Saturday, July 19, 2008

ಸಾಯಿಬಾಬಾ ಕಣ್ಣು ಕಣ್ಣು ಬಿಟ್ಟ....!

ಈ ದೇಶದಲ್ಲಿ ಎಲ್ಲವೂ ಮಾರಾಟದ ವಸ್ತು. ಎಲ್ಲವೂ ಶೋಷಣೆಯ ವಸ್ತು. ಇದರಲ್ಲಿ ದೇವರೂ ಕೂಡ ಹೊರತಾಗಿಲ್ಲ. ದೇವರು ಇದ್ದರೆ ಆತ ಸರ್ವ ವ್ಯಾಪಿ. ಆತ ಯಾವುದೋ ದೇವಸ್ಥಾನಕ್ಕೆ, ಮಸೀದಿಗೆ, ಚರ್ಚಿಗೆ ಸೀಮಿತವಾಗಿ ಇರಲು ಸಾಧ್ಯವಿಲ್ಲ. ಆದರೆ ದೇವರ ಏಜೆಂಟರು, ದೇವರ ಹೆಸರು ಹೇಳಿಹೊಟ್ಟೆ ಹೊರೆದುಕೊಳ್ಳುವವರು, ದೇವರನ್ನೇ ಮಾರಾಟಕ್ಕೆ ಇಟ್ಟುಬಿಡುತ್ತಾರೆ. ಬೆಂಗಳೂರಿನಂತಹ ನಗರದಲ್ಲಿ ಭೂ ಮಾಫಿಯಾಕ್ಕೂ ದೇವರಿಗೂ ಎಲ್ಲಿಲ್ಲದ ಸಂಬಂಧ. ಯಾವುದೇ ಸಾರ್ವಜನಿಕ ಭೂಮಿ ಹೊಡೆಯಬೇಕೆಂದರೆ, ಅಲ್ಲಿ ಮೊದಲು ಮಾಡುವ ಕೆಲಸ ಎಂದರೆ, ದೇವರ ಮೂರ್ತಿಯನ್ನು ತಂದಿಟ್ಟು ಬಿಡುವುದು. ಃಇಗೆ ಈ ನಗರದ ಬಹುತೇಕ ವೃತ್ತಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಆತ ಬಿಸಿಲಿಗೆ ಮಳೆಗೆ ತೊಯ್ಯಬಾರದೆಂದು ಭಕ್ತರು ಕಟ್ಟದ ಕಟ್ಟಿದ್ದಾರೆ. ಅಲ್ಲಿ ಪೂಜಾರಿಯೊಬ್ಬ ಬಂದು ಕುಳಿತಿದ್ದಾನೆ. ಇದರೊಂದಿಗೆ ಸರ್ವಶಕ್ತನಾದ ದೇವರು ಆ ರಸ್ತೆಯಲ್ಲಿ ಬರುವ ವಾಹನಗಳ ಮೇಲೆ ಮತ್ತು ಜನರ ಮೇಲೆ ನಿಗ ಇಡುವ ಪೊಲೀಸನಂತಾಗಿದ್ದಾನೆ. ಅವನನ್ನು ಈ ಸ್ಥಿತಿಗೆ ಇಳಿಸಲಾಗಿದೆ.
ಬಿ.ವಿ. ವೈಕುಂಠರಾಜು ಅವರ ಉದ್ಭವ ನಮಗೆಲ್ಲ ಗೊತ್ತು. ಅದು ಸಿನೆಮಾ ಆಗಿಯೂ ಯಶಸ್ವಿಯಾಗಿದೆ. ರಸ್ತೆಯಾಗದಂತೆ ತಡೆಯಲು ದೇವರಮೂರ್ತಿಯನ್ನು ತಂದಿಟ್ಟು ಅದು ಪಡೆದುಕೊಳ್ಳುವ ಬೇರೆ ಬೇರೆ ಆಯಾಮಗಳು ಅಲ್ಲಿ ಬಿಚ್ಚಿಕೊಳ್ಳುತ್ತದೆ. ಈಗ ಭೂಗಳ್ಳರು ಮಾಡುತ್ತಿರುವುದು ಇದೇ ಕೆಲಸವನ್ನೇ. ಇವರ ಕೃತ್ಯದಿಂದಾಗಿ ಎಲ್ಲ ವೃತ್ತಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಕಳ್ಳರಿಂದ ನಮ್ಮನ್ನು ರಕ್ಷಿಸಬೇಕಾದ ದೇವರು, ಭೂಗಳ್ಳರಿಂದಾಗಿ ವಾಹನಗಳ ಹೊಗೆ ಕುಡಿಯುತ್ತ, ಶಬ್ದ ಮಾಲಿನ್ಯದಿಂದ ಬಳಲುವಂತಾಗಿದೆ.
