Saturday, November 14, 2015

ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ....!.

ನಿನ್ನೆ ಬೆಳಿಗ್ಗೆ ವಾಟ್ಸ್ ಅಪ್ ನಲ್ಲಿ ಗೆಳೆಯ ಇರ್ಷಾದ್ ಉಪ್ಪಿನಂಗಡಿ ಕಳುಹಿಸಿದ ಸಂದೇಶ  ಹೀಗಿತ್ತು;
ಸಮಿಉಲ್ಲಾ ಹರೀಶ್ ಸ್ನೇಹಿತರು. ಕ್ರಿಕೆಟ್ ಆಡಿ ಮನೆಗೆ ಹಿಂತಿರುಗುತ್ತಿದ್ದ್ಸರು, ಅಂಗಡಿಯೊಂದರಲ್ಲಿ ಕೂಲ್ ಡ್ರಿಂಕ್ಸ್ ಕುಡೀದು  ಸಮೀಉಲ್ಲಾ ಬೈಕ್ ನಲ್ಲಿ ಹೊರಡುತ್ತಿದ್ದಾಗ  ದುಷ್ಕರ್ಮಿಗಳ ತಂಡ ಅವನಿಗೆ ಇರಿದಿದೆ.  ಅಷ್ಟರಲ್ಲಿ ಸ್ನೇಹಿತನ ರಕ್ಷಣೆಗೆ  ಹರೀಶ್ ಧಾವಿಸಿ ಬಂದಿದ್ದಾನೆ. ದುಷ್ಕರ್ಮಿಗಳು ಆತನಿಗೂ ಇರಿದಿದ್ದಾರೆ.  ತೀರ್ವ ಗಾಯಗೊಂದ ಹರೀಶ್ ಅಸು ನೀಗಿದ್ದಾನೆ. ಕರಾವಳಿ ಸ್ನೇಹಿತರಿಗೆ ಧರ್ಮ ಯಾವತ್ತೂ ಮುಖ್ಯವಲ್ಲ. ಧರ್ಮದ ಹಂಗು ತೊರೆದು ಸ್ನೇಹಿತನ  ಪ್ರಾಣ ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ ಎರಡನೆಯ ಪ್ರಕರಣ ಇದು....
ಈ ಬಗ್ಗೆ ರಾತ್ರಿಯೆಲ್ಲ ಯೋಚಿಸುತ್ತಿದ್ದೆ.  ಈ ದೇಶದಲ್ಲಿ ಈಗಲೂ ಆರೋಗ್ಯಪೂರ್ಣವಾಗಿ ಯೋಚಿಸುವವರಿದ್ದಾರೆ. ರಕ್ತದ ರಾಜಕಾರಣ ಮಾಡುವವರು ಇರುವಂತೆ ಶಾಂತಿಯ ಪಾರಿವಾಳವನ್ನು ಹಾರಿ ಬಿಡುವವರೂ ಇದ್ದಾರೆ. ಮನುಷ್ಯನ ಇತಿಹಾಸದಲ್ಲಿ ಶಾಂತಿ ಸಹಬಾಳ್ವೆಯ ಸಂದೇಶ ನಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾಯಿಭಾವವಾಗಿ ಇರುವುದು ಇದೆಯಲ್ಲ ಅದೇ ಮುಖ್ಯ ಅನ್ನಿಸಿತು. ಧರ್ಮ ನಮ್ಮಲ್ಲಿ ಪಾಶವೀ ಮನಸ್ಥಿಗೆ ಕಾರಣವಾಗುವುದಿದ್ದರೆ ನಮಗೆ ಧರ್ಮ ಬೇಕಾ ? ಎಲ್ಲ ಧರ್ಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಯಾಕೆ ಸಾಧ್ಯವಿಲ್ಲ ? ಆಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ;
ಧರ್ಮ ಎಂದರೇನು ? ಈ ಶತಮಾನದ ದಾರ್ಶಿನಿಕರಲ್ಲಿ ಒಬ್ಬರಾದ ಜಿದ್ದು ಕೃಷ್ಣಮೂರ್ತಿ ಈ ಪ್ರಶ್ನೆಗೆ ನೀಡಿದ ಉತ್ತರ ಕುತೂಹಲಕರ.
ಧರ್ಮ ಎಂದರೇನು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯಾವುದು ಧರ್ಮ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವುದು ಧರ್ಮವಲ್ಲ ಎಂಬುದು ತಿಳಿದರೆ ಈ ಪ್ರಶ್ನೆಗೆ ಉತ್ತರ ದೊರಕುತ್ತದೆ.. ಈಗ ದೇವಾಲಯಕ್ಕೆ ಹೋಗಿ ಪೂಜೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ದೇವಾಲಯಕ್ಕೆ ಹೋಗುವುದೇ ಧರ್ಮ ಅಲ್ಲ. ರಾಮ ಕೃಷ್ಣ ಎಂದು ಭಜನೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ಇದು ಧರ್ಮ ಅಲ್ಲ....ಯಾಕೆಂದರೆ ಇವೆಲ್ಲವೂ ಸಂಕೇತಗಳು. ಸಂಕೇತವೇ ಧರ್ಮ ಅಲ್ಲ....
ನಿಜ. ಧರ್ಮ ಎನ್ನುವುದು ಸಂಕೇತವಲ್ಲ. ಸನಾತನ ಧರ್ಮ ಎಂದು ಮಾತನಾಡುವವರು, ವೈದಿಕ ಧರ್ಮದ ಬಗ್ಗೆ ಮಾತನಾಡುವವರಿಗೆ ಧರ್ಮದ ಬಗ್ಗೆ ಗೊತ್ತಿದೆಯೆ ? ಧರ್ಮ ಎನ್ನುವ ಶಬ್ದದ ಮೂಲ ಧಾತು, ದೃ ಎಂದು. ದೃ ಎಂದರೆ ಬದುಕನ್ನು ಎತ್ತರಿಸು ಎಂಬ ಅರ್ಥವನ್ನು ಹೊಂದಿದೆ. ಯಾವುದು ಬದುಕನ್ನು ಎತ್ತರಿಸುತ್ತದೆಯೋ ಅದೇ ಧರ್ಮ..
ಜಿದ್ದು ಕೃಷ್ಣಮೂರ್ತ್ಇ ಹೇಳಿದಂತೆ ನಾವು ಸಂಕೇತಗಳ ಹಿಂದೆ ಬಿದ್ದಿದ್ದೇವೆ. ಸಂಕೇತಗಳು ಇರುವುದು ಗುರುತಿಸುವುದಕ್ಕೆ ಮಾತ್ರ. ಇದನ್ನು ಬಿಟ್ತು ಸಂಕೇತಗಳಿಗೆ ಬೇರೆ ಅರ್ಥ ಮತ್ತು ಉದ್ದೇಶಗಳಿಲ್ಲ. ಆದರೆ ಧರ್ಮಗಳ ವಾರಸುದಾರರು ಈ ಸಂಕೇತಗಳ ಹಿಂದೆ ಬಿದ್ದಿರುತ್ತಾರೆ. ಅವರಿಗೆ ಸಂಕೇತದ ಹಿಂದಿನ ತತ್ವ ಮುಖ್ಯವಲ್ಲ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ..
ತಲೆಯ ಮೇಳಿನ ಜುಟ್ಟು, ಮೀಸೆ ಇಲ್ಲದ ಗಡ್ಡ, ತಲೆಯ ಮೇಲಿನ ಸ್ಕಲ್ ಟೋಪಿ ಎಲ್ಲವೂ ಧಾರ್ಮಿಕ ಸಂಕೇತಗಳೇ. ಈ ಧಾರ್ಮಿಕ ಸಂಕೇತಗಳೂ ಧರ್ಮದಂತೆ ಎಅರಡೂ ರೀತಿಯಲ್ಲಿ ಕೆಲಸ ಮಾಡುತ್ತವೆ. ಒಂದೆಡೆ ಓಗ್ಗಟ್ಟಿಗೆ ಕಾರಣವಾದರೆ ಇನ್ನೊಂದೆಡೆ ವಿಭಜನೆಗೆ ಕಾರಣವಾಗುತ್ತದೆ. ಒಂದೇ ದೇವರನ್ನು ಪೂಜಿಸುವವರು, ಒಂದೇ ರೀತಿಯ ಧಾರ್ಮಿಕ ಸಂಕೇತವನ್ನು ಹೊಂದಿದವರು ಒಗ್ಗಟ್ಟಾಗುತ್ತಾರೆ. ಹಾಗೆ ಇನ್ನೊಬ್ಬ ದೇವರು ಮತ್ತು ಸಂಕೇತವನ್ನು ಹೊಂದಿದವರನ್ನು ಧ್ವೇಷಿಸತೊಡಗುತ್ತಾರೆ. ಅಂದರೆ ಒಂದು ಧರ್ಮದ ಅನುಯಾಯಿಗಳು ಒಂದಾಗುತ್ತಲೇ ಇನ್ನೊಂದು ಧರ್ಮದವನ್ನು ಧ್ವೇಷಿಸುವುದು ಏಕ ಕಾಲಕ್ಕೆ ನಡೆದು ಹೋಗುತ್ತದೆ.
ಈಗ ಕೆಲವು ದಿನಗಳ ಹಿಂದೆ ಯಾವುದೋ ಮಠವೊಂದರ ಭಕ್ತರು ನಾಮವನ್ನು ಹಾಕಿಕೊಳ್ಳುವುದರ ಸಂಬಂಧದಲ್ಲಿ ಬೀದಿ ರಂಪ ಮಾಡಿಕೊಂಡಿದ್ದರು. ವಿ ಆಕಾರದ ನಾಮ ಸರಿಯೋ, ಯು ಆಕಾರದ ನಾಮ ಸರಿಯೋ ಎಂಬುದು ಅವರ ಕಚ್ಚಾಟಕ್ಕೆ ಮೂಲವಾಗಿತ್ತು. ನಾಮ ಯಾವ ಆಕಾರದಲ್ಲೇ ಇರಲಿ ಅದು ನಮ್ಮ ಹಣೆಯ ಮೇಲಿದ್ದರೆ ಚಂದ. ಅದನ್ನು ಬೇರೆಯವರ ಹಣೆಯ ಮೇಲೆ ಹಾಕಿದರೆ ಸಮಸ್ಯೆ ಪ್ರಾರಂಭವಾಗುತ್ತದೆ..ಆದರೆ ಧರ್ಮದ ಬಗ್ಗೆ ಮೂಲಭೂತ ಜ್ನಾನ ಇಲ್ಲದವರು ಸಂಕೇತಗಳ ಬಗ್ಗೆ ಜಗಳವಾಡುತ್ತಾರೆ. ಬೀದಿ ರಂಪ ಮಾಡುತ್ತಾರೆ. ಹೊಡೆದಾಟ ಮಾಡುತ್ತಾರೆ. ಕತ್ತಿ ಝಳಪಿಸುತ್ತಾರೆ. ರಕ್ತ ಚೆಲ್ಲುತ್ತಾರೆ.
