ಪತ್ರಿಕೋದ್ಯಮಕ್ಕೆ ನಮ್ಮಲ್ಲಿ ತುಂಬಾ ಗೌರವವಿದೆ. ಜೊತೆಗೆ ಸಾಮಾನ್ಯ ಜನರಿಗೆ ಇಂದಿಗೂ ಪತ್ರಿಕೆಗಳ ಬಗ್ಗೆ, ಮಾಧ್ಯಮದ ಬಗ್ಗೆ ನಂಬಿಕೆ ಇದೆ. ಇದಕ್ಕೆ ಬಹುಮುಖ್ಯ ಕಾರಣ ಮಾಧ್ಯಮಗಳು ಬಹುಸಂಖ್ಯಾತರ ಜನರ ಧ್ವನಿಯಾಗಿರುತ್ತವೆ ಎಂಬುದು. ಜೊತೆಗೆ ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮಾಧ್ಯಮಗಳು ಯಾವುದೇ ವ್ಯಕ್ತಿಗಾಗಲಿ, ಪಕ್ಷಕ್ಕಾಗಲಿ, ಸಿದ್ಧಾಂತಕ್ಕಾಗಲಿ ಬದ್ಧವಾಗಿರದೇ, ಸಮಾಜಕ್ಕೆ ಬದ್ಧವಾಗಿರುತ್ತವೆ ಎಂಬುದು ಜನರ ನಂಬಿಕೆ. ಈ ನಂಬಿಕೆಯನ್ನು ಗಳಿಸಲು ಭಾರತೀಯ ಪತ್ರಿಕೋದ್ಯಮ, ಸ್ವಾತಂತ್ರ್ಯ ಫೂರ್ವ ಕಾಲದಿಂದ ಕೆಲಸ ಮಾಡುತ್ತ ಬಂದಿವೆ.
ಮಹಾತ್ಮ ಗಾಂಧಿ, ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮೇಲೆ ಮಾಡಿದ ಕೆಲಸ ಎಂದರೆ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಅವರು ಜನರನ್ನು ತಲುಪಲು ಅತ್ಯುತ್ತಮ ಮಾರ್ಗ ಎಂದರೆ ಪತ್ರಿಕೆಗಳು ಎಂದು ಅವರು ನಂಬಿದ್ದರು. ಅವರ ನಂಬಿಕೆ ಹುಸಿಯಾಗಲಿಲ್ಲ. ಅವರು ತಮ್ಮ ಪತ್ರಿಕೆಯ ಮೂಲಕವೇ ಜನ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿದರು. ಹಾಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಪತ್ರಿಕೆಗಳು ಒಹಿಸಿದ ಪಾತ್ರ ತುಂಬ ಮುಖ್ಯವಾದುದು.
ನನಗೆ ಕಳೆದ ಎರಡು ದಿನಗಳಿಂದ ನಾನು ಅಂದು ಆಡಿದ ಮಾತುಗಳು ನೆನಪಾಗುತ್ತಿವೆ. ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರ್ಸಶ್ನೆ ಇಂದು ಹಿಂದೆಂದಿಗಿಂತಲು ಹೆಚ್ಚು ಮುಖ್ಯ ಅನ್ನಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ನಾನು ಜಿ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಅದೊಂದು ದಿನ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಮತ್ತು ಗೋವಿಂದಾಚಾರ್ಯ ಮೈಸೂರಿನಲ್ಲಿ ಮದುವೆಯಾದರು ಎಂಬ ಸುದ್ದಿ ರಾತ್ರಿಯ ಸುದ್ದಿಯಲ್ಲಿ ಬಂತು. ಆಗ ಜಿ ನ್ಯೂಸ್ ನ ಮುಖ್ಯಸ್ಥರಾಗಿದ್ದ ಸಂಜಯ ಪುಗಲಿಯಾ ನನ್ನನ್ನು ಸಂಪರ್ಕಿಸಿ, ನೋಡಿ, ಇವರಿಬ್ಬರ ಮದುವೆ ಮೈಸೂರಿನಲ್ಲಿ ನಡೆದಿದೆ. ನನಗೆ ಮದುವೆಯ ಫೋಟೋಗಳು ಬೇಕು. ಹಾಗೆ ತಕ್ಷಣ ವೈಸೂರಿಗೆ ಟೀಂ ಕಳುಹಿಸಿ ಪೂಜಾರಿಯಬೈಟ್ ತನ್ನಿ ಎಂದರು. ನನಗೆ ತಕ್ಷಣ ಕೋಪ ಬಂತು.
