Tuesday, October 26, 2021

 ಹೊಟ್ಟೆ ತುಂಬಿದ ನಮ್ಮ ಕ್ರಿಕೆಟ್ ಹುಡುಗರು; ಹಸಿವಿನ ಪಾಕ್ ಆಟಗಾರರು.; ಭಾರತ ಪಾಕ್ ಕ್ರಿಕೆಟ್ ಕಲಿಸಿದ ಪಾಠ

ಎರಡು ದಿನಗಳ ಹಿಂದಿನ ಮಾತು. ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತಿತು. ಪಾಕಿಸ್ಥಾನ ಅದ್ಭುತವಾಗಿ ಆಟ ಆಡಿ ವಿಜಯಿಯಾಯಿತು,,ಕ್ರಿಡೆ ಎಂದರೆ ಹಾಗೆ. ಚೆನ್ನಾಗಿ ಆಡಿದವರು ಗೆಲ್ಲುತ್ತಾರೆ, ಚೆನ್ನಾಗಿ ಆಡದಿದ್ದರೆ ಸೋಲುತ್ತಾರೆ.. ಈ ಪಂದ್ಯದಲ್ಲಿ ಆದದ್ದು ಅದೇ,
ಭಾರತದ ಈ ಸೋಲಿನಿಂದ ಭಾರತೀಯರಿಗೆ ನೋವಾಗಿದ್ದರೆ ಅದು ಸಹಜ, ನಮ್ಮ ತಂಡ ಗೆಲ್ಲಬೇಕು ಎಂದು ಬಯಸುವುದು ಅಸಹಜವೇನಲ್ಲ..ಜೊತೆಗೆ ಭಾರತದ ಉಪಖಂಡದಲ್ಲಿ ಕ್ರಿಕೆಟ್ ಎನ್ನುವುದು ದೇಶಪ್ರೇಮದ ಸಂಕೇತ ಕೂಡ ಆಗಿರುವುದು ನಿಜ. ಹಾಗೆ ಇದೊಂದು ರಿಲಿಜನ್. ಹಾಗೆ ಕ್ರಿಕೆಟ್ ನಂತಹ ಆಟ ದೇಶಪ್ರೇಮದ ಸಂಕೇತವಾಗಿದೆ. ನಮ್ಮ ದೇಶದ ತಂಡವನ್ನು ಬೆಂಬಲಿಸುವುದು ಧರ್ಮ, ಬೆಂಬಲಿಸದಿದ್ದರೆ ಅದು ದೇಶದ್ರೋಹ,,ನಿಜವಾದ ಕ್ರೀಡೆಯನ್ನು ಅಸ್ವಾದಸಲು ಸಾಧ್ಯವಾಗದ ಸ್ಥಿತಿ
ಇವತ್ತಿನ ದಿನ ದೇಶಪ್ರೇಮ ಎಂಬುದು ಹೆಚ್ಚು ಚಾಲ್ತಿಯಲ್ಲಿ ಇರುವ ಶಬ್ದ. ಪ್ರಭುತ್ವದ ವಿರುದ್ಧ ಮಾತನಾಡುವುದು ದೇಶದ್ರೋಹ. ಸಂಘ ಪರಿವಾರದ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುವುದು ದೇಶದ್ರೋಹ. ಹಿಂದೂ ಹಿಂಸೆಯನ್ನು ಪ್ರಶ್ನಿಸುವುದು ದೇಶದ್ರೋಹ, ಅಲ್ಪಸಂಖ್ಯಾತರ ಮೇಲೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವುದು ದೇಶದ್ರೋಹ. ಇಂತಹ ದೇಶಪ್ರೇಮೆದ ಹೊಸ ವ್ಯಾಖ್ಯಾನದ ಮತ್ತು ದೇಶಪ್ರೇಮವನ್ನು ಕೋಮಿನ ಜೊತೆ ಜೋಡಿಸುವ ಕಾಲ ಘಟ್ಟ ಇದು. ಇಂತಹ ಸ್ಥಿತಿ ಈ ದೇಶದಲ್ಲಿ ಹಿಂದೆಂದೂ ಬಂದಿರಲಿಲ್ಲ.
ಈಗ ಮೊದಲು ಪ್ರಸ್ತಾಪಿಸಿದ ವಿಷಯಕ್ಕೆ ಬರುತ್ತೇನೆ. ಅದು ಭಾರತ ಮತ್ತು ಪಾಕಿಸ್ಥಾನದ ನಡುವಿನ ಕ್ರಿಕೆಟ್ ಪಂದ್ಯ ಮತ್ತು ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದ್ದು,. ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಪಾಕಿಸ್ಥಾನದ ನಡುವೆ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಅದೂ ಸಹ ದೇಶಪ್ರೇಮಕ್ಕೆ ಸಂಬಂಧಿಸಿಯೇ ತೆಗೆದುಕೊಂಡ ತೀರ್ಮಾನ, ಭಾರತದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸದಿರುವ ವರೆಗೆ ಆ ದೇಶದ ಜೊತೆ ಕ್ರಿಕೆಟ್ ಆಡಬಾರದು ಎಂಬ ನಿರ್ಧಾರ, ಹಾಗೆ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲು ಆಡುವ ಅವಕಾಶವನ್ನು ಪಾಕಿಸ್ಥಾನದ ಆಟಗಾರರಿಗೆ ನೀಡದಿರುವುದೂ ಕೂಡ ದೇಶಪ್ರೇಮದ ಹೊಸ ನರೇಟೀವ್ ದ ಭಾಗವೇ ಆಗಿತ್ತು, ಇದೇ ನೆರೇಟೀವ್ ನಿಂದಾಗಿಯೇ ಪಾಕಿಸ್ಥಾನದ ಕ್ರಿಕೆಟ್ ವೀಕ್ಷಕವಿವರಣೆಕಾರರನ್ನು ಹೊರಹಾಕಲಾಗಿತ್ತು,, ಯಾವ ಕಾರಣಕ್ಕೂ ಪಾಕಿಸ್ಥಾನದ ಗಾಳಿ ಇಲ್ಲಿ ಬೀಸಕೂಡದು, ಹೀಗಾಗಿ ಪಾಕಿಸ್ಥಾನದ ಆಟಗಾರರು ಹೇಗಿದ್ದಾರೆ ಎಂಬ ಅರಿವು ನಮ್ಮ ತಂಡಕ್ಕೆ ಇರಲಿಲ್ಲ. ನಿಜ ಪಾಕಿಸ್ಥಾನದ ಆಟಗಾರರು ಹೇಗೆ ಆಡುತ್ತಾರೆ ಎಂಬುದನ್ನು ವೀಡಿಯೋ ಮೂಲಕ ನೋಡಿದ್ದರೂ ಅವರು ಜೊತೆ ಆಡದಿರುವುದು ಅವರ ಆಟವನ್ನು ನಿಜವಾಗಿ ತಿಳಿಯದಂತೆ ಮಾಡಿತ್ತು.
ಆದರೂ ನಮ್ಮ ಹುಡುಗರಲ್ಲಿ ಹುಮ್ಮಸು ಇತ್ತು.. ಪಾಕಿಸ್ಥಾನ ನಮಗೆ ಯಾವ ಲೆಕ್ಕ ಎಂದು ನಮ್ಮವರು ಅಂದುಕೊಂಡಿದ್ದರು, ಐ ಪಿ ಎಲ್ ಮತ್ತ್ತು ಕ್ರಿಕೆಟ್ ನೀಡಿದ ಕೋಟ್ಯಾಂತರ ರೂಪಾಯಿ ಹಣ ನಮ್ಮ ಆಟಗಾರರಿಗೆ ಈ ವಿಶ್ವಾಸವನ್ನು ತುಂಬಿತ್ತು.
ಬದುಕಿನ ಯಾವುದೇ ಕ್ಷೇತ್ರದಲ್ಲಿ ಅಹಂಕಾರವನ್ನೇ ವಿಶ್ವಾಸ ಎಂದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.. ಅವರು ವಿಶ್ವಾಸ ಎಂದುಕೊಂಡಿದ್ದು ವಿಶ್ವಾಸ ಆಗಿರಲಿಲ್ಲ. ಅದು ಅಹಂಕಾರವಾಗಿತ್ತು.
ಎರಡೂ ವರ್ಷಗಳ ನಂತರ ಪಾಕಿಸ್ಥಾನದ ವಿರುದ್ಧ ಆಡಲು ಮೈದಾನಕ್ಕೆ ಇಳಿದ ನಮ್ಮ ಹುಡುಗರು ಇದನ್ನು ನಿರೀಕ್ಷಿಸಿರಲಿಲ್ಲ. ಪಾಕಿಸ್ಥಾನ ಟಾಸ್ ಗೆದ್ದು ಭಾರತದ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದಾಗಲೇ ಎಚ್ಚರಿಕೆಯ ಗಂಟೆ ಬಡಿಯತೊಡಗಿತ್ತು,, ಭಾರತದ ಆರಂಭಿಕ ಆಟಗಾರರಾದ ಶರ್ಮಾ ರಾಹುಲ್ ಜೋಡಿಗೆ ಎದುರಾದವರು ಅಫ್ರೀದಿ ಎಂಬ ತೋಫಾನಿನಂತ ಬೌಲರ್,, ಅವನು ಎಸೆದ ಬೌಲುಗಳಿಗೆ ಇವರು ನಿರುತ್ತರರಾದರು. ಮುಂದಿನದನ್ನು ಹೇಳಬೇಕಾಗಿಲ್ಲ. ಅದು ಭಾರತದ ಪತನ..
