ಒಂದೆಡೆ ಬಂದೂಕಿನ ಸದ್ದು. ಮತ್ತೊಂದೆಡೆ ಹರಿಯುವ ರಕ್ತ. ಯಾವುದೋ ಮೂಲೆಯಲ್ಲಿ ಕೇಳುವ ಆಕ್ರಂದನ. ಎಲ್ಲರೂ ಗೋರಿಗಳನ್ನು ಕಟ್ಟಲು ಉತ್ಸಾಹ ತೋರಿಸುತ್ತಿದ್ದಾರೆ. ಜೀವ ಕೊಡಲು ಸಾಧ್ಯವಿಲ್ಲದವರು ಜೀವ ತೆಗೆಯಲು ಮುನ್ನುಗ್ಗುತ್ತಿದ್ದಾರೆ. ಇಂಥಹ ಸ್ಥಿತಿಯಲ್ಲಿ ದೇಶದ ಆರೋಗ್ಯಪೂರ್ಣ ಮನಸ್ಸುಗಳು ಮೌನವಾಗಿ ಅಳುತ್ತಿವೆ.
ನನಗೆ ಎಲ್ಲಿ ಹೋದರೂ ಅಳುವ ಮುಖಗಳೇ ಕಾಣುತ್ತವೆ. ಈ ಮುಖಗಳನ್ನು ನೋಡಿದವನು ಅವರ ಕಣ್ಣುಗಳನ್ನು ನೋಡುತ್ತೇನೆ. ಆ ಕಣ್ಣುಗಳಲ್ಲಿ ಇರುವುದು ಏನು ? ಭಯವೆ ? ಆತಂಕವೆ ? ಹತಾಶೆಯೆ ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ನಾನು ತಡಕಾಡುತ್ತೇನೆ. ಆಗ ಮತ್ತೆ ಕಣ್ಣುಗಳನ್ನೇ ನೋಡುತ್ತೇನೆ.
ಆಗ ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.
ಈ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ಇಂದು ವಸ್ತು ನಿಷ್ಠವಾಗಿ ನೋಡುವ ಸ್ಥಿತಿಯಲ್ಲಿ ಮಾಧ್ಯಮ ಇಲ್ಲ. ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಹೆಚ್ಚು ಕ್ರಿಟಿಕಲ್ ಆಗಿದ್ದರೆ, ಭಾರತೀಯ ಜನತಾ ಪಾರ್ಟಿಯಂತಹ ಪಕ್ಷಕ್ಕೆ ಅನುಕೂಲವಾಗುತ್ತದೆ. ಕ್ರಿಟಿಕಲ್ ಆಗಿರದಿದ್ದರೆ, ಆತ್ಮಧ್ರೋಹ ಮಾಡಿಕೊಂಡಂತೆ ಅನ್ನಿಸುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮುಸ್ಲಿಂ ಭಯೋತ್ಪಾದಕತೆ ವಿಶ್ವವನ್ನೇ ನಡುಗಿಸುತ್ತದೆ. ಲಷ್ಕರೆ ತೊಯ್ಬಾದಂತಹ ಸಂಘಟನೆಗಳು ರಕ್ತದ ಒಕಳಿಯಾಡುತ್ತ ಆ ಅಲ್ಲಾನೇ ತಲೆ ಬಗ್ಗಿಸುವಂತೆ ಮಾಡುತ್ತಿದೆ. ಆದರೆ ಈ ಮಾತನ್ನು ಹೇಳಿದ ತಕ್ಷಣ ಬಿಜೆಪಿ ಸಂತೋಷದಿಂದ ಬೀಗತೊಡಗುತ್ತದೆ. ಆಗ ಬಿಜೆಪಿ ನಮ್ಮ ಮುಂದೆ ತಂದಿಟ್ಟಿರುವ ಅಪಾಯ ಕಾಣತೊಡಗುತ್ತದೆ. ಹಾಗೆ ಮುಸ್ಲಿಂ ಭಯೋತ್ಪಾದಕತೆಯ ಬಗ್ಗೆ ಮೌನವಾಗಿ ಉಳಿದುಬಿಡುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳು. ಇವರಿಗೆ ಮುಸ್ಲಿ ಮತದ ಬ್ಯಾಂಕನ್ನು ಬಿಟ್ಟು ಆಲೋಚನೆ ಮಾಡಲು ಸಾಧ್ಯವಾಗುವುದೇ ಇಲ್ಲ.
