Friday, June 8, 2012

ನಿತ್ಯಾನಂದ ಪ್ರಕರಣ; ನಮಗೆ ಮಠಾಧಿಪತಿಗಳು ಯಾಕೆ ಬೇಕು ?

ನಾನು ಈ ಲೇಖನವನ್ನು ಪ್ರಾರಂಭಿಸುವುದಕ್ಕೆ ಮೊದಲು ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತೇನೆ. ನನಗೆ ದೇವ ಮಾನವರ ಬಗ್ಗೆಯಾಗಲೀ, ಈ ಮಠಾಧಿಪತಿಗಳ ಬಗ್ಗೆಯಾಗಲಿ ಅಂತಹ ಗೌರವ ಇಲ್ಲ. ಧರ್ಮದ ಹೆಸರಿನಲ್ಲಿ ಸಿಂಹಾಸನದ ಮೇಲೆ ವಿರಾಜಮಾನರಾಗುವ, ತಲೆಯ ಮೇಲೆ ಕಿರೀಟ ಇಟ್ಟು ಕೊಳ್ಳುವ ಸ್ವಾಮಿಗಳು ನನಗೆ ವಿಧೂಷಕರಂತೆ ಕಾಣುತ್ತಾರೆ. ಹಾಗೆ ನನಗೆ ಗೌರವ ನೀಡಬೇಕು ಎಂದು ಅನ್ನಿಸಿದ   ಯಾವುದೇ ಸ್ವಾಮೀಜಿ ಇನ್ನೂ ದೊರಕಿಲ್ಲ. ಜೊತೆಗೆ ನಾನು ಹುಟ್ಟಿದ ಜಾತಿಯ ಮಠ ಈಗ ೨೫ ವರ್ಷಗಳ ಹಿಂದೆ ನನ್ನನ್ನು ಜಾತಿಯಿಂದ ಹೊರಗೆ ಹಾಕಿದ್ದರಿಂದ ಅವರ ಹಂಗು ನನಗೆ ಇಲ್ಲ. ನನಗೆ ಮೊದಲಿನಿಂದಲೂ ಈ ಸ್ವಾಮೀಜಿಗಳ ಬಗ್ಗೆ ಸಣ್ಣ ಅನುಮಾನ. ಇವರೆಲ್ಲ ನಮ್ಮ ಹಾಗೆ ಹುಲು ಮಾನವರೇ ಆಗಿರುವುದರಿಂದ ನಮಗೆ ಇರುವ ಎಲ್ಲ ರೀತಿಯ ರಾಗ ಧ್ವೇಷಗಳೂ ಅವರಿಗೂ ಇವೆ. ಆದ್ದರಿಂದ ಅವರನ್ನು ನಮಗಿಂತ ಮೇಲು ಎಂದು ಒಪ್ಪಲು ನಾನು ಸಿದ್ಧನಿಲ್ಲ.
ಸ್ವಾಮೀಜಿಗಳ ಜೊತೆಗಿನ ಈ ಸಣ್ಣ ಭಿನ್ನಾಭಿಪ್ರಾಯಕ್ಕೆ ಇರುವ ಕಾರಣಗಳು ಸರಳವಾದವುಗಳು. ಮನುಷ್ಯನ ಬದುಕಿನ ಸತ್ಯವನ್ನು ಹುಡುಕಲು ಹೊರಟವರಿಗೆ ಅರಮನೆಯಂತಹ ಮಠದ ಅಗತ್ಯ ಇಲ್ಲ.ಅಡ್ಡಪಲ್ಲಕ್ಕಿ ಬೇಕಾಗಿಲ್ಲ. ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವವರು ರಾಜಕಾರಣಿಗಳ ಏಜೆಂಟರಂತೆ ವರ್ತಿಸಕೂಡದು  ಆದರೆ ಆಗಿಹೋದ ಕೆಲವು ಆಧ್ಯಾತ್ಮಿಕ ವಾದಿಗಳು ನನ್ನ ಮೇಲೆ ಪರಿಣಾಮ  ಬೀರಿದ್ದಾರೆ. ಜಿದ್ದು ಕೃಷ್ಣಮೂರ್ತಿ ಮತ್ತು ಓಷೋ ಚಿಂತನೆಗಳು ನನ್ನ ಮೇಲೆ ಪರಿಣಾಮ ಬೀರಿವೆ. ಹಾಗೆ ಧ್ಯಾನ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುತ್ತದೆ ಎಂಬುರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಇವತ್ತಿಗೂ ನಾನು ದಿನದಲ್ಲಿ ಕನಿಷ್ಟ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ
ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ  ಸಾಧನೆ ಮಾಡಿದ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರ ಚಿಂತನೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದೇನೆ. ಇವಷ್ಟು ಪೂರ್ವ ಪೀಠಿಕೆ ಸಾಕು ಎಂದು ಅನ್ನಿಸುತ್ತದೆ. ಈಗ ನಾನು ಪ್ರಸ್ತಾಪಿಸಲು ಹೊರಟಿರುವ ವಿಚಾರಕ್ಕೆ ಪ್ರೇರಣೆಯಾಗಿರುವುದು ನಿತ್ಯಾನಂದ ಸ್ವಾಮೀಜಿ ಅವರ ಪ್ರಕರಣ.
ನಿತ್ಯಾನಂದ ಸ್ವಾಮೀಜಿಯವರ ಬಗ್ಗೆ ಹೇಳುವುದಾದರೆ ಅವರು ರವಿಶಂಕರ್ ಸ್ವಾಮಿ ಅವರಂತೆ ವಿದೇಶಿ ಭಕ್ತರನ್ನು ಆಕರ್ಷಿಸಿ ಅವರಿಂಿ ಹಣ ಸಂಗ್ರಹಿಸಿ ಸಾಮ್ರಾಜ್ಯ ಕಟ್ಟಲು ಹೊರಟವರು. ಈ ವಿಚಾರದಲ್ಲಿ ರವಿಶಂಕರ್ ಸ್ವಾಮೀಜಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿರುವವರು ನಿತ್ಯಾನಂದ ಸ್ವಾಮೀಜಿ. ಅವರು ಬಿಡದಿ ಬಳಿ ಸ್ಥಾಪಿಸಿದ ಆಶ್ರಮ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ಬಹುತೇಕ ವಿದೇಶಿಯರು ಬಿಡದಿ ಆಶ್ರಮಕ್ಕೆ ಭೇಟಿ ನೀಡತ್ತಾರೆ.
ಯೋಗ ಮತ್ತು ಧ್ಯಾನಕ್ಕೆ ವಿದೇಶಗಳಲ್ಲಿ ಭಾರಿ ಬೇಡಿಕೆ ಬಂದ ತಕ್ಷಣ ಅದನ್ನು ಮಾರಾಟ ಮಾಡುವ ನೂರಾರು ಬಾಬಾಗಳು ಹುಟ್ಟಿಕೊಂಡರು. ಸಂವಹನ ಶಕ್ತಿ ಹೊಂದಿದವರು ಯಶಸ್ವಿಯೂ ಆದರು. ಇದು ಸ್ವಲ್ಪ ಮಟ್ಟಿಗೆ ದೇಶಿ ಸ್ವಾಮಿಗಳ ವಿರೋಧಕ್ಕೆ ಕಾರಣವಾಯಿತು. ಜಾತಿಯತೆಯನ್ನು ರಕ್ಷಿಸಿಕೊಂಡು ಬರುತ್ತಿದ್ದ ಈ ಸಾವಿರಾರು ಮಠಾಧಿಪತಿಗಳನ್ನು ವಿದೇಶದಿಂದ ಹರಿದು ಬರುತ್ತಿರುವ ಹಣ ಕಂಗಾಲಾಗಿ ಮಾಡಿತು. ಇದೆಲ್ಲ ಉತ್ತುಂಗಕ್ಕೆ ತಲುಪಿದ್ದು ಆಚಾರ್ಯ ರಜನೀಶ್ ವಿದೇಶಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಾಗ. ಆಚಾರ್ಯ ರಜನೀಶ್ ಅಥವಾ ಓಷೋ ಯೋಗ ಧ್ಯಾನ ಮತ್ತು ಸೆಕ್ಸ್ ಅನ್ನು ಮಿಳಿತಗೊಳಿಸಿದರು. ಜೊತೆಗೆ ಅದ್ಬುತ ವಾಗ್ಮಿಯೂ ಚಿಂತಕರೂ ಆಗಿದ್ದ ಓಷೋ ಸೆಕ್ಸ್ ಅನ್ನು ಸೆಲಿಬ್ರೇಷನ್ ಎಂದು ಕರೆಯುವ ಮೂಲಕ ಸಂಚಲನವನ್ನು ಉಂಟು ಮಾಡಿ ಬಿಟ್ಟಿದ್ದರು. ಇದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸಂಪ್ರದಾಯವಾದಿ ಮಠಾಧಿಪತಿಗಳಿಗೆ ಇರಲಿಲ್ಲ. ಆಗ ಈ ಜನ ಎತ್ತಿದ್ದು ನೈತಿಕತೆಯ ಪ್ರಶ್ನೆ. ಒಷೋ ಸೆಕ್ಸ್ ಮೂಲಕವೇ ಆಧ್ಯಾತ್ಮಿಕ ದಾರಿಯನ್ನು ಹುಡುಕುವ ವ್ಯಕ್ತಿಯಾಗಿದ್ದರು. ಆದರೆ ಕೊನೆಗೆ ಅವರು ದೇಶವನ್ನೇ  ತೊರೆದು ಹೋಗಬೇಕಾಯಿತು. ಆದರೆ ರಜನೀಶ್ ಮಹೇಶ್ ಯೋಗಿಯಂಥವರು ಭಾರತೀಯ ಆಧ್ಯಾತ್ಮಕ ಜಗತ್ತನ್ನು ಬೇರೆ ಬೇರೆ ರೀತಿಯಲ್ಲಿ ವಿದೇಶದಲ್ಲಿ ಮಾರಾಟ ಮಾಡಿ ಬಿಟ್ಟಿದ್ದರು. ಭಾರತೀಯ ಆಧ್ಯಾತ್ಮಿಕತೆಗೆ ಬಹು ದೊಡ್ಡ ಮಾರುಕಟ್ಟೆ ಆಗಲೇ ದೊರಕಿ ಬಿಟ್ಟಿತ್ತು.
ಈ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಂಡವರು ಮೂರು ಸಲ ಶ್ರೀ ಎಂಬುದನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿರುವ ರವಿಶಂಕರ್ ಸ್ವಾಮೀಜಿ. ಅವರು ಯೋಗವನ್ನು ಹಿಡಿದುಕೊಂಡರೂ ಸೆಕ್ಸ್ ಅನ್ನು ಮುಟ್ಟಲು ಹೋಗಲಿಲ್ಲ. ಅವರಿಗೆ ಸಂಪ್ರದಾಯವಾದಿ ಮಠಾಧಿಪತಿಗಳ ವಿರೋಧವನ್ನು ಎದುರಿಸುವ ಶಕ್ತಿ ಇರಲಿಲ್ಲ. ಜೊತೆಗೆ ಓಷೋ ಅವರಂತೆ ಆಧ್ಯಾತ್ಮಿಕ ಚಿಂತಕರೂ ಆಗಿಲ್ಲದ, ಒಳನೋಟಗಳೂ ಇಲ್ಲದ ರವಿಶಂಕರ್ ಅವರಿಗೆ ತಮ್ಮ ದೌರ್ಬಲ್ಯದ ಅರಿವು ಇತ್ತು. ಆದರೆ ನಿತ್ಯಾನಂದ ಸ್ವಾಮೀಜಿ ಹಾಗಿರಲಿಲ್ಲ. ಅವರು ರವಿಶಂಕ್ರ್ ಗುರೂಜಿ ಬಿಟ್ಟಿದ್ದ ಸೆಕ್ಸ್ ಅನ್ನು ಆಧ್ಯಾತ್ಮಿಕ ಸಾಧನೆಯ ದಾರಿಯಾಗಿ ಬಳಸಿಕೊಳ್ಳಲು ಮುಂದಾದರು. ಹೀಗಾಗಿ ವಿದೇಶಗಳಲ್ಲಿ ಅವರ ಪ್ರಭಾವ ಹೆಚ್ಚತೊಡಗಿತು. ವಿದೇಶಿ ಹಣ ನಿತ್ಯಾನಂದ ಸ್ವಾಮಿಗಳತ್ತ ಹರಿದು ಬರತೊಡಗಿತು. ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ ನಿತ್ಯಾನಂದ ಈ ರೀತಿಯ ಜನಪ್ರಿಯತೆ ಪಡೆದಿದ್ದು ಮೇಲ್ಜಾತಿಯ ಮಠಾಧಿಪತಿಗಳ ಕೆಂಗಣ್ಣಿಗೆ ಗುರಿಯಾದದ್ದು ನಿಜ.