ಮುಂದೆ ಎನಾಯಿತು ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಭಾರತ ಪಾಕಿಸ್ಥಾನದ ಎದುರು ತಲೆ ತಗ್ಗಿಸಿ ನಿಲ್ಲಬೇಕಾಯಿತು.. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮೆಂಟರ್ ಮಹೇಂದ್ರ ಸಿಂಗ್ ದೋನಿ ಕ್ರಿಡೆಯ ಗೌರವವನ್ನು ಎತ್ತಿ ಹಿಡಿದರು.. ಪಾಕಿಸ್ಥಾನದ ಆಟಗಾರರ ಮೈದಡವಿದರು,, ಆ ಹುಡುಗರಿಗೆ ದೋನಿಯ ಜೊತೆ ಮಾತನಾಡುವುದೇ ದೌಡ್ಡ ಗೌರವ ಅನ್ನಿಸಿದಂತಿತ್ತು,,
ಇಲ್ಲಿ ಗೆದ್ದಿದ್ದು ಕ್ರಿಕೆಟ್ ಎಂಬ ಅದ್ಭುತ ಕ್ರೀಡೆ. ಗೆಲ್ಲಿಸಿದವರು ವಿರಾಟ್ ಮತ್ತು ದೋನಿ..ವಿರಾಟ್ ಎದುರು ವಿದ್ಯಾರ್ಥಿಗಳಂತೆ ನಿಂತ ಪಾಕ್ ಆಟಗಾರರು, ಅವರತ್ತ ಪ್ರೀತಿಯ ನೋಟ ಬೀರಿದ ಕೋಹ್ಲಿ.. ಈ ಚಿತ್ರವನ್ನು ಮರೆಯುವುದು ಸಾಧ್ಯವೇ ಅಲ್ಲ..ಇದು ಕ್ರಿಕೆಟ್ ಎಂಬ ಕ್ರೀಡೆ ಇರುವವರೆಗೆ ನೆನಪಿನಲ್ಲಿ ಉಳಿಯುವ ಚಿತ್ರ
ಆದರೆ ಕ್ರೀಡಾ ಮನೋಭಾವನೆ ಎಂದರೇನು ಎಂದು ಅರಿಯದ ಕೆಲವು ವಾಹಿನಿಗಳು ಮತ್ತು ಮುಬ್ಬಕ್ತರು ಭಾರತದ ಸೋಲಿಗಾಗಿ ಅರಚಾಟ ಪ್ರಾರಂಭಿಸಿದರು. ಭಾರತ ಗೆದ್ದಿದ್ದರೆ ಅ ಗೆಲುವಿಗಾಗಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಗೌರವ ಸಲ್ಲಿಸಬೇಕು ಎಂದುಕೊಂಡವರಿಗೆ ನಿರಾಸೆಯಾಗಿತ್ತು,, ಆಗ ಈ ಜನ ಟಾರ್ಗೆಟ್ ಮಾಡಿದ್ದು ಭಾರತದ ಬೌಲರ್ ಮಹಮ್ಮದ್ ಶಮಿ ಅವರನ್ನು, ಅದೂ ಅವರು ಮುಸ್ಲಿಂ ಎಂಬ ಕಾರಣಕ್ಕೆ . ಆದರೆ ಭಾರತದ ಆರೋಗ್ಯಪೂರ್ಣ ಮನಸ್ಸುಗಳು ಶಮಿ ಅವರ ಬೆಂಬಲಕ್ಕೆ ನಿಂತವು, ಸಚಿನ್ ತೆಂಡೂಲ್ಕರ್ ಅವರಿಂದ ರಾಹುಲ್ ಗಾಂಧಿ ಅವರ ವರೆಗೆ ಎಲ್ಲರೂ ಶಮಿಗೆ ಬೆಂಬಲ ಸೂಚಿದರು, ಆದ್ರೆ ಈ ಕೋಮುವಾದಿ ಕ್ರಿಮಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವಿಷ ಕಾರುವುದನ್ನು ನಿಲ್ಲಿಸಲಿಲ್ಲ.
ಈ ಸ್ಥಿತಿಯಲ್ಲಿ ಪಾಕಿಸ್ಥಾನದ ಒಪನರ್ ರಿಜ್ವಾನ್ ಶಮಿ ಅವರಿಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದರು.. ಶಮಿ ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರು ಎಂದೂ ಶ್ಲಾಘಿಸಿದರು.ಪಾಕಿಸ್ಥಾನದ ಮೂರ್ಖ ಗೃಹ ಸಚಿವ ಪಾಕಿಸ್ಥಾನದ ವಿಜಯ ಇಸ್ಲಾಂ ಜಯ ಎಂದು ಹೇಳಿಕೆ ನೀಡಿ ಎಲ್ಲರಿಂದಲೂ ಉಗಿಸಿಕೊಂಡರು,. ಪಾಕಿಸ್ಥಾನದ ಮಾಧ್ಯಮಗಳು ಗೃಹ ಸಚಿವರಿಗೆ ಉಗಿದವು,, ಹಾಗೆ ಭಾರತದ ನಾಯಕ ವಿರಾಟ್ ಕೋಹ್ಲಿ ಮತ್ತು ಮಹೇಂದ್ರ ಸಿಂಗ್ ದೋನಿ ಅವರನ್ನು ಇಡೀ ಪಾಕಿಸ್ಥಾನ ದ ಮಾಧ್ಯಮ ಕೊಂಡಾಡಿತು,
