ಪ್ರೀತಿ ಪಡೆಯುವುದಕ್ಕಿಂತ ಕೊಡುವುದರ ಕಷ್ಟ.
ಪಡದೇ ಕೊಡುವುದು ನಮಗೆಲ್ಲ ಇಷ್ಟ, ಹಾಗ ಕೊಡುವುದು ಹೇಗೆ ?
ಆದರೂ ಕೊಡಲೇ ಬೇಕು ಕೊಡುತ್ತಲೇ ಇರಬೇಕು.
ಕೊಡಲು ಸಾಧ್ಯವಾಗದಿದ್ದರೆ ಕೆಳಗೆ ಪ್ರಪಾತ, ಆತ್ಮಘಾತ..
ಅಪ್ಪನಾಗುವುದು ಆಷ್ಟು ಸುಲಭವಲ್ಲ.
ನಿಂತ ನದಿಯಾಗುವವನು ಅಪ್ಪ. ಹರಿಯುತ್ತಲೆ ಇರುವುದು ಅವನ ಕುಡಿ.
ನಿಂತವರಿಗೆ ಹರಿಯುವಿಕೆ ಅರ್ಥವಾಗುವುದಿಲ್ಲ,
ಹರಿಯುವವರಿಗೆ ನಿಲ್ಲುವುದು ಆಗದ ಕೆಲಸ
ನಿಂತು ನೋಡಲೇಬೇಕು ಹರಿಯುವ ರಭಸವನ್ನು
ಕಲ್ಲು ಬಂಡೆಗಳಿಗೆ ಅಪ್ಪಳಿಸುವ ಭಯವನ್ನು, ಹರಿಯುವವರಿಗೆ
ಎಲ್ಲಿದೆ ವ್ಯವಧಾನ ? ಕೇಳುವ ತಾಳ್ಮೆ..
ನಿಂತವರಿಗೆ ಹರಿಯುವ ರಬಸದ ಸುಖ ತಿಳಿಯದ ಬಾಳ್ವೆ,,
ಅಪ್ಪನಾಗುವುದು ಸುಲಭವಲ್ಲ.
ಒಮ್ಮೆ ನಿಂತು ನೋಡು, ಅಕ್ಕಪಕ್ಕದ ಕಾಡು,
ದಂಡೆ, ಅದರ ಮೇಲೆ ಏನಿದೆ ಏನಿಲ್ಲ ?
ಹರಿಯುವ ರಬಸದ ನಡುವೆ ನಿಂತು ನೋಡುವ ತಾಳ್ಮೆ ಧ್ಯಾನ
ಹರಿಯುವುದನ್ನು ನಿಲ್ಲಿಸಬೇಡ, ಆದರೆ ನಿಂತು ನೋಡುವುದನ್ನು ಮರೆಯಬೇಡ
ಆದರೆ ಮಾತು ಕೇಳಲಾರದು ಹರಿಯುವ ಉತ್ಕಟತೆಯಲ್ಲಿ, ತೀವ್ರತೆಯ ಸುಖದಲ್ಲಿ
ಆದರೂ ಅಪ್ಪನಾಗುವುದು ಸುಲಭವಲ್ಲ.
ಅಪ್ಪ ಓದಿ ಮುಗಿಸಿದ ಹಾಳೆ, ಇರಬಹುದು ಆದರೂ ಸ್ವಲ್ಪ ತಾಳೆ
ಒಮ್ಮೆ ಓದಿ ಮುಗಿಸಿದ ಹಾಳೆಯಲ್ಲಿನ ಅಕ್ಷರ ತಾಗಲಿ ನಿನ್ನ ಹ್ರುದಯಕ್ಕೆ..
ಆ ಹಾಳೆಯಲ್ಲಿ ಏನಿದೆ ಏನಿಲ್ಲ ? ಅದನ್ನೆಲ್ಲ ನೀನು ನೋಡಲೇಬೇಕಲ್ಲ..
ನಿಜ ಹಾಳೆ ರದ್ದಿಯಾಗಿದೆ, ಆದರೂ ಅದರಲ್ಲಿ ಏನೋ ಇದೆ..
ಒಮ್ಮೆ ನೋಡಿ ಮುಂದೆ ನಡೆ, ಅದಕ್ಯಾಕೆ ಬಿಡೆ ?
ಆದರೂ ಹೇಳುತ್ತೇನೆ ಅಪ್ಪನಾಗುವುದು ಅಷ್ಟು ಸುಲಭವಲ್ಲ,,
ಆಕಾಶ ಭೂಮಿ ಎಲ್ಲೂ ಸೇರುವುದಿಲ್ಲ, ಆದರೂ ಹಾಗೆ ಕಾಣಿಸುವುದಲ್ಲ
ನಿಂತ ಭೂಮಿಗೆ ಮೇಲಿನ ಆಕಾಶದ ಭಯ. ಅಕಾಶಕ್ಕೆ ನೆಲ ಕಾಣಿಸುವುದಿಲ್ಲ
ಮೇಲೆ ಹಾರುವವರು ಕೆಳಗೆ ನೋಡಲಾರರು.ಕೆಳಗೆ ಇರುವವರು ಮೇಲೆ ನೋಡದೇ ಇರಲಾರದು
ಆದರೂ ಒಮ್ಮೆ ನೋಡಿ ಬಿಡು ನೆಲವನ್ನು, ನೀನು ಬಲ್ಲೆಯಾ ?
ನೆಲವಿಲ್ಲದೇ ಆಕಾಶವಿಲ್ಲ, ಅಕಾಶ ಎನ್ನುವುದೇ ಭ್ರಮೆಯಲ್ಲವಾ ?
ಇದೆಲ್ಲವುದರ ನಡುವೆಯೂ ಹೇಳುತ್ತೇನೆ
ಅಪ್ಪನಾಗುವುದು ಅಷ್ಟು ಸುಲಭವಲ್ಲ,,
No comments:
Post a Comment