Friday, January 2, 2009

ಬದುಕು ಮತ್ತು ಆತ್ಮಹತ್ಯೆಯ ಸುತ್ತ.....!


ಹೊಸ ವರ್ಷದ ಮೊದಲ ದಿನ. ನಮ್ಮ ಸ್ನೇಹಿತರೊಬ್ಬರು ಹೇಳಿದರು,
ನಿಮಗೆ ಗೊತ್ತಲ್ಲ, ಅವರು ನಿನ್ನೆ ಆತ್ಮಹತ್ಯೆಗೆ ಯತ್ನ ನಡೆಸಿದರಂತೆ !
ನನಗೆ ಈ ಸುದ್ದಿಯಿಂದ ಆಘಾತವಾಗಲಿಲ್ಲ. ಬದಲಾಗಿ ಪಾಪ ಅನ್ನಿಸಿತು. ಯಾಕೆ ಹೀಗೆ, ಅವರು ಆತ್ಮಹತ್ಯೆಗೆ ಕಾರಣಗಳೇ ಇರಲಿಲ್ಲವಿಲ್ಲ ಎಂದು ಅನ್ನಿಸಿತು. ಈ ಸುದ್ದಿಯನ್ನು ತಿಳಿಸಿದವರು, ಆವರು ಆತ್ಮಹತ್ಯೆಗೆ ಯತ್ನ ನಡೆಸಿದ್ದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡತೊಡಗಿದರು. ಆಗ ನಾನು ಅವರಿಗೆ ಹೇಳಿದೆ.
"ನೋಡಿ ನಿಜವಾಗಿ ಹೇಳುವುದಾದರೆ ಆತ್ಮಹತ್ಯೆಗೆ ಕಾರಣಗಳೇ ಇರುವುದಿಲ್ಲ. ಯಾರು ಇಂತಹ ಕೃತ್ಯಕ್ಕೆ ಯತ್ನ ನಡೆಸುತ್ತಾರೋ ಅವರು ಕಾರಣಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ತಾವು ಸೃಷ್ಟಿಸಿಕೊಂಡ ಕಾರಣಗಳನ್ನು ಸತ್ಯ ಎಂದು ನಂಬಿ ಇಂಥಹ ಕೃತ್ಯಕ್ಕೆ ಕೈಹಾಕುತ್ತಾರೆ. ಹಾಗೆ ಇಂಥಹ ಘಟನೆ ನಡೆದ ಮೇಲೆ, ಜನ ಸುಮ್ಮನಿರುವುದಿಲ್ಲ. ಅವರೂ ಸಹ ಕಾರಣಗಳನ್ನು ಸೃಷ್ಟಿಸುತ್ತ ಅದನ್ನು ನಂಬುತ್ತ ಅದನ್ನೇ ಪ್ರಚಾರ ಮಾಡುತ್ತ ಇರುತ್ತಾರೆ."
ಪ್ರಾಯಶಃ ಪ್ರತಿಯೊಬ್ಬರಿಗೂ ಬದುಕಿನಿಂದ ವಿಮುಖವಾಗುವ, ಓಡಿ ಹೋಗುವ ಮನಸ್ಥಿತಿ ಇದ್ದೇ ಇರುತ್ತದೆ. ಒಂದಲ್ಲ ಒಂದು ಕ್ಷಣದಲ್ಲಿ ಪ್ರತಿಯೊಬ್ಬರೂ ಆತ್ಮಹತ್ಯೆಯ ಬಗ್ಗೆ ಯೋಚಿಸಿಯೇ ಇರುತ್ತಾರೆ. ಆದರೆ ದುರ್ಬಲ ಕ್ಷಣದಲ್ಲಿ ಬರುವ ಇಂತಹ ಆಲೋಚನೆಗಳಿಂದ ಹೊರಬರುವ ಶಕ್ತಿ ಬಹಳಷ್ಟು ಜನರಿಗೆ ಇರುತ್ತದೆ. ಬಹಳಷ್ಟು ಜನರಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಕವಿ ರಾಮಯ್ಯ ಬಹಳ ವರ್ಷಗಳ ಹಿಂದೆ ಬರೆದ್ ಸಣ್ಣ ಕವನವೊಂದು ನೆನಪಾಗುತ್ತದೆ.
ನಾನು ಆತ್ಮ ಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು
ಕಾರಣಗಳೇ ಅಲ್ಲ ಎಂಬ ಸಂಶಯ
ನನ್ನನ್ನು ಬದುಕಿ ಉಳಿಸಿದೆ
ಬಹಳಷ್ಟು ಜನರನ್ನು ಅತ್ಮಹತ್ಯೆ ಒತ್ತಡದಿಂಡ ಇಂಥಹ ಸಂಶಯವೇ ಬದುಕಿ ಉಳಿಸಿರಬಹುದು. ಆದರೆ ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಾ ? ಖಂಡಿತ ಅಲ್ಲ. ಆತ್ಮಹತ್ಯೆ ಎನ್ನುವುದು ಪಲಾಯನ ಎಂದು ಹೇಳಲಾಗುತ್ತದೆ. ಇದು ಪಲಾಯನ ಮಾತ್ರವಲ್ಲ, ಇರುವುದನ್ನು ಎದುರಿಸಲಾಗದೇ ಗೊತ್ತಿಲ್ಲದೆಡೆಗೆ ಹೋಗುವ ಷಂಡತನ ಕೂಡ.
