Tuesday, March 18, 2008

ಕಣ್ಣು ಕತ್ತಿಯ ಅಂಚು !

ಕಳೆದ ಎರಡು ವಾರಗಳ ಹಿಂದೆ ಎಲ್ ಆರ್ ಈಶ್ವರಿ ಬೆಂಗಳೂರಿಗೆ ಬಂದಿದ್ದರು। ನಮ್ಮ ಹುಡುಗರ ಬಳಿ ಅವಳ ಬಗ್ಗೆ ವರದಿ ಮಾಡುವಂತೆ ಹೇಳಿ ಸುಮ್ಮನೆ ನನ್ನ ಕೊಠಡಿಯಲ್ಲಿ ಕುಳಿತೆ। ಮನಸ್ಸು ಹಲವು ವರ್ಷಗಳ ಹಿಂದಕ್ಕೆ ಓಡಿತು। ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳು। ಸಿನೆಮಾ ಆಗ ನನ್ನ ಹುಚ್ಚು। ಹೈಸ್ಕೂಲಿಗೆ ಕಳ್ಳ ಬಿದ್ದು ಸಿನೆಮಾ ನೋಡುವ ಖಯಾಲಿ। ಆಗ ಎಲ್ಲ ಕ್ಯಾಬರೆ ಡ್ಯಾನ್ಸರುಗಳಿಗೆ ಧ್ವನಿ ನೀಡುತ್ತಿದ್ದವರು ಎಲ್ ಆರ್ ಈಶ್ವರಿ। ಈಶ್ವರಿ ಧ್ವನಿ ಕೇಳಿದ ತಕ್ಷಣ ಮನಸ್ಸಿನಲ್ಲಿ ಹುಟ್ಟುತ್ತಿದ್ದ ರಾಗ ತರಂಗಗಳು। ಅದೊಂದು ಅಮಲು। ಹಲವು ಸಂದರ್ಭದಲ್ಲಿ ನಾನು ಹೇಳುತ್ತಿದ್ದು, ನನಗೆ ಯೌವನ ಬಂದಿದೆ ಎಂದು ಗೊತ್ತಾದದ್ದೇ ಎಲ್ ಆರ್ ಈಶ್ವರಿಯ ಮಾದಕ ಧ್ವನಿಯನ್ನು ಕೇಳಿದಾಗ ಅಂತ। ಈಶ್ವರಿಯ ಧ್ವನಿಯೇ ಹಾಗೆ। ಅಲ್ಲಿ ಇದ್ದುದು ಮಾದಕತೆ, ಅದು ಆಹ್ವಾನ ನೀಡುವ ಧ್ವನಿ।

