ಹೊಸ ತಂತ್ರಜ್ನಾನ, ಅದು ಜೈವಿಕ ತಂತ್ರಜ್ನಾನ ಇರಬಹುದು ಅಥವಾ ಬೇರೆ ತಂತ್ರಜ್ನಾನ ಇರಬಹುದು, ಈ ಬಗ್ಗೆ ಒಂದು ಕೂತೂಹಲ ಜೊತೆಗೆ ಒಂದು ಭಯ ಕೂಡ ಇರಬೇಕಾಗುತ್ತದೆ. ವಿಜ್ನಾನ ಮತ್ತು ವೈಜ್ನಾನಿಕ ಸಂಶೋಧನೆಯಲ್ಲಿ ಇದೇ ಕೊನೆ ಎಂಬುದು ಇಲ್ಲ. ಇದೆಲ್ಲ ಆಯಾ ಕಾಲ ಘಟ್ಟದ ಸತ್ಯ ಮಾತ್ರ. ಅದು ಸಾರ್ವಕಾಲಿಕ ಸತ್ಯ ಅಲ್ಲ. ಈ ಅರಿವು ನಮಗೆ ಇಲ್ಲದಿದ್ದರೆ ನಾವು ಅಯೋಗ್ಯರು.
ಪೃಕೃತಿಗೆ ಒಂದು ನಿಯಮ ಇದೆ. ವಿಜ್ನಾನ ಸದಾ ಈ ನಿಯಮಕ್ಕೆ ಸವಾಲು ಹಾಕುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ನಿಮಗೆ ಸರಳವಾಗಿ ಹೇಳಬೇಕೆಂದರೆ, ದಿನ ಎಂದರೆ ಅಲ್ಲಿ ರಾತ್ರಿಯೂ ಇದೆ. ಹಗಲೂ ಇದೆ. ಹಗಲು ಮತ್ತು ರಾತ್ರಿ ಇರುವುದಿಂದಲೇ ಈ ಭೂಮಿಯ ಮೇಲಿನ ಜೈವಿಕ ಜಗತ್ತು ನಡೆದುಕೊಂಡಿದೆ. ಹಾಗೆ ಒಂದು ಗುಲಾಬಿ ಗಿಡದಲ್ಲಿ ಗುಲಾಬಿ ಹೂವು ಬಿಡುತ್ತದೆ. ಮಾವಿನ ಮರದಲ್ಲಿ ಮಾವಿನ ಕಾಯಿ ಬರುತ್ತದೆ. ಇದೆಲ್ಲ ಪ್ರಕೃತಿಯ ಸಹಜ ಕ್ರಿಯೆಗಳು. ಪೃಕೃತಿಯನ್ನು ಪ್ರೀತಿಸುವ ಒಬ್ಬ ವ್ಯಕ್ತಿ ಅರಳುವ ಗುಲಾಬಿಯನ್ನು ಬೆರಗಿನಿಂದ ನೋಡುತ್ತಾನೆ. ಅದರ ಬಣ್ಣ ಅವನ ಮನಸ್ಸಿಗೆ ಮುದವನ್ನು ನೀಡುತ್ತದೆ. ಆದರೆ ಒಬ್ಬ ವಿಜ್ನಾನಿ ಗುಲಾಬಿಯನ್ನು ನೋಡುವ ರೀತಿ ಬೇರೆ. ಅವನಲ್ಲಿ ಚಿಕಿತ್ಸಕ ಬುದ್ದಿ ಇರುತ್ತದೆ. ಆತ ಈ ಗುಲಾಬಿಯ ಹೂವಿನಲ್ಲಿ ಇರುವ ಜೈವಿಕ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾನೆ. ನಮಗೆಲ್ಲ ಗೊತ್ತಿರುವ ಇನ್ನೊಂದು ಸಂಗತಿ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಜೋಗ ಜಲಪಾತವನ್ನು ನೋಡಿದಾಗ ವಾಟ್ ಏ ವೇಸ್ಟ್ ಎಂದು ಉದ್ಗಾರ ತೆಗೆದರಂತೆ. ಇದು ಒಬ್ಬ ಇಂಜನಿಯರ್ ಅಥವಾ ಒಬ್ಬ ವಿಜ್ನಾನಿ ಯೋಚಿಸುವ ಪರಿ. ನಮಗೆ, ಕವಿ ಹೃದಯ ಇದ್ದರೆ, ವಾಟ್ ಏ ವೇಸ್ಟ್ ಎಂದು ಅನ್ನಿಸುವುದಿಲ್ಲ. ಇದೊಂದು ಪ್ರ್ಕೃತಿಯ ಅದ್ಬೂತವಾಗಿ ಕಾಣುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ವಾರಕ್ಕೆ ಒಮ್ಮೆ ಜೋಗ ಜಲಪಾತವನ್ನು ನೋಡಲು ಹೋಗುತ್ತಿದ್ದೆವು. ಆಗ ಲಿಂಗನಮಕ್ಕಿ ಅಣೆಕಟ್ತು ನಿರ್ಮಾಣ ಆಗಿರಲಿಲ್ಲ. ಹೀಗಾಗಿ ಜೋಗ ಜಲಪಾತ ಸದಾ ದುಮ್ಮಿಕ್ಕುತ್ತಿತ್ತು. ಪ್ರತಿ ಸಲ ಈ ಜಲಪಾತವನ್ನು ನೋಡಿದಾಗಲೂ ಅದು ಹೊಸದಾಗಿ ಕಾಣುತ್ತಿತ್ತು. ಯಾರ ಹಂಗೂ ಇಲ್ಲದೆ ಪ್ರಪಾತಕ್ಕೆ ಧುಮ್ಮಿಕ್ಕುವ ಜಲಪಾತ ನನಗೆ ಏನು ಕಲಿಸಿತು ಎಂಬುದನ್ನು ವಿವರಿಸುವುದು ಕಷ್ಟ. ಆದರೆ ಒಬ್ಬ ವಿಜ್ನಾನಿಗೆ ಜಲಪಾತ ಎಂದರೆ ವೇಸ್ಟ್ !
ಒಬ್ಬ ವಿಜ್ನಾನಿಗೆ ಸಂಶೋಧಕನಿಗೆ ಬದುಕಿನ ಬಗ್ಗೆ ಪ್ರೀತಿ ಇರಬೇಕು. ಆವನ ಆಲೋಚನೆಯ ಜೊತೆಗೆ ಆಧ್ಯಾತ್ಮಿಕತೆ ಇರಬೇಕು, ಕವಿಹೃದಯ ಇರಬೇಕು. ವೈಜ್ನಾನಿಕ ಸಂಶೋಧನೆ ಎಂಬುದು ಮಾನವನ ಅಹಂಕಾರದ ಮೇಲೆ ನಿಂತಿದೆ. ನಾನು ಸಂಶೋಧನೆ ಮಾಡಿದ್ದೇ ಪರಮ ಅದೇ ಅಂತಿಮ ಎಂಬ ನಂಬಿಕೆಯ ಮೇಲೆ ನಿಂತಿದೆ. ಇಂತಹ ಅಹಂಕಾರದಿಂದ ವೈಜ್ನಾನಿಕ ಸಂಶೋಧಕ ಕುರುಡನಾಗುತ್ತಾನೆ. ನಾನು ಸಂಶೋಧಿಸಿದ್ದು ಅಂತಿಮ ಅಲ್ಲದಿರಬಹುದು ಎಂಬ ಅಪನಂಬಿಕೆ ಇದ್ದರೆ ಆತ ನಿಜವಾದ ವಿಜ್ನಾನಿಯೋ ಸಂಶೋಧಕನೋ ಆಗುತ್ತಾನೆ.
ನಮಗೆ ಇರುವುದೊಂದೇ ಭೂಮಿ. ಇಲ್ಲಿ ನಮ್ಮಂತೆಯೇ ಕೋಟ್ಯಾಂತರ ಜೀವಿಗಳಿವೆ. ಗಿಡ ಮರಗಳಿವೆ. ಇವೆಲ್ಲ ಒಂದು ಶಿಸ್ತಿಗೆ ಒಳಪಟ್ಟು ಕೆಲಸ ಮಾಡುತ್ತವೆ. ಪ್ರಕೃತಿಗೆ ಸಹಜವಾದದ್ದು ಮಾತ್ರ ಈ ಜೀವ ಜಗತ್ತನ್ನು ಉಳಿಸಬಹುದು. ಅಸಹಜವಾದುದು ಅಲ್ಲ. ಈಗ ನಾವು ಮಾತನಾಡುತ್ತಿರುವ ಹೊಸ ತಾಂತ್ರಿಕತೆ ಸಹಜವಾದುದ್ದಲ್ಲ. ಯಾಕೆಂದರೆ ಸಂಶೋಧನೆ ಪ್ರಕೃತಿಯ ನಿಯಮವನ್ನು ಬದಲಿಸುವ ಆಶಯವನ್ನು ಹೊಂದಿರುತ್ತದೆ.
