Sunday, September 13, 2015

ಧರ್ಮ ನಿರಪೇಕ್ಷತೆ ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು..



ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ ಉತ್ತರವಿಲ್ಲ. ನಾನು ಹುಡುಗನಿದ್ದಾಗ ನನಗೆ ಈ ಸಮಸ್ಯೆ ಎದುರಾಗಲೂ ಇಲ್ಲ. ಇದನ್ನು ಇನ್ನು ವಿವರಿಸುವುದಕ್ಕೆ ಮೊದಲು ನಾನು ನನ್ನ ಹಿನ್ನೆಲೆಯನ್ನು ತಿಳಿಸಲೇಬೇಕು.
ನನ್ನದು ಕಾಂಗ್ರೆಸ್ ಹೋರಾಟಗಾರರ ಕುಟುಂಬ. ನನ್ನ ಅಪ್ಪ ಮತ್ತು ಅಜ್ಜ ಇಬ್ಬರೂ ಕಟ್ಟಾ ಕಾಂಗ್ರೆಸ್ಸಿಗರು. ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಯರವಾಡ ಜೈಲಿನಲ್ಲಿ ಇದ್ದವರು ನನ್ನ ಅಜ್ಜ.. ಅಪ್ಪ ಸಣ್ಣವ ಹುಡುಗನಾದ್ದರಿಂದ ಅವನು ಜೈಲಿಗೆ ಹೋಗಲಿಲ್ಲ. ಅದಕ್ಕೆ ಬದಲಾಗಿ ಖಾಸಗಿಯಾಗಿ ಇಂಗ್ಲೀಷ್ ಕಲಿತ. ಕನ್ನಡ ಸಾಹಿತ್ಯವನ್ನು ಕರಗತ ಮಾಡಿಕೊಂಡ. ಅವನಿಗೆ ಕಾಂಗ್ರೆಸ್ ಎಂದರೆ ಮುಗಿಯಿತು. ಅದೇ ಪರಮ.. ಕಾಂಗ್ರೆಸ್ ವಿರೋಧಿಗಳನ್ನು ತನ್ನ ಕಡು ವೈರಿಗಳು ಎಂದೇ ಭಾವಿಸುತ್ತಿದ್ದ ಆತ ಕಾಂಗ್ರೆಸ್ ವಿರೋಧಿಗಳ  ಜೊತೆ ಮಾತನ್ನೂ ಆಡುತ್ತಿರಲಿಲ್ಲ. ನನ್ನ ಅಜ್ಜ ಮತ್ತು  ಅಪ್ಪ  ಕಾಂಗ್ರೆಸ್ಸಿಗರಾದರೂ ನೆಹರೂ ಮತ್ತು ಗಾಂಧಿಜಿಯವರ ಬಗ್ಗೆ ವಿರೋಧವಿತ್ತು.. ಗಾಂಧೀಜಿಗಿಂತ, ನೆಹರೂ ಅವರಿಗಿಂತ ಲಾಲ ಬಹಾದ್ದೂರ್ ಶಾಸ್ತ್ರಿ ಎಂದರೆ ಅವರಿಗೆ ಹೆಚ್ಚು ಇಷ್ಟವಾಗುತ್ತಿತ್ತು.