ಅವಳ ಬಾಯಲ್ಲಿ, ಕಣ್ಣು ಕತ್ತಿಯ ಅಂಚು ಎಂಬ ಹಾಡು ಬಂದಾಗ, ಕತ್ತಿಯಿಂದ ಹೃದಯವನ್ನು ಇರಿದಂತೆ। ಹಾಡು ಕೇಳುತ್ತಿದ್ದವರು ತಮ್ಮ ಕೈಯನ್ನು ಎತ್ತಿ ಎದೆಯ ಮೇಲೆ ಇಟ್ಟುಕೊಳ್ಳಬೇಕಾದ ಸ್ಥಿತಿ। ಎಲ್ ಆರ್ ಈಶ್ವರಿಯ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಜ್ಯೋತಿಲಕ್ಷ್ಮಿಯೂ ಹಾಗೆ। ಆಕೆ ಹೆಜ್ಜೆ ಎತ್ತಿ ಇಡುವ ವೇಗ, ಅದಕ್ಕೆ ತಕ್ಕಂತೆ ಮೈಬಳಕಿಸುತ್ತಿದ್ದ ರೀತಿ ಎಲ್ಲವೂ ಅನನ್ಯ। ಜ್ಯೋತಿ ಲಕ್ಷ್ಮಿಯ ಜೊತೆಗೆ ಅಂದು ಖ್ಯಾತರಾಗಿದ್ದ ಇನ್ನೊಬ್ಬ ಕ್ಯಾಬರೆ ನಟಿ ಹಲಂ। ಹಲಂ ದಕ್ಷಿಣ ಭಾರತದಲ್ಲೆ ಖ್ಯಾತಿಯನ್ನು ಪಡೆದವಳು। ಆದರೆ ಜ್ಯೋತಿಲಕ್ಶ್ಮಿಯ ಹೆಜ್ಜೆ ಮತ್ತು ಎಲ್ ಅರ್ ಈಶ್ವರಿಯ ಧ್ವನಿಯ ಸಂಗಮ ಮಾತ್ರ ಬೇರೆ ರೀತಿಯದು। ಅಲ್ಲಿ ಒಂದು ರೀತಿಯ ತಾದ್ಯಾತ್ಮ। ಶರೀರ ಮತ್ತು ಶಾರೀರ ಬೇರೆ ಅಂತಾ ಅನ್ನಿಸದಷ್ಟು ಹೊಂದಾಣಿಕೆ।
ಜನ ಬದಲಾದ ಹಾಗೆ ಸಿನೆಮಾ ಬದಲಾಯಿತು। ಚಿತ್ರಗಳಲ್ಲಿ ಕ್ಯಾಬರೆ ನರ್ತಕಿಯರ ಕೆಲಸವನ್ನು ನಾಯಕಿಯರೇ ಮಾಡತೊಡಗಿದರು। ಹೀಗಾಗಿ ಕ್ಯಾಬರೆ ನರ್ತಕಿಯರು ಚಿತ್ರರಂಗದಿಂದ ಮರೆಯಾಗತೊಡಗಿದರು। ಕ್ಯಾಬರೆ ನರ್ತಕಿಯರು ಹೋದ ಮೇಲೆ, ಎಲ್ ಆರ್ ಈಶ್ವರಿಯ ಬೇಡಿಕೆಯೂ ಕಡಿಮೆಯಾಯಿತು। ಆಕೆ ಸಾವಕಾಶವಾಗಿ ನೇಪಥ್ಯಕ್ಕೆ ಸರಿಯತೊಡಗಿದಳು। ಮೊನ್ನೆ ಬೆಂಗಳೂರಿಗೆ ಬಂದಿದ್ದ ಆಕೆ ಕಾರ್ಯಕ್ರಮವೊಂದರಲ್ಲಿ ಹಾಡಿದಳು। ಆ ಕಾರ್ಯಕ್ರಮದ ಕ್ಯಾಸೆಟ್ ಕೇಳುತ್ತ ಕುಳಿತೆ। ಅವಳ ಧ್ವನಿ ವಯಸ್ಸಿಗೆ ತಕ್ಕಂತೆ ಸ್ವಲ್ಪ ನಡುಗುತ್ತಿದೆ। ಮೊದಲಿನ ಮಾದಕತೆ ಕಡಿಮೆಯಾಗಿದೆ। ಕಣ್ಣು ಕತ್ತಿಯ ಅಂಚು ಎಂದು ಹೇಳಿದಾಗ ಕತ್ತಿಯ ಮೊನಚು ಮೊದಲಿನಂತಿಲ್ಲ ಎಂದು ಅನ್ನಿಸುತ್ತದೆ।
ಇದನ್ನೆಲ್ಲ ಕುಳಿತು ಯೋಚಿಸುವಾಗ ಮತ್ತೆ ನಾನು ಹಲವಾರು ವರ್ಷಗಳಷ್ಟು ಹಿಂದಕ್ಕೆ ಓಡುತ್ತೇನೆ। ಮೊದಲ ಬಾರಿ ಅವಳ ಹಾಡು ಕೇಳಿದ್ದು ನೆನಪಾಗುತ್ತದೆ। ಆಗಿನ ಹಾಡು ಮತ್ತು ಈಗಿನ ಸಂದರ್ಭವನ್ನು ಹೋಲಿಸಲು ಯತ್ನಿಸುತ್ತೇನೆ। ಆದರೆ ಯಾಕೋ ಹೋಲಿಸುವುದಕ್ಕೂ ಸಾಧ್ಯವಾಗುವುದಿಲ್ಲ। ಆಗ ಸುಮ್ಮನೆ ಮನಸ್ಸಿನಲ್ಲೇ ಹೇಳಿಕೊಂಡೆ। ಈಕೆ ಈಶ್ವರಿಯಲ್ಲ, ಆಗಿನ ಈಶ್ವರಿಯೇ ಬೇರೆ, ಈ ಈಶ್ವರಿಯೇ ಬೇರೆ !
ಮತ್ತೆ ನನ್ನ ಕಚೇರಿಯ ಕಪಾಟಿನಲ್ಲಿ ಈಶ್ವರಿಯ ಹಳೆಯ ಹಾಡಿನ ಕ್ಯಾಸೆಟ್ ಗಾಗಿ ಹುಡುಕಿದೆ। ಸಿಕ್ಕಿದ ಆ ಕ್ಯಾಸೆಟ್ ಅನ್ನು ಹಾಗೆ ಪ್ರೀತಿಯಿಂದ ಮುಟ್ಟಿದೆ। ಏನೋ ಕಳೆದುಕೊಂಡಿದ್ದು ಸಿಕ್ಕಿದ ಹಾಗೆ ಸಮಾಧಾನವಾಯಿತು.

Thursday, March 13, 2008

ವೈಚಾರಿಕತೆ ಮತ್ತು ಭಾವ ಅಭಿವ್ಯಕ್ತಿ.

ನಿನಗೆ ಭಾವನೆಗಳೇ ಇಲ್ಲ !

