Wednesday, April 4, 2012

ತಟ್ಟು ತಪ್ಪಾಳೆ ಕೆಟ್ಟ ಮಗು.....!


ಕಳೆದ ಕೆಲವುಗಳಿಂದ ನಾನು ಸುಮ್ಮನೆ ಉಳಿದು ಬಿಟ್ಟೆ. ಏನನ್ನು ಬರೆಯಬೇಕು ಎಂದು ಅನ್ನಿಸುತ್ತಿರಲಿಲ್ಲ. ಬರೆಯಲು ಏನೂ ಇರಲಿಲ್ಲ ಅಂತಾನೂ ಅಲ್ಲ. ಕೆಲವೊಮ್ಮೆ ನಮಗೆ ಏನನ್ನಾದರೂ ಮಾಡಬೇಕು ಎಂದು ಅನ್ನಿಸುವುದಿಲ್ಲ. ನನಗೆ ಆಗಿದ್ದು ಹಾಗೆ.
ನಾನು ಬೆಂಗಳೂರಿನಿಂದ ಹೊರಗಡೆ ಒಂದೆರಡು ದಿನ ಇದ್ದೆ. ನಂತರ ಬೆಂಗಳೂರಿಗೆ ಹಿಂತಿರುಗಿದ ಮೇಲೂ ಬೇಸರ.
ಒಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಟಾಟೋಪ. ನಾನು ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಿಂದ ಹೊರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಮಾಡುವುದಾಗಿ ವರಿಷ್ಠರು ಭರವಸೆ ನೀಡಿದ್ದರು, ಅದನ್ನು ಅವರು ಈಡೇರಿಸಬೇಕು ಎಂಬ ಒತ್ತಾಯ. ಇದಕ್ಕೆ ಪೂರಕವಾಗಿ ಹಲವು ಸಭೆ ಸಮಾರಂಭಗಳು. ಆ ಸಮಾರಂಭಗಳಲ್ಲಿ ಅವರ ಗುಣ ಗಾನ ಮಾಡುವ ಭಟ್ಟಂಗಿಗಳು.
ನಾನು ಬಹಳಷ್ಟು ವರ್ಷಗಳಿಂದ ನೋಡುತ್ತಲೇ ಬಂದಿರುವ ಯಡಿಯೂರಪ್ಪ, ಮುಗ್ದ ಮತ್ತು ದಡ್ಡ ಎಂಬುದು ನನ್ನ ನಂಬಿಕೆಯಾಗಿತ್ತು. ಸಾಧಾರಣವಾಗಿ ಗ್ರಾಮಾಂತರ ಪ್ರದೇಶಗಳಿಂದ ಬಂದವರಿಗೆ ಇಂತಹ ಹುಂಬತನ ಇರುತ್ತದೆ. ಅವರು ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಕದ್ದು ಮುಚ್ಚಿ ಇಟ್ಟುಕೊಳ್ಳಲಾರರು. ಹೋರಾಟಗಳಿಂದಲೇ ಬಂದ ಯಡಿಯೂರಪ್ಪನವರಲ್ಲಿ ಇಂತಹ ಹುಂಬತನ ಇದೆ ಎಂದು ನಾನು ನಂಬಿದ್ದೆ.
ಹುಂಬತನ ಅಂತಹ ದೊಡ್ಡ ದೊಷವಲ್ಲ. ಯಾಕೆಂದರೆ ಹುಂಬತನದ ಹಿಂದೆ ಕಪಟ ಇರುವುದಿಲ್ಲ. ಷಡ್ಯಂತ್ರ ಇರುವುದಿಲ್ಲ. ಮುಗ್ದವಾದ ಮನಸ್ಸುಗಳಲ್ಲಿ ಮಾತ್ರ ಹುಂಬತನ ಇರುತ್ತದೆ. ಆದ್ದರಿಂದ ಹುಂಬರು ಮತ್ತು ಮುಗ್ದರು ಅಪಾಯಕಾರಿಯಲ್ಲ. ಜೊತೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನನಗೆ ಸಂತೋಷವಾಗಿದ್ದು ಅವರ ಬಗ್ಗೆ ಎಂದು ಹೇಳುವುದಕ್ಕಿಂತ ನಮ್ಮ ಡೆಮಾಕ್ರಸಿಯ ಬಗ್ಗೆ ನನಗೆ ಇನ್ನಷ್ಟು ಗೌರವ ಪ್ರೀತಿ ಉಂಟಾಗಿದ್ದು ನಿಜ.
