ಮೌನದ ಮೂಲಕವೇ ಎಚ್ಚರಿಸುವ ಮಹಾದೇವ.. |
ಜಾತ್ರೆಗೆ ತನ್ನದೇ ಆದ ಗುಣಧರ್ಮವಿದೆ. ಅದು ಎಲ್ಲರು ಸಂಭ್ರಮಿಸುವ ಸಂದರ್ಭ. ಜಾತ್ರೆಯ ಮೂಲ ಉದ್ದೇಶ ದೇವರ ರಥೋತ್ವವವೋ ಮೆರವಣಿಗೆಯೋ ಆದರೂ ಜಾತ್ರೆಯಲ್ಲಿ ದೇವರು ಕೇವಲ ನಿಮಿತ್ತ ಮಾತ್ರ. ಅಲ್ಲಿ ಸಿಗುವ ಬೆಂಡು ಬತ್ತಾಸು, ಮಕ್ಕಳಿಗಾಗಿ ಇರುವ ಆಟದ ಸಾಮಗ್ರಿಗಳು, ತೆರೆದಿರುವ ಅಂಗಡಿಗಳು, ಇದನ್ನೆಲ್ಲ ಸಂಭ್ರಮಿಸುವ ಅಪಾರ ಜನಸ್ತೋಮವೇ ಮುಖ್ಯ, ಜಾತ್ರೆಗೆ ಬರುವ ಬಹಳಷ್ಟು ಜನರಿಗೆ ದೇವ ಕಾರ್ಯದಲ್ಲಿ ಪಾಲ್ಗೊಳ್ಳುವುದು ಅಷ್ಟು ಮುಖ್ಯವಾಗಿರುವುದಿಲ್ಲ.
ದೇವನೂರು |
ಡಾ.ಸಿದ್ದಲಿಂಗಯ್ಯ |
ಮಹಾದೇವ ಅವರು ಅಧ್ಯಕ್ಷರಾಗಲು ನಿರಾಕರಿಸಿದ ಮೇಲೆ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಡಾ. ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಿತು. ಸಿದ್ದಲಿಂಗಯ್ಯ ಪ್ರೀತಿಯಿಂದ ಈ ಆಹ್ವಾನವನ್ನು ಒಪ್ಪಿಕೊಂಡರು. ನಂತರ ಮಾಧ್ಯಮಗಳಲ್ಲಿ ಸಿದ್ದಲಿಂಗಯ್ಯನವರ ಸಂದರ್ಶನ ಕೂಡ ಪ್ರಸಾರವಾಯಿತು. ಇಂತಹ ಒಂದು ಸಂದರ್ಶನದಲ್ಲಿ ತಾವು ವ್ಯವಸ್ಥೆಯ ಒಳಗೆ ಇದ್ದು ಬದಲಾವಣೆಗೆ ಯತ್ನ ನಡೆಸುವವರು ಎಂದು ಸಿದ್ದಲಿಂಗಯ್ಯ ಹೇಳಿದರು.
ವ್ಯವಸ್ಥೆಯ ಭಾಗವಾಗಿ ಬದಲಾವಣೆಗೆ ಕೆಲಸ ಮಾಡುವುದು ಒಂದು ರೀತಿಯಾದರೆ ವ್ಯವಸ್ಥೆಯ ಪಾಲುದಾರರಾಗದೇ ಹೊರಗಿನಿಂದ ಹೋರಾಟ ಮಾಡುವುದು ಇನ್ನೊಂದು ರೀತಿ. ಆದರೆ ಇಲ್ಲಿ ಇನ್ನೊಂದು ತಾತ್ವಿಕ ಸಮಸ್ಯೆ ಇದೆ. ವ್ಯವಸ್ಥೆಯ ಭಾಗವಾಗಿ ಹೋರಾಟ ಮಾಡುವುದು ಹೇಗೆ ? ಈಗಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಬದಲಾಗಬೇಕು ಎಂದಾದರೆ, ಆ ವ್ಯವಸ್ಥೆಯ ಪಾಲುದಾರನಾದವನು ವ್ಯವಸ್ಥೆಯ ಲಾಭವನ್ನು ಪಡೆದಿರುತ್ತಾನೆ. ಉದಾಹರಣೆಗೆ ಈಗಿನ ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರಿಗೆ ಈ ವ್ಯವಸ್ಥೆ ಎಲ್ಲವನ್ನೂ ನೀಡಿದೆ. ಅವರು ಒಂದಕ್ಕಿಂತ ಹೆಚ್ಚು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಶರಾಗಿ ಕೆಲಸ ಮಾಡಿದ್ದಾರೆ. ಸುಮಾರು ಒಂದು ದಶಕಕ್ಕಿಂತ ಹೆಚ್ಚು ಕಾಲ ಈ ವ್ಯವಸ್ಥೆ ಅವರನ್ನು ಪೋಷಿಸಿದೆ. ಆ ಸಂದರ್ಭದಲ್ಲಿ ಅವರು ಒಳಗಿದ್ದೇ ಯಾವ ಹೋರಾಟ ಮಾಡಿದರು ? ವ್ಯವಸ್ಥೆಯ ಬದಲಾವಣೆಗೆ ಅವರ ಕಾಣ್ಕೆ ಏನು ? ಈ ಪ್ರಶ್ನೆಗಳನ್ನು ನಾವು ಕೇಳಲೇ ಬೇಕಾಗಿದೆ. ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಎಂದು ಹೋರಾಟದ ಕೆಚ್ಚನ್ನು ಮೂಡಿಸಿದವರು ಇಂದಿನ ದಿನ ಏನನ್ನು ಹೇಳುತ್ತಾರೆ ?
