Friday, November 13, 2020

ರವಿ ಬೆಳಗೆರೆ ಮಾಧರಿಯ ಪತ್ರಿಕೋದ್ಯಮ;; ಮಾಂಸದಂಗಡಿಯ ಮುಂದೆ ಕುಳಿತು....

 

ರವಿ ಬೆಳಗೆರೆ ಇನ್ನಿಲ್ಲ. . ಈ ಸುದ್ದಿ ಬರುತ್ತಿದ್ದಂತೆ ರವಿ ಬೆಳಗೆರೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹೊರಬಂದವು, ಕೆಲವರು ರವಿ ಬೆಳಗೆರೆಯೊಂದಿಗೆ ಕನ್ನಡ ಪತ್ರಿಕೋದ್ಯಮ ಮುಗಿದೇ ಹೋಯಿತು ಎಂದರು. ರವಿಗೆ ಸಾಹಿತ್ಯದ ಗಾರುಡಿಗ ಎಂದು ಕರೆದರು. ಟಿವಿ ಚಾನಲ್ ಗಳು ಇಡೀ ದಿನ ರವಿಯ ಗುಣಗಾನದಲ್ಲಿ ನಿರತವಾದವು... ರವಿಯ ಸಾಹಿತ್ಯ ಕೃತಿಗಳ ಬಗ್ಗೆ ಭಾರಿ ಭಟ್ಟಂಗಿ ವಿಮರ್ಶೆಗಳು ನಡೆದವು...

ನಡದೇ ಇತ್ತು ರವಿ ಗುಣಗಾನ... ಅವನಲ್ಲಿ ಇರುವ ಇಲ್ಲದಿರುವ ಎಲ್ಲ ಗುಣಗಳನ್ನು ಆರೋಪಿಸಲಾಯಿತು.. ಹಾಗಿದ್ದರೆ ರವಿ ಎಂಥವನು ? ಆತ ಆತ್ಯುತ್ತಮ ಪತ್ರಿಕೋದ್ಯಮಿ ಆಗಿದ್ದನೆ ? ಆತ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬನೆ,, ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.. ಮೊದಲನೆಯದಾಗಿ ಒಂದು ಮಾತು.. ನಾನು ಅವನನ್ನು ಎಂದೂ ಬಹುವಚನದಲ್ಲಿ ಕರೆದಿಲ್ಲ. ಅವನೂ ನನ್ನನ್ನು ಕರೆಯುತ್ತಿದ್ದುದು ಶಶಿ ಎಂದು ಏಕವಚನದಲ್ಲಿ.ನಾನು ಅವನನ್ನು ರವಿ ಎಂದು ಏಕವಚನದಲ್ಲಿಯೇ ಕರೆಯುತ್ತಿದ್ದೆ. ಹೀಗಾಗಿ ನಾನು ಅವನಿಗೆ ಬಹುವಚನದ ಸಂಬೋಧನೆ ಮಾಡಲಾರೆ...ಕ್ಷಮೆ ಇರಲಿ..

