ಚಿತ್ರದುರ್ಗದ ಮುರಘಾಶ್ರೀ ನಾಡಿನ ಕ್ರಾಂತಿಕಾರಿ ಸ್ವಾಮಿಜಿ ಎಂದೇ ಹೆಸರು ಪಡೆದವರು. ಸನ್ಯಾಸದ ಪರಂಪರಾಗತ ಮೌಲ್ಯಗಳನ್ನು ತಿರಸ್ಕರಿಸಿ ಸಮಾನತೆಯ ಕನಸು ಹೊತ್ತವರು. ಪ್ರತಿ ವರ್ಷ ಅವರು ನೀದುವ ಪ್ರಶಸ್ತಿ ಕೂಡ ಇಂತಹ ಸಾಮಾಜಿಕ ಕ್ರಾಂತಿಯ ಅವರ ಕನಸನ್ನು ನನಸು ಮಾಡುವ ದಿಸೆಯಲ್ಲಿ ಇಡುತ್ತಿರುವ ಹೆಜ್ಜೆ ಎಂದೇ ನಾಡಿನ ಜನ ನಂಬಿಕೊಂಡಿದೆ. ಹಾಗೆ ಎಲ್ಲ ಜಾತಿ ಸಮುದಾಯಗಳಿಗೆ ಧಾರ್ಮಿಕ ನಾಯಕತ್ವವನ್ನು ನೀಡುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ.
ಅವರ ಎಲ್ಲ ರೀತಿಯ ಕ್ರಾಂತಿಯ ಹೆಜ್ಜೆಗಳಿಗೆ ಮಾಧ್ಯಮಗಳು ಬೆಂಬಲ ನೀಡುತ್ತ ಬಂದಿವೆ. ಮಠ ಮಾನ್ಯರನ್ನು ಟೀಕಿಸುವ ಪತ್ರಿಕೆಗಳೂ ಸಹ ಮುರಾಘಾ ಶ್ರೀ ಅವರ ಬಗ್ಗೆ ಟೀಕಿಸಿ ಬರೆದ ಉದಾಹರಣೆಗಳು ಇಲ್ಲ. ಆದರೆ ಕಳೆದ ವಾರ ಸ್ವಾಮೀಜಿ ಅವರಿಗೆ ಮಾಧ್ಯಮದ ಮೇಲೆ ಸಿಟ್ಟು ಬಂದಿತ್ತು. ಅವರು ಪತ್ರಿಕೋದ್ಯಮಿಗಳನ್ನು ಕಾವಲು ನಾಯಿಗಳಾಗಬೇಕಾದವರು ಕೇವಲ ನಾಯಿಗಳಾಗಿದ್ದಾರೆ ಎಂದು ಅಣಿ ಮುತ್ತುಗಳನ್ನು ಉದುರಿಸಿ ಬಿಟ್ಟರು. ಹಾಗೆ ಪತ್ರಿಕೋದ್ಯಮಗಳಿಗೆ ನೀಡಬೇಕಾದ ಆಮಿಷಗಳ ಬಗ್ಗೆ ಪಟ್ಟಿ ನೀಡಿದರು. ಆದರೆ ಅವರ ಈ ಹೇಳಿಕೆಯ ಬಗ್ಗೆ ಪತ್ರಿಕೋದ್ಯಮಿಗಳು ಪ್ರತಿಭಟನೆ ವ್ಯಕ್ತಪಡಿಸಿದಾಗ ಸಾರಿ ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರು. ಸ್ವಾಮೀಜಿ ಅವರದೂ ಉಪ್ಪು ಖಾರ ತಿನ್ನುವ ದೇಹವಾದ್ದರಿಂದ ಪಾಪ ಕೋಪ ಬಂದಿತ್ತು ಎಂದು ಸುಮ್ಮನಾಗೋಣ ಎಂದು ಒಮ್ಮೆ ಅನ್ನಿಸಿದರೂ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಯಾಕೆಂದರೆ ಅವರು ಯಾಕೆ ಪತ್ರಿಕೋದ್ಯಮಿಗಳನ್ನು ನಾಯಿ ಎಂದು ಕರೆದರು ಎಂಬ ಬಗ್ಗೆ ನಾವು ಆಲೋಚನೆ ಮಾಡಲೇಬೇಕಾಗಿದೆ.
