ನೆನಪುಗಳು ವರವೋ ಶಾಪವೋ ? ಈ ಪ್ರಶ್ನೆಗೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಕೆಲವು ನೆನಪುಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಅವುಗಳಿಂದ ಬಿಡುಗಡೆ ಪಡೆಯಲು ನಾವು ಯತ್ನ ನಡೆಸುತ್ತಲೇ ಇರುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥಹ ನೆನಪುಗಳು ನಮಗೆ ಬೇಡ ಎಂದು ಅಂದುಕೊಂಡರೂ ಆ ನೆನಪುಗಳು ಮನಸ್ಸಿನ ಗೋಡೌನ್ ನಿಂದ ಹೊರಕ್ಕೆ ಬಂದಾಗ ನಮ್ಮ ಮನಸ್ಸು ಸಂತೋಷ ಪಡುತ್ತಿರುತ್ತದೆ.ಹೌದು ನಮಗೆ ನೆನಪುಗಳು ಬೇಕು. ನೆನಪುಗಳ ಜೊತೆ ಬದುಕುತ್ತ, ಅವುಗಳ ಜೊತೆ ಅಟವಾಡುತ್ತ, ಕೀಟಲೆ ಮಾಡುತ್ತ ವರ್ತಮಾನವನ್ನು ಎದುರಿಸಿದರೆ ಬದುಕಿನ ಚಂದವೇ ಬೇರೆ. ಬಹಳಷ್ಟು ಜನ ನಮಗೆ ಇಂತ ನೆನಪುಗಳು ಬೇಡ ಎಂದು ಹೇಳುತ್ತಿರುತ್ತಾರೆ. ಇದು ಪಲಾಯನವಾದ. ನೆನಪುಗಳಿಂದ ಬಿಡುಗಡೆ ಪಡೆಯುವ ಯತ್ನವೇ ಸರಿಯಲ್ಲ.
ನಾನು ಇದನ್ನೆಲ್ಲ ಹೇಳುವುದಕ್ಕೆ ಬಹು ಮುಖ್ಯ ಕಾರಣ ನಾನು ಕಳೆದ ಎರಡು ಮೂರು ದಿನ ಬೆಳಗಾವಿಯಲ್ಲಿ ಇದ್ದುದು. ಬೆಳಗಾವಿ ನಾನು ಓದಿದ ಊರು.ಅಲ್ಲಿಯೇ ನನ್ನ ಕಾಲೇಜು ಜೀವನ ರೂಪ ಪಡೆದಿದ್ದು. ನಾನು ಬೆಳಗಾವಿಗೆ ಹೋಗಿದ್ದು ಒಂದು ವಿಚಿತ್ರ ಪರಿಸ್ಥಿತಿಯಲ್ಲಿ. ಆಗ ನನ್ನ ಹೋರಾಟಗಾರನ ಮನಸ್ಥಿತಿ ತುಂಬಾ ಪ್ರಬಲವಾಗಿತ್ತು. ಪ್ರತಿಯೊಂದು ವಿಚಾರಕ್ಕೂ ಜಗಳ ತರಲೆ. ನನ್ನಪ್ಪ ಮಗ ಊರಿನಲ್ಲಿ ಇದ್ದರೆ ಉದ್ದಾರವಾಗುವುದಿಲ್ಲ ಎಂದು ಬೆಳಗಾವಿಗೆ ಕಳುಹಿಸುವ ತೀರ್ಮಾನ ಕೈಗೊಂಡ. ಇದಕ್ಕೆ ಕಾರಣ ಬೆಳಗಾವಿ ಗೋಗಟೆ ಕಾಲೇಜಿನ ಪ್ರಿನ್ಸಿಪಾಲ್ ಡಿ ಏ ಹೆಗಡೆ ಅಂತ. ಅವರು ಅಪ್ಪನಿಗೆ ತುಂಬಾ ಪರಿಚಿತರು. ಅವರ ನಿಗಾದಲ್ಲಿ ಮಗ ಉದ್ದಾರವಾಗುತ್ತಾನೆ ಎಂಬುದು ಅಪ್ಪನ ನಂಬಿಕೆ.
