ನನ್ನ ಅಪ್ಪ ಕಳೆದ ಮಂಗಳವಾರ ಇಹಲೋಕ ಯಾತ್ರೆ ಮುಗಿಸಿದ. ಅಪ್ಪನಿಗೆ ಹುಷಾರಿಲ್ಲ ಎಂಬುದು ದೂರದ ಬೆಂಗಳೂರಿನಲ್ಲಿರುವ ನನಗೆ ತಿಳಿದಿತ್ತು. ಆದರೆ ಇಷ್ಟು ಬೇಗ ಆತ ಜೈ ಎಂದು ಹೊರಟಿ ಬಿಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ.
ಅಪ್ಪನನ್ನು ಕಳುಹಿಸಿಕೊಟ್ಟ ಮೇಲೆ ನಾನು ಅವನ ಬಗ್ಗೆ ಯೋಚಿಸುತ್ತೇನೆ. ನನ್ನ ಅಪ್ಪ ಹೇಗಿದ್ದ ? ಆತ ಏನನ್ನು ನಂಬಿದ್ದ ? ಆತ ಹೇಗೆ ಬದುಕಿದ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ.
ನನ್ನ ಅಪ್ಪ ಎಂದ ತಕ್ಷಣ ನನಗೆ ನೆನಪಾಗುವುದು ಆತನ ನೆಹರೂ ಶರ್ಟು ಮತ್ತು ಬಿಳಿಯ ಲುಂಗಿ. ಆತ ಎಂದೂ ಖಾದಿಯನ್ನು ಬಿಟ್ಟು ಬೇರೆ ಬಟ್ಟೆ ಹಾಕಲಿಲ್ಲ. ಸದಾ ಗರಿ ಗರಿಯಾದ ಇಸ್ತ್ರೀ ಮಾಡಿದ ಶರ್ಟು ಲುಂಗಿ. ಹೆಗಲ ಮೇಲೆ ಒಂದು ಶಾಲು. ಆತ ಹತ್ತಿರದ ಸಿದ್ದಾಪುರಕ್ಕೆ ಹೊರಟನೆಂದರೆ ಅವನ ಸುತ್ತ ಇರುತ್ತಿದ್ದ ನಾಲ್ಕಾರು ಜನ. ಅವರ ಜೊತೆ ಅವನ ಮೆರವಣಿಗೆ ಪೇಟೆಯಲ್ಲಿ ಹೊರಟಿತೆಂದರೆ ಅದನ್ನು ನೋದುವುದೇ ಚಂದ. ಮನೆಯಿಂದ ಹೊರಟ ಮೊದಲು ಬರುತ್ತಿದ್ದುದು ಕನ್ಸುಮರ್ಸ್ ಸೊಸೈಟಿಗೆ. ಅಲ್ಲಿಂದ ಚೌದರಿಯ ಪ್ರದೀಪ್ ಸ್ಟೋರ್ಸ್. ಅಲ್ಲೆಲ್ಲ ಸ್ನೇಹಿತರ ಜೊತೆ ಮಾತನಾಡಿ ಮಹಾಲಸಾ ಹೋಟೆಲ್ ಗೆ ಬಂದು ಒಂದು ಕಪ್ ಬಿಸಿ ಬಿಸಿ ಚಹ ಕುಡಿದು ಜೊತೆಗಿದ್ದವರಿಗೆಲ್ಲ ಚಹಾ ಸಮಾರಾಧನೆ.
