Friday, February 13, 2009

ಪ್ರೀತಿಸುವುದನ್ನು ಕಲಿಸಬೇಕಾಗಿದೆ.....

ಇಂದು ಫೆಬ್ರವರಿ ೧೩, ನಾಳೆ ಫೆಬ್ರವರಿ ೧೪, ವಾಲಂಟನ್ ಡೆ ಅಥವಾ ಪ್ರೇಮಿಗಳ ದಿನ, ಇದು ಇಂದು ವಿವಾದಕ್ಕೆ ಕಾರಣವಾಗಿದೆ. ವಾಲೆಂಟೈನ್ ದಿನವನ್ನು ಮುತಾಲಿಕ್ ಮತ್ತು ಅವರ್ ಉಗ್ರಗಾಮಿ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಸೀರೆಬಾಗೀನವನ್ನು ಕೊಡಲು ಅವರು ಸಿದ್ಧರಾಗುತ್ತಿದ್ದಾರೆ. ವಾಲೆಂಟೈನ್ ದಿನದ ಪರವಾಗಿರುವವರು ಪಿಂಕ್ ಚಡ್ದಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳ ದಿನಾಚರಣೆಗಾಗಿ ಬೆಂಗಳೂರಿನ ಹೊಟೆಲ್ ಗಳು ಬುಕ್ಕಾಗಿವೆ.
ಇಲ್ಲಿ ಮುತಾಲಿಕ್ ಮತ್ತು ಅವರ ಬೆಂಬಲಿಗರೂ ತಾವು ಪ್ರೇಮಿಗಳಿಗೆ ವಿರೋಧಿಗಳಲ್ಲ ಎಂದು ಹೇಳುತ್ತಾರೆ. ಹಾಗೆ ಮುತಾಲಿಕ್ ಅವರನ್ನು ವಿರೋಧಿಸುವ ಆಧುನಿಕ ಮಹಿಳಾವಾದಿಗಳು ಕೆಂಪು ಕಾಚಾವನ್ನು ಅವನಿಗೆ ಕಳುಹಿಸಿ ವಿಜ್ರಂಭಿಸಲು ಸನ್ನದ್ಧರಾಗುತ್ತಿದ್ದಾರೆ.
ಇವರ ಮಾತುಗಳನ್ನು ನಂಬುವುದಾದರೆ ಇವರೆಲ್ಲ ಪ್ರೇಮಿಗಳ ಪರವಾಗಿರುವವರು. ಹಾಗಿದ್ದರೆ ಇವರ ನಡುವೆ ಯಾಕೆ ಜಗಳ ? ನಿಜವಾಗಿ ಹೇಳುವುದಾದರೆ ಇವರಲ್ಲಿ ಯಾರಿಗೂ ಪ್ರೇಮ ಎಂದರೇನು ಎಂಬುದು ತಿಳಿದಿಲ್ಲ. ಯಾಕೆಂದರೆ ಪ್ರೇಮ ಎನ್ನುವುದು ಒಂದು ಉತ್ಕಟ ಭಾವನೆ. ಅದು ಮನಸ್ಸುಗಳ ಎಲ್ಲೆಯನ್ನು ಮೀರಿದ್ದು. ಪ್ರೇಮದಲ್ಲಿ ಇರುವುದು ಸಮರ್ಪಣಾ ಮನೋಭಾವನೆ. ಅಲ್ಲಿ ಎರಡು ಮನಸ್ಸುಗಳು ದೇಹಗಳು ಸಂಪೂರ್ಣವಾಗಿ ಪ್ರತ್ಯೇಕ ಅಸ್ಥಿತ್ವವನ್ನೇ ಕಳೆದುಕೊಂಡಿರುತ್ತವೆ. ಎರಡು ದೇಹ ಮತ್ತು ಮನಸ್ಸು ಒಂದಾಗುವ, ಅನೇಕದಲ್ಲಿ ಏಕವಾಗುವ ಅಧ್ಬುತ ಇದು. ಪ್ರೇಮಕ್ಕೆ ಕಾಲವಿಲ್ಲ, ಪ್ರೇಮಕ್ಕೆ ಯಾವುದೇ ಬಂಧನ ಇಲ್ಲ. ಬಂಧನದಲ್ಲಿ ಪ್ರೇಮ ಹುಟ್ಟಲಾರದು.