ಯಾಕೆಂದರೆ ದೇವೇಗೌಡರು ಪ್ರಧಾನಿಯಾಗುವುದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಡೆಮಾಕ್ರಸಿಯ ಪವಾಡ ಎಂದು ನನಗೆ ಅನ್ನಿಸಿದ್ದುಂಟು. ಈಗಲೂ ಹಾಗೆ ಅನ್ನಿಸುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು ಇಂಗ್ಲೀಷ ಎಂಬ ಮಾಯಾಂಗನೆಯ ಸ್ಪರ್ಶವೂ ಇಲ್ಲದೇ ಎತ್ತರಕ್ಕೆ ಏರುವುದು ಸಾಮಾನ್ಯ ಸಾಧನೆಯಲ್ಲ.
ಆದರೆ ಈಗ ಯಡಿಯೂರಪ್ಪ ಅವರ ವರ್ತನೆಯನ್ನು ಗಮನಿಸಿದಾಗ ನನ್ನ ಮನಸ್ಸಿನಲ್ಲಿ ಚಿತ್ರವೊಂದು ಮೂಡುತ್ತದೆ. ಅದು ಮನೆಯ ಅಂಗಳದಲ್ಲಿ ಕುಳಿತ ಪುಟ್ಟ ಮಗುವಿನ ಚಿತ್ರ. ಮೈಮೇಲೆ ಬಟ್ಟೆಯೂ ಇಲ್ಲದೇ ಅಂಗಳದಲ್ಲಿ ಕುಳಿತ ಮಗು ಉಚ್ಚೆ ಕಕ್ಕಸು ಮಾಡಿಕೊಂಡಿದೆ. ಉಚ್ಚೆಯ ಜೊತೆಗೆ ಆಡುತ್ತ ಕಕ್ಕಸನ್ನು ಮೈ ಕೈಗೆ ಬಡಿದುಕೊಂಡು ಅಳುತ್ತಿರುವ ಮಗು.
ಈ ಮಗುವಿನ ಜಾಗದಲ್ಲಿ ನನಗೆ ಯಡಿಯೂರಪ್ಪ ಕಾಣುತ್ತಾರೆ. ಅವರು ಬೆತ್ತಲಾಗಿದ್ದಾರೆ. ಮೈ ಕೈಗೆ ಕಕ್ಕಸು ಮೆತ್ತಿಕೊಂಡಿದೆ. ಅವರು ಅಳುತ್ತಲೇ ಇದ್ದಾರೆ. ಆದರೆ ಅವರ ಅಳುವಿಗೆ ಸಾಂತ್ವನ ಹೇಳುವ ಅಮ್ಮ ಕಾಣುತ್ತಿಲ್ಲ. ಮೈ ಕೈ ತೊಳೆಸಿ ಹೊಸ ಬಟ್ಟೆ ಹಾಕಿ ಆಡಲು ಗೊಂಬೆಗಳನ್ನು ನೀಡಬೇಕಾದ ಅಮ್ಮ ನಾಪತ್ತೆ.
ಪುಟ್ಟ ಮಗುವಿಗೆ ಉಚ್ಚೆ ಮತ್ತು ಕಕ್ಕಸು ಹೊಲಸು ಎಂಬುದು ತಿಳಿದಿರುವುದಿಲ್ಲ ಕಕ್ಕಸಿನ ದುರ್ವಾಸನೆ ಮಗುವನ್ನು ವಿಚಲಿತವಗಿ ಮಾಡುವುದಿಲ್ಲ. ಕಕ್ಕಸನ್ನು ಮೈ ಕೈ ಗೆ ಬಡಿದುಕೊಂಡರೂ ಅದರ ಹೊಲಸಿನಿಂದ ಮಗುವಿಗೆ ತೊಂದರೆಯಾಗುತ್ತಿದ್ದರೂ ಅದರಿಂದ ಹೊರಕ್ಕೆ ಬರಬೇಕು ಎಂಬುದು ಅದಕ್ಕೆ ತಿಳಿಯದು.
