Friday, January 9, 2009

ಹೀಗೊಂದು ಖಾಸಗಿ ಮಾತು.......

ಆತ ಅಂದು ಬೆಳಿಗ್ಗೆ ಬಂದು ನನ್ನ ಮುಂದೆ ಕುಳಿತ.
ಕುಳಿತವನೇ "ನಾನು ನಿಮ್ಮ ಪಕ್ಕದ ತಾಲೂಕಿನವನು" ಎಂದ. ಹವ್ಯಕ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ. ಇನ್ನೊಬ್ಬ ಪತ್ರಕರ್ತರ ಹೆಸರು ಹೇಳಿ ತನಗೊಂದು ಕೆಲಸ ಬೇಕು ಎಂದು ಅಹವಾಲು ಮಂಡಿಸಿದ. ಸುಮ್ಮನೆ ಮಾತನಾಡುತ್ತಲೇ ಇರುವ ಈ ವ್ಯಕ್ತಿ ನಾನು ಪಕ್ಕದ ತಾಲೂಕಿನವನು ಎಂದು ಹೇಳಿದ್ದು, ಹವ್ಯಕಭಾಷೆಯಲ್ಲಿ ಮಾತನಾಡಿ ಕೆಲಸ ಕೇಳಿದ್ದು ನನಗೆ ಸರಿ ಬರಲಿಲ್ಲ.
ನಾನು ಅವನಿಗೆ ಹೇಳಿದೆ;
"ನಮ್ಮಲ್ಲಿ ತಕ್ಷಣ ಕೆಲಸ ಇಲ್ಲ. ಹಾಗೆ ನಾನು ನನ್ನ ಊರಿನವನು ನನ್ನ ಜಾತಿಯವನು ಎಂಬ ಕಾರಣಕ್ಕೆ ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಾನು ಈ ವಿಚಾರದಲ್ಲಿ ಹೆಚ್ಚು ಜಾಗರೂಕನಾಗಿರುತ್ತೇನೆ. ಈಗ ನಮ್ಮ ಸಂಸ್ಥೆಯಲ್ಲಿ ಎಲ್ಲ ಜಾತಿ ಜನ ಸಮುದಾಯದ ಜನ ಇದ್ದಾರೆ. ಅವರಲ್ಲಿ ಬಹಳಷ್ಟು ಜನರ ಜಾತಿ ನನಗೆ ಗೊತ್ತಿಲ್ಲ. ಅದರ ಅಗತ್ಯವೂ ನನಗಿಲ್ಲ. ಆದರೆ ಕೆಲವೊಮ್ಮೆ ಎಲ್ಲ ಜಾತಿ ಸಮುದಾಯದವರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಜಾತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಕೆಲಸಕ್ಕೆ ತೆಗೆದುಕೊಂಡು ಇಬ್ಬರು ಹುಡುಗರು ದೀವರು ಜಾತಿಗೆ ಸೇರಿದವರು. ನಾನು ಉದ್ದೇಶಪೂರ್ವಕವಾಗಿ ಅವರನ್ನು ಕೆಲಸಕ್ಕೇ ತೆಗೆದುಕೊಂಡಿದ್ದೇನೆ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ಜಾತಿಯವರ ಕೈಯಲ್ಲಿ ಪತ್ರಿಕೋದ್ಯಮ ಇದೆ. ಇದು ಎಲ್ಲರಿಗೂ ತಲುಪಲಿ ಎಂಬ ಕಾರಣಕ್ಕೆ ನಾನು ಹಿಂದುಳಿದ ವರ್ಗದ ಹುಡುಗರನ್ನು ತೆಗೆದುಕೊಂಡಿದ್ದು. ಈಗ ಈ ಇಬ್ಬರೂ ಹುಡುಗರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಯಾರ ಒತ್ತಡಕ್ಕೂ ಅವರು ಮಣಿಯುತ್ತಿಲ್ಲ."
ಈ ಹುಡುಗ ಬಂದವನು, ನೇರವಾಗಿ ನಾನು ನಿಮ್ಮ ಜಾತಿಯವನು ಎಂದು ಹೇಳಿದ್ದು ನನಗೆ ಸರಿ ಕಾಣಲಿಲ್ಲ. ಹೀಗಾಗಿ ನಾನು ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ.