ಈ ಮಾತನ್ನು ನಾನು ಹಲವು ಬಾರಿ ಕೇಳಿದ್ದೇನೆ। ಹಾಗೆ ನೀವು ಸಹ ಹಲವು ಸಂದರ್ಭಗಳಲ್ಲಿ ಇಂತಹ ಮಾತುಗಳನ್ನು ಕೇಳಿರಬಹುದು। ಬೇರೆಯವರಿಗೆ ಈ ಮಾತನ್ನು ಹೇಳಿರಲೂಬಹುದು। ಹಾಗಿದ್ದರೆ, ಭಾವನೆ ಎಂದರೆ ಏನು ? ಅದು ನಾವು ಇನ್ನೊಬ್ಬರಿಗೆ ನೀಡುವ ಪ್ರತಿಕ್ರಿಯೆಯೆ ? ಅಥವಾ ಬೇರೆಯವರು ಬಯಸುವ ಪ್ರತಿಕ್ರಿಯೆಯೆ ? ಭಾವನೆ ಇಲ್ಲ ಎಂದು ಹೇಳುವವರು, ಯಾರಿಗೆ ಈ ಮಾತನ್ನು ಹೇಳುತ್ತಾರೋ ಅವರಿಂದ ಎಂತಹ ಪ್ರತಿಕ್ರಿಯೆಯನ್ನು ಬಯಸುತ್ತಾರೆ ?ಈ ಪ್ರಶ್ನೆಯನ್ನು ಒಂದು ಉದಾಹರಣೆಯ ಮೂಲಕ ನೋಡಲು ಯತ್ನಿಸೋಣ। ನಾವು ನಮ್ಮ ಕ್ರಿಯೆ ಮತ್ತು ಮಾತುಗಳೆಗೆ ಬೇರೆಯವರಿಂದ ಪ್ರತಿಕ್ರಿಯೆಯನ್ನು ಬಯುಸುತ್ತೇವೆ। ಜೊತೆಗೆ ಈ ಪ್ರತಿಕ್ರಿಯೆ ತನ್ನ ಮಾತಿಗೆ ಕೃತಿಗೆ ಪೂರಕವಾಗಿರಬೇಕು ಎಂಬ ಆಶಯವನ್ನು ಹೊಂದಿರುತ್ತೇವೆ। ಯಾವಾಗ ಪ್ರತಿಕ್ರಿಯೆಯೇ ಇರುವುದಿಲ್ಲವೋ ಆಗ ನಮಗೆ ಆಘಾತವಾಗುತ್ತದೆ। ಈ ಆಘಾತವಾಗುವುದು ಬೇರೊಬ್ಬರು ಪ್ರತಿಕ್ರಿಯೆ ನೀಡಿಲ್ಲ ಎಂಬುದಕ್ಕಾಗಿ ಅಲ್ಲ, ನಮ್ಮ ಪ್ರತಿಕ್ರಿಯೆಯ ನಿರೀಕ್ಷೆ ಹುಸಿಯಾಯಿತಲ್ಲ ಎಂಬುದೇ ಈ ಆಘಾತಕ್ಕೆ ಕಾರಣ।

ಒಂದು ಮಗು ಪ್ರತಿಕ್ರಿಯೆಯಾಗಿ ಹಠ ಮಾಡುತ್ತದೆ, ರಂಪ ಮಾಡುತ್ತದೆ। ಈ ಮೂಲಕ ತನ್ನ ತಾಯಿ ಅಥವಾ ತಂದೆಯ ಲಕ್ಶ್ಯವನ್ನು ತನ್ನತ್ತ ಸೆಳೆಯುತ್ತದೆ। ಅಳುತ್ತಿರುವ ಮಗುವಿಗೆ ಅಳಬೇಡ, ಮರಿ ನಿನಗೆ ಚಾಕಲೇಟ್ ಕೊದ್ತೀನಿ ಎಂದು ಹೇಳಿದ ತಕ್ಷಣ ಮಗು ಅಳುವುದನ್ನು ನಿಲ್ಲಿಸುತ್ತದೆ। ಚಾಕಲೇಟು ಕೊಡುವುದು ಮುಂದಿನ ಮಾತು। ಆದರೆ ನಿನಗೆ ಚಾಕಲೇಟ್ ಕೊಡ್ತೀನಿ ಎಂದು ನೀಡುವ ಭರವಸೆ ಮಗುವಿಗೆ ಸಾಕು। ಇಂಥಹ ಒಂದು ಭರವಸೆಗಾಗಿ ಮಗು ಮಾತ್ರವಲ್ಲ, ಎಲ್ಲರೂ ಕಾಯುತ್ತಿರುತ್ತಾರೆ। ಹಾಗಿದ್ದರೆ ಭರವಸೆ ಅನ್ನುವುದಿದೆಯಲ್ಲ, ಅದು ಎಲ್ಲರೂ ಬೇರೆಯವರಿಂದ ಬಯಸುವಂತಹುದು। ತಮಾಷೆ ಎಂದರೆ, ಬೇರೆಯವರಿಂದ ಭರವಸೆಯನ್ನು ಬಯಸುವ ನಮಗೆ ಬರವಸೆ ನೀಡುವುದು ಗೊತ್ತಿರುವುದಿಲ್ಲ। ಹಠ ಮಾಡುವ ಮಗುವಿಗೆ ಸಾಂತ್ವನ ಹೇಳುವ, ಆ ಮಗುವಿನಲ್ಲಿ ಭರವಸೆ ಹುಟ್ಟಿಸುವುದಕ್ಕೆ ಬದಲಾಗಿ ಮಗುವನ್ನು ಗದರಿಸಿ ಬಾಯಿಮುಚ್ಚಿಸಲು ನಾವೆಲ್ಲ ಯತ್ನ ನಡೆಸುತ್ತೇವೆ।