ನನಗೆ ಈಗ ಮನೆಯ ಅಂಗಳದಲ್ಲಿ ಕುಳಿತ ಯಡಿಯೂರಪ್ಪ ಕಾಣುತ್ತಿದ್ದಾರೆ. ಅವರ ಮೈ ಮೇಲೂ ಬಟ್ಟೆಯಿಲ್ಲ. ಮೈ ಕೈ ರಾಡಿಯಾಗಿದೆ. ಅವರೂ ಅಳುತ್ತಿದ್ದಾರೆ ರಚ್ಚೆ ಹಿಡಿಯುತ್ತಿದ್ದಾರೆ. ಅದರೆ ಈ ಎರಡೂ ಚಿತ್ರಗಳಲ್ಲಿ ಇರುವ ವ್ಯತ್ಯಾಸ ಎಂದರೆ ಮಗಿವಿಗೆ ಇರುವ ಮುಗ್ದತೆ ಯಡಿಯೂರಪ್ಪ ಅವರಲ್ಲಿ ಇರುವುದು ಸಾಧ್ಯವಿಲ್ಲ. ಮಗುವಿನ ಅಳುವಿನ ಹಿಂದೆ ತಾಯಿಯ ಲಕ್ಶ್ಯ ಸೆಳೆಯುವ ಉದ್ದೇಶವಿದೆ. ಅದನ್ನು ಮೀರಿ ಮಗು ಏನನ್ನೂ ಬಯಸುವುದಿಲ್ಲ. ಆದರೆ ಅಳುತ್ತಿರುವ ಯಡಿಯೂರಪ್ಪ ಮಗುವಾಗಿ ದೊಡ್ದವರಾದವರು. ಹೀಗೆ ದೊಡ್ದವರಾಗುವ ಮೂಲಕ ಅವರು ಮುಗ್ದತೆಯನ್ನು ಕಳೆದುಕೊಂಡಿದ್ದಾರೆ. ಹಾಗೆ ಅವರಿಗೆ ತಾಯಿಯ ಲಕ್ಶ್ಯವನ್ನು ಸೆಳೆಯುವುದು ಮಾತ್ರ ಉದ್ದೇಶವಲ್ಲ. ಅಮ್ಮನನ್ನು ಹತ್ತಿರಕ್ಕೆ ಕರೆದು ಆಕೆಯ ಮೊಲೆ ಹಾಲು ಕುಡಿಯುವ ದೊಡ್ಡವರ ದುಷ್ಟ ಆಸೆಯೂ ಅವರ ಮನಸ್ಸಿನಲ್ಲಿ ಇರುವಂತೆ ನನಗೆ ಕಾಣುತ್ತದೆ. ಹಾಗೆ ದೊಡ್ದವನಾದವನು ಮೊಲೆಯ ಹಾಲನ್ನು ಹೀರಿ ತಾಯಿಯನ್ನೇ ಕೊಲ್ಲಲು ಯತ್ನ ನಡೆಸುವ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ.
ಯಡಿಯೂರಪ್ಪ ಅವರು ಮಾತನಾಡುವ ರೀತಿಯನ್ನು ಗಮನಿಸಿದರೆ ನಾನು ಮೇಲೆ ಹೇಳಿದ ಮಾತುಗಳಿಗೆ ಇನ್ನಷ್ಟು ಪುಷ್ಟಿ ದೊರಕುತ್ತದೆ.
ಅವರ ಹೇಳಿಕೆಗಳ ಹಿಂದಿನ ಮನಸ್ಥಿತಿಯನ್ನು ನೋಡಿ.
೧. ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಅದು ನನ್ನ ಆಸ್ತಿ.
೨. ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಧಿಕಾರ ನನ್ನ ಬಳಿಯೇ ಇರಬೇಕು.
೩. ನಾನೇ ಕರ್ನಾಟಕದ ಅಭಿವೃದ್ಧಿ. ನನ್ನಿಂದಲೇ ಅಭಿವೃದ್ಧಿ. ನಾನು ಅಭಿವೃದ್ಧಿಯಾದರೆ ಕರ್ನಾಟಕದ ಅಭಿವೃದ್ಧಿಯಾದಂತೆ.