ನಾಯಿಯ ನಿಷ್ಟೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಜೊತೆಗೆ ಅದು ಮನೆನಾಯಿ ಆಗಿದ್ದರೆ ಮನೆ ಕಾಯುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯನ್ನು ಕಾಯುತ್ತದೆ. ಜಾತಿ ನಾಯಿಯಾಗಿದ್ದರೆ ಅದಕ್ಕೆ ಒಳ್ಳೆಯ ಆಹಾರ ದೊರಕುತ್ತದೆ. ಬೀದಿ ನಾಯಿಯಾಗಿದ್ದರೆ ಬೀದಿಯಲ್ಲಿ ಬಿದ್ದಿದ್ದನ್ನು ತಿಂದುಕೊಂದು ಬಿದ್ದಿರುತ್ತದೆ. ಆದರೆ ಕಳ್ಳರನ್ನು ಕಂಡರೆ, ಅಪರಿಚತರು ಬಂದರೆ ಬೊಗಳುವುದನ್ನು ನಿಲ್ಲಿಸುವುದಿಲ್ಲ. ಹೀಗಾಗಿ ಅದು ಕಾವಲು ನಾಯಿಯೆಂಬ ಹಣೆ ಪಟ್ಟಿಯನ್ನು ಪಡೆಯಲಿ ಪಡೆಯದಿರಲಿ ಅದು ಕಾವಲು ಕೆಲಸವನ್ನು ನಿಲ್ಲಿಸುವುದಿಲ್ಲ. ಜೊತೆಗೆ ನಾಯಿಯ ಇನ್ನೊಂದು ಗುಣವೆಂದರೆ ಅದು ಅಪರಿಚತರನ್ನು ನಂಬುವುದಿಲ್ಲ. ಜೊತೆಗೆ ರೊಟ್ಟಿ ತುಂಡನ್ನು ಹಾಕಿ ಅದರ ಸ್ನೇಹ ಗಳಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ನಾಯಿ ಮನುಷ್ಯರನ್ನು ಅಷ್ಟು ಬೇಗ ನಂಬುವುದಿಲ್ಲ. ಅಪನಂಬಿಕೆಯೇ ನಾಯಿಯ ಮೂಲ ಗುಣ. ಹಾಗೆ ನಂಬಿಕೆ ಕೂಡ.
ಗೌರವಾನ್ವಿತ ಸ್ವಾಮೀಜಿಯವರು ಪತ್ರಕರ್ತರನ್ನು ಯಾವ ನಾಯಿಯ ಸಾಲಿಗೆ ಸೇರಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರ ಮಾತಿನಲ್ಲಿ ರೊಟ್ಟಿ ಹಾಕಿಯೂ ನಾಯಿ ಕಚ್ಚಿದ ನೋವಿದೆ. ತಾವು ಪತ್ರಕರ್ತರನ್ನು ಕರೆದು ರೊಟ್ಟಿ ಹಾಕಿದರೂ ಅದು ತನ್ನ ಎದುರು ಬಾಲ ಅಲ್ಲಾಡಿಸುತ್ತಿಲ್ಲ ಎಂಬ ವಿಷಾಧವಿದೆ.ಆದರೆ ನಾಯಿಯ ಗುಣವೇ ಹಾಗೆ ಎಂಬುದನ್ನು ಕ್ರಾಂತಿಕಾರಿ ಸ್ವಾಮೀಜಿ ಅರ್ಥ ಮಾಡಿಕೊಳ್ಲದಿರುವುದು ಈ ನಾಡಿನ ದುರ್ದೈವ.
