Saturday, April 29, 2017


ನದಿ ಮತ್ತು ಪ್ರೀತಿ

ನಾನು ಪ್ರೀತಿಸುತ್ತೇನೆ, ನನ್ನ ಉಸಿರನ ಕೊನೆಯವರೆಗೂ.
ನನ್ನಪ್ಪ ಪ್ರೀತಿಸಿದ, ನನ್ನಮ್ಮ ಪ್ರೀತಿಸಿದಳು, ನಾನು ಹುಟ್ಟಿ ಬಂದೆ.

ನಾನು ಮಗು. ನಕ್ಕೆ. ಬಂದವರು ಪ್ರೀತಿಸಿದರು. ಗಲ್ಲ ಸವರಿದರು.
ಅವರೆಲ್ಲ ಪ್ರೀತಿಸಿದರು. ಲೊಚ ಲೊಚ ಮುತ್ತುಕೊಟ್ಟರು. ನಾನು ನಕ್ಕೆ.
ಈಗ ನಾನು ಮುತ್ತು ಕೊಡುತ್ತೇನೆ ಅವರೆಲ್ಲ ನಗುತ್ತಾರೆ.

ಮನೆಯ ಮುಂದೆ  ನದಿ ಹರಿಯುತ್ತಿತ್ತು. ನೀರು ನಗುತ್ತ ಮುಂದೆ ಸಾಗುತ್ತಿತ್ತು.
ಮನೆಯ ಮುಂದಿನ ಹೊಂಡ ತಿಳಿ ನೀರು. ತೀಳಿ ನೀರಿನ ಒಳಗೆ ಹರಿದಾಡುವ ಮೀನುಗಳು.
ಮೀನುಗಳು ನಗುತ್ತಿದ್ದವು. ಮೀನುಗಳೂ ಪ್ರೀತಿಸುತ್ತಿದ್ದವು. ನಾಕು ನಕ್ಕೆ. ಪ್ರೀತಿಸತೊಡಗಿದೆ.

ಮನೆಯ ಸುತ್ತಲೂ ಕಾಡು. ಕಾಡಿನ ಮರದ ಮರೆಯಲ್ಲಿ ಕುಳಿತು ಕದ್ದು ನೋಡುವ ಗಿಳಿವಿಂಡು.
ಕೊಕ್ಕಿನಲ್ಲಿ ಕೊಕ್ಕಿಟ್ಟು ರಕ್ಕೆ ಬಿಚ್ಚುವ ಪ್ರೀತಿ. ಹಾರುವ ತವಕ. ಅಲ್ಲಿಯೂ ಇತ್ತು ಪ್ರೀತಿ ಸಂಭ್ರಮ.
ಮಟ್ಟಿಯ ಸಂದಿನಿಂದ ಹಾರಿ ಬರುವ ಮೊಲಗಳು. ರೇಷ್ಮೇಯಂತಹ ಮೈ. ಬಿಳಿ ಬಣ್ನ.
ಹಾರಿ ನೆಗೆವ ಪರಿ. ಅಕ್ಕ ಪಕ್ಕ ನಿಂತು ನೋಡುವ ಚಂಚಲತೆ. ಅಲ್ಲಿಯೂ ಇತ್ತಲ್ಲ ಪ್ರೀತಿ ಪ್ರೇಮ.
ನಾನು ನೋಡಿದೆ. ಎಲ್ಲೆಡೆಯೂ ಇರುವುದು ಪ್ರೀತಿ.. ನಾನು ಪ್ರೀತಿಸತೊಡಗಿದೆ.

ಆಕೆ ಹಾಗೆ ಬಂದಳು, ನಿಂತಳು..ಹರಿಯತೊಡಗಿದಳು ನದಿಯ ಹಾಗೆ.
ನಾನು ನದಿಯಾದೆ. ಪ್ರೀತಿಸತೊಡಗಿದೆ. ನದಿಯ ಜೊತೆ ಹರಿಯತೊಡಗಿದೆ.
ಮುಂದೆ ಅಣೆಕಟ್ಟು. ನದಿಯು ಹರಿಯುವುದನ್ನು ನಿಲ್ಲಿಸಿತ್ತು. ಆದರೂ
ಅಣೆಕಟ್ಟಿನ ತಡೆಗೋಡೆಗೆ ಒದೆಯುತ್ತಿತ್ತು ನದಿ. ದಾರಿ ಬಿಡುವಂತೆ ಕೇಳುತ್ತಿತ್ತು.
