Wednesday, July 23, 2008

ಹೀಗೊಂದು ಕಥೆ, ಅದರೆ ಅಲ್ಲ.............!!

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆ ದಿನಗಳಲ್ಲಿ ನನಗೆ ಸುತ್ತುವುದೊಂದು ಹವ್ಯಾಸ. ವರ್ಷದಲ್ಲಿ ಒಂದೆರಡು ತಿಂಗಳು ನಾನು ಕರ್ನಾಟಕದಿಂದ ನಾಪತ್ತೆಯಾಗುತ್ತಿದ್ದೆ. ಕೈಯಲ್ಲಿದ್ದ ಹಣ ಮುಗಿದ ಮೇಲೆ ಬೆಂಗಳೂರಿಗೆ ವಾಪಸಾಗುತ್ತಿದ್ದೆ. ಹೀಗೆ ಒಮ್ಮೆ ನಾನು ಹೋಗಿದ್ದು ನೇಪಾಳಕ್ಕೆ. ಉತ್ತರ ಪ್ರದೇಶವನ್ನು ಸುತ್ತಿ ಹಿಮಾಲಯ ಕಣಿವೆಯ ಮೂಲಕ ಕಠ್ಮಂಡೊಕ್ಕೆ ಹೋದವನು ನಾನು. ಹೀಗೆ ಹೋದ ಸಂದರ್ಭಗಳಲ್ಲಿ ಚಿತ್ರ ವಿಚಿತ್ರ ಜನರನ್ನು ಭೇಟಿ ಮಾಡಿ ಮಾತನಾಡುವುದು ನನ್ನ ದಿನಚರಿಯಾಗಿತ್ತು. ನನ್ನ ನೇಪಾಳದ ಭೇಟಿಯ ಸಂದರ್ಭದಲ್ಲೂ ನಾನು ಹುಡುಕುತ್ತ ಹೊರಟಿದ್ದು ಇಂತಹ ಚಿತ್ರ ವಿಚಿತ್ರ ಜನರನ್ನೇ.
ಬಹಳಷ್ಟು ಜನರಿಗೆ ಹಿಮಾಲಯ ಎಂದರೆ ಯಾವ ಭಾವನೆ ಬರುತ್ತದೆಯೋ ಗೊತ್ತಿಲ್ಲ. ಆದರೆ ಹಿಮಾಲಯ ಎಂದರೆ ನಮ್ಮಲ್ಲೆರ ಮನಸ್ಸಿನ ಹಾಗೆ . ಅಲ್ಲಿ ಹೊರಗೆ ಕಾಣುವುದಕ್ಕಿಂತ ಕಾಣದಿರುವುದೇ ಹೆಚ್ಚು. ನಾನು ಕಠ್ಮಂಡೊದಲ್ಲಿ ಒಂದು ವಾರವಿದ್ದೆ. ಅಲ್ಲಿಂದ ನಾನು ಹೊರಟಿದ್ದು ಪೊಕಾರೋ ಎಂಬ ಭಾರತ ಚೀನಾ ಗಡಿಯ ಸಮೀಪ ಇರುವ ಹಳ್ಲಿಯೊಂದಕ್ಕೆ.
