ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಒಂದು ಅಧ್ಯಾಯ ಮುಗಿದಿದೆ. ಆದರೆ ಈ ಕಥೆ ಮುಗಿದಿಲ್ಲ. ಸುಮಾರು ೨೦೦ ಜನ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ನಾವು ಶ್ಲಾಘಿಸಲೇಬೇಕು. ಆದರೆ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ.
ಇಲ್ಲಿನ ರಾಜಕಾರಣಿಗಳು. ಇವರಿಗೆ ಮನುಷ್ಯರೆಲ್ಲ ಕಾಣುವುದು ಓಟುಗಳಾಗಿ. ಮತದ ರಾಜಕಾರಣವನ್ನು ಬಿಟ್ಟು ಯೋಚನೆ ಮಾಡದ ಜನ ಇವರು. ನಮ್ಮ ಯಡೀಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಇವರು ಇಂದು ಬೆಳಿಗ್ಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದ ಸಂದೀಪ್ ಉನ್ನಿಕೃಷ್ಣನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಹೀಗೆ ಬಂದವರು ಅವರ ಶವದ ಮೇಲೆ ಹೂಗುಚ್ಛ ಇರಿಸಿ ಟಿವಿಗಳಿಗೆ ಬೈಟ್ ನೀಡಿ ಹೊರಟು ಬಿಟ್ಟರು. ಕನಿಷ್ಟ ಈ ಯೋಧನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವವರೆಗೆ ಇರುವ ವ್ಯವಧಾನ ಸಮಯ ಕೂಡ ಅವರಿಗೆ ಇರಲಿಲ್ಲ.
ಇನ್ನು ಶಿವರಾಜ್ ಪಾಟೀಲ್ ಎಂಬ ದೇಶದ ಗೃಹ ಸಚಿವರು. ಇವರಿಗೆ ಸೋನಿಯಾ ಗಾಂಧಿ ಅವರ ಸೆರಗು ಹಿಡಿದುಕೊಂಡು ಓಡಾಡುವುದೇ ಬಹುಮುಖ್ಯ ಕೆಲಸ. ದೇಶದ ಆಂತರಿಕ ಭದ್ರತೆಯ ದೋಷವನ್ನು ಸರಿಪಡಿಸುವುದಕ್ಕೂ ಸಮಯವಿಲ್ಲ. ಜೊತೆಗೆ ಇಂತಹ ಘಟನೆ ನಡೆದಾಗ ಮಾನ ಮರ್ಯಾದಿ ಇರುವ ಸಚಿವರಾಗಿದ್ದರೆ, ರಾಜೀನಾಮೆ ನೀಡಿ ಮನೆಗೆ ಹೋಗುತ್ತಿದ್ದರು. ಇವರು ಆ ಕೆಲಸವನ್ನು ಮಾಡಲಿಲ್ಲ. ಕಾಂಗ್ರೆಸ್ ವರಿಷ್ಠೆ ಏನು ಮಾಡಬಹುದು ಎಂದು ಕಾಯುತ್ತ ಕುಳಿತಿದ್ದಾರೆ. ಇಂತಹ ರಾಜಕಾರಣಿಗಳು ನಮ್ಮ ದೇಶವನ್ನು ಆಳುತ್ತಿದ್ದಾರೆ.
ಈ ಘಟನೆಯನ್ನೇ ನೋಡಿ. ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಉಗ್ರಗಾಮಿಗಳು ಆರು ತಿಂಗಳ ಹಿಂದೆ ದೋಣಿಯಲ್ಲಿ ಬಂದು ಮುಂಬೈ ಸೇರುತ್ತಾರೆ. ಹೋಟೆಲ್ ನಲ್ಲಿ ತಮ್ಮ ಕೇಂದ್ರ ಸ್ಥಾಪಿಸುತ್ತಾರೆ. ಶಸ್ತ್ರಾಸ್ತ್ರಗಳನ್ನು ಸಲೀಸಾಗಿ ತಂದು ದಾಸ್ತಾನು ಮಾಡುತ್ತಾರೆ. ಇದು ನಮ್ಮ ಬೇಹುಗಾರಿಕಾ ಪಡೆಗೆ ತಿಳಿಯುವುದಿಲ್ಲ.
