ನಮಗಿರುವುದು ಒಂದೇ ಭೂಮಿ. ಇಲ್ಲಿ ನಮ್ಮ ಜೊತೆ ಪಶು ಪಕ್ಷಿಗಳಿವೆ. ಅಸಂಖ್ಯಾತ ಜೀವ ಜಂತುಗಳಿವೆ. ಗುಡ್ಡ ಬೆಟ್ಟಗಳಿವೆ. ಪರ್ವತ ಶ್ರೇಣಿಗಳಿವೆ. ನದಿಗಳಿವೆ, ಕೆರೆ ಕೊತ್ತಲಗಳಿವೆ. ಮರಭೂಮಿಯಿದೆ. ನಿತ್ಯ ಹರಿದ್ವರ್ಣ ಕಾಡುಗಳಿವೆ. ಇಲ್ಲಿ ರಾತ್ರಿಯಾಗುತ್ತದೆ, ಹಗಲಾಗುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲವಿದೆ.
ಇದೆಲ್ಲ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ನೋಡಿ. ಯಾರದೋ ನಿರ್ದೇಶನದಲ್ಲಿ ನಡೆಯುವಂತೆ ಎಲ್ಲವೂ ನಡೆದುಹೋಗುತ್ತದೆ. ಒಮ್ಮೊಮ್ಮೆ ಈ ಪ್ರಕೃತಿಯಲ್ಲಿ ನಡೆಯುವ ಈ ವಿದ್ಯಮಾನಗಳು ನಮಗೆ ಅಚ್ಚರಿಯನ್ನು ಮೂಡಿಸುತ್ತವೆ. ಮತ್ತೊಮ್ಮೆ ಈ ಪ್ರಕೃತಿಯ ಮುಂದೆ ನಾವೆಷ್ಟು ಸಣ್ಣವರು ಎಂಬ ವಿನೀತಭಾವ ನಮ್ಮನ್ನು ಆವರಿಸಿಬಿಡುತ್ತದೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಹಭಾಳ್ವೆಯೇ ಬದುಕು ಎಂಬ ಪಾಠವನ್ನು ಕೇಳುತ್ತಲೇ ಬೆಳೆದ ನಮ್ಮ ನಾಗರೀಕತೆ ನಮ್ಮದು. ಆದರೆ ಈ ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ಧಾಳಿ, ಪ್ರಾಕೃತಿಕ ಸಮತೋಲನವನ್ನೇ ಹಾಳು ಮಾಡುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.
ಇದನ್ನೆಲ್ಲ ನಾನು ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ರಾಜ್ಯ ಸಚಿವ ಸಂಪುಟ ನಿನ್ನೆ ತೆಗೆದುಕೊಂಡ ತೀರ್ಮಾನ. ರಾಜ್ಯದ ಮೂರು ಜಿಲ್ಲೆಗಳ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿದ್ದ ನಿಷೇಧವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಬಳ್ಳಾರಿ, ಶಿವಮೊಗ್ಗ ಮತ್ತು ಮೈಸೂರಿನ ಸಂರಕ್ಷಿತ ಅರಣ್ಯದಲ್ಲಿ ಇನ್ನು ಮುಂದೆ ಗಣಿಗಾರಿಕೆ ಮಾಡಬಹುದು.
ಈ ಜನ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಏನನ್ನು ಮಾಡಲು ಹೊರಟಿದ್ದಾರೆ ? ಇವರಿಗೆ ನಮ್ಮ ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಕನಿಷ್ಟ ಕಳಕಳಿ ಇದೆಯಾ ? ಇಲ್ಲ. ಮಠಗಳಿಗೆ ಹಣ ನೀಡುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುವ ಯಡಿಯೂರಪ್ಪ ಈ ನಿರ್ಧಾರದ ಮೂಲಕ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಅಧಿಕಾರ ರಾಜಕಾರಣದ ಮುಂದೆ ಉಳಿದಿದ್ದೆಲ್ಲ ಗೌಣ ಎಂಬುದನ್ನು ಅವರು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಹಾಗೆ ಬಳ್ಳಾರಿಯ ಗಣಿ ಧಣಿಗಳು ಸರ್ಕಾರದ ಮೇಲೆ ತಮಗಿರುವ ನಿಯಂತ್ರವಣನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಯಾವುದೇ ಒಂದು ಸರ್ಕಾರಕ್ಕೆ ಸಾಮಾಜಿಕ ಬದ್ಧತೆ ಇರಬೇಕಾಗುತ್ತದೆ. ಒಬ್ಬ ಮುಖ್ಯಮಂತ್ರಿ ಜನರ ನಡುವಿನ ನಾಯಕನಾಗಬೇಕು. ಅದರೆ ಯಡಿಯೂರಪ್ಪ ಅವರಲ್ಲಿ ಈಗ ಅಧಿಕಾರದಲ್ಲಿ ಸದಾ ಇರಬೇಕು ಅನ್ನುವುದನ್ನು ಬಿಟ್ಟರೆ ಬೇರೆ ಬದ್ಧತೆ ಉಳಿದಿಲ್ಲ. ನಾಲ್ಕಾರು ಭಟ್ಟಂಗಿಗಳನ್ನು ನೂರಾರು ಮಠಾಧೀಶರನ್ನು ಇಟ್ಟುಕೊಂಡು ಅವರು ಅಧಿಕಾರ ನಡೆಸುತ್ತಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಏನನ್ನೂ ಮಾಡಲು ಅವರು ಈಗ ಸಿದ್ಧ.
