ಮುಂದಿನ ನವೆಂಬರ್ ೧೭ ಕ್ಕೆ ಮುನ್ನ ರಾಮ ಜನ್ಮ ಸ್ಥಾನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪು ನೀಡಲಿದೆ. ಈ ತೀರ್ಪು ಯಾರ ಪರವಾಗಿಯೇ ಇರಲಿ, ಇದೊಂದು ಐತಿಹಾಸಿಕ ತೀರ್ಪಾಗುವುದು ಮಾತ್ರ ನಿಜ. ಜೊತೆಗೆ ನ್ಯಾಯದಾನದ ಇತಿಹಾಸದಲ್ಲಿ ಮಹತ್ತರವಾದ ತೀರ್ಪು ಇದಾಗಲಿದೆ.
ಈಗ ನ್ಯಾಯಾಲಯದ ಮುಂದಿರುವುದು ರಾಮ ಜನ್ಮ ಸ್ಥಾನ ಎಂದು ಹೇಳುವ ಹಿಂದೂಗಳ ವಾದ ಮತ್ತು ಇದು ಮಸೀದಿಗೆ ಸೇರಿದ ಜಾಗ ಎಂಬ ಸುನ್ನಿ ವಕ್ಫ್ ಬೋರ್ಡ್ ಅಥವಾ ಮುಸ್ಲೀಂ ರ ವಾದ. ವಾದ ಕೇವಲ ಈ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದರೆ ಈ ಬಗ್ಗೆ ತೀರ್ಪು ನೀಡಲು ನ್ಯಾಯಾಲಯಕ್ಕೆ ಕಷ್ಟವಾಗುತ್ತಿರಲಿಲ್ಲ. ಉಳಿದ ಭೂ ವಿವಾದದಂತೆ ಈ ವಿವಾದವನ್ನು ಪರಿಗಣಿಸಿ ಕಾನೂನಿನ ಅಡಿಯಲ್ಲಿ ಸುಲಭವಾಗಿ ತೀರ್ಪು ನೀಡಬಹುದಾಗಿತ್ತು. ಆದರೆ ಈ ಪ್ರಕರಣದಲ್ಲಿ ಹಾಗಲ್ಲ. ಇಲ್ಲಿ ಕಾನೂನಿನ ಜೊತೆಗೆ ಹಿಂದೂಗಳ ಮತ್ತು ಮುಸ್ಲೀಂ ರ ನಂಬಿಕೆಯ ಪ್ರಶ್ನೆ ಕೂಡ ತಳಕು ಹಾಕಿಕೊಂಡಿದೆ. ಹೀಗಾಗಿ ಪ್ರಕರಣ ಇನ್ನಷ್ಟು ಜಟಿಲವಾಗಿದೆ.
ಇಲ್ಲಿ ಇತಿಹಾಸ ಮತ್ತು ನಂಬಿಕೆಯ ಬಹುಮುಖ್ಯವಾದ ಪ್ರಶ್ನೆ ಇದೆ. ಇತಿಹಾಸದ ಪ್ರಕಾರ ೧೬ ನೆಯ ಶತಮಾನದಲ್ಲಿ, ಅಂದರೆ ಸುಮಾರು ೪೦೦ ವರ್ಷಗಳ ಹಿಂದೆ ಮೊಗಲ್ ದೊರೆ ಬಾಬರ್ ಇಲ್ಲಿ ಮಸೀದಿಯನ್ನು ಕಟ್ಟಿಸಿದ. ಹೀಗಾಗಿ ಇದಕ್ಕೆ ಬಾಬರೀ ಮಸೀದಿ ಎಂಬ ಹೆಸರು ಬಂತು. ಆತ ಮಸೀದಿಯನ್ನು ಕಟ್ಟುವಾಗ ಆತ ಅಲ್ಲಿದ್ದ ದೇವಾಲಯವನ್ನು ಕೆಡವಿದ. ಅದು ಶ್ರೀರಾಮನ ಜನ್ಮ ಸ್ಥಾನವಾಗಿತ್ತು ಎಂಬುದು ನಂಬಿಕೆ.