ನಮ್ಮ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಇಂತಹ ವಿಚಾರಗಳಲ್ಲಿ ಹಿಂದೂ ಮತದ ಬ್ಯಾಂಕ್ ಅನ್ನು ಲಕ್ಶ್ಯದಲ್ಲಿರಿಸಿಕೊಂಡು ಮಾತನಾಡುತ್ತದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ವರ್ತಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಬಿಜೆಪಿ ಮುಸ್ಲಿರೆಲ್ಲ ಭಯೋತ್ಪಾದರು ಎಂದು ಹೇಳಿದರೆ, ಯಾವ ಮುಸ್ಲಿಮ್ ನೂ ಭಯೋತ್ಪಾದಕನಲ್ಲ ಎಂದು ಕಾಂಗ್ರೆಸ್ ವಾದಿಸುತ್ತದೆ. ಈ ಮೂಲಕ ಎರಡೂ ಪಕ್ಷಗಳು ಸುಳ್ಳಿನ ಮೇಲೆ ಅರಮನೆ ಕಟ್ಟಲು ಹೊರಡುತ್ತವೆ. ಇವರ ದೃಷ್ಟಿಯಲ್ಲಿ ದೇಶ ಎಂದರೆ ಏನು ಎಂಬುದೇ ತಿಳಿಯುವುದಿಲ್ಲ. ಬಿಜೆಪಿಗೆ ದೇಶ ಎಂದರೆ ಅತೀ ಭಾವುಕತೆ. ಕಾಂಗ್ರೆಸ್ ಪಕ್ಷಕ್ಕೆ ದೇಶ ಎಂದರೆ ಎಲ್ಲರೂ ತಮಗೆ ಬೇಕಾದಂತೆ ವರ್ತಿಸಬಹುದಾದ ಓಪನ್ ಫೀಲ್ಡ್. ಆದರೆ ಅದು ಹಾಗಲ್ಲ. ದೇಶ ಎಂದರೆ ಹಲವು ಭಾಷೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಒಂದು ವೈವಿದ್ಯಪೂರ್ಣ ಬದುಕಿನ ಮೊತ್ತ. ವಿಭಿನ್ನ ವಿಚಾರಧಾರೆ, ಹಿನ್ನೆಲೆ, ಧರ್ಮಗಳನ್ನು ಒಳಗೊಂಡವರು ಏಕತೆಯಿಂದ ಬದುಕುವ ತಾಣ.
ಮುಂಬೈನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಉಗ್ರಗಾಮಿಯೊಬ್ಬ ವಾಹಿನಿಯೊಂದಕ್ಕೆ ನೀಡಿದ್ದ ಫೋನೋ ಕೇಳಿದೆ. ಅವನು ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ನಾವು ತಡೆಯುತ್ತೇವೆ ಎಂದು ಹೇಳಿದ್ದ, ಅವನಿಗೆ ಬದುಕಿಗಿಂತ ಇಸ್ಲಾಮ್ ದೊಡ್ದದಾಗಿತ್ತು. ಇಸ್ಲಾಮ್ ಧರ್ಮವನ್ನು ಉಳಿಸುವುದಕ್ಕಾಗಿ ಆತ ಜನರ ಕಗ್ಗೊಲೆ ಮಾಡಲು ಸಿದ್ಧನಾಗಿದ್ದ. ಯಾರು ಬದುಕಿಗಿಂತ ಧರ್ಮ ದೊಡ್ದದು ಎಂದುಕೊಳ್ಳುತ್ತಾರೋ ಅವರು ಅಯೋಗ್ಯರು. ನಮ್ಮ ಕಣ್ಣೆದುರಿಗಿರುವ ಜನರಿಗಿಂತ ಕಾಣದ ಅಲ್ಲಾ, ದೇವರುಗಳು ಮುಖ್ಯರಾದರೆ ಅವರು ಇಲ್ಲಿ ಬದುಕುವುದಕ್ಕೆ ಯೋಗ್ಯರಲ್ಲ. ರಕ್ತದ ಕಲೆಗಳ ಮೇಲೆ ಧರ್ಮವನ್ನು ಉಳಿಸಲು ಹೊರಟರೆ, ಅವರು ಇಲ್ಲಿರುವುದಕ್ಕಿಂತ ಆ ದೇವರ ಹೋಗುವುದು ಒಳ್ಳೆಯದು.