ಮುತಾಲಿಕ್ ಅವರಂತಹ ಕಟ್ಟಾ ಹಿಂದೂವಾದಿಗಳಿಗೆ ರಾಮ ಆದರ್ಶನೇ ಹೊರತೂ ಕೃಷ್ಣನಲ್ಲ. ಹಾಗೆ ನೋಡಿದರೆ ಶ್ರೀರಾಮನ ವ್ಯಕ್ತಿತ್ವ ತುಂಬಾ ಸೀಮಿತವಾದದ್ದು. ಆತ ಎಂದೂ ಜನರಿಗಾಗಿ ಬದುಕಲಿಲ್ಲ. ತನ್ನ ಸುತ್ತಲಿನವರಿಗಾಗಿ ಬದುಕಲಿಲ್ಲ. ತನ್ನ ಹಿಂದೆ ನೆರಳಿನಂತೆ ಹೆಜ್ಜೆ ಹಾಕುವ ಸೀತೆಯನ್ನು ಆತ ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ಆತ ಆಕೆಯನ್ನು ಅಗ್ನಿ ಕುಂಡಕ್ಕೆ ದಬ್ಬಲು ಹಿಂಜರಿಯಲಿಲ್ಲ. ಆದರೆ ಕೃಷ್ಣ ಹಾಗಲ್ಲ. ಆತ ಅದ್ಭುತ ಪ್ರೀತಿಯ ಸಂಕೇತ. ಇಡೀ ಮಹಾಭಾರತದಲ್ಲಿ ಕೃಷ್ಣನಿಗೆ ಸಿಟ್ಟು ಬಂದಿದ್ದೇ ಕಡಿಮೆ. ಹಾಗೆ ಅವನ ಮುಖದ ಮೇಲಿರುವ ಕಿರು ನಗೆ. ರಾಧೆಯ ಬಳಿ ಇರಲಿ, ರುಕ್ಮಿಣೀಯ ಬಳಿ ಇರಲಿ, ಸತ್ಯ ಭಾಮೆಯ ಬಳಿ ಇರಲಿ ಕೃಷ್ಣ ಕೃಷ್ಣನೇ. ಜೊತೆಗೆ ಅವನ ವ್ಯಕ್ತಿತ್ವಕ್ಕೆ ಇರುವ ಬೇರೆ ಬೇರೆ ಆಯಾಮಗಳು. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದೆಂದರೆ ಅದು ರಾಜ್ಯಶಾಸ್ತ್ರವನ್ನು ಕಲಿತಂತೆ. ಪ್ರೇಮ ಕಾವ್ಯವನ್ನು ಮನನ ಮಾಡಿದಂತೆ. ಆತ ಎಲ್ಲಿಯೇ ಇರಲಿ, ಅಲ್ಲಿ ಇರದಿರುವುದು ಕೃಷ್ಣನಿಗ್ಎ ಗೊತ್ತಿತ್ತು.
ಇಂತಹ ಕೃಷ್ಣನನ್ನು ಅರ್ಥಮಾಡಿಕೊಳ್ಳದವರು ಪ್ರೇಮವನ್ನು ಅರ್ಥಮಾಡಿಕೊಳ್ಳಲಾರರು. ರಾಮಜಪ ಜಪಿಸುವವರು ಎಂದೂ ಮಹಿಳಾ ವಿರೋಧಿಗಳೇ.
ಇನ್ನು ಪಿಂಕ್ ಚೆಡ್ದಿಯನ್ನು ಕಳುಹಿಸುವವರ ಮನಸ್ಥಿತಿಯನ್ನು ನೋಡಿ. ಇದೂ ಅಪಾಯಕಾರಿಯೇ. ಇವರಿಗೂ ಪ್ರೇಮದ ಗಂಧಗಾಳಿಯೂ ಇಲ್ಲ. ನಿಜವಾಗಿ ಪ್ರೀತಿಸುವವರು ಚಡ್ದಿಯನ್ನು ಕಳಿಹಿಸುತ್ತಿರಲಿಲ್ಲ. ಚೆಡ್ದಿ ನಮ್ಮ ಗುಪ್ತಾಂಗವನ್ನು ಮುಚ್ಚುತ್ತದೆ. ಅದಕ್ಕೆ ಇರುವ ವಾಸನೆ ಪ್ರೀತಿಯದಲ್ಲ, ಅದು ಕಾಮದ ವಾಸನೆ. ಕಾಮ ಬಯಕೆಯಲ್ಲಿ ಹುಟ್ಟುತ್ತದೆ, ಪ್ರೀತಿ ನಿಸ್ವಾರ್ಥದಲ್ಲಿ, ಅರ್ಪಿಸಿಕೊಳ್ಳುವವದಲ್ಲಿ ತಮ್ಮನ್ನೆ ನಾವೆ ಮರೆಯುವದಲ್ಲಿ ಹುಟ್ಟಿ ಬೆಳೆಯುತ್ತದೆ. ಕಾಮದಲ್ಲಿ ಸ್ವಾರ್ಥ ಮತ್ತು ಬಯಕೆ ಇರುವುದರಿಂದ ಅದಕ್ಕೆ ಬೆಳವಣಿಗೆ ಇಲ್ಲ. ಪ್ರೀತಿ ಹಾಗಲ್ಲ, ಅದು ಬೆಳೆಯುತ್ತಲೇ ಇರುತ್ತದೆ, ಯಾಕೆಂದರೆ ಅದಕ್ಕೆ ಎಲ್ಲೆಯೇ ಇಲ್ಲ.
ನನ್ನನ್ನು ಇನ್ನೊಂದು ಅಂಶ ಕಾಡುತ್ತದೆ. ನಮ್ಮ ಕಾವ್ಯದಲ್ಲಿ ಸಾಹಿತ್ಯದಲ್ಲಿ, ಇತಿಹಾಸದಲ್ಲಿ ಪ್ರೀತಿಯ ಹಲವು ಉದಾಹರಣೆಗಳು ಸಿಗುತ್ತವೆ. ಕಾಳಿದಾಸನ ಮೇಘಧೂತ ಒಂದು ಮಹಾನ ಪ್ರೀತಿ, ವಿರಹದ ಕಾವ್ಯ. ಹಾಗೆ ಸಲಿಂ ಅನಾರ್ಕಲಿಯಂತಹ ಪ್ರೀತಿಗೆ ಇಲ್ಲಿ ವಿಜೃಂಭಿಸಿದೆ. ಆದರೆ ನಮಗೆಂದೂ ಪ್ರೀತಿಗಾಗಿ ಒಂದು ದಿನ ಬೇಕು ಎಂದು ಅನ್ನಿಸಲೇ ಇಲ್ಲ.
ಜಾಗತೀಕರಣದ ನಂತರ ವಿದೇಶಿಯರನ್ನು ಅತಿಯಾಗಿ ಅನುಕರಿಸಲು ಪ್ರಾರಂಭಿಸಿದ ನಾವು ಪ್ರೀತಿಯ ವಿಚಾರದಲ್ಲೂ ಅವರನ್ನು ಅನುಕರಣೆ ಮಾಡಲು ಪ್ರಾರಂಭಿಸಿದೆವು. ಪ್ರೀತಿಯಲ್ಲೂ ಮಾರು ಕಟ್ಟೆ ಸಂಸ್ಕೃತಿ ಬಂತು. ಈ ಮಾತನ್ನು ನಾನು ಹೇಳುದಕ್ಕೂ ಬಯಪಡುತ್ತೇನೆ. ಯಾಕೆಂದರೆ ಈ ಮಾತು ಹೇಳಿದ ತಕ್ಷಣ ಕಪಿ ಸೈನ್ಯ ಇದನ್ನು ಬಳಸಿಕೊಳ್ಳುತ್ತದೆ. ರಾಮನ ವಂಶಜರು ವಿಕಟ ನಗೆ ನಗುತ್ತಾರೆ. ಆಗ ಪ್ರೀತಿಸುವ ಹೃದಯಗಳು ರೋಧಿಸಲು ಪ್ರಾರಂಭಿಸುತ್ತವೆ.
ಪ್ರೀತಿ ಗೊತ್ತಿಲ್ಲದವರ ಬಳಿ ಪ್ರೀತಿಯ ಬಗ್ಗೆ ಮಾತನಾಡಿದರೆ ಪ್ರಯೋಜನ ಇಲ್ಲ. ಪ್ರೀತಿ ಎಂದರೆ ಮಾರುಕಟ್ಟೆಯ ಸರುಕು ಎಂದುಕೊಂಡವರಿಗೂ ಇದು ಅರ್ಥವಾಗದು.
ಹೀಗಾಗಿ ಎಲ್ಲರಿಗೂ ಪ್ರೀತಿ ಎಂದರೆ ಏನು ಎಂದು ತಿಳಿಸಬೇಕಾಗಿದೆ. ಪ್ರೀತಿಸುವುದನ್ನು ಕಲಿಸಬೇಕಾಗಿದೆ.

