ನಾನು ಮೂಲಭೂತವಾಗಿ ಮುಜುಗರದ ಮನುಷ್ಯ। ಜನರ ನಡುವೆ ಇರುವುದೆಂದರೆ ನನಗೆ ಸಮಸ್ಯೆಯೇ। ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಜನರ ನಡುವೆ ಇರಬೇಕಾಗುತ್ತದೆ। ಮೊನ್ನೆ ಆಗಿದ್ದು ಹಾಗೆ। ಮಂಗಳೂರಿನ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಂಘ ನನ್ನನ್ನು ಅವರ ರಾಜ್ಯ ಮಟ್ಟದ ವಿಚಾರಗೋಷ್ಟಿಗೆ ಅಹ್ವಾನಿಸಿದಾಗ ನಾನು ಮಂಗಳೂರಿಗೆ ಹೊರಟು ನಿಂತೆ। ಈ ತೀರ್ಮಾನಕ್ಕೆ ಬಹುಮುಖ್ಯ ಕಾರಣ ಮುಸ್ಲಿಮ್ ಒಳ ಜಗತ್ತನ್ನು ತಿಳಿದುಕೊಳ್ಳಬೇಕು ಎಂಬ ನನ್ನ ಹಂಬಲ। ಮುಸ್ಲಿಮ್ ಜಗತ್ತನ್ನು ಸಾಹಿತ್ಯದ ಮೂಲಕ ತಿಳಿದುಕೊಂಡಿದ್ದರು ಅದರ ನೇರ ಸಂಪರ್ಕ ಇಲ್ಲದ ನನಗೆ ಅವರನ್ನು ನಾವು ನೆನಪು ಮಾಡಿಕೊಳ್ಳುವುದು ಬುರ್ಖಾದ ಮೂಲಕ। ಬುರ್ಖಾದ ಒಳಗಿನ ಮುಖಗಳು ನಮಗೆ ಕಾಣುವುದಿಲ್ಲ। ನಾವು ಒಳಗಿರುವ ಮುಖ, ಆ ಮುಖದಲ್ಲಿ ಇರುವ ಭಾವ ಎಂತಹದಿರಬಹುದು ? ಅಲ್ಲಿ ದುಃಖ ಇರಬಹುದೆ ? ನೋವು ಇರಬಹುದೆ ? ಅಸಹಾಯಕತೆ ಇರಬಹುದೆ ? ಅಥವಾ ನಮ್ಮಲ್ಲ ಕಲ್ಪನೆಗಳು ಅಲ್ಲಿ ಹುಸಿಯಾಗಿರಬಹುದೆ ? ಈ ಪ್ರಶ್ನೆಗಳು ನನ್ನನ್ನು ಕಾಡಿದರೂ ಇದ್ಯಾವವೂ ನನ್ನ ಕುತೂಹಲವನ್ನು ತಣಿಸುವದಾಗಿರಲಿಲ್ಲ॥
ಈ ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಂದಾಗ ನನಗೆ ಎಲ್ಲಿಲ್ಲದ ಮುಜುಗರದ ಭಾವ। ಯಾಕೆಂದರೆ ಅಲ್ಲಿ ಅಹ್ವಾನಿತರಾದ ಇಬ್ಬರು ಮುಸ್ಲೀಮೇತರರು ಎಂದರೆ, ನಾನು ಮತ್ತು ಪತ್ರಕರ್ತ ರವೀಂದ್ರ ರೇಷ್ಮೆ ಮಾತ್ರ। ಮುಸ್ಲಿಮ್ ಜನಾಂಗದ ಸಮಸ್ಯೆ, ಅವರು ಎದುರಿಸುತ್ತಿರುವ ದ್ವಂದ್ವಗಳು, ಮುಸ್ಲಿಮ್ ಪತ್ರಕರ್ತರ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಮಾವೇಶದಲ್ಲಿ ಹೊರಗಿನವರಾದ ನಮಗೇನು ಕೆಲಸ ? ಸಂಘಟಕರು ನಮಗೆ ಮಾತನಾಡಲು ವಿಷಯವೊಂದನ್ನು ನೀಡಿದ್ದರು। ಅದೆಂದರೆ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಸಾರ್ವಜನಿಕರ ಜವಾಬ್ದಾರಿ।