ನಾನು ರವಿ ಬೆಳಗೆರೆಗೆ ಸಂಬಂಧಿಸಿದ ನನ್ನ ಅನುಭವಗಳನ್ನು ಬಿಚ್ಚಿಡುತ್ತಿದ್ದೇನೆ.. ನನ್ನ ಅನುಭವದ ಮೂಲಕ ಅವನನ್ನು ಹುಡುಕುತ್ತಿದ್ದೇನೆ. ನಿಜವಾಗಿ ರವಿ ಬೆಳಗೆರೆ ಎಂಥವನಾಗಿದ್ದ ? ಅವನ ಬದುಕಿನ ನಂಬಿಕೆಗಳು ಏನಾಗಿದ್ದವು ? ಅವನಿಗೆ ಯಾವುದರ ಬಗ್ಗೆ ನಂಬಿಕೆ ಇತ್ತು ? ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಲು ಯತ್ನ ನಡೆಸುತ್ತಿದ್ದೇನೆ. ರವಿ ಒಬ್ಬ ಮಾಂತ್ರಿಕ, ಗಾರುಡಿಗ, ಅಕ್ಷರ ಭ್ರಹ್ಮ ಎಂಬ ಸುಳ್ಳುಗಳನ್ನು ಮಾಧ್ಯಮಗಳು ಹರಡುತ್ತಿರುವ ಈ ಸಂದರ್ಭದಲ್ಲಿ ನಿಜವಾದ ರವಿ ಬೆಳಗೆರೆಯನ್ನು ಹುಡುಕುವ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಜೊತೆಗೆ ಅವನ ಮಾಧರಿಯ ಪತ್ರಿಕೋದ್ಯಮವೇ ನಿಜವಾದ ಪತ್ರಿಕೋದ್ಯಮ ಎಂದು ಇಂದಿನ ಯುವಕರು ನಂಬಿರುವ ಈ ಸಂದರ್ಭದಲ್ಲಿ ಅದಲ್ಲ ಎಂದು ಹೇಳಬೇಕಾದ್ದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಈ ಕರ್ತವ್ಯದಿಂದ ನಾನು ವಿಮುಖನಾಗಲಾರೆ...ಮಾಂಸದಂಗಡಿಯ ವಾರಸುದಾರ ಪತ್ರಿಕೋದ್ಯಮವನ್ನು ತಡೆಯುವ ಉದ್ದೇಶ ಕೂಡ ನನ್ನದಾಗಿದೆ.

ರವಿ ಬೆಳಗೆರೆಯನ್ನು ನಾನು ಮೊದಲು ನೋಡಿದ್ದು ೧೯೮೨ರಲ್ಲಿ.. ಆಗ ಬೆಂಗಳೂರಿನಿಂದ ಮುಂಜಾನೆ ಎಂಬ ಕನ್ನಡ ದಿನ ಪತ್ರಿಕೆ ಬರುತ್ತಿತ್ತು. ಈ ಪತ್ರಿಕೆಯ ಮಾಲಿಕರು ಆರ್. ಗುಂಡೂರಾವ್ ಮತ್ತು ವೀರಪ್ಪ ಮೊಯ್ಲಿ..ಎಸ್. ವಿ. ಜಯಶೀಲರಾವ್ ಈ ಪತ್ರಿಕೆಯ ಸಂಪಾದಕರು. ನಾನು ೬೦೦ ಸಂಬಳ ತೆಗೆದುಕೊಳ್ಳುತ್ತಿದ್ದ ಉಪ ಮುಖ್ಯವರದಿಗಾರ..

ಅದೊಂದು ದಿನ ರವಿ ಬೆಳಗೆರೆ ಎಂಬ ಈ ವ್ಯಕ್ತಿ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿದ್ದ ಮುಂಜಾನೆ ಕಚೇರಿಗೆ ಬಂದಿಳಿದ...ಜಯಶೀಲರಾವ್ ರವಿಗೆ ಕೆಲಸ ನೀಡಿದ್ದರು..

ಇಲ್ಲಿ ಆತ ಕೆಲಸ ಮಾಡಿದ್ದು ಕೆಲವೇ ದಿನಗಳು..ಅಷ್ಟರಲ್ಲಿ ಆತ ಬಹಳಷ್ಟು ಜನರ ತನ್ನ ಪ್ರಭಾವ ಬೀರಿದ್ದ.. ಹಾಗೆ ಹಲವರ ಕಾಲು ಎಳೆಯುತ್ತಿದ್ದ. ರವಿಯಿಂದ ಕಾಲು ಎಳೆಸುಕೊಳ್ಳುತ್ತಿದ್ದವರಲ್ಲಿ ಮುಖ್ಯ ವರದಿಗಾರ ಮುಂಜಾನೆ ಸತ್ಯ ಮುಖ್ಯರು..

