Friday, January 30, 2009

ಸ್ವಾಮಿಗಳನ್ನು ಕುರಿತು..........

ಸಾಧಾರಣವಾಗಿ ಮಠಗಳಿಗೆ ನಾನು ಹೋಗುವುದಿಲ್ಲ. ಸ್ವಾಮೀಜಿಗಳ ಕಾಲಿಗೂ ಬೀಳುವಿದಿಲ್ಲ. ಯಾಕೆಂದರೆ ಕಾಲಿಗೆ ಬೀಳುವುದೆಂದರೆ ಸಂಪೂರ್ಣ ಶರಣಾಗತಿ. ನನಗೆ ಈ ಶರಣಾಗತಿಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಅನುಭವ ಇದ್ದರೂ ಇದ್ದೀತು. ೮೦ ರ ದಶಕದಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ನಾನು ಊರಿಗೆ ಬಂದಾಗ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ್ದು ಬಂಡಾಯ ಮತ್ತಿ ರೈತ ಚಳವಳಿಗಳು. ಈ ಕಾರಣದಿಂದ ನನ್ನ ಮೊದಲು ಹೋರಾಟ ಪ್ರಾರಂಭವಾಗಿದ್ದು ರಾಮಚಂದ್ರಮಠದ ಅಂದಿನ ಸ್ವಾಮೀಜಿಯ ವಿರುದ್ಧ. ಬರವಣಿಗೆಯ ಮೂಲಕ ಪ್ರಾರಂಭವಾದ ಈ ಹೋರಾಟ ಮಠದ ಭಕ್ತರು ನನ್ನ ಮೇಲೆ ಧಾಳಿ ನಡೆಸಲು ಯೋಜನೆಯನ್ನು ರೂಪಿಸುವವರೆಗೆ ಬೆಳೆಯಿತು.


ಆಗ ಆ ಸ್ವಾಮೀಜಿ ನನಗೆ ಶಾಪ ಹಾಕಿದರು. ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವುದಾಗಿ ಘೋಷಿಸಿದರು. ಸ್ವಜಾತಿಯ ಜನ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದರು. ಅವರ ಈ ಕಿರುಕುಳವನ್ನು ಎದುರಿಸಲಾಗದೇ ನಾನು ಬೆಂಗಳೂರಿಗೆ ಬಂದಿದ್ದು, ಪತ್ರಿಕೋದ್ಯಮಿಯಾಗಿದ್ದು. ಇಲ್ಲದಿದ್ದರೆ ನಾನು ಊರು ಬಿಟ್ಟು ಬರುತ್ತಲೇ ಇರಲಿಲ್ಲ. ನನಗೆ ಶಾಪ ಹಾಕಿ ಊರು ಬಿಡಿಸಿದ ಕಾರಣಕ್ಕಾಗಿ ಮತ್ತು ಅವರು ಶಾಪ ನೀಡಿದ ಮೇಲೆ ನನಗೆ ಒಳ್ಳೆಯದಾಗಿದ್ದಕ್ಕಾಗಿ ನಾನು ಈಗಲೂ ಅವರಿಗೆ ಕೃತಜ್ನನಾಗಿದ್ದೇನೆ.