ಪಾಕಿಸ್ಥಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಭಾರತದ ಕ್ರೀಡಾ ಮನೋಭಾವನೆ ನಮಗೆಲ್ಲ ಆದರ್ಶ ಎಂದರು.. ಮುಂಬರುವ ದಿನಗಳಲ್ಲಿ ಈ ಕ್ರೀಡಾ ಮನೋಭಾವನೆಯಿಂದಲೇ ಭಾರತ ಮತ್ತೆ ಪುಟಿದೇಳುತ್ತದೆ ಎಂದರು. ಭಾರತ ತಂಡವನ್ನು ಮನಸಾರೆ ಶ್ಲಾಘಿಸಿದರು,, ನಮ್ಮಲ್ಲಿ ಯಾರದರೂ ಪಾಕಿಸ್ಥಾನ ತಂಡವನ್ನು ಶ್ಲಾಘಿಸುವ ಸ್ಥಿತಿ ಇದೆಯೆ ? ಯೋಚಿಸಿ. ಒಂದೊಮ್ಮೆ ಶ್ಲಾಘಿಸಿದರೆ ಅವರಿಗೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಅಟ್ಟುವುದು ಗ್ಯಾರಂಟಿ,,
ನನಗೆ ಅನ್ನಿಸುವ ಹಾಗೆ ಪಾಕಿಸ್ಥಾನದ ಆಟಗಾರರು ಅದ್ಬುತವಾಗಿ ಕ್ರಿಕೆಟ್ ಆಡಬಲ್ಲರು. ನಿನ್ನೆ ನ್ಯೂಜಿಲೆಂಡ್ ತಂಡವನ್ನು ಅವರು ಬಗ್ಗು ಬಡಿದರು,, ಇದು ಅವರ ಸತತ ಎರಡನೆಯ ಜಯ. ಗೆಲುವಿನ ಲಯ ತಮಗೆ ದಕ್ಕಿದೆ ಎಂಬುದನ್ನು ತೋರಿಸಿಕೊಟ್ಟ ಪಂದ್ಯ ಅದಾಗಿತ್ತು
ಭಾರತ ಪಾಕಿಸ್ಥಾನದ ಜೊತೆ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬಾರದಿತ್ತು. ಹಾಗೆ ಐ ಪಿ ಎಲ್ ಪಂದ್ಯಗಳಲ್ಲೂ ಅವರಿಗೆ ಅವಕಾಶ ನೀಡಬೇಕಿತ್ತು. ಹಾಗೆ ಮಾಡಿದ್ದರೆ ಪಾಕಿಸ್ಥಾನದ ಆಟಗಾರರ ಗುಣ ದೌರ್ಬಲ್ಯಗಳು ನಮಗೆ ತಿಳಿಯುತ್ತಿದ್ದವು,, ಹಾಗಾಗಿದ್ದರೆ ವಿಶ್ವದ ಮಹತ್ವದ ಟೂರ್ನಿಗಳಲ್ಲಿ ಪಾಕಿಸ್ಥಾನವನ್ನ್ಯು ಸೋಲಿಸುವುದು ನಮಗೆ ಸುಲಭವಾಗುತ್ತಿತ್ತು,
ಈಗ ವಿಶ್ವ ಕ್ರಿಕೆಟ್ ಅನ್ನು ಭಾರತ ಹಣ ಬಲದಿಂದ ಆಳುತ್ತಿದೆ, ಆದರೆ ಪಂದ್ಯದ ಗೆಲುವಿಗೆ ಹಣ ಬಲ ಮಾತ್ರ ಸಾಲದು. ಗೆಲ್ಲಲು ಛಲ ಬೇಕು,, ಈ ಛಲ ಕೂಡ ಹಣದಿಂದ ಮಾತ್ರ ಬರುವುದಿಲ್ಲ. ಹಸಿವು ಗೆಲ್ಲುವ ಛಲ ನೀಡುತ್ತದೆ, ಭಾರತದ ಆಟಗಾರರು ಹೊಟ್ಟೆತುಂಬಿದವರು. ಹೀಗಾಗಿ ಗೆಲ್ಲುವ ಛಲ ಕಡಿಮೆ ಆಗಿದೆ.. ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮತ್ತು ಆಟಗಾರರು ಬಡತನದಲ್ಲಿದ್ದಾರೆ. ಅದೇ ಅವರಿಗೆ ಗೆಲ್ಲುವ ಛಲವನ್ನು ನೀಡಿದೆ. ಗೆಲ್ಲಿವ ಚಾಕಚಕ್ಯತೆಯನ್ನು ಕಲಿಸಿದೆ,, ಹಸಿವು ಕಲಿಸುವ ಪಾಠ ಗೆಲುವಿನದ್ದೇ ಆಗಿರುತ್ತದೆ,
ಹೊಟ್ಟೆ ತುಂಬಿದ ಭಾರತದ ಕ್ರಿಕೆಟ್ ಮಂಡಳಿ ಈ ಬಗ್ಗೆ ಯೋಚಿಸಲಿ..ನಮ್ಮ ಆಟಗಾರರು ಈ ಸೋಲಿನಿಂದ ಪಾಠ ಕಲಿಯಲಿ
ಶಶಿಧರ್ ಭಟ್
Sheela Bhat, Tejasvi Naik and 14 others
                                 

 ಉಪ ಚುನಾವಣೆ ವೈಯಕ್ತಿಕ ಜಗಳ ಮತ್ತು ಕುಸಿದ ನೈತಿಕತೆ,,,




ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿದೆ,,, ಮೂರು ರಾಜಕೀಯ ಪಕ್ಷಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ,,  ಎರಡೂ ಕ್ಷೇತ್ರಗಳಲ್ಲಿ ಹೋರಾಟ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅನ್ನಿಸಿದರೂ ಜೆಡಿಎಸ್ ಪಕ್ಷವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಎಂದಿನಂತೆ ಜೆಡಿಎಸ್ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದರೂ ಫಲಿತಾಂಶವನ್ನು ಬದಲಿಸುವ ಶಕ್ತಿ ಜೆಡಿಎಸ್ ಗೆ ಇದ್ದೇ ಇದೇ,,

ಚುನಾವಣಾ ಪ್ರಚಾರ ಕಣದಲ್ಲಿ ರಾಜ್ಯದ ಘಟಾನುಗಟಿ ನಾಯಕರು ಕಾಣಿಸಿಕೊಂಡಿದ್ದಾರೆ,, ತಮ್ಮ ಮಾತಿನ ವರಸೆಯನ್ನು ಬಳಸಿ ಮತದಾರರನ್ನು ಗೆಲ್ಲುವ ಯತ್ನವೂ ನಡೆಯುತ್ತಿದೆ,, ಅಧಿಕಾರರೂಡ ಬಿಜೆಪಿ ಪಕ್ಷದ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವರ ಸಂಪುಟದ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತಾರಾ ಪ್ರಚಾರಕರು. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಮುಖ ಪ್ರಚಾರಕರು. ಹಾಗೆ ಜೆಡಿಎಸ್ ಪಕ್ಷದ ಪರವಾಗಿ ಇಬ್ಬರೇ ಪ್ರಮುಖರು ಅವರು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡ.. ಉಳಿದವರು ಲೆಕ್ಕಕ್ಕಿಲ್ಲ...

