ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಪಡೆದುಕೊಳ್ಳುವುದರಿಂದಲೇ ? ಅಥವಾ ನಮಗೆ ಬೇಕು ಅನ್ನಿಸಿದ್ದು ಸಿಗದಿರುವುದರಿಂದಲೇ ?
ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಅಲ್ಲಾಉದ್ದೀನನ ಅದ್ಬುತ ದೀಪದಿಂದ ಪಡೆದುಕೊಳ್ಳುವಂತಾಗಿದ್ದರೆ ಬದುಕು ನೀರಸವಾಗಿಬಿಡುತ್ತಿತ್ತು. ಆಗ ಬದುಕಿಗೆ ಸ್ವಾರಸ್ಯವೇ ಉಳಿದಿರುತ್ತಿರಲಿಲ್ಲ. ನಮಗೆ ಬೇಕು ಅನ್ನಿಸಿದ್ದು ಗಗನದೀಪವಾಗಿದ್ದರೆ ನಾವು ಅದನ್ನು ಪಡೆದುಕೊಳ್ಳುವುದಕ್ಕೆ ಯತ್ನ ನಡೆಸುತ್ತೇವೆ. ಪಡೆದುಕೊಳ್ಳುವ ಯತ್ನವೇ ನಮ್ಮ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಪಡೆದುಕೊಳ್ಳುವುದು ಎನ್ನುವುದು ಕೊನೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಉದಾಹರಣೆಗೆ ಪ್ರತಿಯೊಬ್ಬ ಮಧ್ಯ ವರ್ಗದ ವ್ಯಕ್ತಿಯ ಆಸೆ ಸ್ವಂತ ಮನೆ ಮತ್ತು ಓಡಾಡುವುದಕ್ಕೆ ಒಂದು ಕಾರು ಪಡೆಯುವುದು ಆಗಿರುತ್ತದೆ. ಆದರೆ ಮನೆ ಮತ್ತು ಕಾರು ದೊರಕಿದ ಮೇಲೆ ಆತ ಸಂತೋಷವಾಗಿರುತ್ತಾನಾ ? ಬಹುಶಃ ಇಲ್ಲ. ಮನೆ ಕಾರು ಬಂದ ಮೇಲೂ ಆತ ಮೊದಲಿನಂತ ಇರುತ್ತಾನೆ. ಹೊಸ ಸೌಲಭ್ಯ ಅವನ ಬದುಕಿಗೆ ಶಾಂತಿ ಮತ್ತು ಪ್ರೀತಿಯನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಯಾಕೆಂದರ ಶಾಂತಿ. ಸಮಾಧಾನ ಮತ್ತು ತೃಪ್ತಿ ಎಲ್ಲಿಯೋ ಇರುವ ಎಲ್ಲಿಂದಲೂ ಕೊಂಡು ತರುವ ವಸ್ತುವಲ್ಲ.
ಆದರೆ ನಮಗೆ ಬೇಕು ಅನ್ನಿಸಿದ್ದನ್ನು ಪಡೆದುಕೊಳ್ಳಲು ನಾವು ಯತ್ನ ನಡೆಸುವುದಿದೆಯಲ್ಲ ಅದೇ ಬದುಕು. ಯತ್ನ ಮುಗಿಯಿತೆಂದರೆ ಬದುಕೂ ಮುಗಿಯಿತು.
ದಕ್ಷಿಣ ಭಾರತದ ಖ್ಯಾತ ನಟ, ಪ್ರಕಾಶ್ ರೈ ನಮ್ಮ ಜೊತೆಗೆ ಮಲ್ಲೇಶ್ವರಂ ರೂಮಿನಲ್ಲಿ ಇರುತ್ತಿದ್ದ. ಆತನಿಗೆ ಆಗಲೂ ನಟನಾಗಬೇಕು ಎನ್ನುವ ಅಧಮ್ಯ ಆಸೆ. ಆದರೆ ಆಗ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ನನಗಾಗ ಆರನೂರು ರೂಪಾಯಿ ಸಂಬಳ. ನನ್ನ ಇನ್ನೊಬ್ಬ ಸ್ನೇಹಿತ ಎಲ್. ಸಿ. ನಾಗರಾಜನಿಗೆ ಸಾವಿರದ ಇನ್ನೂರು ರೂಪಾಯಿ. ಪ್ರಕಾಶ್ ರೈಗೆ ಹೇಳಿಕೊಳ್ಳುವಂತಹ ಕೆಲಸ ಇಲ್ಲದಿದ್ದರಿಂದ ಅವನ ವರಮಾನದ ಬಗ್ಗೆ ಯಾವುದೇ ಮಾತನ್ನು ಆಡುವಂತಿರಲಿಲ್ಲ.
