ಅವರು ಹೀಗೆ ಮಾಡಿಕೊಳ್ಳಬಾರದಿತ್ತು. ಬದುಕಿಗೆ ಬೆನ್ನು
ತೋರಿಸಿಹೋಗಬಾರದಿತ್ತು. ಆದರೂ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲರಿಗೂ ಅನ್ನಿಸುವ
ಹಾಗೆ ಅವರಿಗೆ ಬದುಕು ಸಾಕು ಅನ್ನಿಸಿರಬೇಕು. ಹೀಗಾಗಿ ಅವರು ಈ ತೀರ್ಮಾನ ಕೈಗೊಂಡಿರಬೇಕು.
ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ
ಮನಸ್ಸಿನವರಾಗಿರುತ್ತಾರೆ, ಒಂದು ಕ್ಷಣ ಈ ಬದುಕು ಸಾಕು ಅನ್ನಿಸಿದಾಗ ಬದುಕಿನ ಪುಟಗಳ ಕೊನೆಯ
ಹಾಳೆಯನ್ನು ಮುಗಿಚಿಹಾಕಿಬಿಡುತ್ತಾರೆ. ಅದು ಭಾವುಕತೆಯ ಅತ್ಯುಂಗ ಸ್ಥಿತಿ. ಅದಾದ ಮೇಲೆ ಎಲ್ಲವೂ
ಮುಗಿಯಿತು. ಆದರೆ ಬದುಕು ಭಾವುಕತೆಯನ್ನು ಮೀರಿದ್ದು. ಭಾವುಕತೆಯೊಂದೇ ಬದುಕನ್ನು
ಕಟ್ಟಿಕೊಡುವುದಿಲ್ಲ. ಭಾವುಕತೆಯನ್ನು ಮೀರುವುದು ಹೇಗೆ ?
ನನ್ನನ್ನು ಎಂದಿನಿಂದಲೂ ಕಾಡುತ್ತಿರುವ ಕೆ. ರಾಮಯ್ಯನವರು
ಒಂದು ಸಣ್ಣ ಕವನ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ.
ನಾನು ಆತ್ಮಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು,
ಕಾರಣಗಳೇ ಅಲ್ಲ ಎಂಬ ಸಂಶಯ ನನ್ನನ್ನು
ಬದುಕಿ ಉಳಿಸಿದೆ.
ರಾಮಯ್ಯ ಹೇಳುವಂತೆ ಆತ್ಮಹತ್ಯೆಗೆ ಕೊಡುವ ಕಾರಣಗಳು
ಕಾರಣಗಳೇ ಅಲ್ಲದಿರಬಹುದು ಎಂಬ ಸಂಶಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರಿಗೆ ಮೂಡಬೇಕು. ಆಗ
ಬದುಕಿನ ಬಾಗಿಲು ಮತ್ತೆ ತೆರದುಕೊಳ್ಳುತ್ತದೆ. ಆದರೆ ಅತಿಯಾದ ಭಾವುಕತೆ ಸಂಶಯ ಪಡುವುದಕ್ಕೆ ಅವಕಾಶ
ನೀಡುವುದಿಲ್ಲ. ಆಗ ಅವರೇ ತಮ್ಮ ಬದುಕಿನ ಬಾಗಿಲನ್ನು ಮುಚ್ಚಿಕೊಂಡು ಬಿಡುತ್ತಾರೆ. ಮಂಗಳೂರಿನ ಡಿ
ವೈ ಎಸ್ ಪಿ ಗಣಪತಿ ಅವರಿಗೆ ಅವರ ಭಾವುಕತೆಯನ್ನು ಮೀರಿದ ಇಂತಹ ಒಂದು ಸಂಶಯ ಮೂಡಿದ್ದರೆ ಅವರು
ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಜಲಪಾತದಂತೆ ಭೋರ್ಗರೆದ ಭಾವುಕತೆ ಇದಕ್ಕೆ ಅವಕಾಶ
ನೀಡಲೇ ಇಲ್ಲ.
ಸಾವು,
ಅದು ಅತ್ಮಹತ್ಯೆ ಇರಲಿ, ಅಥವಾ ನೈಜ ಸಾವು ಇರಲಿ ನಮ್ಮನ್ನೆಲ್ಲ ಭಾವುಕರನ್ನಾಗಿ ಮಾಡುತ್ತದೆ. ಇದು
ಸಹಜ. ಆದರೆ ಸಾವಿನ ಕಾರಣವನ್ನು ಹುಡುಕುವಾಗ ಭಾವುಕರಾಗಬಾರದು.
