Monday, January 12, 2009

ಒಂದಿಷ್ಟು ವಿವರಣೆ .............

ನನಗೆ ತುಂಬಾ ಸಂತೋಷ. ನನ್ನ ಖಾಸಗಿ ಅನುಭವವೊಂದು ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದ ಮಹತ್ವವ ವಿಚಾರ ಒಂದರ ಚರ್ಚೆಗೆ ಇದು ಗ್ರಾಸವಾಗಿದೆ.

ನಾನು ಜಾತಿಯನ್ನು ಗೃಹಿಸಿದ ಬಗೆ ಯಾವುದು ? ಇದು ಮೊದಲ ಪ್ರಶ್ನೆ. ಜಾತಿ ಎನ್ನುವುದು ನಾವು ಕರೆಯುವ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯಿತ ಎಂಬ ಶಬ್ದ ಮಾತ್ರವಾ ಅಥವಾ ಮನಸ್ಥಿತಿಯಾ ? ನನ್ನ ದೃಷ್ಟಿಯಲ್ಲಿ ಮನಸ್ಥಿತಿ. ಈ ಮನಸ್ಥಿತಿಯನ್ನು ಕೇಂದ್ರವಾಗಿಟ್ಟುಕೊಂಡು ನಾನು ಜಾತಿಯ ಬಗ್ಗೆ ಮಾತನಾಡುತ್ತೇನೆ, ಮಾತನಾಡಿದ್ದೇನೆ.

ನನ್ನ ಎದುರಿಗೆ ಬಂದ ಹುಡುಗ ಜಾತಿಯ ಪ್ರಸ್ತಾಪ ಮಾಡದಿದ್ದರೆ ಸಮಸ್ಯೆ ಇರಲಿಲ್ಲ. ಅವನು ಪ್ರತಿಭಾವಂತ ಎಂದು ಕೆಲಸ ಕೊಡುವ ಬಗೆ ಯೋಚಿಸಬಹುದಿತ್ತು. ಆದರೆ ನಾನು ನಿಮ್ಮವ ಎಂದು ಹೇಳುವ ಮೂಲಕ ಆತ ಜಾತಿಯ ಲಾಭ ಪಡೆಯಲು ಯತ್ನಿಸಿದ. ಅಂದರೆ ಸ್ವಲಾಭಕ್ಕಾಗಿ ಇಂದು ಜಾತಿಯನ್ನು ಬಳಸಿದವನು ನಾಳೆ ಏನನ್ನಾದರೂ ಬಳಸಬಹುದು. ಇದು ಅಪಾಯಕಾರಿಯಾದದ್ದು. ಆದ್ದರಿಂದ ಆತನ ಜಾತಿಗಿಂತ ಆತನ ಪತ್ರಿಕೋದ್ಯಮ ವಿರೋದಿ ಮನಸ್ಥಿತಿ ನನಗೆ ಭಯವನ್ನು ಉಂಟು ಮಾಡಿತು. ಜೊತೆಗೆ ಹೀಗೆ ಜಾತಿಯನ್ನು ಬಳಸಿಕೊಂಡವ ನಂತರ ರಾಜಕಾರಣಿಗಳ ಬ್ಯಾಗು ಹಿಡಿದು ಓಡಾಡಿದ್ದು. ಇದು ಸಹ ನನಗೆ ಅಘಾತವನ್ನು ಉಂಟು ಮಾಡಿದ್ದು.