ಬೆಳಿಗ್ಗೆ ಹತ್ತಕ್ಕೋ ಹನ್ನೊಂದಕ್ಕೋ ಪೇಟೆಗೆ ಹೋದರೆ ಅವನು ತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ೮ ಗಂಟೆ ಸುಮಾರಿಗೆ. ಬರುವಾಗ ಅವನ ಕೈಯಲ್ಲಿ ಇರುತ್ತಿದ್ದ ಉದ್ದನೆಯ ಜೋಲು ಚೀಲದಲ್ಲಿ ಎಲ್ಲ ದಿನ ಪತ್ರಿಕೆಗಳು ಮಾಸಿಕಗಳು ಇರುತ್ತಿದ್ದವು. ಶಿವರಾಮ ಕಾರಂತ್, ಕುವೆಂಪು, ತೇಜಸ್ವಿ, ಮೊದಲಾದವರ ಯಾವುದೇ ಹೊಸ ಪುಸ್ತಕ ಬರಲಿ, ಅದು ಮೊದಲು ಅಪ್ಪನ ಕೈಚೀಲದಲ್ಲಿ ನುಸುಳಿಕೊಂಡು ಮನೆಯ ಲೈಬ್ರರಿ ಸೇರುತ್ತಿದ್ದವು. ಆತ ಅತಿಯಾಗಿ ಇಷ್ಟ ಪಡುತ್ತಿದ್ದ ದಿನ ಪತ್ರಿಕೆ ಎಂದರೆ ದಿ ಹಿಂದೂ. ಸಿ ರಾಜಗೋಪಾಲಾಚಾರಿ ಅವರು ತರುತ್ತಿದ್ದ ಸ್ವರಾಜ್ ಪತ್ರಿಕೆಯನ್ನು ಅವನು ತರಿಸುತ್ತಿದ್ದ. ಹಾಗೆ ಜರ್ಮನ್ ನ್ಯೂಸ್, ಸೋವಿಯತ್ ಲ್ಯಾಂಡ್ ಪತ್ರಿಕೆಗಳು ಮನೆಗೆ ಬರುತ್ತಿದ್ದವು.
ರಾತ್ರಿ ಮನೆಗೆ ಬಂದವ ಹಿಂದೂ ಪತ್ರಿಕೆಯನ್ನು ತೆಗೆದುಕೊಂಡು ದೊಡ್ಡ ದ್ವನಿಯಲ್ಲಿ ಪಠಣ ಮಾಡುತ್ತಿದ್ದ. ಹಾಗೆ ಸುಧಾ ಕಸ್ತೂರಿ, ಸಂಗಮ, ಮೊದಲಾದ ಪತ್ರಿಕೆಗಳನ್ನು ತರಿಸುತ್ತಿದ್ದ ಅಪ್ಪ ತಾನು ಓದಿ ಮುಗಿಸಿದ ಹೊರತೂ ಅ ಪತ್ರಿಕೆಗಳನ್ನು ಬೇರೆಯವರಿಗೆ ಕೊಡುತ್ತಿರಲಿಲ್ಲ. ಆತ ಒಂದು ರೀತಿಯಲ್ಲಿ ಹುಟ್ಟಾ ಕಾಂಗ್ರೆಸ್ಸಿಗ. ಆದರೆ ಹಳೆಗನ್ನಡ ಮತ್ತು ಹೊಸ ಗನ್ನಡ ಸಾಹಿತ್ಯದ ಬಗ್ಗೆ ಅವನಿಗೆ ಪ್ರೀತಿ ಇದ್ದಂತೆ ಇಂಗ್ಲೀಷ್ ಸಾಹಿತ್ಯದ ಬಗ್ಗೆಯೂಅ ಅಪಾರವಾದ ಪ್ರೀತಿ ಇತ್ತು.