ಈ ನಡುವೆ ಬಿಡದಿ ಬಳಿಯ ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿಟ್ಟಿದ್ದ ನೆಲ ಗಳ್ಳರು ಭೂಗತ ಲೋಕದ ದೊರೆಗಳು ಅಖಾಡಕ್ಕೆ ಇಳಿದರು. ಕೆಲವು ರಾಜಕಾರಣಿಗಳು ಇದಕ್ಕೆ ಕೈಜೋಡಿಸಿದರು. ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿದೆ ಎಂದು ಭಹಿರಂಗವಾಗಿ ಹೇಳುವ  ಸ್ಠಿತಿಯಲ್ಲಿ ಅವರು ಇರಲಿಲ. ಹೀಗಾಗಿ ನೈತಿಕತೆ ಮತ್ತು ಭಾಷಾ ವಿವಾದವನ್ನು ಎಳೆದು ತಂದರು. ಯಾವತ್ತೂ ನೈತಿಕತೆ ಮತ್ತು ಭಾಷೆಯಂತಹ ಭಾವನಾತ್ಮಕ ವಿಚಾರಗಳು ಬಹುಬೇಗ ಜನರನ್ನು ತಲುಪುತ್ತವೆ. ಹಾಗೆ ಇವುಗಳು ಅಮಲು ಹುಟ್ಟಿಸುವಂತಹುಗಳು. ಅಮಲು ಹುಟ್ಟಿಸುವಂತಹುಗಳ ಮೂಲ ಗುಣ ದರ್ಮ ಎಂದರೆ ಅದು ಸತ್ಯದ ಮೇಲೆ ತಾತ್ಮಾಲಿಕ ಮರೆವಿನ ಪರದೆಯನ್ನು ಬಿಟ್ಟು ಬಿಡುತ್ತದೆ. ನಿತ್ಯಾನಂದ ಸ್ವಾಮೀಜಿಯನ್ನು ಬೇರೆ ಬೇರೆ ಕಾರಣಕ್ಕಾಗಿ ವಿರೋಧಿಸುವವರು ಮೊದಲು ಎತ್ತಿರುವ ನೈತಿಕತೆಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆಶ್ರಮದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವ ಅವರು ಅಲ್ಲಿ ನಡೆಯುತ್ತಿರುವ ಅನೈತಿಕ ಚಟವಟಿಕೆ ಯಾವುದು ಎಂದು ಹೇಳುವುದಿಲ್ಲ.  ನಿತ್ಯಾನಂದ ಸ್ವಾಮೀಜಿ ಮುಕ್ತ ಲೈಂಗಿಕತೆಯ ವಿರೋಧಿ ಅಲ್ಲದಿದ್ದರೆ ಅಲ್ಲಿ ಅದೇ ನಡೆಯುತ್ತಿದ್ದರೆ ಅದನ್ನು ಸಾಬೀತು ಮಾಡಬೇಕಾದ ಹೊಣೆಗಾರಿಕೆ ಆರೋಪ ಮಾಡಿದವರ ಮೇಲೆ ಇರುತ್ತದೆ.
ಜೊತೆಗೆ  ಯಾವುದು ನೈತಿಕ ಯಾವುದು ಅನೈತಿಕ ? ಈ ಬಗ್ಗೆ ಮೊದಲು ಸ್ಪಷ್ಟತೆ ಬೇಕು. ಇನ್ನು ನಿತ್ಯಾನಂದ ಸ್ವಾಮೀಜಿ ಅಮೇರಿಕದ ಹೆಂಗಸೊಬ್ಬಳನ್ನು ಬಳಸಿಕೊಂಡ ಎಂಬ ಆರೋಪ. ಬಳಸಿಕೊಳ್ಳುವುದು   ಎಂದರೇನು ? ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ? ಅದು ಇಬ್ಬರ ಒಪ್ಪಿಗೆಯ ಮೇಲೆ ನಡೆದಿರಬಹುದಾದ ಸಾಮಾನ್ಯ ಕ್ರಿಯೆ ಆಗಿರಬಹುದಲ್ಲವೆ ?