ಈಗ ಟಿಪ್ಪೂ ವಿವಾದವನ್ನೇ ತೆಗೆದುಕೊಳ್ಳಿ. ಈ ವಿವಾದದ ಹಿಂದೆ ಇರುವುದು ಧರ್ಮ. ಟಿಪ್ಪೂ ಮುಸ್ಲಿಂನಾಗಿದ್ದೇ ಈ ವಿವಾದಕ್ಕೆ ಕಾರಣ ಎಂದು ನನಗೆ ಅನ್ನಿಸುತ್ತದೆ. ಹಾಗಂತ ಟಿಫ್ಫೂ ಇವತ್ತಿನ ಅರ್ಥದಲ್ಲಿ ದೇಶಪ್ರೇಮಿಯಾಗಿದ್ದ ಎನ್ನುವುದು ಮೂರ್ಖತನ. ಹಾಗೆ ಆತ ಹಿಂದೂ ವಿರೋಧಿಯಾಗಿದ್ದ ಎನ್ನುವುದು ಸುಳ್ಳು. ಆತ ಒಬ್ಬ ಮಹಾತ್ವಾಕಾಂಕ್ಷಿ ರಾಜನಾಗಿದ್ದ. ಆ ಕಾಲದಲ್ಲಿ ಬದುಕಿ ಬಾಳಿದ ಎಲ್ಲ ರಾಜರ ಹಾಗೆ ಆತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಎಲ್ಲವನ್ನೂ ಮಾಡಿದ. ತನ್ನ ಪಕ್ಕದ ರಾಜ್ಯವಾದ ಕೇರಳ ಮತ್ತು ಕೊಡಗಿನ ಮೇಲೆ ಧಾಳಿ ನಡೆಸಿ ಅಲ್ಲಿನ ಜನರನ್ನು ಬರ್ಬರವಾಗಿ ಕೊಂದ. ಅಂದಿನ ಎಲ್ಲ ರಾಜರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಅವನು ನಡೆದುಕೊಂಡ. ಹೀಗಾಗಿ ಟಿಪ್ಪೂ ಇಂದಿನ ಅರ್ಥದಲ್ಲಿ ಮಹಾನ್ ದೇಶ ಭಕ್ತಎಂದು ಪ್ರತಿಪಾದಿಸುವುದಾಗಲೀ ಆತ ಧರ್ಮಾಂಧ ಎನ್ನುವದಾಗಲೀ ಎರಡೂ ಸತ್ಯವಲ್ಲ.
ಈ ಬಗ್ಗೆ ಯೋಚಿಸುತ್ತಲೇ ನಿದ್ರೆಯ ಸೆರಗಿಗೆ ನಾನು ಜಾರಿದೆ. ಬೆಳಿಗ್ಗೆ ೬ ಗಂತೆ ಇರಬೇಕು. ಸ್ನೇಹಿತರೊಬ್ಬರು ಪ್ಯಾರಿಸ್ ನಲ್ಲಿ ಉಗ್ರಗಾಮಿ ಧಾಳಿಯಲ್ಲಿ ೧೫೦ ಜನರ ಹತ್ಯೆ ಮಾಡಿದ ಸುದ್ದಿ ನೀಡಿದರು. ತಕ್ಷಣ ಟೀವಿ ಹಾಕಿದೆ. ಈ ಬರ್ಬರ ಕ್ರತ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ಭಿತ್ತರವಾಗುತ್ತಿತ್ತು. ಇದು ಐಸಿಎಸ್ ಉಗ್ರರ ಕೃತ್ಯ ಎನ್ನುವುದು ಈಗಾಗಲೇ ಸ್ಪ್ಶಷ್ಟವಾಗಿದೆ. ಐಸಿಎಸ್ ಈ ಧಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಸುದ್ದಿ ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ, ರಾಷ್ಟೀಯ ವಾಹಿನಿಗಳಲ್ಲಿ ಬರುತ್ತಿದ್ದಾಗ ಕನ್ನಡ ಕೆಲವು ವಾಹಿನಿಗಳಲ್ಲಿ ಜ್ಯೋತಿಷಿಗಳು ಕನ್ನಡಿಗರ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರು. ದಿನ ಭವಿಷ್ಯದ ಬಗ್ಗೆ ಪ್ರವಚನ ನಡೆಯುತ್ತಿತ್ತು. ಇವರಿಗೆ ಪ್ಯಾರಿಸ್ ನಲ್ಲಿ ನಡೆದ ಧಾಳಿಯ ಬಗ್ಗೆ ಏನಾದರೂ ಭವಿಷ್ಯವಾಣಿ ಆಗಿರಬಹುದೆ ಎಂಬ ಕೆಟ್ಟ ಕುತೂಹಲನನ್ನಲ್ಲಿತ್ತು. ಆದರೆ ಇವರೆಲ್ಲ ಕನ್ನಡಿಗರ ಗೃಹ ಗತಿಗೆ ಮಾತ್ರ ಸೀಮಿತವಾಗಿದ್ದರು. ಯಾಕೋ ಈ ಹಕ್ಕಿ ಶಕುನದವರು ಮತ್ತು ಅವರನ್ನು ನಂಬುವ ಮುಗ್ದ ಕನ್ನಡಿಗರ ಬಗ್ಗೆ ಪಾಪ ಅನ್ನಿಸತೊಡಗಿತ್ತು.
ಬೆಳಗಿನ ಕಾಫಿ ಕುಡಿಯುತ್ತ ಈ ಐಸಿಸ್ ಉಗ್ರರ ಬಗ್ಗೆ ಯೋಚಿಸತೊಡಗಿದೆ. ಈಗ ಇಸ್ಲಾಂ ಮತಾವಲಂಬಿಗಳು ಹೊರಕ್ಕೆ ಬರಬೇಕು. ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಆ ಧರ್ಮದ ಒಳಗೆ ಪ್ರತಿಭಟನೆಯ ಬೆಂಕಿ ಹೊತ್ತಿಕೊಳ್ಳಬೇಕು. ಈ ಬಗ್ಗೆ ಬೇರೆ ಧರ್ಮದವರು ಮಾತನಾಡಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ನನಗೆ ಅನ್ನಿಸುವ ಹಾಗೆ ಧರ್ಮ ಎಂದೂ ನಿಂತ ನೀರಾಗಬಾರದು. ಅದಕ್ಕೊಂದು ಚಲನಶೀಲತೆ ಬೇಕು. ಈಗ ವಿಶ್ವದ ಎಲ್ಲ ಧರ್ಮಗಳೂ ನೀಂತ ನೀರಾಗಿವೆ. ಇದು ಬದಲಾಗದಿದ್ದರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ. ಐದು ಸಾವಿರ ವರ್ಷಗಳಷ್ಟು ಹಳೆಯದಾದ ಹಿಂದೂ ಧರ್ಮ ಇವತ್ತಿನ ಜಗತ್ತಿಗೆ ತೆರೆದುಕೊಳ್ಳಬೇಕು. ಹಾಗೆ ವಿಶ್ವದ ಅತಿ ಕಿರಿಯ ಧರ್ಮವಾದ ಇಸ್ಲಾಂ ಕೂಡ ಬದಲಾಗಬೇಕಾಗಿದೆ. ಈ ಬದಲಾವಣ್ಎ ಹೊರಗಿನ ಸೂಚನೇ ಹೇಳಿಕೆ ಮತ್ತು ಒತ್ತಾಯದಿಂದ ಆಗುವುದಿಲ್ಲ. ಆಯಾ ಧರ್ಮದ ಒಳಗೆ ಇಂತಹ ಬದಲಾವಣೆ ಆಗಬೇಕಿದೆ. ಈ ಬದಲಾವಣೆಯ ನೇತೃತ್ವವನ್ಮು ಆಯಾ ಧರ್ಮದವರೇ ಒಹಿಸಬೇಕು..ಈ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಹಿಂದೂಗಳು ಮಾತನಾಡತೊಡಗಿದರೆ ಅದಕ್ಕೆ ಕೋಮು ಬಣ್ಣ ಬರತೊಡಗುತ್ತದೆ. ಹಾಗೆ ಹಿಂದೂ ಧರ್ಮದ ಬಗ್ಗೆ ಆಗಬೇಕಾದ ಸುಧಾರಣೆಯ ಬಗ್ಗೆ ಮುಸ್ಲೀಂ ಮತಾವಲಂಬಿಗಳು ಮಾತನಾಡಿದರೆ ಅದನ್ನು ಸ್ವೀಕರಿಸಲು ಹಿಂದೂ ಅಭಿಮಾನಿಗಳು ಸಿದ್ದರಿರುವುದಿಲ್ಲ.
ಆದರೆ ಈಗಿನ ಸಮಸ್ಯೆ ಎಂದರೆ ಹಿಂದೂ ಅಭಿಮಾನಿಗಳು ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಸುಧಾರಣೆಯ ಬಗ್ಗೆ ಮಾತನಾಡುತ್ತಾರೆ. ಇಸ್ಲಾಂ ಧರ್ಮದ ವಿಚಾರವಂತರು ಹಿಂದೂ ಧರ್ಮದಲ್ಲಿ ಇರುವ ಲೋಪದೋಷ ಮತ್ತು ಸುಧಾರಣೆಯ ಬಗ್ಗೆ ಭಾಷಣ ಮಾಡುತ್ತಾರೆ. ಇವರೆಲ್ಲ ಯಾಕೆ ತಮ್ಮ ತಮ್ಮ ಧರ್ಮದ ಒಳಗೆ ಇರುವ ಮನುಷ್ಯ ವಿರೋಧಿ ನಿಲುಮೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ. ತಮ್ಮ ತಮ್ಮ ಧರ್ಮವನ್ನು ಗರ್ಭ ಗುಡಿಯಲ್ಲಿ ಭದ್ರವಾಗಿ ಇಟ್ಟುಕೊಂಡು ಇನ್ನೊಂದು ಧರ್ಮದ ಬಗ್ಗೆ ಯಾಕೆ ಮಾತನಾಡುತ್ತಾರೆ ? ಅವರು ಹೀಗೆ ಮಾಡುವುದರಿಂದ ಕೋಮು ಧ್ವೇಷ ಇನ್ನಷ್ಟು ಹೆಚ್ಚುತ್ತದೆ. ನನ್ನ ಧರ್ಮದ ಬಗ್ಗೆ ಮಾತನಾಡಲು ಇವನ್ಯಾರು ಎಂದು ಪ್ರಶ್ನಿಸುವುದರೊಂದಿಗೆ ಅಸಹನೆ ಪ್ರಾರಂಭವಾಗುತ್ತದೆ. ಧರ್ಮಾಂಧರು ರಕ್ತಪಾತಕ್ಕೂ ಕೈಹಾಕುತ್ತಾರೆ.