ಆತ್ಮಹತ್ಯೆಯ ಕಾರಣವನ್ನು ಹುಡುಕುವಾಗ ಭಾವುಕರಾಗಬಾರದು. ಹಾಗಾದರೆ ಸತ್ಯದ ಕೊಲೆ ಆಗಿಬಿಡುತ್ತದೆ.ಮಾಧ್ಯಮ
ಭಾವುಕತೆಯಿಂದ ಹೊರಕ್ಕೆ ಬರಬೇಕು. ಒಂದು ಸಣ್ಣ ಸಂಶಯ ಮಾಧ್ಯಮದವರಿಗೆ ಇರಬೇಕು. ಸಂಶಯವೇ ಮಾಧ್ಯಮದ
ಮೂಲ ದೃವ್ಯ. ಅದೇ ಸತ್ಯದೆಡೆಗೆ ತೆರಳುವ ದಾರಿ. ಆದರೆ ಇಂದು ಮಾಧ್ಯಮ ಕೂಡ ಭಾವುಕವಾಗುತ್ತಿದೆ.
ಹೀಗಾಗಿ ಮಾಧ್ಯಮಕ್ಕೆ ಸಂಶಯವೇ ಇಲ್ಲ. ಇದು ಮಾಧ್ಯಮವನ್ನು ಸಂಶಯ ರಹಿತವನ್ನಾಗಿ ಮಾಡಿ ಬಿಟ್ಟಿದೆ.
ಅಳುವುದು ಮತ್ತು ಅಳಿಸುವುದೇ ಮಾಧ್ಯಮದ ಕಾಯಕವಾಗಿದೆ ಎಂಬ ಅನುಮಾನವೂ ನನಗೆ ಮೂಡುತ್ತಿದೆ.
ಮೊನ್ನೆ ಮಂಗಳೂರು ಡಿ ವೈ ಎಸ್ ಪಿ ಗಣಪತಿ ಆತ್ಮ ಹತ್ಯೆ
ಮಾಡಿಕೊಳ್ಳುವಾಗ ಅವರಿಗೆ ಎಲ್ಲವೂ ಸಾಕು ಅನ್ನಿಸಿರಬಹುದು. ಹಾಗಿದ್ದರೆ ಅವರಿಗೆ ಎಲ್ಲವೂ ಸಾಕು
ಎಂದು ಯಾಕೆ ಅನ್ನಿಸಿರಬಹುದು ? ಎಲ್ಲವನ್ನು ಮುಗಿಸಿ ಕೈಚೆಲ್ಲುವ ಹಂತಕ್ಕೆ ಅವರು ಹೋಗಿದ್ದು ಯಾಕೆ
? ಇಂಥ ತೀರ್ಮಾನಕ್ಕೆ ತೆಗೆದುಕೊಳ್ಳುವುದಕ್ಕೆ ಇರಬಹುದಾದ ಕಾರಣಗಳು ಯಾವವು ? ಅದು ಕೇವಲ ವೃತ್ತಿಯ
ಕಾರಣವಾ ಅಥವಾ ಕೌಟುಂಬಿಕ ಕಾರಣಗಳು ಸೇರಿಕೊಂಡಿದ್ದವೆ ? ಅಥವಾ ಎಲ್ಲ ಕಾರಣಗಳೂ ಸೇರಿ ಅವರು ಈ
ಸ್ಥಿತಿಗೆ ತಲುಪಿದ್ದರಾ ? ತಾವು ಆತ್ಮಹತ್ಯೆಗೆ ಕಂಡುಕೊಂಡ ಕಾರಣಗಳು ಕಾರಣಗಳೇ ಅಲ್ಲ ಎಂಬ ಸಂಶಯ
ಅವರಿಗೆ ಮೂಡಲೇ ಇಲ್ಲವೆ ? ಇಲ್ಲ ಅನ್ನಿಸುತ್ತದೆ. ಇಂತಹ ಒಂದು ಸಣ್ಣ ಸಂಶಯ ಅವರಿಗೆ ಮೂಡಿದ್ದರೆ
ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ನಮಗೆ ಅಂದರೆ ಮಾಧ್ಯಮದವರಿಗೆ ಇಂಥಹ ಸಣ್ಣ ಸಂಶಯ
ಮೂಡಿದ್ದರೆ ಈ ಘಟನೆಯನ್ನು ಭಾವುಕತೆಯ
ಪರಾಕಾಷ್ಟೆಗೆ ಒಯ್ಯುವ ಸ್ಥಿತಿ ಬರುತ್ತಿರಲಿಲ್ಲ.