ಈ ರಾಜ್ಯದ  ಮಠಗಳ ಇತಿಹಾಸವನ್ನು ಗಮನಿಸಿದರೆ, ಲೈಂಗಿಕ ಆರೋಪವನ್ನು ಹೊತ್ತ ಹಲವಾರು ಸ್ವಾಮೀಜಿಗಳು ಆಗಿ ಹೋಗಿದ್ದಾರೆ. ಇಂತಹ ಲೈಂಗಿಕ ಪ್ರಕರಣಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆದಿದ್ದು ಇದೆ. ನನಗೆ ಗೊತ್ತಿರುವ ಪ್ರಕರಣವೊಂದರಲ್ಲಿ ಸ್ವಾಮೀಜಿ ಒಬ್ಬರು ಭಕ್ತರೊಬ್ಬರು ಕೊಟ್ಟ ಬಂಗಾರದ ಸರವೊಂದನ್ನು ಭಕ್ತರ ಹೆಂಡತಿಗೆ ಕೊಟ್ಟು ಬಿಟ್ಟಿದ್ದರು. ಭಕ್ತರ ಹೆಂದತಿಗೂ ಸ್ವಾಮೀಜಿಗೂ ಇರುವ ಸಂಬಂಧ ಬಹಿರಂಗಗೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ಮಠ ಬಿಟ್ತು ಹೊರಟ  ಸ್ವಾಮೀಜಿ ಒಬ್ಬರಿಗೆ ಅವರು ಗುರುವಾಗಿದ್ದ ದೊಡ್ಡ ಸ್ವಾಮೀಜಿ ಮಠವನ್ನು ಬಿಡದಂತೆ ಬೇಕಾದರೆ ಗಂಡ ಸತ್ತ ಹೆಂಗಸೊಬ್ಬಳನ್ನು ಇಟ್ಟುಕೊಳ್ಳುವಂತೆಯೂ ಸೂಚಿಸಿದ್ದರು !  ಇನ್ನೊಬ್ಬ ದೊಡ್ದ ಸ್ವಾಮೀಜಿ  ಚಿತ್ರ ನಟಿಯೊಬ್ಬರ ತಂದೆ ಎಂಬ ಗುಸು ಗುಸು ಇದೆ.
ಈ ಸ್ವಾಮಿಗಳು ಇಂದು ಸಮಾಜದಲ್ಲಿ ಗೌರವದ ಸ್ಥಾನ ಹೊಂದಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಮಾಧ್ಯಮಗಳ ಕಚೇರಿಗೂ ಬಂದು ಪಾದ ಪೂಜೆ ಮಾಡಿಸಿಕೊಳ್ಳುವಷ್ಟ್ಉ ಪ್ರಭಾವಿಗಳು ಅವರು. ಆದರೆ ನಿತ್ಯಾನಂದ ಅವರ ಬಗ್ಗೆ ಹಾಗಲ್ಲ. ಅವರು ಇನ್ನು ಕೇವಲ ಆಪಾದಿತರಾದರೂ ಅವರನ್ನು  ಏಕ ವಚನದಲ್ಲಿ ಬೈಯ ಬಹುದು. ಲೇವಡಿ ಮಾಡಬಹುದು. ಯಾಕೆಂದರೆ ಅವರನ್ನು ಬೆಂಬಲಿಸುವ ಪ್ರಬಲ ಜಾತಿ ಅವರ ಹಿಂದೆ ಇಲ್ಲ.
ನಿತ್ಯಾನಂದ ಬೇರೆ ಸ್ವಾಮಿಗಳು ಮಾಡದಿರುವ ತಪ್ಪನ್ನು ಮಾಡಿಲ್ಲ. ಬೇರೆ ಸ್ವಾಮೀಜಿಗಳಂತೆ ಅವರೂ ಬದುಕಿದ್ದಾರೆ. ಹಾಗಿದ್ದರೆ ಅವರನ್ನು ಗುರಿಯಾಗಿಸಿಕೊಂಡು ಯಾಕೆ ಅವರ ಹಿಂದೆ ಬೀಳಲಾಗುತ್ತಿದೆ ಎಂಬುದು ಬಹು ಮುಖ್ಯ ಪ್ರಶ್ನೆ.