ಸಾಧಾರಣವಾಗಿ ಎಲ್ಲ ಚುನಾವಣೆಯಲ್ಲೂ ಯಾವುದಾದರೊಂದು ಇಷ್ಯು ಅಥವಾ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ, ಅದು ಯಾವುದು ಎಂಬುದು ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ. ಇಂತಹ ಇಷ್ಯೂ ಅಥವಾ ವಿಚಾರ ಮತ ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ,, ಅದು ಸಾಮಾನ್ಯ ಮತದಾರನಿಗೆ, ರಾಜಕಾರಣಿಗಳಿಗೆ ಕಾಣುವುದಿಲ್ಲ.  ಆದರೆ ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ಮತದಾರರೂ ಒಂದೇ ರೀತಿ ಯೋಚಿಸುತ್ತಾರೆ. ಮತ್ತು ಒಂದೇ ರೀತಿ ಮತದಾನ ಮಾಡುತ್ತಾರೆ,

ಹೀಗೆ ಪ್ರಮುಖವಾದ ವಿಚಾರವೊಂದು ಎಮರ್ಜ್ ಅದಾಗ ಜಾತಿವಾದ, ಕೋಮುವಾದ, ಹಣ ಹಂಚಿಕೆ ಯಾವುದೂ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ,, ಅದನ್ನೆಲ್ಲ ಮೀರಿ ಮತದಾರ ತನ್ನ ರ್ತೀರ್ಪು ನೀಡುತ್ತಾನೆ.. ಆದರೆ ಕೆಲವೊಮ್ಮೆ ಯಾವುದೇ ವಿಷಯ ವಿಚಾರ ಚುನಾವಣಾ ವಿಚಾರವಾಗಿ ಹೊರಹೊಮ್ಮದಿದ್ದಾಗ ಜಾತಿವಾದ ಕೋಮುವಾದವೇ ಪ್ರಮುಖ ಪಾತ್ರ ಒಹಿಸುತ್ತವೆ,,ಭಾರತದ ಚುನಾವಣಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಗುರುತಿಸಬಹುದು.. 

ಇನ್ನು ಸಾರ್ವತಿಕ ಚುನಾವಣೆಗೂ ಉಪಚುನಾವಣೆಗೂ ವ್ಯತ್ಯಾಸವಿದೆ. ಹಾಗೆ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದೆ, ಸಾಧಾರವಾಗಿ ಉಪಚುನಾವಣೆಗಳಲ್ಲಿ ಬಹುಮುಖ್ಯವಾದ ವಿಷಯ ವಿಚಾರ ಪ್ರಮುಖ ವಿಷಯವಾಗಿ ಎಮರ್ಜ್ ಆಗುವ ಸಂದರ್ಭ ಕಡಿಮೆ. ಹೀಗಾಗಿ ಸ್ಥಳೀಯ ವಿಚಾರಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಕಾಣುತ್ತದೆ. ಜೊತೆಗೆ ಅಧಿಕಾರದಲ್ಲಿ ಇರುವ ಪಕ್ಷ ತನ್ನ ಅಧಿಕಾರವನ್ನು ಬಳಸಿಕೊಂಡು ಜಯಗಳಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ,

ಈಗಿನ ಉಪ ಚುನಾವಣೆಯ ವಿಚಾರಕ್ಕೆ ಬರೋಣ.. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಈ ಚುನಾವಣೆಯನ್ನು ಗೆಲ್ಲಬೇಕಾದ ಅನಿವಾರ್ಯತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿದೆ. ಜೆಡಿಎಸ್ ಪಕ್ಷಕ್ಕೆ ಅಂತಹದೇನೂ ಇಲ್ಲ.. ಈ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದರಿಂದ ಈ ಫಲಿತಾಂಶ ಬಂತು ಎಂಬುದು ಆ ಪಕ್ಷಕ್ಕೆ ಸಾಕು. ಅದನ್ನ್ ಇಟ್ಟುಕೊಂಡು ಆ ಪಕ್ಷದ ನಾಯಕರು ಆಟ ಆಡಬಲ್ಲರು..