ನಿನ್ನೆ ಅವರು ಮಡಿಕೇರಿಗೆ ಬರುತ್ತಾರೆ. ಹೋಟೆಲ್
ಒಂದರಲ್ಲಿ ರೂಂ ಮಾಡಿಕೊಂಡು ಮಾಧ್ಯಮಗಳ ಬಳಿ ಹೋಗುತ್ತಾರೆ. ಅಲ್ಲಿ ತಮ್ಮ ವೃತ್ತಿಯ ಬಗ್ಗೆ
ಮಾತನಾಡುತ್ತಾರೆ. ತಮಗೆ ಇಲಾಖೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸುತ್ತಾರೆ.
ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಹಿಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಆರೋಪ
ಮಾಡುತ್ತಾರೆ. ತಮಗೆ ಮುಂದೆ ಏನಾದರೂ ಆದರೆ ಅದಕ್ಕೆ ಈ ಮೂವರೆ ಕಾರಣ ಎಂದು ಹೇಳುತ್ತಾರೆ. ಆಗ ಅವರು
ಮಾತನಾಡುತ್ತಿದ್ದುದನ್ನು ನೋಡಿದರೆ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದು ಸ್ಪಷ್ಟವಾಗಿ
ಕಾಣುತ್ತದೆ. ಅಲ್ಲಿ ಸಂಶಯಕ್ಕೆ ಎಡೆಯೇ ಇರಲಿಲ್ಲ.
ಅವರು ಈ ಆರೋಪ ಮಾಡಿದ ತಕ್ಷಣ ಮಾಧ್ಯಮದವರಾಗಿ ನಮಗೆ ಬರುವ
ಮುಂದಿನ ಪ್ರಶ್ನೆ ಎಂದರೆ ಕಿರುಕುಳ ನೀಡಿದರು ಎಂದರೆ ಹೇಗೆ ಕಿರುಕುಳ ನೀಡಿದರು ಎಂಬುದು. ಕಿರಿಕುಳ
ನೀಡಿದ್ದಕ್ಕೆ ಸಾಕ್ಷಾಧಾರಗಳು ಇವೆಯೆ ಎಂಬುದು ಮತ್ತೊಂದು ಪ್ರಶ್ನೆ..ವರ್ಗಾವಣೆ ಮಾಡಿದ್ದನ್ನು
ಕಿರುಕುಳ ಎನ್ನಬಹುದೆ ? ಅಥವಾ ನಾನ್ ಎಕ್ಸಿಕ್ಯೂಟೀವ್ ಪೋಸ್ಟ್ ಗೆ ಹಾಕಿದ್ದನ್ನು ಕಿರುಕುಳ ಎಂದು
ಭಾವಿಸಬಹುದೆ ? ಯಾಕೆಂದರೆ ಒಂದು ಸರ್ಕಾರಿ ಇಲಾಖೆಯಲ್ಲಿ ವರ್ಗಾವಣೆ ಎಂಬುದು ತುಂಬಾ ಸಹಜವಾದದ್ದು.
ಸರ್ಕಾರಿ ಕೆಲಸ ಮಾಡುವವನು ವರ್ಗಾವಣೆಯನ್ನು ಒಪ್ಪಿಕೊಳ್ಳದೇ ಇರುವಂತಿಲ್ಲ. ಹಾಗೆ ನಾನ್
ಎಕ್ಸಿಕ್ಯೂಟೀವ್ ಹುದ್ದೆಗೆ ಹಾಕುವುದು ಕಿರಿಕುಳ ಎಂದಾಗುವುದೆ ? ಪೊಲೀಸ್ ಮ್ಯಾನುವಲ್ ಪ್ರಕಾರ
ಒಬ್ಬ ಅಧಿಕಾರಿಯನ್ನು ಎಷ್ಟು ಕಾಲ ಎಕ್ಸಿಕ್ಯುಟೀವ್ ಮತ್ತು ಎಷ್ಟು ಕಾಲ ನಾನ್ ಎಕ್ಸಿಕ್ಯುಟೀವ್
ಹುದ್ದೆಗೆ ಹಾಕಬೇಕು ಎಂಬ ಬಗ್ಗೆ ನಿಯಮವೇನಾದರೂ ಇದೆಯೇ ?
ಈ ಪ್ರಶ್ನೆಗಳಿಗೆ ಅವರ ಸಂದರ್ಶನದಲ್ಲಿ ಉತ್ತರವಿಲ್ಲ.