ಮೊದಲು ಇತಿಹಾಸದ ದೃಷ್ಟಿಯಿಂದ ಈ ಪ್ರಕರಣವನ್ನು ನೋಡಿದರೆ ಟೈಟಲ್ ಡಿಸ್ ಪ್ಯೂಟ್ ಪ್ರಕರಣ ಎಂದು ಪರಿಗಣಿಸಬೇಕು. ಆದರೆ ಇಲ್ಲಿ ನಂಬಿಕೆಯ ಪ್ರಶ್ನೆ ಇರುವುದರಿಂದ ಇಡೀ ಪ್ರಕರಣ ಬೇರೆ ಆಯಾಮವನ್ನೇ ಪಡೆದುಕೊಂಡಿದೆ. ಇದು ಭೂ ವ್ಯಾಜ್ಯ ಎಂದು ಕರಿಗಣಿತವಾದರೆ ಭೂಮಿ ಮಸೀದಿಯ ಜಾಗವಾಗಿರುವುದರಿಂದ ಇದು ವಕ್ಫ್ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ ನಾಲ್ಕು ನೂರು ವರ್ಷಗಳ ಕಾಲ ಈ ಭೂಮಿಯ ಒಡೆತನ ವಕ್ಫ್ ಆಸ್ತಿ ಎಂದು ಪರಿಗಣಿಸಬೇಕು. ಯಾಕೆಂದರೆ ೧೯೯೨ ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವುವವರೆಗೆ ಇಲ್ಲಿ ಮಸೀದಿ ಇತ್ತು. ಹೀಗಾಗಿ ಈ ಭೂಮಿಯ ಒಡೆತನ ಮುಸ್ಲೀರದಾಗುತ್ತದೆ. ಆದರೆ ಸಮಸ್ಯೆ ಇಷ್ಟು ಸರಳವಾಗಿಲ್ಲ. ಕೇವಲ ಆಸ್ತಿ ಒಡೆತನದ ಪ್ರ್ಶ್ನೆಯಾಗಿ ತೆಗೆದುಕೊಂಡು ತೀರ್ಪು ನೀಡಿದರೆ ಈ ದೇಶದ ಬಹುಸಂಖ್ಯಾತರ ನಂಬಿಕೆಗೆ ಪೆಟ್ಟು ಬೀಳುತ್ತದೆ. ನಂಬಿಕೆಯ ಮೇಲೆ ಪೆಟ್ಟು ಬಿದ್ದರೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳುವುದು ಕಷ್ಟ. ಜೊತೆಗೆ ಈ ಪ್ರಕರಣದ ಹಿಂದೆ ರಾಜಕೀಯವಿದೆ. ರಾಜಕೀಯ ಲಾಭದ ಪ್ರಶ್ನೆ ಇದೆ. ಬಹುಸಂಖ್ಯಾತರನ್ನು ಧರ್ಮದ ಹೆಸರಿನಲ್ಲಿ ಒಗ್ಗೂಡಿಸಿ ಮತದ ಬ್ಯಾಂಕ್ ಆಗಿ ಪರಿವರ್ತಿಸುವ ಹುನ್ನಾರವಿದೆ. ಆದ್ದರಿಂದ ನ್ಯಾಯ ದಾನ ಮಾಡುವಾಗ ನಂಬಿಕೆ ಮತ್ತು ಪರಿಣಾಮದ ಬಗ್ಗೆ ನ್ಯಾಯಾಲಯ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಇದೆ.