ಈ ನಡುವೆ ದೇಶದಲ್ಲಿ ವೈಚಾರಿಕ ಮತ್ತು ಸಾಹಿತ್ಯಿಕ ವಲಯ ಈ ಬಗ್ಗೆ ದಿವ್ಯ ಮೌನ ಒಹಿಸಿರುವುದು ಆಶ್ಚರ್ಯವನ್ನು ಮತ್ತು ಆಘಾತವನ್ನು ಉಂಟು ಮಾಡುತ್ತದೆ. ಎಡ ಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾದ ವೈಚಾರಿಕರು ಮತ್ತು ಸಾಹಿತಿಗಳು ಇಂಥಹ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರೆ ತಮ್ಮ ವೈಚಾರಿಕತೆಗೆ ಮಂಕು ಕವಿಯುತ್ತದೆ ಎಂದುಕೊಂಡಿದ್ದಾರೆಯೆ ? ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಚಟುವಟಿಕೆಗಿಂತ ಇದನ್ನು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತರಾದ ಮುಸ್ಲಿಂ ಯುವಕರು ಮಾಡುತ್ತಾರೆ ಎಂಬುದೇ ಮುಖ್ಯವಾಗಿ ಬಿಡುತ್ತದೆ. ಹೀಗಾಗಿ ಇವರು ಈ ಘಟನೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ವೈಚಾರಿಕ ವರ್ಗಕ್ಕೂ ಹಾಗೆ.
ನಾವು ಧರ್ಮ ಕೋಮು ಭಾವನೆಯನ್ನು ಬಿಟ್ಟು ಸಮಸ್ಯೆಯನ್ನು ನೋಡಬೇಕು. ಹಾಗಾದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
12 comments:
ಸರ್,ನಾನು ನಿಮ್ಮ ಚಾನಲ್ ಹಾಗು ನಿಮ್ಮ ಬ್ಲಾಗ್ ಪ್ರೇಮಿ.ಆದ್ರೆ ಸ್ವಲ್ಪ ದಿನಗಳಿಂದ ನಿಮ್ಮ ಚಾನಲ್ ಇಂಗ್ಲೀಷ್ ಮಯ ಆಗುತಿದೆ ಅಂತ ನನ್ನ ಅನಿಸಿಕೆ.ಯಾಕಂದ್ರೆ ನಿಮದು ಕನ್ನಡ ವಾಹಿನಿ ಆದರಿಂದ ನಿಮ್ಮ ಚಾನಲ್ ನಿರೂಪಕಿಯರಿಗೆ ಕನ್ನಡ ಮಾತನಾಡಲು ಹೇಳಿ ಅದರಲ್ಲೂ ದನ್ಯವಾದಗಳು ಎಂಬ ಪದ ಉಪಯೋಗ ವಾಗಲಿ.ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಧರ್ಮವನ್ನು ಬಿಟ್ಟು ಬನ್ನಿ ಅಂತ ಹತ್ತು ಜನರಿಗೆ ಕರೆ ಕೊಡಿ ಭಟ್ರೇ, ಎಂಟು ಜನ ಹಿಂದುಗಲು ನಿಮ್ಮ ಹಿಂದೆ ಓಡೋಡಿ ಬರ್ತಾರೆ ,ಇನ್ನೊಬ್ಬ ಕ್ರಿಶ್ಚಿಯನ್ ಆಗಿರ್ತಾನೆ ಮತ್ತೆ ನಿಮ್ಮ ಕರೆ ಸ್ವಲ್ಪ ಸ್ಟ್ರಾಂಗ್ ಆಗಿದ್ರೆ ಒಬ್ಬ ಮುಸಲ್ಮಾನ ಬಂದ್ರೂ ಬರಬಹುದು!