ಯಾಕೆಂದರೆ ಅವರು ಕೇವಲ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ತಾತ್ವಿಕವಾಗಿ ಮಾತನಾಡಿಲಿಲ್ಲ.
ಕಾನೂನನ್ನು ಉಲ್ಲೇಖಿಸಿ ಮಾತನಾಡಿಲ್ಲ. ಯಾಕೆಂದರೆ
ಆಗಲೇ ಅವರು ತಮ್ಮ ಆತ್ಮಹತ್ಯೆಯ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡಾಗಿತ್ತು. ಹೀಗಾಗಿ ತಮ್ಮ
ಸಾವಿಗೆ ಯಾರು ಯಾರು ಕಾರಣ ಎಂದು ದಾಖಲಿಸುವ ಕೆಲಸಕ್ಕಾಗಿ ಮಾತ್ರ ಅವರು ಮಾಧ್ಯಮದ ಎದುರು
ಬಂದಿದ್ದರು.
ಅವರು ಮಾಧ್ಯಮದ ಜೊತೆ ಮಾತನಾಡುವಾಗ ಕೊನೆಯ ಮಾತೊಂದನ್ನು
ಹೇಳುತ್ತಾರೆ. ಈ ಸರ್ಕಾರ ಇರುವವರೆಗೆ ಅನ್ಯಾಯ ಮುಂದುವರಿಯುತ್ತದೆ. ಈ ಸರ್ಕಾರ ಹೋಗಬೇಕು..!
ಜೊತೆಗೆ ನನಗಾದ ಅನ್ಯಾಯ ಬೇರೆಯವರಿಗೆ ಆಗಬಾರದು ಇದೇ ನನ್ನ ಉದ್ದೇಶ ಎಂದು ಅವರು ಹೇಳುತ್ತಾರೆ.
ತಮ್ಮ ಸೇವಾವಧಿಯಲ್ಲಿ ತಮಗೆ ಆದ ಅನ್ಯಾಯ ಮತ್ತು
ಕಿರುಕುಳದ ಬಗ್ಗೆ ಆರೋಪಿಸುವ ಗಣಪತಿ ತಮ್ಮ ಮಾತಿನ ಕೊನೆಯಲ್ಲಿ ರಾಜಕೀಯ ಉದ್ದೇಶವನ್ನು ಹೊರಗೆ
ಹಾಕುತ್ತಾರೆ. ಅದು ಈ ಸರ್ಕಾರ ಹೋಗಬೇಕು ಎಂಬುದು. ಈ ಮಾತಿನ ಹಿಂದಿನ ಉದ್ದೇಶ ರಾಜಕೀಯ ಬದಲಾವಣೆ
ಮತ್ತು ಸರ್ಕಾರದ ಬದಲಾವಣೆ..
ಅವರ ಮಾತಿನಿಂದ ಇನ್ನಷ್ಟು ಪ್ರಶ್ನೆಗಳು
ಉದ್ಭವವಾಗುತ್ತದೆ. ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಗಣಪತಿ ಅವರಿಗೆ ಕಿರುಕುಳ ನೀಡಿದರು
ಎಂದಾದರೆ ಅದಕ್ಕೆ ಇರುವ ಕಾರಣಗಳೇನು ? ಜಾರ್ಜ್ ಅವರಿಗೆ ಯಾಕೆ ಗಣಪತಿ ಅವರಿಗೆ ಕಿರುಕುಳ
ನೀಡುವಷ್ಟು ಸಿಟ್ಟು ? ಈ ಪ್ರಶ್ನೆಗಳಿಗೆ ಅವರ ಮಾತುಗಳಲ್ಲಿ ಉತ್ತರವಿಲ್ಲ.
ಈ ಬಗ್ಗೆ ಕೆ.ಜೆ.ಜಾರ್ಜ್ ಹೇಳುವುದು ನನಗೆ ಗಣಪತಿ ಯಾರು
ಎಂಬುದು ಗೊತ್ತಿಲ್ಲ. ಅವರು ಒಮ್ಮೆ ಮಾತ್ರ ನನ್ನನ್ನು ಭೇಟಿ ಮಾಡಿದ್ದರು. ಆಗ ತಮ್ಮನ್ನು
ಎಕ್ಸಿಕ್ಯುಟೀವ್ ಹುದ್ದೆಗೆ ಹಾಕಬೇಕು ಎಂದು ಮನವಿ ಮಾಡಿದ್ದರು.. ಆಗ ನಾನು ಇದು ಆಡಳಿತಾತ್ಮಕ
ವಿಚಾರ. ನಾನು ಇದರಲ್ಲಿ ತಲೆ ಹಾಕಲಾರೆ ಎಂದು ಹೇಳಿದ್ದೆ..