ನನಗೆ ಈಗಲೂ ನೆನಪಿದೆ। ನಾನು ಸಣ್ಣವನಿದ್ದಾಗ ಗಲಾಟೆ ಮಾಡಿದಾಗ ಅಪ್ಪನಿಂದ ಬಡಿತ ತಿಂದಾಗ, ನನ್ನ ಅಜ್ಜಿ ನನ್ನನ್ನು ಬಾಚಿ ತಬ್ಬಿಕೊಂಡು ತನ್ನ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ತುಕೊಳ್ಳುತ್ತಿದ್ದಳು। ಆಗೆಲ್ಲ ಅಪ್ಪ ಹೊಡೆದ ನೋವು ಮರೆಯಾಗಿ ಒಂದು ರೀತಿಯ ರಕ್ಷಣೆಯ ಭಾವ ನನ್ನಲ್ಲಿ ಮೂಡಿ ಬಿಡುತ್ತಿತ್ತು। ಸ್ವಲ್ಪ ಸಮಯದಿಂದ ಅಜ್ಜಿಯ ಸೆರಗಿನಡಿಯಿಂದ ಹೊರಕ್ಕೆ ಬಂದು ಆಡಲು ಅಂಗಳಕ್ಕೆ ನಾನು ಒಡಿಬಿಡುತ್ತಿದ್ದೆ। ಹೀಗೆ ಬಾಲ್ಯದಲ್ಲಿ ನಾವು ಪಡೆಯುವ ಇಂಥಹ ಭರವಸೆ ಮತ್ತು ರಕ್ಷಣೆಯ ಅಭಯ ಹಸ್ತ ದೊಡ್ಡವರಾದ ಮೇಲೆ ಕಡಿಮೆಯಾಗುತ್ತದೆ। ಆಗ ನಾವು ಬೇರೆ ಬೇರೆಯವರಿಂದ ಇಂಥಹ ಭರವಸೆಯನ್ನು ಪಡೆಯಲು ಮುಂದಾಗುತ್ತೇವೆ। ನಮ್ಮ ಸಂಪರ್ಕಕ್ಕೆ ಬರುವ, ನಮಗೆ ಆತ್ಮೀಯರಾದವರಿಂದ ಈಂತಹ ಭರವಸೆಗಾಗಿ, ಭರವಸೆಯ ಭಾವನೆಗಾಗಿ ನಾವು ಕಾಯುತ್ತಿರುತ್ತೇವೆ। ಹಾಗಿದ್ದರೆ ಈ ಭಾವನೆ ಎಂದರೇನು ? ಅದು ನಾವು ಬಹಿರಂಗವಾಗಿ ಹೇಳುವ ಮಾತೇ ?ಮಾತೇ ಭಾವನೆ ಅಲ್ಲ। ಮಾತು ಭಾವನೆಯನ್ನು ಸಂವಹನ ಮಾಡುವ ಒಂದು ವಾಹಕ ಮಾತ್ರ। ಈ ವಾಹಕಕ್ಕೆ ಸ್ವಂತ ಅಸ್ಥಿತ್ವ ಇಲ್ಲ। ಮಾತಿನಲ್ಲಿ ನಾವು ಏನನ್ನು ತುಂಬುತ್ತೇವೆ ಎಂಬುದರ ಮೇಲೆ ಆ ಮಾತಿನ ಜೀವಂತಿಕೆ ತೀರ್ಮಾನವಾಗುತ್ತದೆ। ಅಂದರೆ ಭಾವನೆ ಇಲ್ಲದ ಮಾತು ಏನೂ ಅಲ್ಲ। ಮಾತಿಗೆ ಭಾವನೆ ಬೇಕು। ಭಾವನೆಯನ್ನು ಸಂವಹನ ಮಾಡಲು ಮಾತು ಬೇಕು। ಈಗ ಮತ್ತೆ ಭಾವನೆ ಹೇಗೆ ಉದ್ಭವಿಸುತ್ತದೆ ? ಎಂಬುದನ್ನು ನೋಡೋಣ।