೪. ಸದಾನಂದ ಗೌಡರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದರಿಂದ ಅವರು ಮಾತುಕೊಟ್ಟಂತೆ ಮುಖ್ಯಮಂತ್ರಿ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಅವರ ಮನಸ್ಥಿತಿಯಲ್ಲಿ ಪ್ರಧಾನ ಅಂಶ ಎಂದರೆ ನಾನು. ನನ್ನಿಂದಲೇ ಎಲ್ಲ ಎಂಬುದು. ಇದನ್ನು ಗಮನಿಸಿದಾಗ ಮೂರನೆಯ ದರ್ಜೆಯ ರಾಜಕಾರಣಿಯೊಬ್ಬ ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದರೆ ಇಂದಿರಾ ಎಂದು ಹೇಳಿದ ಮಾತು ನೆನಪಾಗುತ್ತದೆ. ಯಡಿಯೂರಪ್ಪ ಕೂಡ ಕರ್ನಾಟಕ ಎಂದರೆ ನಾನು, ನಾನು ಎಂದರೆ ಕರ್ನಾಟಕ ಎಂದು ಅಂದುಕೊಂಡಂತೆ ಅನ್ನಿಸುತ್ತದೆ. ದೇವಕಾಂತ್ ಬರೂವಾ ಇಂದಿರಾ ಎಂದರೆ ಇಂಡಿಯಾ ಎಂಬ ಮಾತನ್ನು ಹೇಳಿದಾಗ ಇಂದಿರಾ ಗಾಂಧಿ ಈ ಬಗ್ಗೆ ಸಣ್ಣ ಪ್ರತಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಈಗ ಯಡಿಯೂರಪ್ಪ ಕೂಡ ತಾವೇ ಕರ್ನಾಟಕ ಎಂಬುದನ್ನು ನಂಬಿಕೊಂಡಂತಿದೆ. ಇದು ಹೇಗಿದೆ ಎಂದರೆ ಕೆಲವು ದೇವ ಮಾನವರು ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುವವರು ತಾವೇ ದೇವರು ಎಂದು ನಂಬಿಕೊಳ್ಳುವಂತೆ. ಹೀಗಾಗಿ ಯಡಿಯೂರಪ್ಪ ನಮ್ಮ ರಾಜಕಾರಣದ ದೇವ ಮಾನವ. ಹಾಗೆ ಅವರ ಭಟ್ಟಿಂಗಿತನಕ್ಕೆ ಮೆಚ್ಚಿರುವ ಕೆಲವು ದೈವ ಪುತ್ರರು. ದೈವತ್ವದ ಗುಣಗಳನ್ನು ಕಳೆದುಕೊಂಡ ಕೆಲವು ನಡೆದಾಡುವ ದೇವರುಗಳು ಅವರ ಈ ಭ್ರಮೆ ಎಂಬ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಭ್ರಮೆಯ ಬೆಂಕಿ ಇನ್ನಷ್ಟು ಜ್ವಾಜಲ್ಯಮಾನವಾಗಿ ಉರಿಯುವಂತೆ ಮಾಡುತ್ತಿದ್ದಾರೆ.
ಯಡಿಯೂರಪ್ಪ ಈಗ ಬರಗಾಲದ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಅವರು ಮಾಡುತ್ತಿರುವ ಘನ ಕಾರ್ಯ ಎಂದರೆ ಅಧಿಕಾರಿಗಳ ಮೇಲೆ ಧಾಳಿ. ಮುಖ್ಯಮಂತ್ರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವ ಅವರು ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಅವರು ಅಧಿಕಾರಿಗಳ ಮೇಲೆ ಧಾಳಿ ಮಾಡಿದರೂ ಅವರ ಗುರಿ ಸದಾನಂದ ಗೌಡರೇ ಎಂಬುದು ಸ್ಪಷ್ಟ.