 ಸಮಾಜದಲ್ಲಿ ಸಮಾನತೆ ಮತ್ತು ಸಹಭಾಳ್ವೆ ನಮ್ಮ ಗುರಿಯಾಗಿದ್ದರೆ ನಮ್ಮ ಕಾರ್ಯವಿಧಾನದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಮೊದಲನೆಯದಾಗಿ ಎಲ್ಲ ಧರ್ಮಗಳನ್ನು ತಿರಕ್ಸರಿಸುವುದು ಸಾಧ್ಯವೆ ಎನ್ನುವುದು. ಇದಕ್ಕೆ ಸಾಮಾನ್ಯ ಜನ ಒಪ್ಪುವುದಿಲ್ಲ. ಯಾಕೆಂದರೆ ದುಃಖ ನೋವು ಅಸಹಾಯಕತೆಯಲ್ಲಿ ಬದುಕುವವರಿಗೆ ಅವಲಂಬನೆಗಾಗಿ ಧರ್ಮ ಬೇಕೇ ಬೇಕು. ಅಂದರೆ ರಿಲಿಜನ್ ಎನ್ನುವುದು ಸಾಮಾನ್ಯ ಜನರಿಗೆ ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ರಿಲಿಜನ್ ನಲ್ಲಿ ಬದಲಾವಣೆ ಆಗಬೇಕಾಗಿದೆ. ಆದರೆ ಇಂದಿನ ಸ್ಥಿತಿಯಲ್ಲಿ ಧಾರ್ಮಿಕ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಇಸ್ಲಾಮಿಕ್ ಭಯೋತ್ಪಾದನೆಯ ವಿಚಾರವನ್ನೇ ತೆಗೆದುಕೊಳ್ಳಿ. ಇದರ ಮೂಲೋತ್ಪಾಟನೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ದೇಶದ ವೈಚಾರಿಕ ವಲಯದಲ್ಲಿ ಚರ್ಚೆ ನಡೆಯುತ್ತಿಲ್ಲ. ಭಾರತದ ಸ್ಥಿತಿಯೂ ಹಾಗೆ. ಇಲ್ಲಿನ ವೈಚಾರಿಕ ವರ್ಗ ಹಿಂದೂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಅದಕ್ಕೆ ಚಲನಶೀಲತೆಯನ್ನು ನೀಡುವ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಹಿಂದೂ ಧಾರ್ಮಿಕ ಮೂಲಭೂತವಾದದ ಭಯ. ಹಿಂದೂ ಮೂಲಭೂತವಾದವನ್ನು ವಿರೋಧಿಸುವುದು ಎಂದರೆ ಇಸ್ಲಾಮಿಕ್ ಮೂಲಬೂತವಾದದ ಬಗ್ಗೆ ಮೌನ ಒಹಿಸುವುದು ಎಂಬ ತಪ್ಪು ಕಲ್ಪನೆ ನಮ್ಮ ವೈಚಾರಿಕ ವಲಯದಲ್ಲಿದೆ. ಹಾಗೆ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ನೋಡದೇ ಸೆಲೆಕ್ಟೀವ್ ಆಗಿ ನಾವು ನೋಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ.
ಇಂದು ಬೆಳಿಗ್ಗೆ ನಮ್ಮೆಲ್ಲರ ಪ್ರೀತಿಯ ದೇವನೂರು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ಪ್ರತಿಭಟಿಸಿ ಪ್ರಶಸ್ತಿ ವಾಪಸ್ ನೀಡಿದ ಸುದ್ದಿ ಬಂತು. ಈ ಸುದ್ದಿಯನ್ನು ನನಗೆ ಹೇಳಿದ ನನ್ನ ಕಾಮ್ರೇಡ್ ಮಿತ್ರರೊಬ್ಬರು ನೀವು ನಿಮಗೆ ಸಿಕ್ಕಿರುವ ಪ್ರಶಸ್ತಿಯನ್ನು ವಾಪಸು ಮಾಡುತ್ತೀರಿ ಎಂದುಕೊಂಡಿದ್ದೆ. ಯಾಕೆಂದರೆ ನೀವೂ ಎಡಪಂಥೀಯರಲ್ಲವೆ ಎಂದು ಪ್ರಶ್ನಿಸಿದರು.
ನಾನು ಎಡಪಂಥೀಯ ವಿಚಾರಧಾರೆಯಲ್ಲಿ ಬೆಳೆದು ಬಂದಿದ್ದು ನಿಜ. ಆದರೆ ಈಗ ನಾನು ಯಾವ ಪಂಥೀಯನೂ ಅಲ್ಲ. ನಾನು ಮನುಷ್ಯ ಪರ. ನಾನು ಪತ್ರಿಕೋದ್ಯಮಿ ಆಗಿರುವುದರಿಂದ ಒಬ್ಬರ ಪರ ಮತ್ತು ಇನ್ನೊಬ್ಬರ ವಿರೋಧಿ ಎಂದು ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಯಾವುದೇ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಲು ಪ್ರಾರಂಭಿಸಿದ ತಕ್ಷಣ ಸತ್ಯ ನಿಷ್ಟೆ ಮಾಯವಾಗುತ್ತದೆ. ಹೀಗಾಗಿ ನಾನು ಎಡಪಂಥೀಯ ವಿಚಾರಧಾರೆಯನ್ನು ಒಪ್ಪುವ ವ್ಯಕ್ತಿಯಾದರೂ ಪತ್ರಿಕೋದ್ಯಮಿಯಾಗಿ ಎಡಪಂಥೀಯ ಎಂದು ಗುರುತಿಸಿಕೊಳ್ಳಲಾರೆ. ನನ್ನ ವೈಯಕ್ತಿಕ ನಂಬಿಕೆ ಮತ್ತು ಸಿದ್ಧಾಂತವನ್ನು ನನ್ನ ವೃತ್ತಿಯ ಮೇಲೆ ಹೇರಲಾರೆ. ನಾನು ಎಕ್ಟಿವಿಸ್ಟ್ ಅಲ್ಲ. ಕೇವಲ ಸತ್ಯದ ಪರ ಮತ್ತು ಮನುಷ್ಯ ಪರವಿರುವ ಒಬ್ಬ ಪತ್ರಿಕೋದ್ಯಮಿ ಅಷ್ಟೇ ಎಂದು ನಕ್ಕೆ.
ನೀವು ಹೇಳಿದಂತೆ ನನಗೆ ಯಾವುದಾದರೂ ಪ್ರಶಸ್ತಿ ಬಂದಿದ್ದರೆ ಅದನ್ನು ಹಿಂತಿರುಗಿಸುವ ಬಗ್ಗೆ ಯೋಚಿಸಬಹುದಿತ್ತು. ಆ ಸನ್ನಿವೇಶದಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೋ ಇಲ್ಲವೋ ಎಂಬುದನ್ನು ಈಗ ಹೇಳಲಾರೆ. ಆದರೆ ಇದುವರೆಗೆ ನನಗೆ ಯಾವ ಪ್ರಶಸ್ತಿಯನ್ನು ಯಾರೂ ನೀಡಿಲ್ಲ. ನೀವು ಅಂದುಕೊಂಡಂತೆ ನಾನು ಎಡಪಂಥೀಯನಾಗಿದ್ದರೆ ಒಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಸಿಗುತ್ತಿತ್ತು. ಬಲಪಂಥೀಯನಾಗಿದ್ದರೆ ಇನ್ನೊಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಬರಬಹುದಿತ್ತು. ನಾನು ಯಾವ ಪಂಥಕ್ಕೂ ಸೇರದಿರುವುದರಿಂದ ನನಗೆ ಪ್ರಶಸ್ತಿ ಬಂದಿಲ್ಲ ಎಂದು ತಮಾಷೆ ಮಾಡಿದೆ. ಅವರು ಒಂದು ನಿಮಿಷ ಮೌನವಾದರು. ನಿಜವಾಗಿಯೂ ನಿಮಗೆ ಯಾವ ಪ್ರಶಸ್ತಿಯೂ ಬಂದಿಲ್ಲವಾ ಎಂದು ಇನ್ನೊಮ್ಮೆ ಪ್ರಶ್ನಿಸಿ ಖಾತರಿ ಮಾಡಿಕೊಂಡರು.
ಇಂದು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸ್ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಸಮಾಜ ಮತ್ತು ಸರ್ಕಾರದಲ್ಲಿ ಜಾಗೃತಿ ಮೂಡಿಸಲು ಇಂತಹ ಕೆಲಸ ಮಾಡಲೇಬೇಕು. ಇದು ಸಾತ್ವಿಕ ಪ್ತತಿಭಟನೆಯ ಒಂದು ಮಾರ್ಗ. ಸಮಾಜ ಜೀವಂತವಾಗಿರಲು ಪ್ರತಿಭಟನೆ ಮತ್ತು ಚಳವಳಿಗಳು ಬೇಕೇ ಬೇಕು..ಆದರೆ ಈ ಅಸಹಿಷ್ಣತೆಯ ಪ್ರಶ್ನೆಯನ್ನು ಒಂದು ತತ್ವವನ್ನಾಗಿ ಸ್ವೀಕರಿಸಬೇಕು. ಅದಕ್ಕೆ ಸೈದ್ಧಾಂತಿಕ ಬದ್ಧತೆ ಬೇಕು. ಯಾವುದೇ ಸರ್ಕಾರ ಬರಲೀ ನಮ್ಮ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಆದರೆ ನಮ್ಮ ಪ್ರತಿಭಟನೆ ಸೆಲೆಕ್ಟೀವ್ ಆದರೆ ಆಗ ಸೈದ್ಧಾಂತಿಕತೆ ಮಣ್ಣು ಮುಕ್ಕುತ್ತದೆ. ಈಗ ಹೀಗಿಯೇ ಆಗುತ್ತಿದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಆಗದಂತೆ ಇಂತಹ ಆರೋಪ ಬರದಂತೆ ಎಚ್ಚರ ಒಹಿಸಬೇಕಾದ್ದು ವೈಚಾರಿಕ ಮತ್ತು ಸಾಹಿತ್ಯ ವಲಯದ ಜವಾಬ್ದಾರಿ ಎಂಬುದು ನನ್ನ ನಂಬಿಕೆ.
ಈ ಸಂಶಯ ನನಗೆ ಬರುವುದಕ್ಕೆ ಮೂಲಭೂತ ಕಾರಣ ನಮ್ಮ ದೇಶದ ರಾಜಕೀಯು ಪಕ್ಷಗಳನ್ನು ನಾವು ನೋಡುವ ರೀತಿಯಲ್ಲಿ ಇರುವ ಲೋಪ. ಭಾರತೀಯ ಜನತಾ ಪಕ್ಷ ಧಾರ್ಮಿಕ ಅಸಹಿಷ್ಣತೆಗೆ ತುಪ್ಪ ಸುರಿಯುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಘಪರಿವಾರ ಮತ್ತು ಅದರ ನಾಯಕರು ಯುದ್ಧವನ್ನು ಗೆದ್ದ ಸೈನ್ಯ ತಾನು ಗೆದ್ದ ಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಮುಂದಾಗುವ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಇವರಿಗೆ ಬೀಜೆಪಿ ಅಧಿಕಾರ ನಡೆಸುತ್ತಿರುವುದು ಹೆಚ್ಚಿನ ಶಕ್ತಿಯನ್ನು ತುಂಬಿದೆ. ನಮದೇ ಸರ್ಕಾರ ಎಂಬ ಹಮ್ಮಿನಲ್ಲಿ ಅಹಂಕಾರದಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟಿಸಿ ಸಂತೋಷ ಪಡುತ್ತಿದೆ ಸಂಘ ಪರಿವಾರ. ಇದನ್ನು ವಿರೋಧಿಸುವ ಸಂದರ್ಭದಲ್ಲಿ ಇದು ಮೋದಿ ಮೇಲಿನ ವಯಕ್ತಿಕ ಧ್ವೇಷದಿಂದ ನಡೆಸುತ್ತಿರುವ ಶಿಸ್ತುಬದ್ಧ ಕಾರ್ಯಾಚರಣೆ ಎಂಬ ಭಾವನೆ ಯಾರಿಗೂ ಬರಕೂಡದು.  ನಮ್ಮ ಸೈದ್ಧಾಂತಿಕತೆ ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗಕೂಡದು.
ಆದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವಾಗ ನಾವು ಎದುರಿಸುವ ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿವೆ.. ಒಂದು ಧರ್ಮದಲ್ಲಿನ ಲೋಪ ಮತ್ತು ಸುಧಾರಣೆಯ ಬಗ್ಗೆ ನಾವು ಮಾತಸಾಡಲು ಪ್ರಾರಂಭಿಸಿದ ತಕ್ಷಣ ಇನ್ನೊಂದು ಧರ್ಮದ ಮೂಲಭೂತವಾದಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ಇಸ್ಲಾಂ ಧರ್ಮ ನಿಂತ ನೇರಾಗಿರುವುದು, ಇಂದಿನ ಬದುಕಿಗೆ ಪೂರಕವಲ್ಲದ ಅಂಶಗಳು ಆ ಧರ್ಮದಲ್ಲಿರುವುದು ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿದ ತಕ್ಷಣ ಹಿಂದೂ ಮೂಲಭೂತವಾದಿಗಳು ಅದನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಲೇ ಈ ದೇಶದ ವೈಚಾರಿಕ ವರ್ಗ ಇಸ್ಲಾಂ ಧರ್ಮದಲ್ಲಿ ಇರಬಹುದಾದ ಮನುಷ್ಯ ವಿರೋಧಿ ನಿಲುವುಗಳ ಬಗ್ಗೆ ಮಾತನಾಡದೇ ಇರಬಹುದು. ಹಾಗೆ ಹಿಂದೂ ಧರ್ಮದಲ್ಲಿ ಇರುವ ಜಾತೀಯತೆ ಮನುಷ್ಯ ವಿರೋಧಿ ಅಂಶಗಳ ಬಗ್ಗೆ ಮಾತನಾಡಿದರೆ ಅದನ್ನು ಇಸ್ಲಾಂ ಮೂಲಭೂತವಾದಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಾರಂಬಿಸುತ್ತಾರೆ. ಈ ಸಂಕೀರ್ಣ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ಎಂಬ ಬಗ್ಗೆ ಮನುಷ್ಯ ಪರವಾದವರೆಲ್ಲ ಯೋಚಿಸಬೇಕಾಗಿದೆ.
ಭಾರತ ಕಂಡ ಇನ್ನೊಬ್ಬ ದಾರ್ಶನಿಕ ಓಷೋ ಅವರು ಹೇಳಿದ ಮಾತುಗಳೊಂದಿಗೆ ನನ್ನ ಈ ಲೇಖನವನ್ನು ಮುಗಿಸಬಹುದು ಎಂದು ನನಗೆ ಅನ್ನಿಸುತ್ತದೆ. ಧರ್ಮದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಓಶೋ ಒಂದೆಡೆ ಹೇಳುತ್ತಾರೆ.
ನಮಗೆ ಬೇಕಾಗಿರುವುದು ಧರ್ಮವಲ್ಲ, ಧಾರ್ಮಿಕತೆ..
ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಧರ್ಮ ಎಂದ ತಕ್ಷಣ ಅಲ್ಲಿ ಮೂಢನಂಬಿಕೆ ಇದೆ. ಮನುಷ್ಯ ವಿರೋಧಿ ಆಚರಣೆ ಇದೆ. ಇನ್ನೊಂದು ಧರ್ಮವನ್ನು ವಿರೋಧಿಸುವ ಟೀಕಿಸುವ ಗುಣವಿದೆ. ತಮ್ಮ ಧರ್ಮಕ್ಕಾಗಿ ಇನ್ನೊಂದು ಧರ್ಮದವರ ರುಂಡವನ್ನು ಚೆಂಡಾದುವ ಪಾಷವೀ ಮನಸ್ಸಿದೆ. ಧರ್ಮ ಆಗಾಗ ರಕ್ತವನ್ನು ಬೇಡುತ್ತಲೇ ಇರುತ್ತದೆ. ಧಾರ್ಮಿಕತೆ ಎನ್ನುವುದು ಹಾಗಲ್ಲ. ಅದು ಒಂದು ಅದ್ಬೂತವಾದ ಮನಸ್ಥಿತಿ. ಧಾರ್ಮಿಕತೆ ನಮ್ಮಲ್ಲಿ ಪ್ರೀತಿಯನ್ನು ಉಕ್ಕಿಸುತ್ತದೆ. ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಧಾರ್ಮಿಕತೆಗೆ ಒಡೆಯುವ ಗುಣ ಇಲ್ಲ. ಅದಕ್ಕಿರುವುದು ಎಲ್ಲವನ್ನೂ ಒಂದುಗೂಡಿಸುವ ಸಮಗ್ರ ದೃಷ್ಟಿ. ನಿಜವಾದ ಧರ್ಮವನ್ನು ಅರ್ಥ ಮಾಡಿಕೊಂಡವರಿಗೆ ಧಾರ್ಮಿಕತೆಯ ಮನಸ್ಸು ಅರಳುತ್ತದೆ. ಆತ ಮನುಷ್ಯ ಪ್ರೇಮಿಯಾಗುತ್ತಾನೆ.
ಒಬ್ಬ ನೈಜ ಮುಸಲ್ಮಾನ್, ಒಬ್ಬ ನೈಜ ಹಿಂದೂ ಒಬ್ಬ ನೈಜ ಕ್ರಿಶ್ಚಿಯನ್ ರ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಅವರೆಲ್ಲ ತಮ್ಮ ಧರ್ಮವನ್ನು ನಂಬುತ್ತಲೇ ಪರ ಧರ್ಮವನ್ನು ಗೌರವಿಸುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿಯ ವರತೆ ಸದಾ ಉಕ್ಕುತ್ತಲೇ ಇರುತ್ತದೆ..


Tuesday, November 10, 2015

ನಮಗೆ ಟಿಪ್ಪೂ ಯಾಕೆ ಬೇಕು..?

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಬೆಂಗಳೂರಿನಲ್ಲಿ ಮಳೆ. ವಿಪರೀತ ಚಳಿ. ಯಾವುದೋ ಟೀವಿಯೊಂದರಲ್ಲಿ ನಿರೂಪಕಿಯೊಬ್ಬರು  ಬಿಜೆಪಿ ಶಾಸಕ ಸಿ.ಟಿ. ರವಿ ಅವರ ಜೊತೆ ಲೈವ್ ಮಾತುಕತೆ ನಡೆಸಿದ್ದಾರೆ.. ರವಿ ವೀರಾವೇಶದಿಂದ ಟಿಪ್ಪು ಸುಲ್ತಾನ್ ಹೇಗೆ ಕನ್ನಡ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿಧಾನ ಸೌಧದಲ್ಲಿ ನಡೆದ ಟಿಪ್ಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪು ಹೆಸರು ಇಡಬೇಕಿತ್ತು ಎಂದು ಹೇಳಿದ ವರದಿ ಬರುತ್ತಿದೆ. ಇದು ಬಂದ ಕೆಲವೇ ಕ್ಷಣಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ್ ವೀರಾವೇಶದಿಂದ ಡಾ, ಕಾರ್ನಾಡ್ ಅವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.
ಇವೆಲ್ಲವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಪರ ಮತ್ತು ವಿರೋಧಿ ಗುಂಪಿನವರು ತಮ್ಮ ತಮ್ಮ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಲು ಯತ್ನ ನಡೆಸುತ್ತಿದ್ದಾರೆ. ಮಡಿಕೇರಿಯ ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಎಂಬವರು ಕಲ್ಲಿನೇಟು ಬಿದ್ದು ಅಸು ನೀಗಿದ ವರದಿ ಚಾನಲ್ ನಲ್ಲಿ ಬರುತ್ತದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿ ಈ ವ್ಯಕ್ತಿ ಅಸು ನೀಗಿದ್ದು ಕಲ್ಲಿ ನೇಟಿನಿಂದ ಅಲ್ಲ, ಮಹಡಿ ಮೇಲಿನಿಂದ ಬಿದ್ದು ಎಂಬ ವಿವರಣೆ ನೀಡುತ್ತದೆ. ಮುಖ್ಯಮಂತ್ರಿಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡುತ್ತಾರೆ. ತಕ್ಷಣ ಸುದ್ದಿ ವಾಹಿನಿಗಳ ಬಗ್ಗೆಯೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಪ್ರಾರಂಭವಾಗುತ್ತದೆ.
ನಾನು ತುಂಬಾ ಆತಂಕದಿಂದ ನೋವಿನಿಂದ ಇದನ್ನೆಲ್ಲ ನೋಡುತ್ತಿದ್ದೇನೆ. ನನಗೆ ದುಃಖ ಬೇಸರ ಆಗುತ್ತಿದೆ. ಬದುಕು ಎಷ್ಟು ಅಸಹನೀಯವಾಗುತ್ತಿದೆ ಎಂದು ನನಗೆ ಅನ್ನಿಸತೊಡಗಿದೆ. ಆಗ ಸುದ್ದಿ ವಾಹಿನಿಯಲ್ಲಿ ಇನ್ನೊಂದು ಸುದ್ದಿ ಬರುತ್ತಿದೆ. ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಅಸು ನೀಗಿದ. ಆತ ಅಸ್ಪತ್ರೆಯ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದಿದ್ದ,,
ಹಾಗಿದ್ದರೆ ಇಬ್ಬರೂ ಮಹಡಿಯ ಮೇಲಿನಿಂದ ಬಿದ್ದರೆ ? ಒಬ್ಬ ಮಾತ್ರ ಮಹಡಿಯ ಮೇಲಿನಿಂದ ಬಿದ್ದು ಸತ್ತರೆ ಕುಟ್ಟುಪ್ಪ ಸತ್ತಿದ್ದು ಹೇಗೆ ? ನನ್ನ ಈ ಪ್ರಶ್ನೆಗೆ ಉತ್ತರ ವಿಲ್ಲ.
ಹೊರಗೆ ಮಳೆ ಸುರಿಯುತ್ತಲೇ ಇದೆ. ಯಾರಿಗೂ ಕಾಯುತ್ತ ಎಲ್ಲಿಯೋ ಕುಳಿತ ನನಗೆ ಬೆಂಗಳೂರು ನನ್ನದಲ್ಲ ಅನ್ನಿಸತೊಡಗಿದೆ. ಕರ್ನಾಟಕ ನನ್ನ ಕರ್ನಾಟಕವಲ್ಲ ಅಲ್ಲ ಎಂದು ಅನ್ನಿಸತೊಡಗಿದೆ.