ಅದು ಹಳ್ಲಿ ಎಂದರೆ ಅಂತಹ ಹಳ್ಳಿ ಏನೋ ಅಲ್ಲ. ಕೆಲವೇ ಕೆಲವು ಮನೆಗಳು. ಒಂದಿಷ್ಟು ಅಂಗಡಿಗಳು. ಅಷ್ಟೆ. ಆ ಊರಿನ ಹೊರ ವಲಯದಲ್ಲಿ ನಾನು ಭೇಟಿ ಮಾಡಿದ್ದು ಆ ವಿಚಿತ್ರ ವ್ಯಕ್ತಿಯನ್ನ. ಆತ ೯೦ ರ ಗಡಿ ದಾಟಿದವನಂತಿದ್ದ. ಮುಖದ ಮೇಲೆ ಮಾಸದ ನಗೆ. ತಲೆಯ ತುಂಬ ಬಿಳಿಯ ಕೂದಲು. ಬಿಳಿಯ ಬಟ್ಟೆ ಧರಿಸಿದ್ದ ಆತ. ನಾನು ಅವನನ್ನೆ ನೋಡುತ್ತ ನಿಂತಿದ್ದ ಹಾಗೆ ಹಿಂದಿಯಲ್ಲಿ ಆತ ಹೇಳಿದ.
"ಸತ್ಯ ಮತ್ತು ಸುಳ್ಳಿನ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಸತ್ಯ ಎಂದುಕೊಂಡಿರುವುದೆಲ್ಲ ಸತ್ಯವಲ್ಲ. ಸುಳ್ಳು ಎಂದುಕೊಂಡಿರುವುದು ಸುಳ್ಳಲ್ಲ"
ಈ ಮಾತು ಕೇಳಿದ ನಾನು ನೀವು ಏನನ್ನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ.
"ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇಲ್ಲ. ಎರಡೂ ಒಂದೇ. ನೀವು ವಾಸ್ತವ ಎಂದುಕೊಂದಿದ್ದು ಭ್ರಮೆ. ಭ್ರಮೆ ಎಂದುಕೊಂಡಿದ್ದು ವಾಸ್ತವ."
ಇದ್ಯಾಕೋ ಒಂದಕ್ಕೊಂದು ತಾಳೆಯಾಗದಂತೆ ಈತ ಮಾತನಾಡುತ್ತಿದ್ದಾನೆ ಎಂದು ಅನ್ನಿಸತೊಡಗಿತ್ತು. ಆದರೆ ಅವನ ಮುಖದಲ್ಲಿ ಇರುವ ಆಕರ್ಷಣೆ ಮತ್ತು ಒಂದು ರೀತಿಯ ಸೆಳೆತದಿಂದ ತಪ್ಪಿಸಿಕೊಳ್ಳುವುದು ಕಷ್ಟ ಅನ್ನಿಸತೊಡಗಿತು.
"ಇದು ಹಿಮಾಲಯ ಯಾಕೆ ಗೊತ್ತಾ ? ಇದು ಹಿಮಾಲಯ ಎಂದು ಹಿಂದಿನವರು ಕರೆದಿದ್ದರಿಂದ ನೀವು ಹಿಮಾಲಯ ಎಂದುಕೊಂಡಿದ್ದೀರಿ. ಇದನ್ನು ಬೇರೆ ಹೆಸರಿನಿಂದ ಕರೆದಿದ್ದರೆ, ಅದನ್ನೇ ನೀವು ಕರೆಯುತ್ತಿದ್ದೀರಿ. ಅಂದರೆ ಹಸರೇ ವಸ್ತುವಲ್ಲ. ಹೆಸರು ವಸ್ತುವನ್ನು ಗುರುತಿಸುವ ಸಾಧನ ಮಾತ್ರ. ಆದರೆ ನೀವೆಲ್ಲ ಹೆಸರನ್ನೇ ವಸ್ತು ಎಂದುಕೊಳ್ಳುತ್ತೀರಿ. ಉದಾಹರಣೆಗೆ ನಿಮ್ಮ ಹೆಸರು ಏನು ಹೇಳಿ ?"