ಕೆಲವು ದಿನಗಳ ನಂತರ ಆತ ಮತ್ತೆ ಬಳ್ಳಾರಿಗೆ ತಿರುಗಿ ಹೊರಟ, ಆತನಿಗೆ ಮುಂಜಾನೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಇಷ್ಟ ಇರಲಿಲ್ಲ..ಆತನ ಆದ್ಯತೆಗಳು ಬೇರೆ ಇದ್ದವು. ಅವನಿಗೆ ಆಗಲೇ ಬಹುತೇಕ ಕ್ರೈಮ್ ವರದಿಗಾರರು ಸ್ನೇಹಿತರಾಗಿದ್ದರು. ಬಳ್ಳಾರಿಯಿಂದ ಒಂದು ಕ್ರೈಮ್ ಪತ್ರಿಕೆಯನ್ನು ಹೊರ ತರುವುದು ಅವನ ಉದ್ದೇಶವಾಗಿತ್ತು.. ಅದನ್ನೇ ನಮಗೆಲ್ಲ ಹೇಳಿ ಆತ ಮತ್ತೆ ಬಳ್ಳಾರಿಯ ಬಸ್ ಹತ್ತಿದ..

ಇದಾದ ಮೇಲೆ ಆತ ಬಳ್ಳಾಎರಿಯಿಂದ ವಾರ ಪತ್ರಿಕೆ ತಂದ.. ಅದು ಹಾಯ್ ಬೆಂಗಳೂರು ಮಾದರಿಯಲ್ಲೇ ಇದ್ದ ಪತ್ರಿಕೆ. ಕ್ರೈಮ್ ಸೆಕ್ಸ್, ಭೂಗತ ಜಗತ್ತು ಪತ್ರಿಕೆಯಲ್ಲಿ ವಿಜೃಂಭಿಸುತ್ತಿತ್ತು...

ಇದಾದ ಕೆಲವು ವರ್ಷಗಳ ಒರೆಗೆ ರವಿಯ ಬಳ್ಳಾರಿಯ ಪತ್ರಿಕೋದ್ಯಮದ ಬಗ್ಗೆ ಹಲವು ರಂಜನೀಯ ವರದಿಗಳು ಬರುತ್ತಿದ್ದವು.. ಅಷ್ಟರಲ್ಲಿ ಮುಂಜಾನೆ ಮುಚ್ಚಿ ಹೋಗಿತ್ತು.. ನಾನು ಬೇರೆ ಬೇರೆ ವಾರ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದೆ. ರವಿ ಬೆಳಗೆರೆ ಮರೆತುಹೋಗಿದ್ದ...

ಅದೊಂದು ದಿನ ರವಿ ಮತ್ತೆ ಬೆಂಗಳೂರಿಗೆ ಬಂದಿಳಿದ..ಅವನ ರಾಜಧಾನಿ ಪತ್ರಿಕೋದ್ಯಮ ಮತ್ತೆ ಮುಂದುವರಿಯಿತು..ರಾಜಾಜಿನಗರ ಎಂಟ್ರೆನ್ಸ್ ಬಳಿ ಒಂದು ರೂಮು ಮಾಡಿದ್ದ. ಆಗ ಅವನು ಕೆಲಸ ಮಾಡುತ್ತಿದ್ದುದು ಅಭಿಮಾನಿ ಬಳಗದಲ್ಲಿ... ನಾನು ಅಭಿಮಾನಿಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದೆ..ಹೀಗಾಗಿ ಆತ ನಮ್ಮ ಬಳಗದವನಾಗಿದ್ದ..