ನಮ್ಮ ಮನೆಯ ಹೆಬ್ಬಾಗಲಿನ ಗೋಡೆಯ ಮೇಲೆ ದೊಡ್ಡ ಗಾತ್ರದ ಫೋಟೋಗಳಿದ್ದವು. ಅಲ್ಲಿ ರಾಮಕೃಷ್ಣ ಪರಮಹಂಸ, ನೆಹರೂ ಇಂದಿರಾ ಗಾಂಧಿ, ಚತ್ರಪತಿ ಶಿವಾಜಿ, ಮೊದಲಾದವರು ಗೋಡೆಯ ಮೇಲೆ ಪ್ರತ್ರಿಷ್ಠಾಪಿಸಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ದೊಡ್ಡ ಗಾತ್ರದ ಗ್ಲಾಸ್ ಹಾಇದ ಫೋಟೋಗಳಲ್ಲಿ ಗಾಂಧಿಯ ಫೋಟೋ ಮಾತ್ರ ಇರಲಿಲ್ಲ. ಒಳಗಡೆ ಕಪಾಟಿನಲ್ಲಿ ಸಾವಿರಾರು ಪುಸ್ತಕಗಳು. ನನ್ನ ಅಪ್ಪ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳ ಭಂಡಾರವನ್ನೇ ಇಟ್ಟಿದ್ದ. ಪಂಪ, ರನ್ನ, ಹರಿಹರ ರಾಘವಾಂಕ, ಜೆನ್ನ ಪೊನ್ನ ಕಾವ್ಯಗಳದ್ದು ಒಂದು ಸಾಲು. ಹೊಸ ಗನ್ನಡದ ಕುವೆಂಪು ಬೇಂದ್ರೆ, ತೇಜಸ್ವಿ ಶಿವರಾಮ ಕಾರಂತರ ಹೊಸ ಪುಸ್ತಕಗಳು ಬಿಡುಗಡೆಯಾದ ತಕ್ಷಣ ಬಂದು ನಮ್ಮ ಪುಸ್ತಕ ಭಂಡಾರವನ್ನು ಸೇರುತ್ತಿದ್ದವು.  ಶೇಕ್ಸಫೀಯರ್ ನ ನಾಟಕಗಳೂ ಸಮರ್ ಸೆಟ್ ಮಾಮ್ ನ ಕಾದಂಬರಿಗಳು ನಮ್ಮ ಮನೆಯಲ್ಲಿದ್ದವು.. ಅಪ್ಪ ಎಂತಹ ಪುಸ್ತಕ ಪ್ರೇಮಿ ಎಂದರೆ ಮನೆಗೆ ಆತ ಶಾರದಾ ನಿಲಯ ಎಂದು ಹೆಸರಿಟ್ಟಿದ್ದ.
ಈ ಶಾರದಾ ನಿಲಯಕ್ಕೆ  ಹಿಂದೂ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುದಾ ಮತ್ತು ಕಸ್ತೂರಿ ನಿಯತ ಕಾಲಿಕೆ, ರಾಜಗೋಪಾಲ ಆಚಾರಿ ಯವರ ಸ್ವರಾಜ್ ಪತ್ರಿಕೆ ಬರುತ್ತಿದ್ದವು. ಅಪ್ಪ ಇವೆಲ್ಲವನ್ನೂ ಓದಿ ಮುಗಿಸಿದ ಮೇಲೆ ಮಾತ್ರ ನಮಗೆ ಓದಲು ಕೊಡುತ್ತಿದ್ದ.. ಕಾರಂತರು ಪುವೆಂಪು ಅವರ ಹೊಸ ಕಾದಂಬರಿಗಳನ್ನು ತರುತ್ತಿದ್ದ ಅವುಗಳನ್ನು ತಾನು ಓದಿ ಮುಗಿಸುವುದಕ್ಕೆ ಮೊದಲು ನಮಗೆ ಮುಟ್ಟಲೂ ಕೊಡುತ್ತಿರಲಿಲ್ಲ.
ನಮ್ಮ ಮನೆಯಲ್ಲಿ ದೊಡ್ಡದಾಗಿ ನಡೆಯುತ್ತಿದ್ದುದು ನವರಾತ್ರಿ. ಒಂಬತ್ತು ದಿನಗಳ ಕಾಲ ರಾತ್ರಿ ನಡೆಯುವ ಪೂಜೆ ಮತ್ತು ಊಟ. ಈ ನವರಾತ್ರಿಯ ಒಂಬತ್ತೂ ದಿನ ಮನೆಯಲ್ಲಿ ಜನರೋ ಜನ. ಪ್ರತಿ ದಿನ ನೂರಾರು ಜನ. ಎಲ್ಲರಿಗೂ ಸುಗ್ರಾಸ ಭೋಜನ.. ನಮ್ಮ ಮನೆಯಲ್ಲಿ ಈ ದುರ್ಗಾ ಪೂಜೆಯಂದು ಮೊದಲು ಸಾರಾಯಿ ನೈವೇದ್ಯ ಮಾಡುವ ಸಂಪ್ರದಾಯ ಇತ್ತಂತೆ. ನಾನು ಹುಟ್ಟುವ ಹೊತ್ತಿಗೆ ಈ ಸಂಪ್ರದಾಯ ನಿಂತು ಹೋಗಿತ್ತು.. ಆದರೆ ನನ್ನ ಅಜ್ಜ ಹೇಳುತ್ತಿದ್ದಂತೆ ಸಾರಾಯಿಯನ್ನು ಪರಿಶಿಷ್ಟ ಜನಾಂಗದವರು ತರುತ್ತಿದ್ದರಂತೆ. ಅವರೇ ದೇವರ ಮುಂದೆ ಸಾರಾಯಿಯನ್ನು ಇಟ್ಟು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಆದರೆ   ದುರ್ದೈವವೋ ಸುದೈವವೋ ನಾನು ಹುಟ್ಟುವ ಹೊತ್ತಿಗೆ, ತಿಳುವಳಿಕೆ ಬರುವ ಹೊತ್ತಿಗೆ ಸಾರಾಯಿ ನೈವೇದ್ಯ ನಿಂತು ಹೋಗಿತ್ತು.