ನಮಗೆ ಬದುಕುವುದು ಗೊತ್ತಿಲ್ಲ, ಅನುಭವಿಸುವುದು ಗೊತ್ತಿಲ್ಲ. ಯಾಕೆಂದರೆ ಬದುಕುವುದೆಂದರೆ ಪ್ರತಿ ಕ್ಷಣವನ್ನು ನಮ್ಮದಾಗಿಸಿಕೊಳ್ಳುವುದು. ಹಾಗೆ ಸದಾ ವರ್ತಮಾನದಲ್ಲಿ ಇರುತ್ತಲೇ, ವರ್ತಮಾನದ ಭಾಗವಾಗುತ್ತ ಹೋಗುವುದು. ಆದರೆ ನಮಗೆ ವರ್ತಮಾನ ಎಂಬುದೇ ಇಲ್ಲ. ಯಾಕೆಂದರೆ ನಾವು ವರ್ತಮಾನದಲ್ಲಿ ಇರುವುದೇ ಇಲ್ಲ.
ನಮ್ಮ ಊರಿನಲ್ಲಿ ಗಡ್ಲಾ ರಾಮ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಮಂತ್ರವಾದಿ. ಊರಿನಲ್ಲಿ ಭೂತ ಬಿಡಿಸುವುದು, ಮಾಟಾ ಮಂತ್ರ ಮಾಡುವುದು ಅವನ ಬದುಕು. ಆತ ಹಣೆಯ ಮೇಲೆ ದೊಡ್ಡ ಇಟ್ಟುಕೊಂಡಿರುತ್ತಿದ್ದ. ಹಾಗೆ ದೊಡ್ಡನೆಯ ಮುಂಡಾಸು. ಮಂತ್ರವಾದಿಯಾದ ಈತ ಮದುವೆಯಾಗಿರಲಿಲ್ಲ.
ಮಂತ್ರ ತಂತ್ರ ಮಾಡೋರು ಮದುವೆಯಾಗಬಾರದು ಓಡೇರೆ ಎನ್ನುತ್ತಿದ್ದ ಗಡ್ಲಾ ರಾಮ. ಆದರೆ ಆತನಿಗೆ ಬೇರೆ ಬೇರೆ ಊರುಗಳಲ್ಲಿ ಪ್ರೇಯಸಿಯರು ಇದ್ದ ಸುದ್ದಿಗಳಿದ್ದವು. ಈ ಬಗ್ಗೆ ಪ್ರಶ್ನಿಸಿದರೆ ಆತ ಸುಮ್ಮನೆ ನಗುತ್ತಿದ್ದ. ಹಾಗೆ ಖಾಸಗಿಯಾಗಿ ಆತ ಮಾತನಾಡುತ್ತಿದ್ದುದು ಸೊಂಟದ ಕೆಳಗಿನ ವಿಷಯಗಳೇ. ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಳ್ಳುತ್ತಿದ್ದ. ಅಡುಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದ.
ಆತನ ಜೀವನ ಪ್ರೀತಿ ನನಗೆ ನೆನಪಾಗುತ್ತಿದೆ. ಎಂದೂ ಆತ ಸಿಟ್ಟು ಮಾಡಿಕೊಂಡಿದ್ದು, ಬೇಸರ ಪಟ್ಟಿದ್ದು ನಾನು ನೋಡಿಯೇ ಇಲ್ಲ. ಆತ ಸಾಯುವವರೆಗೂ ಹಾಗೆ ಇದ್ದ. ಸಾಯುವ ದಿನವೂ ಆತ ತನ್ನ ಬಟ್ಟೆಯನ್ನು ತಾನೇ ಒಗೆದುಕೊಂಡ. ಅಂದೂ ಸಹ ಟೋಮೆಟೋ ಸಾರು ಅನ್ನ ಮಾಡಿ ಊಟ ಮಾಡಿದ. ಎಲ್ಲರ ಜೊತೆ ನಕ್ಕ, ನಗುತ್ತಲೇ ಹೊರಟೂ ಹೋದ,
ಈಗಲೂ ಪ್ರತಿ ಕ್ಷಣವನ್ನೂ ಆತ ಅನುಭವಿಸುತ್ತಿದ್ದ ರೀತಿ ನನಗೆ ನೆನಪಾಗುತ್ತದೆ. ನಿನ್ನೆಯ ಬಗ್ಗೆ ಯೋಚಿಸದ, ನಾಳೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿ ಆತ. ಬದುಕಿನ ಬಹುದೊಡ್ದ ಆಧ್ಯಾತ್ಮಿಕತೆ ಎಂದರೆ ಇದೇ ಇರಬಹುದೆ ? ಗೊತ್ತಿಲ್ಲ.
ನನ್ನ ಮುಂದಿರುವ ಸ್ನೇಹಿತರು ಆತ್ಮಹತ್ಯೆಗೆ ಯತ್ನ ನಡೆಸಿದವರ ಬಗ್ಗೆ ಇನ್ನಷ್ಟು ಕೊರೆಯುತ್ತಿದ್ದರು. ಬದುಕಿನಲ್ಲಿ ಶಿಸ್ತು ಇರಲಿಲ್ಲ ಸಾರ್, ಯೋಚನೆಯಲ್ಲೂ ಶಿಸ್ತು ಇರಲಿಲ್ಲ, ಹೀಗೆ ಅವರ ಮಾತು ಮುಂದುವರಿಯುತ್ತಿತ್ತು. ಹಾಗೆ ಆತ್ಮಹತ್ಯೆಯ ಯತ್ನದ ಸುತ್ತ ಮಾತುಗಳೇ ಮಾತುಗಳು !
ನಾನು ಗಡ್ಲಾ ರಾಮ ಎಂಬ ಮಲೇನಾಡಿನ ಸಾಮಾನ್ಯ ಮಂತ್ರವಾದಿಯ ಬಗ್ಗೆಯೋಚಿಸುತ್ತಿದ್ದೆ. ಆತನೇ ನನಗೆ ಗೊತ್ತಿಲ್ಲದ ಹಾಗೆ ಬದುಕುವುದನ್ನು ಕಲಿಸರಬೇಕು, ಜೀವನ ಪ್ರೀತಿಯನ್ನು ತುಂಬಿರಬೇಕು ಎಂದು ಅನ್ನಿಸತೊಡಗಿತು....