ಸಾರ್, ಈ ಮದುವೆ ಮೈಸೂರಿನಲ್ಲಿ ನಡೆದಿದೆ ಎಂದು ಹೇಳುತ್ತೀರಿ. ಆದರೆ ಸುದ್ದಿಯನ್ನು ಪ್ರಸಾರ ಮಾಡುವುದಕ್ಕಿಂತ ಮೊದಲು ನನನ್ನುಒಂದು ಮಾತು ಕೇಳಿಲ್ಲ. ಈಗ ಬೈಟ್ ತನ್ನಿ ಎನ್ನುತ್ತಿದ್ದೀರಿ ಎಂದೆ. ಅಷ್ಟರಲ್ಲಿ ಈ ಸುದ್ದಿಯನ್ನು ನೋಡಿ ಕೆಂಡಾಮಂಡಲವಾದ ಉಮಾ ಭಾರತಿ, ಚಾನಲ್ ಗೆ ಹಿಗ್ಗಾಮುಗ್ಗಾ ಝಾಡಿಸಿದ್ದರು. ಹೀಗಾಗಿ ತಾವು ಪ್ರಸಾರ ಮಾಡಿದ ಸುದ್ದಿ ನಿಜವಾದುದು ಎಂದು ಸಾಬೀತು ಪಡಿಸಲು ಸಂಜಯ ಪುಗಲಿಯಾ ಯತ್ನ ನಡೆಸುತ್ತಿದ್ದರು. ನಾನು ವರದಿಗಾರ ಮತ್ತು ಕ್ಯಾಮರ ಮನ್ ಅನ್ನು ಮೈಸೂರಿಗೆ ಕಳುಹಿಸಿದೆ. ಹಾಗೆ ಮೈಸೂರಿನ ಶಾಸಕರನ್ನು ಈ ಬಗ್ಗೆ ಪ್ರಶ್ನಿಸಿದೆ. ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಸಂಪರ್ಕಿಸಿ, ಕಳೆದ ಎರಡು ದಿನಗಳಿಂದ ಈಚೆಗೆ ಯಾರಾದರೂ ವಿಐಪಿ ಗಳು ಬಂದಿದ್ದರಾ ಎಂದು ಪ್ರ್ಷ್ನಶ್ನಿಸಿದೆ. ಅವರಿಂದ ಬಂದ ಉತ್ತರ ಇಲ್ಲ. ಮೈಸೂರಿಗೆ ಹೋಗಿದ್ದ ನಮ್ಮ ಹುಡುಗರು ಅಲ್ಲಿ ಯಾವ ಮದುವೆ ನಡೆದಿಲ್ಲ ಎಂಬ ಸುದ್ದಿಯನ್ನು ತಂದರು.
ಈ ಸುದ್ದಿ ಬೇಜವಾಬ್ದಾರಿಯದಾಗಿತ್ತು. ದೆಹಲಿಯ ವರದಿಗಾರನೊಬ್ಬ, ಯಾರದೋ ಮಾತು ಕೇಳಿ ಗಾಳಿ ಪಟ ಹಾರಿಸಿದ್ದ. ಈ ಸುದ್ದಿ ತಮಗೆ ಮೊದಲು ಸಿಕ್ಕಿತು ಎಂದು ಚಾನಲ್ಹ್ ಹಿಂದೆ ಮುಂದೆ ನೋಡದೆ ಪ್ರಸಾರ ಮಾಡಿ ಬಿಟ್ಟಿತ್ತು. ಯಾಕೆಂದರೆ ಆಗ ಜೀ ನ್ಯೂಸ್ ಮತ್ತು ಆಗತಾನೆ ಬಂದ ಆಜ್ ತಕ್ ನಡುವೆ ತೀವ್ರ ಪೈಪೋಟಿ ಇತ್ತು. ಈ ಪೈಪೋಟಿ ಎಷ್ಟೂ ಅನಾರೋಗ್ಯಕರವಾಗಿ ನಡೆಯುತ್ತಿತ್ತು ಎಂಬುದಕ್ಕೆ ಇದೊಂದು ಉದಾಹರಣೆ. ಇದಾದ ಮೇಲೆ ಜೀ ನ್ಯೂಸ್ ಉಮಾ ಭಾರತಿ ಅವರ ಕ್ಷಮೆ ಕೇಳಿತು.