ಇಂದಿನ ತಂತ್ರ ಜ್ನಾನದ ಯುಗದಲ್ಲಿ ಇಲ್ಲಿಯೇ ನಡೆದ ಘಟನೆಯೊಂದರ ಸತ್ಯಾಸತ್ಯತೆ ನನಗೆ ತಿಳಿಯುತ್ತಿಲ್ಲ. ಹಾಗಿದ್ದರೆ ಸುಮಾರು ೨0೦ ವರ್ಷಗಳ ಹಿಂದಿನ ರಾಜನೊಬ್ಬ ಹೀಗೆ ಇದ್ದ ಎಂದು ನಂಬುವುದು ಹೇಗೆ ? ಟಿಪ್ಪು ಸುಲ್ತಾನ್ ಎಂಬ ವೀರ ಅರಸ ಹೀಗಿದ್ದ ಎಂಬ ಅಂತಿಮ ತೀರ್ಮಾನಕ್ಕೆ ಬರುವುದು ಹೇಗೆ ? ಆದರೆ ಟಿಪ್ಪು ಹೀಗೆಯೇ ಇದ್ದ ಎಂದು ನಂಬಿಕೊಂಡವರು ನಡೆಸುತ್ತಿರುವ ಹೋರಾಟಕ್ಕೆ ರಕ್ತಪಾತಕ್ಕೆ ಅರ್ಥವಿದೆಯೆ ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾನು ಯತ್ನಿಸುತ್ತಿದ್ದೇನೆ. ನನಗೆ ಅನ್ನಿಸುವ ಹಾಗೆ ನಾವು ಆರಾಧನೆ ಮತ್ತು ವಿರೋಧದ ನಡುವೆ ತೊಳಲಾಡುತ್ತಿದ್ದೇವೆ. ನಾವು ಒಮ್ಮೆ ಒಬ್ಬ ವ್ಯಕ್ತಿಯ ಆರಾಧಕರಾಗಿದ್ದರೆ ಇನ್ನೊಬ್ಬ ವ್ಯಕ್ತಿಯ ವಿರೋಧ ಮಾಡುವವರಾಗಿರುತ್ತೇವೆ. ಇದು ಬಹುಮಟ್ಟಿಗೆ ನಮ್ಮ ಆಲೋಚನಾ ಕ್ರಮ, ನಂಬಿಕೆ, ವಿಷಯದ ಗ್ರಹಿಕೆಯ ಮೇಲೆ ನಿಂತಿರುತ್ತದೆ. ನಮ್ಮ ಗ್ರಹಿಕೆಗೆ ಮೂಲ ಸಾಮಗ್ರಿಯಾವುದು ಎಂಬುದೂ ಕುತೂಹಲಕರ. ನಾವು ಎನನ್ನು ನಂಬುತ್ತೇವೆಯೋ ಅದು ಗ್ರಹಿಕೆಗೆ ಮೂಲ ಸಾಮಗ್ರಿ.. ಹೀಗೆ ಆರಾಧನೆ ಮತ್ತು ವಿರೋಧದ ನಡುವೆ ಜೋಕಾಲಿ ಆಡುವ ನಾವು ಅರ್ಥಮಾಡಿಕೊಳ್ಳಲು ಮುಂದಾಗುವುದೇ ಇಲ್ಲ. ಹಾಗಿದ್ದರೆ, ರಾಮ ಕೃಷ್ಣ, ಬುದ್ಧ ಬಸವ ಗಾಂಧಿ ಅಂಭೇಡ್ಕರ್ ಮತ್ತು ಟಿಪ್ಪು ಸುಲ್ತಾನ್ ನನ್ನು ನಾವು ಅರ್ಥ ಮಾಡಿಕೊಳ್ಳಬೇಕೆ ಅಥವಾ ಆರಾಧಿಸಬೇಕೆ ? ಅಥವಾ ವಿರೋಧಿಸಬೇಕೆ ?
ನನಗೆ ಅನ್ನಿಸುವ ಹಾಗೆ ನಾನು ಮೇಲೆ ಹೆಸರಿಸಿದ ಮಹಾನ್ ವ್ಯಕ್ತಿಗಳನ್ನು ನಾವು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿಯೇ ಇಲ್ಲ. ನಾವು ಅವರನ್ನು ಆರಾಧಿಸುತ್ತೇವೆ ಇಲ್ಲವೆ ವಿರೋಧ ಮಾಡುತ್ತೇವೆ. ಇದೇ ಇಂದಿನ ಬಹು ಮುಖ್ಯ ಸಮಸ್ಯೆ ಎಂದು ನನಗೆ ಅನ್ನಿಸುತ್ತದೆ. ನಾವು ಯಾರನ್ನಾದರೂ ವಿರೋಧಿಸಲು ಪ್ರಾರಂಭಿಸಿದ ತಕ್ಷಣ ಅವರಲ್ಲಿರುವ ವಿರೋಧಿಸುವ ಗುಣಗಳೇ ನಮಗೆ ಕಾಣತೊಡಗುತ್ತದೆ. ಹಾಗೆ ಆರಾಧಿಸಲು ಪ್ರಾರಂಭಿಸಿದರೂ ಆಗುವುದು ಹಾಗೆ. ಆರಾಧನೆ ನಮ್ಮ ತರ್ಕ ಮತ್ತು ಆಲೋಚನೆಯ ಬಾಗಿಲುಗಳನ್ನು ಮುಚ್ಚಿ ಬಿಡುತ್ತದೆ. ಇದು ನಮ್ಮ ಮನಸ್ಸಿನ ಮಿತಿ.
ಈ ದೇಶದಲ್ಲಿ ಆಗಿದ್ದು ಅದೇ. ಇಲ್ಲಿ ರಾಮ ಕೃಷ್ಣ ಗಾಂಧಿ ಬಸವ ಅಂಬೇಡ್ಕರ್, ಬುದ್ಧ ಬಸವರ ಆರಾಧಕರಿದ್ದಾರೆ, ಅವರನ್ನು ವಿರೋಧಿಸುವವರಿದ್ದಾರೆ. ಆದರೆ ಅರ್ಥ ಮಾಡಿಕೊಳ್ಳುವವರು ಇಲ್ಲವೇ ಇಲ್ಲ. ಈಗ ಟಿಪ್ಪು ಸುಲ್ತಾನ್ ವಿಚಾರಕ್ಕೆ ಬರೋಣ. ಟಿಪ್ಪು ಸುಲ್ತಾನ್ ಕರ್ನಾಟಕದ ಮಹಾನ್ ಶೂರ ಅರಸರಲ್ಲಿ ಒಬ್ಬ. ಆತನ ಶೌರ್ಯಕ್ಕೆ ಎಣೆಯೇ ಇಲ್ಲ. ಆತ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ತನ್ನ ಜೀವವನ್ನೇ ಬಲಿ ಕೊಟ್ಟ..ತನ್ನ ವಿರೋಧಿಗಳಾದ ಬ್ರೀಟೀಷರನ್ನು ಮಣಿಸಲು ಆಧುನಿಕ ಯುದ್ಧ ತಂತ್ರವನ್ನು ಬಳಸಿದ. ಹೀಗಾಗಿ ಆತ ಮೈಸೂರು ರಾಜ್ಯದ ಹೆಮ್ಮೆ..
ಆಗಿನ ಬ್ರೀಟೀಷ್ ಇಂಡಿಯಾದಲ್ಲಿ ಹಲವಾರು ಅರಸೊತ್ತಿಗೆಗಳಿದ್ದವು. ಎಲ್ಲ ಅರಸೊತ್ತಿಗೆಗಳು ಬ್ರಿಟೀಷರಿಗೆ ಸೋತು ಕಪ್ಪ ಕಾಣಿಕೆ ಸಲ್ಲಿಸಿ ಅವರ ಗುಲಾಮರಂತೆ ಬದುಕುತ್ತಿದ್ದರು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ. ಆದರೆ ಟಿಪ್ಪುವನ್ನು ಅರ್ಥ ಮಾಡಿಕೊಳ್ಳಲು ಇವಿಷ್ಟೇ ಮಾಹಿತಿ ಸಾಲದು. ಇನ್ನು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಉತ್ತರ ಕಂಡುಕೊಳ್ಳಲು ಯತ್ನ ನಡೆಸೋಣ..
ಟಿಪ್ಪು ಒಬ್ಬ ಹಿಂದೂ ದ್ರೋಹಿ ಎಂಬ ಆರೋಪ ದ ಬಗ್ಗೆ ನೋಡೋಣ..  ಈ ಬಗ್ಗೆ ಮಾತನಾಡುವ ಬಲಪಂಥೀಯರು ಆತ ಕೇರಳದಲ್ಲಿ ನಡೆಸಿದ ದೌರ್ಜನ್ಯದ ಬಗ್ಗೆ ಅಲ್ಲಿ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ ಬಗ್ಗೆ ಮಾತನಾಡುತ್ತಾರೆ. ಟಿಪ್ಪುವನ್ನು ಸಮರ್ಥಿಸುವವವರು ಆತ ಶ್ರಿಂಗೇರಿ ಮಠಕ್ಕೆ ನೀಡಿದ ರಕ್ಷಣ ನಂಜನಗೂಡು ನಂಜುಂಡೇಶ್ವರಿಗೆ ನಡೆದುಕೊಳ್ಳುತಿದ್ದ ಬಗ್ಗೆ ವಿವರಗಳನ್ನು ನೀಡಿ ಸಮರ್ಥಿಸಿಕೊಳ್ಳುತ್ತಾರೆ. ಅದರೆ ಸತ್ಯ ಈ ಸಮರ್ಥನೆ ಮತ್ತು ಟೀಕೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಮೀರಿ ನಾವು ನೋಡಿದರೆ ಮಾತ್ರ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ನನಗೆ ಅನ್ನಿಸುತ್ತದೆ.