ಇನ್ನು ಪತ್ರಿಕೋದ್ಯಮ ಮತ್ತು ಜಾತಿಯ ವಿಚಾರ. ನಾನು ಪತ್ರಿಕೋದ್ಯಮಕ್ಕೆ ಬಂದಾಗ ಬಹುತೇಕ ಪತ್ರಿಕೆಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಾನು ಕೆಲಸ ಪ್ರಾರಂಭಿಸಿದಾಗ, ಅಲ್ಲಿ ಮಾಧ್ವ ಸ್ವಾಮಿಗಳ ಆಡ್ದ ಪಲ್ಲಕ್ಕಿ ಉತ್ಸವ ಮುಖ ಪುಟದ ಬಹುಮುಖ್ಯ ಸುದ್ದಿಯಾಗಿ ಕಾಣುತ್ತಿತ್ತು. ಆದರೆ, ಜನಪದ ಉತ್ಸವ ಮತ್ತು ನಂಬಿಕೆಗಳು ಅವರಿಗೆ ಮುಖ್ಯ ಎನ್ನುಸುತ್ತಿರಲಿಲ್ಲ. ಅಲ್ಲಿದ್ದ ಬಹುತೇಕ ಕೆಲಸಗಾರರು ಮಧ್ವಾಚಾರ್ಯರು ದೊಡ್ದವರೇ ಅಥವಾ ಶಂಕರಾಚಾರ್ಯರೇ ಎಂಬ ಬಗ್ಗೆ ದಿನಗಟ್ಟಲೇ ಚರ್ಚೆ ನಡೆಸಿ ಜಗಳವಾಡುತ್ತಿದ್ದರು. ಅಲ್ಲಿ ಕೆಲಸ ಮಾಡುವವರಿಗೆ ಇದೇ ಮುಖ್ಯ ವಿಚಾರವಾಗಿತ್ತು. ನಮ್ಮ ಜನರ ಬದುಕು ಜನ ಜೀವನ ಮತ್ತು ನಂಬಿಕೆಗಳ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡ ನನಗೆ ನಮ್ಮ ಶಿಷ್ಟ ದೇವತೆಗಳಿಗೆ ಸಿಗುವ ಪ್ರಾಶಸ್ತ್ಯ ಗ್ರಾಮೀಣ ಶಕ್ತಿ ದೇವತೆಗಳಿಗೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಅಂದರೆ ಅದೇ ಮನಸ್ಥಿತಿಯ ಪ್ರಶ್ನೆ. ಇಲ್ಲಿ ನಾನು ಯಾರನ್ನೂ ದೂರುವುದಕ್ಕಾಗಿ ಜಾತಿಯ ಪ್ರಶ್ನೆಯನ್ನು ಎತ್ತುತ್ತಿಲ್ಲ.

ಪತ್ರಿಕೆ ಎನ್ನುವುದು ಒಂದು ವ್ಯಕ್ತಿಯ ಹಾಗೆ. ಅದಕ್ಕೂ ಮನಸ್ಸು ಹೃದಯ ಕಿಡ್ನಿ ಎಲ್ಲವೂ ಇರಬೇಕು. ಪತ್ರಿಕೆಯಲ್ಲಿ ಕೆಲಸ ಮಾಡುವವರು ಇಂಥಹ ಪತ್ರಿಕೆಯನ್ನು ರೂಪಿಸುವಾಗ ಅವರ ಮನಸ್ಸು ಅಲ್ಲಿ ಪ್ರತಿಫಲನವಾಗುತ್ತದೆ. ಹೀಗಾಗಿ ಪತ್ರಿಕೆಯಲ್ಲಿ ಕೆಲಸ ಮಾಡುವವರ ಮನಸ್ಸು ಎಲ್ಲ ಜಾತಿ ಸಮುದಾಯವನ್ನು ಮೀರಿ ಬೆಳೆಯಬೇಕು. ಹಾಗೆ ಎಲ್ಲ ರೀತಿಯ ಜನರ ನಂಬಿಕೆಗಳಿಗೆ ಅಲ್ಲಿ ಅವಕಾಶ ಇರಬೇಕು. ಇದು ಯಾವಾಗ ಸಾಧ್ಯವಾಗುತ್ತದೆ ಎಂದರೆ ಎಲ್ಲ ಜನ ಸಮುದಾಯಗಳ ಮನಸ್ಸುಗಳೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ. ಈಗ ಇರುವ ಜಾತಿ ಸಮುದಾಯಗಳ ಜೊತೆ ಅವಕಾಶ ವಂಚಿತರಿಗೂ ಅವಕಾಶ ಸಿಕ್ಕರೆ ಆಗ ಒಟ್ಟಾರೆಯಾಗಿ ರೂಪಗೊಳ್ಳುವ ಮನಸ್ಸು ಹೆಚ್ಚು ಸುಂದರವಾಗಿರುತ್ತದೆ. ಆ ಮನಸ್ಸುಗಳ ರೂಪಿಸುವ ಪತ್ರಿಕೆ ಕೂಡ ಸುಂದರವಾಗಿರುತ್ತದೆ. ಇಡೀ ಜನ ಸಮುದಾಯವನ್ನು ಅದು ಪ್ರತಿನಿಧಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