ಇವರಿಬ್ಬರ ಮಾತುಗಳನ್ನು ಇಟ್ಟುಕೊಂಡು ಇನ್ನಷ್ಟು ಆಳವಾಗಿ
ನೋಡೋಣ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುವ ಇನಸ್ಪೆಕ್ಟರ್ ಗಳ ಸಂಖ್ಯೆ ಎಷ್ಟು ? ಈ ಎಲ್ಲ
ಇನಸ್ಪೆಕ್ಟರ್ ಗಳ ಬಗ್ಗೆ ಸಚಿವರಾದವರಿಗೆ ಗೊತ್ತಿರುತ್ತದೆಯೆ ? ಹೀಗೆ ಎಲ್ಲರಿಗೂ ಕಿರುಕುಳ
ನೀಡುವುದು ಅವರ ಕೆಲಸವೇ ? ಒಂದೊಮ್ಮೆ ಯಾರೋ ಒಬ್ಬ ಇನಸ್ಪೆಕ್ಟರ್ ಗೆ ಕಿರುಕುಳ ನೀಡುತ್ತಾರೆ
ಎಂದರೆ ಅದಕ್ಕೆ ಬಲವಾದ ಕಾರಣಗಳು ಇರಬೇಕು. ಹಾಗಿದ್ದರೆ ಗಣಪತಿ ಅವರ ಪ್ರಕರಣದಲ್ಲಿ ಅಂತಹ ಕಾರಣ
ಯಾವುದು ? ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಗಣಪತಿ ಇಂತಹ ಮಾಹಿತಿಯನ್ನು ಒದಗಿಸಿಲ್ಲ..
ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಆರೋಪ ಮಾಡುವ ಹಕ್ಕು
ಎಲ್ಲರಿಗೂ ಇದೆ. ಗಣಪತಿ ಅವರಿಗೂ ಸಹ. ಹಾಗೆ ಕಿರುಕುಳದ ಆರೋಪ ಮಾಡುವುದು ಸುಲಭ. ಈಗ ಗಣಪತಿ ಅವರ
ಬಗ್ಗೆ ಸಿಂಪಥಿಯಿಂದ ಮಾತನಾಡುವ ಮಾಧ್ಯಮಗಳ ಕಚೇರಿಯಲ್ಲೂ ಕಿರುಕುಳ ಇದೆ ಎಂದು ಯಾರೋ ಒಬ್ಬ
ಸಿಬ್ಬಂದಿ ಮಾತನಾಡಬಹುದು, ಆರೋಪ ಮಾಡಬಹುದು. ಶಶಿಧರ ಭಟ್ ಕಿರುಕುಳ ನೀಡುತ್ತಾರೆ ಎಂದು ನನ್ನ
ಸಹೋದ್ಯೋಗಿ ನನ್ನನ್ನು ದೂರಬಹುದು. ಹಾಗೆ ಕಿರುಕುಳದ ಆರೋಪ ಮಾಡಿದಾಗ ಮಾಡಿದವರ ಫೂರ್ವಾಪರಗಳನ್ನು
ತಿಳಿದುಕೊಳ್ಳಬೇಕು. ಅವರ ಉದ್ದೇಶ ಏನಿರಬಹುದು ಎಂದು ತಿಳಿದುಕೊಳ್ಳಲು ಯತ್ನ ಮಾಡಬೇಕು. ಯಾಕೆಂದರೆ
ಕಿರುಕುಳದ ಆರೋಪ ಮಾಡುವುದು ತುಂಬಾ ಸುಲಭ. ಮಾಧ್ಯಮ ಸಂಶಯದಿಂದ ಕೆಲಸ ಮಾಡಿದರೆ ಈ ಪ್ರಶ್ನೆಗಳು
ಮೂಡುತ್ತವೆ. ಇಲ್ಲದಿದ್ದರೆ ಭಾವುಕತೆ ಎಂಬ ಬೆಂಕಿಗೆ ತುಪ್ಪ ಸುರಿದಂತೆ..