ಟಿಪ್ಪು ಅಧಿಕಾರ ನಡೆಸಿದ ಕಾಲಘಟ್ಟದಲ್ಲಿ ಅರಸನಾದವ ಹೇಗಿರುತ್ತಿದ್ದ ಎಂಬುದನ್ನು ಮೊದಲನೇಯದಾಗಿ ನಾವು ತಿಳಿದುಕೊಳ್ಳಬೇಕು. ಆಗಿನ ಕಾಲದಲ್ಲಿ ಈ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಯಾವುದೇ ಅರಸರು ಸಂಪೂರ್ಣವಾಗಿ ಹಿಂದೂ ವಿರೋಧಿಯಾಗಿರಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಬಹುಸಂಖ್ಯಾತರಾದ ಹಿಂದುಗಳ ವಿರೋಧವನ್ನು ಕಟ್ಟಿಕೊಂಡು ಅವರು ಆಡಳಿತ ನಡೆಸುವುದು ಸಾಧ್ಯವಿರಲಿಲ್ಲ. ಹೀಗಾಗಿಯೇ ಮುಸ್ಲಿಂ ಅರಸರು, ಸುಲ್ತಾನರು, ಮಾಂಡಲೀಕರು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರಾಕರಿಸುತ್ತಿರಲಿಲ್ಲ. ಆದರೆ ತಾವು ನಂಬಿದ ಇಸ್ಲಾಂ ಧರ್ಮವನ್ನು ಪ್ರಸಾರ ಮಾಡಲು ಅವರು ಯತ್ನ ನಡೆಸುತ್ತಿದ್ದುದು ನಿಜ..ಆದರೆ ಆತ ಹಿಂದೂ ಧರ್ಮಕ್ಕೆ ಸೇರಿದ ಅರಸನಿರಲಿ, ಅಥವಾ ಇಸ್ಲಾಂ ಧರಕ್ಕೆ ಸೇರಿದ ಅರಸರಿರಲೀ ಅವರಲ್ಲಿ ಕೆಲವೊಂದು ಸಮಾನ ಗುಣಗಳಿದ್ದವು. ಅದು ಇನ್ನೊಂದು ರಾಜ್ಯದ ಮೇಲೆ ಆಕ್ರಮಣ ನಡೆಸಿದಾಗ ಅವರು ಅನುಸರಿಸುತ್ತಿದ್ದ ಯುದ್ಧದ ರಿವಾಜುಗಳಿಗೆ ಸಂಬಂಧಿಸಿದ್ದು.  ತಮ್ಮ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡವುದಕ್ಕಾಗಿ ಎಲ್ಲ ಧರ್ಮದ ಅನುಯಾಯಿಗಳಿಗೆ ಸಮಾನ ಗೌರವ ಕೊಡುತ್ತಿದ್ದ ಅವರು ಬೇರೆ ರಾಜ್ಯದ ಮೇಲೆ ಧಾಳಿ ಮಾಡಿದಾಗ ಬದಲಾಗಿ ಬಿಡುತ್ತಿದ್ದರು. ಆಗ ಸೈನ್ಯ ನಿಜವಾದ ಅರ್ಥದಲ್ಲಿ ಸೈನ್ಯವಾಗಿಯೇ ವರ್ತಿಸುತ್ತಿತ್ತು. ಇದನ್ನು ನಾನು ಸೈನ್ಯದ ಮನಸ್ಥಿತಿ ಎಂದೇ ಕರೆಯುತ್ತೇನೆ. ಈಗಲೂ ಭಾರತ ಮತ್ತು ಪಾಕಿಸ್ಥಾನದ ಸೈನಿಕರ ಚಟವಟಿಕೆಯನ್ನು ಗಮನಿಸಿದರೆ ಸೈನ್ಯದ ಈ ಮನಸ್ಥಿತಿ ನಮಗೆ ಅರ್ಥವಾಗುತ್ತದೆ. ಈ ಮನಸ್ಥಿತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಒಂದು ದೇಶವನ್ನು ಗೆದ್ದ ತಕ್ಷಣ ಗೆದ್ದ ಸಐನಿಕರು ಮೊದಲು ಮಾಡುತ್ತಿದ್ದುದು ಲೂಟಿ. ಜೊತೆಗೆ ಹಿಂದಿನ ಕಾಲದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಸಂಪತ್ತನ್ನು ಬಚ್ಚಿಡುತ್ತಿದ್ದುದು ಸಾಮಾನ್ಯವಾಗಿತ್ತು. ಹೀಗಾಗಿ ವೈರಿ ಸೈನಿಕರು ತಾವು ಧಾಳಿ ಮಾಡಿದೆ ದೇಶದ ದೇವಾಲಾಯಗಳನ್ನು ಮೊದಲ ಟಾರ್ಗೇಟ್ ಮಾಡುತ್ತಿದ್ದರು. ಜೊತೆಗೆ ತಮ್ಮ  ಮೂಲ ರಾಜ್ಯದಲ್ಲಿ ಎಲ್ಲ ಧರ್ಮಗಳೀಗೂ ಸಮಾನವಾದ ಅವಕಾಶ ರಕ್ಷಣೆ ಕೊಡುತ್ತಿದ್ದ ಅರಸರು ತಮ್ಮ ಸಾಮ್ರ್ವಾಜ್ಯ ವಿಸ್ತರಣೆಯ ಆಸೆಯಿಂದ ಧಾಳಿ ನಡೆಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡ ಪ್ರದೇಶಗಳಲ್ಲಿ ಮೊದಲು ಸಂಪತ್ತಿನ ಲೂಟಿ ಮಾಡುತ್ತಿದ್ದರು. ನಂತರ ಶಾಂತಿ ನೆಲಸಿದ ಮೇಲೆ ಅವರು ಎಲ್ಲರಿಗೂ ಬೇಕಾದ ರೀತಿಯ ಆಡಳಿತ ನೀಡಲು ಯತ್ನ ನಡೆಸುತ್ತಿದ್ದರು..ಈ ಹಿನ್ನೆಲೆಯಲ್ಲಿ ಟಿಪ್ಪೂ ಸುಲ್ತಾನ್ ಕೇರಳ ಮತ್ತು ಮಲಬಾರಿನಲ್ಲಿ ನಡೆಸಿದನೆನ್ನಲಾದ ದೌರ್ಜನ್ಯವನ್ನು ನೋಡಬೇಕು..
ಇನ್ನು ಮೈಸೂರು ರಾಜ್ಯವನ್ನು ಒಡೆಯರರಿಂದ ಕಸುದುಕೊಂಡ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ತುಂಬಾ ಜಾಣ ತನದಿಂದ ಅಧಿಕಾರ ನಡೆಸಲೇ ಬೇಕಾಗಿತ್ತು. ಅವರ ಅಧಿಕಾರ ಉಳಿಯಬೇಕು ಎಂದಾದರೇ ಮೈಸೂರು ರಾಜ್ಯದಲ್ಲಿ ಶಾಂತಿ ನೆಲಸಬೇಕಾದ್ದು ಅನಿವಾರ್ಯವಾಗಿತ್ತು. ಅವರು ಹಿಂದೂ ವಿರೋಧಿಗಳಾಗಿ  ರಾಜ್ಯದಲ್ಲಿ ಶಾಂತಿ ನೆಲಸುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಇದು ಕಸಿದುಕೊಂಡ ರಾಜ್ಯವಾದ್ದರಿಂದ ಅವರಿಗೆ ರಾಜ್ಯದ ಜನ ಮೆಚ್ಚುವ ಹಾಗೆ ಅಧಿಕಾರ ನಡೆಸುವುದು ಅನಿವಾರ್ಯವಾಗಿತ್ತು ಇದನ್ನು ಅರಿಯದಷ್ಟು ಟಿಪ್ಪು ಸುಲ್ತಾನ್ ಮೂರ್ಖನಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಂಗೇರಿಯ ಮೇಲೆ ಮರಾಠರು  ನಡೆಸಿದ ಧಾಳಿಯ ಘಟನೆಯನ್ನು ನೋಡೋಣ. ಮರಾಠಿಗರು ಎಂಥಹ ಹಿಂದೂ ಧರ್ಮ ಪರಿಪಾಲಕರು ಎಂದು ಹೆಸರು ಪಡೆದಿರಲಿ ಮೈಸೂರು ರಾಜ್ಯದ ಶ್ರೀಂಗೇರಿ ಅವರ ಪಾಲಿಗೆ ಪಕ್ಕದ ರಾಜ್ಯದ ಒಂದು ಕ್ಷೇತ್ರ. ಜೊತೆಗೆ ಶಂಕರಾಚಾರ್ಯರಿಂದ ಸ್ಥಾಪಿತವಾದ ಈ ಮಠ ಆಗ ಪ್ರಭಾವಶಾಲಿಯಾಗಿತ್ತು. ಅದಕ್ಕೆ ರಾಜಾಶ್ರಯ ದೊರಕುತ್ತಲೇ ಇದ್ದುದುರಿಂದ ಮಠದಲ್ಲಿ ಅಪಾರ ಸಂಪತ್ತು ಇದೆ ಎಂಬ ನಂಬಿಕೆ ಕೂಡ ಇತ್ತು. ಇದರಿಂದಾಗಿ ಮರಾಠಿಗರು ಈ ಮಠದ ಮೇಲೆ ಧಾಳಿ ನಡೆಸಿರಬಹುದು.ಅಂದರೆ ಕೆರಳದ ಮೇಲೆ ಧಾಳಿ ನಡೆಸಿದ ಟಿಪ್ಪು ಮನಸ್ಥಿತಿ ಹಾಗೂ ಶ್ರೀಂಗೇರಿ ಮೇಲೆ ಧಾಳಿ ನಡೆಸಿದ ಮರಾಠಿಗಳ ಮನಸ್ಥಿತಿ ಆ ಕಾಲ ಘಟ್ಟದ ಅರಸರ ಸಾಮಾನ್ಯ ಮನಸ್ಥಿತಿಯಾಗಿತ್ತು. ಇದಕ್ಕೆ ಇರುವುದು ಆರ್ಥಿಕ ಕಾರಣಗಳೇ ಹೊರತೂ ಧಾರ್ಮಿಕ ಕಾರಣಗಳಲ್ಲ. ಇದನ್ನು ಧಾರ್ಮಿಕ ಕಾರಣಗಳೆಂದು ವಿಶ್ಲೇಷಿಸುವುದು ಸರಿಯಲ್ಲ.
ಶ್ರಿಂಗೇರಿ ಮಠಕ್ಕೆ ಟಿಪ್ಪು ಸುಲ್ತಾನ್ ನೀಡಿದ ರಕ್ಷಣೆಯನ್ನು ನಾವು ಧಾರ್ಮಿಕ ಆಯಾಮದಲ್ಲಿ ನೋಡಬೇಕಾಗಿಲ್ಲ. ಈ ಆಧಾರವನ್ನು ಇಟ್ಟುಕೊಂಡು ಆತ ಧರ್ಮ ನಿರಪೇಕ್ಷ ರಾಜನಾಗಿದ್ದ ಎಂಬ ತೀರ್ಮಾನಕ್ಕೆ ಬರುವುದೂ ಕಷ್ಟ. ಯಾಕೆಂದರೆ ಶ್ರಿಂಗೇರಿ ಮಠ ಕೇವಲ ಬ್ರಾಹ್ಮಣರ ಮಠವಾಗಿ ಇರಲಿಲ್ಲ. ದಕ್ಷಿಣ ಕನ್ನಡದ ಒಕ್ಕಲಿಗರೂ ಸೇರಿದಂತೆ ಭಾರಿ ಸಂಖ್ಯೆಯ ಶಿಷ್ಯರು ಆ ಮಠಕ್ಕೆ ಇದ್ದರು. ಒಂದೊಮ್ಮೆ ಶ್ರಿಂಗೇರಿ ಮಠಕ್ಕೆ ಟಿಪ್ಪು ರಕ್ಷಣೆ ನೀಡದಿದ್ದರೆ ಈ ಜನ ಸಮುದಾಯದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇತ್ತು. ಹೀಗಾಗಿ ಆತ ಈ ಮಠಕ್ಕೆ ರಕ್ಷಣೆ ನೀಡಿದ. ಜೊತೆಗೆ ತಾನು ಯಶಸ್ವಿ ರಾಜನಾಗಬೇಕು ಎಂಭ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದ ಆತ ಹಿಂದೂಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಣನಾಗಿದ್ದ..
ತನ್ನ ರಾಜ್ಯದಲ್ಲಿರುವ ಹಿಂದೂಗಳಿಗೆ ಆಡಳಿತದಲ್ಲಿ ಎಲ್ಲ ರೀತಿಯ ಪಾಲುದಾರಿಕೆಯನ್ನು ಆತ ನೀಡಿದ್ದ. ಆತ ಮೈಸೂರು ರಾಜ್ಯದಲ್ಲಂತೂ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದ. ಆದರೆ ಇದು ಆತ ಧರ್ಮನಿರಪೇಕ್ಷ ಮನೋಭಾವದಿಂದ ಮಾಡಿದನೇ ಅಥವಾ ತನ್ನ ರಾಜ್ಯದ ಹಿಂದೂಗಳಲ್ಲಿ ಅಶಾಂತಿ ಮೂಡಿದರೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಿನಿಂದ ಮಾಡಿದನೋ ಹೇಳುವುದು ಕಷ್ಟ. ಕಾರಣ ಏನೇ ಇರಲಿ ಆಥ ಮೈಸೂರು ರಾಜ್ಯದಲ್ಲಿ ಹಿಂದೂ ಧರ್ಮದ ಸಂರಕ್ಷನಂತೆ ಆಡಳಿತ ನಡೆಸಿದ್ದು ಐತಿಹಾಸಿಕ ಸತ್ಯ.