6 comments:

VENU VINOD said...

ಎರಡೂ ಭಿನ್ನ ತುದಿಗಳನ್ನೂ ಸಮಾನವಾಗಿ ಇರಿಸಿಕೊಂಡು ವಿಮರ್ಶಿಸಿದ್ದೀರಿ, ಒಳನೋಟ ನೀಡಿದ್ದೀರಿ. ಧನ್ಯವಾದ

chanakya said...

ನೀವೂ ಕೂಡಾ ಎಲ್ಲೋ ಪಿಂಕ್ ಚೆಡ್ಡಿ ಬಗ್ಗೇನೇ ಹೆಚ್ಚು ಬರೆದಿರೋ ಹಾಗಿದೆ..ಅದು ಅಂತಾ ಅಟ್ರಾಕಶನ್ನಾ...?? ಸುಮ್ನೆ ತಮಾಶೆಗೆ ಹೇಳ್ದೆ. ಪ್ರೀತಿಗೆ ಹತ್ತಾರು ಮುಖ ಅಂತಾರೆ ಒಂದು ಮುಖ ಗೊತ್ತಾದ್ರು ಸಾಕು. ಈ ಚೆಡ್ಡಿನೂ ಬಿಚ್ಚಬೇಕಿಲ್ಲ ಅವ್ರು ಖಾದಿನೂ ಕೊಡ್ಸಬೇಕಿಲ್ಲ..ಏನಂತೀರಿ

www.kumararaitha.com said...

ಪ್ರೀತಿಸುವುದನ್ನು ಕಲಿಸಬೇಕಾಗಿದೆ"ಸಮತೋಲಿತ ಮತ್ತು ಸಾಂಧರ್ಭಿಕ ಬರಹ.ನೀವು ಹೇಳಿದಂತೆ ರಾಮನ ವ್ಯಕ್ತಿತ್ವ ಸೀಮಿತ.ಮಾತ್ರವಲ್ಲ ಸಂಕೀರ್ಣ.ಪುರುಷ ಯಜಮಾನಿಕೆಯ ಸಂಕೇತ ಈತ.ಜೊತೆಗೆ ಎಂದು ಸಮಾನತೆಯ ಸಂಕೇತವಾಗಿರಲಿಲ್ಲ.ಆದರೆ ಕೃಷ್ಣನ ಕ್ಯಾನ್ ವಾಸ್ ಸುವಿಶಾಲ.ಪ್ರೇಮದ ಸಂಕೇತ ಈತ.ಜೊತೆಗೆ ಈತ ನಿಗೂಢ.
ಆದ್ದರಿಂದಲೇ ಸಾವಿರಾರು ವರ್ಷಗಳಿಂದ ಈತ ತನ್ನ ಆಕರ್ಷಣೆ ಉಳಿಸಿಕೊಂಡಿದ್ದಾನೆ.ಇನ್ನು ಪ್ರಸ್ತುತ ಕಾಲಮಾನದಲ್ಲಿ ವ್ಯಾಲೆಂಟೆನ್ಸ್ ಡೇ ಆಚರಣೆಗೆ ವಿರೋಧ ವ್ಯಕ್ತವಾಗುವುದೇ ಆಶ್ಚರ್ಯಕರ.ಆದರೆ ಇದರ ಹಿಂದೆ ಭಾರಿ ಲೆಕ್ಕಾಚಾರವಿದೆ.ನನಗನಿಸುವುದು ಈ ಲೆಕ್ಕಾಚಾರ ಹಾಕಿದವರ ಕೈಯಲ್ಲಿ ಮುತಾಲಿಕ್ ದಾಳ ಮಾತ್ರ.

