Friday, December 7, 2012

ಇವರು ನಿಜವಾದ ಜನ ನಾಯಕರೆ ? ಅಥವಾ ಬೇರೆ ಏನೋ ಇದೆಯೆ ?

ಕಮಲ ಈಗ  ದೂರ ದೂರ 

ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಇಡೀ ಬೆಳವಣಿಗೆಗಳ ಕೇಂದ್ರ ಬಿಂದುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡೀಯೂರಪ್ಪನವರು ಕಾಣುತ್ತಾರೆ ಅಥವಾ ಅವರು ಹಾಗೆ ಬಿಂಬಿತರಾಗುತ್ತಿದ್ದಾರೆ. ಇದಕ್ಕೆ ಬಹುಮುಖ್ಯಕಾರಣ ಕಳೆದ ಆರೆಳು ವರ್ಷಗಳ ರಾಜ್ಯ ರಾಜಕಾರಣದಲ್ಲಿ ಅವರು ಒಹಿಸಿದ ಪಾತ್ರ ಎಂಬುದು ನಿಜ. ಬಿಜೆಪಿ ,ಮತ್ತು ಜೆಡಿಎಸ್ ಸರ್ಕಾರ ಪತನಗೊಂಡ ಮೇಲೆ ಅವರು ಒಬ್ಬ ಷಡ್ಯಂತ್ರಕ್ಕೆ ಬಲಿಯಾದ ರಾಜಕಾರಣಿಯಾಗಿ ಕಾಣಿಸಿಕೊಂಡರು.. ಜೊತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ತಮ್ಮ ರಾಜಕೀಯ ಅಪಕ್ವತೆಯಿಂದಾಗಿ ದುರಂತ ನಾಯಕನೊಬ್ಬನನ್ನು ಸೃಷ್ಟಿಸಿ ಬಿಟ್ಟರು. ನಮ್ಮಲ್ಲಿ ಸಾಧಾರಣವಾಗಿ ದುರಂತ ನಾಯಕರಿಗೆ ಜನ ಮನ್ನಣೆ ಹೆಚ್ಚು. ಕಥೆಯ ನಾಯಕರಿಗಿಂತ ದುರಂತ ನಾಯಕರನ್ನು ಮೆಚ್ಚುವ ಆರಾಧಿಸುವ ಮನಸ್ಥಿತಿ ನಮ್ಮದು.
ನೀವು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದವರಾಗಿದ್ದರೆ, ಗಧಾಯುದ್ಧ ಯಕ್ಷಗಾನ ಪ್ರಸಂಗವನ್ನು ನೋಡಿಯೇ ನೋಡಿರುತ್ತೀರಿ. ಈ ಪ್ರಸಂಗದಲ್ಲಿ ಎಲ್ಲವನ್ನು ಕಳೆದುಕೊಂಡ ದುರ್ಯೋಧನ ಕುರುಕ್ಷೇತ್ರ ಎಂಬ ಯುದ್ಧಭೂಮಿಯಲ್ಲಿ ಒಬ್ಬನೇ ಬರುತ್ತಿರುತ್ತಾನೆ. ಆಗ ಬರುವ ಹಾಡು ಹೀಗಿದೆ.
ಕುರುರಾಯನಿದನೆಲ್ಲ ಕಂಡು ಸಂತಾಪದಲಿ
ತನ್ನೆಲ ಭಾಗ್ಯವೆನುತ...
ಹೆಣದ ಪರ್ವತವನೇರಿಳುದು...