ಇನ್ನೊಂದು ಸಂದರ್ಶನದಲ್ಲಿ ಇಂದು ಯಾವುದೇ ಹೋರಾಟಗಳಿಲ್ಲ ಆದರೂ ಹೊಸ ಕನಸುಗಳು ಮೂಡುತ್ತಿವೆ ಎಂಬ ಅರ್ಥದ ಮಾತುಗಳನ್ನು ಸಿದ್ದಲಿಂಗಯ್ಯ ಆಡಿದ್ದಾರೆ. ಹೊಸ ಕನಸುಗಳು ಮೂಡಿದ್ದು ಯಾರಿಗೆ ? ಚಳವಳಿಗಳು ಯಾವಾಗಲೂ ನಿರಂತರತೆಯನ್ನು ಕಾಪಾಡಿಕೊಂಡು ಬರುವುದಿಲ್ಲ. ಒಂದು ಐತಿಹಾಸಿಕ ಸಂದರ್ಭದಲ್ಲಿ ಹುಟ್ಟುವ ಚಳವಳಿ ಇನ್ನೊಂದು ಘಟ್ಟದಲ್ಲಿ ಸಾವನ್ನು ಅಪ್ಪಬಹುದು. ಆದರೆ ಆ ಚಳವಳಿ ತನ್ನ ಉದ್ದೇಶಗಳನ್ನು ಈಡೇರಿಸಿ ಅಸು ನೀಗಿತೆ ಅಥವಾ ಚಳವಳಿಗೆ ಇರಬೇಕಾದ ಸೈದ್ಧಾಂತಿಕ ನಿಖರತೆ ಇಲ್ಲದೇ ಅದರ ನಾಯಕತ್ವದಿಂದ ನಾಶವಾಗಿ ಚಳವಳಿ ಸಾವನ್ನಪ್ಪಿತೆ ಎಂಬುದು ಬಹಳ ಮುಖ್ಯ. ನನಗೆ ಅನ್ನಿಸುವ ಹಾಗೆ ಚಳವಳಿಯ ನಾಯಕರಾದವರು ಈ ವ್ಯವಸ್ಥೆಯ ಭಾಗವಾಗಿ ಸ್ವಾರ್ಥಿಗಳಾದದ್ದು ಚಳವಳಿ ನಾಶವಾಗಲು ಕಾರಣ ಎಂದು ಅನ್ನಿಸುತ್ತದೆ.
೮೦ ರ ದಶಕದಲ್ಲಿ ಕರ್ನಾಟಕದ ಮೂರು ಜನಪರ ಚಳವಳಿಗಳಾದ ದಲಿತ ಚಳವಳಿ, ರೈತ ಚಳವಳಿ ಮತ್ತು ಕನ್ನಡ ಚಳವಳಿಯ ನಾಯಕರುಗಳು ಸ್ವಾರ್ಥಿಗಳು ಮತ್ತು ಭ್ರಷ್ಟರೂ ಆದರು. ಅವರು ಈ ವ್ಯವಸ್ಥೆಯಿಂದ ವೈಯಕ್ತಿಕ ಲಾಭ ಪಡೆದು ಸುಮ್ಮನಾದರು. ಇದರಿಂದ ಚಳವಳಿ ತನ್ನ ಶಕ್ತಿಯನ್ನು ಕಳೆದುಕೊಂಡಿತು. ವ್ಯಕ್ತಿಗತ ಲಾಭ ಸಾಮುದಾಯಿಕ ಆಸೆ ಆಕಾಂಕ್ಶೆಗಳನ್ನು ಕೊಂದು ಹಾಕಿತು. ಇದನ್ನೆಲ್ಲ ಗಮನಿಸಿದರೆ ಯಾವುದೇ ಹೋರಾಟ ಒಂದು ವ್ಯವಸ್ಥೆಯ ಆತ್ಮವಾಗಿರಬೇಕು. ಅದು ಎಚ್ಚರಿಸುವ ಕೆಲಸವನ್ನು ಮಾಡುತ್ತಿರಬೇಕು. ಆದರೆ ಹೋರಾಟ ನಡೆಸಬೇಕಾದವರು ವ್ಯವಸ್ಥೆಯ ಭಾಗವಾದ ತಕ್ಷಣ ಆತ್ಮಾಹುತಿ ನಡೆದು ಹೋಗುತ್ತದೆ.
ವ್ಯವಸ್ಥೆಯ ಭಾಗವಾಗಿಯೇ ಹೋರಾಟ ಮಾಡಲು ಹೊರಟಿರುವ ಸಿದ್ದಲಿಂಗಯ್ಯ ಅವರಿಗಿಂತ ದೇವನೂರು ಮಹಾದೇವ ಅವರು ನಮಗೆ ಮುಖ್ಯವಾಗುವುದು ಈ ಕಾರಣಕ್ಕಾಗಿ. ಅವರೆಂದೂ ವ್ಯವಸ್ಥೆಯ ಭಾಗವಾಗಿ ಹೋರಾಟ ಮಾಡಲು ಹೊರಟವರಲ್ಲ. ವ್ಯವಸ್ಥೆಯ ಭಾಗವಾದ ತಕ್ಷಣ ನಮ್ಮೊಳಗಿನ ಹೋರಾಟಗಾರ ಸಾಯುತ್ತಾನೆ. ಆತ್ಮಾಹುತಿಯಾಗುತ್ತದೆ.
ದೇವನೂರು ಸಂತ ಎನ್ನಿಸುವುದು ಇದೇ ಕಾರಣಕ್ಕೆ. ಅವರು ವ್ಯವಸ್ಥೆಯ ಹೊರಗೆ ನಿಂತುಕೊಂಡು ಬದಲಾವಣೆಯ ಕನಸು ಕಾಣಬಲ್ಲವರು. ಈ ಕಾರಣಕ್ಕಾಗಿ ಅವರಲ್ಲಿ ಸ್ವಾರ್ಥ ಇಲ್ಲ. ಅಧಿಕಾರ, ಹಣ ಅವರನ್ನು ಬದಲು ಮಾಡಲಾರದು. ನಿಜವಾದ ಸಂತನಾದವನಲ್ಲಿ ಹೋರಾಟದ ಕೆಚ್ಚು ಇದ್ದರೂ ಅದು ಬೀದಿಯ ಘೋಷಣೆಯಾಗುವುದಿಲ್ಲ. ವ್ಯವಸ್ಥೆಯ ಬಗ್ಗೆ ಅಪಾರವಾದ ಸಿಟ್ಟು ಇದ್ದರೂ ಬದಲಾವಣೆಯನ್ನು ನಿರೀಕ್ಶಿಸುವ ಗಟ್ಟಿ ಮನಸ್ಸು ಇರುತ್ತದೆ. ಯಾವುದೇ ಒಬ್ಬ ಹೋರಾಟಗಾರನಿಗೆ ಆಗುವ ವಯಕ್ತಿಕ ಲಾಭ ಇಡೀ ಹೋರಾಟವನ್ನು ಹಾದಿ ತಪ್ಪಿಸುತ್ತದೆ ಎಂಬ ಅರಿವು ಸದಾ ಜಾಗೃತವಾಗಿರುತ್ತದೆ.
ಕನ್ನಡದ ಮನಸ್ಸುಗಳನ್ನು ರೂಪಿಸಿದ ಮಹದೇವ ಮತ್ತು ಲಂಕೇಶ್ |
೧೯೮೩ ರಿಂದ ೨೦೦೦ ಎಸ್ವಿಯವರೆಗೆ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಸಮ್ಮೇಳನದ ವರದಿ ಮಾಡುವುದರ ಜೊತೆಗೆ ಜಾತ್ರೆಯ ಸಂಭ್ರಮವನ್ನು ಅನುಭವಿಸಿದ್ದೇನೆ. ಸಮ್ಮೇಳನಗಳಲ್ಲಿ ರಾಜಕಾರಣಿಗಳು ವಿಜೃಂಭಿಸುವುದನ್ನು ನೋಡಿ ಬೇಸರ ಪಟ್ಟಿದ್ದೇನೆ. ಆದರೆ ಈಗ ನನಗೆ ಅಷ್ತು ಬೇಸರವಾಗುವುದಿಲ್ಲ. ಯಾಕೆಂದರೆ ಸಾಹಿತಿಗಳು ಮತ್ತು ಸಾಂಸ್ಕೃತಿಕ ಲೋಕದ ವ್ಯಕ್ತಿಗಳೂ ರಾಜಕಾರಣಿಗಳಾಗುತ್ತಿದ್ದಾರೆ. ಸಾಹಿತಿಗಳಲ್ಲಿ ಕಾಂಗ್ರೆಸ್ ಸಾಹಿತಿಗಳು, ಬಿಜೆಪಿ ಸಾಹಿತಿಗಳು ಎಂದು ಗುಂಪುಗಳೂ ಆಗಿವೆ. ಇಂತಹ ಸಂದರ್ಭದಲ್ಲಿ ದೇವನೂರು ಮಹಾದೇವ ಅಂಥವರು ನಮ್ಮಲ್ಲಿ ಇನ್ನೂ ಕನಸುಗಳಿ ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದೇ ಸಂತೋಷದ ವಿಚಾರ..