ಇದರ ಅರ್ಥ ಏನಂದ್ರೆ ನಾವು ಹಿಂದುಗಳಿಗೆ ಇರೋ ಅಷ್ಟು ಸ್ವಾತಂತ್ರ್ಯ ಯಾರಿಗೂ ಇಲ್ಲ.ನಮಗಿಷ್ಟ ಬಂದ ಹಾಗೆ ಇರೋ ಸ್ವಾತಂತ್ರ್ಯ ಅದೃಷ್ಟವಶಾತ್ ನಮ್ಮ ಧರ್ಮ ಕೊಟ್ಟಿದೆ.
ನೀವು ದೇವಸ್ಥಾನದ ಕಡೆ ತಲೆ ಹಾಕಿ ಮಲಗಿಲ್ಲ ಅಂದ್ರೂ ಯಾರೂ ಕೇಳಲ್ಲ.ಆದ್ರೆ ಅದೇ ಮುಸ್ಲಿಂ ಒಬ್ಬ ಮಸೀದಿಗೆ ಹೋಗಿಲ್ಲ ಅಂದ್ರೆ ಅವನಿಗೆ ಒಂದು ಗತಿ ಕಾಣಿಸ್ತಾರೆ.
ನನ್ನ ಸ್ನೇಹಿತರು ಎಷ್ಟೋ ಜನ ಇಶ್ಟ ಇಲ್ಲ ಅಂದ್ರೂ ಫಾದರ್ ಬಯ್ತಾರೆ ಅನ್ನೋ ಕಾರಣಕ್ಕೆ ಚರ್ಚ್ ಗೆ ಹೋಗೋದನ್ನು ನಾನೇ ನೋಡಿದ್ದೀನಿ.
ಇದಾದ ಮೇಲೂ ನಿಮ್ಮ ಕರೆಗೆ ಜನ ಸ್ಪಂದಿಸಿದ್ರೆ ಹೇಳಿ ಭಟ್ರೆ.
ನೀವು ಯಾವಾಗ ಶಶಿಧರ್ ’ಭಟ್’ ಅನ್ನೋ ಹೆಸರು ಬಿಟ್ತು ಬರೀ ಶಶಿಧರ್ ಅಂತ ಹಾಕೋದಿಕ್ಕೆ ಶುರು ಮಾಡ್ತೀರೋ ಅದೇ ದಿನ ನಾನೂ ನಿಮ್ಮ campaign ಸೇರ್ಕೋತೀನಿ ಭಟ್ರೆ.ನಮಗೆ ಜಾತಿ,ಧರ್ಮ ಬಿಡಬೇಕು ಅನ್ನಿಸಿದ್ರೂ ಬಿಡೋ ಹಾಗಿಲ್ಲ .
ಆದರೆ ನಮ್ಮ ನೆಕ್ಟ್ ಜನರೇಶನ್ ಮಾತ್ರ ಎಲ್ಲಾ ಬಿಡೋ ಸಾಧ್ಯತೆಗಳು ನಿಚ್ಚಳವಾಗಿವೆ(ತುಂಬಾ ಒಳ್ಳೆಯ ಬೆಳವಣಿಗೆ ಅಲ್ವಾ??)
ಭಟ್ರೆ ನಿಮ್ಮ ಬಗ್ಗೆ ನನಗೆ ಅಪಾರ ಅಭಿಮಾನವಿದೆ.ನಿಮ್ಮ ಗೌರವಕ್ಕೆ ಧಕ್ಕೆ ತರೋ ಹಾಗಿದ್ರೆ ಈ ಕಮೆಂಟ್ ಪ್ರಕಟಿಸ್ಬೇಡಿ.
ಮುಸ್ಲಿಮರೆಲ್ಲರೂ ಉಗ್ರರಲ್ಲ. ಆದರೆ ಉಗ್ರರೆಲ್ಲರೂ ಮುಸ್ಲಿಮರೇ.