ಇಪ್ಪು ಸುಲ್ತಾನ್ ಒಬ್ಬ ಮಹಾನ್ ದೇಶಪ್ರೇಮಿಯಾಗಿದ್ದ ಎಂಬ ಹೇಳಿಕೆಯನ್ನು ಈಗ ವಿಶ್ಲೇಷಿಸೋಣ. ಆಗಿನ ಟಿಪ್ಪು ಆಡಳಿತ ನಡೆಸಿದ ಕಾಲದಲ್ಲಿ ದೇಶ ಎಂದರೇನು ? ಆಗ ದೇಶ ಎಂದರೆ ಯಾವ ಯಾವ ಭೂಪ್ರದೇಶ ಸೇರಿತ್ತು ?
ಬ್ರಿಟೀಷರು ಭಾರತಕ್ಕೆ ಬರುವ ಸಮಯದಲ್ಲಿ ಈಗಿನ ದೇಶದ ಕಲ್ಪನೆ ಇರಲಿಲ್ಲ. ಆಗ ಈ ದೇಶದಲ್ಲಿ ಇದ್ದವರು ಹಲವಾರು ಅರಸರು, ಸಾಮ್ರಾಟರು ಮಾಂಡಲೀಕರು. ಉತ್ತರ ಭಾರತವನ್ನು ಆಳುತ್ತಿದ್ದವರಿಗೆ ಅವರು ಆಳುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು. ದಕ್ಷಿಣದಲ್ಲಿ ಆಳುತ್ತಿದ್ದವರಿಗೆ ಅದೇ ಅವರ ದೇಶವಾಗಿತ್ತು. ಈ ದೇಶದ ಪ್ರಬಲ ರಾಜಸತ್ತೆ ಮತ್ತು ಸಾಮ್ರಾಜ್ಯಗಳು ನಾಶವಾದ ಮೇಲೆ ಬೇರೆ ಬೇರೆ ಭಾಗಗಳಲ್ಲಿ ಬೇರೆ ಅರಸರು ಆಡಳಿತ ನಡೆಸುತ್ತಿದ್ದರು. ಅವರು ಆಡಳಿತ ನಡೆಸುತ್ತಿದ್ದ ಪ್ರದೇಶವೇ ಅವರ ದೇಶವಾಗಿತ್ತು.
ದಕ್ಷಿಣದಲ್ಲಿ ವಿಜಯ ನಗರ ಸಾಮ್ರಾಜ್ಯ ನಾಶವಾದ ಮೇಲೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತ ಬಂದವರು ಮೈಸೂರು ಅರಸರು. ಇವರು ಅಂತಹ ಮಹಾನ್ ಹೋರಾಟಗಾರರೂ ಸಾಮ್ರಾಜ್ಯವನ್ನು ವಿಸ್ತರಿಸುವ ಮಹಾತ್ವಾಕಾಂಕ್ಷೆ ಉಳ್ಳವರೂ ಆಗಿರಲಿಲ್ಲ. ಅವರು ಕತ್ತಿ ಹಿಡಿದು ಹೋರಾಟ ಮಾಡಿದ್ದೂ ಕಡಿಮೆ. ಹೀಗಾಗಿ ಮೈಸೂರು ರಾಜ್ಯ ಒಂದು ಸಣ್ಣ ರಾಜ್ಯವಾಗಿತ್ತು. ಈ ರಾಜ್ಯವನ್ನು ತನ್ನದಾಗಿ ಮಾಡಿಕೊಂಡವರು ಹೈದರಾಲಿ. ಆತ ಯುದ್ಧ ಕಲೆಯ ನಿಪುಣನಾಗಿದ್ದ.  ಆತನ ಮಗ ಟಿಪ್ಪೂ ಸುಲ್ತಾನ್ ಮಹಾನ್ ಶೂರ ಮತ್ತು ಧೀರ. ಆತ ಅರಸನಾದ ಮೇಲೆ ಸಾಮ್ರಾಜ್ಯ ವಿಸ್ತರಣೆಯ ಕನಸುಕಂಡ..ಮೈಸೂರು ರಾಜ್ಯವನ್ನು ಒಂದು ಮಾಧರಿ ರಾಜ್ಯವನ್ನಾಗಿ ಮಾಡುವ ಯೋಜನೆಯನ್ನು ರೂಪಿಸಿದ. ಸ್ವಾಭಿಮಾನಿಯಾದ ಆತ ತನ್ನ ರಾಜ್ಯವನ್ನು ಬ್ರೀಟೀಷರಿಗೆ ಒಪ್ಪಿಸಲು ಸಿದ್ಧನಿರಲೇ ಇಲ್ಲ. ಇದು ಅಂದಿನ ಕಾಲದಲ್ಲಿ ಸ್ವಾಭಿಮಾನಿ ಮತ್ತು ಶೌರ್ಯವಂತ ರಾಜ ಮಾಡುವ ಕೆಲಸವೇ. ತೆಗೆದುಕೊಳ್ಳುವ ನಿಲುಮೆಯೇ..  ಈ  ನಿಲುಮೆಯನ್ನು ನಾವು ಇಂದಿನ ಅರ್ಥದಲ್ಲಿ ದೇಶಭಕ್ತಿ ಎಂದು ಕರೆಯಬೇಕೆ ಅಥವಾ ರಾಜಭಕ್ತಿ ಎಂದು ಕರೆಯಬೇಕೆ ? ಸಮಗ್ರ ಭಾರತದ ಕಲ್ಪನೆಯೇ ಇಲ್ಲದ ಕಾಲದಲ್ಲಿ ರಾಜನೊಬ್ಬ ನಡೆದುಕೊಂಡ ರೀತಿ ರಾಜ್ಯ ಪ್ರೀತಿಯೇ ಅಥವಾ ಇಂದಿನ ಅಖಂಡ ಭಾರತದೆಲ್ಲಿ ಮಾತನಾಡುವ ದೇಶಪ್ರೇಮವೆ ? ಇದು ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿತವಾಗಿದೆ.
ಇನ್ನು ಟಿಪ್ಪು ಸುಲ್ತಾನ ಬಹಳಷ್ಟು ಹಿಂದೂಗಳನ್ನು ಮತಾಂತರ ಮಾಡಿದ ಎಂಬ ಆರೋಪವನ್ನು ನೋಡೋಣ. ಒಂದು ಜಾತಿ ಮತ್ತು ಕೋಮಿಗೆ ಸೇರಿದ ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆ ಹಿಡಿದ ತಕ್ಷಣ ಆ ಜಾತಿ ಮತ್ತು ಕೋಮಿನ ಜನರಿಗೆ ಒಂದು ರೀತಿಯ ಹುಚ್ಚು ಧೈರ್ಯ ಬರುತ್ತದೆ. ಅದು ಎಲ್ಲ ರಾಜ ಮಹಾರಾಜರ ಕಾಲದಲ್ಲಿ ನಡೆದಿದ್ದೇ. ಅದು ಕೇವಲ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ವಿದ್ಯಮಾನವಲ್ಲ. ಈ ದೇಶದಲ್ಲಿ ಹಿಂದೂಗಳು ರಾಜ್ಯಭಾರ ನಡೆಸಿದಾಗ ಹಿಂದೂ ದೇವಾಲಯಗಳ ನಿರ್ಮಾಣವಾಗಿದೆ. ಜೈನರು ಆಡಳಿತ ನಡೆಸಿದಾಗ ಜೈನ ಬಸದಿಗಳ ನಿರ್ಮಾಣವಾಗಿದೆ. ಬೌದ್ಧ ಧರ್ಮದ ರಾಜರು ಬಂದಾಗ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕಿದೆ. ಹಾಗೆ ಇಸ್ಮಾಂ ಧರ್ಮದ ಅನುಯಾಯಿಗಳು ಅಧಿಕಾರ ನಡೆಸಿದಾಗ ಇಸ್ಮಾಂ ಗೆ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಇದು ಟಿಪ್ಪು ಕಾಲದಲ್ಲಿ ಮಾತ್ರ ನಡೆದ ವಿಶೇಷ ವಿಧ್ಯಮಾನವಲ್ಲ. ಹೀಗಾಗಿಯೇ ಈ ದೇಶದ ದೇವಾಲಯಗಳ ಕೆಳಗೆ ಬಸದಿಯ ಕುರುಹಿಗಳು ದೊರಕುತ್ತವೆ. ಮಸೀದಿಗಳ ಕೆಳಗೆ ದೇವಾಲಯಗಳ ಕುರುಹುಗಳು ದೊರಕುತ್ತವೆ. ಬೌದ್ಧರ ಸ್ಪೂಪಗಳು ನಾಶವಾಗಿ ದೇವಾಲಯಗಳು ಕಾಣುತ್ತವೆ. ಈ ವಿಚಾರದಲ್ಲಿ ತಿರುಪತಿ ತಿಮ್ಮಪ್ಪನೇ ತೀರ್ಥಂಕರ ಎಂಬ ವಾದವೂ ಇದೇ. ಇದೆಲ್ಲ ಈ ದೇಶದ ಇತಿಹಾಸ. ಹಾಗೆ ಟಿಪ್ಪೂ ಕನ್ನಡ ವಿರೋಧಿ ಎಂಬ ಆರೋಪವನ್ನು ನೋಡಿ. ಕನ್ನಡ ಪ್ರೇಮದ ಇಂದಿನ ಮಾನದಂಡಕ್ಕೂ ಟಿಪ್ಪೂ ಕಾಲದಲ್ಲಿದ್ದ ಭಾಷಾ ಪ್ರೇಮಕ್ಕೂ ವ್ಯತ್ಯಾಸವಿದೆ, ಅಂದು ವಾಟಾಳ್ ನಾಗಾರಾಜ್, ನಾರಾಯಣ ಗೌಡರಂತಹ ಹೋರಾಟಗಾರರು ಇರಲಿಲ್ಲ. ಭಾಷಾ ಪ್ರೇಮ ಇಂದು ಸಮಾಜದಲ್ಲಿ ಯಾವ ಮಹತ್ವನ್ನು ಪಡೆದಿದೆಯೋ ಅಷ್ಟು ಮಹತ್ವವನ್ನು ಪಡೆದಿರಲಿಲ್ಲ. ಇಂಡಿಯಾದ ಹೊರಗೆ ಹಲವಾರು ದೇಶಗಳ ಜೊತೆ ವಾಣಿಜ್ಯ ಸಂಬಂಧವನ್ನು ಹೊಂದಲಿಉ ಬಯಸಿದ್ದ ಆತನಿಗೆ ಕನ್ನಡಕ್ಕೆ ಹೊರತಾಗಿದ್ದ ಭಾಷೆಯೊಂದು ಬೇಕಾಗಿತ್ತು. ಹೀಗಾಗಿ ಆತ ಪರ್ಷಿಯನ್ ಭಾಷೆಯನ್ನು ಬಳಸಿರಬಹುದು. ಜೊತೆಗೆ ಕೊಲ್ಲಿ ರಾಷ್ಟಗಳ ಜೊತೆ ಹೆಚ್ಚಿನ ವಾಣಿಜ್ಯ ಸಂಬಂಧವನ್ನು ಹೊಂದಿದ್ದೂ ಇದಕ್ಕೆ ಕಾರಣವಾಗಿರಬಹುದು. ಇದನ್ನು ಅರ್ಥ ಮಾಡಿಕೊಳ್ಳದೇ ಇಂದಿನ ಕನ್ನಡ ಹೋರಾಟಗಾರರ ಭಾಷೆ ಮತ್ತು ಕನ್ನಡ ಪ್ರೇಮದ ವ್ಯಾಖ್ಯೆಯನ್ನು ಮಾಡಿದರೆ ಅದು ಮೂರ್ಖತನವಲ್ಲವೆ ?