ಸದಾನಂದ ಗೌಡರು ಮುಖ್ಯಮಂತ್ರಿಯಾದ ಮೇಲೆ ಒಬ್ಬರೆ ಒಬ್ಬ ಅಧಿಕಾರಿಯನ್ನು ಬದಲಿಸುವುದಕ್ಕೂ ಅವಕಾಶ ನೀಡದೇ ತಡೆ ಹಾಕುತ್ತಿರುವ ಯಡಿಯೂರಪ್ಪ ತಮ್ಮ ವಂದಿ ಮಾಗದರೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆಲವು ಅಪವಾದಗಳು ಇರಬಹುದಾದರೂ ಪ್ರಮುಖ ಸ್ಥಾನಗಳಲ್ಲಿ ಇರುವವರು ಯಡಿಯೂರಪ್ಪನವರಿಗೆ ಬೇಕಾದ ಅಧಿಕಾರಿಗಳೇ. ಹೀಗಿರುವಾಗ ಅವರು ಬೈಯುತ್ತಿರುವ ಅಧಿಕಾರಿಗಳು ಯಾರು ? ಈ ಅಧಿಕಾರಿಗಳ ವೈಫಲ್ಯ ಎಂದರೆ ಅವರ ಆಪ್ತ ಅಧಿಕಾರಿಗಳ ವೈಫಲ್ಯವೇ ಅಲ್ಲವೆ ? ಅಂದರೆ ಅಪ್ರತ್ಯಕ್ಷವಾಗಿ ಯಡಿಯೂರಪ್ಪನವರ ವಿಫಲ್ಯವೇ ಅಲ್ಲವೆ ?
ಪ್ರಾಯಶಃ ಯಡಿಯೂರಪ್ಪ ಇದನ್ನೆಲ್ಲ ಅರ್ಥ ಮಾಡಿಕೊಂಡಿರಲಾರರು. ಮತ್ತೆ ಮುಖ್ಯಮಂತ್ರಿಯಾಗಲು ಎಲ್ಲ ರೀತಿಯ ಯತ್ನಗಳನ್ನು ನಡೆಸುತ್ತಿರುವ ಅವರಿಗೆ ಇಂತಹ ಸೂಕ್ಷ್ಮಗಳೂ ಅರ್ಥವಾಗಿರಲಾರದು. ನಾನು ಈ ಮೊದಲು ಹೇಳಿದಂತೆ ಯಡಿಯೂರಪ್ಪ ಮನೆಯ ಅಂಗಳದಲ್ಲಿ ಕಕ್ಕಸು ಉಚ್ಚೆ ಮಾಡಿಕೊಂಡು ಅದರ ಜೊತೆ ಆಟವಾಡುತ್ತಿರುವ ಮಗು. ಹಠ ಮಾಡುವುದು ಅದರ ಗುಣ. ಆದರೆ ಈ ಮಗು ಒಳ್ಳೆಯ ಮಗುವಲ್ಲ. ಕೆಟ್ಟ ಮಗು. ಈ ಕೆಟ್ಟ ಮಗು ಮಾಡಬಾರದ್ದನ್ನೆಲ್ಲ ಮಾಡಿ, ಹೊಲಸಿನಲ್ಲೇ ಹೊರಳಾಡುತ್ತ ತಪ್ಪಾಳೆ ತಟ್ಟುತ್ತಿದೆ. ಅದಕ್ಕೆ ನಾವು ಹೇಳಬಹುದ್ದಾದ್ದೆಂದರೆ ತಟ್ಟು ತಪ್ಪಾಳೆ ಕೆಟ್ಟ ಮಗು.....!

2 comments:

Kodanda Rama Kudva said...