ನಮಗೆಲ್ಲ ದೇವರು ಬೇಕು. ದೇವರಿಗೆ ನಾವು ಬೇಕೋ ಬೇಡವೋ ತಿಳಿಯದು. ಆದರೆ ನಮಗೆ ಬೇಕಾದ ದೇವರನ್ನು ಸರ್ಕಲ್ ಕಾಯುವುದಕ್ಕೆ ಮಕ್ಕಳು ಆಟವಾಡುವ ವೈದಾನದಲ್ಲಿ ಮಧ್ಯ ಕುಳಿತುಕೊಳ್ಳುವುದಕ್ಕೆ ಬಳಸಬಾರದು. ನಮ್ಮ ಹಲ್ಕಾ ವ್ಯವಹಾರಗಳಿಗೆ ದೇವರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇಂತಹ ಸ್ಥಿತಿಯಲ್ಲಿ ಸರ್ಕಾರ ಮತ್ತು ಸ್ಥಳಿಯ ಸಂಸ್ಥೆಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಸಾರ್ವಜನಿಕ ಸ್ಥಳದಲ್ಲಿ ಬಂದು ಕುಳಿತುಕೊಳ್ಳುವ ದೇವರನ್ನು ಸ್ಥಳಾಂತರಿಸಬೇಕು. ಇದಕ್ಕೆ ಪ್ರಾಯಶಃ ದೇವರೂ ಕೂಡ ವಿರೋಧವನ್ನು ವ್ಯಕ್ತಪಡಿಸಲಾರ.
ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣ, ಬೆಂಗಳೂರಿನ ಮನೆಯೊಂದರಲ್ಲಿ ಸಾಯಿಬಾಬು ಮೂರ್ತಿ ತನ್ನ ಎಡಗಣ್ಣನ್ನು ತೆರೆದುಕುಳಿತಿದ್ದು. ಈ ದೇವರಿಗೆ ಬೇರೆ ಕೆಲಸ ಇಲ್ಲವೆ ? ಎಲ್ಲ ಬಿಟ್ಟು ಬೆಂಗಳೂರಿನ ಯಾವುದೋ ಒಂದು ಮನೆಗೆ ಬಂದು ಕಣ್ಣು ಬಿಡುವ ಅಗತ್ಯವಾದರೂ ಏನಿತ್ತು ? ಆತ ಪವಾಡ ಮಾಡುವುದಿದ್ದರೆ ಬೇರೆ ಯಾವುದೋ ರೀತಿಯಲ್ಲಾದರೂ ಪವಾಡ ಮಾಡಬಹುದಿತ್ತು. ಅದನ್ನು ಬಿಟ್ಟು ಕಣ್ಣು ಬಿಟ್ಟು ಕಣ್ಣು ಹೊಡೆದು ಪವಾಡ ಮಾಡುವ ಅಗತ್ಯ ಇರಲಿಲ್ಲ.
ದೇವರು, ಆದ್ಯಾತ್ಮ ಎಲ್ಲವೂ ತುಂಬಾ ಖಾಸಗಿಯಾದದ್ದು. ಅದು ಪ್ರಕೃತಿ ಮತ್ತು ಮನುಷ್ಯರ ನಡುವಿನ ಖಾಸಗಿ ಮಾತುಕತೆ. ಅದು ಪ್ರೇಮಿಸುವ ಎರಡು ಹೃದಯಗಳ ನಡುವಿನ ಪಿಸು ಮಾತಿನ ಹಾಗೆ. ಇದೆಲ್ಲ ಸಾರ್ವಜನಿಕವಾಗಿ ಮಾಡುವ ಕೆಲಸವಲ್ಲ. ದೇವರು ನಮ್ಮ ನಮ್ಮ ಹೃದಯಗಳಲ್ಲಿ ಇರಲಿ. ಆತ ನಮ್ಮ ಜೊತೆ ಮಾತನಾಡುತ್ತ ನಮ್ಮನ್ನು ಎಚ್ಚರಿಸುತ್ತ ಇರಲಿ. ನಾವು ತಪ್ಪು ಮಾಡಲು ಮುಂದಾದಾಗ ಇದು ಸರಿಯಲ್ಲ ಎಂದು ನಮ್ಮ ನಮ್ಮ ಕಿವಿಗಳಲ್ಲಿ ಹಿತವಚನ ನುಡಿಯಲಿ. ಆಗ ದೇವರ ಘನತೆಯೂ ಹೆಚ್ಚುತ್ತದೆ. ಅದನ್ನು ಬಿಟ್ಟು ಕಳ್ಳ ಕಾಕರ ಜೊತೆ, ಸರ್ಕಲ್ ಗಳಲ್ಲಿ ಬಂದು ಕುಳಿತರೆ, ಯಾರದೋ ಮನೆಯಲ್ಲಿ ಕಣ್ಣು ಮೂಗು, ಇನ್ನು ಏನೇನೂ ಬಿಟ್ಟರೆ, ಅದು ಆತನಿಗೂ ಒಳ್ಳೆಯದಲ್ಲ. ದಯಾಮಯನಾದ ದೇವರಿಗೆ ಇದೆಲ್ಲ ಅರ್ಥವಾಗುತ್ತದೆ ಎಂದು ನಂಬೋಣ.

6 comments:

jomon varghese said...

