ಸುಮಾರು ೨೪ ವರ್ಷಗಳ ಹಿಂದಿನ ಮಾತು. ಕರ್ನಾಟಕದಲ್ಲಿ ಜನತಾ ಪರಿವಾರ ಗದ್ದುಗೆ ಹಿಡಿದ ಕ್ಷಣ. ಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಜನ ಅಧಿಕಾರದ ಗದ್ದುಗೆ ಏರುವಂತೆ ಮಾಡಿದ್ದರು. ೭೦ ಮತ್ತು ೮೦ ದಶಕದಲ್ಲಿ ಇದ್ದ ಮೂರು ಜನಪರ ಚಳವಳಿಗಳು ಈ ಬದಲಾವಣೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದ್ದವು. ಕರ್ನಾಟಕದಲ್ಲಿ ಹಲವು ರೀತಿಯ ಬದಲಾವಣೆಗೆ ಕಾರಣವಾಗಿದ್ದ ದೇವರಾಜ್ ಅರಸು ರಾಜಕೀಯ ನೇಪಥ್ಯಕ್ಕೆ ಸರಿದಾಗಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರ್ಕಾರ ಜನರ ಬದಲಾವಣೆಯ ಕನಸಿಗೆ ಇಂಬು ನೀಡುವಂತೆ ಅಧಿಕಾರಕ್ಕೆ ಬಂದಿತ್ತು.
ಒಂದು ಕಾಲದ ಗುರು ಶಿಷ್ಯರು... |
ಸಂಪುಟ ಸಭೆಯಲ್ಲಿ ಪಟೇಲರ ಪಕ್ಕ ಸಿದ್ದರಾಮಯ್ಯ |
ಹೆಗಡೆ, ಪಟೇಲರ ಮುಂದೆ ಸಮಾನರಂತೆ ಕಾಣಿಸಿಕೊಳ್ಳಲು ಸಿದ್ದರಾಮಯ್ಯ ಹೆದರುತ್ತಿದ್ದರು. ಅವರ ಜೊತೆ ಮುಕ್ತವಾಗಿ ಇರುವುದಕ್ಕೂ ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ದೇವೇಗೌಡರ ಜೊತೆ ಅವರು ಹೆಚ್ಚು ಮುಕ್ತವಾಗಿ ಬೆರೆಯುತ್ತಿದ್ದರು. ಅವರ ಜೊತೆ ಜಗಳವಾಡುವುದಕ್ಕೂ ಹಿಂಜರಿಯುತ್ತಿರಲಿಲ್ಲ.
ಜನತಾ ಪರಿವಾರ ಒಡಕಿನ ದಾರಿಯಲ್ಲಿ ಸಾಗುತ್ತಿದ್ದಾಗ ದೇವೇಗೌಡರ ಜೊತೆ ಗಟ್ಟಿಯಾಗಿ ನಿಂತವರು ಸಿದ್ದರಾಮಯ್ಯ. ರೈತ ಪರ ಮತ್ತು ಹಿಂದುಳಿದವರ ಪರವಾದ ನಾಯಕ ದೇವೇಗೌಡ ಎಂದು ಪ್ರಬಲವಾಗಿ ನಂಬಿದ್ದವರು ಸಿದ್ದರಾಮಯ್ಯ. ಜೊತೆಗೆ ಹೆಗಡೆ ಮತ್ತು ಪಟೇಲ್ ಸರಳವಾಗಿದ್ದರೂ ಅವರ ವ್ಯಕ್ತಿತ್ವದಲ್ಲಿದ್ದ ಸೊಪೆಸ್ಟಿಕೇಷನ್ ಸಿದ್ದರಾಮಯ್ಯನವರಿಗೆ ಇಷ್ಟವಾಗುತ್ತಿರಲಿಲ್ಲ. ಜನತಾ ಪರಿವಾರಕ್ಕೆ ಬಂದು ಸೇರಿದ ಮೇಲೂ ಸಿದ್ದರಾಮಯ್ಯನವರಿಗೆ ಅವಿಭಾಜಿತ ಜನತಾ ದಳದ ಒಂದು ಭಾಗವಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ. ಜನತಾ ಪರಿವಾರ ಒಡೆಯುವ ಸಂದರ್ಭದಲ್ಲಿ ತಮ್ಮ ಜೊತೆಗೆ ಬರುವಂತೆ ಹೆಗಡೆ ಆಹ್ವಾನ ನೀಡಿದರೂ ಆಗ ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡಿದ್ದು ದೇವೇಗೌಡರನ್ನೇ.
ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಿ... |
ತಮ್ಮ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ ತಪ್ಪಿದ್ದೆಲ್ಲಿ ? ಅವರು ಎಲ್ಲರೂ ಒಪ್ಪುವ ರಾಜಕೀಯ ನಾಯಕರಾಗಿ ಯಾಕೆ ಬೆಳೆಯಲಿಲ್ಲ ?