ಪ್ರಕಾಶ್ ಪ್ರತಿ ದಿನ ಒಬ್ಬಿಬ್ಬರು ನಿರ್ಮಾಪಕ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದ. ಹಾಗೆ ಹೋಗುವುದಕ್ಕೂ ಅವನ ಬಳಿ ಬಸ್ ಚಾರ್ಜ್ ಗೂ ಹಣ ಇರುತ್ತಿರಲಿಲ್ಲ. ಆಗೆಲ್ಲ ಹಲವು ಬಾರಿ ರಸ್ತೆಯಂಚಿನ ಗಾಡಿಯಲ್ಲಿ ರೈಸ್ ಬಾತ್ ಹಂಚಿಕೊಂಡು ತಿನ್ನುತ್ತಿದ್ದವರು ನಾವು.ಒಂದುವರೆ ರೂಪಾಯಿಯ ಚಿತ್ರಾನ್ನ ನಮ್ಮ ಮೂವರ ಹೊಟ್ಟೆ ತುಂಬುತ್ತಿತ್ತು. ಆಗ ಕ್ವಾರ್ಟರ್ ರಮ್ ಗೆ ಕೇವಲ ೮ ರೂಪಾಯಿ. ಯು ಬಿ ಬೀರಿಗೆ ೯ ರೂಪಾಯಿ. ನಮ್ಮ ತಲಾ ಮೂರು ರೂಪಾಯಿ ಹಾಕಿ ಕ್ವಾರ್ಟರ್ ರಂ ತೆಗೆದುಕೊಂದು ನಾವು ಮಾತನಾಡುತ್ತಿದ್ದೆವು. ಪ್ರಕಾಶ ಖ್ಯಾತ ನಟನಾಗುವ ಕನಸು ಕಾಣುತ್ತಿದ್ದ. ಎಲ್ ಸಿ ನಾಗರಾಜ ಮಾತ್ರ ಹಾಗಲ್ಲ. ಆತನಿಗೆ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಬೇಕು ಅಂತ ಇತ್ತೋ ಇಲ್ಲವೋ ಆದರೆ ಆತ ಕವನ ಬರೆಯುತ್ತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಕ್ರಾಂತಿಯ ಕನಸು ಕಾಣುತ್ತಿದ್ದ. ನನಗೆ ಕ್ರಾಂತಿಯ ಬಗ್ಗೆ ಆಗಲೇ ನಂಬಿಕೆ ಹೊರಟು ಹೋಗಿತ್ತು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮನಸ್ಥಿತಿಯನ್ನು ರೂಪಿಸಿಕೊಂಡು ಬಿಟ್ಟಿದ್ದೆ. ಓದು ಬರವಣಿಗೆ, ಸಿನೆಮಾ,ಟ್ರಿಬಲ್ ಎಕ್ಸ್ ರಂ ನಡುವೆ ನನ್ನ ಬದುಕು ಸಾಗುತ್ತಿತ್ತು.
ಬದುಕನ್ನು ಮುಷ್ಟಿಯಲ್ಲಿ ಹಿಡಿದುಕೊಳ್ಳುವ ಚಲ ನನಗಾಗಲೀ ಎಲ್ಸಿ ಗಾಗಲೀ ಇರಲಿಲ್ಲ. ಆದರೆ ಪ್ರಕಾಶ್ ಹಾಗಲ್ಲ. ಆತ ಎಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಯತ್ನ ನಡೆಸುವ ಚಲವಂತ. ಆತನ ಶಕ್ತಿ ಇದ್ದುದು ಎಲ್ಲವನ್ನೂ ಪಡೆದುಕೊಳ್ಳಬೇಕು ಎಂಬ ಚಲ ಮತ್ತು ಹೋರಾಟದಲ್ಲಿ. ಬೇಕಾದ್ದನ್ನು ಪಡೆದುಕೊಂಡ ಮೇಲೆ ಆತ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಮತ್ತೇನನ್ನೋ ಪಡೆದುಕೊಳ್ಳಲು ಮತ್ತೊಂದು ಹೋರಾಟ.
ನನಗೆ ಅನ್ನಿಸುವ ಹಾಗೆ ಅವನ ಬದುಕು ಮತ್ತು ಯಶಸ್ಸು ಇರುವುದು ಈ ಸತತ ಹೋರಾಟದಲ್ಲೇ ಹೊರತೂ ಪಡೆದುಕೊಂಡ ಸಂತೃಪ್ತಿಯಲ್ಲಿ ಅಲ್ಲ. ಅವನಿಗೆ ಪಡೆದುಕೊಳ್ಳುವುದಕ್ಕೆ ನಡೆಸುವ ಹೋರಾಟದಲ್ಲಿ ಸಂತೋಷ ಇದ್ದರೆ, ನನಗೆ ಪಡೆದುಕೊಳ್ಳದೇ ಇರುವುದರಲ್ಲಿಯೇ ಆ ಸಂತೋಷ ಇದೆ. ಎಲ್ಲವನ್ನು ನನಗಾಗಿ ಬಾಚಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದು ನನಗೆ ಸಂತೋಷವನ್ನು ನೀಡುವುದಿಲ್ಲ.