ನಾವು ಬೇರೆಯವರ ಮಾತು ಕೇಳಿದ ತಕ್ಷಣ ಅದು ಕಿವಿಯ ಮೂಲಕ ಮೆದುಳಿಗೆ ತಲುಪುತ್ತದೆ। ಮೆದುಳು ಈ ಮಾತಿಗೆ ಪ್ರತಿಕ್ರಿಯೆ ಹೇಗೆ ನೀಡಬೇಕು ಎಂದು ನಿರ್ಧರಿಸುತ್ತದೆ। ಈ ಪ್ರತಿಕ್ರಿಯೆಯಲ್ಲಿ ವೈಚಾರಿಕತೆ ಮಹತ್ವವನ್ನು ಪಡೆಯಬಹುದು, ಇಲ್ಲವೇ ಭಾವನಾತ್ಮಕತೆ ಹೆಚ್ಚಿನ ಮಹತ್ವವನ್ನು ಪಡೆಯಬಹುದು। ಯಾವಾಗಲೂ ಈ ಪ್ರತಿಕ್ರಿಯೆ ತಕ್ಷಣ ಬಂದರೆ, ಅಲ್ಲಿ ಭಾವನಾತ್ಮಕತೆ ಹೆಚ್ಚಿನ ಮಹತ್ವಪಡೆಯುತ್ತದೆ। ಮೆದುಳು ಈ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದರೆ ಆಗ ಅಲ್ಲಿ ವೈಚಾರಿಕತೆಯದೇ ಪ್ರಾಧಾನ್ಯ। ಆದರೆ ಭಾವನೆ ಎನ್ನುವುದಿದೆಯಲ್ಲ, ಅದು ಕಾರ್ಯ ಕಾರಣ ಸಂಬಂಧವನ್ನು ವಿಶ್ಲೇಷಿಸುವುದಿಲ್ಲ। ಅದು ಇನಸ್ಟೆಂಟ್ ಆಗಿ ಬರುವಂತಹುದು। ಬಹುಮಟ್ಟಿಗೆ ವಿಚಾರ ಬಹುತೇಕ ಸಂದರ್ಭದಲ್ಲಿ ನಮ್ಮನ್ನು ದಾರಿ ತಪ್ಪಿಸುತ್ತದೆ। ಯಾಕೆಂದರೆ ವಿಚಾರ ಹುಟ್ಟುವುದು ನಮ್ಮ ಭೂತಕಾಲದ ನೆನಪುಗಳ ಮೇಲೆ। ನಮ್ಮ ಮೆದುಳಿನಲ್ಲಿ ಶೇಖರಣೆಯಾದ ವಿಷಯಗಳನ್ನು ವರ್ತಮಾನದ ಮಾತು ವರ್ತನೆಯ ಜೊತೆ ತುಲನೆ ಮಾಡಿ ಒಂದು ನಿರ್ಧಾರಕ್ಕೆ ಬರುವಂತೆ ಮಾಡುವುದು ವಿಚಾರ, ಚಿಂತನೆ। ಕೆಲವೊಮ್ಮೆ ನಾನು ವಿಚಾರ ಮಾಡುವುದನ್ನೇ ವಿರೋಧಿಸುತ್ತೇನೆ। ಯಾಕೆಂದರೆ ವಿಚಾರವೇ ನಮ್ಮನ್ನು ಹಾದಿ ತಪ್ಪಿಸುತ್ತದೆ। ಪ್ರೆಶ್ ಆಗಿ ನೋಡುವುದಕ್ಕೆ ಅವಕಾಶ ನೀಡುವುದಿಲ್ಲ। ಆದರೆ ವಿಚಾರ ಮಾಡದೇ ಇರುವುದಕ್ಕೂ ನಮಗೆ ಸಾಧ್ಯವಾಗುವುದಿಲ್ಲ। ನಮಗೆ ವಿಚಾರವಂತರು ಎಂದು ಹೇಳಿಸಿಕೊಳ್ಳುವ ಚಟ।