ನಾನು ನನ್ನ ಹೆಸರು ಹೇಳಿದೆ.
"ಈಗ ನೀವ್ಉ ಯಾರು ಎಂದು ಪ್ರಶ್ನಿಸಿದರೆ ನಿಮ್ಮ ಹೆಸರನ್ನು ನೀವು ಹೇಳುತ್ತೀರಿ. ಆದರೆ ಅದು ನಿಮ್ಮ ಹೆಸರು ಮಾತ್ರ, ಅದೇ ನೀವಲ್ಲ. ನಿಮ್ಮ ಹೆಸರು ಎಂದು ನೀವು, ಈ ಜಗತ್ತು ನಂಬಿರುವುದರಿಂದ ಒಂದು ಅರ್ಥದಲ್ಲಿ ಅದು ನಿಜ. ಆದರೆ, ನಿಜ್ವಾಗಿ ಹೇಳುವುದಾದರೆ ಹೆಸರು ನೀವಲ್ಲವೇ ಅಲ್ಲ. "
ನಾನು ಯಾವ ಪ್ರಶ್ನೆಯನ್ನು ಕೇಳದೇ ಅವರು ಹೇಳುತ್ತಿದ್ದುದನ್ನೇ ಕೇಳುತ್ತಿದ್ದೆ. ಆದರೆ ಇವರು ಯಾರು ಎಂದು ತಿಳಿದುಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ಅವರ ಹೆಸರನ್ನು ಕೇಳಬೇಕು ಎಂದು ಬಾಯಿ ತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಹೇಳತೊಡಗಿದರು.
"ನನಗೆ ನನ್ನ ಹೆಸರು ಮುಖ್ಯವಲ್ಲ. ಯಾಕೆಂದರೆ ಹೆಸರು ನಾನಲ್ಲ. ಆದರೆ ನಿಮಗೆ ಹೆಸರು ಮುಖ್ಯ. ಯಾಕೆಂದರೆ ಹೆಸರನ್ನ್ಜು ಬಿಟ್ಟು ವ್ಯಕ್ತಿಯನ್ನು ಗುರುತಿಸುವ ಮಟ್ಟಕ್ಕೆ ನೀವು ಏರಿಲ್ಲ. ನಿಮಗೆ ಇರುವ ಕುತೂಹಲ ಇರುವ ಕಾರಣಕ್ಕೆ ಹೇಳುತ್ತೇನೆ. ಸುಕೋಮಲ ಸ್ವಾಮಿ ಅಂತ ನನ್ನ ಹೆಸರು "
ಅವರು ಅಷ್ಟೆ. ಹೆಸರಿಗೆ ತಕ್ಕ ಹಾಗೆ ಸುಕೋಮಲ. ಮಾತಿನಲ್ಲಿ ಅದೆಂತಹದೋ ಸೆಳೆತ. ಅವರು ಹಾಗೆ ಮಾತನಾಡುತ್ತಲೇ ಇದ್ದರು.
"ಇಂದಿಗೆ ಇಷ್ಟೇ ಸಾಕು. ನಾಳೆ ಸಾಧ್ಯವಾದರೆ ಮಾತನಾಡೋಣ "