ನಾನು ಬೆಳಗಾವಿಯಲ್ಲಿ ಇದ್ದುದು ಒಬ್ಬ ಆಂಗ್ಲೋ ಇಂಡಿಯನ್ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ. ನನ್ನ ಜೊತೆಗೆ ಅಪ್ಪಿಕೋ ಚಳವಳಿಯ ಮೂಲಕ ಹೆಸರು ಮಾಡಿದ ಪಾಂಡುರಂಗ ಹೆಗದೆ ಹಾಗೂ ಇಬ್ಬರು ಆಸ್ಟ್ರೇಲಿಯಾದ ಹುಡುಗರಿದ್ದರು.
ಮನೆಯ ಯಜಮಾನ್ತಿಯ ಹೆಸರು ಮಿಸೆಸ್ ಫೆರೆರಾ ಅಂತ ನೆನಪು. ಆಕೆಯ ಒಬ್ಬನೇ ಮಗ ಜ್ಯೂಡಿಿಯರಿಯಲ್ಲಿ ಕೆಲಸ ಮಾಡುತ್ತಿದ್ದ. ಸೊಸೆ ತುಂಬಾ ಸುಂದರಿ. ಅವರಿಗೆ ಒಬ್ಬನೇ ಮಗ.ಯಾವುದೋ ಪರ್ವತವೊಂದು ನಡೆದು ಬಂದಂತೆ ಕಾಣುತ್ತಿದ್ದ ಮಿಸ್ ಫೇರೆರಾ ತುಂಬಾ ಒಳ್ಳೆಯ ಹೆಂಗಸು. ಆಕೆ ಏಷ್ಟು ದಪ್ಪಗಿದ್ದಳೆಂದರೆ, ಆಕೆ ಧರಿಸುತ್ತಿದ್ದ ಸ್ಕರ್ಟ್ ಹೊಟ್ಟೆಯ ಭಾಗವನ್ನು ಮುಚ್ಚುವುದಕ್ಕೆ ತೀವ್ರ ಯತ್ನ ನಡೆಸುತ್ತಿರುವಂತೆ ಕಾಣುತ್ತಿತ್ತು. ಈ ಹೆಂಗಸು ನನಗೆ ದೈರ್ಯವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು. ಯಾಕೆಂದರೆ ಅವಳಿಗೆ ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ನಾನು ಜ್ವರ ಬಂದು ಮಲಗಿದ್ದೆ. ನಾನು ಮಲಗಿದ್ದನ್ನು ಕಂಡ ಆಕೆ ಬಂದು ವಿಚಾರಿಸಿದಳು. ನಂತರ ಒಳಗೆ ಹೋಗಿ ಬ್ರಾಂಡಿ ಬಾಟಲ್ ತಂದು ಅದನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿಸಿದಳು. ಮರುದಿನ ಜ್ವರ ಮಾಯವಾಯಿತು. ಆದರೆ ಇದಾದ ನಂತರ ಆಗಾಗ ನಾನು ಜ್ವರ ಬಂದಂತೆ ಮಲುಗುವುದು ಫೇರೆರಾ ಬಂಡು ಬ್ರಾಂಡಿ ಕೊಡುವುದು ಸಾಮಾನ್ಯವಾಯಿತು. ನನಗೆ ಕುಡಿಯಬೇಕು ಅನ್ನಿಸಿದಾಗಲೆಲ್ಲ ಜ್ವರ ಬರುವುದು ಸಾಮಾನ್ಯವಾಯಿತು.
ಪ್ರತಿಯೊಬ್ಬ ಗಂಡಸು ಅಮ್ಮನನ್ನು ಹುಡುಕುತ್ತಿರುತ್ತಾನಂತೆ. ಆತ ತನ್ನ ಹೆಂಡತಿಯಲ್ಲಿ ಕಾಣಲು ಬಯಸುವುದು ಅಮ್ಮನನ್ನೇ. ಯಾಕೆಂದರೆ ನಾವೆಲ್ಲ ಕಣ್ಣು ಬಿಟ್ಟ ತಕ್ಷಣ ಮೊದಲು ನೋಡುವುದು ಅಮ್ಮನನ್ನೇ. ಈ ಫೆರೆರಾ ನನಗೆ ಒಂದು ರೀತಿಯಲ್ಲಿ ಅಮ್ಮನಾಗಿದ್ದಳು. ನಾನು ಈ ಬಾರಿ ಬೆಳಗಾವಿಗೆ ಹೋದಾಗ ಈ ಅಮ್ಮನನ್ನು ಹುಡುಕಿಕೊಂಡು ಹೊರಟೆ. ಆದರೆ ಅವರ ಕುಟುಂಬ ಇರಲಿಲ್ಲ. ಮನೆಯನ್ನು ಬಾಡಿಗೆಗೆ ಕೊಟ್ಟು ಅವರು ಗೋವಾಕ್ಕೆ ಶಿಫ್ಟ್ ಆಗಿದ್ದರು.