ಸ್ವಾಮೀಜಿ ಅವರು ಈ ನಾಯಿಯ ಆರೋಪ ಮಾಡುವುದಕ್ಕಿಂತ ಸ್ವಲ್ಪ ದಿನಗಳ ಮೊದಲು ಇನ್ನೊಂದು ಹೇಳಿಕೆಯನ್ನು ನೀಡಿದ್ದರು. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಹೇಳಿಕೆಯಾಗಿತ್ತು. ಭೂ ಹಗರಣಕ್ಕೆ ಸಿಕ್ಕು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಈ ನಾಡಿನ ಅತ್ಯುತ್ತಮ ಮುಖ್ಯಮಂತ್ರಿ ಎಂದು ಸರ್ಟಿಫಿಕೇಟ್ ನೀಡಿದ್ದರು. ಅವರಿಗೆ ಮುಖ್ಯಮಂತ್ರಿಗಳ ಅವ್ಯವಹಾರದ ವಾಸನೆ ಬಂದಿರಲಿಲ್ಲ. ಪಾಪ, ಅವರಿಗೆ ಈ ವಾಸನೆ ಹಿಡಿಯುವ ಶಕ್ತಿ ಇರಲಿಲ್ಲ.ಅಂತಹ ಗುಣ ಇರುವುದು ನಾಯಿಗಳಿಗೆ ಮಾತ್ರ. ಆದರೆ ಪತ್ರಕರ್ತರು ನಾಯಿಗಳಾಗಿದ್ದರಿಂದ ನಾಯಿಗಳಿಗಿರುವ ವಾಸನಾ ಶಕ್ತಿ ಇದ್ದುದುರಿಂದ ಅವರು ಬಹುಬೇಗ ಅಕ್ರಮ ವ್ಯವಹಾರಗಳ ವಾಸನೆ ಹಿಡಿದು ಬಿಟ್ಟಿದ್ದರು. ಇದರಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೂ ಆಗಿರಬಹುದು. ತಾವು ಮೆಚ್ಚುವ ಮುಖ್ಯಮಂತ್ರಿಗಳನ್ನು ಈ ನಾಡಿನ ಪತ್ರಿಕೋದ್ಯಮಿಗಳು ಮೆಚ್ಚುತ್ತಿಲ್ಲ ಎಂಬ ಬೇಸರ ಅವರಿಗಿದ್ದರೂ ಇರಬಹುದು. ಹೀಗಾಗಿ ಕೋಪ ಬಂದ ಅವರು ಪತ್ರಕರ್ತರನ್ನು ನಾಯಿಗಳು ಎಂದು ಕರೆದು ಬಿಟ್ಟರು. ಆದರೆ ಹೀಗೆ ಹೇಳುವಾಗ ಅವರು ನಾಯಿಗಳ ಬಗ್ಗೆ ಹೆಚ್ಚಿಗೆ ಯೋಚಿಸಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಸದಾ ಸಾಮಾಜಿಕ ಕ್ರಾಂತಿಯ ಕನಸು ಕಾಣುತ್ತಿರುವ ಅವರಿಗೆ ಮಠದ ಪಕ್ಕದಲ್ಲೇ ಇರುವ ನಾಯಿಗಳನ್ನು ನೋಡುವುದಕ್ಕೆ ಸಮಯ ಇಲ್ಲದಿರಬಹುದು !