ಬೆಳಗಿನ ಜಾವ ಈ ಪದವನ್ನು ಭಾಗವತರು ಹೇಳುತ್ತಿದ್ದಂತೆ ಮಲಗಿದವರೆಲ್ಲೆ ಎದ್ದು ಕುಳಿತು ಬಿಡುತ್ತಾರೆ. ಹಾಗೆ ಕುರುರಾಯನ ದುರಂತ ಎಲ್ಲರ ಎದೆಯನ್ನು ತಟ್ಟಿ ಅಲ್ಲಿಯೇ ಉಳಿದುಬಿಡುತ್ತದೆ. ಕೊನೆಗೆ ಆಟ ಮುಗಿಸಿ ಮನೆಗೆ ಹೋಗುವವರು ಕುರುರಾಯನ ಪಾತ್ರದ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತೂ ಭೀಮನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ಪ್ರಸಂಗದಲ್ಲಿ ನಾಯಕನೆಂದರೆ ಕುರುರಾಯನೇ..ಆತ ಎನೇ ತಪ್ಪು ಮಾಡಿದರೂ ಕೊನೆಗೆ ಏನೇ ಇರಲಿ  ಕೌರವ ಮಾಡಿದ್ದರಲ್ಲಿ ತಪ್ಪೇನು ಇಲ್ಲ ಎಂದು ಜನ ಮಾತನಾಡುತ್ತ ಮನೆ ಸೇರುತ್ತಾರೆ.
ದುರಂತ ನಾಯಕರಿಗೆ ಇರುವ ಗೌರವ ಅಂತಹುದು. ಯಾವತ್ತೂ ದುರಂತ ನಮ್ಮ ಎದೆಯ ಬಾಗಿಲನ್ನು ಬಡಿದ ಕಂಪನವನ್ನು ಉಂಟು ಮಾಡುತ್ತದೆ. ಅವರು ಮಾಡಿದ ತಪ್ಪುಗಳನ್ನೆಲ್ಲ ಮರೆಯುವಂತೆ ಮಾಡುತ್ತದೆ. ಜೆಡಿಎಸ್ ಪಕ್ಷದ ನಾಯಕರ ತಪ್ಪಿನಿಂದ ಯಡಿಯೂರಪ್ಪ ದುರಂತ ನಾಯಕರಾಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದು ಬಿಟ್ಟರು. ಆಗ ಅವರು ಸೇರಿದ ಪ್ರಬಲ ಲಿಂಗಾಯಿತ ಜಾತಿಯವರು ಮಾತ್ರವಲ್ಲ, ಇಡೀ ಕರ್ನಾಟಕದ ಜನ ಯಡಿಯೂರಪ್ಪನವರ ಬಗ್ಗೆ ಮರುಕಪಟ್ಟರು. ಅವರಿಗೆ ಹೀಗೆ ಮೋಸವಾಗಬಾರದಿತ್ತು ಎಂದರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯ ಹತ್ತಿರ ತಂದು ಬಿಟ್ಟರು. ೧೧೦ ಸ್ಥಾನಗಳನ್ನು ಪಡೆದ ಬಿಜೆಪಿ ಸದನದ ಬಹುಮತಪಡೆಯಲು ಕೇವಲ ಎರಡು ಸ್ಥಾನಗಳು ಮಾತ್ರ ಕಡಿಮೆಯಾಗಿತ್ತು.
ಇದಾದ ಮೇಲೆ ಯಡಿಯೂರಪ್ಪನವರ ದುರಂತ ನಾಯಕನ ಸ್ಥಾನ ಹೊರಟು ಹೋಯಿತು. ಅವರು ದುರಂತ ನಾಯಕನ ಸ್ಥಾನದಿಂದ ರಾಜ್ಯದ ನಾಯಕನ ಸ್ಥಾನವನ್ನು ಏರಿ ಕುಳಿತರು. ಆಗಲೇ ಯಡಿಯೂರಪ್ಪ ಬದಲಾಗತೊಡಗಿದರು. ಜನ ಬೆಂಬಲ ಅವರನ್ನು ಒಬ್ಬ ಸರ್ವಾಧಿಕಾರಿ ರಾಜಕಾರಣಿಯನ್ನಾಗಿ ಬದಲಿಸಿಬಿಟ್ಟಿತ್ತು. ಅವರು ಆಪರೇಷನ್ ಕಮಲದ ಮೂಲಕ ಕಂಡ ಕಂಡವರನ್ನು ಅವಕಾಶವಾದಿಗಳನ್ನು, ಅಧಿಕಾರದಾಹಿಗಳನ್ನು ತಂದು ತಮ್ಮ ಪಕ್ಕದಲ್ಲಿ ಕೂಡ್ರಿಸಿಕೊಂಡರು. ಬಿಜೆಪಿಯ ತತ್ವ ಸಿದ್ಧಾಂತಗಳ ಅರಿವಿಲ್ಲದ ಅಧಿಕಾರ ರಾಜಕಾರಣವನ್ನೇ ನಂಬಿರುವ ತುಂಡು ದೋರೆಗಳಿಂದ ಅವರು ಬಹುಪರಾಕ್ ಹೇಳಿಸಿಕೊಳ್ಳತೊಡಗಿದರು.