ಇಂತಹ ಜನ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳುವ ಸ್ಥಿತಿಯಲ್ಲೂ ಪಕ್ಷದ ನಾಯಕತ್ವ ಇಲ್ಲ. ಈಗಾಗಲೇ ಸೋಲಿನ ಮೇಲೆ ಸೋಲನ್ನು ಅನುಭವಿಸಿ ಹತಾಶವಾಗಿರುವ ಬಿಜೆಪಿ ವರಿಷ್ಠರಿಂದ ಹಿತವಚನವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ, ಬಿಜೆಪಿ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿರುವ ಸಂಘ ಪರಿವಾರ ಏನು ಮಾಡುತ್ತಿದೆ. ಸದಾ ವತ್ಸಲೆ ಮಾತೃಭೂಮಿ ಎಂದು ಹೇಳುತ್ತಲೇ ದಿನಚರಿಯನ್ನು ಪ್ರಾರಂಭಿಸುವ ಆರ್ ಎಸ್ ಎಸ್ ನಾಯಕರಿಗೆ ಇಂತಹ ತೀರ್ಮಾನಗಳಿಂದ ಮಾತೃಭೂಮಿ ಸದಾ ವತ್ಸಲೆಯಾಗಿ ಉಳಿಯುವುದಿಲ್ಲ, ಎಲ್ಲವನ್ನೂ ಕಳೆದುಕೊಂಡ ವಿಧವೆಯಾಗುತ್ತಾಳೆ ಎಂಬ ಅರಿವು ಇರಬೇಕಿತ್ತು. ಇದನ್ನು ಯಡಿಯೂರಪ್ಪ ಅವರಿಗೆ ಹೇಳಬೇಕಿತ್ತು. ಆದರೆ ಆರ್ ಎಸ್ ಎಸ್ ನಾಯಕರೂ ಸಹ, ಗಣಿ ಹಣಕ್ಕೆ ಬಲಿಯಾದಂತೆ ಕಾಣುತ್ತಿದೆ.
ಭಾರತೀಯ ಜನತಾ ಪಾರ್ಟಿಯಲ್ಲೂ ಪ್ರಕೃತಿಯನ್ನು ಪ್ರೀತಿಸುವವರು ಇದ್ದಾರೆ ಎಂದು ನಾನು ನಂಬಿದ್ದೇನೆ. ಅವರೆಲ್ಲ ಈಗ ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕು. ಹಾಗೆ ಮುಖ್ಯಮಂತ್ರಿಗಳ ಕೃಪಾಶೀರ್ವಾದದಿಂದ ಗೂಟದ ಕಾರು ಪಡೆದಿರುವ ಪರಿಸರವಾದಿ, ಅನಂತ ಹೆಗಡೆ ಅಶೀಸರ, ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಹಾಗೆ ಸಾಹಿತಿಗಳು ಕಲಾವಿದರು, ರೈತ ಸಂಘಟನೆಗಳು ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ.