ಗಣಪತಿ ಅವರು ಅಪ್ಪಟ ಪ್ರಾಮಾಣಿಕ ಎಂಬ ತೀರ್ಪನ್ನು
ಮಾಧ್ಯಮದವರಾದ ನಾವು ನೀಡಿ ಬಿಟ್ಟಿದ್ದೇವೆ. ಕೆಲಸ ವಾಹಿನಿಗಳು ಈ ಸರ್ಕಾರಕ್ಕೆ ಮಾನ ಮರ್ಯಾದೆ
ಇದೆಯಾ ಎಂದು ಪ್ರಶ್ನಿಸಿಯೂ ಅಗಿದೆ. ಸಚಿವ ಜಾರ್ಜ್ ಅವರ ರಾಜೀನಾಮೆಗೂ ಕೆಲವು ಮಾಧ್ಯಮಗಳು
ಒತ್ತಾಯಿಸಿವೆ. ಹಾಗಿದ್ದರೆ ಗಣಪತಿ ಅವರು ಪ್ರಾಮಾಣಿಕರೆ ಎಂಬ ಪ್ರಶ್ನೆಗೆ ಮೊದಲು ಉತ್ತರ
ಕಂಡುಕೊಳ್ಳಬೇಕು. ಆದರೆ ಇಲ್ಲಿ ಅವರ ಪ್ರಾಮಾಣಿಕತೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದು
ಕೋಟಿ ಕಳವಿನ ಪ್ರಕರಣದಲ್ಲಿ ಅವರತ್ತ ಸಂಶಯದ ಮುಳ್ಳು ನೆಟ್ಟಿದೆ. ಮಂಗಳೂರು ಚರ್ಚ್ ಮೇಲಿನ ಧಾಳಿ
ಪ್ರಕರಣದಲ್ಲಿ ಅವರ ಸಂಘ ಪರಿವಾರದ ಸದಸ್ಯರಂತೆ ನಡೆದುಕೊಂಡರು ಎಂಬ ಆರೋಪಗಳಿವೆ. ಹೀಗಾಗಿ ಅವರು
ಪ್ರಶ್ನಾತೀತ ಅಧಿಕಾರಿ ಅಲ್ಲ ಎಂಬುದು ಸ್ಪಷ್ಟ. ಹಾಗಿದ್ದರೆ ಅವರು ಪ್ರಾಮಾಣಿಕರು ಎಂಬ ಬಗ್ಗೆಯೇ
ಭಿನ್ನಾಭಿಪ್ರಾಯ ಇರುವಾಗ ಅವರ ಮಾತುಗಳೆಲ್ಲ ಪ್ರಾಮಾಣಿಕ ಎಂದು ನಂಬುವುದು ಹೇಗೆ ?
ಅವರು ಸಾಯುವುದಕ್ಕೆ ಮೊದಲು ನೀಡಿದ ಹೇಳಿಕೆ ಸಂಪೂರ್ಣ
ಸತ್ಯ ಎಂದು ನಾವು ಮಾಧ್ಯಮದವರು ನಂಬುವುದು ಹೇಗೆ ?
ಈ ಪ್ರಶ್ನೆಗಳನ್ನು
ಮುಂದಿಟ್ಟುಕೊಂಡು ಮಾಧ್ಯಮದವರಾದ ನಾವು ಯೋಚಿಸಬೇಕಿತ್ತು. ಆದರೆ ಅವರ ಆತ್ಮಹತ್ಯೆ ಸುದ್ದಿ ಬಂದ
ತಕ್ಷಣ ನಾವು ಅವರನ್ನು ನಾಯಕರನ್ನಾಗಿ ಸೃಷ್ಟಿಸಲು ಹೊರಟು ಬಿಟ್ಟೆವು, ಪ್ರಾಮಾಣಿಕ ಅಧಿಕಾರಿ ಎಂಬ
ಬಿರುದು ನೀಡಿದೆವು. ಸಚಿವರ ರಾಜೀನಾಮೆಗೆ ಒತ್ತಾಯಿಸಿದೆವು. ಅವರ ತಂದೆ ನೀಡಿದ ದೂರಿನ
ಬಗ್ಗೆಯಾಗಲೀ ಅಧಿಕಾರಿಗಳು ನೀಡಿದ ಹೇಳಿಕೆಯನ್ನಾಗಲಿ ಗಂಭೀರವಾಗಿ ತೆಗೆದುಕೊಳ್ಳಲು ಮುಂದಾಗಲೇ
ಇಲ್ಲ. ಯಾಕೆಂದರೆ ಮಾಧ್ಯಮ ಆಗಲೇ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಕಿರುಕುಳದದಿಂದ ನಡೆದ
ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿ ಆಗಿತ್ತು. ಡಿ. ಕೆ. ರವಿ ಪ್ರಕರಣದ ನಂತರ ಇನ್ನೊಂದು
ನಾಯಕನ್ನು ಸೃಷ್ಟಿಸಲು ವೇದಿಕೆಯನ್ನು ಸಿದ್ಧಪಡಿಸಿ ಆಗಿತ್ತು.