ಯಡಿಯೂರಪ್ಪ ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಳ್ಳತೊಡಗಿದರು. ಒಬ್ಬ ರಾಜನೀತಿಜ್ನನಿಗೂ ಮೂರನೆಯ ದರ್ಜೆ ರಾಜಕಾರಣಿಗೂ ಇರುವ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಈ ನಾಡಿನ ರೈತರ ಪರವಾಗಿ ಹೋರಾಡಿ ಬೆಳೆದ ನಾಯಕ ರೈತರ ಮೂಲಭೂತ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಒದಗಿಸುವ ಯತ್ನ ಮಾಡಲಿಲ್ಲ. ರೈತರ ಬೆಳೆಗಳಿಗೆ ವೈಜ್ನಾನಿಕ ಬೆಲೆ ದೊರಕಿಸುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಉತ್ಪನ್ನಗಳನ್ನು ಮೌಲ್ಯ ವರ್ಧಿತ ವಸ್ತುವನ್ನಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಿಲ್ಲ. ಕೃಷಿ ಮಧ್ಯವರ್ತಿಗಳನ್ನು ನಿಯಂತ್ರಿಸಲು ಅವರು ಯೋಚಿಸಲಿಲ್ಲ. ಬದಲಾಗಿ ಶಾಲಾ ಮಕ್ಕಳಿಗೆ ಸೈಕಲ್ ನೀಡುವಲ್ಲಿ ಸಂತೋಷ ಪಡತೊಡಗಿದರು. ಕೃಷಿ ಸಾಲ ಮನ್ನಾ ಮಾಡಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಬೀಗತೊಡಗಿದರು. ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿ ದಾಖಲೆ ಮಾಡುತ್ತೇನೆ ಎಂದು ಗುಡುಗತೊಡಗಿದರು.
ಈ ನಡುವೆ ರೆಡ್ದಿ ಸಹೋದರರು ಮಾಡಿದ ಬಂಡಾಯದಿಂದ ಕೆರಳಿದ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹಪಹಪಿಸತೊಡಗಿದರು. ಶೋಭಾ ಕರಂದ್ಲಾಜೆ ವಿರುದ್ಧ ಕೂಗು ಎದ್ದಾಗ ಬಹಿರಂಗವಾಗಿ ಕಣ್ಣೀರು ಹಾಕಿ ಸಾಮಾಜಿಕ ಬದುಕಿಗಿಂತ ತಮಗೆ ವೈಯಕ್ತಿಕ ಬದುಕು ಮತ್ತು ಸಂಬಂಧ ಮುಖ್ಯ ಎಂಬ ಸಂದೇಶವನ್ನು ಸಾರಿ ಬಿಟ್ಟರು. ಈ ಮೂಲಕ ಜನರ ನಡುವಿನಿಂದ ಎದ್ದು ಬಂದ ನಾಯಕ ಎಂದು ನಂಬಿದವರಿಗೆ ತಾವು ಎದ್ದು ಬಂದಿದ್ದು ಎಲ್ಲಿಂದ ಮತ್ತು ಈಗ ಇರುವುದು ಎಲ್ಲಿ ಎಂಬುದನ್ನು ನಿರೂಪಿಸಿ ಬಿಟ್ಟರು.