ಇದಾದ ಮೇಲೆ ಆತ ಗೆಳೆಯ ರವೀಂದ್ರ ರೇಷ್ನೆ ಅವರ ಪತ್ರಿಕೆಯಲ್ಲಿ ಯಾವುದೊ ಕೆಲಸ ಮಾಡಿಕೊಂಡಿದ್ದ. ನಿನ್ನೆ ನನ್ನ ನ್ಯೂಸ್ ಮತ್ತು ವ್ಯೂಸ್ ಕಾರ್ಯಕ್ರಮಕ್ಕೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ನ ಬಂದಿದ್ದರು. ಅವರ ಪಕ್ಕದಲ್ಲಿ ಈ ಆಸಾಮಿ. ಅವನ ಕೈಯಲ್ಲಿ ಯಾವುದೋ ಪತ್ರಿಕೆಗಳ ಕಟ್ಟು. ಅದನ್ನು ನನಗೆ ಕೊಟ್ಟವನೇ, ನಾನು ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿದ್ದೇನೆ. ಈ ಪತ್ರಿಕೆಯನ್ನು ತರುತ್ತಿದ್ದೇನೆ ಅಂದ. ನಾನು ಸ್ಟುಡಿಯೋ ಓಳಕ್ಕೆ ಹೋಗುವ ಆತುರದಲ್ಲಿ ಇದ್ದುದರಿಂದ ಪತ್ರಿಕೆಯನ್ನು ನೋಡಲಿಲ್ಲ. ಆದರೆ ಆತ ಬಿಡಲಿಲ್ಲ.
''ನಾನು ನಿಮ್ಮ ಬಗ್ಗೆ ಬರೆದಿದ್ದೇನೆ. ನೋಡಿ" ಎಂದು ಪುಟ ತೆಗೆದು ತೋರಿಸಿದ.
ಅಲ್ಲಿ ತಾನು ಕೆಲಸಕ್ಕಾಗಿ ಪಡುತ್ತಿರುವ ಪಡಪಾಟಲನ್ನು ವಿವರಿಸಿದ್ದ. ಹಾಗೆ ಜಾತಿಯ ಕಾರಣಕ್ಕೆ ಶಶಿಧರ್ ಭಟ್ಟರು ನನಗೆ ಕೆಲಸ ಕೊಡಲಿಲ್ಲ ಎಂದು ಬರೆದಿದ್ದ. ಹಾಗೆ ಆ ಸಾಲು ನಾನು ಜಾತಿಯವಾದಿ ಎಂಬಂತೆ ಅರ್ಥವನ್ನು ಕೊಡುತ್ತಿತ್ತು. ನಾನು ಇದನ್ನು ನೋಡಿದವನು ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ನಾನು ಸ್ಟುಡಿಯೋದ ಒಳಕ್ಕೆ ಹೋದ ಮೇಲೆ ನನ್ನ ಸಹಾಯಕರಿಗೆ ಅವನ ಪತ್ರಿಕೆಯ ಪ್ರತಿಗಳನ್ನು ನೀಡಿ ಅದನ್ನು ಕಚೇರಿಯಲ್ಲಿ ಹಂಚಿ ಎಂದನಂತೆ !
ಇಂದು, ಅಂದರೆ ಶುಕ್ರವಾರ ಮಧ್ಯಾನ್ಹದ ಊಟಕ್ಕೆ ಪ್ರೆಸ್ ಕ್ಲಬ್ಬಿಗೆ ಹೋಗಿದ್ದೆ. ಅಲ್ಲಿ ಇದೇ ಬೇಳೂರು ಗೋಪಾಲಕೃಷ್ಣ, ಮತ್ತು ರೇಣುಕಾಚಾರ್ಯ ಇದ್ದರು. ಪತ್ರಿಕಾಗೋಷ್ಟಿ ಮುಗಿದ ಮೇಲೆ ಗೋಪಾಲಕೃಷ್ಣ ನನ್ನ ಬಳಿ ಬಂದು ಮಾತನಾಡಿದರು. ಪಕ್ಕದಲ್ಲಿ ಇದೇ ಮನುಷ್ಯ !
ನನ್ನ ಜೊತೆಗಿದ್ದ ಇನ್ನೊಬ್ಬ ಪತ್ರಕರ್ತರು ಹೇಳಿದರು. ಈ ವ್ಯಕ್ತಿ ಸಾಗರ ಮತ್ತು ಸೊರಬದ ಶಾಸಕರ ಜೊತೆ ಸದಾ ಇರುತ್ತಾನೆ ಅಂತ. ಪತ್ರಿಕೋದ್ಯಮಿಯಾದವನು ರಾಜಕಾರಣಿಗಳ ಚೇಲಾ ಆದರೆ ಆತ ಪತ್ರಿಕೋದ್ಯಮಿಯಾಗಿ ಮುಂದುವರಿಯಬಾರದು ಎಂದು ನಂಬಿದವನು ನಾನು. ಆದರೆ ಈಗ ನಮ್ಮ ಪತ್ರಿಕೋದ್ಯಮಿಗಳು ರಾಜಕಾರಣಿಗಳ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಒಮ್ಮೆ ಸಂಬಂಧ ಬೆಳಸಿದ ಮೇಲೆ ಪತ್ರಿಕೋದ್ಯಮವನ್ನು ಬಿಟ್ಟು ಹೋಗುವುದಿಲ್ಲ. ಈ ಕಾರಣದಿಂದಲೇ ತುಂಬಾ ವೈಯಕ್ತಿಕವಾದ ಈ ಠಿಪ್ಪಣಿಯನ್ನು ಬರೆದಿದ್ದೇನೆ.
ಈಗ ನಾನು ಹೇಳಿದ ಹುಡುಗನ ಹೆಸರು ವೆಂಕಟೇಶ ಸಂಪ. ಆತ ಸಾಗರದವನು.