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಾಣುತ್ತಿದೆ. ಇದೇ ಪಕ್ಷ ಗೆಲ್ಲುತ್ತದೆ ಎಂದು ಹೇಳುವ ಸ್ಥಿತಿ ಇಲ್ಲ ಎಂಬುದು ಬಿಜೆಪಿ ಹಿರಿಯ ನಾಯಕರೊಬ್ಬರ ಹೇಳಿಕೆ..ಅವರ ಪ್ರಕಾರ ಈ ಚುನಾವಣೆಯಲ್ಲಿ ಮೋದಿ ಅವರ ವರ್ಚಸ್ಸು ಪ್ರಭಾವ ಬೀರಲಾರದು. ಇದು ಬಿಜೆಪಿ ಮೈನಸ್ ಪೈಂಟ್. ಜೊತೆಗೆ ಏನೇ ಇರಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ಆಗಿನ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. 

ಈ ಮಾತನ್ನು ಕಾಂಗ್ರೆಸ್ ನಾಯಕರು ಒಪ್ಪುತ್ತಾರೆ. ಯಡಿಯೂರಪ್ಪನವರನ್ನು ಬದಲಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಮಗೆ ಪ್ಲಸ್ ಪಾಯಿಂಟ್ ಎನ್ನುತ್ತಾಎರ್ರೆ ಕಾಂಗ್ರೆಸ್ ನಾಯಕರು,,

ಜೊತೆಗೆ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನ ತಮಗೆ ಬೆಂಬಲ ನೀಡಬಹುದು ಎನ್ನುವ ನಂಬಿಕೆಯೂ ಕಾಂಗ್ರೆಸ್ ನಾಯಕರಿಗಿದೆ,,

ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಚಿಂತನಾ ಲಹರಿಯಲ್ಲಿ ಸಾಮಾನ್ಯ ಅಂಶವೊಂದಿದೆ.. ಅದು ಈ ಚುನಾವಣಾ ಫಲಿತಾಂಶ ಹೀಗೆ ಆಗುತ್ತಿದೆ ಎಂಬ ನಂಬಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೇರಿದಂತೆ ಯಾವ ನಾಯಕರಿಗೂ ಇಲ್ಲ. ಎಲ್ಲ ನಾಯಕರು ಖಾಸಗಿಯಾಗಿ ಮಾತನಾಡುವಾಗ ಕಷ್ಟ ಇದೇ ಎಂಬ ಮಾತನ್ನು ಆಡುತ್ತಾರೆ.

ಇಂತಹ ಸ್ಥಿತಿಯಲ್ಲಿ ಭಯಗ್ರಸ್ಥರಾದ ನಾಯಕರು ಪರಸ್ಪರ ವೈಯಕ್ತಿಕ ನಿಂಧನೆಯಲ್ಲಿ ತೊಡಗಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ನಡುವಿನ ಜಗಳ ಇವತ್ತಿನ ರಾಜಕೀಯ ಬದುಕು ಎಂತಹ ಹೀನಾಯ ಸ್ಥಿತಿಯನ್ನು ತಲುಪಿದೆ ಎಂಬುದಕ್ಕೆ ಧ್ಯೂತಕವಾಗಿದೆ. ಈ ಇಬ್ಬರು ನಾಯಕರಿಗೆ ರಾಜ್ಯದ ಸಮಸ್ಯೆಗಿಂತ ವ್ಯಕ್ತಿಗತ ಜಗಳವೇ ಮುಖ್ಯವಾಗಿದೆ,

ಇನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವಿನ ಕಂಬಳಿ ಜಗಳ ಕೂಡ ಇದೇ ರೀತಿಯ ಜಗಳ..ದೇಶದಲ್ಲಿ ಕೋಮುವಾದ ಹೆಡೆ ಬಿಚ್ಚಿ ನರ್ತಿಸುತ್ತಿದೆ.. ನಾಗರಿಕ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ.. ಬೆಲೆ ಏರಿಕೆಯಿಂದ ಜನ ಬೀದಿಗೆರ್ ಬಿದ್ದಿದ್ದಾರೆ. ಕೃಷಿ ಕ್ಷೇತ್ರ ಮಹತ್ವ ಕಳೆದುಕೊಳ್ಳುತ್ತಿದೆ. ಕಾರ್ಪುರೇಟ್ ಜಗತ್ತಿಗೆ ಎಲ್ಲವನ್ನೂ ಮಾರಾಟ ಮಾಡಲಾಗುತ್ತಿದೆ.. ಸರ್ಕಾರಿ ಆಸ್ತಿಯ ಪರಭಾರೆ ಮಾಡಲಾಗುತ್ತಿದೆ.. ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ.. ದೇಶ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

ಇದ್ಯಾವುದೂ ಕೂಡ ಈ ಕಚ್ಚಾಟದ ನಾಯಕರಿಗೆ ಮುಖ್ಯ ಅನ್ನಿಸುತ್ತಲೇ ಇಲ್ಲ.