ಷೇಕ್ಶಫಿಯರ್ ನಾಟಕಗಳನ್ನು ಆರಾಧಿಸುತ್ತಿದ್ದ ಅಪ್ಪ ಅವುಗಳನ್ನು ಓದಲು ನೀಡುತ್ತಿದ್ದ. ಹಾಗೆ ಸಮರ್ ಸೆಟ್ ಮಾಂ ನ ಕಾದಂಬರಿಗಳು. ನನಗೆ ಇಂಗ್ಲೀಷ್ ಸಾಹಿತ್ಯವನ್ನು ಓದಲು ನೀಡುತ್ತಿದ್ದ ಆತ ಅವುಗಳ ಬಗ್ಗೆ ವಿಮರ್ಷೆ ಮಾಡುತ್ತಿದ್ದ. ಆದರೆ ನನಗೆ ಸರಿಯಾದ ಇಂಗ್ಲೀಷ್ ಬರುವುದಿಲ್ಲ ಎಂಬ ಸಿಟ್ಟಿ ಅವನಿಗೆ ಕೊನೆಯವರೆಗೆ ಇತ್ತು. ನಾನು ಬೆಳಗಾವಿಯಲ್ಲಿ ಕಾಲೇಜಿಗೆ ಹೋಗುವಾಗ ಇಂಗ್ಲೀಷ್ ನಲ್ಲೇ ಪತ್ರ ಬರೆಯುವಂತೆ ಅದೇಶ ನೀಡಿದ್ದ. ನಾನು ಬರೆದ ಇಂಗ್ಲೀಷ್ ಪತ್ರಗಳಲ್ಲಿ ಇರುವ ತಪ್ಪುಗಳನ್ನು ಮಾರ್ಕ್ ಮಾಡಿ ನನಗೆ ಕಳುಹಿಸುತ್ತಿದ್ದ. ನಾನು ಅಪ್ಪನ ಈ ಅವತಾರಕ್ಕೆ ಹೆದರಿ ಅವನಿಗೆಪತ್ರ ಬರೆಯುವುದನ್ನೇ ನಿಲ್ಲಿಸಿ ಬಿಟ್ಟೆ.
ಹಳೆಗನ್ನಡ ಸಹಿತ್ಯವೂ ಕೂಡ ಅವನನ್ನು ಸೆಳೆದಿತ್ತು. ರನ್ನ ಹರಿಹರ ರಾಘವಾಂಕ, ಜನ್ನ ಪೊನ್ನ ಮೊದಲಾದವರ ಕೃತಿಗಳು ಅವನಿಗೆ ಬಾಯಿ ಪಾಠ. ಕುಮಾರವ್ಯಾಸ ಭಾರತವನ್ನು ಅವರು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ.
ಅಪ್ಪನಿಗೆ ಸಾಕಷ್ಟು ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಮುಖ ಮುಸಡಿ ನೋಡದೇ ಭಾರಿಸಿ ಬಿಡುತ್ತಿದ್ದ. ಹಲವು ಬಾರಿ ತಪ್ಪುಗಳನ್ನು ಮಾಡಿ ಅವನಿಂದ ನಾನು ಹೊಡೆತ ತಿಂದಿದ್ದೇನೆ. ಒಮ್ಮೆಯಂತೂ ಮನೆಯ ಅಂಗಳದ ಕಂಬಕ್ಕೆ ನನ್ನನ್ನು ಕಟ್ಟಿ ದನಕ್ಕೆ ಬಡಿಯುವಂತೆ ನನಗೆ ಬಡಿದಿದ್ದ. ಆತ ಊಟ ಮಾಡಿ ಮಲಗಿದಾಗ ಯಾರಾದರೂ ಗಲಾಟೆ ಮಾಡಿದರೆ ಆತ ಸಹಿಸುತ್ತಿರಲಿಲ್ಲ. ಪಕ್ಕದ ಮನೆಯ ಚಿಕ್ಕಪ್ಪಂದಿರು ಗಲಾಟೆ ಮಾಡಿದರೂ ಹೊಡತ ಮಾತ್ರ ನನಗೆ ಬೀಳುತ್ತಿತು. ನನಗೆ ಹೊಡೆದರೆ ಅವರು ಬುದ್ದಿ ಕಲಿಯುತ್ತಾರೆ ಎಂಬ ನಂಬಿಕೆ ಅವನದಾಗಿತ್ತು.
