ಮತಾಂತರದ್ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಹಾಗೆ ಹಲವು ಪತ್ರಿಕೆಗಳು ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿವೆ. ಆದರೆ ಇದು ಅಂತಹ ಮಹತ್ವದ ವಿಚಾರವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಮೊದಲನೆಯದಾಗಿ ಮತ ಅಥವಾ ಧರ್ಮ ಕಾಲು ಕೆದರಿ ಜಗಳ ಮಾಡುವಷ್ಟು ಮುಖ್ಯವೆ ? ನಮಗೆ ಇದಕ್ಕಿಂತ ಮುಖ್ಯವಾದ ಸಮಸ್ಯೆಗಳು ಇಲ್ಲವೆ ?
ಭಾರತದ ಸಂವಿಧಾನ ಇಲ್ಲಿನ ಪ್ರತಿಯೊಬ್ಬ ನಾಗರಿಕನೂ ತಮಗೆ ಬೇಕಾದ ಧರ್ಮವನ್ನು ಅನುಸರಿಸಲು ಅವಕಾಶ ಕಲ್ಪಿಸಿದೆ. ಯಾರಿಗೆ ಧರ್ಮ ಮತಾಚರಣೆಗಳು ಬೇಕೋ ಅವರು ತಮಗೆ ಇಷ್ಟವಾದ ಮತಾಚರಣೆ ಧರ್ಮಾಚರಣೆಯಲ್ಲಿ ಮಾಡಲು ಅವಕಾಶವಿದೆ. ಹೀಗಿರುವಾಗ ಸಮಸ್ಯೆ ಇರುವುದು ಎಲ್ಲಿ ?
ಈಗ ನಾವು ಹಿಂದೂ ಧರ್ಮದತ್ತ ನೋಡೋಣ. ಈ ಧರ್ಮದ ಪರವಾಗಿ ಮಾತನಾಡುವವರು, ಇದು ಪರಮ ಶ್ರೇಷ್ಠವಾದ ಧರ್ಮ ಎಂದು ವಾದಿಸುತ್ತ ಸರ್ವ ಧರ್ಮ ಸಹಿಷ್ಣತೆಯ ಪಾಠ ಮಾಡುತ್ತಾರೆ. ಹಾಗೆ ಇಸ್ಲಾಂ, ಕ್ರಿಶ್ಚಿಯನ್ನರು ತಮ್ಮ ಧರ್ಮವೇ ಪರಮ ಶ್ರೇಷ್ಠವೆಂದು ಕರೆದು ಉಳಿದವರನ್ನು ಪಾಪಿಗಳು, ಕಾಫಿರರು ಎಂದು ಕರೆಯುತ್ತಾರೆ. ಧರ್ಮ ಪ್ರಚಾರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಭಾಗವೇ ಆದ್ದರಿಂದ ಈ ಕಾರ್ಯದಲ್ಲಿ ಭಯ ಭಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಂದೆಡೆ ತಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ಹೊರಾಡುವವರು ಇನ್ನೊಂದೆಡೆ ತಮ್ಮ ಧರ್ಮವನ್ನು ವಿಸ್ತರಿಸಲು ಹೊರಟವರು. ಈ ಎರಡು ರೀತಿಯ ಜನರಲ್ಲಿ ಒಬ್ಬರಿಗೂ ಧರ್ಮದ ನೈಜ ಕಲ್ಪನೆಯೇ ಇಲ್ಲ.