ಹೀಗೆಂದವರೇ ಸರಸರನೇ ಅಲ್ಲಿಂದ ಹೊರಟರು. ಹಾಗೆ ಬಿಳಿಯ ಹಾಲಿನ ಹಾಗಿದ್ದ ಮೋಡಗಳ ನಡುವೆ ಹೆಜ್ಜೆ ಹಾಕುತ್ತಿದ್ದಂತೆ ಕಂಡು ಬಂತು. ನಾನು ಅವರು ಹೋದ ಮೇಲೆ ಬಹಳಷು ಹೊತ್ತು ಅಲ್ಲಿಯೇ ನಿಂತಿದ್ದೆ. ಕೊನೆಗೆ ಹಾಗೆ ಹೆಜ್ಜೆ ಹಾಕುತ್ತ ಪೊಕಾರೋ ಎಂಬ ಹಳ್ಳಿಯತ್ತ ಬಂದೆ. ಆಗಲೇ ಹೊಟ್ಟೆ ತಾಳ ಹಾಕುತ್ತಿತ್ತು. ತಿನ್ನುವುದಕ್ಕೆ ಏನಾದರೂ ಸಿಗಬಹುದಾ ಎಂದು ಹುಡುಕುತ್ತ ಆ ಹಳ್ಳಿಯ ತಟ್ಟಿ ಬಿಡಾರದಂತಹ ಹೋಟೆಲ್ಲ್ಲಿಗೆ ಬಂದೆ. ಆಗಲೂ ನನ್ನ ತಲೆಯಲ್ಲಿ ಕೊರೆಯುತ್ತಿದ್ದುದು ಸುಕೋಮಲ ಸ್ವಾಮಿ ಹೇಳಿದ ಮಾತುಗಳು. ಈ ಚಳಿಯಲ್ಲಿ ಈ ಮನುಷ್ಯ ಎಲ್ಲಿ ಹೋಗಿರಬಹುದು ಎಂದು ಯೋಚಿಸುತ್ತ ಕುಳಿತ್ತಿದ್ದವನ ಮುಂದೆ ಊಟದ ತಟ್ಟೆ ಬಂತು.
ಊಟವನ್ನು ತಂದಿಟ್ಟ ಹೆಣ್ಣು ಮಗಳನ್ನು ಪ್ರಶ್ನಿಸಿದೆ.
ಸುಕೋಮಲ ಸ್ವಾಮಿ ಎಷ್ಟು ವರ್ಷದಿಂದ ಈ ಪ್ರದೇಶದಲ್ಲಿದ್ದಾರೆ ?
ಆಕೆ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದಳು.
"ಸುಕೋಮಲ ಸ್ವಾಮಿಗಳಾ ? ಅವರು ತೀರಿಹೋಗಿ ಹಲವು ವರ್ಷಗಳೇ ಆಗಿರಬಹುದು. ನನ್ನ ಅಜ್ಜ ಆಗಾಗ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದ. "
ಆ ಚಳಿಯಲ್ಲಿ ನನ್ನ ಮೈ ಬೆವರತೊಡಗಿತು. ಹಾಗೆ ಸುಕೋಮಲ ಸ್ವಾಮಿಯ ಜೊತೆ ನಾನು ನಡೆಸಿದ ಮಾತುಕತೆ ಕಣ್ನು ಮುಂದೆ ಬಂದಂತಾಗಿ ತಲೆಯನ್ನು ಹಿಡಿದುಕೊಂಡು ಹಾಗೆ ಕುಳಿತುಬಿಟ್ಟೆ.