ಅಪ್ಪ ತನ್ನ ಮನಸ್ಸಿನಲ್ಲಿ ಇದ್ದುದನ್ನು ಯಾರ ಬಳಿಯೂ ಹೇಳಿಕೊಂಡವನಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದಾಗಲೂ ಆತ ಕೊಡು ಗೈ ದೊರೆಯೇ. ಯಾರು ಏನು ಕೇಳಿದರೂ ಇಲ್ಲ ಎಂದು ಹೇಳುವುದು ಅವನಿಗೆ ಗೊತ್ತೇ ಇರಲಿಲ್ಲ. ನಾನು ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೂ ಶಶಿಧರ್ ಬೆಂಗಳೂರಿನಲ್ಲಿ ಹ್ಯಾಂಗೆ ಜೀವನ ಮಾಡ್ತೇನೋ ಎಂದು ತಲೆ ಕೆಡಿಸಿಕೊಂಡಿದ್ದನೇ ಹೊರತೂ ನನ್ನಿಂದ ಯಾವ ನಿರೀಕ್ಷೆಯನ್ನೂ ಇಟ್ತುಕೊಂಡವನಲ್ಲ. ನಾನು ವರ್ಷಕ್ಕೆ ಎರಡು ವರ್ಷಕ್ಕೇ ಮನೆಗೆ ಹೋದರೂ ಯಾಕೆ ಬಂದಿಲ್ಲ ಎಂದು ಒಮ್ಮೆಯೂ ಕೇಳಿದವನಲ್ಲ.
ಇನ್ನೊಂದು ಘಟನೆಯೂ ನನಗೆ ನೆನಪಾಗುತ್ತದೆ. ಅದು ನನ್ನ ಮದುವೆಯ ಸಂದರ್ಭದ್ದು. ನಾನು ಮದುವೆಯಾದ ಹುಡುಗಿ ಸ್ವಜಾತಿಯವಳಲ್ಲ ಎಂದು ತಿಳಿದರೂ ಒಂದೇ ಒಂದು ಮಾತನ್ನೂ ಆತ ಆಡಲಿಲ್ಲ. ಜೊತೆಗೆ ಹೆಣ್ಣು ಒಪ್ಪಿಸಿಕೊಳ್ಳುವ ಸಂದರ್ಭದಲ್ಲಿ ತನ್ನ ಜನೀವಾರವನ್ನೇ ತೆಗೆದು ಬಿಟ್ಟ. ಯಾಕೆಂದರೆ ನನ್ನ ಹೆಂಡತಿಯಾಗುವ ಹುಡುಗಿಯ ನೆಂಟರಿಷ್ಟರಿಗೆ ನಾವು ಬ್ರಾಹ್ಮಣರು ಎಂಬುದು ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಅದು ಗೊತ್ತಾದರೆ ತೊಂದರೆಯಾಗಬಹುದು ಎಂಬ ಭಯ. ಆಗ ಅಪ್ಪ ಹೇಳಿದ್ದು. ಮಗನೇ ನೀನು ಮದುವೆಯಾಗುವುದು ಮುಖ್ಯ. ನನ್ನ ಜನಿವಾರವಲ್ಲ...!
ಅಪ್ಪ ಮಗೇಗಾರಿನ ಮಹಾ ಗಣಪತಿ ನಾಟಕ ಸಂಘದ ಸಂಸ್ಥಾಪಕ ಸದಸ್ಯನಾಗಿದ್ದ. ಹಲವಾರು ನಾಟಕಗಳಲಿ ಅಭಿನಯಿಸಿದ್ದ. ಪ್ರಚಂಡ ರಾವಣ ಮತ್ತು ಕೌಶಿಕ ಅವನು ಬರೆದ ಎರಡು ನಾಟಕಗಳು. ಈ ನಾಟಕಗಳು ಹಲವಾರು ಬಾರಿ ಪ್ರದರ್ಶನ ಕಂಡವು. ಹಾಗೆ ಎರಡು ಯಕ್ಷಗಾನವನ್ನು ಅವನು ಬರೆದಿದ್ದ.