ಬೆಳಗಾವಿ ಅಂದ ತಕ್ಷಣ ನನಗೆ ಇಂತಹ ನೋರಾರು ನೆನಪುಗಳು ಬಂದು ಡಿಕ್ಕಿ ಹೊಡೆಯುತ್ತವೆ. ನಾನು ಬೆಳಗಾವಿಯಲ್ಲಿ ಓದಿತ್ತಿದ್ದ ದಿನಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ವಿರಸ ಜೋರಾಗಿತ್ತು. ನಾನು ಓದುತ್ತಿದ್ದುದು ಗೋಗಟೆ ಕಾಲೇಜಿನಲ್ಲಿ.ಗೋಗಟೆ ಒಬ್ಬ ಉದ್ಯಮಿ. ಆದರೆ ಮರಾಠಿಗ. ಆತ ಯಶವಂತರಾವ್ ಚೆವಾಣ್ ಎಂಬ ಹಿರಿಯ ರಾಜಕಾರಣಿಯ ಖಾಸಾ ದೋಸ್ತ. ನಾನು ಕನ್ನಡ ಹೋರಾಟಗಾರರ ಜೊತೆ ಸೇರಿಕೊಂಡು ಗೋಗಟೆಯ ಪ್ರತಿಮೆಯನ್ನು ಕೆಡವುವ ಸಂಚನ್ನು ಮಾಡಿದ್ದೆವು. ಕೊನೆಗೆ ಧೈರ್ಯ ಬರೆದು ಸುಮ್ಮನಾಗಿದ್ದೆವು.
ಇಂಥಹ ಬೆಳಗಾವಿಗೆ ಈ ಬಾರಿ ನಾನು ಹೋಗಿದ್ದು ಬೇರೆ ಉದ್ದೇಶದಿಂದ. ಸುಮ್ಮನೆ ಒಂದೆರಡು ದಿನ ಬೆಂಗಳೂರಿನಿಂದ ಹೊರಕ್ಕೆಇರಬೇಕಾಗಿತ್ತು.ಅದಕ್ಕಾಗಿ ಬೆಳಗಾವಿಗೆ ಹೊರಟು ಬಿಟ್ಟೆ.
ಬೆಳಗಾವಿಯಿಂದ ನಾನು ಹೋಗಿದ್ದು ಗೋಕಾಕಕ್ಕೆ. ಗೋಕಾಕದ ಜಾರಕಿಹೊಳೆ ಸಹೋದರರು ನನಗೆ ಸುಮಾರು ೨೦ ವರ್ಷಗಳ ಸ್ನೇಹಿತರು. ಅವರಿಗೆ ನನ್ನ ಬಗ್ಗೆ ಪ್ರೀತಿ ಮತ್ತು ಗೌರವ. ಗೋಕಾಕಕ್ಕೆ ಹೋದವ ಅವರ ಸತೀಶ್ ಶುಗರ್ಸ್ ಗೆ ಭೇಟಿ ನೀಡಿದೆ. ಸತೀಶ್ ಅವರ ಮನೆಯಲ್ಲಿ ಅವಲಕ್ಕಿ ಚೂಡಾ ತಿಂದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅವರ ಜೊತೆ ಹರಟೆ ಹೊಡೆದು ಬೆಳಗಾವಿಗೆ ಹಿಂತಿರುಗಿದೆ. ಬೆಳಗಾವಿಯ ಹೊಟೆಲ್ ನಲ್ಲಿ ಕುಳಿತಾಗ ಮತ್ತೆ ನನಗೆ ಹಳೆಯ ನೆನಪುಗಳು ಕಾಡತೊಡಗಿದವು. ನಾನು ಬೆಳಗಾವಿಗೆ ಬಂದ ತಕ್ಷಣ ಕಲಿತ ಮೊದಲ ಮರಾಠಿ ಭಾಷೆಯ ಸಾಲು; ಏ ಮುಲಗಿ ಪಾರ್ ಸುಂದರ್ ಆಯೇ...ಅಂದರೆ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ.