ಪದೇ ಪದೇ ಭಾರತೀಯ ಸಂಸ್ಕೃತಿ ಎನ್ನುವ ರಾಮಸೇನೆಯವರಿಗೆ ಕೆಲವು ಪ್ರಶ್ನೆ.ಶಂಭೂಕ ಎಂಬ ಶೂದ್ರ ತಪಸ್ವಿಯನ್ನು ಕೊಂದಿದ್ದು ಸಂಸ್ಕೃತಿಯೇ?ಅಂದಿನ ಬುಡಕಟ್ಟು ನೀತಿ ಅನುಸರಿಸುತ್ತಿದ್ದ ವಾಲಿಯನ್ನು ಮರೆಯಲ್ಲಿ ನಿಂತು ಕೊಂದಿದ್ದು ಸಂಸ್ಕೃತಿಯೇ?
ಸೀತೆಯನ್ನು ಬೆಂಕಿಗೆ ತಳ್ಳಿದ್ದು,ತುಂಬು ಗರ್ಭಿಣಿಯನ್ನು ಕಾಡಿಗೆಅಟ್ಟಿದ್ದು ಸಂಸ್ಕೃತಿಯೇ?
ಪ್ರಸ್ತುತ ಮಂಗಳೂರಿನಲ್ಲಿ ಯುವತಿಯರನ್ನು ಅಟ್ಟಾಡಿಸಿ ಬಡಿದ ರಾಮಸೇನೆಯ ಕೃತ್ಯ ಯಾವ ಸಂಸ್ಕೃತಿ?
ಪ್ರಜ್ಞಾವಂತರು ಎಚ್ಚತ್ತುಕೊಳ್ಳದಿದ್ದರೆ ಈ ರಾಮಸೇನೆ ಮತ್ತು ಇದರ ಹಿಂದಿರುವವರು ಕರ್ನಾಟಕವನ್ನು ತಾಲಿಬಾನ್ ಮಾಡುತ್ತಾರೆ.
ಇಂಥ ತಾಲಿಬಾನಿಗಳ ವಿರುದ್ದ ಬೌದ್ದಿಕ ಸಮರ ಸಾರಿರುವ ನಿಮ್ಮ ಹಿಂದೆ ಬೆಂಬಲಕ್ಕಾಗಿ ದೊಡ್ಡ ಪಡೆಯೇ ಇದೆ ಎಂಬುದು ನನ್ನ ನಂಬಿಕೆ ಸರ್

http://santasajoy-vasudeva.blogspot.com said...

Nimma maatu nija sir...

http://santasajoy-vasudeva.blogspot.com said...

ಸಾರ್ ನೀವು ಯಾಕೆ ಇತ್ತೀಚೆಗೆ ಬ್ಲಾಗ್ನಲ್ಲಿ ಬರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದೀರಿ?!!!!!

Sahana said...

why no post ?
no subject?
Are you busy ?
lot of work at office and home ?!

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...