ಈಗ ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ। ಅದು ಭಾವನೆಗಳೇ ಇಲ್ಲ ಎಂಬ ಹೇಳಿಕೆಯ ಬಗ್ಗೆ। ಭಾವನೆಯನ್ನು ವ್ಯಕ್ತಪಡಿಸದೇ ಇರುವುದು ಭಾವನೆಗಳೇ ಇಲ್ಲ ಎಂಬುದಲ್ಲ। ಭಾವನೆಗಳನ್ನು ವ್ಯಕ್ತಪಡಿಸಿದರೆ ಇದೇ ಎಂದೂ ಅಲ್ಲ। ಆದರೆ ಮೂಲಭೂತವಾಗಿ ಮುಜುಗರದ ಮನುಷ್ಯನಾದ ನಾನು ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ। ಜೊತೆಗೆ ನಾನು ಹೇಳುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ಬೇರೆಯವರ ಬೇಸರಕ್ಕೆ ಕಾರಣವಾಗಬಾರದು ಎಂಬುದು ಭಾವನೆಗಳು ಇಲ್ಲದಂತೆ ಇರುವುದಕ್ಕೆ ಕಾರಣವಾಗಿರಬಹುದು.









Thursday, March 6, 2008

ನಾನು, ನೀವು ಮತ್ತು ಸಂವಹನ

ಈ ಶತಮಾನದ ಬಹುಮುಖ್ಯವಾದ ಸಮಸ್ಯೆ ಎಂದರೆ, ಸಂವಹನ। ಬಹಳಷ್ಟು ಸಂದರ್ಭಗಳಲ್ಲಿ, ನಾವು ಹೇಳಬೇಕು ಎಂದುಕೊಂಡಿದ್ದನ್ನು ಹೇಳುವುದು ಕಷ್ಟ। ಯಾವುದೋ ಒಂದು ಮಾತನ್ನು ಹೇಳುವುದಕ್ಕೆ ಕೆಲವೊಮ್ಮೆ ಮುಜುಗರವಾಗುತ್ತದೆ। ಕೆಲವೊಮ್ಮೆ ಭಯವಾಗುತ್ತದೆ। ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಹೇಳಲು ಹೊರಟಿರುವ ವಿಚಾರದ ಪರಿಣಾಮ ಎದೆಗುಂದಿಸಿಬಿಡುತ್ತದೆ। ಹೀಗೆ ಹೇಳಬೇಕು ಎಂಬುದನ್ನು ಹೇಳಲಾಗದೇ ಪರಿತಪಿಸುವವರು ಒಂದು ರೀತಿಯವರಾದರೆ, ಎಲ್ಲವನ್ನು ಹೇಳಿ ಸಮಸ್ಯೆಯನ್ನು ತಂದುಕೊಳ್ಳುವವರು ಇನ್ನೊಂದು ರೀತಿಯ ಜನ। ಎರಡನೆಯ ರೀತಿಯ ಜನರಿಗೆ ಮಾತಿನ ಮಹತ್ವವೇ ಗೊತ್ತಿರುವುದಿಲ್ಲ। ಇವರು ಮಾತನ್ನು ಕಳ್ಳೆಕಾಯಿ ಹಂಚಿದಂತೆ ಹಂಚಿಬಿಡುತ್ತಾರೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ಅತಿಯಾಗಿ ಮಾತಿನ ಬಗ್ಗೆ ಯೋಚಿಸಿ ಮಾತನಾಡದೇ ಉಳಿದುಬಿಡುವವರು ಹಾಗೂ ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಿ ಹೋಗಿಬಿಡುವವರು। ಈ ಎರಡೂ ರೀತಿಯವರಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ। ಒಬ್ಬರು ಮಾತನಾಡದೇ ಕೆಟ್ಟರೆ ಇನ್ನೊಂದು ಗುಂಪಿನ ಜನ ಮಾತನಾಡದೇ ಕೆಡುತ್ತಾರೆ।

ಮಾತು ಎನ್ನುವುದಿದೆಯಲ್ಲ,, ಅದು ನಮ್ಮ ಸಂವಹನದ ಪ್ರಮುಖ ಅಂಗ। ಇದಕ್ಕಾಗಿ ನಾವು ಬಳಸಿಕೊಳ್ಳುವುದು ಭಾಷೆ, ಆದರೆ ಯಾವುದೇ ಭಾಷೆ ಇರಲಿ, ಅದರ ಅರ್ಥ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗಿರುತ್ತದೆ। ಒಂದು ಮೂಲ ಶಬ್ದ ಒಂದು ಅರ್ಥವನ್ನು ನೀಡುತ್ತಿದ್ದರೆ, ಅದನ್ನು ಬಳಸುವ ವ್ಯಕ್ತಿ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲ್ಲೆಯಲ್ಲಿ ಬೇರೊಂದು ಅರ್ಥದಲ್ಲಿ ಆ ಶಬ್ದವನ್ನು ಬಳಸುತ್ತಾನೆ। ಹಾಗೆ ಅದನ್ನು ಕೇಳುವವ ತನ್ನ ಅನುಭವ ಮತ್ತು ಗ್ರಹಿಕೆಯ ಹಿನ್ನೆಲೆಯಲ್ಲಿ ಬೇರೊಂದು ಅರ್ಥದಲ್ಲಿ ಅದನ್ನು ಸ್ವೀಕರಿಸುತ್ತಾನೆ। ಹೀಗಾಗಿ ಒಂದು ಶಬ್ದ ಮೂರು ಸ್ಥರಗಳಲ್ಲಿ ಮೂರು ವಿಭಿನ್ನ ಅರ್ಥವನ್ನು ಪಡೆದುಕೊಂಡು ಬಿಡುತ್ತದೆ। ಹೀಗೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗುವ ಬೇರೆ ಬೇರೆ ಅರ್ಥಗಳನ್ನು ನೀಡುವ ಶಬ್ದಗಳನ್ನು ಒಳಗೊಂಡ ಒಂದು ವಾಕ್ಯ ಯಾವ ರೀತಿಯ ಸಂವಹನ ಮಾಡಬಹುದು ? ಅದು ಒಟ್ಟಾರೆಯಾಗಿ ಯಾವ ಪರಿಣಾಮ ನೀಡಬಹುದು ? ಸ್ವಲ್ಪ ಯೋಚಿಸಿ। ನಾನು ಹೇಳಬೇಕು ಎಂದುಕೊಂಡಿದ್ದು ಹೀಗೆ ರೂಪಾಂತರಗೊಂಡು ಬೇರೆಯದಾದ ಅರ್ಥವನ್ನೇ ನೀಡಿದರೆ ಅದರ ಪರಿಣಾಮ ಏನಿರಬಹುದು ?