ಪತ್ರಿಕೋದ್ಯಮಿಯಾದ ಮೇಲೆ ನಾನು ಕರ್ನಾಟಕದ ಬಹುತೇಕ ಪ್ರಮುಖ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಯಾಕೋ ನನಗೆ ಗೌರವ ಬರುಂತಹ ಸ್ವಾಮಿಗಳು ನನಗೆ ಸಿಕ್ಕಿಲ್ಲ. ಮಂತ್ರಾಕ್ಷತೆ ನೀಡುವಾಗ ಮಹಿಳೆಯರಾದರೆ ಅವರ ಕೈ ಮುಟ್ಟಿ ನೀಡುವ, ಪುರುಷರಾದರೆ ದೂರದಿಂದ ಒಗೆಯುವ ಸ್ವಾಮಿಗಳನ್ನು ನಾನು ನೋಡಿದ್ಡೇನೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಬ್ಲೂ ಫಿಲ್ಮ್ ನೋಡುವ ಸ್ವಾಮಿಗಳು ನನಗೆ ಗೊತ್ತು. ಹಾಗೆ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅಂಗಡಿ ತೆರೆದಿರುವ ಮಠಾಧಿಪತಿಗಳು ನಮ್ಮ ನಡುವೆ ಇದ್ದಾರೆ. ರಾಜಕೀಯ ಮಧ್ಯಸ್ಥಿಕೆ ಮಾಡುವವರು, ಇನ್ನು ಏನೇನೋ ಮಾಡುವವರು ಎಲ್ಲ ಈ ಧರ್ಮದ ಜಗತ್ತಿನಲ್ಲಿ ತುಂಬಿ ಹೋಗಿದ್ದಾರೆ.


ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸಿದ್ದಗಂಗೆಯ ಡಾ. ಶಿವಕುಮಾರ್ ಸ್ವಾಮಿಯವರನ್ನು ನಾನು ಭೇಟಿ ಮಾಡಿದ ಸಂದರ್ಭವನ್ನು ಹೇಳುವುದಕ್ಕಾಗಿ. ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಈಗ ನೂರಾ ಒಂದು ವರ್ಷ. ಈ ಕಾರಣಕ್ಕಾಗಿ ನಾನು ಅವರನ್ನು ಸಂದರ್ಶಿಸಲು ಮುಂದಾದೆ. ಅವರ ಅಕ್ಷರ ದಾಸೋಹದ ಬಗ್ಗೆ ನನಗಿರುವ ಗೌರವ ಕೂಡ ಇದಕ್ಕೆ ಕಾರಣವಾಗಿತ್ತು. ಪ್ರತಿ ದಿನ ಸುಮಾರು ೧೦ ಸಾವಿರ ಮಕ್ಕಳಿಗೆ ಊಟ ವಸತಿ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವುದು ಸಾಮಾನ್ಯ ಸಾಧನೆ ಅಲ್ಲ. ಸಿದ್ದಗಂಗಾ ಮಠ ಇರುವುದರಿಂದಲೇ ಕರ್ನಾಟಕದ ಬಹಳಷ್ಟು ದಲಿತ ಮತ್ತು ದುರ್ಬಲ ವರ್ಗದ ಮಕ್ಕಳು ವಿದ್ಯಾವಂತರಾಗುವುದು ಸಾಧ್ಯವಾಗಿದೆ. ಇದೆಲ್ಲ ಕೂಡ ಶ್ಲಾಘನೀಯ ವಿಚಾರವೇ,

ನಾನು ಅವರನ್ನು ಸಂದರ್ಶನ ಮಾಡಿದ ಮೇಲೆ ಕೆಲವರು ಕೇಳಿದರು. ಯಾಕೆ ಸಾರ್, ನಿಮ್ಮ ಒರಿಜಿನಲ್ ಸ್ಟೈಲ್ ಇರಲಿಲ್ಲ. ನಾನು ಅವರಿಗೆ ಹೇಳಿದೆ.