ಎರಡು ಮೂರು ದಶಕಗಳ ಹಿಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಿದೆ. ಒಬ್ಬ ನಾಯಕ ಕೇವಲ ದೀನ ದಲಿತರ, ಹಿಂದುಳಿದವರ ಪರ ಎಂದು ಹೇಳಿಕೊಂಡರೆ ಅದು ಸಾಕಾಗುವುದಿಲ್ಲ. ಅಥವಾ ಯಾವುದೋ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿ ರಾಜಕೀಯ ಮಾಡುವುದು ಸಾಧ್ಯವಿಲ್ಲ. ಇದನ್ನೆಲ್ಲ ಮೀರಿದ ರಾಜಕೀಯ ದೂರದರ್ಶಿತ್ವ ನಾಯಕನಾದವನಿಗೆ ಬೇಕಾಗುತ್ತದೆ. ಆತ ಕನಸುಗಳನ್ನು ಕಾಣುವಂತಿರಬೇಕು. ಕನಸುಗಳನ್ನು ಹಂಚುವಂತಿರಬೇಕು. ಇಂದಿನ ಯುವ ಜನಾಂಗ ಒಬ್ಬ ರಾಜಕಾರಣಿ ಮತ್ತು ರಾಜಕೀಯ ವ್ಯವಸ್ಥೆಯಿಂದ ನಿರೀಕ್ಷಿಸುವುದು ಅಭಿವೃದ್ಧಿಪರ ರಾಜಕಾರಣ. ಜಗತ್ತಿನ ಜೊತೆ ಪೈಪೋಟಿ ನಡೆಸುವ ಎದೆಗಾರಿಕೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಲವರಿಗೆ ಭ್ರಮನಿರಸನವಾಗಿದೆ. ಅವರ ಸರ್ಕಾರ ನಿದ್ರೆ ಮಾಡುವಂತೆ ಕಾಣುತ್ತಿದೆ. ಎರಡು ದಶಕಗಳ ಹಿಂದೆ ನಾವು ಇದ್ದೇವೆ ಎಂದು ಅನ್ನಿಸುವ ಹಾಗೆ ಸರ್ಕಾರ ನಡೆಯುತ್ತಿದೆ. ಅದೇ ಜನಪ್ರಿಯ ಯೋಜನೆಗಳು.
ಪಕ್ಕದಲ್ಲಿದ್ದರೂ ಮನಸ್ಸು ದೂರ ದೂರ |
ಇದು ಸಿದ್ದರಾಮಯ್ಯನವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಅವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯೂ ಇಲ್ಲ. ವಿದೇಶಿ ಬಂಡವಾಳ ಹೂಡಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದೇಶಿ ಬಂಡವಾಳವನ್ನು ತರುವ ವಿಚಾರದಲ್ಲಿ ಈ ಸರ್ಕಾರ ಏನು ಮಾಡುತ್ತಿಲ್ಲ. ಡಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕದ ಯಾವ ಪ್ರತಿನಿಧಿಯೂ ಪಾಲ್ಗೊಳ್ಳಲಿಲ್ಲ.
ಇದನ್ನೆಲ್ಲ ನೋಡಿದಾಗ ಸಿದ್ದರಾಮಯ್ಯನವರ ರಾಜಕಾರಣ ಔಟ್ ಡೇಟೆಡ್ ಎಂದು ಅನ್ನಿಸುತ್ತದೆ. ಅವರಿಗೆ ಕನಸುಗಳು ಇದ್ದಂತೆ ಕಾಣುತ್ತಿಲ್ಲ. ಹೇಗೋ ಮುಖ್ಯಮಂತ್ರಿಯಾಗಿದ್ದೇನೆ ನನ್ನ ಅವಧಿಯನ್ನು ಮುಗಿಸಿದರೆ ಸಾಕು ಎಂಬಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಇಂತಹ ನಿಲುಮೆಯಿಂದ ಕರ್ನಾಟಕದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಅವರು ಯೋಚಸಿದಂತೆ ಕಾಣುತ್ತಿಲ್ಲ.
ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಏನು ಎಂದು ಪ್ರಶ್ನಿಸಿದರೆ ಅದೇ ಹಲವಾರು ಭಾಗ್ಯ ನಮ್ಮ ಮುಂದೆ ಕಣ್ಣು ಮುಂದೆ ಬರುತ್ತದೆ. ಇಂತಹ ಭಾಗ್ಯದಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುವುದಿಲ್ಲ. ಒಂದು ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಮುಖ್ಯವಾಗಬೇಕು. ಜನರನ್ನು ಕೇವಲ ಭಿಕ್ಷುಕರನ್ನಾಗಿ ಮಾಡಿದರೆ ಅನ್ನದಾತ ಎಂದು ಅನ್ನಿಸಿಕೊಳ್ಳಬಹುದೇ ಹೊರತೂ ಅನ್ನ ಹುಟ್ಟುವುದಿಲ್ಲ.