9 comments:

ವಿಕಾಸ್ ಹೆಗಡೆ said...

ನಮಸ್ತೆ, ಇದಕ್ಕೆ ನೇರ ಉತ್ತರ ದೊರೆಯುವುದಿಲ್ಲ ಎಂದು ಗೊತ್ತಿದ್ದರೂ ಕೂಡ ನೀವು ಅನ್ಯಥಾ ಭಾವಿಸುವುದಿಲ್ಲವೆಂದು ತಿಳಿದು ಇಲ್ಲಿ ಬರೆಯುತ್ತಿದ್ದೇನೆ.

ಇಲ್ಲಿ ನಿಮ್ಮ ಜಾತ್ಯತೀತತೆಯ ಪ್ರದರ್ಶನಕ್ಕೆ ಯಾವ ಅರ್ಥವೂ ಕಾಣುತ್ತಿಲ್ಲ. ಆ ಹುಡುಗನ ಮೇಲಿನ ವೈಯಕ್ತಿಕ ಟೀಕೆಗೆ ಜಾತ್ಯಾತೀತ ಗುಣವನ್ನು ಆರೋಪಿಸಿ ಬರೆದಂತಿದೆ. ಸ್ವಜಾತಿ ಹವ್ಯಕ ಹುಡುಗನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಜಾತಿ ಅಡ್ಡ ಬಂದ ತಮಗೆ ಇನ್ನಿಬ್ಬರು ಹುಡುಗರು ’ದೀವರು’ ಎಂಬ ಕಾರಣಕ್ಕಾಗಿಯೇ ಸೇರಿಸಿಕೊಂಡೆ ಎಂದು ಹೇಳಲು ಯಾವ ಸಂಕೋಚವೂ ಆಗುವುದಿಲ್ಲ !! ಎಲ್ಲಾ ಜಾತಿಯವರಿಗೂ ಅವಕಾಶ ಸಿಗಲಿ ಎಂದು ಜಾತಿ ನೋಡಿ ತೆಗೆದುಕೊಳ್ಳುವುದು ಯೋಗ್ಯತೆ, ಪ್ರತಿಭೆ ಗೆ ನೀವು ಕೊಡುವ ಹೊಡೆತವಲ್ಲವೇ?
ಯಾರ ಕೈಯಲ್ಲೂ ಯಾವ ಜಿಲ್ಲೆಯ ಪತ್ರಿಕೋದ್ಯಮವಿರಲು ಸಾಧ್ಯವಿಲ್ಲ. ಆಯಾ ಪ್ರದೇಶದಲ್ಲಿ ಆ ಕೆಲಸದಲ್ಲಿ ತೊಡಗಿಕೊಂಡವರಲ್ಲಿ ಅವರು ಜಾಸ್ತಿಯಿರುತ್ತಾರೆ ಸಹಜವಾಗಿ. ಎಲ್ಲದಕ್ಕೂ ಜಾತಿ ಆರೋಪಿಸಿ ನೋಡುವಂತಹ ಕೆಲಸವನ್ನು ಹಿರಿಯ ಪತ್ರಕರ್ತರೆನಿಸಿಕೊಂಡವರೇ ಮಾಡಿದರೆ ಇನ್ನು ಕಿರಿಯರ ಪಾಡೇನು, ಅವರಿಗೆ ದಾರಿತೋರುವವರ್ಯಾರು? ರಾಜಕಾರಣಿಗಳೇ ಗತಿಯಾಗುತ್ತಾರೆ ಕೊನೆಗೆ ಅವರಿಗೆ !