ನಿತ್ಯಾನಂದ ಸ್ವಾಮೀಜಿ ಕೆಲವು ವಿಚಾರಗಳಲ್ಲಿ ಬೇರೆ ಸ್ವಾಮಿಗಳಿಗಿಂತ ಭಿನ್ನವಾಗಿದ್ದಾರೆ. ಅವರ ಆಶ್ರಮದಲ್ಲಿ ಫಂಕ್ತಿ ಬೇಧ ಇಲ್ಲ. ಜಾತಿಯತೆ ಇಲ್ಲ. ತಮ್ಮ ಜಾತಿಯ ರಾಜಕಾರಣಿ ಜೈಲಿಗೆ ಹೋದ ಎಂಬ ಕಾರಣಕ್ಕಾಗಿ ಅವರು ಜೈಲಿಗೆ ಹೋಗಿ ಸಾಂತ್ವನ ಹೇಳಿಲ್ಲ.  ಸ್ವಜಾತಿಯ ರಕ್ಷಣೆಗಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಈ ವಿಚಾರಗಳು ನಮ್ಮ  ಕಣ್ಣಿಗೆ ಕಾಣುತ್ತಿಲ್ಲ.
ಬಹುತೇಕ ಸ್ವಾಮೀಜಿಗಳು ಒಂದೇ ತಕ್ಕಡಿಯಲ್ಲಿ ತೂಗುವಂಥವರು. ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ.
ಇನ್ನು ಇವರೆಲ್ಲ ಎತ್ತಿರುವ ನೈತಿಕತೆಯ ಪ್ರಶ್ನೆ ಎಂಬುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನೈತಿಕತೆ ಎನ್ನುವುದು ಆಯಾ ಕಾಲಕ್ಕೆ ಬದ್ಧವಾದ ಬದುಕುವ ರೀತಿ. ಇಲ್ಲಿ ವೈಯಕ್ತಿಕತೆಗಿಂತ ಸಾಮಾಜಿಕ ನಿಲುವುಗಳು ಬಹಳ ಮುಖ್ಯ. ಲೈಂಗಿಕತೆಯ ಕಟ್ಟುಪಾಡುಗಳು ಸಮಾಜದಿಂದ ಸಮಾಜಕ್ಕೆ ಬದಲಾಗುವಂತೆ ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಆದ್ದರಿಂದ ಸಾವಿರಾರು ವರ್ಷಗಳ ಹಿಂದಿನ ನೈತಿಕತೆ ಇವತ್ತಿನ ಜರೂರತ್ತು ಆಗಿರಬೇಕಿಲ್ಲ. ಅದು ಬದಲಾಗಿರಬಹುದು, ಬದಲಾಗುತ್ತಿರುತ್ತದೆ.
ಇದನ್ನು ಸರಳವಾಗಿ ಹೇಳುವುದಾದರೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ನಡೆಸುವ ಲೈಂಗಿಕ ಕ್ರಿಯೆ ಅದು ಖಾಸಗಿಯಾಗಿದ್ದರೆ ಅದನ್ನು ಸಾಮಾಜಿಕವಾಗಿ ಪ್ರಶ್ನಿಸುವುದು ಸರಿಯಲ್ಲ.  ನಿತ್ಯಾನಂದ ಸ್ವಾಮೀಜಿ ಯಾರ ಜೊತೆ ಎನನ್ನೂ ನಡೆಸಿದರೋ ಬಿಟ್ಟರೂ ಅದನ್ನು ಒಂದು ಮಿತಿಯನ್ನು ಮೀರಿ ಚರ್ಚಿಸಬೇಕಾದ ವಿಚಾರ ಎಂದೂ ನನಗೆ ಅನ್ನಿಸುತ್ತಿಲ್ಲ.
ನನಗೆ ಅನ್ನಿಸುವ ಹಾಗೆ ನಮಗೆಲ್ಲ ಧರ್ಮ ಬೇಕಾಗಿಲ್ಲ, ಧಾರ್ಮಿಕತೆ ಬೇಕಾಗಿದೆ. ಈ ಧಾರ್ಮಿಕತೆ ಇಡೀ ಮಾನವ ಜನಾಂಗದ ಒಳಿತಿನ ಧರ್ಮ ಆಗಿರಬೇಕು.
ಹಾಗೆ ಸೋಗಿನ ಧಾರ್ಮಿಕ ಮುಖಂಡರು ಮತ್ತು ಮಠಾಧಿಪತಿಗಳ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಮಠಾಧಿಪತಿಗಳನ್ನು ಇಟ್ಟುಕೊಂಡು ಅವರ ಅಧರ್ಮವನ್ನು ನೋಡುವ ಕರ್ಮ ನಮಗೆ ಯಾಕೆ ?