ರಾಜಕಾರಣಿಯಾದವನು ಸದಾ ವಾಸ್ತವದ ಜೊತೆ ಮುಖಾಮುಖಿಯಾಗಬೇಕು. ಬದಲಾದ ಸಮಯಕ್ಕೆ ಬದಲಾಗಬೇಕು. ಇವತ್ತು ಮೊಬೈಲ್ , ಕಂಪ್ಯೂಟರ್ ಅಂಗಡಿ ತೆಗೆದರೆ ವ್ಯಾಪಾರವಾಗುತ್ತದೆ. ಇದಕ್ಕೆ ಬದಲಾಗಿ ಟ್ರಾನಿಸ್ಟರ್ ಅಂಗಡಿ ತೆಗೆದರೆ ? ನನಗೆ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆ ಅನ್ನಿಸುತ್ತದೆ. ಅವರು ಶಿವಾಜಿನಗರದ ಮೂಲೆಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡವರಂತೆ ಕಾಣುತ್ತಾರೆ. ಗುಜರಿ ಅಂಗಡಿ ಇಟ್ಟುಕೊಂಡವನು ಯಾವಾಗಲೋ ಒಮ್ಮೆ ಬರುವ ಗಿರಾಕಿಗಳಿಗಾಗಿ ಕಾಯಬೇಕಾಗುತ್ತದೆ. ಹೀಗಾಗಿ ಗುಜರಿ ಅಂಗಡಿ ಮಾಲೀಕರು ಯಾವಾಗಲೂ ನಿದ್ರೆ ಮಾಡುತ್ತಲೇ ಇರುತ್ತಾರೆ. ಗಿರಾಕಿ ಬಂದರೆ ಕಣ್ಣು ಬಿಡುತ್ತಾರೆ.
ಸಿದ್ದರಾಮಯ್ಯನವರಿಗೆ ಈಗಲೂ ಕಾಲ ಮಿಂಚಿಲ್ಲ ಎಂದು ನಾನು ನಂಬಿದ್ದೇನೆ. ಅವರು ವಾಸ್ತವ ಜೊತೆ ಮುಖಾಮುಖಿಯಾಗಬೇಕು. ನಿದ್ರೆಯಲ್ಲಿ ಕನಸು ಕಾಣದೇ ವಾಸ್ತವದಲ್ಲಿ ಕನಸು ಕಾಣಬೇಕು. ಕರ್ನಾಟಕದ ಭವಿಷ್ಯ ತಮ್ಮ ಕಯ್ಯಲ್ಲಿದೆ ಎಂಬುದನ್ನು ಅವರು ನೆನಪು ಮಾಡಿಕೊಳ್ಳಬೇಕು.
.
2 comments:
Good one
ಶ್ರೀಯುತ ಶಶಿಧರರವರ ಲೇಖನ ಪ್ರಸ್ತುತ ವಿದ್ಯಮಾನಗಳನ್ನ ಎತ್ತಿ ಹಿಡಿದಿದೆ. ಜನರಿಗೆ ದುಡಿಯೋದನ್ನ ಕಲಿಸೋದ್ ಬಿಟ್ಟು ಬೇಡೋ ತರ ಮಾಡಿದೆ ಈಗಿನ ಸರ್ಕಾರ. ರಾಜ್ಯದ ಬಹುತೇಕ ಹಳ್ಳಿಗಳು ಖಾಲಿಯಾಗಿವೆ ಅಥವಾ ವೃದ್ಧಾಶ್ರಮವಾಗಿ ಪರಿವರ್ತನೆಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಅಲ್ಲಲ್ಲಿ ಅಳಿದುಳಿದ ಯುವಕರನ್ನ ನೋಡಿದಾಗ ನಮಗೆ ಅರ್ಥವಾಗುತ್ತೆ, ಹಲವಾರು ಭಾಗ್ಯ ಯೋಜನೆಗಳು ಅವರನ್ನ ಸೋಮಾರಿಗಳನ್ನಾಗಿಸುತ್ತಿದೆ.
ದಿವಗಂತ ರಾಮಕೃಷ್ಣ ಹೆಗಡೆ, ಜೆ. ಎಚ್ ಪಟೆಲ್ ಮುಂತಾದವರು ರಾಜಕೀಯ ವಿಷಯದಲ್ಲಿ ಎನೇ ಮಾಡಿರಬಹುದು ಆದರೆ ಅವರೆಲ್ಲರಲ್ಲಿ ರಾಜ್ಯ ಅಭಿವೃದ್ಧಿ ಕುರಿತು ದೂರದೃಷ್ಟಿ ಇತ್ತು ಅನ್ನೊದು ನನ್ನ ಅನಿಸಿಕೆ. ಈಗಿನ ಮುಖ್ಯಮಂತ್ರಿಗಳ ಯಾವುದೇ ಯೋಜನೆಗಳಲ್ಲಿ ನಾವು ರಾಜ್ಯದ ಭವಿಷ್ಯ ಅಭಿವೃದ್ಧಿ ಕಾಣಲು ಸಾಧ್ಯವಿದೆಯಾ? ಯಾವುದಾದರೂ ಒಂದು ಉದಾಹರಣೆಯನ್ನ ಅವರನ್ನ ಬೆಂಬಲಿಸುವ ಯಾರಾದರೂ ಕೊಡಬಲ್ಲಿರಾ?
Post a Comment