Saturday, November 29, 2008
Friday, November 28, 2008
ಇದು ಮೌನದ ಸಮಯ.........
ಈ ಚಿತ್ರವನ್ನು ನೋಡಿ. ಜೀವ ಕೊಡುವ ಶಕ್ತಿ ಇಲ್ಲದ ನಮಗೆ ಜೀವ ತೆಗೆಯುವ ಹಕ್ಕು ಬರುವುದು ಹೇಗೆ ?
ಧರ್ಮ ದೇವರು ನಮಗೆ ಯಾಕೆ ಬೇಕು ?
ಯಾಕೆ ಮನುಷ್ಯ ಇಷ್ಟು ಕ್ರೂರಿ ಯಾಗುತ್ತಿದ್ದಾನೆ ? ಯಾಕೆ ಅವನಿಗೆ ಜೀವ ತೆಗೆಯಲು ಆಸೆ ?
ಇದು ಉತ್ತರ ಗೊತ್ತಿಲ್ಲದ ಪ್ರಶ್ನೆಗಳು.
ನಾವು ಅಪ್ಪಟ ಸುಳ್ಳುಗಾರರು. ನಮ್ಮ ಶಬ್ದಗಳು ಸುಳ್ಳು. ಮಾತುಗಳು ಸುಳ್ಳು. ಇಂತಹ ಸಂದರ್ಭದಲ್ಲಿ ಮಾತನಾಡಲು ಮನಸ್ಸಾಗುವುದಿಲ್ಲ. ಇದು ಮೌನದ ಸಮಯ. ನಮ್ಮ ಮನಸ್ಸುಗಳು ಹೆಪ್ಪುಗಟ್ಟಲಿ. ಮೌನ ಸ್ಥಾಯಿಯಾಗಲಿ. ನಾವೆಲ್ಲ ಮೌನವಾಗಿರೋಣ. ಆಗಲಾದರೂ ನಮ್ಮ ಪ್ರಶ್ನೆಗಳಿಗೆ ಉತ್ತರ ದೊರಕಬಹುದು. ದಯವಿಟ್ಟು ಮಾತನಾಡಬೇಡಿ. ನೀವು ಮಾತನಾಡಿದರೆ ಸುಳ್ಳಾಗುತ್ತೀರಿ. ನಿಮ್ಮ ತರ್ಕದ ಶಕ್ತಿಯನ್ನು ಪ್ರದರ್ಶಿಸಲು ಪ್ರಾರಂಭಿಸುತ್ತೀರಿ. ನಿಮ್ಮ ವೈಚಾರಿಕತೆಯ ಪ್ರದರ್ಶನ ಮಾಡಲು ಮುಂದಾಗುತ್ತೀರು. ತರ್ಕ ಮತ್ತು ವೈಚಾರಿಕತೆ ಸತ್ಯವಲ್ಲ. ಅದು ಸತ್ಯ ಹೀಗೆ ಎಂದು ಹೇಳುವ ಅಹಂಕಾರ. ಆದ್ದರಿಂದ ಇದು ಮೌನದ ಸಮಯ. ಬುದ್ದನಂತೆ ಧ್ಯಾನಿಸುವ ಸಮಯ. ನಾವೆಲ್ಲ ಎಚ್ಚರಗೊಳ್ಳುವ ಸಮಯ. ಎಚ್ಚರಗೊಳಿಸುವ ಸಮಯ.