ದಾರಿ ಬಿಡಲಿಲ್ಲ ತಡೆಗೊಡೆ. ನದಿ ಆಗಲೂ ನಿಲ್ಲಿಸಲಿಲ್ಲ. ಪ್ರೀತಿಸುತ್ತಲೇ ಇತ್ತು.
ನಾನು ಪ್ರೀತಿಸತೊಡಗಿದೆ.
ನದಿ ಕಾಣಲಿಲ್ಲ. ಅಲ್ಲಿತ್ತು ನದಿ ಹರಿದ ಗುರುತುಗಳು. ಒಣಗಿತ್ತು ನೆಲ.
ನದಿ ದಂಡೆ ಕಳೆದುಕೊಂಡಿತ್ತು, ನದಿಯ ಸ್ಪರ್ಷ. ದಂಡೆ ನೋಡುತ್ತಿತ್ತು ಅನಾಥವಾಗಿ.
ಅಳುವ ದಂಡೆಯ ನೋಡಿ, ಮರ ಗಿಡಗಳು ಅಳುತ್ತಿದ್ದವು. .
ಮರಗಿಡಗಳ ಮೇಲಿದ್ದ ಪ್ರಾಣಿ ಪಕ್ಷಿಗಳು ನರಳುತ್ತಿದ್ದವು. ಮೊಲಗಳು ಕುಣಿದು ಕುಪ್ಪಳಿಸುತ್ತಿರಲಿಲ್ಲ.
ಎಲ್ಲೆಡೆಗೂ ನೀರವ ಮೌನ.
ನಾನು ಪ್ರೀತಿಸುವುದನ್ನು ನಿಲ್ಲಿಸಿದೆ. ಪ್ರೀತಿ ಇಲ್ಲದ ಮೇಲೆ ನಗುವುದಾದರೂ ಹೇಗೆ ?
ಆದರೂ ಆಸೆಯಿತ್ತು. ಆಸೆಯ ಹಿಂದೆ ಭರವಸೆ ಇತ್ತು. ಭರವಸೆ ಹಿಂದೆ ಕನಸಿತ್ತು.
ಕನಸು ಬದುಕಿಸಿತ್ತು. ಆಗಲೇ ಎಲ್ಲೆಡೆಗೂ ಕತ್ತಲೆ..ಕತ್ತಲೆಯ ಹಿಂದೆ ಬೆಳಕು ಅಡಗಿ ಕುಳಿತಿತ್ತು.
ನದಿ ಹರಿಯುವುದಕ್ಕೆ ಕಾಯುತ್ತಿತ್ತು. ನಾನು ಕಾಯುತ್ತಿದ್ದೆ. 

Friday, April 14, 2017

ನಂಜನಗೂಡು ಗುಂಡ್ಲುಪೇಟೆ; ಮಳೆ ನಿಂತ ಮೇಲೆ ಮರದ ಕೆಳಗೆ ನಿಂತು....

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಈ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಸೋಲು ಅನುಭವಿಸಿದೆ. ಜೆ ಡಿ ಎಸ್ ಮೂಲೆಯಲ್ಲಿ ನಿಂತು ನಗುತ್ತಿದೆ. ಈಗ ಮಳೆ ನಿಂತ ಮೇಲಿನ ಪರಿಸ್ಥಿತಿ. ಅಲ್ಲಲ್ಲಿ ಹನಿ ಬೀಳುತ್ತಿದೆ. ಕಳೆದ ಒಂದು ತಿಂಗಳುಗಳಿಂದ ಇದ್ದ ಪ್ರಚಾರದ ಭರಾಟೆ, ಆರೋಪ ಪ್ರತ್ಯಾರೋಪ, ಎಲ್ಲವೂ ಕುಗಿದು ಈಗ ಆತ್ಮ ವಿಮರ್ಶೆಯ ಕಾಲ.
