Saturday, July 19, 2008

ಬರೆಯುವುದೆಂದರೆ..........

ಬಹಳ ದಿನಗಳಿಂದ ನಾನು ಏನೂ ಬರೆಯಲಿಲ್ಲ। ಬರೆಯುವುದಕ್ಕೆ ಏನೂ ಇರಲಿಲ್ಲವಾ ? ಗೊತ್ತಿಲ್ಲ। ಕಚೇರಿಯ ಕೆಲಸದ ನಡುವೆ ಬರೆಯುವುದಕ್ಕೆ ಮನಸ್ಸಾಗಲಿಲ್ಲ ಎನ್ನುವುದು ಹೆಚ್ಚು ಸರಿ। ಬರೆಯುವುದು ಎಂದರೆ ಹಾಗೆ। ಮನಸ್ಸಿನ ಯಾವುದೋ ಮೂಲೆಯಲ್ಲಿ ಕುಳಿತ ವಿಚಾರ ಮಗು ಹೊಟ್ಟೆಯಲ್ಲಿ ಬೆಳೆದ ಹಾಗೆ ಬೆಳೆಯಬೇಕು। ಹಾಗೆ ಅದು ಹೊರ ಬರುವುದಕ್ಕೆ ಸಿದ್ಧವಾಗಬೇಕು। ಕೆಲವೊಮ್ಮೆ ನಾನು ಹೇಳುವುದಕ್ಕೆ ಏನು ಇಲ್ಲ ಅನ್ನಿಸಿಬಿಡುತ್ತದೆ। ಆಗ ಹೇಳುವುದರಲ್ಲಿ ಅರ್ಥವಿಲ್ಲ। ಜೊತೆಗೆ ಬರೆಯುವುದು ಇದೆಯಲ್ಲ, ಅದು ಬೇರೆಯವರಿಗಾಗಿ ಹೇಳುವುದು ಎಂದು ನಾನು ಅಂದುಕೊಂಡಿಲ್ಲ । ಬರೆಯುವುದು ಎಂದರೆ ನಮ್ಮೊಡನೆ ನಾವು ಮಾತನಾಡಿಕೊಳ್ಳುವುದು। ನಾವು ಯಾವಾಗ ಬೇರೆಯವರಿಗಾಗಿ ಬರೆಯುತ್ತೇವೆ ಎಂದು ಅಂದುಕೊಳ್ಳುತ್ತೇವೆಯೋ ಆಗ ನಮ್ಮ ಬರವಣಿಗೆ ಪ್ರದರ್ಶನ ಪ್ರಿಯತೆಯಿಂದ ಸಾಯುತ್ತದೆ। ಸತ್ಯ ಎಲ್ಲಿಯೋ ಅಡಗಿ ಕುಳಿತುಕೊಂಡು ಬಿಡುತ್ತದೆ। ಆದರೆ ನಮ್ಮ ಜೊತೆಗೆ ನಾವು ಮಾತನಾಡಿಕೊಳ್ಳುವುದು ಹಾಗಲ್ಲ। ಅಲ್ಲಿ ನಡೆಯುವುದು ಸತ್ಯದ ಜೊತೆಗಿನ ಮುಖಾಮುಖಿ। ಸತ್ಯವನ್ನು ಹುಡುಕುವ ನಿರಂತರ ಯತ್ನ।
ಬಹಳಷ್ಟು ಜನ ತಮಗಾಗಿ ತಾವು ಬರೆಯುವುದಿಲ್ಲ। ಬೇರೆಯವರಿಗಾಗಿ ಬರೆಯುತ್ತಾರೆ। ಬೇರೆಯವರ ಪ್ರಶಂಸೆಗಾಗಿ ಬರೆಯುತ್ತಾರೆ। ನಾನು ಎಷ್ಟು ರುಚಿಕಟ್ಟಾಗಿ ಬರೆದಿದ್ದೀನಿ ಗೊತ್ತಾ ಎಂದು ಕೇಳುವವರನ್ನು ನಾನು ನೋಡಿದ್ದೇನೆ। ಬರೆವಣಿಗೆಯನ್ನು ರಚಿಕಟ್ಟಾಗಿ ಮಾಡಲು ಅದು ಅಡುಗೆಯಾ ? ಅಲ್ಲ। ಇಂತಹ ಮಾತುಗಳು ಬರವಣಿಗೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಹುದು। ಬರವಣಿಗೆಯನ್ನ ಒಂದು ಮಾರಾಟದ ವಸ್ತುವನ್ನಾಗಿ ಮಾಡುವುದನ್ನು ನಾನು ಒಪ್ಪಲಾರೆ। ಆದರೆ ಈಗ ಆಗುತ್ತಿರುವುದು ಅದೇ।
ಬರೆಯುವವನಿಗೆ ಒಂದು ಮನಸ್ಥಿತಿ ಬೇಕು। ಅದು ಧ್ಯಾನಸ್ಥ ಸ್ಥಿತಿ। ಎಲ್ಲವನ್ನು ಮುಕ್ತ ಮನಸ್ಸಿನಿಂದ ನೋಡುವ ಸ್ಥಿತಿ। ಏನೇ ಇರಲಿ ನಾನು ಬರೆಯುತ್ತೇನೆ। ನಾನು ನನ್ನ ಜೊತೆ ಮಾತನಾಡುತ್ತೇನೆ। ನನ್ನ ಜೊತೆಗೆ ನಾನು ಆಡುವ ಮಾತುಗಳು ನಿಮಗೂ ಕೇಳುತ್ತವೆ.