Tuesday, November 25, 2008
ಛಿ....ಥೂ......ರಾಜಕಾರಣ.....!
ಇಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಿ. ಸಿ. ತಮ್ಮಣ್ಣ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ತಮ್ಮಣ್ಣ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತು. ಚುನಾವಣೆಗೆ ಮೊದಲು ಇನ್ನೊಂದು ಅಪೇರೇಷನ್ ಕಮಲ ನಡೆದುಹೋಯಿತು.
ಕರ್ನಾಟಕದ ರಾಜಕಾರಣ ಯಾವ ಹಂತವನ್ನು ತಲುಪಿ ಬಿಟ್ಟಿದೆ ನೋಡಿ. ಬಹುತೇಕ ರಾಜಕಾರಣಿಗಳು ಮಾರಾಟದ ಸರಕುಗಳಾಗಿದ್ದಾರೆ. ರಾಜಕೀಯ ಸಿದ್ಧಾಂತ ಮರೆಯಾಗುತ್ತಿದೆ. ಪಕ್ಷ ಪಕ್ಷಗಳ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ. ಇಂಥಹ ಸ್ಥಿತಿಯಲ್ಲಿ ಯಾರನ್ನು ಬೈಯುವುದು ? ಈ ಯಡಿಯೂರಪ್ಪ ಇಷ್ಟು ನಿರ್ಲಜ್ಜರು ಎಂದು ನಾನಂತೂ ಅಂದುಕೊಂಡಿರಲಿಲ್ಲ. ಅವರ ಹುಂಬತನ ಸಿಟ್ಟು ಎಲ್ಲವೂ ಸಹನೀಯ ಎಂದುಕೊಂಡವನು ನಾನು. ಗ್ರಾಮಾಂತರ ಪ್ರದೇಶದಿಂದ ಬಂದ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈತ ಏನಾದರೂ ಮಾಡ್ತಾನೆ ಕಣ್ರಿ ಎಂದು ನಮ್ಮ ರಾಜಕೀಯ ಸ್ನೇಹಿತರು ಹೇಳಿದ್ದರು. ನಾನೂ ಸಹ ಈತ ಏನಾದರೂ ಮಾಡಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರು ಮಾಡಿದ್ದು ಗಣಿ ದೊರೆಗಳ ಯಂಜಲು ರಾಜಕೀಯದ ಆಶ್ರಯದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಹೊರಟಿಬಿಟ್ಟರು. ಎಲ್ಲ ಶಾಸಕರಿಗೆ ಆಸೆ ಆಮೀಷ ಒಡ್ಡಿ ಅವರೆಲ್ಲ ಅಂಗಡಿ ತೆರೆದು ಕುಳಿತುಕೊಳ್ಳುವಂತೆ ಮಾಡಿದರು. ಅಧಿಕಾರ ಹಣ ಮುಖ್ಯ ಎಂದುಕೊಂಡ ಶಾಸಕರು, ತಮ್ಮ ತಮ್ಮ ಹಣೆಯ ಮೇಲೆ ರೇಟಿನ ಪಟ್ತಿ ಹಾಕಿಕೊಂಡು ಅಂಗಡಿಯಲ್ಲಿ ಕುಳಿತುಬಿಟ್ತರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಶೇತರ ಶಾಸಕರನ್ನು ಸೆಳೆದಾಗ ಭ್ರಮನಿರಸನವಾಗಿತ್ತು. ಬೇರೆ ಪಕ್ಷದ ಶಾಸಕರನ್ನು ಸೆಳೆದು ಅವರಿಂದ ರಾಜೀನಾಮೆ ಕೊಡಿಸಿ, ಸಚಿವರನ್ನು ಮಾಡಿದಾಗ ಛೀ ಥೂ ಎಂದು ಉಗಿಯಬೇಕು ಎನ್ನಿಸಿತ್ತು. ಈ ಪ್ರಕ್ರಿಯೆ ಶಾಸಕರ ಮಟ್ಟದಲ್ಲಿ ಮಾತ್ರವಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆದಾಗ ಈ ಮನುಷ್ಯನಿಗೆ ಲಜ್ಜೆ ಮಾನ ಮರ್ಯಾದಿ ಇಲ್ಲವೇ ಎಂದು ಅನ್ನಿಸಿತ್ತು.