ನನ್ನ ಅನುಭವ ನಾನು ಒಪ್ಪಲಿ, ಬಿಡಲಿ ಅದು ಬ್ರಾಹ್ಮಣ ಜಗತ್ತಿನದು. ಹಾಗೆ ನನ್ನ ನೋಟವನ್ನು ನನ್ನ ಈ ಬ್ರಾಹ್ಮಣ ಜಗತ್ತೇ ನಿರ್ಧರಿಸುತ್ತದೆ. ಹಾಗೆ, ಬೇರೆ ಜಾತಿಯವರ ಆಲೋಚನೆಗಳನ್ನೂ ಸಹ. ಹೀಗಾಗಿ ನಾನು ನೋಡಿದ್ದೇ ಸತ್ಯ ಎಂದು ಹೇಳುವ ಎದೆಗಾರಿಕೆ ನನ್ನಗಿಲ್ಲ. ನನ್ನ ನೋಟದಲ್ಲಿ ತಪ್ಪಿರಬಹುದು ಎಂದು ನನಗೆ ಅನ್ನಿಸುತ್ತಿರುತ್ತದೆ. ನನಗೆ ಅನ್ವಯಿಸಿಕೊಳ್ಳುವ ಈ ಮಾತುಗಳು ಬೇರೆ ಜಾತಿಯಿಂದ ಬಂದವರಿಗೂ ಅನ್ವಯವಾಗುತ್ತದೆ. ಆದರೆ ನಾವೆಲ್ಲ ಇಂತಹ ಬದ್ಧ ಆಲೋಚನೆಗಳಿಂದ ಹೊರಕ್ಕೆ ಬರಲು ಯತ್ನ ನಡೆಸಲೇಬೇಕು.

ಈಗ ಪತ್ರಿಕೆಗಳ ಮನಸ್ಥಿತಿಯತ್ತ ನೋಡೋಣ. ನಮ್ಮ ಪತ್ರಿಕೋದ್ಯಮ ಬ್ರಾಹ್ಮಣ ಆಲೋಚನೆಗಳ ಆಧಾರದ ಮೇಲೆ ಬೆಳೆದು ಬಂದಿದೆ. ಯಾಕೆಂದರೆ ಬೇರೆ ಜಾತಿ ಸಮುಧಾಯದ ಜನ ಪತ್ರಿಕೋದ್ಯಮಕ್ಕೆ ಬರದಿದ್ದ ಕಾಲದಲ್ಲಿ ಬ್ರಾಹ್ಮಣರು ಊ ಉದ್ಯಮವನ್ನು ಕಟ್ಟಿದರು, ಬೆಳೆಸಿದರು. ಆದರೆ ಇದಕ್ಕೆ ಒಂದೂ ಸಂಪೂರ್ಣತೆ ಬರಬೇಕಾದರೆ, ಅದು ನಮ್ಮ ಹಳ್ಳಿಗಳ ಹಾಗಿರಬೇಕು. ಹಳ್ಳಿಗಳಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಬದುಕುವ ಹಾಗೆ. ನಿಜ ಅರ್ಥದಲ್ಲಿ ಭಾರತ ಎಂಬ ಬಹುಸಂಸ್ಕೃತಿಯ ನಾಡು ಇರುವಂತೆ ಬಹು ಸಂಸ್ಕೃತಿ ಪತ್ರಿಕೆಗಳ ಮನಸ್ಥಿತಿಯನ್ನು ನಿರ್ಮಿಸಬೇಕು.