ನವರಾತ್ರಿ ಪೂಜೆಯಲ್ಲಿ ನಮ್ಮ ನೆಂಟರಿಷ್ಠರು ಹೆಚ್ಚಾಗಿ ಫಾಲ್ಗೊಳ್ಳುತ್ತಿದ್ದರೂ ಬೇರೆ ಜಾತಿ ಧರ್ಮದವರೂ ಪಾಲ್ಗೊಳ್ಳುತ್ತಿದ್ದರು. ಎಲ್ಲರೂ ಉದ್ದನೆಯ ದೇವರ ಒಳದ ವರೆಗೆ ಬರುವುದಕ್ಕೂ ಅವಕಾಶವಿತ್ತು. ಅವರೂ ಸಹ ಸಹ ಪಂಕ್ತಿ ಭೋಜನ ಮಾಡುತ್ತಿದ್ದರು. ಒಮ್ಮೊಮ್ಮೆ ಮಾತ್ರ ತಮ್ಮ ಪಂಕ್ತಿಯಲ್ಲಿ ಕುಳಿತ ಅನ್ಯ ಜಾತಿಯವರ ಬಗ್ಗೆ ಬ್ರಾಹ್ಮಣರು ಕೆಂಗಣ್ಣು ಬೀರುವುದನ್ನು ನಾನು ಗಮನಿಸಿದ್ದೆ. ಆದರೆ ಅದನ್ನು ವಿಶ್ಲೇಷಿಸುವ ಶಕ್ತಿ ಆಗ ನನಗೆ ಇರಲಿಲ್ಲ. ಇದನ್ನು ಒಪ್ಪದವರಿಗೂ ನನ್ನ ಅಪ್ಪ ಅಜ್ಜನ ಹತ್ತಿರ ಈ ಬಗ್ಗೆ ಮಾತನಾಡುವ ಧೈರ್ಯ ಇರಲಿಲ್ಲ.
ನವರಾತ್ರಿ ಹೊರತು ಪಡಿಸಿದ ನಮ್ಮ ಮನೆಯಲ್ಲಿ ದೊಡ್ಡ ಹಬ್ಬ ಎಂದರೆ ಗಣೇಶ ಚತುರ್ಥಿ. ಗಣೇಶ ಚತುರ್ಥಿಗೆ ಕೆಲವೇ ದಿನ ಇರುವಾಗ ಚಕ್ಕಲಿ ಕಂಬಳ ನಡುಯುತ್ತಿತ್ತು. ಅಂದು ಮನೆಯವರ ಜೊತೆ ಊರಿನವರು ಬಂದು ಚಕ್ಕಲಿ ಮಾಡಿ ಡಬ್ಬದಲ್ಲಿ ತುಂಬಿಡುತ್ತಿದ್ದರು..ಈ ಕಂಬಳ ಎಂದರೆ ನನಗೆ ತುಂಬಾ ಇಷ್ಟ. ಚಕ್ಕಲಿಗಿಂತ ಅರ್ಧ ಬೇಯಿಸಿದ ಚಕ್ಕುಲಿ ಎಂದರೆ ನನಗೆ ಜೀವ. ಈ ಕಂಬಳಕ್ಕೆ ನನ್ನ ಸ್ನೇಹಿತರು ಮತ್ತು ಸಹಪಾಠಿಗಳನ್ನು ನಾನು ಕರೆಯುತ್ತಿದ್ದೆ. ನನ್ನ ಸ್ನೇಹಿತರೆಲ್ಲ ಈಡಿಗರು. ನಮ್ಮಲ್ಲಿ ಅವರನ್ನು ದೀವರು, ನಾಯ್ಕರು ಎಂದು ಕರೆಯುತ್ತಾರೆ,  ಇವರು ನಮ್ಮ ಮನೆಗೆ ಬಂದು ಕಂಬಳದಲ್ಲಿ ಪಾಲ್ಗೊಂಡು ಚಕ್ಕುಲಿ ತಿಂದು ಹೋಗುತ್ತಿದ್ದರು. ಇವರೆಲ್ಲ ಚಕ್ಕಲಿ ಮಾಡುವ ಅಡುಗೆ ಮನೆಗೆ ಹೋಗಿ ನನ್ನ ಅಮ್ಮನ ಪಕ್ಕ ಕುಳಿತು ಹರಟೆ ಹೊಡೆಯುತ್ತಿದ್ದರು. ಅಮ್ಮ ಅವರ ಸುಖ ದುಃಖ ವಿಚಾರಿಸಿಕೊಳ್ಳುತ್ತಿದ್ದರು. ಅವರಿಗೆ ಚಕ್ಕುಲಿ ನೀಡುವುದರ ಜೊತೆಗೆ ಮನೆಯವರಿಗೂ ಚಕ್ಕುಲಿ ಕಟ್ಟಿ ಕಳುಹಿಸುತ್ತಿದ್ದವಳು ನನ್ನ ಅಮ್ಮ...