ನಮಗೆ ಧರ್ಮ ಎಂದರೇನು ಎಂಬುದೇ ತಿಳಿದಿಲ್ಲ. ಹಾಗೆ ಧರ್ಮ ಯಾಕೆ ಬೇಕು ಎಂಬುದೂ ಕೂಡ. ಧರ್ಮ ಎಂದರೆ ಆಚರಣೆ ಅಲ್ಲ. ಆಚರಣೆ ಒಂದು ಮಾರ್ಗ ಮಾತ್ರ. ಆದರೆ ನಾವು ಮಾರ್ಗವನ್ನು ಹಿಡಿದುಕೊಂದು ಗುರಿಯನ್ನು ಮರೆತು ಬಿಟ್ಟಿದ್ದೇವೆ. ನಾನು ಧರ್ಮವನ್ನು ಬಿಡಿ ಎಂದು ಹೇಳಿದ್ದು ಆಚರಣೆಯನ್ನು ಬಿಡಿ ಎಂಬ ಅರ್ಥದಲ್ಲಿ. ಈಗ ನಿಮಗೆ ಒಂದು ಮಾತು ಹೇಳುತ್ತೇನೆ. ನಿಮ್ಮ ಹೆಸರು ಸಂದೀಪ್ ಅಂತ ತಾನೆ ? ಆದರೆ ಈ ಹೆಸರೇ ನೀವಲ್ಲ. ಸಂದೀಪ್ ಎನ್ನುವುದು ನಿಮ್ಮನ್ನು ಗುರುತಿಸುವುದಕ್ಕೆ ಇರುವ ಹೆಸರು. ಹೆಸರುಗಳನ್ನು ಮೀರಿ ಹೇಗೆ ವ್ಯಕ್ತಿಗಳು ಇರುತ್ತಾರೋ ಹಾಗೆ ಆಚರಣೆಯನ್ನು ಮೀರಿ ಧರ್ಮ ಇರುತ್ತದೆ. ಆದರೆ ಈಗ ಆಚರಣೆ ಮುಖ್ಯವಾಗಿ ಧರ್ಮ ಎನ್ನುವುದು ಮರೆಯಾಗಿದೆ. ಹೆಸರು ಮುಖ್ಯವಾಗಿ ವ್ಯಕ್ತಿ ಮರೆಯಾಗಿದ್ದಾನೆ. ನಾನು ಹೇಳಿದ್ದು ನಿಮಗೆ ಅರ್ಥವಾಯಿತೆ ?
ನಾವು ಆಚರಣೆಯನ್ನು ಮೀರಿ ಧರ್ಮವನ್ನು ಗೃಹಿಸಬೇಕು.. ಹೆಸರನ್ನು ಮೀರಿ ವ್ಯಕ್ತಿಯನ್ನು ಗೃಹಿಸಬೇಕು.
ಹೀಗಾಗಿ ನಾನು ಭಟ್ಟನಾದರೂ ಒಂದೇ ಗೌಡ, ಕಾಮತ, ಪಾಟೀಲ್ ನಾದರೂ ಒಂದೇ ಅಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಯಾಕೆಂದರೆ ಸದಾ ಹೆಸರನ್ನು ಮೀರಲು ನಾನು ಯತ್ನಿಸುತ್ತೇನೆ.
ಶಶಿಧರ್ ಭಟ್
ಭಟ್ರೇ ನಿಮ್ಮ ಸ್ಪಷ್ಟೀಕರಣಕ್ಕೆ ಧನ್ಯವಾದಗಳು,
ಧರ್ಮವನ್ನು ಎಲ್ಲರೂ ಮೀರಿ ಬೆಳೆಯಬೇಕೆಂದು ನಿಮ್ಮ ’ಆಶಯ’.
ನಿಮ್ಮ ಆಶಯಕ್ಕೆ ನನ್ನ ಶುಭಾಶಯ!
ಹಿಂದಿಯಲ್ಲಿ ಒಂದು ಆಲ್ಬಮ್ ಹಾಡಿದೆ ’ಜಹಾಂ ಹೋ ಪ್ಯಾರ್ ಕಾ ಮೌಸಮ್ ,ಜಹಾಂ ಸಬ್ ದಿಲೋಂಕಾ ಹೋ ಸಂಗಮ್ ’ ಅಂತ ’ವಿವಾ’ ಅನ್ನೋ ಹುಡುಗಿಯರ ಆಲ್ಬಮ್ ಅದು.ಎಷ್ಟು ಚೆನ್ನಾಗಿದೆ ಹಾಡು,ಎಷ್ಟು ಚೆನ್ನಾಗಿದೆ ಹುಡುಗಿಯರ ಆಶಯ ಅಂತ ಖುಷಿ ಪಡೋ ಅಷ್ಟರಲ್ಲಿ ಆ ಬ್ಯಾಂಡೇ ಸ್ಪ್ಲಿಟ್ ಆಗಿ ಬಿಡ್ತು!!!