ಭ್ರಷ್ಠಾಚಾರದ ಪ್ರಕರಣಗಳಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಮೇಲೂ ಇದು ತಮ್ಮ ವಿರುದ್ಧದ ಪಿತೂರಿ ಎಂದು ಕರ್ನಾಟಕದ ಜನರನ್ನು ನಂಬಿಸುವ ಯತ್ನ ಮಾಡಿದರು. ಅದರೆ ಅವರು ಅರ್ಥ ಮಾಡಿಕೊಳ್ಳದ ವಿಚಾರ ಎಂದರೆ ರಾಜಕಾರಣದಲ್ಲಿ ಪಿತೂರಿ ಎಂಬುದು ಆ ಅಟದ ಒಂದು ನಿಯಮ ಎಂಬುದನ್ನು. ಯಾಕೆಂದರೆ ಒಂದು ಪಕ್ಷದಲ್ಲಿ ಇರುವ ಹಲವಾರು ನಾಯಕರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾರೆ. ಅವರು ಷಡ್ಯಂತ್ರಗಳನ್ನು ನಡೆಸುತ್ತಲೇ ಇರುತ್ತಾರೆ. ಜೊತೆಗೆ ಕರ್ನಾಟಕದಲ್ಲಿ ಷ್ಯಡಂತ್ರ ನಡೆದಿರುವುದು ಯಡೀಯೂರಪ್ಪ ಅವರ ಮೇಲೆ ಮಾತ್ರ ಅಲ್ಲ. ಮುಖ್ಯಮಂತ್ರಿಗಳಾದ ಎಲ್ಲ ನಾಯಕರೂ ಷಡ್ಯಂತ್ರಗಳನ್ನು ಎದುರಿಸಿದ್ದಾರೆ. ಆದರೆ ಅವರಲ್ಲಿ ಯಾರೂ ಈ ರೀತಿ ಬೀದಿ ರಂಪ ಮಾಡಲಿಲ್ಲ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ, ವೀರೇಂದ್ರ ಪಾಟೀಲ್ ಎಲ್ಲರೂ ರಾಜಕೀಯ ಪಿತೂರಿಗಳಿಗೆ ಬಲಿಯಾದವರೇ. ಇವರಲ್ಲಿ ಎಲ್ಲರಿಗೂ ಮುಖ್ಯಮಂತ್ರಿ ಗಾದಿ ಮುಳ್ಳಿನ ಹಾಸಿಗೆಯೇ ಆಗಿತ್ತು. ಆದರೆ ಈ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಸಿಗದ ಅನುಕಂಪ ಯಡಿಯೂರಪ್ಪನವರಿಗೆ ಸಿಗುತ್ತಿದೆಯೆ ? ಈ ಎಲ್ಲ ಮಾಜಿ ಮುಖ್ಯಮಂತ್ರಿಗಳು ಮಾಡದ ಮಹಾನ್ ಸಾಧನೆಯನ್ನು ಯಡೀಯೂರಪ್ಪ ಮಾಡಿದ್ದಾರೆಯೆ ? ಕರ್ನಾನಟಕವನ್ನು ರಾಮ ರಾಜ್ಯವನ್ನಾಗಿ ಅವರು ಮಾಡಲು ಹೊರಟಿದ್ದರೆ ?
ಈಗ ಹಾಗೆ ಬಿಂಬಿಸುವ ಯತ್ನವಂತೂ ನಡೆಯುತ್ತಿದೆ. ಕನ್ನಡ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದೇ ಮಾತನ್ನು ಬಹಳಷ್ಟು ಜನ ಹೇಳುತ್ತಾರೆ.