ಎಲ್ಲ ರಾಜಕೀಯ ಪಕ್ಷಗಳೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಮತದಾರರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಅದಕ್ಕಾಗಿ ಮೊದಲು ಆತ್ಮಕ್ಕಾಗಿ ಹುಡುಕಾಟ ನಡೆಯಬೇಕು. ಈ ನಡುವೆ ಇನ್ನೊಂದು ಧ್ವನಿಯನ್ನು ನಾವು ಗಮನಿಸಬೇಕಾಗಿದೆ. ಅದು ಯಾವ ಪಕ್ಷವನ್ನೂ ಬೆಂಬಲಿಸಿದ ಮತದಾರರ ಧ್ವನಿ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ. ಯಾವ ಪಕ್ಷವನ್ನೂ ಬೆಂಬಲಿಸಿಲ್ಲ. ಅವರು ನೋಟಾವನ್ನು ಒತ್ತಿದ್ದಾರೆ. ಮತದಾನ ಕೇಂದ್ರಗಳಿಗೆ ಬಂದು ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಸಾತ್ವಿಕ ಪ್ರತಿಭಟನೆ ಎಂದು ನಾನು ನಂಬಿದ್ದೇನೆ. ಈ ಧ್ವನಿ ತುಂಬಾ   ಸಣ್ಣದು ಎನ್ನಿಸಬಹುದು. ಆದರೆ ಇದು ಸಣ್ಣ  ಧ್ವನಿ ಅಲ್ಲ. ಒಂದೊಮ್ಮೆ ಸಣ್ಣ  ಧ್ವನಿ   ಇದ್ದರೂ ಅದು ಬೆಂಕಿಯ ಕಿಡಿ ಇದ್ದಂತೆ. ಒಂದು ಸಣ್ಣ

  ಕಿಡಿ ಎಲ್ಲವನ್ನೂ ಧ್ವಂಸಗೊಳಿಸುವ ಶಕ್ತಿಯನ್ನ್ನು ಹೊಂದಿರುವಂತೆ ಈ ಧ್ವನಿಗೂ ಅಂತಹ ಶಕ್ತಿ ಇದೆ. ಆ ಶಕ್ತಿ ಮತ್ತು ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು ಗುಂಡ್ಲುಪೇಟೆ ಮತ್ತು ನಂಜಗೂಡು ಎಂಬ ಸಾಮಾನ್ಯ ಹಳ್ಳಿಗಾಡಿನ ಪ್ರದೇಶಗಳಿಂದ. ಭಾರತದ ಇತಿಹಾಸದಲ್ಲಿ ಇಂಥಹ ಕಿಡಿ ಮಹಾ ಅಗ್ನಿಯಾದ ಹಲವು ಉದಾಹರಣೆಗಳಿವೆ. ಈ ದೇಶದಲ್ಲಿ ಅಂತಹ ಇತಿಹಾಸವವಿದೆ. ಹೀಗಾಗಿ ಇದು ಒಂದು ಎಚ್ಚರಿಕೆಯ ಗಂಟೆ ಎಂದೇ ನಾನು ನಂಬಿದ್ದೇನೆ.
ಸುಮಾರು ಒಂದು ಸಾವಿರದಷ್ಟು ಮತದಾರರು ಯಾಕೆ ಯಾರಿಗೂ ಬೆಂಬಲ ನೀಡದಿರುವ ತೀರ್ಮಾನವನ್ನು ಕೈಗೊಂಡರು ? ಇದಕ್ಕೆ ಅವರಿಗೆ ಇರಬಹುದಾದದ ಕಾರಣಗಳು ಯಾವವು ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸ್ವಲ್ಪ ಹಿಂದಕ್ಕೆ ಹೋಗಬೇಕು. ರಾಜ್ಯದ ಹಿರಿಯ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ, ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ತಕ್ಷಣ ರಿಬೆಲ್ ಆದರು. ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ಎತ್ತಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುವ ಮಾತನಾಡಿದರು. ಆಗಲೇ ಅವರು ಬಿ ಜೆಪಿಯೊಡನೆ ಸಂಪರ್ಕ ಬೆಳೆಸಿ ಆ ಪಕ್ಷಕ್ಕೆ ಸೇರಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದು ಆಗಿತ್ತು. ಶ್ರೀನಿವಾಸ್ ಪ್ರಸಾದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ ತಕ್ಷಣ ಬಿಜೆಪಿಯ ನಾಯಕರು ಅವರ ಮನೆಯ ಕದ ತಟ್ಟುವುದಕ್ಕೆ ಪ್ರಾರಂಭಿಸಿದ್ದರು. ಹಳೆ ಮೈಸೂರು ಪ್ರಾಂತದಲ್ಲಿ ಅಂತಹ ಬಲವನ್ನು ಹೊಂದದ ಬಿಜೆಪಿಗೆ ಇದೊಂದು ಅದ್ಭುತ ಅವಕಾಶವಾಗಿ ಕಂಡಿತು. ಆಗಲೇ ಕೆಲವು ವಯೋವೃದ್ಧ ಕಾಂಗ್ರೆಸ್ ರಾಜಕಾರಣಿಗಳು ತಮ್ಮ ಕೊನೆಯ ಕಾಲದಲ್ಲಿ ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳಲು ಮಾತುಕತೆ ನಡೆಸುತ್ತಿದ್ದರು. ಅವರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎನ್. ಕೃಷ್ಣ ಕೂಡ ಒಬ್ಬರಾಗಿದ್ದರು. ಇಂತಹ ಸ್ಥಿತಿಯಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಂಬಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ದಕ್ಷಿಣ ಕರ್ನಾಟಕದಲ್ಲಿ ನೆಲೆ ಊರಲು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾದರು. ಅವರ ಲೆಕ್ಕಾಚಾರ ತುಂಬಾ ಸರಳವಾಗಿತ್ತು. ತಮ್ಮ ಬೆಂಬಲಕ್ಕಿರುವ ಲಿಂಗಾಯತರು ಮತ್ತು ಶ್ರೀನಿವಾಸ್ ಪ್ರಸಾದ್ ಅವರ ಹಿಂದಿರುವ ದಲಿತರು ಮತ್ತು ಎಸ್. ಎಮ್. ಕೃಷ್ಣ ಅವರನ್ನು ಬೆಂಬಲಿಸುವ ಒಕ್ಕಲಿಗರು ಒಂದಾದರೆ ಸಾಕು ಹಳೇ ಮೈಸೂರು ಪ್ರದೇಶದಲ್ಲಿ ಕೇಸರಿ ಬಾವುಟ ಹಾರಿಸಬಹುದು ಎಂದು ಅವರು ಅಂದುಕೊಂಡಿದ್ದರು. ಇದು ಮೇಲ್ನೋಟಕ್ಕೆ ಎಲ್ಲರೂ ಒಪ್ಪಬಹುದಾದ ರಾಜಕೀಯ ಲೆಕ್ಕಾಚಾರವಾಗಿತ್ತು. ಆದರೆ ರಾಜಕಾರಣ ಎಂದೂ ಈ ರೀತಿಯ ಲೆಕ್ಕಾಚಾರದಂತೆ ನಡೆಯುವುದಿಲ್ಲ.
ಅಷ್ಟರಲ್ಲಿ ಇನ್ನೊಂದು ಬೆಳವಣಿಗೆ ಆಗಿತ್ತು. ಗುಂಡ್ಲುಪೇಟೆಯನ್ನು ಪ್ರತಿನಿಧಿಸುತ್ತಿದ್ದ ಸಚಿವ ಮಹದೇವ್ ಪ್ರಸಾದ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಅದೂ ಸಹ ಲಿಂಗಾಯತ ಪ್ರಾಭಲ್ಯವಿರುವ ಕ್ಷೇತ್ರ. ಅಲ್ಲಿಯೂ ಲಿಂಗಾಯತ ಮತದಾರರದೇ ಪ್ರಾಭಲ್ಯ. ಈ ಎರಡೂ ಕ್ಷೇತ್ರಗಳ ಚುನಾವಣೆ ಘೋಷಣೆಯಾದಾಗ ಯಡೀಯೂರಪ್ಪ ಈ ಹೊಸ ಜಾತಿ ಸಮೀಕರಣ ತಮಗೆ ವರದಾನವಾಗುತ್ತದೆ ಎಂದೇ ನಂಬಿದ್ದರು. ಮೇಲ್ನೋಟಕ್ಕೆ ಇದು ಸರಿ ಎಂದೂ ಅನ್ನಿಸುತ್ತಿತ್ತು. ಯಡಿಯೂರಪ್ಪ ಇನ್ನು ಒಂದು ವರ್ಷದಲ್ಲಿ ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಚುನಾವಣಾ ಅಖಾಡಾಕ್ಕೆ ಇಳಿದುಬಿಟ್ಟರು. ಆದರೆ ಈ ದೇಶದ ಮತದಾರನ ಮೇಲೆ ಜಾತಿಯನ್ನು ಹೊರತುಪಡಿಸಿ ಬೇರೆ  ವಿಷಯಗಳೂ ಪ್ರಭಾವ ಬೀರುತ್ತವೆ ಎಂಬ ಅಂಶವನ್ನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮರೆತು ಬಿಟ್ಟಿದ್ದರು.
ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಮುಂದೆ ಅದಕ್ಕೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಬಹುದೊಡ್ದ ಸವಾಲಿತ್ತು. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಕ್ಷೇತ್ರಗಳು. ಇಲ್ಲಿ ಎಂದೂ ಬಿಜೆಪಿ ಆರಿಸಿ ಬಂದಿರಲಿಲ್ಲ. ಗಣನೀಯ ಪ್ರಮಾಣದ ಮತವನ್ನು ಆ ಪಕ್ಷಪಡೆದಿರಲಿಲ್ಲ. ಹೀಗಿರುವಾಗ ಯಡಿಯೂರಪ್ಪ ಅವರ ಜಾತಿ ಸಮೀಕರಣ ವರ್ಕ್ ಔಟ್ ಆದರೆ ? ಕಾಂಗ್ರೆಸ್ ಪಕ್ಷ ಇದನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ತಾಗಿಕೊಂಡಿರುವ ಕ್ಷೇತ್ರಗಳು. ಇಲ್ಲಿ ಸೋತರೆ ಪಕ್ಷದ ಒಳಗೆ ಇರುವ ಸಿದ್ಧರಾಮಯ್ಯ ವಿರೋಧಿಗಳು ಇನ್ನಷ್ಟು ಪ್ರಬಲರಾಗುತ್ತಿದ್ದರು. ಹಾಗೆ ಕೆಲವು ಲಿಂಗಾಯತ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಸಾಧ್ಯತೆಗಳೂ ಇದ್ದವು. ಸ್ವಲ್ಪ ಎಚ್ಚರ ತಪ್ಪಿದರೆ ಸರ್ಕಾರವನ್ನೇ ಕಳೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಸಿದ್ದರಾಮಯ್ಯ ಬಹುದೊಡ್ದ ರಾಜಕೀಯ ಸವಾಲನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಪ್ರಕಟವಾಗುತ್ತಿದ್ದಂತೆ ಎರಡೂ ಪಕ್ಷಗಳೂ ಚುನಾವಣೆ ಅಖಾಡಾಕ್ಕೆ ಧುಮುಕಿದವು. ಬಿಜೆಪಿ ಮೊದಲ ದಿನದಿಂದಲೂ ತಾನು ಎರಡೂ ಕ್ಷೇತ್ರಗಳಲ್ಲಿ ವಿಜಯಿಯಾದ ಕನಸು ಕಾಣಲು ಪ್ರಾರಂಭಿಸಿತ್ತು. ಯಡೀಯೂರಪ್ಪ, ಶೋಭಾ ಕರಂದ್ಲಾಜೆ, ವಿ. ಸೋಮಣ್ನ, ರೇಣುಕಾಚಾರ್ಯ ಪ್ರಚಾರದ  ಜವಾಬ್ದಾರಿಯನ್ನು ಹೊತ್ತುಕೊಂಡು ಕ್ಷೇತ್ರ ಪರ್ಯಟನ ಪ್ರಾರಂಭಿಸಿಬಿಟ್ಟರು. ಅವರು ಪ್ರಚಾರದ ವೈಖರಿ ಹೇಗಿತ್ತೆಂದರೆ, ಬಿಜೆಪಿ ಜಯಿಸುವುದು ಗ್ಯಾರಂಟಿ ಎಂದು ಅಂದುಕೊಳ್ಳುವಂತಾಗಿತ್ತು.
ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಚರ್ಚಿಸಿದರು. ಬಿಜೆಪಿಯನ್ನು ಎದುರಿಸಲು ರಣ ತಂತ್ರ ರೂಪಿತವಾಯಿತು. ಸಚಿವರಾದ ಡಾ. ಮಹದೇವಪ್ಪ, ಎಮ್.ಬಿ. ಪಾಟೀಲ್, ಡಿ.ಕೆ.,ಶಿವಕುಮಾರ್, ಮೇಲುಸ್ತುವಾರಿ ಒಹಿಸಿದರು. ಪ್ರತಿಯೊಬ್ಬ ಸಚಿವರಿಗೆ ಹೋಬಳೀವಾರು ಹೊಣೆಗಾರಿಕೆ ಒಹಿಸಲಾಯಿತು. ಜೊತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರಚಾರದ ಹೊಣೆ ಹೊತ್ತರು. ಚುನಾವಣಾ ಕಾರ್ಯತಂತ್ರದ ಬಗ್ಗೆ ಪ್ರತಿ ದಿನ ಚರ್ಚಿಸಿ ಅದಕ್ಕೆ ಅಂತಿಮ ರೂಪಕೊಡಲಾಯಿತು. ದಿನದಿಂದ ದಿನಕ್ಕೆ ಚುನಾವಣ ಆಖಾಡ ರಂಗೇರತೊಡಗಿತು..