ನೀವು ತಿಳಿಸಿದ೦ತೆ ಎಡಿಯೂರಪ್ಪ ಹೊಲಸು ಮೈಗೆ ಮೆತ್ತಿಕೊ೦ಡ ಮಗು ಹಾಗೂ ಕೆಟ್ಟ ಮಗು ಎ೦ದು ತಿಳಿಸಿದ್ದೀರಿ. ನಾವು ಯಾವಾಗಲೂ ಮೇಲೆ ನೋಡಿ ಉಗಿದರೆ ಅದು ನಮ್ಮ ಮೇಲೇ ಬೀಳುವುದೆ೦ಬ ವಿಚಾರ ನೀವು ಮರೆತ೦ತಿದೆ. ನೀವೇ ಯಾಕೆ ನಿಮ್ಮ ಮೈ ಮೇಲೆ ಹೊಲಸು ಮೆತ್ತಿಕೊಳ್ಳುವ ಕೆಲಸ ಮಾಡುತ್ತೀರಿ. ನೀವು ಒನ್ನೊಬ್ಬರ ಬಗ್ಗೆ ಹೊಲಸು ವಿಚಾರ ಮಾತಾಡುತ್ತೀರಿ ಎ೦ದರೆ ನಿಮ್ಮ ಮೈ ಮನಸೆಲ್ಲಾ ಹೊಲಸು ತು೦ಬಿದೆ ಎ೦ದೇ ಅರ್ಥ. ಒಬ್ಬ ಸಮರ್ಥ ಮುಖ್ಯ ಮ೦ತ್ರಿ ತನ್ನ ಸ್ವ ಸಾಮರ್ಥ್ಯ ದಿ೦ದ ತನ್ನ ಪಕ್ಷವನ್ನೂ ಮುನ್ನಡಿಸಿ ಸರ್ಕಾರ ರಚನೆ ಮಾಡುವಲ್ಲಿ ಸಫಲವಾಗಿ ಮುಖ್ಯಮ೦ತ್ರಿಯಾಗಿರುವುದು ನಿಮ್ಮ ಮನಸ್ಸಿಗೆ ಯಾಕೆ ಗೋಚರವಾಗಿಲ್ಲ? ಶಡ್ಯ೦ತ್ರದಿ೦ದ ಸುಳ್ಳು ಪ್ರಮಾಣ ಮಾಡಿಸಿ ಮುಖ್ಯ ಮ೦ತ್ರಿಯಾಗಿ ಎಡಿಯೂರಪ್ಪರವರನ್ನು ಏಣಿಯನ್ನಾಗಿಸಿ ಮುಖ್ಯ ಮ೦ತ್ರಿ ಸ್ಥಾನವನ್ನು ಅಲ೦ಕರಿಸಿ ಅವರ ಮೇಲಿನ ಆಪಾದನೆ ಹೈಕೋರ್ಟ್ ತಳ್ಳಿ ಹಾಕಿ ಅವರ ಮೇಲಿನ ಎಫ಼್ ಐ ಅರ್ ರದ್ದು ಮಾಡಿದ ತಕ್ಷಣ ಪಾಮಾಣಿಕರಾಗಿ ತಾವು ಪ್ರಮಾಣ ಮಾಡಿದ೦ತೆ ಮುಖ್ಯಮ೦ತ್ರಿ ಸ್ಥಾನ ಬಿಟ್ಟು ಕೊಟ್ಟಲ್ಲಿ ಸದಾನ೦ದ ಗೌಡರಿಗೂ ಪ್ರಾಮಾಣಿಕರೆನ್ನಬಹುದು. ದಕ್ಶಿಣ ಕನ್ನಡದ ಜನರು ಪ್ರಾಮಾಣಿಕರೆ೦ಬ ಮಾತು ಸದಾನ೦ದ ಗೌಡರು ಸುಳ್ಳು ಮಾಡಿದ್ದಾರೆ. ಈಗ ಹೇಳಿ ಹೊಲಸು ಮೆತ್ತಿ ಕೊಡಿದ್ದು ಯಾರು? ನೀವು ಒಬ್ಬ ಪ್ರಾಮಾಣಿಕ ಪತ್ರಕರ್ತರಾಗಿದ್ದಲ್ಲಿ ಹಾಗೂ ಪತ್ರಕರ್ತರ ವ್ರತ್ತಿ ನಿಷ್ಟೆ ನಿಮ್ಮಲ್ಲಿದ್ದಲ್ಲಿ ಅತ್ಮಾವಲೋಕನ ಮಾಡಿ.
ಎ೦ ಕೋದ೦ಡರಾಮ ಕುಡ್ವ- ಸಿಡ್ನಿ (ಆಸ್ಟ್ರೇಲಿಯ)

Kodanda Rama Kudva said...