ನಾನು ಉತ್ತರ ಕರ್ನಾಟಕದ ದೀವರನ್ನು ವರದಿಗಾರರನ್ನಾಗಿ ತೆಗೆದುಕೊಂಡ ಬಗ್ಗೆ ಹೇಳಿದ್ದೆ. ನನಗೆ ಉತ್ತರ ಕನ್ನಡ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ಪತ್ರಿಕೆಗಳಲ್ಲಿ ಪ್ರತಿಬಿಂಬಿತವಾಗುತ್ತಿದ್ದುದು, ಏಕಮುಖವಾದ ನೋಟದ ಮೂಲಕ. ನನಗಿದ್ದ ಕುತೂಹಲ ಎಂದರೆ ಈ ಎಲ್ಲ ಸಮಸ್ಯೆಗಳನ್ನು ಇನ್ನೊಂದು ಜಾತಿ ಸಮುದಾಯದಿಂದ್ ಬಂದವರು ಹೇಗೆ ನೋಡುತ್ತಾರೆ ಎಂಬ ಬಗ್ಗೆ. ಈ ಕುತೂಹಲ ಈಗ ನನಗೆ ತಣಿದಿದೆ.

ಒಂದು ಪತ್ರಿಕೆ ಎಂದರೆ ಮಿನಿ ಭಾರತ ಇದ್ದಂತೆ ಇರಬೇಕು. ಆಗ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ, ಅದು ಭ್ರಾಹ್ಮಣರ ಕೇರಿಯೂ ಆಗಬಾರದು. ಲಿಂಗಾಯಿತರ ವಠಾರವೂ ಆಗಬಾರದು, ಹರಿಜನರ ಕೇರಿಯೂ ಆಗಬಾರದು. ಇದೆಲ್ಲ ಸೇರಿದರೆ ಮಾತ್ರ ಅದು ಸಮಾಜವನ್ನು ಪ್ರತಿನಿಧಿಸುತ್ತದೆ. ನನಗೆ ಏನ್ರಿ ಗೌಡ್ರೆ, ಬನ್ರಿ ಪಾಟೀಲರೆ, ಯಾಕ್ರಿ ಬಿರಾದಾರರೇ ಎಂದು ಮಾತನಾಡುವ ವಾತವರಣ ಇಷ್ಟ. ಅದನ್ನು ಬಿಟ್ಟು ಯಾವುದೋ ಜಾತಿಗಳ ಕೇರಿಯನ್ನಾಗಿ ಪತ್ರಿಕೆಗಳನ್ನು ಮಾಡುವುದಕ್ಕೆ ಸಹಮತ ಇಲ್ಲ.

ಇನ್ನು ನನ್ನ ಬಗ್ಗೆ ವೈಯಕ್ತಿಕ ವಾಗಿ ಮಾಡಿದ ಟೀಕೆಗಳ ಕುರಿತು;

ನಾನು ಇದುವರೆಗೆ ವೈಯಕ್ತಿಕ ಕೆಲಸಕ್ಕಾಗಿ ಯಾವ ರಾಜಕಾರಣಿಯ ಬಳಿಯೂ ಹೋಗಿಲ್ಲ. ಆದ್ದರಿಂದ ಕೆಲಸಕ್ಕೆ ಒತ್ತಡ ಹೇರಿಸಲು ರಾಜಕಾರಣಿಗಳ ಬಳಿ ಹೋಗುವ ಅಗತ್ಯ ಇಲ್ಲ. ಯಾವುದೇ ಒಬ್ಬ ರಾಜಕಾರಣಿ ನಾನು ವೈಯಕ್ತಿಕ ಕೆಲಸಕ್ಕೆ ಹೋಗಿದ್ದೇನೆ ಎಂದು ಹೇಳಿದರೇ ಅದೇ ಕ್ಷಣ ನಾನು ಈ ವೃತ್ತಿಯನ್ನು ಬಿಡಲು ಸಿದ್ದನಿದ್ದೇನೆ.

ನನ್ನ ಕಚೇರಿಯಲ್ಲಿ ಯಾರನ್ನೂ ನಾನು ಜಾತಿಯ ಕಾರಣದಿಂದ ತೆಗೆದುಕೊಂಡಿಲ್ಲ. ಪ್ರತಿಭೆಯನ್ನು ಗಣನೆಗೆ ತೆಗೆದುಕೊಳ್ಳಲು ಯತ್ನಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಜಾತಿ ಜನಸಮುದಾಯಗಳನ್ನು ಪ್ರೀತಿಸುವ ಅರೋಗ್ಯಪೂರ್ಣ ಮನಸ್ಸುಗಳನ್ನು ತೆಗೆದುಕೊಳ್ಳಲು ಯತ್ನಿಸಿದ್ದೇನೆ.