ನನ್ನ ಮನೆಯವರಲ್ಲಿ ಯಾರೂ ಚಾರ್ವಾಕರಿರಲಿಲ್ಲ. ಅಪ್ಪ ಮಾತ್ರ ಸ್ವಲ್ಪ ಬೇರೆ. ಆತ ಧರ್ಮ, ಜಾತಿ ಮೊದಲಾದ ವಿಚಾರವನ್ನು ನಂಬುತ್ತಿದ್ದನೇ ಅಥವಾ ಇಲ್ಲವೇ ಎಂಬುದು ನನಗೆ ಕೊನೆಯ ವರೆಗೆ ತಿಳಿಯಲಿಲ್ಲ. ಆತ ತನ್ನ ನಡುವಳಿಕೆಯಲ್ಲಿ ಬ್ರಾಹ್ಮಣನಾಗಿರಲಿಲ್ಲ. ಆತ ಸಂಧ್ಯಾ ವಂದನೆ ಮಾಡಿದ್ದು ನಾನು ನೋಡಿಲ್ಲ. ಅವನದು ಏನಿದ್ದರೂ ರಾಜಕೀಯ ವಿಶ್ಲೇಷಣೆ, ಓದು ಬರೆಹ ಮಾತ್ರ. ಅವನ ಸ್ನೇಹಿತರಲ್ಲಿ ಎಲ್ಲ ಜಾತಿಯ ಜನ ಇದ್ದರು. ಆದರೆ ಸ್ವಜಾತಿಯ ಸ್ನೇಹಿತರು ಅವನಿಗೆ ಇರಲೇ ಇಲ್ಲ.. ವರ್ಷದಲ್ಲಿ ಒಮ್ಮೆ ಬರುವ ಆಲೆ ಮನೆ ಅಂದರೆ ಕಬ್ಬನ್ನು ಬೆಲ್ಲವಾಗಿಸುವ ಕಾಲದಲ್ಲಿ ಅವನ ಸ್ನೇಹಿತರೆಲ್ಲ ಬರುತ್ತಿದ್ದರು. ಜೋನಿ ಬೆಲ್ಲ ತಿಂದು ಸಂತೋಷ ಪಡುತ್ತಿದ್ದರು. ಅಪ್ಪ ಅವರಿಗೆಲ್ಲ ಮನೆಗೆ ತೆಗೆದುಕೊಂಡು ಹೋಗಲು ಕಬ್ಬಿನ ಹೊರೆಯನ್ನೇ ಹೇರಿ ಕಳುಹಿಸುತ್ತಿದ್ದ. ಇದು ಕೆಲವೊಮ್ಮೆ ಅಜ್ಜನಿಗೆ ಭಾರಿ ಸಿಟ್ಟು ಬರುವಂತೆ ಮಾಡುತ್ತಿತ್ತು. ಬೆಳೆದ ಬೆಳೆಯನ್ನೆಲ್ಲ ಹೀಗೆ ಹೇರಿ ಕಳುಹಿಸಿದರೆ ಹೇಗೆ ಎಂದು ಆತ ಕೂಗಾಡುತ್ತಿದ್ದ. ಆದರೆ ಅಪ್ಪ ಮಾತ್ರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಈ ಅನುಭವದಿಂದಲೇ ಇರಬಹುದು. ನನಗೆ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು ಮಾತ್ರ ಸಾಧ್ಯ.. ನನಗೆಂದೂ ನನ್ನ ಜಾತಿಯೂ ಕಾಡಿಲ್ಲ. ಬೇರೆಯವರ ಜಾತಿಯೂ ಮುಖ್ಯ ಎಂದು ಅನ್ನಿಸಲಿಲ್ಲ.