ಈ ಬೆಳಗಾವಿ ಕಾಡು ಮನುಷ್ಯನಂತಿದ್ದ ನನ್ನನ್ನು ನಾಗರಿಕನನ್ನಾಗಿ ಮಾಡಿತ್ತು. ಮಾತನಾಡಲು ಹಿಂಜರಿಯುತ್ತಿದ್ದವನಿಗೆ ಮಾತನಾಡಲು ಕಲಿಸಿತ್ತು. ಕುಡಿತ, ಪ್ರೀತಿ, ಪ್ರೇಮ, ಜಗಳ ಹೊರಾಟ ಎಲ್ಲವೂ ಪ್ರಾರಂಭವಾಗಿದ್ದು ಇಲ್ಲಿಯೇ. ನಾವಿದ್ದ ಶ್ರೀಮತಿ ಫೆರೆರಾ ಅವರ ಮನೆಯ ಎದುರು ಲಕ್ಷ್ಮಿ ಬಿಲ್ಡಿಂಗ್ ಎಂಬ ಕಟ್ಟಡವೊಂದಿತ್ತು. ಈ ಕಟ್ಟದಲ್ಲಿ ಉತ್ತರ ಕರ್ನಾಟಕದ ಕಾಲೇಜು ಹುಡುಗರು ರೂಂ ಮಾಡಿಕೊಂಡು ವಾಸವಾಗಿದ್ದರು. ಬಹುತೇಕ ಹುಡುಗರು ಹಣವಂತರು. ಮೋಜು ಮಸ್ತಿ ಅವರ ಬದುಕಿನ ಭಾಗವಾಗಿತ್ತು. ಭಾನುವಾರವಂತೂ ಬೆಳಿಗಿನಿಂದಲೇ ಅಲ್ಲಿ ಗುಂಡಿನ ಸಮಾರಾಧನೆ.
ಅದೊಂದು ಭಾನುವಾರ. ಶ್ರೀಮತಿ ಘೆರೆರಾ ಅವರ ಸೊಸೆ ಮನೆಯ ಮುಂದೆ ಕುಳಿತು ಕೋಳಿ ಮಾಂಸವನ್ನು ಕೊಯ್ದು ಅಡುಗೆಗೆ ಸಿದ್ಧ ಮಾಡುತ್ತಿದ್ದಳು. ಈಕೆ ನಾನು ಮೊದಲು ಹೇಳಿದಂತೆ ತುಂಬಾ ಸುಂದರಿ. ನಿಜವಾದ ಆಂಗ್ಲೋ ಇಂಡಿಯನ್. ಭಾರತ ಮತ್ತು ಬ್ರಿಟೀಷರ ಬಣ್ಣ ಸೇರಿ ಆಕೆಯ ಬಣ್ಣ ಹೆಚ್ಚು ಚಿತ್ತಾಕರ್ಷಕವಾಗಿತ್ತು. ಈ ಲಕ್ಖ್ಶಿ ಬಿಲ್ಡಿಂಗಿನ ಹುಡುಗರು ಒಮ್ಮೆಲೆ ಫೇರೆರಾಳ ಮನೆಯ ಬಳಿ ಬಂದರು. ನೋಡು ನೋಡುತ್ತಿದ್ದಂತೆ ಈ ಸುಂದರ ಸೊಸೆಯನ್ನು ಹೊತ್ತುಕೊಂಡು ಹೊರಟೇ ಬಿಟ್ಟರು. ಅತ್ತೆ, ಮಿಸೆಸ್ ಫೇರೆರಾ ಸೇವ್ ಅಸ್ ಎಂದು ಬೊಬ್ಬೆ ಹೊಡೆಯತೊಡಗಿದಳು. ಯಾರಿಗೆ ಏನು ಮಾಡಬೇಕು ಎಂದು ತಿಳಿಯಲಾಗದ ಸ್ಥಿತಿ.