ಇದೇ ಅಲ್ವ ಆಶಯಕ್ಕೂ ವಾಸ್ತವಕ್ಕೂ ಇರೋ ವ್ಯತ್ಯಾಸ?
"ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ? " ಅಂತ ಕೇಳಿದ್ರಿ ನೀವು .ಮೂಲ ಕಾರಣವೇ ಧರ್ಮ ಆಗಿದ್ದರಿಂದ ಹೇಗೆ ಸರ್ ಧರ್ಮವನ್ನು ಬಿಟ್ಟು ಯೋಚಿಸೋದು? ಆ ’ಮುಗ್ಧ(?) ಯುವಕರನ್ನು ’ಜೆಹಾದ್ ’ ಹೆಸರಲ್ಲಿ ತಲೆ ಕೆಡಿಸಿ ತಾನೇ ಕಳಿಸಿರೋದು ಆ ಉಗ್ರಗಾಮಿ ಮುಖಂಡರು.ಇಸ್ಲಾಂ ಒಂದೇ ಶ್ರೇಷ್ಠ ಅನ್ನೋದೊಂದೇ ತಾನೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣ.
ಆದರೆ ನಾವು ಇದನ್ನು ಬಹಿರಂಗವಾಗಿ ಒಪ್ಪಲು ತಯಾರಿಲ್ಲ.ಯಾಕಂದ್ರೆ ನಮಗೆ ನಮ್ಮದೇ ಮುಸ್ಲಿಂ ಗೆಳೆಯರು ಬೇಜಾರು ಮಾಡ್ಕೋತಾರೆ ಅನ್ನೋ ಮುಜುಗರ!
ನೀವು ಮಾಧ್ಯಮದವ್ರೂ ಇದಕ್ಕೆ ಕಾರಣ ಅಲ್ವ??
ಸುರೇಶ ರಮೇಶನನ್ನು ಹೊಡೆದ್ರೆ ಅದು ಗಲಬೆ ಅಂತೀರ ಅದೇ ಸುರೇಶ ಅಬ್ದುಲ್ಲನನ್ನು ಹೊಡೆದರೆ ಅದನ್ನು ಕೋಮು ಗಲಬೆ ಅಂತ ಬಿಂಬಿಸ್ತೀರ!!!
ಅದೆಲ್ಲ ಇರ್ಲಿ ಬಿಡಿ ...ಮಾತಡಿದಷ್ಟು ಮುಗಿಯಲ್ಲ.
ಇವತ್ತಿನ ನ್ಯೂಸ್& ವ್ಯೂಸ್ ಕಾರ್ಯಕ್ರಮ(ವಿದ್ಯುತ್ ಕೊರತೆ ಬಗ್ಗೆ) ಚೆನ್ನಾಗಿತ್ತು.
dharma annuvudu ondu aacharane.hindina kaaladalli manushya tanna safteygaagi dharma annuva hesaralli ondu saamaajika choukattu maadikonda.aadare ade dharma eegaa?? nenedare dukha agutte.
ನಿಮಗೆ ಇನ್ನೂ ಕೆಲವು ಮಾತುಗಳನ್ನು ಹೇಳುತ್ತೇನೆ. ಧರ್ಮ ಎನ್ನುವುದು ಸಾಮಾಜಿಕ ಕಟ್ಟಳೆ, ನೀತಿ ಬದುಕುವ ವಿಧಾನಕ್ಕೆ ಸಂಬಂಧಿಸಿದ್ದೆ ಅಥವಾ ಆಧ್ಯಾತ್ಮಿಕತೆಗೆ ಸಂಬಂಧಿಸಿದ್ದೆ ? ಈ ಪ್ರಶ್ನೆಗೆ ಮೊದಲು ಉತ್ತರವನ್ನು ಕಂಡುಕೊಳ್ಳಿ.