chanakya said...

ನಿಮ್ಮದೇ ಹಲವು ಲೇಖನಗಳಲ್ಲಿ ಜಾತ್ಯತೀತ ಉಲ್ಲೇಖಗಳನ್ನು ಗಮನಿಸಿದ್ದೇನೆ.ನಿಮ್ಮ ಬಳಿ ಬಂದ ಹುಡುಗ ಸಂಪ ಸ್ತಳೀಯ ಅತವಾ ಜಾತಿಯ ಹೆಸರನ್ನು ಬಳಸಿದ್ದು ಮಹಾಪರಾದ ಅನಿಸುತ್ತಿಲ್ಲ.ಯಾಕಂದ್ರೆ ಈವತ್ತು ಒಂದು ಕೆಲಸ ಪಡೆಯೋದು ಆಶ್ಟು ಸಲೀಸಲ್ಲ.ಹಿರಿಯರು ಅನುಭವಿಗಳಾದ ನೀವು ಇಂತಹವರನ್ನ ತಿದ್ದುಬಹುದಿತ್ತು.ಅದನ್ನ ಬಿಟ್ಟು ನೀವೂ ಎಲ್ಲೋ ಒಂದ್ಕಡೆ ಸ್ವಜಾತಿ ವಿರೋದಿ ಭಾವನೆ ತೋರಿದ್ದಿರೇನೋ ಅನ್ನೋ ಸಂಶಯ ಬರ್ತಿದೆ.ಅದ್ಕೆ ಇದು ಪೂರಕವೇನೋ..ಆದ್ರೆ ಮಾದ್ಯಮ ಜಾತೀಯ ಎಲ್ಲೆ ಮೀರಿದ್ದಲ್ಲವೇ?

ಸಂದೀಪ್ ಕಾಮತ್ said...

ನಾನು ಜಾತಿ ಮತಗಳನ್ನು ಮೀರಿ ಬೆಳೆದವನು ಅಂತ ಹೇಳಿ ಕೊನೆಗೆ ’ಇಂಥ’ ಜಾತಿಯವನಿಗೆ ಕೆಲಸ ಕೊಟ್ಟೆ ಅನ್ನೋದು-ಇದೇ ಈಗಿನ ಕಾಲದ ಜಾತ್ಯಾತೀತತೆ.

ganesh said...