ಧರ್ಮ ಕ್ಷೇತ್ರವಾದ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಧರ್ಮವಿದೆ. ಅದರಲ್ಲಿ ಸನ್ಯಾಸ ಧರ್ಮವೂ ಒಂದು. ಸನ್ಯಾಸಿಗಳು ರಾಗ ಧ್ವೇಷದಿಂದ ಹೊರಗಿರಬೇಕು. ಅವರು ಸದಾ ಭಗವಂತನ ಧ್ಯಾನ ಮಾಡುತ್ತಿರಬೇಕು. ಪಾರಮಾರ್ಥಿಕ ಚಿಂತನೆ, ಜೀವ ಮತ್ತು ಪರಮಾತ್ನನ ನಡುವಿನ ಸಂಬಂಧದ ಬಗ್ಗೆ ಯೋಚಿಸಬೇಕು. ರಾಜನಾದವನಿಗೆ ಧರ್ಮ ಮಾರ್ಗದಲ್ಲಿ ಪ್ರಜಾ ಪಾಲನೆ ಮಾಡುವಂತೆ ಬೋಧಿಸಬೇಕು. ಪರಸ್ತ್ರಿಯನ್ನು ತಾಯಿಯಂತೆಯೂ ರಾಜ ಧನವನ್ನು ಪ್ರಜಾ ಧನದಂತೆಯೂ ನೋಡುವಂತೆ ಬೋಧಿಸಬೇಕು. ನೆಲಗಳ್ಳತನ ಮಾಡದಂತೆ ಹೇಳಬೇಕು. ಮುಖ್ಯಮಂತ್ರಿ ಯದೀಯೂರಪ್ಪ ಅವರಿಗೆ ಈ ಬೋಧನೆಯನ್ನು ಮುರುಘಾ ಶ್ರೀ ಮಾಡಿದ್ದಾರೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಅವರು ತಮ್ಮ ಧರ್ಮವನ್ನು ಪಾಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ.
ಇನ್ನು ಮುರುಘಾ ಶ್ರೀಗಳು ಒಪ್ಪಿ ನಡೆಯುವ ಬಸವಣ್ಣ ಕೂಡ ಬಿಜ್ಜಳನ ಆಸ್ಥಾನದಲ್ಲೇ ಇದ್ದುಕೊಂಡೇ ಕ್ರಾಂತಿಕಾರ ನೆನಸಿಕೊಂಡ. ಜಾತಿ ಪದ್ಧತಿಯನ್ನು ವಿರೋಧಿಸಿದ. ವೈದಿಕ ಧರ್ಮದ ಹುಳುಕುಗಳನ್ನು ತೆರೆದಿಟ್ಟ. ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂದ. ಆತ ಎಂದೂ ಬಿಜ್ಜಳ ರಾಜನಾಗಿದ್ದಾನೆ ಎಂಬ ಕಾರಣಕ್ಕೆ ಅವನ ಬಕೆಟ್ ಹಿಡಿಯುವ ಕೆಲಸ ಮಾಡಲಿಲ್ಲ. ಯಾರನ್ನೂ ನಾಯಿ, ಕುನ್ನಿ ಎಂದು ಕರೆಯಲೇ ಇಲ್ಲ. ಇದೆಲ್ಲ ಮುರುಘಾ ಶ್ರೀಗಳ್ಗೆ ಗೊತ್ತಿದೆ ಎಂದು ನಾನು ನಂಬಿದ್ದೇನೆ. ಆದರೂ ಅವರಿಗೆ ನಾಯಿಗಳು ಇದ್ದಕ್ಕಿದ್ದ ಹಾಗೆ ನೆನಪಾದವು. ಪತ್ರಕರ್ತರ ಮೇಲೆ ಕೋಪವೂ ಬಂತು.