ಹಾಗೆ ಇಂತಹ ಆರೋಗ್ಯಪೂರ್ಣ ಮನಸ್ಸುಗಳು ಯಾವುದೇ ಒಂದು ಜಾತಿಯ ಜಹಗೀರು ಅಲ್ಲ ಎಂಬ ಅರಿವು ನನಗಿದೆ.

7 comments:

Anonymous said...

ಭಟ್ಟರೇ,

ಈಗ ಸರಿಹೋಯ್ತು :) 'ಹೀಗೊಂದು ಖಾಸಗಿ ಮಾತು' ಲೇಖನದ ಮೂಲ ಉದ್ದೇಶ ಬೇರೆ, ಹಾಗೂ ಅದು ಧ್ವನಿಸಿದ್ದು ಬೇರೆಯಾಗಿತ್ತು ಅಂತ ನನ್ನ ಅನಿಸಿಕೆ. ವೆಂಕಟೇಶ ಸಂಪ ನಂತವರು ಎಲ್ಲ ಜಾತಿ, ಧರ್ಮಗಳಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಇರುತ್ತಾರೆ. ಇಂತವರ ಆರೋಪಗಳಿಗೆ ನೀವು ಪ್ರತಿಕ್ರಿಯಿಸುವ, ಉತ್ತರಿಸುವ ಅಗತ್ಯವಿರಲಿಲ್ಲವೇನೋ.
ಅಷ್ಟಕ್ಕೂ ಇತ್ತೀಚಿಗೆ ಬ್ಲಾಗ್ ಗಳೂ ಕೂಡ ಕೆಸರೆರೆಚಾಟದ ಮಾಧ್ಯಮಗಳಾಗಿವೆ. ಇಲ್ಲಿ ಜಾತಿ, ಧರ್ಮದ ಬಗ್ಗೆ ಆರೋಗ್ಯಪೂರ್ಣ ಚರ್ಚೆಗೆ ಅವಕಾಶವಿಲ್ಲ! ಸುಮ್ಮನಿರುವುದೇ ಲೇಸು...

ಪ್ರೀತಿಯಿಂದ
- ವೈಶಾಲಿ

Unknown said...

neevu raajakaarigalige benne hacchi suvarnadalli chief staana gittisikondiddu embudanu neerupisidare aadida maatinate nimma stanakke raajinaame koduteeraa...?! maadabaarada haadaravanella maadikondu, natara naanu tumba saacha endu bareyuvudu tumbha sulabha. neevu barediddanella nambalu oduga kiviya mele hoovu mudidukondiddaane andukondiddiraa?

ವಿ.ರಾ.ಹೆ. said...

ಜಾತಿಗಳ ನಡುವಿನ ಅಂತರವನ್ನು ಕಡಿಮೆಮಾಡಿ ಸಮಾಜದಲ್ಲಿ ಜಾತಿಗಳ ಅರಿವಿಲ್ಲದಂತೆ ಮನಸುಗಳನ್ನು ಬೆಳೆಸಬೇಕಾದ್ದು ಅಗತ್ಯವಿರುವ ಈ ಸಂದರ್ಭದಲ್ಲಿ ಆ ಜಾತಿಯವರ ಮನಃಸ್ಥಿತಿ, ಈ ಜಾತಿಯವರ ಮನಃಸ್ಥಿತಿ ಹೇಗಿರುತ್ತದೆ, ಆ ಜಾತಿಯವರು ಹೇಗೆ ಯೋಚಿಸುತ್ತಾರೆ, ಈ ಜಾತಿಯವರು ಹೇಗೆ ಕೆಲಸ ಮಾಡುತ್ತಾರೆ ಎಂದೆಲ್ಲಾ ಬರೀ ಎಲ್ಲದಕ್ಕೂ ಜಾತಿ ದೃಷ್ಟಿಯಲ್ಲೇ ನೋಡುವುದನ್ನೇ ಹಿರಿಯರೇ ಇನ್ನೂ ಬೆಳೆಸಲು ನೋಡುತ್ತಿರುವುದು ಮುಂದಿನ ಪೀಳಿಗೆಗಳ ಮಟ್ಟಿಗೆ ದುರಂತವೆನ್ನಬಹುದು. ಬದಲಾಗಬೇಕಾಗಿರುವುದು ಮನಸುಗಳು. ಅದಕ್ಕೆ ವೇದಿಕೆ ಒದಗಿಸಬೆಕಾದವರು ಹಿರಿಯರು. ಆದರೆ ನೀವು ಜಾತಿಗಳು ಹಾಗೆಹಾಗೆಯೇ ಇರಬೇಕು, ಅವರ ವಿಚಾರಗಳು ಅಷ್ಟರಲ್ಲಿಯೇ ಇರಬೇಕು ಎಂದು ಪ್ರತಿಪಾದಿಸುತ್ತಿರುವಂತಿದೆ. ಬ್ರಾಹ್ಮಣರಿಗೆ ಪಟ್ಟಾಲಮ್ಮನ ಪರಿಚಯ ಮಾಡಿಸಿಕೊಡಿ, ದೀವರಿಗೆ ಶಂಕರಾಚಾರ್ಯರ ಬಗ್ಗೆ ತಿಳಿದುಕೊಳ್ಳುವಂತೆ ಪ್ರೋತ್ಸಾಹಿಸಿ. ಅದು ಬಿಟ್ಟು, ನೀನು ಬ್ರಾಹ್ಮಣ, ಬರೀ ಮಧ್ವಾಚಾರ್ಯರ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತೀಯ, ನಿನ್ನ ಜಾತಿಯವರ ಯೋಚನೆಯ ಆಧಾರದಲ್ಲಿ ಪತ್ರಿಕೋದ್ಯಮ ಇಷ್ಟು ದಿನ ಬೆಳೆದಿದೆ, ಆದ್ದರಿಂದ ನಿನಗೆ ಅವಕಾಶವಿಲ್ಲ ಎಂದು ಜಾತಿಕಾರಣಕ್ಕೆ ನಿರಾಕರಿಸುವುದರಲ್ಲಿ ಅರ್ಥವಿಲ್ಲ. ಸ್ವಜಾತಿಯವರನ್ನು ದೂರ ಇಟ್ಟು ಸಾಧಿಸಿದೆ ಅನ್ನುವುದಕ್ಕಿಂತ ಯಾರ ಜಾತಿಯನ್ನೂ ತಿಳಿದುಕೊಳ್ಳದೆ ಯೋಗ್ಯತೆ ಆಧಾರದಲ್ಲಿ ಕಿರಿಯರನ್ನು ಬೆಳೆಸುವುದು ಸೈ ಅನಿಸುತ್ತದೆ. ಧನ್ಯವಾದ.

shashidhar Bhat said...

ನನ್ನ ಬಗ್ಗೆ ಅನಾಮಧೇಯನೊಬ್ಬ ಉಗುಳಿದ ಕಹಿಯನ್ನು ಓದಿದೆ. ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಬ್ಲಾಗ್ ಬರುತ್ತಿಲ್ಲ. ಅಂದರೆ ಅವರಿಗೆ ತಮ್ಮ ಹೆಸರನ್ನು ಹೇಳಿಕೊಳ್ಳುವ ಧೈರ್ಯ ಇಲ್ಲ. ಸತ್ಯವನ್ನು ಎದುರಿಸುವುದಕ್ಕೆ ಧೈರ್ಯ ಪ್ರಾಮಾಣಿಕತೆ ಬೇಕಾಗುತ್ತಿದೆ. ಆದರೂ ಅವರಂತೆ ಯೋಚಿಸುವ ಜನ ಇರಬಹುದು ಎಂಬ ಕಾರಣಕ್ಕೆ ನಾನು ಉತ್ತರ ನೀಡುತ್ತಿದ್ದೇನೆ.
ನನಗೆ ನನ್ನ ಪ್ರಮಾಣಿಕತೆಯ ಬಗ್ಗೆ ಹೆಮ್ಮೆ ಮತ್ತು ಗರ್ವ ಇದೆ. ನಾನು ಒಡ್ಡಿದ ಸವಾಲು ಈಗಲೂ ಜೀವಂತವಾಗಿದೆ. ಹೆಸರು ಹೇಳದೆ ಮರೆಯಲ್ಲಿ ನಿಂತು ಬಾಣ ಬಿಡುವ ನೀಚತನವನ್ನು ಬಿಟ್ಟು ಹೊರಕ್ಕೆ ಬನ್ನಿ. ರಾಮನ ಪರಂಪರೆಯನ್ನು ಬಿಟ್ಟು ಹೊರ ಬನ್ನಿ. ನೀವು ರಾಮ ವಾಲಿಯನ್ನು ಕೊಂದಂತೆ ನನ್ನ ತೇಜೋವಧೆ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ನಾನು ವಾಲಿಯಲ್ಲ..