ಸಾಧಾರಣವಾಗಿ ನಾವು ಭಾಷೆಯನ್ನು ಕಲಿಯುವಾಗ ಒಂದು ಶಬ್ದದ ಅರ್ಥ ಹೀಗೆ ಎಂದು ಡಿಕ್ಷನರಿಯ ಮೂಲಕ ತಿಳಿದುಕೊಳ್ಳಬಹುದು। ಆದರೆ ಅದೇ ಅಂತಿಮ ಅರ್ಥ ಎಂದು ನಾನು ಅಂದುಕೊಂಡಿಲ್ಲ। ಯಾಕೆಂದರೆ ಕಾಲಕ್ರಮದಲ್ಲಿ ಬಳಕೆಯಿಂದಾಗಿ ಈ ಶಬ್ದ ಬೇರೆ ಅರ್ಥ ಸ್ವರೂಪವನ್ನು ಪಡೆದುಕೊಂಡಿರಬಹುದು। ಅಂದರೆ ಶಬ್ದ, ಬಳಕೆ ಮತ್ತು ಆ ಕಾಲ ಘಟ್ಟದ ಜೊತೆ ನಿಕಟ ಸಂಬಂಧವನ್ನು ಹೊಂದಿದೆ ಎಂಬುದು ಸ್ಪಷ್ಟ। ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಈಗ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಒಂದು ಶಬ್ದ ನೀಡುತ್ತಿದ್ದ ಅರ್ಥಕ್ಕೂ ಇಂದು ನೀಡುತ್ತಿರುವ ಅರ್ಥಕ್ಕೂ ವ್ಯತ್ಯಾಸವಿದೆ। ಕಾಲದ ಜೊತೆ ನಂಟನ್ನು ಹೊಂದಿರುವ ಶಬ್ದ, ಆ ಕಾಲ ಘಟ್ಟದ ವ್ಯಕ್ತಿಯ ಜೊತೆಗೂ ಸಂಬಂಧವನ್ನು ಹೊಂದಿರುತ್ತದೆ।ಶಬ್ದವನ್ನು ಬಳಸುವ ವ್ಯಕ್ತಿ, ಆತನ ಕಾಲ ಸೇರಿಯೇ ಒಂದು ಶಬ್ದದ ಅರ್ಥ ನಿರ್ಧಾರವಾಗುತ್ತದೆ। ಈಗ ಒಬ್ಬ ಮಾತನಾಡುವವ ಮತ್ತು ಇನ್ನೊಬ್ಬ ಕೇಳಿಸಿಕೊಳ್ಳುವವರ ನಡುವೆ ಮಾತುಕತೆ ನಡೆಯುವ ಸಂದರ್ಭವನ್ನು ನೋಡಿ। ಇವರಿಬ್ಬರು ಬೇರೆ ಬೇರೆ, ಕಾಲಘಟ್ಟಕ್ಕೆ ಸೇರಿದವರು, ಬೇರೆ ಬೇರೆ ಅನುಭವಗಳನ್ನು ಪಡೆದವರು। ಹಾಗಿದ್ದರೆ ಇವರಿಬ್ಬರ ನಡುವಿನ ಸಂವಹನಕ್ಕೆ ಕಾರಣವಾಗುವ ಶಬ್ದದ ಅರ್ಥ ಬೇರೆ ಬೇರೆಯಾಗಿರುತ್ತದೆಯೆ ? ಹಾಗೆ ಒಂದು ಶಬ್ದಕ್ಕೆ ನಿಖರವಾದ ಅರ್ಥ ಎಂಬುದು ಇಲ್ಲವೆ ?