ಗಣಪತಿ ಅವರಿಗೆ ಮಾನಸಿಕ
ಖಿನ್ನತೆ ಇತ್ತು ಎಂಬುದನ್ನಾಗಲೀ, ಅವರು ಸತತವಾಗಿ ಔಷಧವನ್ನು ಸೇವಿಸುತ್ತಿದ್ದರು ಎಂಬುದನ್ನಾಗಲಿ
ನಂಬಲು ಮಾಧ್ಯಮ ಸಿದ್ಧ ವಿರಲಿಲ್ಲ. ಯಾಕೆಂದರೆ ಹಾಗೆ ನಂಬಿದ ತಕ್ಷಣ ಈ ಅಧಿಕಾರಿಯ ಆತ್ಮಹತ್ಯೆ
ಪ್ರಕರಣ ಅದರ ಮಹತ್ವವನ್ನು ಕಳೆದುಕೊಂಡು ಬಿಡುತ್ತದೆ. ಅದು ಮಾಧ್ಯಮಕ್ಕೆ ಬೇಕಾಗಿಲ್ಲ.
ಡಿ. ಕೆ. ರವಿ ಅವರನ್ನು
ಇದೆ ರೀತಿ ನಾಯಕನ್ನಾಗಿ ಸೃಷ್ಟಿಸಿದ ನಂತರ ಏನಾಯಿತು ಗಮನಿಸಿ. ಈ ಪ್ರಕರಣವನ್ನು ಸಿ ಬಿ ಐ ತನಿಖೆ
ನಡೆಸಿ ಇದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಿದರೂ ಯಾರೂ ಇದನ್ನು ಒಪ್ಪಿಕೊಳ್ಳಲು
ಸಿದ್ಧರಿಲ್ಲ. ಸಾಮಾನ್ಯ ಜನ ಕೂಡ ಇದು ಕೊಲೆ ಪ್ರಕರಣವೇ ಎಂದು ಹೇಳಲು ಪ್ರಾರಂಭಿಸಿದ್ದಾರೆ.
ಮಾಧ್ಯಮ ಕೂಡ ಹಾಗೆ ಹೇಳುತ್ತದೆ. ಇನ್ನು ಈ ಪ್ರಕರಣದ ತನಿಖೆಯನ್ನು ಯಾವುದೂ ವಿದೇಶಿ ತನಿಖಾ
ಸಂಸ್ಥೆಗೆ ನೀಡಿ ಅವರು ಆತ್ಮಹತ್ಯೆ ಎಂದು ವರದಿ ನೀಡಿದರೂ ಜನ ಒಪ್ಪಿಕೊಳ್ಳಲಾರರು. ಯಾಕೆಂದರೆ
ಇದೊಂದು ನಿಗೂಢ ಕೊಲೆ ಎಂದು ಮಾಧ್ಯಮಗಳು ತೀರ್ಮಾನಕ್ಕೆ ಬಂದಾಗಿದೆ. ಅದೇ ರೀತಿ ಪ್ರಚಾರ ಮಾಡಿ
ಆಗಿದೆ. ಮಹಾನ್ ನಾಯಕನ ಸೃಷ್ಟಿ ಆದ ಮೇಲೆ ಅವನು ನಾಯಕನಲ್ಲ ಎಂದು ಹೇಳಿದರೆ ಯಾರೂ ನಂಬುವುದಿಲ್ಲ.
ನಾವು ಕೆಲವೇ ದಿನಗಳ
ಹಿಂದೆ ಅನುಪಮಾ ಶೆಣೈ ಎಂಬ ಡಿ ವೈ ಎಸ್ ಪಿ ರಾಜೀನಾಮೆ ಪ್ರಕರಣವನ್ನು ನೋಡಿದ್ದೇವೆ. ಇವರು ತುಂಬಾ
ಪ್ರಾಮಾಣಿಕ ಅಧಿಕಾರಿ ಇರಬಹುದು. ಅವರಿಗೂ ಕಿರುಕುಳ ಆಗಿರಬಹುದು. ಆದರೆ ಆಕೆ ರಾಜೀನಾಮೆ ನೀಡಿದ
ಮೇಲೆ ದಕ್ಷಿಣ ಕನ್ನಡ ಪ್ರಮುಖ ಆರ್ ಎಸ್ ಎಸ್ ನಾಯಕರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತಾರೆ.