3 comments:

chanakya said...

ಆತ್ಮಹತ್ಯೆ ಮಹಾಪಾಪ ಅನ್ನೋ ಮಾತಿದೆ. ಆತ್ಮಹತ್ಯೆಗೆ ಯತ್ನಿಸುವ ಮಂದಿ ಒಮ್ಮೆ ಆ ಕ್ಸಣದಲ್ಲಿ ದಿಕ್ಕು ತೋಚದಂತಾಗುತ್ತಾರೆ ಅನ್ನೋದನ್ನ ಕೇಳಿದ್ದೇನೆ.ನಿಜ..ಇಂತಹ ಪಾಪ ಕ್ರತ್ಯಗಳಿಗೆ ಮುಂದಾಗುವವರಿಗೆ ನಿಮ್ಮೂರಿನ ಗಡ್ಲಾರಾಮು ಮಾದರಿಯಾಗಲಿ.ಹುಟ್ಟು-ಸಾವು ನಮ್ಮ ನಿಯಂತ್ರಣದಲ್ಲಿಲ್ಲ ಹಾಗಾಗಿ ಸಾಯುವ ಇಲ್ಲಾ ಸಾಯಿಸುವ ಹಕ್ಕು ನಮಗಿಲ್ಲ. ನೀವೇನಂತೀರಾ?

http://santasajoy-vasudeva.blogspot.com said...

Badukalli endu pratiyondu amsha enjoy maaduvudannu mareyutteveyo aaga tantaane aatmahatyeya baagilu tereyuttade.IRUVUDELLAVA BIITTUU ennuvante...... aatmahatye maadikolluva manassu haage annuvudakinta antaha bhaava ondu kshana baruvudu sahaja.. aaga manassu haagu buddiyannu jote maadi bittaaga intaha yochane dura hoguttade.hege antiira ade badukannu vismayadinda noduvariitiyannu ivu ariyadante namage kalisi koduttade..:)!

www.kumararaitha.com said...

"ನಾನು ಆತ್ಮ ಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು
ಕಾರಣಗಳೇ ಅಲ್ಲ ಎಂಬ ಸಂಶಯ
ನನ್ನನ್ನು ಬದುಕಿ ಉಳಿಸಿದೆ"

ಎಷ್ಟೊಂದು ಅರ್ಥವತ್ತು ಈ ಕವನ;ಈ ಸಾಲುಗಳನ್ನು ಮನನ ಮಾಡಿದರೆ ಧ್ಯೆರ್ಯ ತಂತಾನೆ ಬರುತ್ತದೆ.
ಹೊಸ ವರ್ಷದ ಆರಂಭದಲ್ಲಿ ಅಧೀರ ಮನಸುಗಳಿಗೆ ಸ್ಥೈರ್ಯ ತುಂಬುವ ಲೇಖನವಿದು.ಗಡ್ಲಾ ರಾಮ ಎಂಬ ಮಲೇನಾಡಿನ ಸಾಮಾನ್ಯ ಮಂತ್ರವಾದಿಯ ಬದುಕು ಎಲ್ಲರನ್ನೂ ಪ್ರಭಾವಿಸಲಿ ಸರ್.....

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...