7 comments:

Harisha - ಹರೀಶ said...

ಕಥೆ, ಅಲ್ಲ - ಅಂದರೆ? ಇದು ಸತ್ಯಘಟನೆಯೋ ಅಲ್ಲವೋ?

ಆಲಾಪಿನಿ said...

ಇಂಟ್ರೆಸ್ಟಿಂಗ್ ಆಗಿತ್ತು.... ಹಾಗಾದ್ರೆ ಏನಿದು? ಸತ್ಯದೊಳಗಿನ ಕಥೆಯಾ? ಕಥೆಯೊಳಗಿನ ಸತ್ಯವಾ?

ಪ್ರಿಯಾ ಕೆರ್ವಾಶೆ said...

vichitra...i ktheye vastava hagu bhrame hesarinlli hosa nota niidide ...swalpa jen ktheya madari ... sanyasi matu tumba chintanege hachchttade

ಪ್ರಿಯಾ ಕೆರ್ವಾಶೆ said...

vichitra...i ktheye vastava hagu bhrame hesarinlli hosa nota niidide ...swalpa jen ktheya madari ... sanyasi matu tumba chintanege hachchttade

ಬಾನಾಡಿ said...

ಕಥೆಯ ವಸ್ತುವಿನಲ್ಲಿ ಮತ್ತು ತಂತ್ರದಲ್ಲಿ ನೀವು ಮಾಡಿದ ಗೈಮೆ ಅತ್ಯಂತ ಸೋಜಿಗ. "ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇಲ್ಲ. ಎರಡೂ ಒಂದೇ. ನೀವು ವಾಸ್ತವ ಎಂದುಕೊಂಡಿದ್ದು ಭ್ರಮೆ. ಭ್ರಮೆ ಎಂದುಕೊಂಡಿದ್ದು ವಾಸ್ತವ." ಇದು ಕಥೆ ಎಂದಿದ್ದು ಸತ್ಯ ಘಟನೆ. ಸತ್ಯ ಘಟನೆ ಎಂದಿದ್ದು ಕಥೆ. ನಿಜವಾಗಿಯೂ ಅಪರೂಪದ ಬರಹ. ಅಭಿನಂದನೆಗಳು.
ಒಲವಿನಿಂದ
ಬಾನಾಡಿ

Chamaraj Savadi said...

ಇದು ಕತೆಯಂತೂ ಅಲ್ಲ. ಆದರೆ, ಕತೆಯಂತಿರುವ ಅನುಭವ. ವಾಸ್ತವ-ಭ್ರಮೆ ಕುರಿತು ಸಾಧು ಹೇಳಿದ ವ್ಯಾಖ್ಯೆಯನ್ನೇ ಯಥಾವತ್ತಾಗಿ ಇದಕ್ಕೂ ಅನ್ವಯಿಸಬಹುದು ಅನಿಸುತ್ತದೆ.

ಇಂದ್ರಿಯಗಳನ್ನು ಮೀರಿದ್ದು ಇದ್ದೇ ಇದೆ. ಆದರೆ, ಅದು ಎಲ್ಲರಿಗೂ ಸುಲಭವಾಗಿ ಗೋಚರವಾಗುವುದಿಲ್ಲ. ಗೋಚರವಾದ ವಿವರಣೆಯನ್ನು ಜಗತ್ತು ಸುಲಭವಾಗಿ ನಂಬುವುದಿಲ್ಲ. ಇದೂ ಒಂಥರಾ ವಾಸ್ತವ-ಭ್ರಮೆ ಇದ್ದಂತೆ.

ಹೀಗಾಗಿ ಸಾಧು ಮಾತು ಸತ್ಯ.

ನಿಮ್ಮ ಕಥಾನಕವನ್ನು ಇನ್ನಷ್ಟು ವಿವರಣೆಯೊಂದಿಗೆ, ಕಂತುಗಳಲ್ಲಿ ವಿವರಿಸಿದರೆ ಚೆನ್ನಾಗಿರುತ್ತದೆ ಅನಿಸುತ್ತದೆ ಸರ್‌. ಏಕೆಂದರೆ, ಹಿಮಾಲಯ ಮತ್ತು ಅಲ್ಲಿನ ಅಲೌಕಿಕ ಬದುಕಿನ ಕುರಿತು ಜನಕ್ಕೆ ಗೊತ್ತಿರುವುದು ತುಂಬ ಕಡಿಮೆ.

ಅಂಥದೊಂದು ಬರವಣಿಗೆಯನ್ನು ನಿರೀಕ್ಷಿಸುತ್ತೇನೆ.


- ಚಾಮರಾಜ ಸವಡಿ

Praveen Kumar Shetty, Kundapura said...

ನನಗೆ ಬೀಚಿಯವರ ಉಕ್ತಿ ನೆನಪಾಯಿತು.....
ಹೆಸರಿಗೆ ಹೆಸರು ಎ೦ದು ಹೆಸರಿಟ್ಟವನಿಗೆ ಹೆಸರು ಹೇಳಹೆಸರಿಲ್ಲದಿರುವಾಗ ಈ ಹೆಸರಿಗೇಕೆ ಹೆಸರು????
ಪ್ರವೀಣ್ ಶೆಟ್ಟಿ- ಸೌದಿ ಅರೇಬಿಯಾ
Praveenshankat@gmail.com

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...