ್ವಾಮಿಯವರನ್ನು ನಾನು ಭೇಟಿ ಮಾಡಿದ ಸಂದರ್ಭವನ್ನು ಹೇಳುವುದಕ್ಕಾಗಿ. ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಈಗ ನೂರಾ ಒಂದು ವರ್ಷ. ಈ ಕಾರಣಕ್ಕಾಗಿ ನಾನು ಅವರನ್ನು ಸಂದರ್ಶಿಸಲು ಮುಂದಾದೆ. ಅವರ ಅಕ್ಷರ ದಾಸೋಹದ ಬಗ್ಗೆ ನನಗಿರುವ ಗೌರವ ಕೂಡ ಇದಕ್ಕೆ ಕಾರಣವಾಗಿತ್ತು. ಪ್ರತಿ ದಿನ ಸುಮಾರು ೧೦ ಸಾವಿರ ಮಕ್ಕಳಿಗೆ ಊಟ ವಸತಿ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವುದು ಸಾಮಾನ್ಯ ಸಾಧನೆ ಅಲ್ಲ. ಸಿದ್ದಗಂಗಾ ಮಠ ಇರುವುದರಿಂದಲೇ ಕರ್ನಾಟಕದ ಬಹಳಷ್ಟು ದಲಿತ ಮತ್ತು ದುರ್ಬಲ ವರ್ಗದ ಮಕ್ಕಳು ವಿದ್ಯಾವಂತರಾಗುವುದು ಸಾಧ್ಯವಾಗಿದೆ. ಇದೆಲ್ಲ ಕೂಡ ಶ್ಲಾಘನೀಯ ವಿಚಾರವೇ,
ನಾನು ಅವರನ್ನು ಸಂದರ್ಶನ ಮಾಡಿದ ಮೇಲೆ ಕೆಲವರು ಕೇಳಿದರು. ಯಾಕೆ ಸಾರ್, ನಿಮ್ಮ ಒರಿಜಿನಲ್ ಸ್ಟೈಲ್ ಇರಲಿಲ್ಲ. ನಾನು ಅವರಿಗೆ ಹೇಳಿದೆ.
"ಸ್ವಾಮಿಗಳ ಬಗ್ಗೆ ನನಗೆ ಅಂತಹ ಗೌರವ ಇಲ್ಲ ಎಂಬುದು ನಿಜ. ಹಾಗೆ ರಾಜಕಾರಣಿಗಳಿಗೆ ಆಶೀರ್ವಾದ ನೀಡುತ್ತ ಇವರೆಲ್ಲ್ ಮಾಡುವ ಜಾತಿ ರಾಜಕೀಯವೂ ನನಗೆ ಗೊತ್ತು. ಮಾರ್ಗ ದರ್ಶನ ಮಾಡುವವರೇ ಭಕ್ಷಕರಾಗುವುದು ನನಗೆ ತಿಳಿದಿದೆ. ಆದರೆ, ಅಕ್ಷರ ದಾಸೋಹದಂತಹ ಸಾಮಾಜಿಕ ಕಾರ್ಯ ಮಾಡುವವರನ್ನು ನಾನು ಗೌರವಿಸುತ್ತೇನೆ. ಅದಕ್ಕಾಗಿ ಶ್ಲಾಘಿಸುತ್ತೇನೆ. ಆದರೆ ಈ ಮಠ ಕಟ್ಟುವವರನ್ನು ನಾನು ಒಪ್ಪಿಕೊಳ್ಳಲಾರೆ. ಮಠ ಕಟ್ಟುವುದು ಯಾಕಾಗಿ ಎಂಬ ಬಗ್ಗೆ ನನಗೆ ಅನುಮಾನಗಳಿವೆ. ಏನೇ ಇರಲಿ ಶಿವಕುಮಾರ ಸ್ವಾಮಿಗಳು ನೂರು ವರ್ಷ ಪೂರೈಸಿದ್ದಾರೆ. ಎಲ್ಲ ದೌರ್ಬಲ್ಯಗಳ ನಡುವೆಯೂ ಅವರದು ಸಾರ್ಥಕ ಬದುಕು. "