ರಾಜಕಾರಣಿಯಂತೆ ಮಾತನಾಡುತ್ತಾರೆ. ಆಕೆಯನ್ನು ಪ್ರಾಮಾಣಿಕ ಅಧಿಕಾರಿ ಪಟ್ಟಕ್ಕೆ ಏರಿಸಿದ ನಾವು ಈ
ಬಗ್ಗೆ ಯೋಚಿಸುವುದಿಲ್ಲ. ಅವರಿಗೂ ಆರ್ ಎಸ್ ಎಸ್ ಸಂಘಟನೆಗೂ ಇರುವ ಸಂಬಂಧದ ಬಗ್ಗೆ ಸಣ್ಣ ಸಂಶಯವೂ
ನಮಗೆ ಬರುವುದಿಲ್ಲ. ಇವರ ರಾಜೀನಾಮೆ ಪ್ರಕರಣದ ಹಿಂದೆ ಆರ್ ಎಸ್ ಎಸ್ ಕೈವಾಡ ಇರಬಹುದೇ ಎಂಬ ಸಂಶಯ
ಮಾಧ್ಯಮಕ್ಕೆ ಬರುವುದಿಲ್ಲ. ಹಾಗೆ ಒಂದು ಸಣ್ಣ ಅನುಮಾನ ಮೂಡಿದ್ದರೆ ಇಡೀ ಸ್ಟೋರಿ ಬೇರೆ ರೂಪ
ಪಡೆಯುತ್ತಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ನಾವೇ ಸೃಷ್ಟಿಸಿದ ನಾಯಕಿಯನ್ನು
ಖಳನಾಯಕಿಯನ್ನಾಗಿ ಮಾಡುವುದಕ್ಕೆ ನಮಗೆ ಇಷ್ಟ ಇಲ್ಲ.
ಬೆಳಿಗ್ಗೆ ದಿನ
ಪತ್ರಿಕೆಯೊಂದನ್ನು ನೋಡುತ್ತಿದ್ದೆ. ಆ ಪತ್ರಿಕೆಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ
ಇನ್ನೊಬ್ಬ ಅಧಿಕಾರಿಯ ಸ್ಟೋರಿ ಬ್ಯಾನರ್ ಹೆಡ್ ಲೈನ್ ಆಗಿ ಬಂದಿದೆ. ಅವರೂ ಆತ್ಮಹತ್ಯೆಗೆ
ಮಾಡಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ವರದಿಯಲ್ಲಿ ನೀಡಲಾಗಿದೆ...!
ಇದೇ ಒಂದು ಸಮೂಹ
ಸನ್ನಿಯಾಗಬಹುದು. ಇನ್ನೂ ನೂರಾರು ಅಧಿಕಾರಿಗಳು ಕಿರುಕುಳದ ಆರೋಪ ಮಾಡಬಹುದು. ಮಾಧ್ಯಮ ಇಂತಹ
ಹಲವಾರು ಕಥೆಗಳನ್ನು ಎತ್ತಿ ಪ್ರಕಟಿಸಬಹುದು. ಇದೆಲ್ಲ ಏನು ? ನಾವು ಏನು ಮಾಡಲು ಹೊರಟಿದ್ದೇವೆ.
ನಾನು ಮತ್ತೆ ಸಂಶಯದ ವಿಚಾರಕ್ಕೆ ಬರುತ್ತೇನೆ. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿಲ್ಲ ನನಗೆ
ಎಲ್ಲದರ ಮೇಲೆ ಎಲ್ಲರ ಮೇಲೆ ಸಂಶಯ. ನನ್ನ ಮೇಲೆ ಸಹ ನನಗೆ ಸಂಶಯ ಇದೆ. ನಾನು ಯೋಗ್ಯನೋ ಅಯೋಗ್ಯನೋ
ಎಂಬ ಪ್ರಶ್ನೆಗೆ ಉತ್ತರ ದೊರಕದೇ ಒದ್ದಾಡುತ್ತಿದ್ದೇನೆ. ನಾನು ಆಯೋಗ್ಯನಿರಬಹುದು ಎಂಬ ಸಣ್ಣ ಸಂಶಯ
ನನಗೆ ಯಾವಾಗಲೂ ಇರುತ್ತದೆ. ಹೀಗಾಗಿ ನಾನು ಯೋಗ್ಯನಾಗಲು ಪ್ರಯತ್ನಿಸಲು ಸಾಧ್ಯವಾಗಿದೆ. ಇಂತಹ
ಸಂಶಯ ಮಾಧ್ಯಮಕ್ಕೂ ಇರಬೇಕು ಅಲ್ಲವಾ ?
No comments:
Post a Comment