ಈಗ ಉಪ ಚುನಾವಣೆರ್ ಘೋಷಣೆಯಾದ ಮೇಲೆ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಮಾಜಿ ಶಾಸಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಂಡು ಅವರಿಗೆ ಟಿಕೆಟ್ ಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ ಬೈಯುವುದಕ್ಕೂ ಮನಸ್ಸಾಗುತ್ತಿಲ್ಲ. ಯಾಕೆಂದರೆ ಅವರನ್ನು ಬೈಯಲು ಶಬ್ದಗಳೇ ಇಲ್ಲ.
ರಾಜಕಾರಣ ಹೊಲಸು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಸ್ಥಿತಿಯಲ್ಲಿ ಪತ್ರಿಕೋದ್ಯಮಿಯಾಗಿ ನಮ್ಮ ಪಾಲೆಷ್ಟು ಎಂದು ಯೋಚಿಸುತ್ತೇನೆ. ಆಗೆಲ್ಲ ಬೇರೆ ಬೇರೆ ರಾಜಕಾರಣಿಗಳ ಮನೆಗಳಲ್ಲಿ ಕಾಣಿಸಿಕೊಳ್ಳುವ ಅವರಿಗೆ ಸಲಹೆ ನೀಡುವ ಪತ್ರಿಕೋದ್ಯಮಿಗಳ ಚಿತ್ರ ಕಣ್ಣು ಮುಂದೆ ಬರುತ್ತದೆ. ಆಗ ನಾನು ನನ್ನ ಬಾಯಲ್ಲಿ ತುಂಬಿಕೊಂಡ ಕವಳವನ್ನು ಉಗಿದು ಬಾಯಿ ತೊಳೆದುಕೊಳ್ಳುತ್ತೇನೆ.

Friday, November 21, 2008
ಮತಾಂತರ - ಹೀಗೊಂದು ಅನಿಸಿಕೆ.
ಮತಾಂತರದ್ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಹಾಗೆ ಹಲವು ಪತ್ರಿಕೆಗಳು ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿವೆ. ಆದರೆ ಇದು ಅಂತಹ ಮಹತ್ವದ ವಿಚಾರವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಮೊದಲನೆಯದಾಗಿ ಮತ ಅಥವಾ ಧರ್ಮ ಕಾಲು ಕೆದರಿ ಜಗಳ ಮಾಡುವಷ್ಟು ಮುಖ್ಯವೆ ? ನಮಗೆ ಇದಕ್ಕಿಂತ ಮುಖ್ಯವಾದ ಸಮಸ್ಯೆಗಳು ಇಲ್ಲವೆ ?
ಭಾರತದ ಸಂವಿಧಾನ ಇಲ್ಲಿನ ಪ್ರತಿಯೊಬ್ಬ ನಾಗರಿಕನೂ ತಮಗೆ ಬೇಕಾದ ಧರ್ಮವನ್ನು ಅನುಸರಿಸಲು ಅವಕಾಶ ಕಲ್ಪಿಸಿದೆ. ಯಾರಿಗೆ ಧರ್ಮ ಮತಾಚರಣೆಗಳು ಬೇಕೋ ಅವರು ತಮಗೆ ಇಷ್ಟವಾದ ಮತಾಚರಣೆ ಧರ್ಮಾಚರಣೆಯಲ್ಲಿ ಮಾಡಲು ಅವಕಾಶವಿದೆ. ಹೀಗಿರುವಾಗ ಸಮಸ್ಯೆ ಇರುವುದು ಎಲ್ಲಿ ?