ನ್ಯಾಯಾಲಯಕ್ಕೆ ಸಾಕ್ಷ್ಯಗಳ ಜೊತೆಗೆ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನವೇ ನೀಡಿದೆ. ಇದರ ಅಡಿಯಲ್ಲಿ ನಂಬಿಕೆಯ ಪ್ರಶ್ನೆಯನ್ನು ನೋಡಬೇಕಾಗಿದೆ. ನಂಬಿಕೆಗೆ ಸಾಕ್ಶ್ಯಾಧಾರ ಇರುವುದಿಲ್ಲ. ಅದು ಕೇವಲ ನಂಬಿಕೆ ಮಾತ್ರ. ಆದರೆ ಭೂ ವ್ಯಾಜ್ಯದಲ್ಲಿ ನಂಬಿಕೆಯನ್ನು ಹೇಗೆ ಪರಿಗಣನೆಗೆ ತೆಗೆದುಕೊಳ್ಳುವುದು ? ಈ ಭೂಮಿ ಇಂತವರಿಗೆ ಸೇರಿದ್ದು ಎಂಬ ನಂಬಿಕೆ ಮುಖ್ಯವೋ ? ಆಥವಾ ಸಾಕ್ಷ ಮುಖ್ಯವೋ ? ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡಬೇಕಾಗಿದೆ.
ಒಂದೊಮ್ಮೆ ಈ ಸ್ಥಳದಲ್ಲಿ ರಾಮ ಹುಟ್ಟಿದ್ದ ಎಂಬ ನಂಬಿಕೆಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡರೆ ಇಲ್ಲಿ ದೇವಾಲಯವಿತ್ತು ಎಂಬ ವಾದವನ್ನು ನ್ಯಾಯಾಲಯ ಸ್ವೀಕರಿಸಿದರೆ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿದವರಿಗೆ ಶಿಕ್ಷೆ ನೀಡಬೇಕು. ಅಂದರೆ ಬಾಬರ್ ಗೆ ಶಿಕ್ಷೆ ನೀಡಬೇಕಾಗುತ್ತದೆ.. ನಾಲ್ಕುನೂರು ವರ್ಷಗಳ ಹಿಂದಿನ ಬಾಬರ್ ಗೆ ಈಗ ಶಿಕ್ಷೆ ನೀಡುವುದು ಹೇಗೆ ?
ನಮ್ಮ ಕಾನೂನಿನ ಪ್ರಕಾರ ಯಾವುದೇ ಭೂಮಿಯನ್ನು ಯಾರ್ಯ್ ಎಷ್ಟು ವರ್ಷಗಳಿಂದ ಅನುಭವಿಸುತ್ತಿದ್ದಾರೆ ಎಂಬುದರ ಮೇಲೆ ಅವರ ಹಕ್ಕು ಸ್ಥಾಪಿತವಾಗುತ್ತದೆ. ನಾಲ್ಕು ನೂರು ವರ್ಷಗಳ ಕಾಲ ಈ ಭೂಮಿಯನ್ನು ಅನುಭವಿಸುತ್ತ ಬಂದವರು ಬಾಬರಿ ಮಸೀದಿಯ ಆಡಳಿತ ವರ್ಗ, ಹೀಗಿರುವಾಗ ಕಾನೂನು ಪ್ರಕಾರ ಈ ಜಾಗದ ಹಕ್ಕು ಅವರದೇ ಆಗಿರುತ್ತದೆ. ಇದನ್ನು ಬೇರೆಯವರಿಗೆ ನೀಡುವುದು ಹೇಗೆ ?
ಈ ಪ್ರಕರಣ ಈ ಎಲ್ಲ ಅಂಶಗಳಿಂದ ಹೆಚ್ಚು ಜಟಿಲವಾಗಿದೆ. ನ್ಯಾಯಾಲಯ ಸಾಕ್ಷ್ಯಾಧಾರವನ್ನೂ ಕಾನೂನನ್ನೂ ನಿರ್ಲಕ್ಷಿಸುವಂತಿಲ್ಲ. ಹಾಗೆ ನಂಬಿಕೆಯನ್ನು ತಳ್ಳಿ ಹಾಕುವಂತಿಲ್ಲ. ಇವೆರಡರ ನಡುವೆ ಸಮನ್ವಯ ಸಾಧಿಸಬೇಕಾಗಿದೆ.