ದಿನಕಳಿಯುತ್ತಿದ್ದಂತೆ ಈ ಚುನಾವಣೆ ಯಡೀಯೂರಪ್ಪ ಮತ್ತು ಸಿದ್ದರಾಮಯ್ಯನವರ ನಡುವಿನ ಪ್ರತಿಷ್ಟೆಯ ಪ್ರಶ್ನೆಯಾಗಿ ಬದಲಾಯಿತು. ಪಕ್ಷ ನೇಪಥ್ಯಕ್ಕೆ ಸರಿಯತೊಡಗಿತು. ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಿದ ಶ್ರೀನಿವಾಸ್ ಪ್ರಸಾದ್ ಇದನ್ನು ವೈಯಕ್ತಿಕ ಯುದ್ಧವನ್ನಾಗಿ ಮಾರ್ಪಡಿಸಿಬಿಟ್ಟರು. ಇದಕ್ಕೆ ಬಿಜೆಪಿ ನಾಯಕರು ಬೆಂಬಲ ನೀಡಿದರು. ಅತ್ಮಾಭಿಮಾನ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಎತ್ತಿದ ಶ್ರೀನಿವಾಸ್ ಪ್ರಸಾದ್ ಇದಕ್ಕೆ ತಾತ್ವಿಕ ಕಾರಣಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇದು ಅವರ ವೈಯಕ್ತಿಕ ಸ್ವಾಭಿಮಾನದ ಪ್ರಶ್ನೆಯಾಗಿತ್ತೇ ಹೊರತೂ ದಲಿತರ ಸ್ವಾಭಿಮಾನದ ಪ್ರಶ್ನೆಯಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಶ್ರೀನಿವಾಸ ಪ್ರಸಾದ ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ದಲಿತ ಸ್ವಾಭಿಮಾನದ ಪ್ರಶ್ನೆಯನ್ನಾಗಿ ಮಾರ್ಪಡಿಸಲು ಯತ್ನ ನಡೆಸುತ್ತಿದ್ದರು. ಆದರೆ ದಲಿತರ ಮುಂದೆ ಕೆಲವು ಸರಳವಾದ ಪ್ರಶ್ನೆಗಳಿದ್ದವು. ಶ್ರೀನಿವಾಸ್ ಪ್ರಸಾದ್ ಪ್ರಮುಖ ದಲಿತ ನಾಯಕರು ಎಂಬುದು ನಿಜ. ಆದರೆ ಅವರು ಎತ್ತಿದ ಪ್ರಶ್ನೆಗಳಿಗೆ ತಾತ್ವಿಕ ನೆಲೆಗಟ್ಟೇ ಇರಲಿಲ್ಲ. ಜೊತೆಗೆ ಅವರ್ಉ ಪ್ರತಿನಿಧಿಸುತ್ತಿರುವ ಪಕ್ಷ ಲಿಂಗಾಯತ ಪಕ್ಷ ಎಂದೇ ಪ್ರತಿಬಿಂಬಿತವಾಗಿರುವ ಬಿಜೆಪಿ. ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರೆಲ್ಲ ಇದೇ ಸಮುದಾಯಕ್ಕೆ ಸೇರಿದವರು. ಇಲ್ಲಿರುವ ಜಾತಿ ಸಂಘರ್ಷ ಕೂಡ ದಲಿತರು ಮತ್ತು ಲಿಂಗಾಯತರ ನಡುವಿನ ಜಾತಿ ಸಂಘರ್ಷವೇ. ಹೀಗಾಗಿ ಈ ಎರಡು ಸಮುದಾಯಗಳ ನಡುವಿನ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷ ಅಷ್ಟು ಬೇಗ ಬಗೆಹರಿಯುವಂಥಹದ್ದಾಗಿರಲಿಲ್ಲ., ಅವರ ನಡುವೆ  ಇರುವ ಕಂದಕ ಶ್ರೀನಿವಾಸ್ ಪ್ರಸಾದ್ ಸಲುವಾಗಿ ಮರೆಯಾಗುವುದು ಸಾಧ್ಯವೆ ? ಆದರೆ ಶ್ರೀನಿವಾಸ್ ಪ್ರಸಾದ್ ಮತ್ತು ಯಡಿಯೂರಪ್ಪ ಇಬ್ಬರೂ ತಮ್ಮ ತಮ್ಮ ಜಾತಿ ತಮ್ಮನ್ನು ಕೈಬಿಡುವುದಿಲ್ಲ ಎಂದು ಬಲವಾಗಿ ನಂಬಿದ್ದರು.