ಶಶಿಧರ್ ಭಟ್

ಸಂದೀಪ್ ಕಾಮತ್ said...

ಭಟ್ರೇ ನಿಮ್ಮ ಆಶಯಕ್ಕೆ ನನ್ನ ಶುಭಾಶಯ:)

http://santasajoy-vasudeva.blogspot.com said...

kevala jaati maatra alla sir bhasheyannu aadharisi saha kelavaru tamma visha kaartaare.naanu ondu kade kelasa maaduvaaga hennu magalu sadaa gadi pradeshada janara bhaashe munde maadi tanna kahi kaaruttidalu.ottinalli niivu Naanu Vaali alla anno maatu baredaddu odi nanage tunbaa ishta aaytu.aadare ondu sanna prashne haagaadare niv yaaru??:)

www.kumararaitha.com said...

ಭಾರತೀಯ ಸಮಾಜ,ಜಾತಿ ಕಾರಣಕ್ಕಾಗಿಯೂ ತುಂಬ ಸಂಕೀರ್ಣ.ಇಲ್ಲಿ ಜಾತಿ,ಪೂರ್ವಾಗ್ರಹಗಳನ್ನು ಸೃಷ್ಟಿಸುತ್ತದೆ.
ಇಂಥ ಮನಸ್ಥಿತಿ ಗ್ರಹಿಕೆ, ಸಮತೋಲಿತವಲ್ಲ.ಸತತ ಪ್ರಯತ್ನದಿಂದ ಇಂಥ ಪೂರ್ವಾಗ್ರಗಳನ್ನು ಕಳಚಿಕೊಳ್ಳಲು ಸಾಧ್ಯ.ಇದು ಮುಕ್ತ ಮನಸ್ಸನ್ನು ನಿರ್ಮಾಣ ಮಾಡುತ್ತದೆ.ಇಂಥ ಆರೋಗ್ಯಕರ ಮನಸಿನ ಪ್ರತಿಫಲನ "ಹೀಗೊಂದು ಖಾಸಗಿ ವಿವರಣೆ"ಇಂಥ ಬರಹದ ಅಂತಸತ್ವ ಮತ್ತು ಕೇಂದ್ರ ಕೆಲವೊಮ್ಮೆ ಒಂದೇ ಓದಿಗೆ ದಕ್ಕದೇ ಇರಬಹುದು.ಆಗ ನಿಜ ಅರ್ಥದಲ್ಲಿ ಓದಿಕೊಳ್ಳುವುದು ಅಗತ್ಯ.
"ಒಂದಿಷ್ಟು ವಿವರಣೆ"ಕೂಡ ತನ್ನಷ್ಟಕ್ಕೆ ತಾನೇ ಪ್ರಬುದ್ದವೂ,ಸಂಯಮಪೂರ್ಣವೂ ಆದ ಬರವಣಿಗೆ.

ಸಮಕಾಲೀನ ಭಾರತೀಯ ಸಂದರ್ಭದಲ್ಲಿ ಕ್ರೂರವೂ,ವ್ಯಂಗ್ಯವೂ ಆದ ಜಾತಿನೆಲೆಗಳನ್ನು ಅಲ್ಲಾಡಿಸಲು ಶಶಿಧರ್ ಭಟ್ ಅವರ ಈ ಬರವಣಿಗೆಗಳು,ಇದೇ ಮಾದರಿಯ ಇತರರ ಬರವಣಿಗಳು ಸಹಾಯಕ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...