ನಾನು ಬೆಂಗಳೂರಿಗೆ ಬಂದಿ ಇಲ್ಲಿಯೇ ಕಳೆದು ಹೋದ ಮೇಲೆ ಅವನು ನನಗೆ ಎಂದೂ ಬೈಯಲಿಲ್ಲ. ನನ್ನ ಬಗ್ಗೆ ಅವನಿಗೆ ಅಪಾರವಾದ ಪ್ರೀತಿ ಇತ್ತು. ಮಗನ ಬಗ್ಗೆ ಹೆಮ್ಮೆಯಿತ್ತು. ಮಗನ ಪ್ರಾಮಾಣಿಕತೆ ಮತ್ತು ಸಾಧನೆಯಿಂದ ಸಂತೋಷಗೊಂಡಿದ್ದ ಅತ ತನ್ನ ಕೊನೆಯ ದಿನಗಳಲ್ಲಿ ನಾನು ಅವನಿಗೆ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದನಂತೆ. ನನ್ನನ್ನು ನೋಡಬೇಕು ಎಂದು ತಮ್ಮ ಮತ್ತು ಅಮ್ಮನ ಹತ್ತಿರ ಹೇಳುತ್ತಿದ್ದನಂತೆ. ನಾನು ಕಳೆದ ಸೋಮವಾರ ಊರಿಗೆ ದೌಡಾಯಿಸಿದೆ. ಆಗ ಅಪ್ಪ ಅರೆ ಪ್ರಜ್ನಾವಸ್ತೆಯಲ್ಲಿದ್ದ. ಆದರೆ ಅವನಿಗೆ ನಾನು ಬಂದಿದ್ದು ತಿಳಿದಿತ್ತು. ನಾಲ್ಕಾರು ದಿನಗಳಿಂದ ನಿದ್ರೆ ಮಾಡದೇ ಏನೇನೂ ಮಾತನಾಡುತ್ತಿದ್ದ ಅತ ನನ್ನನ್ನು ನೋಡಿದ. ಕೈ ಎತ್ತಿ ಆಶೀರ್ವಾದ ಮಾಡಿದ. ನಿನಗೆ ಗುಣವಾಗುವ ವರೆಗೆ ಆನು ಇಲ್ಲೇ ಇರ್ತಿ ಎಂದಾಗ ಸಮಾಧಾನದಿಂದ ಹಾಗೆ ಮಲುಗಿದ. ರಾತ್ರಿ ಗಂಜಿ ಕುಡಿದ. ಔಷಧ ಸೇವಿಸಿದ. ಆದರೆ ಮರು ದಿನ ಬೆಳಿಗ್ಗೆ ನೋಡಿದಾದ ಅವನಿರಲಿಲ್ಲ.
ಹಾಸಿಗೆ ಹಿಡಿದ ಮೇಲೂ ಆತ ನಾಟಕ ಬರೆಯಲು ಮುಂದಾಗಿದ್ದ. ಆಗ ಅವನ ಕೈ ಕೂಡ ಸ್ವಾದೀನದಲ್ಲಿ ಇರಲಿಲ್ಲ. ಹೀಗಾಗಿ ಮೊಮ್ಮಗ ಕಾರ್ತೀಕನಿಗೆ ಹೇಳಿ ಬರೆಸುತ್ತಿದ್ದನಂತೆ. ನಾಲ್ಕಾರು ದೃಶ್ಯಗಳನ್ನು ಬರೆದು ಮುಗಿಸುವಷ್ಟರಲ್ಲಿ ಅವನು ಅರೆ ಪ್ರಜ್ನಾವಸ್ತೆಗೆ ಸರಿದು ಹೋದ. ಆತನ ನಾಟಕದ ಅಂಕದ ಪರದೆಯೂ ಜಾರಿ ಹೋಗಿತ್ತು.