ಕಾರಣವಿಷ್ಟೇ, ಧರ್ಮ ಸಾಮಾಜಿಕ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತದೆಯೇ ಅಥವಾ ಆಧ್ಯಾತ್ಮಿಕ ಬದುಕನ್ನು ರೂಪಿಸುತ್ತದೆಯೇ ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು. ಧರ್ಮದ ಕೆಲಸ, ಆಧ್ಯಾತ್ಮಿಕತೆಯಾಗಿದ್ದರೆ ಅದಕ್ಕೆ ಲೌಕಿಕತೆ ಗೌಣ. ಅಲ್ಲಿ ಮನುಷ್ಯನಿಗೆ ಮನಶ್ಯಾಂತಿ ನೀಡುವ ಕೆಲಸವನ್ನು, ಆತನ ಆಧ್ಯಾತ್ಮಿಕ ಹಸುವನ್ನು ನೀಗಿಸುವ ಕೆಲಸವನ್ನು ಧರ್ಮ ಮಾಡಬೇಕು. ಆದರೆ ಸಮಸ್ಯೆ ಎಂದರೆ, ಆಧ್ಯಾತ್ಮಿಕತೆಯ ಜೊತೆ ಸತತ ಸಂವಾದ ನಡೆಸಬೇಕಾದ ಧರ್ಮ ಸಾಮಾಜಿಕ ಬದುಕಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತದೆ. ಸಮಾಜದಲ್ಲಿ ಹೇಗೆ ಬದುಕಬೇಕು, ಎಂಬುದನ್ನು ನಿರ್ಧರಿಸಬೇಕಾದ್ದು ಸರ್ಕಾರಆ ಸಮಾಜದಲ್ಲಿ ಬದುಕುವವರು. ಇದು ಧರ್ಮದ ಕೆಲಸವಲ್ಲ. ಧರ್ಮ ಬದುಕುವ ಧರ್ಮದ ಬಗ್ಗೆ ಮಾತನಾಡುವುದಾದರೆ ಅದು ಆಯಾ ಕಾಲಕ್ಕೆ ಬದಲಾಗಬೇಕು, ಯಾಕೆಂದರೆ ಬದುಕು ಹೇಗಿರಬೇಕು ಎಂಬುದನ್ನು ಆಯಾ ಕಾಲದಲ್ಲಿ ನಿರ್ಧರಿಸಬೇಕು. ಯಾಕೆಂದರೆ ಬದುಕುವುದಕ್ಕೆ ಸಾರ್ವಕಾಲಿಕವಾದ ನಿಯಮ ಇರುವುದು ಸಾಧ್ಯವಿಲ್ಲ. ಊದಾಹರಣೆಗೆ ವೇದ ಕಾಲದಲ್ಲಿನ ಬದುಕುವ ವಿಧಾನ ಇಂದು ಅಪ್ರಸ್ತುತ. ಹಾಗೆ ಇಸ್ಲಾಮ್ ಧರ್ಮ ಪ್ರಾರಂಭವಾದಗಿನ ಬದುಕುವ ರೀತಿ ನೀತಿ ಇಂದಿನ ಜಗತ್ತಿಗೆ ಸರಿ ಹೊಂದುವುದಿಲ್ಲ. ಜೊತೆಗೆ . ಧರ್ಮಕ್ಕೂ ಸಾಮಾಜಿಕ ಬದುಕಿಗೂ ಸಂಬಂಧ ಇದ್ದರೂ, ಸಾಮಾಜಿಕ ಬದುಕಿನ ಮೇಲೆ ಧರ್ಮ ಸವಾರಿ ಮಾಡಬಾರದು. ಈ ಕೆಲಸವನ್ನು ಸರ್ಕಾರಕ್ಕೆ ಬಿಟ್ಟು ಬಿಡಬೇಕು.
ಹಿಂದೂ ಧರ್ಮ ಸಾಮಾಜಿಕ ಕಟ್ಟು ಪಾಡಿನ ಬಗ್ಗೆ ಮಾತನಾಡಿದ್ದರಿಂದಲೇ ವರ್ಣಾಶ್ರಮ ಧರ್ಮ ಇಲ್ಲಿ ಪ್ರಬಲವಾಗಿ ಬೇರೂರಿತು. ಆದ್ದರಿಂದಲೇ ಇಂದು ಧರ್ಮದ ಪುನರ್ ವ್ಯಾಖ್ಯೆ ನಡೆಯಬೇಕಿದೆ. ಧರ್ಮ ಮತ್ತು ನಮ್ಮ ಸಾಮಾಜಿಕ ಬದುಕಿನ ನಡುವಿನ ಸಂಬಂಧವನ್ನು ಪುನರಾವಲೋಕನ ಮಾಡಬೇಕಿದೆ. ಆದರೆ ಆಧ್ಯಾತ್ಮ ಒಂದು ಹುಡುಕಾಟ. ಹೀಗಾಗಿ ಅದು ಹರಿಯುವ ನದಿಯಂತೆ. ಅದಕ್ಕೆ ಸಾಮಾಜಿಕತೆಯ ಸ್ಪರ್ಷ ಇಲ್ಲ. ಅದು ಸುಮ್ಮನೆ ಹರಿಯುತ್ತಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಧರ್ಮ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಂಡು ಕೇವಲ ಆಚರಣೆಯಾಗಿ ಉಳಿದಿದೆ. ಧರ್ಮವನ್ನು ಅಂದರೆ ಆಧ್ಯಾತ್ಮಿಕತೆ ಬೋಧನೆ ಮಾಡಬೇಕಾದವರು ಶಿಕ್ಷಣ ದಂಧೆಯಲ್ಲಿ ತೊಡಗಿದ್ದಾರೆ. ಈಗ ಧರ್ಮದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕಬೇಕಾಗಿದೆ.
3 comments:
ಎಲ್ಲರೂ ನಿಮ್ಮ ಹಾಗೆ ಚಿಂತನೆ ಮಾಡಿದ್ರೆ ಸಮಸ್ಯೇನೆ ಇರ್ತಾ ಇರ್ಲಿಲ್ಲ ಅಲ್ವಾ ಭಟ್ರೇ?
ಆದ್ರೆ ಸಧ್ಯದಲ್ಲೇ ಈ ರೀತಿ ಚಿಂತನೆ ನಡೆಸೋ ಜನ ಸಿಗೋದು ಕಷ್ಟ .
So people don't want to wear dress in nudist beach!
ಸಕಾರಾತ್ಮಕ ಒಳನೋಟಗಳಿರುವ ಮತ್ತು ಪ್ರಸ್ತುತ ದಿನಮಾನದಲ್ಲಿ ಧರ್ಮದ ಕುರಿತಂತೆ ನಾನು ಓದಿದ
ಉತ್ತಮ ಬರಹವಿದು.ಏಕೆಂದರೆ ಈ ಬರಹದಲ್ಲಿ ಎಲ್ಲಿಯೂ
ಪೂರ್ವಗ್ರಹವಿಲ್ಲ.ಸಾಕ್ಷಿಪ್ರಜ್ಞೆಯಿಂದ ಮತಾಂತರದ ವಿದ್ಯ
ಮಾನಗಳನ್ನು ನೋಡಲಾಗಿದೆ.
"ಆಧ್ಯಾತ್ಮಿಕತೆಯ ಜೊತೆ ಸತತ ಸಂವಾದ ನಡೆಸಬೇಕಾದ ಧರ್ಮ ಸಾಮಾಜಿಕ ಬದುಕಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತದೆ. ಸಮಾಜದಲ್ಲಿ ಹೇಗೆ ಬದುಕಬೇಕು, ಎಂಬುದನ್ನು ನಿರ್ಧರಿಸಬೇಕಾದ್ದು ಸರ್ಕಾರ, ಆ ಸಮಾಜದಲ್ಲಿ ಬದುಕುವವರು. ಇದು ಧರ್ಮದ ಕೆಲಸವಲ್ಲ"
ನಾನು ಮತ್ತೆ ಮತ್ತೆ ಓದಿಕೊಂಡ ಸಾಲುಗಳಿವು.ಬದುಕು ಹೀಗಿದ್ದರೆ
ಚೆನ್ನ ಎಂದು ಹೇಳಬೇಕಾದ ಧರ್ಮ;ಬದುಕು ಹೀಗೇ ಇರಬೇಕು
ಎಂದು ಅಪ್ಪಣೆ ನೀಡಿದರೆ ಬಿಗಿಹಿಡಿತವಾಗುತ್ತದೆ.
ಧರ್ಮ ಮತ್ತು ರಾಜಕಾರಣ ಪ್ರತ್ಯೇಕವಾಗಿ ನಿಂತಾಗಲೂ ಅಪಾಯವಿರುವುದಿಲ್ಲ.ಆದರೆ ಇಡೀ ವಿಶ್ವದ ಸಂದರ್ಭದಲ್ಲಿ
ಇವೆರಡೂ ಪರಸ್ಪರ ಮಿಳಿತವಾಗಿವೆ.ಆದ್ದರಿಂದಲೇ ನೀವು
ಹೇಳಿರುವಂತೆ "ಈಗ ಧರ್ಮದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕಬೇಕಾಗಿದೆ."ಇದರ ಹಿಂದಿರುವ ತಾತ್ಪರ್ಯವನ್ನು
ಗ್ರಹಿಸಿದರೆ ಧರ್ಮರಾಜಕಾರಣದ ಅಪಾಯವನ್ನೂ ಅರಿಯಬಹುದು
-ಕುಮಾರ ರೈತ
>>ಆದರೆ ಇಂದಿನ ದಿನಗಳಲ್ಲಿ ಧರ್ಮ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಂಡು ಕೇವಲ ಆಚರಣೆಯಾಗಿ ಉಳಿದಿದೆ.
nimma lEkhanagaLu bahaLa chennagive. naanu already nimma fan!!!
Post a Comment