ತೀರಾ ವಿರೋಧಾಭಾಸದ ಲೇಖನ . ಒಂದೆಡೆಯಲ್ಲಿ ಯಾವ ಜಾತಿ ಎಂಬುದು ಮುಖ್ಯ ಅಲ್ಲ ಎನ್ನುವ ನೀವು, ಇನ್ನೊಂದೆಡೆ ಹುಡುಗರ ಜಾತಿ ನೋಡಿ ಕೆಲಸ ಕೊಟ್ಟೆ ಎನ್ನುತ್ತೀರಿ. ನಿಮ್ಮ ಉದ್ದೇಶ ಆ ಹುಡುಗನನ್ನು ಅಪಮಾನಿಸುವುದು ಎಂಬುದು ಸ್ಪಷ್ಟ. ಏನೇ ಇರಲಿ ನಿಮ್ಮ blog ಬಲ ಬದಿಯಲ್ಲಿ "ಸುದ್ದಿ ಮಾತು" link ನೋಡಿದಾಗಲೇ ತಿಳಿಯಿತು , ನೀವು ಯಾವ "ಜಾತಿ" ಎಂದು.

Vijay Joshi said...

ನಮಸ್ತೆ ಶಶಿಧರ ಭಟ್ಟರೆ,

ನಾನು ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ. ಇನ್ನು ಒಂದೂವರೆ ವರ್ಷದಲ್ಲಿ ಪತ್ರಿಕೋದ್ಯಮದಲ್ಲಿ ನನ್ನ ಸ್ನಾತಕೋತ್ತರ ಅಧ್ಯಯನ ಮುಗಿಯುತ್ತದೆ. ಆಗ ನಾನು ಸಹಜವಾಗಿಯೇ ಉದ್ಯೋಗ ಬೇಟೆಗೆ ಇಳಿಯಬೇಕು. ಪತ್ರಿಕಾಲಯಗಳಲ್ಲಿ ನಾನು ಸಂದರ್ಶನಕ್ಕೆ ಬಂದಾಗ ನನ್ನನ್ನು ಸಂದರ್ಶಿಸುವವರು "ನಿನ್ನ ಅರ್ಹತೆ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ" ಎಂದು ಕೆಲಸ ನಿರಾಕರಿಸುವುದರ ಬದಲು "ನೀನು ಇಂಥ ಜಾತಿಗೆ ಸೇರಿದ್ದೀಯಾ ಹಾಗಾಗಿ ನಿನಗೆ ಇಲ್ಲಿ ಕೆಲಸವಿಲ್ಲ" ಎಂದು ಹೇಳಿದರೆ ನಾನೇನು ಮಾಡಬೇಕು? ಯಾರಲ್ಲಿ ದೂರಬೇಕು?

ಭಟ್ಟರೆ, ಜಾತಿ ಹೆಸರಲ್ಲಿ ಮೀಸಲಾತಿ, ಪ್ರಾಧಾನ್ಯತೆ ನೀಡಿರುವುದರಿಂದ ಇಂದಿನ ಯುವಕರಲ್ಲಿ ಒಂದು ದೊಡ್ಡ ಸಮೂಹ ಅದ್ಯಾವ ಪರಿ ನೊಂದಿದೆ ಎಂಬುದು ನಿಮಗೆ ತಿಳಿದೇ ಇದೆ. ಇಂಥ ಜಾತಿ ಆಧಾರಿತ ಕೆಲಸ ನೀಡುವ ಪದ್ಧತಿಗಳು ಜಗತ್ತಿಗೇ ನ್ಯಾಯ-ಅನ್ಯಾಯದ ಪಾಠ ಹೇಳಬೇಕಾದ ಸ್ಥಾನದಲ್ಲಿರುವ ಪತ್ರಿಕಾಲಯಗಳಿಗೂ ಬೇಕಾ? ನೀವೇ ಹೇಳಿ.

ನಿಮ್ಮ ಲೇಖನದಲ್ಲಿ ಬರುವ ಸಂಪ ಮಾಡಿದ್ದು ಸರಿ ಅಂತ ವಾದಿಸುತ್ತಿಲ್ಲ. ಆತ ತನ್ನ ಜಾತಿಯ ಲಾಭ ಪಡೆದು ಕೆಲಸ ಗಿಟ್ಟಿಸಲು ಪ್ರಯತ್ನಿಸಿದ್ದರೆ ಅದು ಅಕ್ಷಮ್ಯವೇ. ಆತ ರಾಜಕಾರಣಿಗಳ ಚೇಲಾನ ಥರ ವರ್ತಿಸಿರುವುದಂತೂ ಹೇಸಿಗೆ ಹುಟ್ಟಿಸುತ್ತದೆ. ಆದರೆ "ಉತ್ತರ ಕನ್ನಡ ಜಿಲ್ಲೆಯ ಪತ್ರಿಕೋದ್ಯಮ ಹವ್ಯಕರ ಕೈಯಲ್ಲಿದೆ" ಅಂತ ಹೇಳಿ ಯಾರಿಗಾದರೂ ಕೆಲಸ ನಿರಾಕರಿಸಿದರೆ ಅದರಿಂದ ಸಾಕಷ್ಟು ಮಂದಿಗೆ ಬೇಸರವಾಗುತ್ತದೆ ಭಟ್ರೆ.