"ಸ್ವಾಮಿಗಳ ಬಗ್ಗೆ ನನಗೆ ಅಂತಹ ಗೌರವ ಇಲ್ಲ ಎಂಬುದು ನಿಜ. ಹಾಗೆ ರಾಜಕಾರಣಿಗಳಿಗೆ ಆಶೀರ್ವಾದ ನೀಡುತ್ತ ಇವರೆಲ್ಲ್ ಮಾಡುವ ಜಾತಿ ರಾಜಕೀಯವೂ ನನಗೆ ಗೊತ್ತು. ಮಾರ್ಗ ದರ್ಶನ ಮಾಡುವವರೇ ಭಕ್ಷಕರಾಗುವುದು ನನಗೆ ತಿಳಿದಿದೆ. ಆದರೆ, ಅಕ್ಷರ ದಾಸೋಹದಂತಹ ಸಾಮಾಜಿಕ ಕಾರ್ಯ ಮಾಡುವವರನ್ನು ನಾನು ಗೌರವಿಸುತ್ತೇನೆ. ಅದಕ್ಕಾಗಿ ಶ್ಲಾಘಿಸುತ್ತೇನೆ. ಆದರೆ ಈ ಮಠ ಕಟ್ಟುವವರನ್ನು ನಾನು ಒಪ್ಪಿಕೊಳ್ಳಲಾರೆ. ಮಠ ಕಟ್ಟುವುದು ಯಾಕಾಗಿ ಎಂಬ ಬಗ್ಗೆ ನನಗೆ ಅನುಮಾನಗಳಿವೆ. ಏನೇ ಇರಲಿ ಶಿವಕುಮಾರ ಸ್ವಾಮಿಗಳು ನೂರು ವರ್ಷ ಪೂರೈಸಿದ್ದಾರೆ. ಎಲ್ಲ ದೌರ್ಬಲ್ಯಗಳ ನಡುವೆಯೂ ಅವರದು ಸಾರ್ಥಕ ಬದುಕು. "

3 comments:

ಹರೀಶ್ ಕೇರ said...

ಸರಿಯಾಗಿ ಬರೆದಿದ್ದೀರಿ.
- ಹರೀಶ್ ಕೇರ

chanakya said...

ಎಲ್ಲ ಸ್ವಾಮೀಜಿಗಳನ್ನ ಒಂದೇ ರೀತೀಲಿ ನೋಡೋದು ನನ್ನ ಪ್ರಕಾರ ತಪ್ಪು ಅನ್ಸುತ್ತೆ.ಆದ್ರೂ ಸಿದ್ದಗಂಗಾ ಶ್ರೀಗಳು ಇತರ ಸ್ವಾಮೀಜಿಗಳಿಗೆ ಕಾಯಕದಲ್ಲಿ ಮಾದರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ...

ashokamedia said...