3 comments:

ಆಲಾಪಿನಿ said...
This comment has been removed by the author.
ಆಲಾಪಿನಿ said...

ಸರ್‌. ಖಂಡತಿ ಬರಿರಿ. ನಾವು ಓದ್ತೀವಿ.... ನಿಮ್ಮ ಮಗುವನ್ನ. . .

Chamaraj Savadi said...

xxಸರ್‍, ಮನಸ್ಸಿನೊಳಗಿನ ಮಾತೇ ಬರಹ ಎಂಬ ವ್ಯಾಖ್ಯೆ ಹಿಡಿಸಿತು. ಎಷ್ಟೋ ಸಾರಿ ನಾವು ಅಂದುಕೊಂಡಿದ್ದೇ ಬರವಣಿಗೆ ರೂಪಕ್ಕೆ ಬಂದು ಸೊಗಸಾಗಿ ಕಾಣುತ್ತದೆ. ನಮಗೆ ಹೇಳಿಕೊಂಡಿದ್ದು ಇತರರಿಗೂ ಆಪ್ತವಾಗುವುದು ಬಹುಶಃ ಇದೇ ಕಾರಣಕ್ಕೆ ಇರಬೇಕು. ಇಲ್ಲಿ ನನಗೆ ಸರ್ವಜ್ಞನ ’ತನ್ನಂತೆ ಪರರ ಬಗೆದೊಡೆ...’ ಎಂಬ ಮಾತು ನೆನಪಾಗುತ್ತದೆ. ಮನುಷ್ಯನ ಮೂಲ ಅನಿಸಿಕೆಗಳು ಒಂದೇ ಆಗಿರುತ್ತವೆ. ಅದಕ್ಕೆಂದೇ ನೈಜತೆ ಮನಸ್ಸು ತಟ್ಟುತ್ತದೆ.

ನಿಮ್ಮ ಬರವಣಿಗೆ, ಮಾತುಗಳು ಹಳೆಯದನ್ನು ಮತ್ತೆ ತಾಜಾ ಮಾಡುತ್ತವೆ. ಹೊಸ ವಿಚಾರಗಳನ್ನು ತಿಳಿಸುತ್ತವೆ. ನನಗನಿಸುತ್ತದೆ, ನೀವು ಪತ್ರಕರ್ತರಾಗುವುದಕ್ಕಿಂತ ಪ್ರಾಧ್ಯಾಪಕರಾಗಿದ್ದರೆ ಒಳ್ಳೆಯದಿತ್ತು. ಪ್ರತಿ ವರ್ಷ ತಾಜಾ ಮನಸ್ಸುಗಳು ಸಿಗುತ್ತಿದ್ದವು.

ದಯವಿಟ್ಟು ಬರೆಯಿರಿ ಸರ್‌.

- ಚಾಮರಾಜ ಸವಡಿ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...