ನಾನು ಎಂಬತ್ತರ ದಶಕದ ಕೊನೆಯ ಹೊತ್ತಿಗೆ ಕನ್ನಡ ಪ್ರಭ ಸೇರಿಕೊಂಡಿದ್ದೆ..ಕನ್ನಡ ಪ್ರಭ ಸತ್ಯ ಅವರು ನಮಗೆ ಪತ್ರಿಕೋದ್ಯಮದ ಮಾದರಿಯಾಗಿದ್ದರು.. ಇಮ್ರಾನ್ ಖುರೇಶಿ, ಗಿರೀಷ್ ನಿಕ್ಕಮ್, ಡಿ. ಮಹದೇವಪ್ಪ, ಡಿ. ಉಮಾಪತಿ, ಗರುಡನಗಿರಿ ನಾಗರಾಜ್ ಮೊದಲಾದವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ರಾಜಕೀಯ ವರದಿಗಾರಿಕೆಯತ್ತ ನಾನು ಹೊರಳಿಕೊಂಡಿದ್ದೆ. ರವಿಯ ಪತ್ರಿಕೋದ್ಯಮದ ಮಾದರಿ ಆಗಲೇ ಬೇರೆಯಾಗಿತ್ತು...ಕೆ.ಶಾಮರಾವ್ ಗರಡಿಯಲ್ಲಿ ಆತನಿದ್ದ. ಶಾಮರಾವ್ ಕನ್ನಡದ ಮಹಾನ್ ಪತ್ರಿಕೋದ್ಯಮಿ ಎಂಬುದು ಅವನ ನಂಬಿಕೆಯಾಗಿತ್ತು.. ಆದರೆ ಶಾಮರಾವ್ ದೊಡ್ದ ಪತ್ರಿಕೋದ್ಯಮಿ ಎಂದು ನನಗೆ ಅನ್ನಿಸುತ್ತಿರಲಿಲ್ಲ.ಧ್ವೇಷದ ಪತ್ರಿಕೋದ್ಯಮದಲ್ಲಿ ಶಾಮರಾವ್ ನಂಬಿಕೆ ಇಟ್ಟವರಾಗಿದ್ದರು..

ಹೀಗಿದ್ದರೂ ರವಿಯ ಜೊತೆ ವೈಯಕ್ತಿಕ ಸ್ನೇಹ ಇತ್ತು. ಹಲವು ಬಾರಿ ಇಬ್ಬರೂ ಗುಂಡು ಹಾಕಿ ಚರ್ಚೆ ಮಾಡುತ್ತಿದ್ದೆವು... ಆದರೆ ರವಿಯ ಮನ್ನಸ್ಸಿನ ಒಳಗೆ ಕ್ರೌರ್ಯ ವಿಜೃಂಭಿಸುತ್ತಿದೆ ಎಂದು ನನಗೆ ಅನ್ನಿಸುತ್ತಿತ್ತು.. ಆತ ತನಗೆ ಆಗದವರನ್ನು ಟಾರ್ಗೆಟ್ ಮಾಡುತ್ತಿದ್ದ ರೀತಿ ಅಪಾಯಕಾರಿ ಅನ್ನಿಸುತ್ತಿತ್ತು. ಆತನಿಗೆ ಯಾವುದೇ ಸಿದ್ಧಾಂತ ಮೌಲ್ಯ ಇದೆ ಎಂದು ಅನ್ನಿಸುತ್ತಿರಲಿಲ್ಲ..ಆತನಿಗೆ ಮಹಿಳೆಯರ ಬಗ್ಗೆಯೂ ಅಂತಹ ಗೌರವ ಇರಲಿಲ್ಲ.. ಆತನಿಗೆ ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಇದೆ ಎನ್ನುವುದು ಆತ ಗುಂಡೂ ಹಾಕಿದಾಗ ಹೊರಬಂದು ಬಿಡುತ್ತಿತ್ತು..ಹಾಗೆ ಆತ ಜ್ಯೋತಿಷವನ್ನು ನಂಬುತ್ತಿದ್ದ.. ತನ್ನದು ಮೀನ ರಾಶಿ ಎಂದೂ ಹೇಳುತ್ತಿದ್ದ. ಹಾಗೆ ಮೀನಿನ ಚಿತ್ರವನ್ನು ಹಾಕಿಕೊಳ್ಳುವುದು ಅವನ ಕಾಯ್ಂ ಹವ್ಯಾಸವಾಗಿತ್ತು. ಅಮ್ಮ ಅಮ್ಮ ಎಂದು ಸದಾ ಕನವರಿಸುತ್ತಿದ್ದ ಆತ ನಿಜವಾಗಿ ಅಮ್ಮನನ್ನು ಹುಡುಕುತ್ತಿದ್ದಾನೆಯೇ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಸಿಗುವುದು ಕಷ್ಟವಾಗುತ್ತಿತ್ತು.