ಇದೆಲ್ಲದವುರಗಳ ನಡುವೆಯೂ ನಾನು ಮುರಾಘಾ ಶ್ರೀಗಳಿಗೆ ಪತ್ರಿಕೋದ್ಯಮಿಯಾಗಿ ಕೃತಜ್ನನಾಗಿದ್ದೇನೆ. ಅವರು ನಮ್ಮನ್ನು ಬೇರೆ ಯಾವ ಪ್ರಾಣಿಗಳಿಗೂ ಹೋಲಿಸಿದೇ ನಾಯಿಗೆ ಹೋಲಿಸಿ ನಮ್ಮನ್ನ್ ಉಪಕೃತರನ್ನಾಗಿ ಮಾಡಿದ್ದಾರೆ. ಯಾಕೆಂದರೆ ನನಗೆ ನಾಯಿಗಳೆಂದರೆ ಇಷ್ಟ. ಪತ್ರಿಕೋದ್ಯಮಿಗಳಿಗೆ ತತ್ವ ಮೌಲ್ಯಗಳ ವಿಚಾರದಲ್ಲಿ ನಾಯಿ ನಿಷ್ಟೆ ಇರಬೇಕು ಎಂದು ನಾನು ನಂಬಿದ್ದೇನೆ. ಇಂತಹ ನಿಷ್ಟೆ ಪತ್ರಿಕೋದ್ಯಮಿಗಳಿಗೆ ಇದೆ, ಇಲ್ಲದಿದ್ದರೆ ಆ ನಿಷ್ಟೆ ಬರಲಿ ಎಂದು ಸ್ವಾಮೀಜಿಯವರು ನಮಗೆಲ್ಲ ಆಶೀರ್ವಚನ ನೀಡಿದ್ದಾರೆ.
ಅವರು ನಮ್ಮನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣ ಮಾಡುತ್ತಿರುವ ಸ್ವಾಮೀಜಿಗಳನ್ನು ನಾನು ಪ್ರಾಣಿಗಳಿಗೆ ಹೋಲಿಸಲಾರೆ. ಆ ಮೂಲಕ ಪ್ರಾಣಿಗಳಿಗೆ ಅವಮಾನ ಮಾಡಲಾರೆ. ನನಗೆ ಪ್ರಾಣಿಗಳ ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ನಾನೊಮ್ಮೆ ಸ್ವಾಮೀಜಿಗಳನ್ನು ಪ್ರಾಣಿಗಳಿಗೆ ಹೋಲಿಸಬೇಕಾದ ಅನಿವಾರ್ಯತೆ ಬಂದರೆ, ಹೋಲಿಕೆಗೆ ಯೋಗ್ಯವಾದ ಪ್ರಾಣಿಗಳು ಸಿಗುವುದು ಕಷ್ಟ. ನಾನು ಈ ಸ್ವಾಮೀಜಿಗಳನ್ನು ಬಕ ಧ್ಯಾನ ನಿರತರು ಎಂದು ಕರೆಯಬೇಕಾಗುತ್ತದೆ. ಮೀನು ಸಿಗಲಿ ಎಂದು ಕಣ್ಣು ಮುಚ್ಚಿ ಧ್ಯಾನ ಮಾಡುವ ಪ್ರಾಣಿ ಬಕ ಪಕ್ಷಿ. ಆದರ ಬಕ ಪಕ್ಷಿಯಂತೆ ಧ್ಯಾನ ಮಾಡುವಷ್ಟು ಶಾಂತಿ ಮತ್ತು ಸಹನೆ ನಮ್ಮ ಸ್ವಾಮೀಜಿಗಳಿಗೆ ಇದೆ ಎಂದು ಹೇಳುವುದು ಕಷ್ಟ. ಹೀಗಾಗಿ ಈ ಹೋಲಿಕೆ ಕೂಡ ಸರಿಯಾಗುವಿದಿಲ್ಲ.
ಯಡೀಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಹೋಗುತ್ತಾರೆ ಎಂದುಕೊಂಡಾಗ ಎದ್ದು ನಿಂತ ಈ ಸ್ವಾಮಿ ಗಣದ ಬಗ್ಗೆ ಪಾಪ ಎಂದು ಅನ್ನಿಸುತ್ತದೆ. ಯಾವುದೋ ಹಣ ಆಸ್ತಿಗಾಗಿ ಇವರೆಲ್ಲ ಪುಂಗಿ ಊದುವುದಕ್ಕೆ ಪ್ರಾರಂಭ ಮಾಡಿದರಲ್ಲ ಎಂದು ನೋವಾಗುತ್ತದೆ. ಇಂತಹ ದೇವ ಮಾನವರನ್ನೆಲ್ಲ ಇಂತಹ ದುಸ್ಥಿಗೆ ತಳ್ಳಿದ ಇಂದಿನ ರಾಜಕಾರಣ, ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಬಗ್ಗೆ ಬೇಸರವಾಗುತ್ತದೆ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
7 comments:
sir murugha sgree abhiprayadalli nanage athishayokthiya sangathi kanalilla.badakige namma kavidharigalu kooda backet hidiyo kelasakke ninthbitralla anno besaravide.murugha sree bagge nanaga yeevarage vaicharike niluvina manushya jothege nisturavadhi anno nambike yithu. adre monneya helike sreegala vaicharikatheya matta yistena annisibittide.kaledha sharana meladalli patrakartharu shisthina sipayigalu andidru...adre ondhe varshadalli swamigalu pathrekarthera bagge yistu asahane vyakthapadisalikke karana thileethilla.kelave dinagala hinde avara junior swameeji bagge madyama kelavu sathya heliddannu sreegalu sahisilla anthe kanuthe..jothege yitheechena rajakeeya vidyamanagaku erabahudhu...adene edru murughasreegala bayalli yintha mathu barabaradithu..bandagide..sorry keluvantha thappu yavade sreegalinda agbardu...mechuvanthaddu andre nayiya niyathannu nenapisikondaddu...?
ಪತ್ರಕರ್ತರೆಲ್ಲರೂ ನಾಯಿಯ ನಿಯತ್ತು ಉಳಿಸಿಕೊಂಡಿಲ್ಲ ಸಾರ್
Sir your writing is valuable documents. Please continue your writing to know more about your biography.
sir Iam ASHOKA D.M. your late ex-reporter I likes your writing style. Please continue your writing I want to read your vast experiance. Currently Iam working in a kannada evening daily as incharge+senior reporter/desk.
ಸರ್.. ನಿಮ್ಮ ನೆನಪಿನ ಬುತ್ತಿ ಬಿಚ್ಚಿದ್ದೆನೊ ಸತ್ಯ. ಆದರೆ ಅದು ಹೋಟ್ಟೆತುಂಬಬೇಕು. ಅದಕ್ಕೆ ನಿಲ್ಲಿಸಬೇಡಿ.... ಬೆಳಗಾವಿಯ ಯಾವ ಏರಿಯಾ ಎಂದೂ ತಿಳಿಸಿಲ್ಲಾ... ತುಂಬಾ ಕುತೋಹಲಕ್ಕೆ ದಾರಿ ಮಾಡಿ ಕೊಡುವುದು ಯಾಕೆ..? ಇಂಥ ಸುಂಧರ ಘಳಿಗೆಯ ವಿವರಣೆಯಲ್ಲಿ ಬೇಕ್ ಬೇಡ್ ಪ್ಲೀಜ್......
ಮುರುಘ ರಾಜೇಂದ್ರ ಶರಣರ ಬಗ್ಗೆ ನನಗೆ ಎಷ್ಟು ಗೌರವವಿದೆಯೋ, ಅಷ್ಟೇ ಗೌರವ ನಿಮ್ಮ ಪತ್ರಿಕೋದ್ಯಮ ಪರ ಈ ಪ್ರತಿಕ್ರಿಯೆ ನೋಡಿ ಬಂತು. ಈ ಶರಣರಿಗೆ ಯಡ್ಡಿ ಬಗ್ಗೆ ಅನುಕಂಪವಿದೆ ಎಂದು ನನಗನ್ನಿಸುತ್ತಿಲ್ಲ ಸರ್.
NAGARAJU LM
DHARWAD
heart touching...
Post a Comment