ಕಾರ್ಯಕ್ರಮ ನಡೆಯುತ್ತಿದ್ದ ಮಂಗಳೂರಿನ ಪುರಭವನಕ್ಕೆ ಹೋದಾಗ ನನಗೆ ಅಲ್ಲಿ ಕಂಡಿದ್ದು ಕನ್ನಡ ವಾತಾವರಣ। ಆ ಕಾರ್ಯಕ್ರಮ ನಡೆದಿದ್ದು, ಸಂಪೂರ್ಣವಾಗಿ ಕನ್ನಡಲ್ಲಿ। ಭಾಷೆ ಎನ್ನುವುದರ ಬಗ್ಗೆ ಉಗ್ರ ಹೋರಾಟಗಾರರಂತೆ ಅತಿ ಭಾವುಕತೆಯಿಂದ ನೋಡುವ ಅಗತ್ಯ ನನಗಿಲ್ಲ। ಆದರೆ ಭಾಷೆ, ನಮ್ಮನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ, ಅದೇ ಸಮಯದಲ್ಲಿ ಬೇರ್ಪಡಿಸುವ ಕೆಲಸವನ್ನೂ ಮಾಡುತ್ತದೆ। ಉರ್ದುವಿನಂತಹ ಒಂದು ಶ್ರೀಮಂತ ಭಾಷೆ ಮುಸ್ಲಿಮ್ ರ ಭಾಷೆ ಎಂಬಂತಾಗಿದೆ। ಇದರಿಂದಾಗಿ ಉರ್ದು ಕೂಡ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ। ಜೊತೆಗೆ ಕನ್ನಡ ನಾಡಿನಲ್ಲಿ ಇರುವ ಮುಸ್ಲಿಮ್ ರು ಇಲ್ಲಿನ ಭಾಷೆಯನ್ನು ಮಾತನಾಡದೇ ಬೇರೆ ಭಾಷೆ ಮಾತನಾಡುವುದೂ ಕೂಡ ಅವರನ್ನು ಪ್ರತ್ಯೇಕವಾಗಿ ನೋಡುವುದಕ್ಕೆ ಒಂದು ಕಾರಣ। ಅದೇ ಮುಸ್ಲಿಮರು ಕನ್ನಡ ಮಾತನಾಡಿದರೆ ಪ್ರತ್ಯೇಕತೆಯ ಒಂದು ಕಂದಕ ಮುಚ್ಚಿದಂತೆಯೇ।
ಭಾಷೆ ಮತ್ತು ಧರ್ಮ ಒಂದೇ ನೆಲೆಯಲ್ಲಿ ಕೆಲಸ ಮಾಡುತ್ತವೆ। ಭಾಷೆ ಇವ ನಮ್ಮವ ಇವ ನಮ್ಮವ ಎಂಬ ಭಾವವನ್ನು ಮೂಡಿಸಿದಂತೆಯೇ ಧರ್ಮ ಕೂಡ ಇದೆ ಕೆಲಸ ಮಾಡುತ್ತದೆ। ಆದರೆ ಭಾಷೆ ಸಮುದಾಯದ ಜೊತೆಗಿನ ಸಂವಹನ ಕ್ರಿಯೆಯಾಗಿರುವುದರಿಂದ ಅದಕ್ಕೆ ಸಾಮುದಾಯಿಕವಾದ ಆಯಾಮ ಇದೆ। ಧರ್ಮ ಎನ್ನುವುದು ಹಾಗಲ್ಲ। ಅದು ವೈಯಕ್ತಿಕ ನೆಲೆಗಟ್ಟಿನಲ್ಲಿಯೇ ನಡೆಯಬೇಕಾದದ್ದು। ಧರ್ಮ ಎನ್ನುವುದು ಸಾಮುದಾಯಿಕ ಮತ್ತು ಬಹಿರಂಗ ರೂಪ ಪಡೆದಾಗ ಅದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ। ಅಲ್ಲಿ ನಂಬಿಕೆ ಮತ್ತು ಶ್ರೇಷ್ಠತೆಯ ಪ್ರಶ್ನೆ ಉದ್ಭವವಾಗುತ್ತದೆ। ಹಾಗೆ ಭಿನ್ನಾಭಿಪ್ರಾಯ ಮತ್ತು ಹಿಂಸೆ ಕೂಡ ತಲೆ ಎತ್ತಬಹುದು।