ಹಾಗಾದರೆ ಹವ್ಯಕರಲ್ಲಿ ಕೆಲವು ಮಂದಿ ಪ್ರತಿಭಾವಂತರಿರುವುದೇ ತಪ್ಪಾ?

ಜಾತಿ ಆಧಾರಿತ ಪ್ರಾಧಾನ್ಯತೆ ದಯವಿಟ್ಟು ಬೇಡ. ಎಲ್ಲ ಜಾತಿಯವರಿಗೂ ಉತ್ತಮ ಶಿಕ್ಷಣ ಸಿಗುವಂತಾಗಲಿ. ಆದರೆ ಕೆಲಸ ನೀಡುವ ಪ್ರಕ್ರಿಯೆಯಲ್ಲಿ ಪ್ರತಿಭೆಯೊಂದೇ ಮಾನದಂಡವಾಗಲಿ.

ವಿಜಯ್ ಜೋಶಿ,
ಕುಂದಾಪುರ.

bhumika said...

shashidhara battare,
nimma lekhana nodi nagabeko, alabeko gottaguttilla. taavu yaava raajakaraanige benne savari suvarana mukyastara stana gittisikondiddeeri embudu ellarigu gottide! antahadaralli nimage sampa kuritu maatanaadalu enu naitikate ide swalpa tilisuttiraa?!
sampa hagalu raajakaarani manege hoguttare. neenu nadu raatri hogutteera alva?

ಕುಮಾರ ರೈತ said...

"ಹೀಗೊಂದು ಖಾಸಗಿ ಮಾತು..." ಓದಿದೆ.ಬರಹ ಅರ್ಥಗರ್ಭಿತ.ಇದರಲ್ಲಿ ಪ್ರಸಕ್ತ ಸಾಮಾಜಿಕ ಸಂದರ್ಭದ ಅಂತಸತ್ವವಿದೆ.ಇಲ್ಲಿ ಕಾಮೆಂಟುಗಳನ್ನು ಮಾಡಿದವರು ಈ ಗಂಭೀರ ಅಂತಸತ್ವ ಗಮನಿಸಿಲ್ಲ ಎನ್ನುವುದು ಬೇಸರದ ಸಂಗತಿ.
ಮೊದಲನೇಯದಾಗಿ ಕೆಲಸ ಕೇಳಲು ಬಂದಾತ ತನ್ನ ಅರ್ಹತೆ ಹೇಳದೇ ನಾನು ನಿಮ್ಮ ಊರಿನ ಪಕ್ಕದವನು,ಜಾತಿಯವನು ಎಂದು ಸೂಚಿಸಿದಲ್ಲದೇ ಮತ್ತಷ್ಟು ವೈಯಕ್ತಿಕ ಪ್ರಭಾವ ಬೀರಲು ಹವ್ಯಕ ಭಾಷೆ ಬಳಸಿರುವುದು.ಇವೆಲ್ಲ ಸೂಕ್ಷ್ಮ ಮನಸ್ಥಿತಿಯವರಿಗೆ ಖಂಡಿತ ಬೇಸರ ತರಿಸುತ್ತದೆ.