ಈ ಘಟನೆಯ ನಂತರ ನಾನು ಜೀ ನ್ಯೂಸ್ ಕೆಲಸಕ್ಕೆ ರಾಜೀನಾಮೆ ನೀಡಿದೆ. ಎರಡು ಚಾನಲ್ ಗಳ ನಡುವಿನ ಪೈಪೋಟಿ ಹೇಗೆ ಸತ್ಯದ ಮೇಲೆ ಕಲ್ಲು ಹಾಕುವ ಕೆಲಸ ಮಾಡಿಸುತ್ತದೆ ಎಂಬುದು ನನಗೆ ಮೊದಲ ಬಾರಿ ಅರ್ಥವಾಗಿತ್ತು. ಜೊತೆಗೆ ಬೇಸರವೂ ಆಗಿತ್ತು.
ಚಾನಲ್ ಗಳಲ್ಲಿ ಸುದ್ದಿಗಳನ್ನು ಸೆನ್ಸೇಶನಲೈಸ್ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನನ್ನನ್ನು ಅಂದಿನಿಂದ ಕಾಡುತ್ತಲೇ ಇದೆ. ಆದರೆ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.
ನಾನು ಜೀ ಕನ್ನಡ ವಾಹಿನಿಗೆ ಅಖಾಡಾ ಕಾರ್ಯಕ್ರಮವನ್ನು ಮಾಡುತ್ತಿದ್ದಾಗ ನಂತರ ಮಹಾಯುದ್ಧ್ ಮಾಡುತ್ತಿದ್ದಾಗ ಹಲವೆಡೆ ಮಾರಾಮಾರಿಗಳೇ ನಡೆದು ಹೋದವು. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಭ್ಯ ರಾಜಕಾರಣಿ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನ ಅನಿಲ್ ಪಾಟೀಲ್ ಬೆಂಬಲಿಗರು ನನ್ನ ಮೇಲೆ ಏರಿ ಬಂದರು. ದಾವಣಗೆರೆಯಲ್ಲಿ ಚಿತ್ರೀಕರಣ ಮಾಡುವಾಗ ಈ ನಗರವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿದ ಹೆಗ್ಗಳಿಕೆ, ಶಾಮನೂರು ಶಿವಶಂಕರಪ್ಪ ಅವರದ್ದು ಎಂದೆ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸುವುದಕ್ಕೆ ಬಂದು ಪೋಲೀಸರನ್ನು ಕರೆಸಬೇಕಾಯಿತು.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲಿಸಮ್ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಆಗ ಅಲ್ಲಿನ ಪತ್ರಕರ್ತರೊಬ್ಬರು, ನಕ್ಸ್ಲಲ್ ಚಳವಳಿಯಲ್ಲಿ ಇರುವ ಬಹುತೇಕರು ದಲಿತರು ಎಂದರು. ಆಗ ದಲಿತ ಸಂಘಟನೆಯ ನಾಯಕರು ವೇದಿಕೆಯ ಮೇಲೆ ಏರಿ ಬಂದು ರಂಪಾಟ ಮಾಡಿಬಿಟ್ಟರು. ನಾನು, ನನ್ನ ಮತ್ತು ದಲಿತ ಚಳವಳಿಯ ನಡುವಿನ ಸಂಬಂಧವನ್ನು ಹೇಳಿ ಪರಿಸ್ಥಿಯನ್ನು ತಿಳಿಗೊಳಿಸಲು ಸುಮಾರು ಮುಕ್ಕಾಲು ಗಂಟೆ ತೆಗೆದುಕೊಂಡಿತು. ಆದರೆ ಈ ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಈ ಪತ್ರಕರ್ತರ ವಿರುದ್ಧ ಪಾವಗಡ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿದವು. ಯಾವ ಕಾರಣಕ್ಕೂ ಆ ಪತ್ರಕರ್ತರು ಹೇಳಿದ ಮಾತುಗಳನ್ನು ಪ್ರಸಾರ ಮಾಡಬಾರದು ಎಂದು ನಮ್ಮ ಮೇಲೆ ಒತ್ತಡ ಹೇರತೊಡಗಿದರು. ನಾನು ಅವರಿಗೆ ಒಂದು ಮಾತು ಹೇಳಿದೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕಿದೆ. ಅದನ್ನು ಯಾರೂ ಮೋಟಕುಗೊಳಿಸಲು ಸಾಧ್ಯವಿಲ್ಲ. ನಾನು ಅವರು ಹೇಳಿದ್ದನ್ನು ಪ್ರಸಾರ ಮಾಡಿಯೇ ಮಾಡುತ್ತೇನೆ. ನಾನು ಹೇಳಿದಂತೆ ಪ್ರಸಾರ ಮಾಡಿದೆ. ಆ ಪತ್ರಕರ್ತರು ಕೆಲವು ದಿನ ಪಾವಗಡದಿಂದ ತಲೆ ಮರೆಸಿಕೊಂಡಿದ್ದರು. ನಂತರ ಎಲ್ಲರ ಜೊತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ.
