ಪ್ರೀತಿಯ ಹೆದ್ದಾರಿಯಲ್ಲಿ ಮೈಲುಗಲ್ಲುಗಳಿಲ್ಲ.
ಅದು ಗುರಿಯಿಲ್ಲದ ಮುಗಿಯದ ದಾರಿ.
ಅಲ್ಲಿ ಸಾಗಲು ಬೇಕಿಲ್ಲ. ಬಸ್ಸು ಕಾರು, ಯಾರದೋ ಕಾರುಬಾರು
ಅಲ್ಲಿ ನಡುಗೆಯೇ ಪ್ರಧಾನ, ಅಲ್ಲಿಲ್ಲ ಹಂಗಿನರಮನೆಯ ವಾರಸುದಾರರು.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?
ಕಾಣುತ್ತಿದೆ, ಹೆದ್ದಾರಿಯಲ್ಲಿ ನೂರೆಂಟು ಹೆಜ್ಜೆ ಗುರುತುಗಳು.
ಅಲ್ಲಲ್ಲಿ, ಅಸ್ಥಿಪಂಜರದ ಗೂಡುಗಳು, ನೆನಪಿನ ಮಾಡುಗಳು,
ಸಮಾಧಿಯ ಮೇಲಿನ ಗುಲಾಬಿ ಹೂವುಗಳು. ಕೇಳುವ ಪಿಸು ಮಾತುಗಳು.
ಸಲೀಮ್ ಅನಾರ್ಕಲಿಯ ದುರಂತ, ರೋಮಿಯೋ ಜ್ಯುಲಿಯೆಟ್ ಳ ಬಿಸಿಯಪ್ಪುಗೆ,
ಎಲ್ಲವೂ ಇಲ್ಲಿವೆ, ಇದು ಮುಗಿಯದ ಅಂಕ.
ಪ್ರೀತಿ ಎಂದರೆ ಹಾಗೆ ತಾನೆ ? ಅದು ಬರೀ ಪ್ರೀತಿ ತಾನೆ ?
ಯಾರು ಏನು ಹೇಳಿದರೇನು ಪ್ರೀತಿಸುವವರಿಗೆ ?
ಅವರಿಗೆ ಅವರದೇ ದಾರಿ. ಅಪ್ಪ ಅಮ್ಮನೇ ಅವರಿಗೆ ವ್ಯಾಪಾರಿ.
ಪ್ರೀತಿಸುವ ಹೃದಯಕ್ಕೆ ಮಾತು ಅರ್ಥವಾಗುವುದಿಲ್ಲ, ತರ್ಕ ಬೇಕಿಲ್ಲ.
ಅದು ಮಾತಿಗೆ, ತರ್ಕಕ್ಕೆ ವಾದಕ್ಕೆ ಸಿಗುವ ವಿಚಾರವೂ ಅಲ್ಲ.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?
ಪ್ರೀತಿಯ ಹೆದ್ದಾರಿಯಲ್ಲಿ ನೂರೆಂಟು ಕೊರಕಲು, ಹಾದಿ ಮಾತ್ರ ಸವಕಲು
ಆದರೂ ಹೆಜ್ಜೆ ಇಡುವುದು ಕಷ್ಟ, ನೋಡಬೇಕಲ್ಲ ಆತ್ಮಬಲದತ್ತ ?
ಸಮುದ್ರ ಸೆಳೆತಕ್ಕೆ ಅದರ ಎಳೆತಕ್ಕೆ ಯಾರಪ್ಪಣೆ ಬೇಕಿಲ್ಲ.
ಹುಣ್ಣಿಮೆಯ ಚಂದಿರನ ನೋಡಿ ಉಬ್ಬುವ ದಬ್ಬುವ ಸಾಗರಕ್ಕೆ
ಪ್ರೀತಿ ಇರಲೇಬೇಕಲ್ಲ ? ಯಾಕೆಂದರೆ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?
ಹರಿವ ನದಿಗೆ, ನೀಲಿ ಅಕಾಶಕ್ಕೆ, ಬೀಸುವ ಗಾಳಿಗೆ
ಹಕ್ಕಿಗಳ ಚಿಲಿಪಿಲಿಗೆ, ಪ್ರಾಣಿಗಳ ನಲಿವಿಗೆ
ಅಬ್ಬರಿಸುವ ಗುಡುಗಿಗೆ,ರೌದ್ರ ಗಂಭೀರದ ಕಾಡಿಗೆ
ಕಿಚ್ಚು ತುಂಬಿದ ಅಗ್ನಿಗೆ, ಕಲಿಸಿದವರು ಯಾರು ?
ಪ್ರೀತಿ ಎಂದರೆ ಹಾಗೆ, ಬರೀ ಪ್ರೀತಿ ತಾನೆ ?
ವಾಲೆಂಟೈನ್ ಗೆ ಮೇಘಧೂತನ ಸಾಂಗತ್ಯ,
ಅವನ ಹಾಡಿಗೆ ಇವನು ಹಾಕುವನ ತಾಳ.
ಅವನು ನಡೆವಾಗ ಇವನು ನೋಡುವನು
ಇವನು ನಡೆವಾಗ ಅವನು ನೋಡುವನು.
ಅವನು ಇವನು ಇಬ್ಬರೂ ನಡೆದವರೇ ಅಲ್ಲವೇ
ಪ್ರೀತಿಯ ಹೆದ್ದಾರಿಯಲ್ಲಿ ? ಹೀಗಾಗಿ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?
ಪ್ರೀತಿ ಹೃದಯದಲ್ಲಿ ಹುಟ್ಟುತ್ತದೆಯಂತೆ. ಮನಸ್ಸಿನಲ್ಲಿ ಬೆಳೆಯುತ್ತದೆಯಂತೆ.
ಕಾಲಿನಲ್ಲಿ ಶಕ್ತಿ ತುಂಬುತ್ತದೆಯಂತೆ, ಯಾರಿಗೆ ಗೊತ್ತು ಪ್ರೀತಿಯ ನೂರೆಂಟು ಪರಿ ?
ದಿನವೂ ಪ್ರೀತಿಸುವವರಿಗೆ ಬೇಕಿಲ್ಲ ಪ್ರೀತಿಗಾಗಿಯೇ ದಿನಚರಿ. ಅವರಿಗೆ ಎಲ್ಲ ದಿನವೂ ಸರಿ.