ನನಗೆ ಅಪ್ಪ ಎಂದಾಕ್ಷಣ ಹೀಗೆ ಹಲವರು ಘಟನೆಗಳು ನೆನಪಾಗುತ್ತವೆ. ನನಗೆ ಓದುವ ಅಭಿರುಚಿಯನ್ನು ಮೂಡಿಸಿದ. ಬದುಕುವುದನ್ನು ಕಲಿಸಿದ. ಬದುಕಿನಲ್ಲಿ ಮೌಲ್ಯಗಳು ಮುಖ್ಯ, ಹಣವಲ್ಲ ಎಂದು ಪಾಠ ಹೇಳಿದ. ಜಾತ್ಯಾತೀತ ಮೌಲ್ಯಗಳನ್ನು ನನ್ನೊಳಗೆ ತುಂಬಿದ. ಬೆರೆಯವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ವ್ಯಕ್ತಿತ್ವ ರೂಪಗೊಳ್ಳುವಂತೆ ಮಾಡಿದ. ಬೇರೆಯವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಬದುಕುವ ದಾರಿ ತೋರಿಸಿದ.
ಹಾಗೆ ನನ್ನೊಳಗೆ ಒಬ್ಬ ಪತ್ರಿಕೋದ್ಯಮಿಯನ್ನು ಹುಟ್ಟು ಹಾಕಿದವನೂ ಅವನೇ. ನಾನು ಸಣ್ಣವನಿರುವಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಣೆ ಹಾಗೂ ಲೇಖನಗಳನ್ನು ಬರೆಯುತ್ತಿದ್ದ ಆತ ನನಗೆ ಬರೆಯುವ ಅಭಿರುಚಿ ಬೆಳೆಯುವಂತೆ ಮಾಡಿದ.
ಅಪ್ಪ ನನ್ನಿಂದ ಏನನ್ನೂ ನಿರೀಕ್ಷಿಸಲಿಲ್ಲ. ನಾನು ಅವನಿಗೆ ಏನನ್ನೂ ಕೊಡಲಿಲ್ಲ. ಆದರೆ ಅವನು ನನಗೆ ನೀಡಿದ್ದನ್ನು ನಾನು ಈ ಜನ್ಮದಲ್ಲಿ ಮರೆಯಲಾರೆ. ಆ ಋಣವನ್ನು ನಾನು ತೀರಿಸಲಾರೆ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
6 comments:
Simply Super! Heart touching
ದೇವರು ನಿಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ.
ಅವರ ವ್ಯಕ್ತಿತ್ವ ಚಿತ್ರಿಸುತ್ತಾ, ತಂದೆಯವರ ಯಕ್ಷಗಾನ, ನಾಟಕ, ಪುಸ್ತಕ ವ್ಯಾಮೋಹ, ಇಂಗ್ಲೀಷ್ ಪರಿಣಿತಿ ಹೀಗೆ ಹಲವು ಮಗ್ಗುಲುಗಳಲಿ ತೆರೆದುಕೊಳ್ಳುವ ಅವರ ವ್ಯಕ್ತಿತ್ವವನ್ನೂ ಹಾಗೂ ಅವರ ಸಿಟ್ಟಿನ ಬಗ್ಗೆಯೂ ಚೆನ್ನಾಗಿ ವಿವರಿಸಿದ್ದೀರ.
(ನಾನು ತೀರಾ ಚಿಕ್ಕವನಿದ್ದಾಗಲೇ ನನ್ನಪ್ಪ ತೀರಿಕೊಂಡರು. ನನಗಾತನ ಪಾತ್ರ ಪರಿಚಯ ಆತನ ಪರಿಚಿತರ ಬಾಯಲ್ಲಷ್ಟೇ ನಿರೂಪಿತ!)
sir appajiyavra bagge thumba channagigi barediddiri, nanu nimma abimaniyagiruve gurugale
Great article. Many of them made think of my dad.