ಈಗ ನಾವು ಹಿಂದೂ ಧರ್ಮದತ್ತ ನೋಡೋಣ. ಈ ಧರ್ಮದ ಪರವಾಗಿ ಮಾತನಾಡುವವರು, ಇದು ಪರಮ ಶ್ರೇಷ್ಠವಾದ ಧರ್ಮ ಎಂದು ವಾದಿಸುತ್ತ ಸರ್ವ ಧರ್ಮ ಸಹಿಷ್ಣತೆಯ ಪಾಠ ಮಾಡುತ್ತಾರೆ. ಹಾಗೆ ಇಸ್ಲಾಂ, ಕ್ರಿಶ್ಚಿಯನ್ನರು ತಮ್ಮ ಧರ್ಮವೇ ಪರಮ ಶ್ರೇಷ್ಠವೆಂದು ಕರೆದು ಉಳಿದವರನ್ನು ಪಾಪಿಗಳು, ಕಾಫಿರರು ಎಂದು ಕರೆಯುತ್ತಾರೆ. ಧರ್ಮ ಪ್ರಚಾರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಭಾಗವೇ ಆದ್ದರಿಂದ ಈ ಕಾರ್ಯದಲ್ಲಿ ಭಯ ಭಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಂದೆಡೆ ತಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ಹೊರಾಡುವವರು ಇನ್ನೊಂದೆಡೆ ತಮ್ಮ ಧರ್ಮವನ್ನು ವಿಸ್ತರಿಸಲು ಹೊರಟವರು. ಈ ಎರಡು ರೀತಿಯ ಜನರಲ್ಲಿ ಒಬ್ಬರಿಗೂ ಧರ್ಮದ ನೈಜ ಕಲ್ಪನೆಯೇ ಇಲ್ಲ.
ಕಾರಣವಿಷ್ಟೇ, ಧರ್ಮ ಸಾಮಾಜಿಕ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತದೆಯೇ ಅಥವಾ ಆಧ್ಯಾತ್ಮಿಕ ಬದುಕನ್ನು ರೂಪಿಸುತ್ತದೆಯೇ ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು. ಧರ್ಮದ ಕೆಲಸ, ಆಧ್ಯಾತ್ಮಿಕತೆಯಾಗಿದ್ದರೆ ಅದಕ್ಕೆ ಲೌಕಿಕತೆ ಗೌಣ. ಅಲ್ಲಿ ಮನುಷ್ಯನಿಗೆ ಮನಶ್ಯಾಂತಿ ನೀಡುವ ಕೆಲಸವನ್ನು, ಆತನ ಆಧ್ಯಾತ್ಮಿಕ ಹಸುವನ್ನು ನೀಗಿಸುವ ಕೆಲಸವನ್ನು ಧರ್ಮ ಮಾಡಬೇಕು. ಆದರೆ ಸಮಸ್ಯೆ ಎಂದರೆ, ಆಧ್ಯಾತ್ಮಿಕತೆಯ ಜೊತೆ ಸತತ ಸಂವಾದ ನಡೆಸಬೇಕಾದ ಧರ್ಮ ಸಾಮಾಜಿಕ ಬದುಕಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತದೆ. ಸಮಾಜದಲ್ಲಿ ಹೇಗೆ ಬದುಕಬೇಕು, ಎಂಬುದನ್ನು ನಿರ್ಧರಿಸಬೇಕಾದ್ದು ಸರ್ಕಾರಆ ಸಮಾಜದಲ್ಲಿ ಬದುಕುವವರು. ಇದು ಧರ್ಮದ ಕೆಲಸವಲ್ಲ. ಧರ್ಮ ಬದುಕುವ ಧರ್ಮದ ಬಗ್ಗೆ ಮಾತನಾಡುವುದಾದರೆ ಅದು ಆಯಾ ಕಾಲಕ್ಕೆ ಬದಲಾಗಬೇಕು, ಯಾಕೆಂದರೆ ಬದುಕು ಹೇಗಿರಬೇಕು ಎಂಬುದನ್ನು ಆಯಾ ಕಾಲದಲ್ಲಿ ನಿರ್ಧರಿಸಬೇಕು. ಯಾಕೆಂದರೆ ಬದುಕುವುದಕ್ಕೆ ಸಾರ್ವಕಾಲಿಕವಾದ ನಿಯಮ ಇರುವುದು ಸಾಧ್ಯವಿಲ್ಲ. ಊದಾಹರಣೆಗೆ ವೇದ ಕಾಲದಲ್ಲಿನ ಬದುಕುವ ವಿಧಾನ ಇಂದು ಅಪ್ರಸ್ತುತ. ಹಾಗೆ ಇಸ್ಲಾಮ್ ಧರ್ಮ ಪ್ರಾರಂಭವಾದಗಿನ ಬದುಕುವ ರೀತಿ ನೀತಿ ಇಂದಿನ ಜಗತ್ತಿಗೆ ಸರಿ ಹೊಂದುವುದಿಲ್ಲ. ಜೊತೆಗೆ . ಧರ್ಮಕ್ಕೂ ಸಾಮಾಜಿಕ ಬದುಕಿಗೂ ಸಂಬಂಧ ಇದ್ದರೂ, ಸಾಮಾಜಿಕ ಬದುಕಿನ ಮೇಲೆ ಧರ್ಮ ಸವಾರಿ ಮಾಡಬಾರದು. ಈ ಕೆಲಸವನ್ನು ಸರ್ಕಾರಕ್ಕೆ ಬಿಟ್ಟು ಬಿಡಬೇಕು.
ಹಿಂದೂ ಧರ್ಮ ಸಾಮಾಜಿಕ ಕಟ್ಟು ಪಾಡಿನ ಬಗ್ಗೆ ಮಾತನಾಡಿದ್ದರಿಂದಲೇ ವರ್ಣಾಶ್ರಮ ಧರ್ಮ ಇಲ್ಲಿ ಪ್ರಬಲವಾಗಿ ಬೇರೂರಿತು. ಆದ್ದರಿಂದಲೇ ಇಂದು ಧರ್ಮದ ಪುನರ್ ವ್ಯಾಖ್ಯೆ ನಡೆಯಬೇಕಿದೆ. ಧರ್ಮ ಮತ್ತು ನಮ್ಮ ಸಾಮಾಜಿಕ ಬದುಕಿನ ನಡುವಿನ ಸಂಬಂಧವನ್ನು ಪುನರಾವಲೋಕನ ಮಾಡಬೇಕಿದೆ. ಆದರೆ ಆಧ್ಯಾತ್ಮ ಒಂದು ಹುಡುಕಾಟ. ಹೀಗಾಗಿ ಅದು ಹರಿಯುವ ನದಿಯಂತೆ. ಅದಕ್ಕೆ ಸಾಮಾಜಿಕತೆಯ ಸ್ಪರ್ಷ ಇಲ್ಲ. ಅದು ಸುಮ್ಮನೆ ಹರಿಯುತ್ತಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಧರ್ಮ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಂಡು ಕೇವಲ ಆಚರಣೆಯಾಗಿ ಉಳಿದಿದೆ. ಧರ್ಮವನ್ನು ಅಂದರೆ ಆಧ್ಯಾತ್ಮಿಕತೆ ಬೋಧನೆ ಮಾಡಬೇಕಾದವರು ಶಿಕ್ಷಣ ದಂಧೆಯಲ್ಲಿ ತೊಡಗಿದ್ದಾರೆ. ಈಗ ಧರ್ಮದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕಬೇಕಾಗಿದೆ.
Subscribe to:
Posts (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...