ಯಡಿಯೂರಪ್ಪ ಲಿಂಗಾಯತರ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದರು. ನಾನೇ ಅಭ್ಯರ್ಥಿ ಎಂದುಕೊಳ್ಳಿ ಎಂದು ಮನವಿ ಮಾಡಿದರು. ಇಲ್ಲಿ ನಮ್ಮ ಅಭ್ಯರ್ಥಿ ಸೋತರೆ ನಾನು ಮುಂದಿನ ಮುಖ್ಯಮಂತ್ರಿಯಾಗುವುದಿಲ್ಲ. ನಮ್ಮ ಸಮುದಾಯದಲ್ಲಿ ಮುಖ್ಯಮಂತ್ರಿಯಾಗುವ ಇನ್ನೊಬ್ಬ ಅಭ್ಯರ್ಥಿ ಇಲ್ಲ ಎಂದು ಜಾತಿ ಭಾವನೆಯನ್ನು ಜಾಗೃತಗೊಳಿಸಲು ಯತ್ನಿಸಿದರು. ಯುದ್ಧ ಇನ್ನಷ್ಟು ಕಾವು ಪಡೆದುಕೊಂಡಿತು. ಎರಡೂ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಟೆಯ ವಿಷಯವನ್ನಾಗಿ ತೆಗೆದುಕೊಂಡಿದ್ದರಿಂದ ಹಣ ಕ್ಷೇತ್ರದಲ್ಲಿ ಹರಿಯತೊಡಗಿತು. ಇತ್ತೀಚಿನ ವರ್ಷಗಳಲ್ಲಿ ಕಾಣದಷ್ಟು ಪ್ರಮಾಣದಲ್ಲಿ ಕಾಂಚಾಣಾ ಕುಣಿಯತೊಡಗಿತು. ಜಾತಿ ವಿಜೃಂಬಿಸತೊಡಗಿತು. ಈ ವಿಚಾರಗಳಲ್ಲಿ ಎರಡೂ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಇತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎರಡೂ ಪಕ್ಷದವರು ಹಣ ಹಂಚುವಾಗ ಸಿಕ್ಕಿ ಬಿದ್ದರು. ಆದರೆ ಇದು ಎಲ್ಲರಿಗೂ ಗೊತ್ತಿದ್ದ ಸತ್ಯವಾದ್ದರಿಂದ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.
ಪ್ರಚಾರದ ಸಂದರ್ಭದಲ್ಲಿ ವೈಯಕ್ತಿಕ ತೇಜೋವಧೆಯ ಪ್ರಸಂಗಗಳೂ ನಡೆದವು. ಶ್ರೀನಿವಾಸ್ ಪ್ರಸಾದ ತಮ್ಮ ಸೌಜನ್ಯದ ನಡವಳಿಕೆಯನ್ನು ಕೈ ಬಿಟ್ಟು ಮುಖ್ಯಮಂತ್ರಿಗಳನ್ನು ನಾಶಪಡಿಸುವ ಮಾತನಾಡಿದರು. ಬಿಜೆಪಿ ಸಂಸದ ಪ್ರತಾಪ ಸಿಂಹ ಇತ್ತೀಚಿಗೆ ತನ್ನ ಪತಿಯನ್ನು ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರು. ಅವರಿಗೆ ಅಧಿಕಾರ ದಾಹ ಎಂದರು. ಇದು ಕ್ಷೇತ್ರದ ಜನರಲ್ಲಿ ಬೇಸರವನ್ನು ಉಂಟೂ ಮಾಡಿತು. ಚುನಾವಣಾ ಪ್ರಚಾರ ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತದೆ ಎಂದು ಸಾಮಾನ್ಯ ಮತದಾರ ಅಂದುಕೊಂಡಿರಲಿಲ್ಲ. ಈ ರೀತಿ ಹೀನ ಮಾತುಗಳನ್ನು ಆಡುವವರ ಬಗ್ಗೆ ಜನರಿಗೆ ತಿರಸ್ಕಾರ ಮೂಡತೊಡಗಿತು. ಜನ ಆಗಲೇ ಒಂದು ತೀರ್ಮಾನಕ್ಕೆ ಬಂದಂತಿತ್ತು. ಸಾಮಾನ್ಯ ಮತದಾರರು ರಾಜಕೀಯ ಪಕ್ಷಗಳು ನೀಡುವ ಹಣ ಬೇಡ ಎನ್ನಲಿಲ್ಲ.  ಎರಡು ಪಕ್ಷಗಳ ನಾಯಕರಿಂದ ಹಣ ಪಡೆದು ತಮಗೆ ಸೂಕ್ತ ಎನ್ನಿಸಿದ ಅಭ್ಯರ್ಥಿಗೆ ಮತ ಚಲಾಯಿಸಿದರು. ಒಂದು ಮತಕ್ಕೆ ಒಂದು ಪಕ್ಷ ಎರಡರೀಂದ ನಾಲ್ಕು ಸಾವಿರ ರುಫಾಯಿ ನೀಡಿದರೆ ಇನ್ನೊಂದು ಪಕ್ಷ ಕೂಡ ಇಷ್ಟೇ ಹಣ ನೀಡಿತು. ಹೀಗಾಗಿ ಒಂದು ಮತಕ್ಕೆ ಅಲ್ಲಿ ಸಿಕ್ಕ ಮೌಲ್ಯ ಸುಮಾರು ಎಂಟು ಸಾವಿರ ರೂಪಾಯಿಗಳು !