ದೀವರ ಹುಡುಗರಿಗೆ ಕೆಲಸ ನೀಡಿದ್ದೇನೆ ಎನ್ನುವುದು ದಮನಿತ ಜಾತಿಗಳಲ್ಲಿ ತಂತಾನೇ ಹುರುಪು,ಧೈರ್ಯ ತುಂಬುತ್ತದೆ.ಪ್ರತಿಭೆಯಿದ್ದಲ್ಲಿ ಜಾತಿ ಅಡ್ಡಬರುವುದಿಲ್ಲ ಎಂಬ ಭಾವನೆ ಮೂಡಿಸುತ್ತದೆ.ಪ್ರಸಕ್ತ ಸಾಮಾಜಿಕ ಸಂದರ್ಭದಲ್ಲಿನ ಜಾತಿ ಕಂಬಂಧ ಬಾಹುಗಳ ಬಲಿಷ್ಟತೆ ಅರಿತಿರುವ ಶಶಿಧರ್ ಭಟ್ ಅವರು ದಮನಿತ ಜಾತಿಯವರಿಗೆ ಕೆಲಸ ನೀಡಿದ್ದಾರೆ ಎನ್ನುವುದು
ಪ್ರಶಂಸನೀಯ ಸಂಗತಿ.ಈ ಹುಡುಗರು ಪ್ರತಿಭಾವಂತರು,ಒತ್ತಡಗಳನ್ನು ನಿಭಾಯಿಸಬಲ್ಲವರು ಎಂಬುದನ್ನು ಇಲ್ಲಿ ಪ್ರಸ್ತಾಪಿಸಿರುವದನ್ನು ಗಮನಿಸಬೇಕು.
ರಾಜಕಾರಣಿಗಳ ಪರಿಚಯವಿರಬಾರದು ಎಂದು ಈ ಗಂಭೀರ ಬರಹ ಎಲ್ಲಿಯೂ ಹೇಳಿಲ್ಲ.ಬದಲಾಗಿ ಪತ್ರಕರ್ತರು ರಾಜಕಾರಣಿಗಳ ಅನುಯಾಯಿಗಳಾಗಬಾರದು,ಈ ರೀತಿ ಯಾದಲ್ಲಿ ಆಗುವ ಅಪಾಯಗಳನ್ನು ಬರಹ ಸೂಕ್ಷ್ಮವಾಗಿ ಧ್ವನಿಸುತ್ತದೆ.
ಜಾತಿ ಮೀರಲು ಯತ್ನಿಸುವ ನಮ್ಮ ನಡುವಿನ ,ದಮನಿತರ ಧ್ವನಿ ಆಲಿಸುವ ಮನಸ್ಥಿತಿ ಇರುವ ಮಹತ್ವದ ಪತ್ರಕರ್ತರ ಈ ಬರಹದ ಒಟ್ಟಾರೆ ಧ್ವನಿಯನ್ನು ಗ್ರಹಿಕೆ ಮಾಡಿದ ನಂತರವೇ ಟಿಪ್ಪಣಿ ಮಾಡುವುದು ಅಗತ್ಯವೆಂದು ವಿನಯದಿಂದ ತಿಳಿಸುತ್ತಿದೇನೆ.

Ravi said...