ಈ ಸಂದರ್ಭದಲ್ಲಿ ನಾನು ಇನ್ನೊಂದು ಮಾತನ್ನು ಹೇಳಬೇಕು. ನನ ಮಗ ಎಸ್ ಎಸ್ ಎಲ್ ಸಿ ಓದುತ್ತಿದ್ದ. ಅದೊಂದು ದಿನ ಆತ ನನ್ನ ಬಳಿ ಬಂದು ಕೇಳಿದ. ಆಪ್ಪಾ ನಾವು ಬ್ರಾಹ್ಮಣರಾ ? ನಾನು ಯಾಕೆ ಈ ಪ್ರಶ್ನೆ ಎಂದೆ. ನಿನ್ನ ಅಪ್ಪನ ಹೆಸರಿನ ಮುಂದೆ ಭಟ್ ಎಂದಿದೆ. ಹಾಗಿದ್ದರೆ ನೀನು ಬ್ರಾಹ್ಮಣ. ಆದರೆ ನಿನಗೆ ಹೋಲಿ ಥ್ರೆಡ್ ಇಲ್ಲ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ ಎಂಬ ನನ್ನ ಮಗ. ನನಗೆ ಶಾಕ್ ಆಯಿತು.. ಜಾತಿಯ ಬಗ್ಗೆ ಏನನ್ನೂ ತಿಳಿಸದೇ ಬೆಳಸಿದ ನನ್ನ ಮಗನಲ್ಲಿ ಜಾತಿಯ ಪ್ರಶ್ನೆಯನ್ನು  ಹುಟ್ಟಿ ಹಾಕಿದ್ದು ನಮ್ಮ ಸುತ್ತಲಿನವರೇ ಎಂದು ನನಗೆ ಅನ್ನಿಸಿತು.
ಜಾತಿ ವಾದ ಮತ್ತು ಕೋಮುವಾದ ಎಲ್ಲರ ಮನಸ್ಸಿನಲ್ಲೀ ಭೂತ ನರ್ತನ ಮಾಡುತ್ತಿರುವ ಈ ಕಾಲ ಘಟ್ಟದಲ್ಲಿ ನಾನು ಇದನ್ನೆಲ್ಲ ನೆನಪು ಮಾಡಿಕೊಳ್ಳುವುದಕ್ಕೆ ಕಾರಣಗಳಿವೆ. ಇಂದು ಜಾತಿ ಮತ್ತು ಕೋಮುವಾದದ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆಗೆ ಬಹಳ ಮುಖ್ಯವಾಗಿದೆ. ಕೋಮುವಾದ ಮತ್ತು ಜಾತಿ ವಾದದಲ್ಲಿ ನಂಬಿಕೆ ಇಟ್ಟ ಜನ ಒಂದೆಡೆ ನಿಂತಿದ್ದಾರೆ. ಈ ಸಮುದಾಯದಲ್ಲಿ ಇದರಿಂದ ಲಾಭ ಪಡೆಯುತ್ತಿರುವವರು ಮತ್ತು ಪಡೆದವರು ಇದ್ದಾರೆ, ಹಾಗೆ ಶೋಷಣೆಗೆ ಒಳಗಾದವರೂ ಇದ್ದಾರೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದಲ್ಲಿ ಬಡವರು ಮತ್ತು ಶೋಷಿತ ಜನಾಂಗಕ್ಕೆ ಸೇರಿದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರನ್ನು ನಾನು ದಾರಿ ತಪ್ಪಿದವರು ಮತ್ತು ದಾರಿ ತಪ್ಪಿಸುವವರು ಎಂದು ಎರಡೂ ಭಾಗ ಮಾಡಲು ಇಚ್ಚಿಸುತ್ತೇನೆ. ದಾರಿ ತಪ್ಪಿಸುವವರನ್ನು ತಕ್ಷಣ ಬದಲಾಯಿಸುವುದು ಕಷ್ಟ. ಆದರೆ ದಾರಿ ತಪ್ಪಿದವರನ್ನು ದಾರಿಗೆ ತರುವ ಕೆಲಸ ಮಾಡಬಹುದು. ಆದರೆ ಈ ಕೆಲಸವನ್ನು ಮಾಡುವುದು ಹೇಗೆ ? ಕೋಮುವಾದನ್ನು ವಿರೋಧಿಸುವವರು, ಕೋಮುವಾದಿಗಳ ಜೊತೆ ಸಂವಹನ ನಡೆಸುವ ಆ ಮೂಲಕ ಅವರನ್ನು ಬದಲಾಯಿಸುವ ಅಗತ್ಯ ಇಲ್ಲವೆ ? ಯಾರು ಧರ್ಮ ನಿರಪೇಕ್ಷರಾಗಿರುತ್ತಾಗಿರುತ್ತಾರೋ ಅವರು ತಮ್ಮ ನಡುವೆ ಮಾತುಕತೆ ನಡೆಸಿದರೆ ಸಾಕೆ ?