ಸುಮಾರು ಒಂದು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಕುತೂಹಲಕರವಾಗಿದೆ. ಹಿಂದೂ ಮಹಾಸಭಾದ ಪರವಾಗಿ ವಾದಿಸಿದ ವಕೀಲರು ಬಾಬರ್ ೪೦೦ ವರ್ಷಗಳ ಹಿಂದೆ ಮಾಡಿದ ತಪ್ಪನ್ನು ಈಗ ನ್ಯಾಯಾಲಯ ಸರಿಪಡಿಸಬೇಕು ಎಂದು ವಾದ ಮಂಡಿಸಿದರು. ಈ ವಾದವಾನ್ನು ಒಪ್ಪಿಕೊಳ್ಳುವುದು ಹೇಗೆ ಸಾಧ್ಯ ? ಜೊತೆಗೆ ಬಾಬರ್ ಈ ಮಸೀದಿಯನ್ನು ಕಟ್ಟಿಸಿದ ಎನ್ನುವುದು ದಾಖಲೆ ಎಲ್ಲಿದೆ ಎಂಬುದು ಅವರ ಪ್ರಶ್ನೆ. ಆದರೆ ಇಲ್ಲಿ ಯಾರು ಮಸೀದಿ ಕಟ್ಟಿಸಿದರು ಎಂಬುದು ಅಮುಖ್ಯ. ಅಲ್ಲಿ ಮಸೀದಿ ಇತ್ತೇ ಇಲ್ಲವೇ ಎಂಬುದು ಮುಖ್ಯ. ಎಲ್ಲರಿಗೂ ಗೊತ್ತಿರುವ ಹಾಗೆ ಅಲ್ಲಿ ಮಸೀದಿ ಇತ್ತು ಈ ಮಸೀದಿಯನ್ನು ಕರ ಸೇವಕರು ಕೆಡವಿದರು. ಇದನ್ನು ಬಿಜೆಪಿ ನಾಯಕರು ನೋಡಿ ಸಂತೋಷ ಪಟ್ಟರು ಎಂಬುದಕ್ಕೆ ದಾಖಲೆ ಇದೆ. ನಮ್ಮ ದೇಶದಲ್ಲಿ ಯಾವುದೇ ಪುರಾತನ ಕಟ್ಟಡವನ್ನು ಕೆಡವುದು ಅಪರಾಧ. ಮೊದಲು ಈ ಅಪರಾಧಕ್ಕೆ ಶಿಕ್ಷೆ ಆಗಬೇಕಿತ್ತು. ಈ ಪ್ರಕರಣ ಇತ್ಯರ್ಥವಾದ ಮೇಲೆ ಈ ಸ್ಥಳ ಯಾರಿಗೆ ಸೇರಿದ್ದು ಎಂಬುದು ತೀರ್ಮಾನವಾಗಬೇಕಿತ್ತು. ಆದರೆ ಮಸೀದಿ ಕೆಡವಿದ ಪ್ರಕರಣ ಇತ್ಯರ್ಥವಾಗದೇ ಈ ಜಾಗ ಯಾರಿಗೆ ಎಂಬುದು ಇತ್ಯರ್ಥವಾಗುತ್ತಿದೆ. ಇದು ಸಮಂಜಸ ಎನ್ನಿಸುವುದಿಲ್ಲ...೯೦ ರ ದಶಕದಲ್ಲಿ ನಡೆದ ಅಪರಾಧ ತೀರ್ಮಾನವಾದ ಮೇಲೆ ೪೦೦ ವರ್ಷಗಳ ಹಿಂದಿನ ಅಪರಾಧದ ಬಗ್ಗೆ ವಿಚಾರಣೆ ನಡೆಯಬೇಕಿತ್ತು.. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಮಸೀದಿ ಕೆಡವುವ ಮೂಲಕ ಅಪರಾಧ ಎಸಗಿದವರಿಗೆ ಶಿಕ್ಢೆ ಆಗುತ್ತಿಲ್ಲ. ಬದಲಾಗಿ ಬಾಬರ್ ಗೆ ಶಿಕ್ಷೆ ಕೊಡುವ ವಾದವನ್ನು ಮಂಡಿಸಲಾಗುತ್ತಿದೆ.
