ನದಿ ಮತ್ತು ಪ್ರೀತಿ
ನಾನು ಪ್ರೀತಿಸುತ್ತೇನೆ, ನನ್ನ ಉಸಿರನ ಕೊನೆಯವರೆಗೂ.
ನನ್ನಪ್ಪ ಪ್ರೀತಿಸಿದ, ನನ್ನಮ್ಮ ಪ್ರೀತಿಸಿದಳು, ನಾನು ಹುಟ್ಟಿ ಬಂದೆ.
ನಾನು ಮಗು. ನಕ್ಕೆ. ಬಂದವರು ಪ್ರೀತಿಸಿದರು. ಗಲ್ಲ ಸವರಿದರು.
ಅವರೆಲ್ಲ ಪ್ರೀತಿಸಿದರು. ಲೊಚ ಲೊಚ ಮುತ್ತುಕೊಟ್ಟರು. ನಾನು ನಕ್ಕೆ.
ಈಗ ನಾನು ಮುತ್ತು ಕೊಡುತ್ತೇನೆ ಅವರೆಲ್ಲ ನಗುತ್ತಾರೆ.
ಮನೆಯ ಮುಂದೆ ನದಿ ಹರಿಯುತ್ತಿತ್ತು. ನೀರು ನಗುತ್ತ ಮುಂದೆ ಸಾಗುತ್ತಿತ್ತು.
ಮನೆಯ ಮುಂದಿನ ಹೊಂಡ ತಿಳಿ ನೀರು. ತೀಳಿ ನೀರಿನ ಒಳಗೆ ಹರಿದಾಡುವ ಮೀನುಗಳು.
ಮೀನುಗಳು ನಗುತ್ತಿದ್ದವು. ಮೀನುಗಳೂ ಪ್ರೀತಿಸುತ್ತಿದ್ದವು. ನಾಕು ನಕ್ಕೆ. ಪ್ರೀತಿಸತೊಡಗಿದೆ.
ಮನೆಯ ಸುತ್ತಲೂ ಕಾಡು. ಕಾಡಿನ ಮರದ ಮರೆಯಲ್ಲಿ ಕುಳಿತು ಕದ್ದು ನೋಡುವ ಗಿಳಿವಿಂಡು.
ಕೊಕ್ಕಿನಲ್ಲಿ ಕೊಕ್ಕಿಟ್ಟು ರಕ್ಕೆ ಬಿಚ್ಚುವ ಪ್ರೀತಿ. ಹಾರುವ ತವಕ. ಅಲ್ಲಿಯೂ ಇತ್ತು ಪ್ರೀತಿ ಸಂಭ್ರಮ.
ಮಟ್ಟಿಯ ಸಂದಿನಿಂದ ಹಾರಿ ಬರುವ ಮೊಲಗಳು. ರೇಷ್ಮೇಯಂತಹ ಮೈ. ಬಿಳಿ ಬಣ್ನ.
ಹಾರಿ ನೆಗೆವ ಪರಿ. ಅಕ್ಕ ಪಕ್ಕ ನಿಂತು ನೋಡುವ ಚಂಚಲತೆ. ಅಲ್ಲಿಯೂ ಇತ್ತಲ್ಲ ಪ್ರೀತಿ ಪ್ರೇಮ.
ನಾನು ನೋಡಿದೆ. ಎಲ್ಲೆಡೆಯೂ ಇರುವುದು ಪ್ರೀತಿ.. ನಾನು ಪ್ರೀತಿಸತೊಡಗಿದೆ.
ಆಕೆ ಹಾಗೆ ಬಂದಳು, ನಿಂತಳು..ಹರಿಯತೊಡಗಿದಳು ನದಿಯ ಹಾಗೆ.
ನಾನು ನದಿಯಾದೆ. ಪ್ರೀತಿಸತೊಡಗಿದೆ. ನದಿಯ ಜೊತೆ ಹರಿಯತೊಡಗಿದೆ.
ಮುಂದೆ ಅಣೆಕಟ್ಟು. ನದಿಯು ಹರಿಯುವುದನ್ನು ನಿಲ್ಲಿಸಿತ್ತು. ಆದರೂ
ಅಣೆಕಟ್ಟಿನ ತಡೆಗೋಡೆಗೆ ಒದೆಯುತ್ತಿತ್ತು ನದಿ. ದಾರಿ ಬಿಡುವಂತೆ ಕೇಳುತ್ತಿತ್ತು.
ದಾರಿ ಬಿಡಲಿಲ್ಲ ತಡೆಗೊಡೆ. ನದಿ ಆಗಲೂ ನಿಲ್ಲಿಸಲಿಲ್ಲ. ಪ್ರೀತಿಸುತ್ತಲೇ ಇತ್ತು.
ನಾನು ಪ್ರೀತಿಸತೊಡಗಿದೆ.
ನದಿ ಕಾಣಲಿಲ್ಲ. ಅಲ್ಲಿತ್ತು ನದಿ ಹರಿದ ಗುರುತುಗಳು. ಒಣಗಿತ್ತು ನೆಲ.
ನದಿ ದಂಡೆ ಕಳೆದುಕೊಂಡಿತ್ತು, ನದಿಯ ಸ್ಪರ್ಷ. ದಂಡೆ ನೋಡುತ್ತಿತ್ತು ಅನಾಥವಾಗಿ.
ಅಳುವ ದಂಡೆಯ ನೋಡಿ, ಮರ ಗಿಡಗಳು ಅಳುತ್ತಿದ್ದವು. .
ಮರಗಿಡಗಳ ಮೇಲಿದ್ದ ಪ್ರಾಣಿ ಪಕ್ಷಿಗಳು ನರಳುತ್ತಿದ್ದವು. ಮೊಲಗಳು ಕುಣಿದು ಕುಪ್ಪಳಿಸುತ್ತಿರಲಿಲ್ಲ.
ಎಲ್ಲೆಡೆಗೂ ನೀರವ ಮೌನ.
ನಾನು ಪ್ರೀತಿಸುವುದನ್ನು ನಿಲ್ಲಿಸಿದೆ. ಪ್ರೀತಿ ಇಲ್ಲದ ಮೇಲೆ ನಗುವುದಾದರೂ ಹೇಗೆ ?
ಆದರೂ ಆಸೆಯಿತ್ತು. ಆಸೆಯ ಹಿಂದೆ ಭರವಸೆ ಇತ್ತು. ಭರವಸೆ ಹಿಂದೆ ಕನಸಿತ್ತು.
ಕನಸು ಬದುಕಿಸಿತ್ತು. ಆಗಲೇ ಎಲ್ಲೆಡೆಗೂ ಕತ್ತಲೆ..ಕತ್ತಲೆಯ ಹಿಂದೆ ಬೆಳಕು ಅಡಗಿ ಕುಳಿತಿತ್ತು.
ನದಿ ಹರಿಯುವುದಕ್ಕೆ ಕಾಯುತ್ತಿತ್ತು. ನಾನು ಕಾಯುತ್ತಿದ್ದೆ.
No comments:
Post a Comment