ಈಗ ಹಾಗೆ ಆಗುತ್ತಿದೆ. ಸಮಾನತೆ, ಸಹಬಾಳ್ವೆ ಬಯಸುವುವರು ತಮ್ಮ ನಡುವೆ ತಾವು ಮಾತನಾಡಿಕೊಳ್ಳುತ್ತಿದ್ದಾರೆ. ಕೋಮುವಾದವನ್ನು ಮಟ್ಟ ಹಾಕುವುದು ಹೇಗೆ ಎಂದು ಚರ್ಚೆ ಮಾಡುತ್ತಿದ್ದಾರೆ.  ಹಾಗೆ ಕೋಮುವಾದಿಗಳು. ಜಾತಿಯ ವಿಶ್ಃಅ ಬೀಜ ಬಿತ್ತುವವರು ತಮ್ಮದೇ ಗುಂಪು ಕಟ್ಟಿಕೊಂಡು ಇನ್ನಷ್ಟು ಜನರ ಮನಸ್ಸುಗಳನ್ನು ಕೆಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯಪೂರ್ಣ ಮತ್ತು ಸಮಾನತೆಯ ಸಮಾಜವನ್ನು ಬಯಸುವವರು ತಾವು ಕಟ್ಟಿಕೊಂಡ ಗೋಡೆಯನ್ನು ಒಡೆಯಬೇಕು, ದರಿ ತಪ್ಪಿದವರನ್ನು ದಾರಿಗೆ ತರಲು ಯತ್ನಿಸಬೇಕು. ಈ ಸಮಾಜದಲ್ಲಿ ಸಮಾನತೆ ಮತ್ತು ಸಹಭಾಳ್ವೆಯ ಮಹತ್ವವನ್ನು ತಿಳಿಸಿ ಅವರ ಮನಪರಿವರ್ತನೆಗೆ ಕೆಲಸ ಮಾಡಬೇಕು, ಅದಲ್ಲಿದ್ದರೆ ದಾರಿ ತಪ್ಪಿಸುವವರು ಇನ್ನಷ್ಟು ಜನರನ್ನು ದಾರಿ ತಪ್ಪಿಸುತ್ತಾರೆ. ಅವರನ್ನು ಜಾತಿ ಮತ್ತು ಕೋಮು ಭಾವನೆಯ ವಿಷ ವೃತ್ತದ ಒಳಗೆ ತಳ್ಳುತ್ತಾರೆ. ಇದು ಎಲ್ಲ ಆರೋಗ್ಯಪೂರ್ಣ ಮನಸ್ಸುಗಳು ಒಂದಾಗಿ ಮೊದಲು ಮಾಡಬೇಕಾದ ಕೆಲಸ ಎಂದೂ ನನಗ್ಎ ಅನ್ನಿಸುತ್ತದೆ. ಇದನ್ನೇ ನಾನು ಧರ್ಮ ನಿರಪೇಕ್ಷವಾದಿಗಳ ಮುಂದಿರುವ ಬಹುದೊಡ್ಡ ಸವಾಲು ಎಂದು ಭಾವಿಸುತ್ತೇನೆ.