ಈ ಪ್ರಕರಣದ ವಿಚಾರಕ್ಕೆ ಬರೋಣ. ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಸಾಧ್ಯತೆಗಳೇನು ? ಬಹುಮಟ್ಟಿಗೆ ರಾಮ ಜನ್ಮ ಭೂಮಿ ಎಂಬ ನಂಬಿಕೆಯನ್ನು ಎತ್ತಿ ಹಿಡಿಯುವುದು ಮೊದಲ ಸಾಧ್ಯತೆ. ನ್ಯಾಯಾಲಯ ಇದು ರಾಮ ಜನ್ಮ ಭೂಮಿ ಎಂಭ ತೀರ್ಮಾನಕ್ಕೆ ಬಂದರೆ ಅದು ಭಾರತೀಯರ ನಂಬಿಕೆಯನ್ನು ಎತ್ತಿ ಹಿಡಿದಂತಾಗುತ್ತದೆ. ಆದರೆ ಈ ತೀರ್ಮಾನಕ್ಕೆ ಪೂರಕವಾದ ಸಾಕ್ಷ್ಯ ಎಲ್ಲಿದೆ ? ಕೇವಲ ನಂಬಿಕೆಯ ಆಧಾರದ ಮೇಲೆ ತೀರ್ಮಾನ ಕೈಗೊಂಡರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುಬೇಕಾದ ನ್ಯಾಯಾಲಯ ಸಾಕ್ಷಾಧಾರದ ಮೇಲೆ ತೀರ್ಮಾನ ಕೊಡದೇ ನ್ಯಾಯ ದಾನದಲ್ಲಿ ಸೋತಂತೆ ಆಗುವುದಿಲ್ಲವೆ ?
ಇನ್ನು ಸಾಕ್ಷ್ಯಾಧಾರವನ್ನೇ ಆಧಾರವನ್ನಾಗಿ ಇಟ್ಟುಕೊಂಡು ಈ ಜಾಗವನ್ನು ಮುಸ್ಲೀಮ್ ಸಮುದಾಯಕ್ಕೆ ನೀಡಿದರೆ ಆಗ ಭಾರತೀಯರ ನಂಬಿಕೆಗೆ ಕೊಡಲಿ ಪೆಟ್ಟು ಬೀಳುತ್ತದೆ. ಹಾಗೆ ನಂಬಿಕೆಯ ಮೇಲೆ ಬದುಕುವ ಬಹುಸಂಖ್ಯಾತರು ಮತ್ತೆ ಬೀದಿಗೆ ಇಳಿಯಬಹುದು. ಹೀಗಾಗಿ ಇದೊಂದು ಕಗ್ಗಂಟು.