ಈಗ ಬಿಟಿ ಬದನೆಯ ವಿಚಾರಕ್ಕೆ ಬರೋಣ. ಈ ಬದನೆ ತಳಿಯನ್ನು ಸಂಶೋಧಿಸಿದವರಿಗೆ ವಿಚಿತ್ರ ಅಹಂಕಾರ ಇದೆ. ನಾನು ಕಂಡುಕೊಂಡಿದ್ದೇ ಸತ್ಯ ಎಂಬ ಅಹಂಬಾವ ಇದೆ. ಈ ಕಾರಣಕ್ಕೆ ಬಿಟಿ ಬದನೆಯ ವಿರುದ್ಧ ಮಾತನಾಡುವವರನ್ನು ಅವರು ತುಚ್ಛವಾಗಿ ಕಾಣುತ್ತಾರೆ. ಯಾವುದೋ ಬಹುರಾಷ್ಟ್ರೀಯ ಕಂಪನಿಯ ವಕ್ತಾರರಂತೆ ಮಾತನಾಡುತ್ತಾರೆ. ಸರಿ ಬಿಟಿ ಬದನೆ ಬೆಳೆಯುವುದರಿಂದ ಭಾರತದ ರೈತ ಆರ್ಥಿಕವಾಗಿ ಸುದೃಡನಾಗುತ್ತಾನೆ ಎಂದು ಮಾತನಾಡುತ್ತಾರೆ. ಆದರೆ ಈ ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಏನಾಯಿತು ಎಂಬ ಸತ್ಯ ನಮ್ಮ ಮುಂದಿದೆ. ಹೊಸ ಹೊಸ ತಳಿಗಳನ್ನು ತಂದು ಹಾಕಿದ ರೈತ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಯಿತು. ಇದನ್ನು ತಯಾರಿಸುವ ಕಂಪನಿಗಳು ಆರ್ಥಿಕವಾಗಿ ಸದೃಡವಾದವು. ರೈತ ರಾಸಾಯನಿಕ ಗೊಬ್ಬರಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಜೊತೆಗೆ ಈಗಲೂ ನಾವು ಫುಡ್ ಸೆಕ್ಯುರಿಟಿ ಬಗ್ಗೆ ಮಾತನಾಡುವ ಸ್ಥಿತಿಯಲ್ಲೇ ಇದ್ದೇವೆ.
ಬಿಟಿ ಬದನೆ ಬೆಳೆದ ರೈತ ತಾನು ಬೆಳೆದ ಬದನೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವಂತಿಲ್ಲ. ಯುರೋಪಿಯನ್ ಯೂನಿಯನ್ ಬಿಟಿ ಬದನೆಯನ್ನು ಬಳಸದಿರುವ ನಿರ್ಧಾರ ಕೈಗೊಂಡಿವೆ. ಈಗ ಐರೋಫ್ಯ ರಾಷ್ಟ್ರಗಳಿಗೆ ಪ್ರತಿಶತ ೬೦ ರಷ್ಟು ಬದನೆಯನ್ನು ಭಾರತದಿಂದಲೇ ರಫ್ತು ಮಾಡಲಾಗುತ್ತದೆ. ಬಿಟಿ ಬದನೆ ಬೆಳೆದರೆ ಈ ರಫ್ತಿನ ಗತಿ ಏನು ?
ನಮಗೆ ವಿಚಿತ್ರ ರೀತಿಯ ಆಧುನಿಕತೆಯ ಹುಚ್ಚು ಹಿಡಿದಿದೆ. ಅಭಿವೃದ್ಧಿಯ ಕನಸು ಕಾಡುತ್ತಿದೆ. ಆದರೆ ಅಭಿವೃದ್ಧಿ ಎಂದರೆ ಏನು ? ಆಧುನಿಕತೆ ಎಂದರೇನು ? ಈ ಸರಳ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ. ಮನೆಯಲ್ಲಿ ರೂಮಿಗೊಂದು ಟೀವಿ, ಜನರಿಗೊಂದು ಕಾರು ಇದ್ದರೆ ಅದು ಅಭಿವೃದ್ಧಿಯಾ ? ಈ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕು. ಆಗ ನಮಗೆ ಬಿಟಿ ಬದನೆ ಯಾಕೆ ಬೇಡ ಎಂಬುದು ಅರ್ಥವಾಗುತ್ತದೆ. ಇಲ್ಲದಿದ್ದರೆ ವಿದೇಶಿ ಕಂಪನಿಗಳ ಜೇಬು ತುಂಬಲು ನಾವು ಕೆಲಸ ಮಾಡುತ್ತೇವೆ. ವಿದೇಶಗಳು ನಡೆಸುವ ಅಪಾಯಕಾರಿ ಸಂಶೋಧನೆಗಳನ್ನು ಪರೀಕ್ಷಿಸುವ ಅಂಗಳ ನಮ್ಮದಾಗುತ್ತದೆ. ಕೊನೆಗೆ ನಮಗೆ ಉಳಿಯುವ ಪ್ರಶ್ನೆ ಅಭಿವೃದ್ಧಿ ಎಂದರೇನು ?
No comments:
Post a Comment