ಧರ್ಮ ಎನ್ನುವುದು ಬದುಕುವ ಧರ್ಮ ಆಗಲಾರದು. ಯಾಕೆಂದರೆ, ಹಿಂದೂ, ಇಸ್ಲಾಮ್, ಕ್ರಿಶ್ಚಿಯನ್ ಮೊದಲಾದ ಧರ್ಮಗಳಿಗೆ ವಯಸ್ಸಾಗಿದೆ. ಈ ಧರ್ಮಗಳು ಯಾವ ಕಾಲಘಟ್ಟದಲ್ಲಿ ಹುಟ್ಟಿದವೋ ಆ ಕಾಲಘಟ್ಟದ ಬದುಕುವ ನೀತಿಗೆ ಸಂಬಂಧಿಸಿದವು ಅವು. ಅಂದಿನ ಸತ್ಯ, ನೀತಿ, ನೈತಿಕತೆ ಇಂದು ಅಪ್ರಸ್ತುತ. ಇಂದಿನ ವಾತಾವರಣ ಬೇರೆ, ಬದುಕೇ ಬೇರೆ. ಆದ್ದರಿಂದ ಧರ್ಮಗಳಲ್ಲಿ ಹೇಳುವ ಬದುಕುವ ರೀತಿ ನೀತಿಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಲಬೇಕಿಲ್ಲ. ಜೊತೆಗೆ ಸಾಮಾಜಿಕ ಬದುಕನ್ನು ನಿರ್ಣಯಿಸಬೇಕಾದ್ದು ಆ ಆ ಕಾಲ ಘಟ್ಟದಲ್ಲಿ ಬದುಕುವ ಜನರೇ ಹೊರತೂ ಯಾವುದೋ ಧರ್ಮ ಗ್ರಂಥಗಳಲ್ಲ. ಅರ್ಥವಾಯಿತೆ ?
ಧರ್ಮಗ್ರಂಥಗಳು ಒಂದು ರೀತಿಯ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತವೆ. ಆದ್ದರಿಂದ ಅವು ನಮಗೆ ಬೇಕು. ಅದನ್ನೇ ನಾನು ಹೇಳಿದ್ದು ಆಚರಣೆ ಬೇರೆ. ಆಧ್ಯಾತ್ಮಿಕತೆ ಬೇರೆ.
ಅರ್ಥ ಆದ ಹಾಗಿದೆ:)
ನೀವು ಸಾಕ್ಷಿಪ್ರಜ್ಞೆಯಿಂದ ಘಟನೆಗಳನ್ನು ನೋಡಿ ಅಥೈಸುತ್ತಿರಿ ಎನ್ನುವುದಕ್ಕೆ "ಧರ್ಮವನ್ನು ಬಿಟ್ಟು ಹೊರಬನ್ನಿ"ಬರಹ ದ್ಯೋತಕ.ಪ್ರಸ್ತುತ ಮಾಧ್ಯಮ ಈ ಸಾಕ್ಷಿಪ್ರಜ್ಷೆಗೆ ಹೊರತಾಗಿರುವುದರಿಂದಲೇ ನೀವು ಹೇಳಿದಂತೆ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಉದ್ಬವಿಸುತ್ತದೆ.ಮುಖ್ಯವಾಹಿನಿಯೊಂದರ ಮುಖ್ಯಸ್ಥರಾಗಿ ನೀವು ಹೇಳಿರುವುದು, ಪ್ರಸ್ತುತ ಪ್ರತಿಕೋದ್ಯಮ ಆತ್ಮವಲೋಕನ ಮಾಡಿಕೊಳ್ಳಬೇಕಾದ ಅಗತ್ಯವನ್ನು ತೋರಿಸುತ್ತದೆ.ಈ ರೀತಿಯ
ವಿಮರ್ಶೆಯಿಂದಾಗಿಯೇ ನೀವು ಸಮತೋಲಿತವಾಗಿ ಯೋಚಿಸಬಲ್ಲಂಥವರಿಗೆ ಮುಖ್ಯರಾಗುತ್ತಿರಿ.ಗೌರವ ಇಮ್ಮಡಿಸುತ್ತದೆ.ಸಂದೀಪ್ ಕಾಮತರಿಗೆ ನೀವು ನೀಡಿದ ಪ್ರತಿಕ್ರಿಯೆ ಮೌಲಿಕವಾಗಿದೆ.