ನನಗೆ ಆಗ ನೆನಪಾದವರು ಎಸ್. ಜಿ. ಹೆಗಡೆ ಎಂಬ ನಮ್ಮೂರಿನ ಪೋಲೀಸ್ ಇನಸ್ಪೇಕ್ಟರ್. ಅವರು ಬೆಳಗಾವಿಯ ರೈಲ್ವೆ ನಿಲ್ದಾಣದ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆ ಮಿಸೆಸ್ ಪೇರೆರಾಳ ಮನೆಯಿಂದ ಐದು ನಿಮಿಷದ ದಾರಿ. ನಾನು ಅವರಿಗೆ ಫೋನ್ ಮಾಡಿದೆ. ಒಂದೆರಡು ನಿಮಿಷದಲ್ಲಿ ಹೆಗಡೆ ತಮ್ಮ ಪಡೆಯೂಂದಿಗೆ ಹಾಜರಾದರು. ಹುಡುಗರಿಗೆ ಬಡಿದು ಫೆರೆರಾಳ ಸೊಸೆಯನ್ನು ಬಿಡಿಸಿ ತಂದರು. ಜೊತೆಗೆ ಹುಡುಗರನ್ನು ಠಾಣೆಗೆ ಒಯ್ದು ಬೆಂಡೆತ್ತಿದರು.
ಇದಾದ ಮೇಲೆ ಮಿಸ್ ಫೆರೆರಾಳ ಮನೆಯಲ್ಲಿ ನನ್ನ ಗೌರವ ಹೆಚ್ಚಿತು. ನಾನು ಅವರ ಮನೆಯ ಮಗನಂತಾದೆ. ಆಕೆ ನಾನು ನೀಡಬೇಕಾದ ಮಾಸಿಕ ಬಾಡಿಗೆಯನ್ನು ಕೇಳುತ್ತಿರಲಿಲ್ಲ. ನನ್ನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಆ ಮಹಾತಾಯಿ ನನ್ನ ಆರೋಗ್ಯದ ಬಗ್ಗೆ ಅಮ್ಮನಂತೆ ಕಾಳಜಿ ಒಹಿಸುತ್ತಿದ್ದಳು. ನಾನು ಸಸ್ಯಾಹಾರಿ ಆಗಿದ್ದರಿಂದ ನನಗೆ ಪ್ರತ್ಯೇಕ ಅಡುಗೆ ಮಾಡತೊಡಗಿದಳು. ನನಗೆ ಗೊತ್ತಿಲ್ಲದಂತೆ ನಾನು ಊರಿನಲ್ಲಿ ಬಿಟ್ಟು ಬಂದಿದ್ದ ನನ್ನ ಅಮ್ಮ ನನಗೆ ಅಲ್ಲಿ ಸಿಕ್ಕಿಬಿಟ್ಟಿದ್ದಳು.
ಹೊಟೆಲ್ ರೂಮಿನಲ್ಲಿ ಕುಳಿತು ನನ್ನೊಳಗೆ ಇರುವ ಬೆಳಗಾವಿಗಾಗಿ ನಾನು ಮತ್ತೆ ಮತ್ತೆ ಹುಡುಕತೊಡಗಿದೆ. ಮನುಷ್ಯ ಸಂಬಂಧಗಳ ನಿಗೂಢತೆ, ಅದು ಪಡೆದುಕೊಳ್ಳುವ ಆಯಾಮ ನನ್ನಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
2 comments:
nija sir, nenapugalige anthaha shakthi yide. nanna prakara nammalli ketta nenapugalu yiralikke sadhyavilla yakandre nenape anthaddu.yavathadru boradaga ondu pegg yerisi summane nenapinalakke jaridare adara majane bere.anyway nenapugala nanapu madisiddakke thanks...nenapirali
>>>>>>>>ಈ ಲಕ್ಖ್ಶಿ ಬಿಲ್ಡಿಂಗಿನ ಹುಡುಗರು ಒಮ್ಮೆಲೆ ಫೇರೆರಾಳ ಮನೆಯ ಬಳಿ ಬಂದರು. ನೋಡು ನೋಡುತ್ತಿದ್ದಂತೆ ಈ ಸುಂದರ ಸೊಸೆಯನ್ನು ಹೊತ್ತುಕೊಂಡು ಹೊರಟೇ ಬಿಟ್ಟರು.>>>>>>>>>
ಹೀಗೂ.... ಉಂಟೇ? !! ;)
Post a Comment