ನಮ್ಮ ಬಗ್ಗೆ ನಾವು ಬರೆದುಕೊಳ್ಳುವುದು ಕಷ್ಟದ ಕೆಲಸ. ನಾವು ಪ್ರೀತಿಸುವ, ನಮ್ಮ ಬದುಕಿನ ಭಾಗವೇ ಆಗಿರುವ, ನಮ್ಮ ವೃತ್ತಿಯ ಬಗ್ಗೆ ಮಾತನಾಡುವುದು ಇನ್ನೂ ಕಷ್ಟ. ಆದರೆ ನಾವು ಮಾತನಾಡಲೇ ಬೇಕು. ಹೇಳುವುದನ್ನು ಹೇಳಲೇ ಬೇಕು. ಯಾಕೆಂದರೆ ನಾವೆಲ್ಲ ಪತ್ರಿಕೋದ್ಯಮಿಗಳು.
ಮಹಾನಗರ ಪಾಲಿಕೆಯ ಚುನಾವಣೆಯ ಕಾವು ಏರುತ್ತಿದ್ದ ಹಾಗೆ ನಾನು ಪತ್ರಿಕೆಗಳನ್ನು ಅಭ್ಯಸಿಸುವನಂತೆ ಓದತೊಡಗಿದೆ. ಚುನಾವಣಾ ಸಮೀಕ್ಷೆಗಳನ್ನು ಓದುವ ಮೂಲಕ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಯತ್ನಿಸಿದೆ.
ಪ್ರಾಯಶ: ನೀವೆಲ್ಲ ಗಮನಿಸಿರಬಹುದು. ಒಂದು ಪತ್ರಿಕೆಯಲ್ಲಿ ಒಂದೇ ದಿನ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ವರದಿಗಳು ಇದ್ದವು. ಒಂದರಲ್ಲಿ ಒಂದು ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದಿದ್ದರೆ ಇನ್ನೊಂದು ವರದಿಯಲ್ಲಿ ಇನ್ನೊಬ್ಬ ಅಭ್ಯರ್ಥಿ ಗೆಲ್ಲುತ್ತಾನೆ ಎಂದಿತ್ತು ! ಆ ವರದಿಗಳ ಪಕ್ಕದಲ್ಲಿ ಅವರು ಪ್ರತಿನಿಧಿಸುವ ಪಕ್ಷದ ಜಾಹೀರಾತುಗಳಿದ್ದವು. ಅಂದರೆ ಅದು ಸಮೀಕ್ಷೆಯಲ್ಲ. ಪೇಡ್ ಸಮೀಕ್ಷೆ ! ಹೀಗಾಗಿ ಒಂದೇ ಪತ್ರಿಕೆ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ಸಮೀಕ್ಷೆಗಳನ್ನು ಪ್ರಕಟಿಸಿತ್ತು.
ಹಾಗೆ, ಟಿವಿ ವಾಹಿನಿಗಳಲ್ಲೂ ಪೇಡ್ ವರದಿಗಳು ಬರುತ್ತಿವೆ ಎಂದು ಯಾರೋ ಸ್ನೇಹಿತರು ಹೇಳಿದರು. ಆದರೆ ನಾನು ಹೆಚ್ಚಿನ ಸುದ್ದಿಗಳನ್ನು ಗಮನವಿಟ್ಟು ನೋಡಿಲ್ಲದಿರುವುದರಿಂದ ಈ ಹೇಳಿಕೆಯನ್ನು ಒಪ್ಪುವುದಾಗಲೀ ನಿರಾಕರಿಸುವುದಾಗಲಿ ಮಾಡುವುದಿಲ್ಲ. ಆದರೆ ಇಂದು ಪತ್ರಿಕೋದ್ಯಮ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಅಂದರೆ ನಾವು ಎತ್ತ ಸಾಗುತ್ತಿದ್ದೇವೆ ಅಂತ.
ನಿಜ, ಇಂದು ಮಾಧ್ಯಮ ಕೇವಲ ಪತ್ರಿಕೆಗಳ ಮಾರಾಟದ ಮೇಲೆ ಆಗಲೀ, ಕಾರ್ಯಕ್ರಮಗಳ ಬದ್ಧತೆಯಿಂದಾಗಲಿ ಉಳಿಯಲಾರದು. ಹಾಗೆ ಜಾಹೀರಾತುಗಳು ಸಹ ಮಾಧ್ಯಮವನ್ನು ಉಳಿಸುವುದು ಕಷ್ಟ. ಆದರೆ, ಈಗ ಅನುಸರಿಸುತ್ತಿರುವ ಮಾರ್ಗ ಎಷ್ಟು ಸರಿ ?