ನಾನು ಜಾತಿ ಮತಗಳನ್ನು ಮೀರಿ.......ಎಂದು ಕಾಮತ್ ಊಢಾಫೆಯಾಗಿ ಬರೆಯುವುದು,ಜೋಶಿ ಸಾಹೇಬರು ಹವ್ಯಕರು ಫ್ರತಿಭಾವಂತರಿರುವುದೇ ತಪ್ಪಾ ಎಂದು ಕೇಳುವುದು, ಇವು ತಮ್ಮ ಮೂಗಿನ ನೇರಕ್ಕೆ ಅರ್ಥ್ಸಇಸುವ ಉದಾಹರಣೆಗಳು. ಇವತ್ತು ಎಲ್ಲ ರಂಗಗಳಲ್ಲೂ ಯಾಕೆ ಹೆಚ್ಚು ಪ್ರತಿಶತ ಹವ್ಯಕರು ಇದ್ದಾರೆ ಎಂದು ಎಂದಾದರು ಇವರು ಕೇಳಿಕೊಂಡಿದ್ದಾರ?.ಇವರ ಉತ್ತರ ಹವ್ಯಕ ಜನಾಂಗವೇ ಪ್ರತಿಭಾವಂತರೆಂದರೆ ಉಳಿದ ಜನಾಂಗದವರು ದಡ್ಡರೇ?.
ಭ್ಹಟ್ಟರು ಉಳ್ಳವರು ನಿರ್ಲಜ್ಜೆಯಿಂದ ಜಾತಿಯನ್ನು ಉಪಯೋಗಿಸುವುದು ಖಂಡಿಸುವುದು ಇವರಿಗೆ ಯಾಕೆ ಕಾಣಿಸುವುದಿಲ್ಲ. ದೀವರ ಹುಡುಗರಿಗೆ ಕೆಲಸ ಕೊಟ್ಟ ತಕ್ಸಣ ಅವರ ಜಾತ್ಯಾತೀತೆ ಎಂದು ಅಣಕವಾಡುವ ಮುನ್ನ ಈ ಹುಡುಗರು ತಮ್ಮ ಜಾತಿ ಎನಾದರು ಹೇಳಿಕೊಂಡು ಕೆಲಸ ಗಳಿಸಿಕೊಂಡರಾ ಎಂದು ಕೇಳಿಕೊಳ್ಳುವುದಿಲ್ಲ.
ಮುಗಿಸುವ ಮುನ್ನ ನನ್ನ ಮತ್ತೊಂದು ಅನಿಸಿಕೆ ಹೇಳಲು ಬಯಸುತ್ತೇನೆ.
ನಾನು ಕೆಲಸ ಮಾಡುವ ಇಎ ಟಿ ಕಂಪನಿಯಲ್ಲಿ ನಾನು ಪ್ರೊಜೆಕ್ಟ್ ಲೀಡ್ ಆದ್ದರಿಂದ ಇಂಟರ್ ವ್ಯೂ ಕೂಡ ನನ್ನ ಕೆಲಸ. ನನ್ನ ಕಂಪನಿಯಲ್ಲಿ ನಾನು ಗಮನಿಸಿದ್ದು ಎಂದರೆ ಹೆಚ್ಚಾಗಿ ತೆಲುಗು ತಮಿಳು ಜನಗಳೇ ತುಂಬಿದ್ದಾರೆ. ಕನ್ನಡದವರಿಗಿಂತ ಇವರು ಬುದ್ದಿವಂತರೆಂದು ನಾನು ತಿಳಿದಿಲ್ಲ ಇಂಟರ್ ವ್ಯೂ ನಲ್ಲಿ ಕನ್ನಡದ ಹುಡುಗರಿದ್ದರೆ ಅವರು ಆಯ್ಕೆಯಾಗುವಂತೆ ನೋಡಿಕೊಳ್ಳುತ್ತೇನೆ. ಇವರು ಸುಧಾರಿಸಿಕೊಳ್ಳದಿದ್ದರೆ ಆರು ತಿಂಗಳಲ್ಲಿ ಕಂಪನಿಯೇ ಗೇಟ್ ಪಾಸ್ ಕೊಡುತ್ತದೆ. ಇವರೆಗು ನಾನು ಆಯ್ಕೆ ಮಾಡಿದ ಹುಡುಗ ಹೊರಹೋಗಿಲ್ಲ.
ಹವ್ಯಕರು ಇದಕ್ಕೆ ಎನು ಹೇಳುತ್ತಾರೆ?

thandacool said...

namste, higondu kasagi matu odide nimma alocane sari. jati nodi kelasavalla. pratihe nodi kelasa embudu sari. adre adu ella kadeedeyo ennuva prashne sahajavagi kaduta ede. nanu b,lorege bamda mele adarallu ondu patrikalayadalli kelasakke serida mele e jati jijnase suruvadaddu. karanavu ede, nanu jativadiyalla, nanage kelasa nididdu jatiyannu nodi alla ennuvudu gottu. adare bahalstu kde eva nammava, jati maga ennuv bhavane edeyalla? nammavarnnu safe maduvudaralli tappenide annisuvudillave? jati, mata ellavu ondu sogu annisuttde. ene agali nima lekhanadante nimma aasahyavide endare nimondi nanuuu....
idu vashilibhaji alla nimmante nera, ditta , nirantara