ಅಪ್ಪನ ಬಗ್ಗೆ ಬರೆದಿದ್ದು ಸಹಜವಾಗಿದೆ, ಅಪ್ಪ-ಅಮ್ಮ ತಪ್ಪುಮಾಡುವುದಿಲ್ಲ. ತಮ್ಮ ಕುಡಿಗಳು ಬೆಳೆಯಲಿ, ಬೆಳಗಲಿ ಎಂಬುದೇ ಅವರ ಆಶಯ. ಮಾತೊಂದು ಹೀಗಿದೆ ಹೊರಗಿನಿಂದ ಬಂದರೆ ಹೆಂಡತಿ ಗಂಡನ ಜೇಬನ್ನು ತಡವುತ್ತಾಳಂತೆ, ಅದೇ ಅಮ್ಮ ಮಗನ ಹೊಟ್ಟೆ ತಡವುತ್ತಾಳಂತೆ! ಅಂತರ ಹಿಂದಿಗೊ ಇಂದಿಗೂ ಎಂದಿಗೂ ಅದೇ ಇರುತ್ತದೆ ! ಅಪ್ಪನಿಗೆ ಮಗ ಬಯಸಿದ್ದನ್ನೆಲ್ಲಾ ಕೊಡಲು ಸಾಧ್ಯವಾಗದ ಕ್ರಗು ಇದ್ದೇ ಇರುತ್ತದೆ. ಮುಪ್ಪಿನ ದಿನಗಳಲ್ಲಿ ಅಪ್ಪ-ಅಮ್ಮ ಬಯಸುವುದು ತಮ್ಮ ಮಕ್ಕಳು ಹತ್ತಿರ ಇರುವುದನ್ನು. " ಕೈಲಪ್ಪವರೀಗೆ ಹೇಗಾದರೂ ನಡೀತು ಆಮೇಲ್ಯಾರ್ ನೋಡ್ತ್ವ, ಮಕ್ಳ ಇದ್ದವೆಲ್ಲಾ ದೂರ್ ದೂರ್ ಇದ್ದ " ಇದು ಇಂದಿನ ಅಪ್ಪ-ಅಮ್ಮ ಅನುಭವಿಸುವ ಗತ್ಯಂತರವಿಲ್ಲದ ಬದುಕು. ಅಪ್ಪ-ಅಮ್ಮನ ಮುಖದ ನಗು ಮಕ್ಕಳ ಬಾಳಿಗೆ ಕ್ಷೇಮ. ಅಪ್ಪನ ಸ್ಥಾನದ ನೆನಪಾಗಿ ಕಣ್ಣಾಲಿಗಳು ತುಂಬಿದವು, ಗತಿಸಿದ ನಿಮ್ಮಪ್ಪನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ಶಶಿಧರ ಭಟ್ಟ ಅವರೇ, ಏಕವಚನದಲ್ಲಿ ಅಪ್ಪನನ್ನು ಸಂಬೋಧಿಸುತ್ತಾ ನಿಮ್ಮ ಮತ್ತು ನಮ್ಮ ತಂದೆಯ ಸಂಬಂಧದ ಆತ್ಮೀಯತೆಯನ್ನೂ, ಅವರ ಸಾಹಿತ್ಯದ ಆಸಕ್ತಿಯನ್ನೂ, ನಿಮ್ಮಲ್ಲಿ ಹುಟ್ಟುಹಾಕಿದ ಬದುಕಿನ ಮೌಲ್ಯ, ಆದರ್ಶಗಳನ್ನೂ ಲೇಖನದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದಿರಿ. ಇದಕ್ಕಿಂತ ದೊಡ್ಡ ಶ್ರದ್ದಾಂಜಲಿ ಯಾವುದಿದೆ? ನೀವು ಬಹಳ ಅದೃಷ್ಟವಂತರು. ಹಾಗೆಯೇ ನಿಮ್ಮ ಅಪ್ಪ ಕೂಡಾ!
ಶೀಲಾ
Post a Comment