"ನಾವು ಧರ್ಮ ಕೋಮು ಭಾವನೆಯನ್ನು ಬಿಟ್ಟು ಸಮಸ್ಯೆಯನ್ನು ನೋಡಬೇಕು. ಹಾಗಾದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ" ನಿಮ್ಮ ಈ ಮಾತನ್ನು ನಿಜ ಅರ್ಥೈಸಿಕೊಂಡರೆ ಇಡೀ ಸಮಸ್ಯೆ ನಮ್ಮ ಕಣ್ಣೇದುರು ನಿಚ್ಚಳವಾಗುತ್ತದೆ.
ಸಮಕಾಲೀನ ಬದುಕಿನಲ್ಲಿ ನನಂಥ ಕಿರಿಯರೆಲ್ಲರಿಗೂ ದಾರಿದೀಪದಂತಿರುವ ನಿಮ್ಮಗೆ ಮನದಾಳದ ಧನ್ಯವಾದ
ಧರ್ಮ ಎನ್ನುವುದನ್ನು ಅರ್ಥೈಸುವುದಕ್ಕೇ ಒಂದು ಜನುಮ ಬೇಕಾಗಬಹುದು. ಧರ್ಮ ಕಾಲಕ್ರಮದಲ್ಲಿ ಬದಲಾಗಬೇಕು. ಅದೇ ಧಾರ್ಮಿಕ ಮುಖಂಡರ ಕೆಲಸವಾಗಬೇಕು. ಧಾರ್ಮಿಕ ಗ್ರಂಥಗಳಿಗೆ ಹೊಸ ವ್ಯಾಖೆಯನ್ನು ನೀಡುವುದರೊಂದಿಗೆ ಇಂದಿನ ಬದುಕಿಗೆ ಧರ್ಮ ಹತ್ತಿರವಾದಾಗ ಅದು ಬದುಕುವ ಧರ್ಮವಾಗಿ ಎಲ್ಲರಿಗೂ ಸ್ವೀಕರಾರ್ಹವಾಗುತ್ತದೆ.
ಒಂದು ಮಟ್ಟಿಗೆ ಇಂದು ಮಾಧ್ಯಮವೇ ಒಂದು ಧರ್ಮವಾಗಿದೆ. ಅದರಷ್ಟು ಪ್ರಭಾವ ಇನ್ಯಾವುದೂ ಮಾಡಲಾರದಂತಹ ಪರಿಸ್ಥಿತಿಯಲ್ಲಿದೆ. ಹಾಗಾಗಿ ಮಾಧ್ಯಮ ಧರ್ಮದ ಕೇಂದ್ರದಲ್ಲಿರುವ ತಮ್ಮಂತಹವರು ಸಾಮಾನ್ಯರಿಗೆ ಧರ್ಮಗುರುಗಳು. ನಿಮ್ಮ ಸಂದೇಶ ಪುರೋಗಾಮಿಯಾಗಿದ್ದು ಹೊಸ ಪ್ರಗತಿಶೀಲ ಸಮಾಜವನ್ನು ಸೃಷ್ಟಿಸುವುದಾದರೆ ಅದಕ್ಕೆ ಎಲ್ಲರೂ ನಿಮ್ಮ ಅನುಯಾಯಿಯಾಗುವರು. ಹೊಸಧರ್ಮ ತಂದಿಂದ ತಾನೆ ಹುಟ್ಟುತ್ತದೆ.
ಬಾನಾಡಿ
ಆಚಾರ ಹೇಳೋದಕ್ಕೆ ಚೆನ್ನ.ನಿಮ್ಮ ಲೇಖನದಲ್ಲೂ ನಿಮಗೆ ಅನಿಸಿದ್ದನ್ನು ಪೂರ್ಣ ಬರೀಲಿಕ್ಕೆ ಆಗಿಲ್ಲ ಅನ್ನಿಸುತ್ತೆ.ಸತ್ಯ ಹೇಳಿದ್ರೆ ಸಹಿಸಿಕೊಳ್ಳೋದು ಸ್ವಲ್ಪ ..ಅಲ್ವಾ ಸಾರ್..
Post a Comment