Saturday, October 11, 2008

ಯಡಿಯೂರಪ್ಪ ಬಗ್ಗೆ ಏನು ಅನ್ನಿಸುತ್ತದೆ ?

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹೇಗೆ ?
ಭಾರತೀಯ ಜನತಾ ಪಾರ್ಟಿಯ ನಾಯಕರೊಬ್ಬರು ಖಾಸಗಿಯಾಗಿ ಈ ಪ್ರಶ್ನೆ ಕೇಳಿದರು. ನನಗೆ ತಕ್ಷಣ ಉತ್ತರ ಹೇಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನಾನು ಕಲ್ಪಿಸಿಕೊಂಡೇ ಇರಲಿಲ್ಲ. ಈ ಪ್ರಶ್ನೆಯ ಹಿನ್ನೆಲೆಯಲ್ಲಿ ನಾನು ಯಡಿಯೂರಪ್ಪ ಅವರ ಬಗ್ಗೆ ಯೋಚಿಸಿತೊಡಗಿದೆ.
ನಾನು ಅವರನ್ನು ಮೊದಲು ನೋಡಿದ್ದು ೧೯೮೩ ರಲ್ಲಿ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದ ಅವರು ಮೊದ ಮೊದಲು ವಿಧಾನ ಸಭೆಯಲ್ಲಿ ಮಾತನಾಡುತ್ತಿರಲಿಲ್ಲ. ಹಿರಿಯ ನಾಯಕರ ನೆರಳಿನಂತೆ ಓಡಾಡಿಕೊಂಡಿದ್ದ ಅವರು ಮಾತನಾಡಿದರೆ ಅದು ಅರಚಾಟದಂತೆ, ಕೇಳುತ್ತಿತ್ತು. ಯಾವುದರ ಬಗ್ಗೆಯೂ ಆಳವಾಗಿ ಚಿಂತಿಸದೇ ಆ ಕ್ಷಣದಲ್ಲಿ ತಮಗೆ ಅನ್ನಿಸಿದ್ದನ್ನು, ತಮ್ಮ ಭಾಷೆಯಲ್ಲಿ ಹೇಳಿಬಿಡುತ್ತಿದ್ದರು. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಿಂದ ಬಂದವರು ಹೀಗೆ ಇರುತ್ತಾರೆ, ಅವರಿಗೆ ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಬರುವುದಿಲ್ಲ, ಯಡಿಯೂರಪ್ಪ ಕೂಡ ಹಾಗೆ ಎಂದು ನಾನು ಅಂದುಕೊಂಡಿದ್ದೆ. ಯಡಿಯೂರಪ್ಪನವರ ಸಿಟ್ಟು ಪ್ರಾಮಾಣಿಕ ಸಿಟ್ಟು ಎಂಬ ಭಾವನೆ ಕೂಡ ಕೆಲ ಕಾಲ ನನಗಿತ್ತು. ಆದರೆ ಅವರು ಪ್ರಾಮಾಣಿಕರಲ್ಲ ಎಂಬುದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾಕೆಂದರೆ ದಿನದಿಂದ ದಿನಕ್ಕೆ ಅವರ ಆಸ್ತಿ ಹೆಚ್ಚುತ್ತಿತ್ತು. ಶಿವಮೊಗ್ಗದಲ್ಲಿ ಅವರು ಸಂಪಾದಿಸುತ್ತಿದ್ದ ಆಸ್ತಿಯ ಬಗ್ಗೆ ಮಾಹಿತಿ ಬರುತ್ತಿತ್ತು. ಇದನ್ನೆಲ್ಲ ನೋಡುವಾಗ ಅವರ ಸಿಟ್ಟು ಪ್ರಾಮಾಣಿಕವಾದುದಲ್ಲ ಎಂದು ಅನ್ನಿಸುತ್ತಿತ್ತು.
ರಾಜ್ಯ ಬಿಜೆಪಿಯ ಬಹುಮುಖ್ಯ ನಾಯಕರಾಗಿ ಯಡಿಯೂರಪ್ಪ ಆವರ್ಭಿವಿಸಿದ ಮೇಲೆ, ಪಕ್ಷಕ್ಕೆ ರೈತ ಸಮುದಾಯದ ಹೊಸ ಬೇಸ್ ನೀಡುವುದಕ್ಕೆ ಯತ್ನ ನಡೆಸಿದರು. ರೈತರ ಪರವಾಗಿ ಇರುವ ನನ್ನಂತವರಿಗೆ ಬಹಳ ಕಾಲ ಇದು ಸ್ವಾಗತಾರ್ಹ ಎಂದು ಅನ್ನಿಸುತ್ತಿತ್ತು. ಆದರೆ ರೈತರ ಬಗೆಗಿನ ಅವರ ಕಳಕಳಿ ಕೂಡ ರಸ್ತೆಯ ಬದಿಯ ಅರಚಾಟದಂತೆ ಕೇಳತೊಡಗಿತು. ಅವರ ಬಳಿ ರೈತರ ಸಮಸ್ಯೆಗಳಿಗೆ ಪರಿಹಾರ ಇರಲಿಲ್ಲ. ರೈತ ಬೆಳೆದ ಬೆಳೆಗೆ ಕನಿಷ್ಟ ವೈಜ್ನಾನಿಕ ಬೆಲೆ ಸಿಗಬೇಕು ಎಂದು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಅವರಿದ್ದರು. ಹಾಗೆ ಅವರು ಮಂಡಿಸಿದ ಮುಂಗಡ ಪತ್ರ ಕೂಡ ಸಾಲಮನ್ನಾದಂತಹ ಯೋಜನೆಗೆ ಸೀಮಿತವಾಗಿಬಿಟ್ಟಿತು.
ಯಡಿಯೂರಪ್ಪ ಅವರ ರೈತ ಪರ ಕಾಳಜಿಯನ್ನು ಪ್ರಶ್ನಿಸದಿದ್ದರೂ ಅವರ ಬಳಿ ಘೋಷಣೆಗಳನ್ನು ಬಿಟ್ಟು ಬೇರೆನೂ ಇಲ್ಲ ಎಂದು ಅನ್ನಿಸತೊದಗಿದ್ದು ಈ ಕಾರಣಗಳಿಂದಾಗಿ. ಜೊತೆಗೆ ಅವರಲ್ಲಿ ಇದ್ದ ಹುಂಬತನ.