ದೇಶದಲ್ಲಿ ಕೋಮುವಾದ ಮತ್ತು ಜಾತಿವಾದವನ್ನು ಬಿತ್ತುವ ಹಲವು ಸಂಘಟನೆಗಳಿವೆ. ಈ ಸಂಘಟನೆಗಳು ಶಿಸ್ತಿನ ಹೆಸರಿನಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಸೆಳೆದು ಅವರ ಮನಸ್ಸನ್ನು ಕೆಡಿಸುತ್ತವೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಇಂತಹ ಕೆಲಸದಲ್ಲಿ ನಿರತವಾಗಿವೆ. ಇಂತಹ ಸಂಘಟನೆಗಳನ್ನು ಎದುರಿಸುವ ದಾರಿ ಯಾವುದು ಎಂಬುದು ಬಹುಮುಖ್ಯ. ಇವುಗಳಿಗೆ ಪರ್ಯಾಯವಾಗಿ ರಿಲಜನ್ ಗೆ ಬದಲಾಗಿ ಸಂವಿಧಾನ ಬದ್ದ ನಡವಳಿಕೆಗೆ ಪೂರಕವಾಗುವ ಸಂಘಟನೆಯಮ್ಮು ಕಟ್ಟುವುದಕ್ಕೆ ಮುಂದಾಗಬೇಕು. ಬಾಲ್ಯದಿಂದಲೇ ಸಂವಿಧಾನ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಮನದಟ್ಟು ಮಾಡಿಕೊಡುವ ಕೆಲಸ ವಾಗಬೇಕು. ಈ ಕೆಲಸವನ್ನು ಮಾಡಬೇಕಾದವರು ಕೇವಲ ಬೌದ್ಧಿಕ ಮತ್ತು ತಾರ್ಕಿಕ ಜಗತ್ತಿನಲ್ಲಿ ವಿಹರಿಸುತ್ತಿದ್ದರೆ, ತಮ್ಮ ನಡುವೆಯೇ ಮಾತನಾಡುತ್ತ ಕಾಲ ಕಳೆದರೆ, ಜಾತಿ ಮತ್ತು ಕೋಮುಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತವೆ. ಯಾವುದೇ ಸಮಸ್ಯೆ ಕೇವಲ ಚರ್ಚೆಯಿಂದ ಬಗೆಹರಿಯುವುದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಮುಖ ಪುಸ್ತಕದಲ್ಲಿ ಬರೆಯುವುದರಿಂದ ಪರಿಹಾರ ದೊರಕುವುದಿಲ್ಲ.
ಆದರೆ ಇಲ್ಲಿರುವ ಸಮಸ್ಯೆ ಎಂದರೆ ಪ್ರತಿಗಾಮಿ ಶಕ್ತಿಗಳಿಂದ ಬೂಜಿಗಳೆಂದು ಟೀಕೆಗೆ ಒಳಗಾಗಿರುವವರು ತಮ್ಮ ಬೌಧ್ದಿಕ ಕಸರತ್ತಿನಲ್ಲೇ ಕಾಲಕಳಿಯುತ್ತಿರುವುದು. ಇದನ್ನು ಬಿಟ್ಟು ಸಾಮಾನ್ಯ ಮನುಷ್ಯನ ಮನಸ್ಸು ಕೆಲಸ ಮಾಡುವ ರೀತಿ, ಅದರಲ್ಲಿ ತುಂಬಿರುವ ಜಾತಿ ಮತ್ತು ಕೋಮುಭಾವನೆ, ಇದನ್ನು ಬದಲಿಸಲು ಹಾಕಿಕೊಳ್ಳಬೇಕಾದ ದೀರ್ಘ ಕಾಲೀನ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಯೋಚಿಸಬೇಕಾದ ಅಗತ್ಯ ಇದೆ...ಕೋಮು ಮತ್ತು ಜಾತಿಯತೆಯಲ್ಲಿ ತೊಡಗಿರುವವರಲ್ಲಿ ಬಹಳಷ್ಟು ಜನ ಮುಗ್ದರು ಮತ್ತು ದಡ್ದರು. ಅವರಿಗೆ ನಿಜವನ್ನು ತಿಳಿಸಿಕೊಡುವುದು ಇಂದಿನ ಅಗತ್ಯ. ಇವರನ್ನು ದಾರಿ ತಪ್ಪಿಸುವವರು ಮಾತ್ರ ಹೆಚ್ಚು ಅಪಾಯಕಾರಿ. ಅವರನ್ನು ಬದಲಿಸುವುದು ಸಾಧ್ಯವಿಲ್ಲ. ಹೀಗಾಗಿ ದಾರಿತಪ್ಪಿದವರನ್ನು ಸರಿ ದಾರಿಗೆ ತರುವುದು ಮತ್ತು ಹೊಸಬರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು..