ನನಗಿನ್ನೂ ಸರಿಯಾಗಿ ನೆನಪಿದೆ. ನಾವು ಶಾಲೆಗೆ ಹೋಗುವ ದಿನಗಳು ಅವು. ಅಗಸ್ಟ್ ತಿಂಗಳಿನಲ್ಲಿ ಜಲ ಒಡೆಯುತ್ತಿತ್ತು.ನೀರಿನ ಬುಗ್ಗೆಗಳು ಸುಮಾರು ಒಂದು ತಿಂಗಳುಗಳ ಕಾಲ ಹಾಗೆ ಚಿಮ್ಮುತ್ತಲೇ ಇರುತ್ತಿದ್ದವು. ಈಗ ನಾನು ಮಳೆಗಾಲದ ದಿನಗಳಲ್ಲಿ ಊರಿಗೆ ಹೋದರೆ ಜಲ ಇಡೆಯುವುದನ್ನು ನೋಡುವುದಕ್ಕಾಗಿ ಎಲ್ಲೆಡೆ ಹುಡುಕುತ್ತೇನೆ. ಆದರೆ ಕಳೆದ ಹಲವಾರು ವರ್ಷಗಳಿಂದ ನಾನು ಜಲ ಒಡೆದಿದ್ದನ್ನು ನೋಡಿಯೇ ಇಲ್ಲ. ನಾವು ಶಾಲೆಗೆ ಹೋಗುವಾಗ ಕಾಣುತ್ತಿದ್ದ ಹುಲಿ, ಜಿಂಕೆಗಳು ಕಾಣಬಹುದೇ ಎಂದು ನೋಡುತ್ತೇನೆ. ಆದರೆ ಈ ಪ್ರಾಣಿಗಳು ಕಾಣುವುದಿಲ್ಲ. ಉತ್ತರ ಕನ್ನಡದ ಬಹುತೇಕ ಕಡೆ, ನೀಲಗಿರಿ ಆಕೇಶಿಯಾ ಗಿಡಗಳು ನಮ್ಮನ್ನು ಅಣಕಿಸುವುದನ್ನು ನಾನು ನೋಡುತ್ತೇನೆ. ನಾಗರೀಕತೆ, ಜೋಗ ಜಲಪಾತದ ಸೌಂದರ್ಯವನ್ನು ಕಸಿದುಕೊಂಡಿತು. ತಮ್ಮಿಷ್ಟದಂತೆ ಹರಿಯುತ್ತಿದ್ದ ನದಿಗಳು ಆಣೆ ಕಟ್ಟುಗಳಿಂದ ನಿಂತಲ್ಲೇ ನಿಲ್ಲಬೇಕಾಯಿತು. ನಾಗರೀಕತೆ ಇಲ್ಲಿನ ಬದುಕನ್ನೇ ನಾಶಪಡಿಸಿತು. ಈಗ ಮಲೇನಾಡಿನ ಅರಣ್ಯ ಪ್ರದೇಶಗಳಲ್ಲಿ ಗಣಿ ಧೂಳು ಆವರಿಸಿಕೊಳ್ಳಲಿದೆ. ಗಣಿ ಧಣಿಗಳ ಹೆಲಿಕಾಪ್ಟರ್ ಈ ಪ್ರದೇಶದಲ್ಲೂ ಹಾರಾಟ ನಡೆಸಲು ಪ್ರಾರಂಭಿಸಲಿವೆ.
ಜನ ಸಂಘಟಿತರಾದರೆ ಏನನ್ನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಮಹಾತ್ಮಾ ಗಾಂಧಿ. ಅವರಿಗೆ ಅಭಿವೃದ್ಧಿ ಮತ್ತು ನಾಗರೀಕತೆಯ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದವು. ಹೀಗಾಗಿ ಅವರು ಗ್ರಾಮ ಸ್ವರಾಜ್ಯದ ಮಾತನಾಡಿದ್ದರು. ಸ್ವಾವಲಂಬನೆಯ ಮಾತನಾಡಿದ್ದರು. ವಿದೇಶಿ ವಸ್ತುಗಳ ವಿರುದ್ಧ ಸಮರ ಸಾರಿದ್ದರು. ತಮ್ಮ ಅಹಿಂಸಾತ್ಮಕ ಹೋರಾಟದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.
ನಾವಿಂದು ಗಾಂಧಿಯನ್ನ ನೆನಪು ಮಾಡಿಕೊಳ್ಳಬೇಕು, ಹಾಗೆ ನಮ್ಮ ಅಭೀವೃದ್ಧಿ ಕಲ್ಪನೆ ಬದಲಾಗಬೇಕು. ನಾಗರಿಕತೆಯ ಹುಚ್ಚು ಕನಸಿನ ಬೆನ್ನ ಹಿಂದೆ ಬಿದ್ದು, ಎಲ್ಲವನ್ನು ನಾಶಪಡಿಸುವ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು. ಇಲ್ಲದಿದ್ದರೆ ಮುಂದಿನ ತಲೆ ಮಾರು ನಮ್ಮನ್ನು ಕ್ಷಮಿಸುವುದಿಲ್ಲ.