6 comments:

Vasanth said...

very good write up. very interesting and shocking analysis of the fact.

Badarinath Palavalli said...

ಇದು ಸಕಾಲಿಕ ಬರಹ ಸಾರ್,

ಯಾವುದೋ ಕೋಮಿನ, ಯಾವುದೋ ರಾಜಕೀಯ ಪ್ರೇರಿತ ಮಠಗಳಿಂದ ಸಮಾಜಕ್ಕೆ ಆಗುವ ಒಳಿತುಗಳಿಗಿಂತ ಸಾಮಾಜಿಕ ಒಡಕೆ ಹೆಚ್ಚು.

ದೇಣಿಗೆಗಳಿಂದ ಕೊಭ್ಭಿರುವ ಮಠಗಳು ಈಗ ರಾಜಕೀಯ ಕೀಲಿ ಕೈಗಳಾಗಿರುವುದು ಹಾಸ್ಯಾಸ್ಪದ.

ನಿತ್ಯಾನಂದನ ಬಗ್ಗೆ ತುಟಿ ಬಿಚ್ಚದ ಮುಖ್ಯ ಮಂತ್ರಿಗಳ ಬಗ್ಗೆ ನಮಗೆ ಅನುಮಾನ ಮೂಡುತ್ತದೆ.

Ashok K R said...

good one sir

Ashok K R said...

good analysis

Ganesh Upadhya said...

ತುಂಬಾ ಚೆನ್ನಾಗಿದೆ ಸರ್ ಲೇಖನ.. ಒಳ್ಳೆಯ ವಿಮರ್ಶೆಗೆ ವಸ್ತು..

Sheila Bhat said...

simply superb! ittichege odida olleya lekhana! idannu yavudadaru nationl paperge writeup madidre chennagirtittu...samasyeya ola nota hecchina janarige arthavadashtu samajika badalavane tanagiye aguttade emba nambike nannadu

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...