ನೀವು ತಿಳಿಸಿದ೦ತೆ ಎಡಿಯೂರಪ್ಪ ಹೊಲಸು ಮೈಗೆ ಮೆತ್ತಿಕೊ೦ಡ ಮಗು ಹಾಗೂ ಕೆಟ್ಟ ಮಗು ಎ೦ದು ತಿಳಿಸಿದ್ದೀರಿ. ನಾವು ಯಾವಾಗಲೂ ಮೇಲೆ ನೋಡಿ ಉಗಿದರೆ ಅದು ನಮ್ಮ ಮೇಲೇ ಬೀಳುವುದೆ೦ಬ ವಿಚಾರ ನೀವು ಮರೆತ೦ತಿದೆ. ನೀವೇ ಯಾಕೆ ನಿಮ್ಮ ಮೈ ಮೇಲೆ ಹೊಲಸು ಮೆತ್ತಿಕೊಳ್ಳುವ ಕೆಲಸ ಮಾಡುತ್ತೀರಿ. ನೀವು ಒನ್ನೊಬ್ಬರ ಬಗ್ಗೆ ಹೊಲಸು ವಿಚಾರ ಮಾತಾಡುತ್ತೀರಿ ಎ೦ದರೆ ನಿಮ್ಮ ಮೈ ಮನಸೆಲ್ಲಾ ಹೊಲಸು ತು೦ಬಿದೆ ಎ೦ದೇ ಅರ್ಥ. ಒಬ್ಬ ಸಮರ್ಥ ಮುಖ್ಯ ಮ೦ತ್ರಿ ತನ್ನ ಸ್ವ ಸಾಮರ್ಥ್ಯ ದಿ೦ದ ತನ್ನ ಪಕ್ಷವನ್ನೂ ಮುನ್ನಡಿಸಿ ಸರ್ಕಾರ ರಚನೆ ಮಾಡುವಲ್ಲಿ ಸಫಲವಾಗಿ ಮುಖ್ಯಮ೦ತ್ರಿಯಾಗಿರುವುದು ನಿಮ್ಮ ಮನಸ್ಸಿಗೆ ಯಾಕೆ ಗೋಚರವಾಗಿಲ್ಲ? ಶಡ್ಯ೦ತ್ರದಿ೦ದ ಸುಳ್ಳು ಪ್ರಮಾಣ ಮಾಡಿಸಿ ಮುಖ್ಯ ಮ೦ತ್ರಿಯಾಗಿ ಎಡಿಯೂರಪ್ಪರವರನ್ನು ಏಣಿಯನ್ನಾಗಿಸಿ ಮುಖ್ಯ ಮ೦ತ್ರಿ ಸ್ಥಾನವನ್ನು ಅಲ೦ಕರಿಸಿ ಅವರ ಮೇಲಿನ ಆಪಾದನೆ ಹೈಕೋರ್ಟ್ ತಳ್ಳಿ ಹಾಕಿ ಅವರ ಮೇಲಿನ ಎಫ಼್ ಐ ಅರ್ ರದ್ದು ಮಾಡಿದ ತಕ್ಷಣ ಪಾಮಾಣಿಕರಾಗಿ ತಾವು ಪ್ರಮಾಣ ಮಾಡಿದ೦ತೆ ಮುಖ್ಯಮ೦ತ್ರಿ ಸ್ಥಾನ ಬಿಟ್ಟು ಕೊಟ್ಟಲ್ಲಿ ಸದಾನ೦ದ ಗೌಡರಿಗೂ ಪ್ರಾಮಾಣಿಕರೆನ್ನಬಹುದು. ದಕ್ಶಿಣ ಕನ್ನಡದ ಜನರು ಪ್ರಾಮಾಣಿಕರೆ೦ಬ ಮಾತು ಸದಾನ೦ದ ಗೌಡರು ಸುಳ್ಳು ಮಾಡಿದ್ದಾರೆ. ಈಗ ಹೇಳಿ ಹೊಲಸು ಮೆತ್ತಿ ಕೊಡಿದ್ದು ಯಾರು? ನೀವು ಒಬ್ಬ ಪ್ರಾಮಾಣಿಕ ಪತ್ರಕರ್ತರಾಗಿದ್ದಲ್ಲಿ ಹಾಗೂ ಪತ್ರಕರ್ತರ ವ್ರತ್ತಿ ನಿಷ್ಟೆ ನಿಮ್ಮಲ್ಲಿದ್ದಲ್ಲಿ ಅತ್ಮಾವಲೋಕನ ಮಾಡಿ.
ಎ೦ ಕೋದ೦ಡರಾಮ ಕುಡ್ವ- ಸಿಡ್ನಿ (ಆಸ್ಟ್ರೇಲಿಯ)