ಜಾತಿ, ಧರ್ಮ, ರಾಜಕೀಯ, ಆಡಳಿತ ಇವುಗಳಲ್ಲಿ ಮಠಾಧೀಶರು ಮಧ್ಯಪ್ರವೇಶ ಮಾಡುತ್ತಾರೆ ಎಂಬುದರಲ್ಲಿ ಸತ್ಯವಿದೆ. ಇಂದು ಬಹುತೇಕ ಸ್ವಾಮೀಜಿಗಳಲ್ಲಿ ಲಿಂಗಾಯಿತ ಅಥವಾ ವೀರಶೈವ ಧರ್ಮದ ಮಠಾಧೀಶರೇ ಅತಿ ಹೆಚ್ಚು ಪ್ರಭಾವಿಗಳಾಗಿದ್ದಾರೆ. ಯಾಕೆಂದರೆ ಕರ್ನಾಟಕದಲ್ಲಿ ಜಗಜ್ಯೋತಿ ಬಸವೇಶ್ವರರ ಅಲೆಯಲ್ಲಿ ಎಲ್ಲಾ ಜಾತಿಯ ಜನ ಲಿಂಗಾಯಿತ ಧರ್ಮದ ಕಡೆ ಆಕರ್ಷಿತರಾದರು. ಲಿಂಗಾಯಿತ ಒಂದು ಧರ್ಮವಷ್ಟೇ, ಅದು ಮನುಕುಲವನ್ನು ಆಧ್ಯಾತ್ಮಿಕತೆ ಕಡೆ ತೆಗೆದುಕೊಂಡು ಹೋಗುವ ಮಾರ್ಗ, ಅದೆಂದೂ ಒಂದು ಜಾತಿಯಲ್ಲ ಎಂದು ಸ್ಪಷ್ಟವಾಗಿ ಹೇಳಿ ವಿಶೇಷವಾಗಿ ದಲಿತ ವರ್ಗದವರನ್ನು ಲಿಂಗಾಯಿತ ಧರ್ಮಕ್ಕೆ ಸೇರುವಂತೆ ಮಾಡಿದ ಬಸವಣ್ನ ಮುಂದೆ ಜಗತ್ತಿನ ವಿಶ್ವಮಾನವ ಎಂದು ಕರೆಸಿಕೊಂಡರು. ಆದರೆ ಇಂದು ಏನಾಗಿದೆ? ಕೆಲವು ಮಠಾಧೀಶರು ಪ್ರಚಾರ, ಐಷಾರಾಮಿ ಜೀವನಕ್ಕಾಗಿ ಈ ಲಿಂಗಾಯಿತ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಹಾಲಿ ಸ್ವಾಮೀಜಿಗಳು ಲಿಂಗಾಯಿತ ಧರ್ಮದ ಅರ್ಥವೇ ಗೊತ್ತಿರದ ಹುಡುಗನಂತೆ ಆಡಿದ್ದು ವಿವಾದವಾಗಿ ಹೋಗಿತ್ತು. ಬಸವಣ್ಣ ಹೇಳಿದ್ದು ಎಲ್ಲಾ ಜಾತಿಯ ಜನ ಲಿಂಗ ಪೂಜೆ ಮಾಡಬಹುದು, ಅಲ್ಲದೆ ಲಿಂಗಾಯಿತ ಧರ್ಮಕ್ಕೆ ಸೇರಬಹುದು. ಅದಕ್ಕೆ ದೀಕ್ಷೆ ಪಡೆಯಬೇಕು, ಆದರೆ ಪ್ರಾಣಿಹಿಂಸೆ ಮಾಡಬಾರದು, ಸಸ್ಯಾಹಾರಿಗಳಾಗಬೇಕು ಎಂದು ಸರಳವಾಗಿ ಹೇಳಿದ್ದರು. ತೀರಾ ರಾಜಕೀಯ ವ್ಯಕ್ತಿಯಂತೆ ಸುದ್ದಿ ಮಾಡಿದ ಚಿತ್ರದುರ್ಗದ ಮುರುಘಾಮಠದ ಹಾಲಿ ಸ್ವಾಮೀಜಿಗಳು ಒಂದೊಂದು ದಲಿತ, ಹಿಂದುಳಿದ ಜಾತಿಗೂ ಒಂದೊಂದು ಮಠ ಕಟ್ಟಿ ಅನ್ನೋ ರೀತಿ ಬೆಂಬಲ ನೀಡಿ ಧನ ಬೆಂಬಲ, ಸಾಮಾಜಿಕ ಬೆಂಬಲ ನೀಡಿದರು. ಆ ಮೂಲಕ ನಾನು ಸಮಾನತೆಯ ಹರಿಕಾರ ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಅಷ್ಟೇ ಅಲ್ಲ, ಲಿಂಗಾಯಿತ ಧರ್ಮಕ್ಕೆ ಯಾರು ಬೇಕಾದರೂ ಬರಬಹುದು, ಮಾಂಸಹಾರಿಗಳೂ ಸಹ ಆದ್ರೂ ಬರಬಹುದು, ಆಹಾರ ಪದ್ದತಿ ಅವರವರ ಇಷ್ಟಕ್ಕೆ ಬಿಟ್ಟಿದ್ದು ಎಂದು ಹೇಳಿ ಭಾರಿ ರಾದ್ದಾಂತ ಮಾಡಿದರು. ಇಷ್ಟಕ್ಕೇ ಮುಗಿಯಲಿಲ್ಲ, ಅವರ ಎಡಬಿಡಂಗಿತನ. ಬೀದರ್‍ ಜಿಲ್ಲೆಯ ಬಸವಕಲ್ಯಾಣದಲ್ಲಿ ತಮ್ಮದೇ ಆದ ಒಂದು ಲಿಂಗಾಯಿತ ಧರ್ಮದ ಸಮ್ಮೇಳನಕ್ಕೆ ರಾಜ್ಯವ್ಯಾಪಿ ಭಕ್ತಾದಿಗಳನ್ನು ಆಹ್ವಾನಿಸಿದ್ದರು. ಇದು ಬಸವಣ್ಣವರ ಅನುನಾಯಿಗಳಿಗೆ ಕೋಪ ತರಿಸಿತು. ಅಲ್ಲಾ ಈ ಸ್ವಾಮೀಜಿಗೆ ಅದೇನು ಪಬ್ಲಿಸಿಟಿ ಹುಚ್ಚು, ಅವತ್ತು ನೋಡಿದ್ರೆ ಬಸವಣ್ಣನ ತರಾನೇ ನಾನೂ ಮದುವೆಯಾಗ್ತೀನಿ, ಮದುವೆಯಾಗಿಯೂ ಬಸವಣ್ಣ ಲಿಂಗಾಯಿತ ಧರ್ಮವನ್ನು ಜನಪ್ರಿಯಗೊಳಿಸಿದರಲ್ಲಾ ಅದೇ ರೀತಿ ನಾನೂ ಗೃಹಸ್ಥನಾಗ್ತೀನಿ ಅಂದು ವಾದ ಮಾಡಿದ್ರು. ಅಂದು ಚಿತ್ರದುರ್ಗದಲ್ಲೇ ತಮ್ಮ ನಿವಾಸದಲ್ಲಿ ವಾಸವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನೋಡಪ್ಪ ನೀನು ಮದುವೆಯಾಗೋದಿದ್ರೆ ಮಠದ ಸ್ವಾಮೀಜಿ ಸ್ಥಾನವನ್ನು ಬಿಟ್ಟುಬಿಡು ಎಂದು ಗದರಿಸಿದ್ರು. ಆಮೇಲೆ ಸಮಾಜ ವಿರೋಧಿಸಿದ್ದರಿಂದ ಸ್ವಾಮೀಜಿಯಾಗಿಯೇ ಮುಂದುವರಿದರು. ಹೀಗೆ ಲಿಂಗಾಯಿತ ಧರ್ಮದ ಉದ್ದೇಶವನ್ನೇ ಅರ್ಥಮಾಡಿಕೊಳ್ಳದ ನಮ್ಮ ಚಿತ್ರದುರ್ಗದ ಸ್ವಾಮೀಜಿಗಳು ಯಾವಾಗಲೂ ನಾನು ದಲಿತ ಪರ, ಶೋಷಿತರ ಪರ ಎಂದು ತೋರಿಸಿಕೊಳ್ಳಲು ಹಾತೊರೆಯುತ್ತಾರೆ. ಇವರಿಗೆ ರಾಜಕೀಯ ವ್ಯಕ್ತಿಗಳ ಬೆಂಬಲವೂ ಇರುತ್ತದೆ. ಯಾಕೆಂದರೆ ಚುನಾವಣೆ ಬಂದಾಗ ಇದೇ ಸ್ವಾಮೀಜಿಗಳು ಮತ ನೀಡೋದಕ್ಕೆ ಆಂಕರಿಂಗ್ ಮಾಡುತ್ತಾರೆ. ಅಹಿಂದ ಸಮಾವೇಶಗಳಿಗಂತೂ ಈ ಸ್ವಾಮೀಜಿ ಭಾರಿ ಸ್ಟಾರೇ ಆಗಿದ್ದರು. ಮುರುಘಾಮಠದ ಸ್ವಾಮೀಜಿ ದಲಿತ, ಹಿಂದುಳಿದ, ಶೋಷಿತರಿಗೆ ಲಿಂಗ ದೀಕ್ಷೆ ಕೊಡಿಸಬೇಕು ಅನ್ನೋ ಬಸವಣ್ಣನವರ ಉದ್ದೇಶವನ್ನೇ ಮರೆತರು. ಈ ವೆರೈಟಿಯ ಅನೇಕ ಸ್ವಾಮೀಜಿಗಳು ಕರ್ನಾಟಕದಲ್ಲಿದ್ದಾರೆ. ಇವರೆಲ್ಲಾ ಕೆಟ್ಟವರೆಲ್ಲ. ಆದರೆ ಮಠದ ಕಟ್ಟುಪಾಡುಗಳನ್ನೇ ಮರೆತು ರಾಜಕೀಯ ಮಾಡಲು ಇತರ ಧರ್ಮದವರಿಗೆ ಆರಾಧ್ಯದೈವರಾಗಲು ಹೋಗಿ ತಮ್ಮ ಧರ್ಮದ ಜನರಿಂದ ಟೀಕೆಗೊಳಗಾಗಿ, ಮಠ ಬಿಟ್ಟು ಹೋಗಿ ಎಂದು ಬೈಸಿಕೊಳ್ಳುವವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗುತ್ತೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಪರವಾಗಿ ಚಿಕಾಗೋದಲ್ಲಿ ಮಾತನಾಡಿದ್ರೂ ಅವರ ವಾದವನ್ನು ಒಪ್ಪಿ ಜಗತ್ತಿನ ಎಲ್ಲಾ ಧರ್ಮದ ಜನ ಹಿಂದು ಧರ್ಮದ ಕಡೆ ಆಕರ್ಷಿತರಾದರು.
ಉಪದೇಶ ಮಾಡುವವರು ಮೊದಲು ಸರಿಯಾಗಿರಬೇಕು.
ಸಿದ್ದಗಂಗಾ ಮಠದ ಶತಾಯುಷಿ ಸ್ವಾಮೀಜಿಗಳನ್ನು ನೋಡಲು ಕಲಾಂ ಬರುತ್ತಾರೆ, ಹಾಲಿ ರಾಷ್ಟ್ರಪತಿ ಬರುತ್ತಾರೆಂದರೆ ಅದರಲ್ಲಿ ಸ್ವಾಮೀಜಿಯ ಜನಪ್ರಿಯತೆ ವೈಶಾಲ್ಯತೆ ತಿಳಿಯುತ್ತದೆ. ಆದರೆ ತುಮಕೂರು ವಿ.ವಿಗೆ ಸಿದ್ದಗಂಗಾ ವಿ.ವಿ ಎಂದು ಹೆಸರಿಡಲು ಆ ದಲಿತ ಸಂಘಟನೆ ವಿನಾಃ ಕಾರಣ ವಿವಾದ ಮಾಡಿತು. ಆ ದಲಿತ ಸಂಘಟನೆಗೆ ನಾನು ಹೇಳೋದು ಇಷ್ಟೇ. ನವದೆಹಲಿಯ ಅಂತರಾಷ್ಟ್ರೀಯ ವಿಮಾನಿಲ್ದಾಣಕ್ಕೆ ಯಾಕೆ ಇಂದಿರಾಗಾಂಧಿಯ ಹೆಸರಿಡಲಾಯಿತು? ಹಾಗೆನೇ ರಾಜೀವ್ ಗಾಂಧಿಯ ಹೆಸರನ್ನು