ಈ ನಡುವೆ ಜೆಡಿಎಸ್ ಮತ್ತೆ ಪ್ರಾದೇಶಿಕ ರಾಜಕಾರಣ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡಿಕರಣಕ್ಕೆ ಹೊರಟಿದೆ.. ಜೊತೆಗೆ ಬಿಜೆಪಿ ಗೆದ್ದರೆ ಗೆಲ್ಲಲಿ, ಸಿದ್ದರಾಮಯ್ಯನವರಿಗೆ ಮಹತ್ವ ಇರುವ ಕಾಂಗ್ರೆಸ್ ಗೆಲ್ಲಕೂಡದು ಎಂಬ ತೀರ್ಮಾನಕ್ಕೆ ಬಂದ ಜೆಡಿಎಸ್ ಭಸ್ಮಾಸುರ ರಾಜಕಾರಣ ಮಾಡುತ್ತಿದೆ,, ಆರ್ ಎಸ್ ಎಸ್ ಅನ್ನು ಬಲವಾಗಿ ಟೀಕಿಸುತ್ತ ಮುಸ್ಲೀಂ ಮತವನ್ನು ಆದಷ್ಟು ಪಡೆಯೋಣ ಎಂದು ತೀರ್ಮಾನಿಸಿರುವ ಕುಮಾರಸ್ವಾಮಿ ಮತ್ತಿ ಎಚ್,ಡಿ. ದೇವೇಗೌಡರು ಬೆಡ್ ರೂಮಿನಲ್ಲಿ ಈಗ ದೊಡ್ಡ ಗಣಾಚಾರಿಯಾಗಲು ಹೊರಟಿರುವ ಮುಖ್ಯಮಂತ್ರಿ ಬೊಮ್ಮಾಯಿಯವನ್ನು ಭೇಟಿ ಮಾಡಿ ಅವರಿಗೆ ಆಶೀರ್ವಾದ ಮಾಡುತ್ತಾರೆ. ನಮ್ಮಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡುತ್ತಾರೆ,,

ಈಗ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಬದಲಾಗುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಅಪ್ಪ ಅಮ್ಮ ಇಲ್ಲ, ನೀವೇ ಅಪ್ಪ ಅಮ್ಮ ಎಂದು ದೇವೇಗೌಡರ ಕಾಲಿಗೆ ಬೀಳುತ್ತಾರೆ, ಈ ಸಂದರ್ಭದಲ್ಲಿ ದೇವೇಗೌಡರು ತಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರವನ್ನೂ ಎಂಟು ತಿಂಗಳ ಒಳಗೆ ಉರುಳಿಸಿದ್ದು ಬೊಮ್ಮಾಯಿ ಅವರಿಗೆ ನೆನಪಿನಲ್ಲಿ ಇರುವುದಿಲ್ಲ...

ಇದು ಇವತ್ತಿನ ರಾಜಕಾರಣದ ಮಾಧರಿ ಎಂದು ನನಗೆ ಅನ್ನಿಸುತ್ತದೆ....

ಇಲ್ಲಿ ಎಲ್ಲರೂ ಮುಖವಾಡ ಧರಿಸಿದ್ದಾರೆ.. ಇವರ ನಿಜವಾದ ಮುಖ ದರ್ಶನ ಯಾವಾಗ ಆಗುತ್ತದೇಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇವತ್ತಿನ ರಾಜಕಾರಣ ಮೌಲಿಕತೆಯನ್ನು ಕಳೆದುಕೊಂಡಿದೆ, ಎಲ್ಲರೂ ಅಂಗಡಿ ತೆಗೆದು ಕುಳಿತ ವ್ಯಾಪಾರಿಗಳಂತೆ ಕಾಣುತ್ತಾರೆ..


ಶಶಿಧರ್ ಭಟ್

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...