ಗುಂಡು ಹಾಕಿದ ಸಂದರ್ಭದಲ್ಲಿ ಆತ ಹಿರಿಯ ಪತ್ರಕರ್ತರನ್ನು ವಾಚಾಮಗೋಚರವಾಗಿ ಬೈಯುತ್ತಿದ್ದ..ಬೇರೆಯವರ ಬಗ್ಗೆ ಅವನ ಬಾಯಲ್ಲಿ ಎಂದೂ ಒಳ್ಳೆಯ ಮಾತು ಬರುತ್ತಿರಲಿಲ್ಲ.  ಹಲವಾರು ಹಿರಿಯ ಪತ್ರಕರ್ತರ ಹೆಸರು ಹೇಳಿ ನಾಯಿಗಳನ್ನು ಹೊಡೆದು ಹಾಕಿದ ಉದಾಹರಣೆಗಳೂ ಇದ್ದವು..ನಾನು ಸಾವಕಾಶವಾಗಿ ಅವನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದೆ. ಜೊತೆಗೆ ಕನ್ನಡ ಪ್ರಭ ಕೆಲಸದಲ್ಲಿ ನಾನು ಮುಳುಗಿ ಹೋದೆ.. ಆಗಲೇ ಆತ ಅಪರಾಧ ಜಗತ್ತಿನ ಒಳಗೆ ಪ್ರವೇಶ ಮಾಡಲು ಪ್ರಾರಂಭಿಸಿದ್ದ. ಕ್ರೈಮ್ ವರದಿಗಾರರು ಅವನಿಗೆ ಆಪ್ತರಾದರು, ಹಾಗೆ ಪ್ರೆಸ್ ಕ್ಲಬ್ ಸ್ನೇಹಿತರೂ ಅವನಿಗೆ ದೊರಕಿದರು..

ಅದೊಂದು ದಿನ ಆತ ಬರಹ ರುಚಿಕಟ್ಟಾಗಿರಬೇಕು ಎಂದು ಬರೆದಿದ್ದು ನೋಡಿ ನನಗೆ ಶಾಕ್.. ಬರಹ ರುಚಿಕಟ್ಟಾಗಿರಬೇಕು ಎಂದು ಉಪ್ಪು ಖಾರ ಸೇರಿಸಬೇಕು. ಹಾಗೆ ಸೇರಿಸಿದರೆ ಅದು ಸತ್ಯಕ್ಕೆ ಮಾಡಿದ ಧ್ರೋಹವಾಗುತ್ತದೆ. ನನಗೆ ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆತ ರುಚಿಕಟ್ಟಾಗಿ ಬರೆಯುವ ದಾರಿ ಹಿಡಿದ,,,

ಕರ್ಮವೀರ ಸಂಪಾದಕನಾದ ಮೇಲೆ ಆತ ಭೂಗತಲೋಕದ ಬಗ್ಗೆ ರುಚಿ ಕಟ್ಟಾಗಿ ಬರೆಯತೊಡಗಿದ...ಹೀಗೆ ಬರೆಯುತ್ತ ಸತ್ಯದ ಮುಖದ ಮೇಲೆ ಹೊಡೆದ....ಆತ ಕಥೆಗಾರನೂ ಆಗಿದ್ದರಿಂದ ವರದಿಯಲ್ಲಿ ಕಥೆ ನುಸುಳತೊಡಗಿತು.. ವಾಸ್ತವಯಾವುದು ಕಲ್ಪನೆಯಾವುದು ಎಂಬುದು ಅರ್ಥವಾಗದ ಸ್ಥಿತಿಯನ್ನು ಆತ ನಿರ್ಮಿಸಿಬಿಡುತ್ತಿದ್ದ.ಈ ರೀತಿಯ ಪತ್ರಿಕೋದ್ಯಮ ಮಾಡಬಹುದು ಎಂಬುದು ನನ್ನಂಥವನಿಗೆ ಊಹಿಸಲೂ ಸಾಧ್ಯವಿಲ್ಲದ ವಿಚಾರವಾಗಿತ್ತು..