ಬದುಕು ಮತ್ತು ಹೋರಾಟ ಎನ್ನುವುದು ಒಂದು ಮನಸ್ಥಿತಿ.ಸಂತೋಷ ಸಮಾಧಾನವೂ ಮನಸ್ಥಿತಿಯೇ. ಈ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಮುಖ್ಯವೇ ಹೊರತೂ ಅದು ಹೇಗೆ ದಕ್ಕುತ್ತದೆ ಎಂಬುದರಿಂದ ಅಲ್ಲ. ಆದರೆ ನಾವು ಸಂತೋಷ ಪಡುವುದನ್ನು ಕಲಿಯಬೇಕು. ಸಮಾಧಾನದಿಂದ ಬದುಕುವುದನ್ನೂ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಸದಾ ಚಿಂತೆಯ ಆಗರವಾಗಿ ಬಿಡುತ್ತದೆ. ಇದನ್ನು ಇನ್ನೂ ಸರಳವಾಗಿ ಹೇಳುತ್ತೇನೆ. ನನಗೆ ಬೆಳಿಗ್ಗೆ ನೀರು ದೋಸೆಯನ್ನೋ, ಉಪ್ಪಿಟ್ಟನ್ನೋ ತಿಂದರೆ ಸಾಕು, ಆದರೆ ನನ್ನ ಮಗನಿಗೆ ಬರ್ಗರ್ ಫಿಜ್ಜಾಗಳೆಂದರೆ ಇಷ್ಟ. ಇಲ್ಲಿ ದೋಸೆ ಒಳ್ಳೆಯದೋ ಬರ್ಗರ್ ಫೀಜ್ಜಾ ಹೆಚ್ಚು ಒಳ್ಳೆಯದೋ ಎಂದು ಚರ್ಚೆ ಮಾಡುತ್ತ ಕುಳಿತರೆ ಚರ್ಚೆ ಮಾತ್ರ ಉಳಿಯುತ್ತದೆ ಇದರಿಂದ ಬೇರೆ ಏನೋ ಸಿಗುವುದಿಲ್ಲ. ಆದರೆ ದೋಸೆಯಲ್ಲಿ ನನಗೆ ಸಿಗುವ ಸಂತೋಷ ನನ್ನ ಮಗನಿಗೆ ಬರ್ಗರ್ ಮತ್ತು ಫಿಜ್ಜಾಗಳಲ್ಲಿ ದೊರಕುತ್ತಿದೆ ಎಂಬುದು ಮಾತ್ರ ಮುಖ್ಯ. ಅಂದರೆ ಪ್ರತಿಯೊಬ್ಬರಿಗೂ ಸಂತೋಷ ನೀದುವ ವಸ್ತುಗಳು ಬೇರೆ ಬೇರೆಯಾಗಿರುತ್ತವೆ. ನನಗೆ ಮುಖ್ಯ ಎನ್ನಿಸುವುದು ನಮಗೆ ಸಂತೋಷವನ್ನು ಕೊಡುವುದು ಯಾವುದು ಎಂದು ಗೊತ್ತಿರಬೇಕು. ಅದನ್ನು ತಿಳಿದುಕೊಳ್ಳಲು ಯತ್ನ ನಡೆಸಬೇಕು. ನಾನು ದೋಸೆ ಎಂದರೆ ಬೇರಯವರು ಏನು ಹೇಳುತ್ತಾರೆ ಎಂದು ಚಿಂತಿಸಲು ಪ್ರಾರಂಭಿಸಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಯಾಕೆಂದರೆ ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿರಬಾರದು. ಆಗ ನಮಗೆ ಸಂತೋಷ ದಕ್ಕುವುದಿಲ್ಲ. ನಮ್ಮ ಸಂತೋಷ ನಮ್ಮ ಮೇಲೆ ಮಾತ್ರ ಅವಲಂಬಿಸಿರಬೇಕು. ಆಗ ಮಾತ್ರ ಬದುಕು ಸುಂದರ ವಾಗಿರುತ್ತದೆ.
Subscribe to:
Post Comments (Atom)
ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..
ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...

-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
-
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಹಳಷ್ಟು ಜನ ನನಗೆ ಫೋನ್ ಮಾಡುತ್ತಲೇ ಇದ್ದಾರೆ.. ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಿಮಗೆ ಲಾಟರಿ ಹೊಡೆದಂಗೆ,, ಸಾರ್ ...
2 comments:
ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ಉತ್ತರ ಹೇಳುವುದು ಕಷ್ಟ. ನಮಗೆ ಅರ್ಥಪೂರ್ಣವೆನಿಸುವುದು ಮತ್ತೊಬ್ಬರಿಗೆ ನಿರರ್ಥಕ ಎನಿಸಬಹುದು. ಆದರೂ ಮುಂದೆ ಗುರಿ-ಹಿಂದೆ ಗುರು ಇದ್ದರೆ ಬದುಕು ಅರ್ಥಪೂರ್ಣ ಎನಿಸಬಹುದು. ಸಾಧಿಸುವ ಛಲ ಬೇಕಷ್ಟೆ ; ಆದರೂ 'ಕರ್ಮಣ್ಯೇ ವಾದಿಕಾರಸ್ತೆ ಮಾ ಫಲೇಶು ಕದಾಚನ'
sometimes you like to have pizza...just for a change...after daily fat oily DOSA...
Post a Comment