ಈಗ ಇರುವ ದಾರಿ ಎಂದರೆ ಮುಸ್ಲಿಮ್ ರು ಬಹುಸಂಖ್ಯಾತರ ನಂಬಿಕೆಗೆ ಮನ್ನಣೆ ನೀಡಿ ತಮ್ಮ ದೂರನ್ನು ವಾಪಸ್ಸು ಪಡೆಯುವುದು. ಇದಕ್ಕೆ ಬದಲಾಗಿ ಬೇರೆ ಜಾಗದಲ್ಲಿ ಮಸೀದಿ ಕಟ್ಟಿಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದು. ಈಗ ಉಳಿದಿರುವುದು ಇದೊಂದೇ ಮಾರ್ಗ. ಇತ್ತೀಚಿನ ವರದಿಗಳ ಪ್ರಕಾರ ಸುನ್ನಿ ವಕ್ಫ್ ಬೋರ್ಡ್ ತನ್ನ ದೂರನ್ನು ವಾಪಸ್ಸು ಪಡೆಯಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆ ಇತರ ದೂರು ದಾರರು ತಮ್ಮ ದೂರನ್ನು ವಾಪಸ್ಸು ಪಡೆಯಬಹುದು. ಹಾಗಾದರೆ ಈ ಪ್ರಕರಣ ಸುಖಾಂತ್ಯ ಕಾಣುತ್ತದೆ. ಈ ದೇಶದ ಮುಸ್ಲೀಂರು ಬಹುಸಂಖ್ಯಾತ ಹಿಂದೂಗಳಿಗಾಗಿ ಅತಿ ದೊಡ್ಡ ತ್ಯಾಗ ಮಾಡಿದ ಗೌರವಕ್ಕೆ ಪಾತ್ರರಾಗುತ್ತಾರೆ.
ಹೀಗೆ ಮಾಡುವಾಗ ಕೆಲವೊಂದು ಷರತ್ತುಗಳನ್ನು ಮುಸ್ಲೀಂ ದೂರುದಾರರು ವಿಧಿಸುವಂತೆ ನ್ಯಾಯಾಲವನ್ನು ಕೋರಬೇಕು..ಕೆಡವಿರುವ ಮಸೀದಿಯನ್ನೇ ಅಯೋಧ್ಯೆಯಲ್ಲಿ ಬೇರೆಡೆಗೆ ಕಟ್ಟಿಸಿಕೊಡಬೇಕು. ಹಾಗೆ ದೇಶದಲ್ಲಿ ಇರುವ ಬೇರೆ ಮಸೀದಿಗಳಿಗೆ ಕರ ಸೇವಕರು ಕೈಹಾಕಬಾರದು. ಈ ವಿವಾದ ಮುಗಿದ ಮೇಲೆ ಕಾಶಿ ಮತ್ತು ಮಥುರಾದ ಮಸೀದಿಗಳನ್ನು ಕೆಡವದಂತೆ ನ್ಯಾಯಾಲಯ ಸೂಚನೆ ನೀಡಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಾನಗಳನ್ನು ಕಾಪಾದುವ ಹೊಣೆಯನ್ನು ಈ ದೇಶದ ಬಹುಸಂಖ್ಯಾತರು ಹೊರಬೇಕು. ಸಂಘ ಪರಿವಾರ ಈ ಬಗ್ಗೆ ಲಿಖಿತ ಆಫಿಡೆವಿಟ್ ಅನ್ನು ನ್ಯಾಯಾಲಯಕ್ಕೆ ಕೊಡಬೇಕು. ಇದರಿಂದ ಬಹುದೊಡ್ಡ ವಿವಾದ ಸುಖಾಂತ್ಯದಲ್ಲಿ ಮುಕ್ತಾಯವಾಗುತ್ತದೆ.
ಆದರೆ ನ್ಯಾಯಾಲಯ ಸಂವಿಧಾನಿಕ ಪೀಠ ಯಾವ ತೀರ್ಮಾನಕ್ಕೆ ಬರುತ್ತದೆ ಗೊತ್ತಿಲ್ಲ. ನ್ಯಾಯಪೀಠ ಯಾವುದೇ ತೀರ್ಮಾನಕ್ಕೆ ಬರಲಿ ಅದು ಹಿಂದೂ ಮತ್ತು ಮುಸ್ಲೀಂರ ನಡುವಿನ ಬಾಂಧವ್ಯವನ್ನು ಕೆಡಿಸದಿರಲಿ. ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ, ನ್ಯಾಯಾಲಯದ ತೀರ್ಪು ಇದಕ್ಕೆ ಪೂರಕವಾಗಿ ಬರಲಿ ಎಂಬುದು ನಮ್ಮೆಲ್ಲರ ಆಶಯ.