ನನ್ನಂಥವರು ಪತ್ರಿಕೋದ್ಯಮ ಎಂದರೆ ಸತ್ಯದ ಹುಡುಕಾಟ ಎಂದು ನಂಬಿದವರು.. ಅಲ್ಲಿ ಕಲ್ಪನೆಗೆ ಅವಕಾಶ ಇಲ್ಲ. ವಾಸ್ತವಕ್ಕೆ ಭಾಷಾ ಆಭರಣವನ್ನು ತೊಡಿಸಬೇಕಾದ ಅಗತ್ಯವೂ ಇಲ್ಲ... ಆದರೆ ರವಿಯ ವರದಿಗಾರಿಕೆಯಲ್ಲಿ ಸತ್ಯಕ್ಕಿಂತ ಕಲ್ಪನೆಗೆ ಹೆಚ್ಚಿನ ಮಹತ್ವ ದೊರಕುತ್ತಿತ್ತು. ಆತ ತನ್ನ ಭಾಷೆಯ ಮೇಲಿನ ಹಿಡಿತವನ್ನು ಸತ್ಯವನ್ನು ಮರೆಮಾಚುವುದಕ್ಕೆ ಬಳಸುತ್ತಿದ್ದ.. ಭೂಗತ ಜಗತ್ತು ಕುರಿತ ಅವನ ಬಹುತೇಕ ವರದಿಗಳಲ್ಲಿ ಕಮರ್ಶಿಯಲ್ ಸಿನಿಮಾ ಅಂಶಗಳು ಜಾಸ್ತಿ ಇರುತ್ತಿದ್ದವು.. ಭೂಗತ ಜಗತ್ತಿನ ವ್ಯಕ್ತಿಯೊಬ್ಬನನ್ನು ಆತ ವಿಲನ್ ಎಂದು ಹೇಳುತ್ತಲೇ ಆತನನ್ನು ನಾಯಕನನ್ನಾಗಿ ಮಾಡಿಬಿಡುತ್ತಿದ್ದ. ಆ ಮೂಲಕ ಅವರ ಆಂತರಿಕ ವಲಯವನ್ನು ಪ್ರವೇಶಿಸಿಬಿಡುತ್ತಿದ್ದ..

ಭೂಗತ ಜಗತ್ತಿನ ಜೀವಿಗಳು ತಾವು ಮಾಡಿದ ಕೊಲೆ ದೌರ್ಜನ್ಯಗಳನ್ನು, ಅತ್ಯಾಚಾರವನ್ನು  ಹೊರ ಜಗತ್ತಿಗೆ ತಿಳಿಸುತ್ತ  ಸಾಮಾನ್ಯ ಜನರಲ್ಲಿ ಭಯವನ್ನು ಉಂಟು ಮಾಡಲಿ ರವಿ ಬೆಳಗೆರೆಯನ್ನು ಬಳಸಿಕೊಳ್ಳತೊಡಗಿದರು..ಆತ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ತುಂಬು ಸಂತೋಷದಿಂದ ಅವರಿಗೆ ವೇದಿಕೆಯನ್ನು ಒದಗಿಸುತ್ತಿದ್ದ..ಭೂಗತ ಜಗತ್ತಿನ ಆಗು ಹೋಗುಗಳಲ್ಲಿ ಮೂಗು ತೂರಿಸತೊಡಗಿದ ರವಿ. ಆಲ್ಲಿನ ಆಗು ಹೋಗುಗಳನ್ನು ತಾನೇ ನಿಯಂತ್ರಿಸುವವನಂತೆ ವ್ಯವಹರಿಸತೊಡಗಿದ. ಹೀಗಾಗಿ ಸ್ನೇಹಿತರಾಗಿದ್ದ ಭೂಗತ ಜಗತ್ತಿನ ಡಾನ್ ಗಳು ಬೇರೆಯಾದರು. ಯಾರು ಯಾರೋ ಒಂದಾದರು..

ಈ ಕುರಿತು ಮುತ್ತಪ್ಪ ರೈ ಒಮ್ಮೆ ನನ್ನ ಬಳಿ ಹೇಳಿದ್ದರು..

ರವಿ ಒಬ್ಬ ಅಪಾಯಕಾರಿ ಪತ್ರಕರ್ತ....!