ಯಡಿಯೂರಪ್ಪ ಅವರು ಎಂದು ಮನಸ್ಸು ಬಿಚ್ಚಿ ನಕ್ಕಿದ್ದನ್ನು ನಾನು ನೋಡಿಲ್ಲ. ಯಾವ ವ್ಯಕ್ತಿ ನಗುವಿನ ವಿರೋಧಿಯಾಗಿರುತ್ತಾನೋ ಆತ ಸರ್ವಾಧಿಕಾರಿಯಾಗಿರುತ್ತಾನೆ. ಆತನಿಗೆ ಬೇರೆಯವರ ಮಾತು ಕೇಳುವ ಕನಿಷ್ಥ ಸೌಜನ್ಯ ಕೂಡ ಇರುವುದಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಮಾಡಿದ ಮೊದಲ ಕೆಲಸ ಅಂದರೆ ಮಠಗಳಿಗೆ ಬೇಟಿ ನೀಡಿದ್ದು, ಸ್ವಾಮಿಗಳ ಕಾಲಿಗೆ ಬಿದ್ದಿದ್ದು. ಈ ಮೂಲಕ ನಾಡಿನ ಜನರಿಗೆ ಅವರು ನೀಡಿದ ಸಂದೇಶ ಏನು ? ಇದೆಲ್ಲ ಯಾಕೆ ಮುಖ್ಯಮಂತ್ರಿಗಳಿಗೆ ಅರ್ಥವಾಗುವುದಿಲ್ಲ ?
ಈ ಕೆಲವು ಮಾತುಗಳನ್ನು ನಾನು ಹಿರಿಯ ಬಿಜೆಪಿ ನಾಯಕರಿಗೆ ಹೇಳಿದೆ.
ಇದಾದ ಮೇಲೆ ನನ್ನ ಸ್ನೇಹಿತರೊಬ್ಬರು ನೀವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು, ನಿಮಗೆ ಅನ್ನಿಸಿದ್ದನ್ನು ಅವರಿಗೆ ಹೇಳಬೇಕು ಎಂದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಕ್ಕೆ ನನ್ನ ಅಭ್ಯಂತರ ಇರಲಿಲ್ಲ.
ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹೀಗೆ ಹೇಳಿದೆ;
ಸಾರ್ ನನಗೆ ನಿಮ್ಮಿಂದ ಏನೂ ಆಗಬೇಕಿಲ್ಲ. ನೀವು ಇಚ್ಚೆ ಪಟ್ಟಿದ್ದರಿಂದ ನಿಮ್ಮನ್ನು ನೋಡುತ್ತಿದ್ದೇನೆ. ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಯಾವ ಸಂದರ್ಭದಲ್ಲಿ ಮರೆಯಬೇಡಿ. ನೀವು ಬಿಜೆಪಿ, ಸಂಘ ಪರಿವಾರದ ಮುಖ್ಯಮಂತ್ರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಎಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿ ಎಂಬುದು ಇರುತ್ತದೆಯೋ ಅಲ್ಲಿಯವರೆಗೆ ನೀವು ಈ ನಾಡಿನ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ದುರ್ದೈವ ಎಂದರೆ ಇದುವರೆಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸಿಲ್ಲ.
ಒಬ್ಬ ಮುಖ್ಯಮಂತ್ರಿಯಾದವನು ರಾಜನೀತಿಜ್ನನಾಗಿರಬೇಕು. ಆತ ಸ್ಟೇಟ್ಸ್ ಮನ್ ಆಗಿರಬೇಕು. ಆದರೆ ನೀವು ಪಂಚಾಯಿತಿ ಮಟ್ಟದ ರಾಜಕಾರಣಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ.
ನನಗೆ ನಿಮ್ಮ ಮುಖದಲ್ಲಿ ನಗುವನ್ನು ನೋಡುವುದು ಇಷ್ಟ. ನೀವು ನಗುತ್ತಿದ್ದರೆ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮ ಮನಸ್ಸು ಹಗುರಾದರೆ ನೀವು ಪ್ರಾಮಾಣಿಕವಾಗಿ ಯೋಚಿಸಬಲ್ಲಿರಿ. ನೀವು ಪ್ರಾಮಾಣಿಕವಾಗಿ ಯೋಚಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆ.
ಯಡಿಯೂರಪ್ಪ ನಾನು ಹೇಳಿದ್ದನ್ನು ಕೇಳಿಸಿಕೊಂಡರು. ನಾನು ಹೇಳಿದ್ದು ಅವರಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ.