ಈಗ ಕೆಲವು ದಿನಗಳ ಹಿಂದೆ ಟೀವಿಯ ದಿಗ್ಗಜರೆಲ್ಲ ದೆಹಲಿಯಲ್ಲಿ ಒಂದು ವಿಚಾರ ಸಂಕಿರಣವನ್ನು ನಡೆಸಿದರು. ಈ ವಿಚಾರ ಸಂಕಿರಣದಲ್ಲಿ ರಾಜದೀಪ್ ಸರ್ದೇಸಾಯಿ ಸೇರಿದಂತೆ ಎಲ್ಲ ದಿಗ್ಗಜರೆಲ್ಲ ಪಾಲ್ಗೊಂಡಿದ್ದರು. ಅಲ್ಲಿ ಅವರು ಈ ಪೇಡ್ ನ್ಯೂಸ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಸ್ವಾಗತಾರ್ಹ. ಆದರೆ ಎಷ್ಟು ರಾಷ್ಟೀಯ ವಾಹಿನಿಗಳು ಪೇಡ್ ನ್ಯೂಸ್ ನಿಂದ ಹೊರತಾಗಿವೆ ಎಂದು ಕೇಳಿದರೆ ಉತ್ತರ ನೀದುವುದು ಸುಲಭವಲ್ಲ.
ಪತ್ರಿಕೋದ್ಯಮ ಬದಲಾಗುತ್ತಿದೆ. ಪತ್ರಿಕೋದ್ಯಮಿಗಳು ಬದಲಾಗುತ್ತಿದ್ದಾರೆ. ಎಲ್ಲೆಡೆ ಕುರುಡು ಕಾಂಚಾಣದ ಭೂತ ನರ್ತನ ನಡೆಯುತ್ತಿದೆ. ಪತ್ರಿಕೋದ್ಯಮಿಗಳು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ( ಹೊಟ್ಟೆಪಾಡಿಗಾಗಿ ! ) ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಿದ್ದಾರೆ. ತಮ್ಮ ತಮ್ಮ ಜಾತಿಯ ರಾಜಕಾರಣಿಗಳ ಹಿತ ಕಾಯಲು ಸಂಕಲ್ಪ ಮಾಡಿದ ಗುಂಪುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪತ್ರಿಕೋದ್ಯಮದ ಆತ್ಮ ಸತ್ತರೆ ಆ ಸಮಾಜದ ಆತ್ಮವೇ ಸತ್ತು ಹೋಗುತ್ತದೆ.
ಮೊದಲು ಎಲ್ಲ ಮಾಧ್ಯಮಗಳ ಮುಖ್ಯಸ್ಥರು ಸೇರಿ ಈ ಬಗ್ಗೆ ಚಿಂತನೆ ನಡೆಸಬೇಕು. ನಾವು ಯಾಕೆ ಪತ್ರಿಕೆಗಳನ್ನು ಮಾಡುತ್ತಿದ್ದೇವೆ, ಯಾಕೆ ಟೀವಿ ಚಾನಲ್ ಗಳನ್ನು ನಡೆಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ಒಂದೊಮ್ಮೆ ಇದು ಹಣ ಮಾಡುವುದಕ್ಕಾಗಿ ಎಂದಾದರೆ ಸಮಾಜದ ಹಿತದೃಷ್ಟಿಯಿಂದ ಅದನ್ನು ಮಾಡದಿರುವುದೇ ಒಳ್ಳೆಯದು. ಲಾಭ ಮಾಡಲು ಬೇರೆ ಬೇರೆ ಉದ್ಯಮಗಳಿವೆ. ಆದರೆ ಪತ್ರಿಕೋದ್ಯಮ ಹಾಗಲ್ಲ. ಅದು ಉಳಿಯಲು ಹಣ ಬೇಕು ಎಂಬುದು ನಿಜವಾದರೂ ಹೇಗಾದರೂ ಹಣ ಮಾಡುವುದೇ ಅದರ ಕೆಲಸವಲ್ಲ. ಈ ಬಗ್ಗೆ ಪತ್ರಿಕಾ ಮಾಧ್ಯಮದ ದಿಗ್ಗಜರು ಯೋಚಿಸಲಿ.
1 comment:
ಈ ಬಿಬಿಎಂಪಿ ಚುನಾವಣೆಯ ಹಿನ್ನಲೆಯಲ್ಲಿ ಎರಡು ಮೂರು ಪತ್ರಿಕೆಗಳಲ್ಲಿ ಇದು ಪೇಯ್ಡ್ ನ್ಯೂಸ್ ಇರಬಹುದಾ? ಎಂಬ ಅನುಮಾನ ಹುಟ್ಟಿಸುವಂತಹ ಸುದ್ದಿಗಳನ್ನು ನಾನೂ ಓದಿದ್ದೇನೆ. ಸಕಾಲಿಕವಾಗಿ ಅದರ ಕುರಿತು ಒಂದು ವಿಮರ್ಶೆ ಮತ್ತು ಆತ್ಮಾವಲೋಕನಕ್ಕೆ ಧನ್ಯವಾದಗಳು. ನನ್ನ ಬ್ಲಾಗ್ http://adiloka.blogspot.com.ಗೊಮ್ಮೆ ಭೇಟಿ ಕೊಡಿ. i want your feedback on the nice series that i am doing.
Post a Comment