ಮಂಗಳೂರಿನ ಮುಸ್ಲಿಂರು ಕನ್ನಡವನ್ನು ತಮ್ಮ ಮಾತೃ ಭಾಷೆಯಂದೇ ಒಪ್ಪಿಕೊಂಡಿರುವುದು, ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನಡೆಸಿದ್ದು, ನನಗೆ ಸಂತೋಷವನ್ನು ಉಂಟು ಮಾಡಿದ್ದಕ್ಕೆ ಕಾರಣವಿದೆ। ಕನ್ನಡ ಭಾಷೆಯೇ ಇಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡುತ್ತಿದೆ ಎಂಬುದೇ ಈ ಕಾರಣ।
ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯಯಲ್ಲಿ ಮುಸ್ಲಿಮ್ ಹೆಂಗಸರು ಯುವತಿಯರು ಪಾಲ್ಗೊಂಡಿದ್ದರು। ಬುರ್ಖಾ ಧರಿಸಿದ್ದ ಅವರ ಮುಖಗಳು ಕಾಣುತ್ತಿರಲಿಲ್ಲ। ಮನುಷ್ಯನ ಮುಖ ನೋಡದೇ ಇರುವುದು ನನಗಂತೂ ಅಸಹನೀಯ। ನಾನು ಮುಖವನ್ನು ನೋಡಲು ಬಯಸುವುದು ಕಣ್ಣುಗಳನ್ನು ನೋಡುವುದಕ್ಕಾಗಿ। ಕಣ್ಣು, ಮನುಷ್ಯನ ಅಂಗಗಳಲ್ಲೇ ಹೆಚ್ಚು ಪ್ರಾಮಾಣಿಕವಾದ ಅಂಗ। ಅದು ಸುಳ್ಳು ಹೇಳುವುದಿಲ್ಲ। ಸುಳ್ಳನ್ನು ಬಚ್ಚಿಟ್ಟುಕೊಂಡು ನಾಟಕ ಮಾಡಲು ಕಣ್ನಿಗೆ ಬಾರದು। ಹೀಗಾಗಿ ಕಣ್ಣುಗಳನ್ನು ನೋಡುವುದು ನನಗೆ ಇಷ್ಠ। ಕಣ್ಣುಗಳ ಮೂಲಕ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಮುಚ್ಚಿಟ್ಟುಕೊಳ್ಳುವುದು ನನಗೆ ಸಾಧ್ಯವಾಗುವುದಿಲ್ಲ।
ಮಂಗಳೂರಿನ ಮುಸ್ಲಿಮ್ ಸಮಾವೇಶದಲ್ಲಿ ಸುಮಾರು ಅರ್ಧ ಗಂಟೆಯ ಕಾಲ ನಾನು ಮಾತನಾಡಿದೆ। ಭಾರತದ ರಾಜಕಾರಣದ ವೈರುಧ್ಯಗಳನ್ನು ತೆರೆದಿಡಲು ಯತ್ನಿಸಿದೆ। ಭಾರತದಲ್ಲಿ ನಿಜವಾದ ಅರ್ಥದಲ್ಲಿ ರಾಜಕೀಯ ಪಕ್ಷಗಳೇ ಇಲ್ಲ। ಕಾಂಗ್ರೆಸ್ ಪಕ್ಷ ಮೂಲಭೂತವಾಗಿ ಒಂದು ಸಂಘಟನೆ। ಅದಕ್ಕೆ ಪಕ್ಷದ ರೂಪ ಬಂದಿದ್ದು, ಸ್ವಾತಂತ್ರ್ಯ ಬಂದ ಮೇಲೆ। ಹೀಗೆ ಪಕ್ಷದ ರೂಪ ಬರುವ ಕಾಲಕ್ಕೆ, ಕಾಂಗ್ರೆಸ್ ಮಹಾತ್ಮಾ ಗಾಂಧಿಯನ್ನು ಹೊರಹಾಕಿ, ನೆಹರೂ ಅವರ ತೆಕ್ಕೆಗೆ ಬಿದ್ದಾಗಿತ್ತು। ನೆಹರೂ ಮತ್ತು ಅವರ ಸುತ್ತಮುತ್ತ ಇದ್ದ ನಾಯಕರು ಸ್ವಾತಂತ್ರ್ಯ ಹೋರಾಟದ ವಿಜಯದ ಗುಂಗಿನಲ್ಲಿ ಕಾಲ ಕಳೆದರು। ಅದರ ನಂತರ ಹಲವಾರು ಗಾಂಧಿಗಳು ಬಂದು ಹೋದರು। ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಕುಸಿಯುತ್ತಲೇ ಹೋಯಿತು। ಸಮುದಾಯದ ಸಂಘಟನೆಯ ಮೂಲಕ ಒಂದು ಚಳವಳಿಯ ಮೂಲಕ ಹುಟ್ಟಿದ ಕಾಂಗ್ರೆಸ್ ಒಂದು ಕುಟುಂಬದ ಪದತಲದಲ್ಲಿ ಬಿದ್ದು ಒದ್ದಾಡತೊಡಗಿತು। ಅದಕ್ಕೆ ಸಂಘಟನೆಯ ಶಕ್ತಿಯೂ ಉಳಿಯಲಿಲ್ಲ, ಪಕ್ಷ ರಾಜಕಾರಣದ ಬದ್ಧತೆಯೂ ಬರಲಿಲ್ಲ॥ ಹಾಗೆ ಬಿಜೆಪಿ ಎಂಬ ಸಂಘ ಪರಿವಾರದ ಪಕ್ಷ ಮತ್ತು ದೇವೇಗೌಡರ ಕುಟುಂಬ ಪಕ್ಷದ ಬಗ್ಗೆಯೂ ನಾನು ಮಾತನಾಡಿದೆ।
ಜನಸಾಮಾನ್ಯರ ಹೊಣೆಗಾರಿಕೆಯ ಬಗ್ಗೆ ಮಾತನಾಡುವಕ್ಕಿಂತ ನಮ್ಮ ನಮ್ಮ ಹೊಣೆಗಾರಿಕೆಯ ಬಗ್ಗೆ ಮಾತನಾಡುವುದು ಸೂಕ್ತ ಎಂದು ನಂಬಿದವ ನಾನು। ಯಾವುದೇ ಬದಲಾವಣೆ, ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಬೇಕು। ಹೀಗೆ ಒಬ್ಬೊಬ್ಬರಲ್ಲಿ ಆಗುವ ಬದಲಾವಣೆ ಒಟ್ಟಾರೆ ಬದಲಾವಣೆಗೆ ಕಾರಣವಾಗುತ್ತದೆ। ಇಂಥಹ ಸ್ಥಿತಿಯಲ್ಲಿ ನಾವು ಹತಾಶರಾಗಬೇಕಿಲ್ಲ ಎಂದೆ।
ನಾನು ಮಾತನಾಡುವಾಗ ಕೇಳುತ್ತಿದ್ದವರ ಮನಸ್ಸಿನಲ್ಲಿ ಏನಿತ್ತು ಎಂಬುದು ನನಗೆ ತಿಳಿಯಲಿಲ್ಲ। ಅವರ ಬುರ್ಖಾದ ಹಿಂದಿರುವ ಕಣ್ಣುಗಳಲ್ಲಿ ಯಾವ ಭಾವವಿರಬಹುದು ಎಂಬುದು ನನಗೆ ತಿಳಿಯಲಿಲ್ಲ। ಕಣ್ಣುಗಳು ಮತ್ತು ಮುಖಗಳೇ ಮರೆಯಾಗಿರುವುದು ನನ್ನನ್ನು ಕಾಡತೊಡಗಿತು। ಇವತ್ತು ನಾವು ಬುರ್ಖಾಗಳ ಅಡಿಯಲ್ಲಿ ಅಡಗಿಕೊಳ್ಳುತ್ತಿದ್ದೇವೆ ಎಂದು ಅನ್ನಿಸಿತು। ಮುಖ ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿರದೇ ಅದು ಸರ್ವವ್ಯಾಪಿ ಎಂದು ಅನ್ನಿಸಿತು। ನಾನು ಮತ್ತೆ ಅಸಮಾಧಾನದ ನಿಟ್ಟುಸಿರು ಬಿಟ್ಟೆ.
No comments:
Post a Comment