ನಮಸ್ಕಾರ,

ವೈಚಾರಿಕ ಲೇಖನ. ಒಳ್ಳೆಯ ಬರವಣಿಗೆ. ದೇವರಿಗೆ ಬೇರೆ ಕೆಲಸ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕನ್ನಡ ಚಾನೆಲ್ ಒಂದು ಗಂಟೆಗಟ್ಟಲೇ ಇದೇ ಸುದ್ದಿಯನ್ನು live ವರದಿ ಮಾಡುತ್ತಿತ್ತು.ನಾವು ಕಣ್ ಕಣ್ ಬಿಟ್ಟು ನೋಡುತ್ತಿದ್ದೆವು. ಈ ಅವಾಂತರಗಳೆಲ್ಲವನ್ನೂ ನೋಡಿರುವ ದೇವರುಗಳು ಮುಂದಿನ ಬಾರಿ ಏನಾದರೂ ಪವಾಡ ತೋರಿಸುವುದಿದ್ದೆರೆ ಮೊದಲೇ ಪತ್ರಿಕಾಗೋಷ್ಠಿ ಕರೆಯಬಹುದು.

ಧನ್ಯವಾದಗಳು.

ಹಳ್ಳಿಕನ್ನಡ said...

ದೇವರು,ಆಧ್ಯಾತ್ಮ ಎಲ್ಲವೂ ತುಂಬಾ ಖಾಸಗಿಯಾದದ್ದು ಅಂತೀರಲ್ಲಾ ಮುಂದೆ ಬಿಜೆಪಿ ಸರಕಾರ ಬಂದರೆ ರಾಷ್ಟ್ರೀಕರಣ ಮಾಡೋ ಛಾಂನ್ಸಿದೆ.
ಲೇಖನ ಚನ್ನಾಗಿದೆ.

-ಮಂಜುನಾಥ ಸ್ವಾಮಿ

Chamaraj Savadi said...

ಸರ್‌, ದೇವರ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಹಾಗೂ ಮಾಡಿದ ಪವಾಡಗಳನ್ನು ನೋಡಿ ರೋಸಿ ಹೋಗಿದೆ. ಅದನ್ನು ಚಪ್ಪರಿಸುವಂತೆ ಮಾಡಿದ ವರದಿಗಳೂ ಅಸಹ್ಯ ಹುಟ್ಟಿಸಿವೆ. ಮನುಷ್ಯನ ಜೀವನ ಉತ್ತಮಗೊಳಿಸದ ದೇವರು ಹಾಗೂ ಆಚರಣೆಗಳಿಂದ ಏನೂ ಉಪಯೋಗವಿಲ್ಲ.

ದೇವರು ಕಣ್ಣುಬಿಟ್ಟ, ಹಾಲು ಕುಡಿದ, ಕಣ್ಣೀರು ಸುರಿಸಿದ ಎಂಬುದೇ ಆಯಿತು. ಆದರೆ, ಮಾರಕ ಕಾಯಿಲೆಗಳಿಗೆ ಔಷಧಿ ಸೂಚಿಸಲಿಲ್ಲ. ಸುನಾಮಿ ಮುನ್ನೆಚ್ಚರಿಕೆ ನೀಡಲಿಲ್ಲ. ಬುದ್ಧಿಮಾಂದ್ಯ ಮಕ್ಕಳಿಗೆ ಪರಿಹಾರ ದೊರಕಿಸಲಿಲ್ಲ. ಇಂಥ ದೇವರು ಏಕೆ ಬೇಕು?

ದೇವರೆಂದರೆ ದೋಷಗಳಿಲ್ಲದ ಉತ್ತಮ ಮನುಷ್ಯ ತಾನೆ? ಅಂತಹ ದೇವರನ್ನು ಬೀದಿಯಲ್ಲಿ, ಸರ್ಕಲ್‌ಗಳಲ್ಲಿ ಇಡುವ ಜನರಿಗೆ ಧಿಕ್ಕಾರವಿರಲಿ.

ಉತ್ತಮ ಲೇಖನ ಸರ್‌. ಈ ಕುರಿತು ಅರ್ಧ ಗಂಟೆ ಕಾರ್ಯಕ್ರಮ ಮಾಡಿದರೆ ಚೆನ್ನೆನಿಸುತ್ತದೆ.

- ಚಾಮರಾಜ ಸವಡಿ

Vimala said...

ಬರಹ ತು೦ಬಾ ಚೆನ್ನಾಗಿದೆ
vimalanavada.

ರಾಧಾಕೃಷ್ಣ ಆನೆಗುಂಡಿ. said...

ನಿಮ್ಮದೇ ನೇತೃತ್ವದ ವಾಹಿನಿಯಲ್ಲಿ ಕನಿಷ್ಟ ಪಕ್ಷ ಎಚ್ಚರಿಕೆಯ ವರದಿ ಪ್ರಕಟಿಸಬಹುದಿತ್ತಲ್ಲ.

Kumara Raitha said...

chikka chika vaakya.putta lekhana.
manamuttu baravanige.dittatanakkke
dhanyavaada-kumara raitha

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...