ಆರೋಗ್ಯ ವಿವಿಗೆ ಯಾಕೆ ಇಡಲಾಯಿತು? ಕುವೆಂಪು ಹೆಸರನ್ನು ಯಾಕೆ ಶಂಕರಘಟ್ಟದ ವಿ.ವಿಗೆ ಇಡಲಾಯಿತು? ಸಿದ್ದಗಂಗಾ, ಸುತ್ತೂರು, ರಾಮಚಂದ್ರಪುರ, ಸಿರಿಗೆರೆ-ಸಾಣೇಹಳ್ಳಿ ಮಠಗಳು ಎಲ್ಲಾ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿವೆ. ಯಾರೋ ಚಿಕ್ಕ ಪುಟ್ಟ ನಕಲಿ ಸ್ವಾಮೀಜಿಗಳು ಜನರಿಗೆ ಮೋಸಮಾಡಿದ್ರು ಅಂತ ಇಡೀ ಮಠಾಧಿಪತಿಗಳಿಗೇ ಬಯ್ಯಬಾರದು. ರಾಜಕೀಯ ಧುರೀಣರು ದೌರ್ಜನ್ಯ ಮಾಡಿದ್ರೆ ಆಯಾ ಜಾತಿಯ ಮಠಾಧೀಶರೇ ಅವರನ್ನು ತರಾಟೆಗೆ ತೆಗೆದುಕೊಳ್ತಾರೆ. ಆದ್ದರಿಂದ ಅಸಲು ಬ್ರಹ್ಮಚಾರಿಗಳಾಗಿ ಸನ್ಯಾಸತ್ವವನ್ನು ಸ್ವೀಕರಿಸಿ ಅರಿಶ್ವಡ್ವರ್ಗಗಳ ಜುಟ್ಟು ಹಿಡಿಯೋ ಇಂತಹ ಸ್ವಾಮೀಜಿಗಳು ಮುಖ್ಯಮಂತ್ರಿಗಳೂ ತಪ್ಪು ಮಾಡಿದ್ರೆ ಬಿಡದೆ ತರಾಟೆಗೆ ತೆಗೆದುಕೊಳ್ಳೊದನ್ನ ಯಾರೂ ವಿರೋಧಿಸಲಾರರು. ಸ್ವಾಮೀಜಿಗಳ ಸಲಹೆಯಿಂದಲೇ ಹಿಂದೆ ಹಕ್ಕ-ಬುಕ್ಕರು ವಿಜಯನಗರ ಸಾಮಾಜ್ಯವನ್ನ ಕಟ್ಟಿದ್ದು. ಬನವಾಸಿಯ ಕದಂಬ ವಂಶದ ಮಯೂರವರ್ಮ ಸ್ವಾಮೀಜಿಗಳ ಆಶ್ರಯದಲ್ಲೇ ಬೆಳೆದು ಕನ್ನಡಿಗರನ್ನು ರಕ್ಷಿಸಲಿಲ್ವೆ? ಕಳೆದ ಕ.ಸಾ.ಪ ಚುಮಾವಣೆಯಲ್ಲಿ ಮತ ಹಾಕಲು ಬಂದ ಸ್ವಾಮೀಜಿಗಳೊಬ್ಬರು ಮಾಧ್ಯಮಗಳಿಗೆ ಮಾತನಾಡಿ ಈ ಬಾರಿ ಈ ಅಭ್ಯರ್ಥಿ ಗೆಲ್ಲಬೇಕು ಎಂದು ಬಹಿರಂಗವಾಗಿ ಹೇಳಿದ್ದು ಎಷ್ಟು ಸರಿ ಅಲ್ವಾ? ಪ್ರತಿಯೊಂದು ಮಠದ ಉದ್ದೇಶ ಒಳ್ಳೆಯದೇ ಆಗಿದೆ. ನಕಲಿ ಮಠಾಧಿಪತಿಗಳ ನಾಶ ಮಾಡಲು ಹೋಗಿ ಬಡವರಿಗೆ ಬೇಕಾದ ಅಸಲು ಸ್ವಾಮೀಜಿಗಳನ್ನು ಬಯ್ಯೋದು ಬೇಡ ಅಲ್ವೆ?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...