ಈ ಸಂದರ್ಭದಲ್ಲಿ ಈ ಸುದ್ದಿಯನ್ನು ವೈಭವೀಕರಿಸಬಾರದು ಎಂದು ನಾನು ನಿರ್ಧರಿಸಿದೆ. ಹೀಗಾಗಿ ನನ್ನ ಕಾರ್ಯಕ್ರಮದಲ್ಲಿ ನಡೆದ ಯಾವುದೇ ಘಟನೆಗೆ ನಮ್ಮ ಚಾನಲ್ಲಿನಲ್ಲಿ ಹೆಚ್ಚಿನ ಪ್ರಚಾರ ನೀಡಲಿಲ್ಲ. ಹಾಗೆ ಮಾಡಿದ್ದರೆ ಜನಸಮುದಾಯದ ನಡುವಿನ ವೈಮನಸ್ಸು ಇನ್ನಷ್ಟು ದೊಡ್ದದಾಗುತ್ತಿತ್ತು. ಬಸ್ಸು ಲಾರಿಗೆ ಬೆಂಕಿಬೀಳುತ್ತಿತ್ತು. ಸಾರ್ವಜನಿಕ ಆಸ್ತಿಗೆ ಹಾನಿಯಾಗುತ್ತಿತ್ತು. ಆದರೆ ಚಾನಲ್ ನ ವೀಕ್ಷಕರ ಸಂಖ್ಯೆ ಹೆಚ್ಚುವುದಕ್ಕಿಂತ ಸಾರ್ವಜನಿಕರ ನಡುವೆ ಸೌಹಾರ್ಧ ಸಂಬಂಧ ಉಳಿಯುವುದು ಮುಖ್ಯ ಎಂದು ನಾನು ಅಂದುಕೊಂಡೆ.
ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪುವುದು ಕಷ್ತವಾಗಬಹುದು. ಆದರೆ ಮಾಧ್ಯಮ ಸಾಮಾಜಿಕ ಹೊಣೆಗಾರಿಕೆಯನ್ನು ಬಿಡಬಾರದು ಎಂದು ನಂಬಿದವನು ನಾನು. ಹೀಗಾಗಿ ಬೇರೆ ರೀತಿ ವರ್ತಿಸುವುದು ನನಗೆ ಸಾಧ್ಯವೇ ಇಲ್ಲ.
ಕಳೆದ ಎರಡು ಮೂರು ದಿನಗಳಿಂದ ಇದೆಲ್ಲ ನನಗೆ ನೆನಪಾಗುತ್ತದೆ. ಹಾಗೆ ನಾನು ರಾಜ್ಯದ ಬೇರೆ ಬೇರೆ ಕಡೆ ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು ಮನಸ್ಸಿಗೆ ಬರುತ್ತದೆ. ಅವರ ಮುಖಗಳನ್ನು ಕಣ್ಣುಮುಂದೆ ತಂದುಕೊಳ್ಳಲು ಯತ್ನಿಸುತ್ತೇನೆ. ಇವರು ನಾಳೆ ಎಂತಹ ಪತ್ರಿಕೋದ್ಯಮಿಗಳಾಗಬಹುದು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸುತ್ತ್ಣೇನೆ.
No comments:
Post a Comment