ನಾನು ಈ ಎರಡೂ ಕ್ಷೇತ್ರಗಳ ಮತದಾರರನ್ನು ಅಭಿನಂದಿಸುತ್ತೇನೆ. ಅವರು ಹಣ ಪಡೆಯುವುದಕ್ಕೆ ನಿರಾಕರಿಸಲಿಲ್ಲ. ಎರಡೂ ಪಕ್ಷಗಳಿಂದ ಹಣ ಪಡೆದು ತಮಗೆ ಸರಿ ಎನಿಸಿದ ಪಕ್ಷಕ್ಕೆ ಮತಹಾಕಿದರು. ಈ ಮೂಲಕ ಹಣ ಪಡೆದೂ ಹಣ ತಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸಾಬೀತುಪಡಿಸಿದರು. ಹಾಗೆ ಜಾತಿ ಕೂಡ ತಮ್ಮ ಮತದಾನದ ಮೇಲೆ ಪ್ರಭಾವ ಬೀರಲಾರದು ಎಂದು ತೋರಿಸಿಕೊಟ್ಟರು. ಒಂದೊಮ್ಮೆ ಜಾತಿಯೇ ಮುಖ್ಯ ಎಂದು ಈ ಮತದಾರರು ಅಂದುಕೊಂಡಿದ್ದರೆ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲ ಬೇಕಾಗಿತ್ತು. ಲಿಂಗಾಯತರು ಯಡೀಯೂರಪ್ಪ ಅವರ ಕಾರಣದಿಂದ ದಲಿತರು ಶ್ರೀನಿವಾಸ್ ಪ್ರಸಾದ್ ಕಾರಣದಿಂದ ಬಿಜೆಪಿಯನ್ನು ಬೆಂಬಲಿಸಬೇಕಾಗಿತ್ತು. ಆದರೆ ಇಲ್ಲಿನ ಮತದಾರರು ಹಾಗೆ ಮಾಡಲಿಲ್ಲ.
ಕೊನೆಯದಾಗಿ ಮತ್ತೆ ನೋಟಾ ಪ್ರಿಯರತ್ತ  ಬಂದರೆ ಇವರು ಮಾತ್ರ ಜನತಂತ್ರ ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿದವರು ಎಂದು ನನಗೆ ಅನ್ನಿಸುತ್ತದೆ. ಇವರಿಗೆ ಸಿಟ್ಟಿದೆ. ಈ ವ್ಯವಸ್ಥೆ ಯಾವ ಹಂತಕ್ಕೆ ಬಂದಿದ್ದೆ ಎನ್ನುವ ಬಗ್ಗೆ ನೋವಿದೆ. ಜೊತೆಗೆ ಅವರಲ್ಲಿ ಒಂದು ರೀತಿಯ ಪ್ರತಿಭಟನೆಯ ಜ್ವಾಲೆಯೂ ಇದೆ. ಈ ಪ್ರತಿಭಟನೆ ಬೇರೆ ಬೇರೆ ರೂಪಪಡೆಯಬೇಕು. ಆಗ ಮಾತ್ರ ನಮ್ಮ ವ್ಯವಸ್ಥೆ ಸುಧಾರಿಸುತ್ತದೆ. ಜನತಂತ್ರ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ.  ಆ ದಿಸೆಯಲ್ಲಿ ಇದೊಂದು ಸಣ್ನ ಹೆಜ್ಜೆ. ಒಂದು ಪುಟ್ಟ ಕಿಡಿ. ಇದು ಯಾವಾಗ ಬೆಂಕಿಯಾಗುತ್ತದೆ ಎಂಬುದನ್ನು ಒಬ್ಬ ದೇಶದ ನಾಗರಿಕನಾಗಿ ಪತ್ರಕರ್ತನಾಗಿ ನಾನು ಕಾಯುತ್ತಿದ್ದೇನೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...