ಈ ವಿಚಾರದಲ್ಲೆ ಕೇವಲ ಟಿಪ್ಪೂ ಸುಲ್ತಾನನನ್ನು ಮಾತ್ರ ಪ್ರತ್ಯೇಕಿಸಿ ಆತ ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವುದು ಹೀನ  ಮನಸ್ಸುಗಳು ಮಾತ್ರ. ರಾಜ ,ಮಹಾರಾಜರ ಕಾಲದಲ್ಲಿನ ವಿದ್ಯಮಾನವನ್ನು ಇಂದಿನ ಧರ್ಮ ನಿರಪೇಕ್ಷತೆಯ ಮಾನದಂಡದಲ್ಲಿ ನೋಡಲು ಪ್ರಾರಂಭಿಸಿದ ತಕ್ಷಣ ನಾವು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ನಾವು ಇವತ್ತು ಯೋಚಿಸುವ ರೀತಿಯಲ್ಲಿ ಯಾವುದೋ ಕಾಲದಲ್ಲಿದ್ದ ಐತಿಹಾಸಿಕ ವ್ಯಕ್ತಿಗಳು ಅಥವಾ ನಾವು  ನಂಬುವ ಪುರಾಣದಲ್ಲಿ ಇರುವ ಪಾತ್ರಗಳು ಇರಬೇಕಿತ್ತು ಎಂದು ವಾದಿಸುವುದು ಮೂರ್ಖತನ. ಕಾಲವನ್ನು ಮರೆತು ವ್ಯಕ್ತಿ ಅಥವಾ ವಸ್ತುವನ್ನು ವಿಶ್ಲೇಷಿಸುವುದನ್ನು ಒಪ್ಪಲಾಗದು. ರಾಮ ಅಪ್ಪನಿಲ್ಲದ ಮಗ ಎಂದು ವಾದಿಸುವುದು ಎಷ್ಟು ಮೂರ್ಖತನದ್ದೋ, ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದ ಎಂದು ವಾದಿಸುವುದು  ಅಷ್ಟೇ ಮೂರ್ಖತನ.
ಹಾಗಿದ್ದರೆ ಈವತ್ತು ಟಿಪ್ಪೂ ನಮಗೆ ಯಾಕೆ ಬೇಕು ? ಟಿಪ್ಪು ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.
ಹಲವು ಧರ್ಮ ನಂಬಿಕೆ, ಜಾತಿಯನ್ನು ಹೊಂದಿರುವ ಈ ದೇಶದಲ್ಲಿ ಪ್ರತ್ರಿಯೊಂದು ಜಾತಿ ಕೋಮಿಗೆ ಒಂದು ಪ್ರತಿಮೆಯ ಅಗತ್ಯ ಇದೆ. ಅದು ಅಯಾ ಜಾತಿ ಮತ್ತು ಕೋಮಿನ ಸ್ವಾಭೀಮಾನ ಮತ್ತು ಹೋರಾಟಕ್ಕೆ ಶಕ್ತಿಯನ್ನು ತುಂಬುತ್ತದೆ. ಬ್ರಾಹ್ಮಣರಿಗೆ ಶಂಕರಾಚಾರ್ಯ, ಮದ್ವಾಚಾರ್ಯ ರಾಮಾನುಜಾಚಾರ್ಯರಿದ್ದಾರೆ. ಲಿಂಗಾಯಿತರಿಗೆ ಬಸವಣ್ಣನಿದ್ದಾನೆ. ಒಕ್ಕಲಿಗರಿಗೆ ಒಕ್ಕಲಿಗರ ಮಠ ಮತ್ತು ಸ್ವಾಮೀಜಿ ಅವರನ್ನು ಪ್ರತಿನಿಧಿಸುವ ಪ್ರತಿಮೆಯಾಗಿದೆ. ಕುರುಬರು ಕನಕದಾಸರನ್ನು ತಮ್ಮ ಇತಿಹಾಸದ ಪ್ರತಿಮೆಯನ್ನಾಗಿ ಕಂಡುಕೊಳ್ಳುತ್ತಿದ್ದಾರೆ. ಕ್ರಿಶ್ಚಿಯನ್ನರಿಗೆ ಏಸು ಇದ್ದಾನೆ. ದಲಿತರಿಗೆ ತಮ್ಮ ಇತಿಹಾಸವನ್ನು ಪ್ರತಿನಿಧಿಸುವ ಸ್ವಾಭಿಮಾನವನ್ನು ಹೆಚ್ಚುಸುವ ತಮಗೂ ಇತಿಹಾಸವಿದೆ ಎಂದು ಹೇಳುವ ಇಂತಹ ಪ್ರತಿಮೆ ಇಲ್ಲ. ಹೀಗಾಗಿ ದಲಿತರು ಎದೆ ಉಬ್ಬಿಸಿ ನಿಲ್ಲುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಈ ದೇಶದ ಮುಸ್ಲೀಂರಿಗೆ ಇಂತಹ ಪ್ರತಿಮೆ ಒಂದರ ಅಗತ್ಯ ಇದೆ.. ಆ ಪ್ರತಿಮೆಯನ್ನು ಅವರು ಟಿಪ್ಪುವಿನಲ್ಲಿ ಕಂಡುಕೊಳ್ಳುತ್ತಿದ್ದಾರೆ. ಮುಸ್ಲೀಂ ಇತಿಹಾಸದ ಹೆಜ್ಜೆಗುರುತುಗಳನ್ನು ನೆನಪಿಸುವ ಅವರ ಸ್ವಾಭಿಮಾನ ಮತ್ತು ದೇಶಪ್ರೇಮವನ್ನು ಎಚ್ಚೆರಿಸುವ ಸಂಕೇತ ಮತ್ತು ಪ್ರತಿಮೆಯಾಗಿ ಟಿಪ್ಪೂ ಸುಲ್ತಾನ ಕಂಡರೆ ಅದನ್ನು ಸ್ವಾಗತಿಸಬೇಕಾದ್ದು ಈ ದೇಶದ ಎಲ್ಲರ ಕರ್ತವ್ಯ. ಇದನ್ನು ಬಿಟ್ಟು ಟಿಪ್ಪು ಹಾಗಿದ್ದ ಹೀಗಿದ್ದ ಎಂದು ವಾದ ಮಾಡುತ್ತ ಕರ್ನಾಟಕದ ಮುಸ್ಲೀಂ ಸಮುದಾಯವನ್ನು ಹೀಗಳಿಯುವುದು ಸರಿಯಾದುದಲ್ಲ. ಇತಿಹಾಸದಲ್ಲಿ ಆತ ಹೇಗಿದ್ದ ಎನ್ನುವುದಕ್ಕಿಂತ ಈಗ ಎಲ್ಲರ ಮನಸ್ಸಿನಲ್ಲಿ ಟಿಪ್ಪು ಹೇಗಿದ್ದಾನೆ ಎಂಬುದು ಮುಖ್ಯ. ಅದನ್ನು ಗೌರಿಸುವುದು ಅಷ್ಟೇ ಮುಖ್ಯ.
ಈಗ ಮತ್ತೆ ನಾನು ಪ್ರಾರಂಭದಲ್ಲಿ ಎತ್ತಿದ ಪ್ರಶ್ನೆಗೆ ಬರುತ್ತೇನೆ.  ಅದು ಆರಾಧನೆ ಮತ್ತು ವಿರೋಧಿಸುವುದಕ್ಕೆ ಸಂಬಂಧಿಸಿದ್ದು. ಡಾ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲಾಗಿ ಟಿಪ್ಪೂವಿನ ಹೆಸರಿ ಇಡಬೇಕಿತ್ತು ಎಂದು ಹೇಳಿದ್ದು. ಇದೂ ಸಹ ಆರಾಧನೆಯ ಮನಸ್ಥಿತಿಯಿಂದ ಬಂದಿದ್ದೇ ಹೊರತೂ ವಸ್ತು ಸ್ಥಿತಿಯ ಅರವಿನಿಂದ ಬಂದಿದ್ದಲ್ಲ. ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕೆ ಅಥವಾ ಅಂಬೇಡ್ಕರ್ ಹೆಸರನ್ನು ಇಡಬೇಕೇ ಎಂಬುದು ದೊಡ್ಡ ವಿವಾದವಾಗಿತ್ತು. ಬಸವ ಮತ್ತು ಅಂಬೇಡ್ಕರ್ ಅನುಯಾಯಿಗಳ ನಡುವೆ ದೊಡ್ಡ ಕಂದಕವನ್ನೇ ಇದು ನಿರ್ಮಿಸಿತ್ತು. ಅಂಬೇಡ್ಕರ್ ಮತ್ತು ಬಸವಣ್ಣ ಇಬ್ಬರೂ ಮಾನವತಾವಾದಿಗಳಾಗಿದ್ದರೂ ಅವರ ಅನುಯಾಯಿಗಳು ಮಾನವತಾವಾದಿಗಳಾಗದೇ ಬಸವ ಮತ್ತು ಅಂಬೇಡ್ಕರ್ ಬೇರೆ ಬೇರೆ ಎಂದು ಪ್ರತಿಪಾದಿಸಿದ್ದರು.
ಈಗ ಡಾ. ಕಾರ್ನಾಡ್ ಕೂಡ ಟಿಪ್ಪು ಅಭಿಮಾನಿಗಳು ಮತ್ತು ಕೇಂಪೇಗೌಡರ ಅಭಿಮಾನಿಗಳು ಜಗಳವಾಡುವ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಬಿಜೆಪಿ ಈ ಬೆಂಕಿಗೆ ಈಗಾಗಲೇ ತುಪ್ಪ ಸುರಿಯುವ ಕೆಲಸ ಮಾಡಿದೆ. ಬಿಜೆಪಿ ನಾಯಕ ಹೋರಾಟದ ಮಾತನ್ನು ಆಡೀಯೂ ಆಗಿದೆ.
ಆರಾಧಿಸುವ ಜನ ವಿವೇಕವನ್ನು ಕಳೆದುಕೊಳ್ಳುತ್ತಾರೆ. ಅವರು ಕಳ್ಳಸ್ವಾಮಿಗಳನ್ನು ಆರಾಧಿಸುವವರು ಆದರೂ ಒಂದೇ ಜನಪರ ರಾಜರನ್ನು ಆರಾಧಿಸುವವರಾದರೂ ಒಂದೇ. ಅದಕ್ಕೆ ನಾನು ಹೇಳಿದ್ದು. ನಾವು ಆರಾಧಿಸುವುದೂ ಬೇಡ ವಿರೋಧಿಸುವುದೂ ಬೇಡ. ನಾವು ಅರ್ಥಮಾಡಿಕೊಳ್ಳಲು ಯತ್ನಿಸೋಣ.



 

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...