ಹಾಗಾದರೆ ಯಡಿಯೂರಪ್ಪ ಎಂತಹ ನಾಯಕ ಎಂದು ಅರ್ಥ ಮಾಡಿಕೊಳ್ಳಲು ನಾವೆಲ್ಲ ವಿಫಲರಾಗಿದ್ದೇವೆಯೆ ? ನನಗೆ ಗೊತ್ತಿಲ್ಲ. ಯಡೀಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವವು ಎಂದು ಪಟ್ಟಿ ಮಾಡಲು ಹೊರಟರೆ ಹೆಸರಿಸಬಹುದಾದ ಯಾವ ಕಾರ್ಯಕ್ರಮವೂ ಕಾಣುವುದಿಲ್ಲ. ಜೊತೆಗೆ ಭ್ರಷ್ಟಾಚಾರ ಅವರ ಆಡಳಿತಾವಧಿಯಲ್ಲಿ ಯಾವ ರೀತಿಯಲ್ಲಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಯಾದವರು ತಮ್ಮ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಚೆಕ್ ಮೂಲಕ ಕಮೀಷನ್ ಕೊಡಿಸಿದರು ಎಂದು ಆಪಾದಿಸಲಾದ ಪ್ರಕರಣ ನಡೆದಿದೆ. ಅಂದರೆ ಭ್ರಷ್ಟಾಚಾರ ಮತ್ತು ಕಮೀಷನ್ ವ್ಯವಹಾರವನ್ನು ಸರಿಯಾಗಿ ಮಾಡಲಾಗದ ಕಾಲ..
ಹಾಗಿದ್ದರೆ ಯಡಿಯೂರಪ್ಪನವರಿಗೆ ಈ ರೀತಿಯ ಬೆಂಬಲ ಸಿಗುತ್ತಿರುವುದಕ್ಕೆ ಕಾರಣವಾದರೂ ಏನು ? ಅವರು ತಮ್ಮ ಕಾಲದಲ್ಲಿ ಮಾಡಿದ ಅಭಿವೃದ್ಧಿ ಜನ ಬೆಂಬಲಕ್ಕೆ ಕಾರಣವಲ್ಲದಿದ್ದರೆ ಬೇರೆ ಯಾವುದೋ ಕಾರಣವಿರಬೇಕು . ಅದು ಯಾವುದು ?
ಒಂದೊಮ್ಮೆ ಈಗ ಬಿಂಬಿಸಲಾಗುತ್ತಿರುವ ರೀತಿಯಲ ಜನ ಬೆಂಬಲ ಅವರಿಗಿಲ್ಲ ಎಂದಾದರೆ ಹೀಗೆ ಅವರನ್ನು ಬಿಂಬಿಸುತ್ತಿರುವವರೂ ಸಹ ಒಟ್ಟಾರೆ ನಾಟಕದ ಪ್ರಮುಖ ಪಾತ್ರಧಾರಿಗಳು ಎಂದೇ ಅರ್ಥ. ಜೊತೆಗೆ ಹೀಗೆ ಯಡಿಯೂರಪ್ಪ ಕರ್ನಾಟಕ ಕಂಡರಿಯದ ಮಹಾನ್ ನಾಯಕ ಎಂದು ಬಿಂಬಿಸುತ್ತಿರುವುದರ ಹಿಂದಿನ ಸತ್ಯ ಯಾವುದು ?
ಬಹಳಷ್ಟು ಜನ ಖಾಸಗಿಯಾಗಿ ಮಾತನಾಡುವಾಗ ಯಡಿಯೂರಪ್ಪ ಅವರು ಸೇರಿದ ಲಿಂಗಾಯಿತ ಜಾತಿಯ ಮಾತನಾಡುತ್ತಾರೆ. ಲಿಂಗಾಯತರು ಸಂಫೂರ್ಣವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತು ಬಿಡುತ್ತಾರೆ ಎಂದು ಹೇಳುತ್ತಾರೆ. ಯಡಿಯೂರಪ್ಪ ಲಿಂಗಾಯಿತರಿರಬಹುದು. ಲಿಂಗಾಯಿತ ಧರ್ಮದ ಕೆಲವು ಮಠಾಧಿಪತಿಗಳು ಅವರ ಬೆಂಬಲಲ್ಲೆ ಇರಬಹುದು. ಆದರೆ ಲಿಂಗಾಯತ ಧರ್ಮವೇ ನ್ಯಾಯ ಪಕ್ಷಪಾತಿಯಾದುದು. ಸಾಮಾಜಿಕ ನ್ಯಾಯವನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದವನು ಬಸವಣ್ಣ. ಜೊತೆಗೆ ಲಿಂಗಾಯಿತರು ಜಾತಿವಾದಿಗಳಾಗಿದ್ದರೆ ರಾಮಕೃಷ್ಣ ಹೆಗಡೆ ಎಂಬ ಬ್ರಾಹ್ಮಣನಿಗೆ ಬೆಂಬಲ ನೀಡುತ್ತಿರಲಿಲ್ಲ.
ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತ ಮುಕ್ಕಾಲು ಪಾಲು ನಾಯಕರು ಲಿಂಗಾಯಿತರು ಎಂಬುದು ನಿಜ. ಆದರೆ ಆ ಮಾತ್ರಕ್ಕೆ ಲಿಂಗಾಯಿತ ಜನ ಸಮುದಾಯವೇ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದೆ ಎಂದು ಹೇಳುವುದು ಸರಿಯಲ್ಲ.
ನಾವೆಲ್ಲ ಮಾಡುವ ತಪ್ಪೆಂದರೆ ಯಡಿಯೂರಪ್ಪ ಅವರ ಪಕ್ಕದಲ್ಲಿರುವ ರೇಣುಕಾಚಾರ್ಯ ಮತ್ತು ಹರೀಶ್ ಅಂತವರನ್ನು ಅವರ ಸಮುದಾಯದ ಜಹಗೀರು ಪಡೆದವರು ಎಂದು ಭಾವಿಸಿಬಿಡುವುದು. ಅದರಂತೆ ಪ್ರಚಾರ ಮಾಡುತ್ತ ಸಾಗುವುದು.
ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಬೆಳಗಿನ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲು ಸುಮಾರು ೧೦ ಸಚಿವರು ೩೦ ಶಾಸಕರು ಪಾಲ್ಗೊಂಡಿದ್ದರು. ಇದಾದ ನಂತರ ನನ್ನ ಬೆಂಬಲವನ್ನು ತೋರಿಸಲು ಇಲ್ಲಿಗೆ ಬಂದಿದ್ದೆ ಎಂದು ಅವರು ರಾಜಕೀಯ ಮೈಲೇಜ್ ಪಡೆಯಲು ಯತ್ನ ನಡೆಸಿದರು.. ಆದರೆ ಇಂತಹ ಚಹಾಕೂಟಗಳು ಮತ್ತು ಪಾನಗೋಷ್ಠಿಯಲ್ಲಿ ಪಾಲ್ಗೊಂಡವರು ಕೊನೆಯ ವರೆಗೆ ಅವರ ಜೊತೆಗೆ ಇರುತ್ತಾರೆಯೆ ಎಂಬುದು ಪ್ರಶ್ನೆ. ಒಂದೊಮ್ಮೆ ಇದ್ದರೂ ಸಚಿವರು ಶಾಸಕರು ಜೊತೆಗಿದ್ದರೆ ಜನ ಕೂಡ ಅವರ ಜೊತೆಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೀಗಿದ್ದರೂ ಮಾಧ್ಯಮವಂತೂ ಯಡಿಯೂರಪ್ಪನವರ ಪರವಾಗಿ ನಿಂತಿದೆ ಎಂದು ಹೇಳುವುದು ಕಷ್ಟವಾದರೂ ಯಡಿಯೂರಪ್ಪನವರಿಗೆ ಮಾಧ್ಯಮದಲ್ಲಿ ಭಾರಿ ಪ್ರಚಾರ ದೊರಕುತ್ತಿರುವುದಂತೂ ನಿಜ. ಯಡಿಯೂರಪ್ಪನವರನ್ನು ಸೌಜನ್ಯಕ್ಕಾಗಿ ಭೇಟಿ ಮಾಡಿದವರೂ ಅವರ ಬೆಂಬಲಿಗರಾಗಿ ಬಿಂಬಿತರಾಗುತ್ತಿದ್ದಾರೆ.