ಮನುಷ್ಯನ ನಾಗರೀಕತೆಯ ಭಾಗವಾಗಿ ಬೆಳೆದ ಭಾಷೆ, ಮನುಷ್ಯನ ಸಂವಹನ ಕ್ರಿಯೆಯನ್ನು ಸುಲಭಗೊಳಿಸುವ ಕೆಲಸ ಮಾಡಬೇಕಿತ್ತು। ಆದರೆ ಇಂದು ಶಬ್ದ ಮತ್ತು ಭಾಷೆಯೇ ಸಂವಹನ ಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟವನ್ನಾಗಿ ಮಾಡುತ್ತದೆ। ನಾವು ಹೇಳಬೇಕು ಎಂದುಕೊಂಡಿದ್ದು, ನಾವು ಹೇಳಿದ್ದು, ಮತ್ತು ಹೇಳಿದ್ದನ್ನು ಕೇಳಿ ಅರ್ಥಮಾಡಿಕೊಂಡಿದ್ದು, ಇವುಗಳ ನಡುವೆ ಇರುವ ಅಗಾಧ ವ್ಯತ್ಯಾಸ, ಸಂವಹನವನ್ನು ದುರ್ಬಲಗೊಳಿಸುತ್ತದೆ। ಇದೇ ಕಾರಣದಿಂದಾಗಿ ರಾಜಕಾರಣಿಗಳಿಂದ ಸಾಮಾನ್ಯರವರೆಗೆ ಎಲ್ಲರೂ ನಾನು ಹಾಗೆ ಹೇಳಿಲ್ಲ, ಮಾರಾಯ ಅಂತಲೋ, ನಾನು ಹೇಳಿದ್ದರ ಅರ್ಥ ಅದಲ್ಲ ಅಂತಲೋ ಸಮಜಾಯಿಷಿ ನಿಡುವ ಪ್ರಸಂಗ ಹಲವು ಬಾರಿ ಬರುತ್ತದೆ।ಆದರೆ, ಬಹುತೇಕ ಸಂದರ್ಭಗಳಲ್ಲಿ ನಂತರ ನೀಡುವ ಸಮಜಾಯಿಷಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ। ಮೊದಲು ಹೇಳಿದ ಅಥವಾ ಹೇಳಿದರೆಂದು ಭಾವಿಸಲಾದ ಮಾತುಗಳೇ ಕೊನೆಯವರೆಗೂ ಉಳಿದು ಬಿಡುತ್ತದೆ।
ನಾನು ಹಲವು ಬಾರಿ ಇಂತಹ ಸಂವಹನ ಸಮಸ್ಯೆಯನ್ನು ಎದುರಿಸಿದ್ದೇನೆ। ನಾನು ಹೇಳಬೇಕೆಂದುಕೊಂಡಿದ್ದು, ಹೇಳಿದರೂ ಅದು ಬೇರೆ ಅರ್ಥವನ್ನು ನೀಡಿ ಪೇಚಾಡಿಕೊಂಡಿದ್ದೇನೆ। ನಾನು ಮಾತನಾಡಿದ ಉದ್ದೇಶ ಇದು ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದೇನೆ। ಆದರೆ ಹೀಗೆ ಸಮಜಾಯಿಷಿ ನೀಡಿದಾಗಲೆಲ್ಲ, ಈ ನನ್ನ ಮಗ ಹೇಗೆ ಪ್ಲೇಟು ಬದಲಿಸುತ್ತಿದ್ದಾನೆ ನೋಡು ಎಂದು ಮನಸ್ಸಿನಲ್ಲೇ ಬೈದುಕೊಂಡಿದ್ದನ್ನು ನೋಡಿದ್ದೇನೆ। ಆಗೆಲ್ಲ ನನಗೆ ಮೊದಲು ಸಿಟ್ಟು ಬರುವುದು ಭಾಷೆಯ ಮೇಲೆ। ನಂತರ ನಾನು ಸಿಟ್ಟು ಮಾಡಿಕೊಳ್ಳುವುದು ನನ್ನ ಮೇಲೆ। ನಾನು ಭಾಷೆ ಬಳಸುವುದರಲ್ಲಿ ಇನ್ನಷ್ಟು ನಿಸ್ಸೀಮನಾಗಬೇಕಿತ್ತು ಎಂದು ಅಂದುಕೊಂಡು ಸುಮ್ಮನಾಗುವುದು ಸಾಮಾನ್ಯ।
ಆದರೂ ನನಗೆ ಭಾಷೆ ಒಂದು ಸಮಸ್ಯೆ। ಸಂವಹನ ಸಮಸ್ಯೆ। ನಾನು ಹೇಳಿದ್ದನ್ನು ಬೇರೆ ರೀತಿ ಅರ್ಥ ಮಾಡಿಕೊಂಡರಲ್ಲ ಎಂದು ನೋವನ್ನು ಅನುಭವಿಸುವುದು ಇನ್ನೊಂದು ಸಮಸ್ಯೆ। ಒಟ್ಟಿನಲ್ಲಿ, ನಾನು ನೀವು ಮತ್ತು ಸಂವಹನ ಎಲ್ಲವೂ ಸಮಸ್ಯೆಯೇ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...