ಆದರೆ ಈಗ ನಮ್ಮೆದುರು ಬೇರೆ ರೀತಿಯ ಸವಾಲುಗಳಿವೆ. ಧರ್ಮ ನಿರಪೇಕ್ಷವಾದಿಗಳು, ಧರ್ಮ ಅಥವಾ ರಿಲಿಜನ್ ನ ಮತ್ತಿನಲ್ಲಿರುವವರ ವಿರುದ್ಧ ಬೌದ್ಧಿಕ ಯುದ್ಧ ಸಾರುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರ ಮನಸ್ಸನ್ನು ಬದಲಿಸುವ ಬಗ್ಗೆ, ಅವರನ್ನು ಧರ್ಮ ನಿರಪೇಕ್ಷವಾದಿಗಳನ್ನಾಗಿ ಪರಿವರ್ತಿಸುವ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಧರ್ಮದ ಅಮಲಿನಲ್ಲಿರುವವರು ಕತ್ತಿ ಝಳಪಿಸತೊಡಗಿದ್ದಾರೆ, ಇಂತಹ ಸಂದರ್ಭದಲ್ಲಿ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಾದ ಅಂಶ ಎಂದರೆ ರಿಲಿಜನ್ ಗೆ ಇರುವ ಚುಂಬಕ ಶಕ್ತಿ. ಅದು ಮುಗ್ದ ಮತ್ತು ಅಸಹಾಯಕ ಮನಸ್ಸುಗಳನ್ನು ಅತಿ ಸುಲಭವಾಗಿ ಸೆಳೆಯುತ್ತದೆ, ಹಾಗೆ ತನ್ನ ಗರ್ಭದೊಳಗೆ ಬಂಧಿಸಿ ಜೀರ್ಣಿಸಿಕೊಂಡು ಬಿಡುತ್ತದೆ. ರಿಲಿಜನ್ ಗೆ ಇರುವ ಈ ಶಕ್ತಿ ವೈಚಾರಿಕತೆಗೆ ಇಲ್ಲ. ಹೀಗಾಗಿ ಹೀಗೆ ರಿಲಿಜನ್ ಗರ್ಭದೊಳಗೆ ಸೇರಿಕೊಂಡ ಅಸಹಾಯಕ ಮನಸ್ಸುಗಳನ್ನು ಜೀರ್ಣವಾಗುವುದರ ಒಳಗೆ ಹೊರಕ್ಕೆ ಎಳೆದು ತರಬೇಕು.
ಇದು ಕತ್ತಿ ಝಳಪಿಸುವುದರಿಂದ, ಧಾರ್ಮಿಕ ಹಿಂಸೆಗೆ ಪ್ರತಿಯಾಗಿ ವೈಚಾರಿಕ ಹಿಂಸೆ ಮಾಡುವುದರಿಂದ ಬಗೆಹರಿಯುವುದಿಲ್ಲ..
ಧಾರ್ಮಿಕ ಮೂಲಭೂತವಾದಿಗಳ ಕೈಯಿಂದ ಸಿಡಿಯುವ ಮದ್ದು ಗುಂಡುಗಳಿಗೆ ಪ್ರತಿಯಾಗಿ ವೈಚಾರಿಕರೂ ಮದ್ದು ಗುಂಡುಗಳನ್ನು ಸಿಡಿಸುವುದರಿಂದ ಪರಿಹಾರವಾಗುವುದಿಲ್ಲ. ಹಿಂಸೆಗೆ ಎಂದೂ ಹಿಂಸೆ ಉತ್ತರವಲ್ಲ..
ಮನ ಪರಿವರ್ತನೆಯೊಂದೆ ಈ ಎಲ್ಲ ಸಮಸ್ಯೆಗೆ ಪರಿಹಾರ ಎಂದೂ ನನಗೆ ಅನ್ನಿಸುತ್ತದೆ. ಆದರೆ ಅದು ಹೇಗೆ ಎಂದು ಪ್ರಶ್ನಿಸಿದರೆ ನನ್ನ ಬಳಿ ಸರಳವಾದ ಉತ್ತರ ಇಲ್ಲ.

1 comment:

lalxminarasimha said...


ತುಂಬಾ balanced ಬರಹ. ಸ್ವಂತ ಅನುಭವಗಳ ಹಿನ್ನೆಲೆಯಲ್ಲಿ ಬರೆದ ಇಂತಹ ಬರಹಗಳು, ಕೇವಲ ಸೈದ್ಧಾಂತಿಕ ನಿಲುವುಗಳಿಂದಾಗಿ ಬಂದ ಬರಹಗಳಿಗಿಂತಾ ಮನಸ್ಸು ಮುಟ್ಟುವಂತಿರುತ್ತವೆ. ಧನ್ಯವಾದನುಭವಗಳ ಹಿನ್ನೆಲೆಯಲ್ಲಿ ಬರೆದ ಇಂತಹ ಬರಹಗಳು, ಕೇವಲ ಸೈದ್ಧಾಂತಿಕ ನಿಲುವುಗಳಿಂದಾಗಿ ಬಂದ ಬರಹಗಳಿಗಿಂತಾ ಮನಸ್ಸು ಮುಟ್ಟುವಂತಿರುತ್ತವೆ. ಧನ್ಯವಾದ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...