ಅಗ್ನಿ ಶ್ರೀಧರ್ ಕೂಡ ರವಿ ಬೆಳಗೆರೆ ಕುರಿತು ತುಂಬಾ ನೋವಿನಿಂದ ಮಾತನಾಡುತ್ತಾರೆ. ಯಾಕೆ ಹೀಗಾದ ಎಂದು ಪ್ರಶ್ನಿಸುತ್ತಿದ್ದವರು ಅಗ್ನಿಶ್ರೀಧರ್...

ರವಿ ಹಾಯ್ ಬೆಂಗಳೂರು ಮಾಡಿದ ಮೇಲೆ ಸಂಪೂರ್ಣವಾಗಿ ಬದಲಾಗಲಿಲ್ಲ,, ಬೆತ್ತಲಾದ... ತನ್ನ ಕಡು ಕಷ್ಟದ ದಿನಗಳನ್ನು ಮರೆತು ಬಡತನಕ್ಕೆ ಸೆಡ್ದು ಹೊಡೆಯುವನಂತೆ ಫೀಲ್ಡ್ ಗೆ ಇಳಿದ...ಅವನ ಪತ್ರಿಕೆಯ ಮೂರನೆಯ ಸಂಚಿಕೆ ಹೊರಬರುವ ಹೊತ್ತಿಗೆ ಅವನ ಮೇಲಿದ್ದ ಅಲ್ಪ ಸ್ವಲ್ಪ ನಂಬಿಕೆಯೂ ನನಗೆ ಹೊರಟು ಹೋಗಿತ್ತು.. ಜಾರಕೀಹೊಳಿ ಸಹೋದರರ ಮೇಲೆದ್ದ ಒಂದು ಕೊಲೆ ಆರೋಪ ಪ್ರಕರಣದಲ್ಲಿ ನಡೆದ ಒಂದು ಒಪ್ಪಂದ ಮತ್ತು ಅದರಿಂದ ರವಿ ಮಾಡಿಕೊಂಡ ಲಾಭ ನನಗೆ ಆಘಾತವನ್ನು ಉಂಟು ಮಾಡಿತ್ತು.. ಕೊಣ್ಣೂರು ಮರ್ಡರ್ ಕೇಸ್ ಎಂಬ ಆ ಪ್ರಕರಣ ರವಿಯ ಜೋಳಿಗೆ ತುಂಬಿಸಿತ್ತು..ಈ ನನಗಾದ ಈ ಆಘಾತವನ್ನು ರವಿಗೂ ಹೇಳಿದ್ದೆ.. ನೀನು ಯಾರಿಗೂ ಹೆದರ ಬೇಡ ಕನಿಷ್ಟ ನಿನ್ನ ಆತ್ಮಕ್ಕಾದರೂ ಹೆದರು ಎಂದು ಹೇಳಿದ್ದೆ.

ಆತ ಮುಂದಿನ ಐದು ವರ್ಷ ನನ್ನ ಜೊತೆ ಮಾತನಾಡಿರಲಿಲ್ಲ....!

ಇವತ್ತಿಗೆ ಇಷ್ಟೇ ಸಾಕು... ಇನ್ನೊಮ್ಮೆ ಮುಂದಿನದನ್ನ ಹೇಳ್ತೀನಿ...


5 comments:

balu said...

thanks for sharing

Unknown said...

Thanks Shashidhar

I really appreciate your honest report. I hope this kind of yellow journalism will die along with Ravi Belagere'death.

Surendra said...

ಬಳ್ಳಾರಿ ಜಾಲಿ

ಗುಡಸಿ ದುನಿಯಾ said...

ಎಲ್ಲವನ್ನೂ ಬರೆಯಿರಿ. ಮುಂದಿನ ಭಾಗಕ್ಕಾಗಿ ಕಾಯುವೆ.

Unknown said...

ನಾನು ಅಥವಾ ನನ್ನಂಥವರು ಯಾಕೆ ರವಿಯನ್ನು ಓದಲೇ ಇಲ್ಲ ಎಂಬುದಕ್ಕೆ ಹೆಚ್ಚಿನ ಸ್ಪಷ್ಟನೆ ಈ ಬರಹದಲ್ಲಿ ದೊರೆಯಿತು!

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...