2 comments:

gosuba said...

ಇಷ್ಟು ಹೇಳಿದ ಮೇಲೆ ಸ್ವಲ್ವವಾದರೂ ಮನಸ್ಸಿಗೆ ಮುಟ್ಟಿರಲೇಬೇಕು ಬಿಡಿ ಸಾರ್‍. ಯಾಕೆಂದರೆ ಅವರಿಗೂ ವಯಸ್ಸಾಗುತ್ತಿದೆ.ಪ್ರೀತಿ ಇದ್ದೊಡೆ ನಗುವಿರಲೇ ಬೇಕು. ಮನಸ್ಸು ಅರಳಲೇ ಬೇಕು.ನಿಮ್ಮ ಬಳಿ ನಗದಿದ್ದರೂ ಎಲ್ಲಿಯಾದರೂ ನಗುತಾರೆ ಬಿಡಿ ...!
ಮನುಷ್ಯನಿಗೆ ಶಕ್ತಿಯಷ್ಟೆ ಕೆಲವು ದೌರ್ಬಲ್ಯಗಳು ಇರುತ್ತವೆ.ಹಾಗೆ ಇವರಿಗೂ ಕೆಲವು ಇರಬಹುದೇನೋ ಆದರೆ,ನೀವು ಹೇಳಿದ ಹಾಗೆ ಪ್ರಾಮಾಣಿಕತೆ,ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ಮುಖ್ಯಮಂತ್ರಿ ಅವರಾಗಬೇಕು ಎಂಬ ಮಾತಿಗೆ ನನ್ನ ಪೂರ್ಣ ಸಹಮತವಿದೆ. ಇನ್ನಾದರೂ ಬದಲಾವಣೆಗೆ ಅವರ ಮನಸ್ಸು ತೆರೆದುಕೊಳ್ಳಲಿ ಎಂದು ಆಶಿಸೋಣ.ರಾಜ್ಯ ಸರ್ವಾಂಗೀಣ ಪ್ರಗತಿ ಕಾಣಲಿ ; ಎಲ್ಲಾ ಜಾತಿ ಧರ್ಮಗಳ ಜನರು ನಿರ್ಭೀತಿಯಿಂದ ಬದುಕುವಂತಾಗಲಿ ಎಂದು ಹಾರೈಸೋಣ.

Kumara Raitha said...

ನೇರ ಮಾತು.ನೀವು ಹೇಳಿದ್ದನ್ನು ಈ ಸಿ.ಎಂ.ಗ್ರಹಿಸಿದರೆ
ಉತ್ತಮ ಆಡಳಿತ ನೀಡಲು ಯತ್ನಿಸಬಹುದು.ಅದೇನೆ ಇರಲಿ
ನಿಮ್ಮ ಈ ಬರಹದಿಂದ ಲಂಕೇಶ್ ನೆನಪಾಗುತ್ತಿದ್ದಾರೆ.ಲಂಕೇಶ್
ಈಗಿದ್ದರೆ ಅವರ ಅನಿಸಿಕೆ ಇದೇ ರೀತಿ ಇರುತ್ತಿತ್ತು.ಯಾವುದೇ
ಮುಲಾಜಿಲ್ಲದೆ ಸತ್ಯ ಹೇಳಿದ್ದಕ್ಕೆ ಧನ್ಯವಾದ-ಕುಮಾರ ರೈತ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...