ಯಾರು ಅರಿಯಲು ನಿಮ್ಮ ಭುಜ ಬಲದ ಪರಾಕ್ರಮ ? 
ಇಷ್ಟೆಲ್ಲ ಹೇಳಿದ ಮೇಲೂ ಯಡಿಯೂರಪ್ಪನವರು ನಿಜವಾಗಿ ಅಭಿವೃದ್ಧಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆಯೇ ಎಂಬ ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ನನ್ನ ಪ್ರಕಾರ ಯಡೀಯೂರಪ್ಪ ಯಾವುದೇ ಕನಸುಗಳಿಲ್ಲದ, ಕರ್ನಾಟಕವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ನಾಯಕ. ಅವರ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿರುವವರು ಅವಕಾಶವಾದಿಗಳು, ಭ್ರಷ್ಟರು ಮತ್ತು ಲಂಪಟರು. ಇಂತವರನ್ನೇ ಕರ್ನಾಟಕದ ಜನ ಬಯಸುತ್ತಾರೆ ಎಂದಾದರೆ, ನಾವು ರಾಜಕಾರಣವನ್ನು ಬದುಕಿನ ಮೌಲ್ಯ ಪ್ರತಿಪಾದನೆಯನ್ನು ಪುನರ್ ವ್ಯಾಖ್ಯೆಗೆ ಒಳಪಡಿಸಬೇಕಾಗುತ್ತದೆ. ಮತ್ತು ರಾಜಕಾರಣದ ಉದ್ದೇಶ ಏನು ಎಂಬುದನ್ನು ಮತ್ತೆ ಮತ್ತೆ ಪ್ರಶ್ನಿಸಬೇಕಾಗುತ್ತದೆ.
ಕೊನೆಯ ಮಾತು;
ದೇವರಾಜ ಅರಸು ಅವರು ಅಧಿಕಾರ ಕಳೆದುಕೊಳ್ಳುವ ಹಿಂದಿನ ದಿನ ಅವರ ಜೊತೆ ಇದ್ದು ಬೆಂಬಲ ವ್ಯಕ್ತಪಡಿಸಿದವರಲ್ಲಿ ಕೆ. ಎಚ್. ಶ್ರೀನಿವಾಸ್ ಕೂಡ ಒಬ್ಬರು. ಮರುದಿನ ಮಾತ್ರ ಅವರು ಅರಸು ಅವರಿಗೆ ಕೈಕೊಟ್ಟು ವಿರೋಧಿ ಪಾಳೆಯದಲ್ಲಿ ಕಾಣಿಸಿಕೊಂಡಿದ್ದರು. ಈಗ ಕಳೆದ ಕೆಲವು ದಿನಗಳಿಂದ ಅವರು ಯಡಿಯೂರಪ್ಪನವರ ಪಕ್ಕ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ರಾಜಕೀಯವಾಗಿ ಮೂಲೆ ಗುಂಪಾಗಿದ್ದ ಶ್ರೀನಿವಾಸರನ್ನು ಅದೇ ಈಶ್ವರಪ್ಪನವರ ವಿರುದ್ಧ ಯಡೀಯೂರಪ್ಪ ನಿಲ್ಲಿಸಬಹುದೆ ?

1 comment:

ಗುಡಸಿ ದುನಿಯಾ said...

ಜನನಾಯಕ ಯಾವತ್ತೂ ಅಧಿಕಾರ ಹೋಯ್ತು ಅಂತ ಬೀದಿಲಿ ನಿಂತು ಅಳೋಲ್ಲ.... ಯಡಿಯೂರಪ್ಪ ಒಬ್ಬ ಅಧಿಕಾರದಾಹಿ... ಅಧಿಕಾರಕ್ಕಾಗಿ ಜಾತಿಯನ್ನ ಮುಂದೆ ಬಿಟ್ಟಿದ್ದು ಗೊತ್ತಿಲ್ಲವೇ...?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...