ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ತಮ್ಮ
ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಡಿ ವೈ ಎಸ್ ಪಿ ಗಣಪತಿ ಆತ್ಮಹತ್ಯೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಂಕ ಮುಗಿದಿದೆ. ಜಾರ್ಜ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ
ಪ್ರತಿ ಪಕ್ಷಗಳು ತಾವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಲಭಿಸಿತು ಎಂದು ಬೀಗಬಹುದಾಗಿದೆ. ಹಾಗೆ
ಜಾರ್ಜ್ ರಾಜೀನಾಮೆಗೆ ಎಸ್. ಎಮ್. ಎಸ್ ಮತ್ತು ಪೋನ್ ಆಂದೋಲನ ನಡೆಸಿದ್ದ ಮಾಧ್ಯಮಗಳು ಇದು ತಮಗೆ
ಲಭಿಸಿದ ಜಯ ಎಂದು ಹೆಮ್ಮೆ ಪಡಬಹುದು. ಹಾಗೆ ನಾವೇ ಜಾರ್ಜ್ ಅವರ ರಾಜೀನಾಮೆ ಕೊಡಿಸಿದ್ದು ಎಂದು
ಹೇಳಿಕೊಳ್ಳಬಹುದು. ಅದನ್ನೇ ಇನ್ನು ನಾಲ್ಕಾರು ದಿನ ತಮ್ಮ ಮಾಧ್ಯಮದಲ್ಲಿ ಪ್ರಚಾರ
ಮಾಡಿಕೊಳ್ಳಬಹುದು. ಒಂದು ಆತ್ಮಹತ್ಯೆ ಎಂಬ ಸ್ವಯಂ ತಂದುಕೊಂಡ ಸಾವು ಯಾರು ಯಾರಿಗೋ ಲಾಭವನ್ನು
ತಂದುಕೊಡಬಹುದು.
D ವೈ ಎಸ್ ಪಿ ಗಣಪತಿ ಮಡಿಕೇರಿಯಲ್ಲಿ ಮಾಧ್ಯಮಗಳನ್ನು
ಉದ್ದೇಶಿಸಿ ಮಾತನಾಡುವುದರೊಂದಿಗೆ ಈ ಪ್ರಕರಣ ಭಾವನಾತ್ಮಕ ತಿರುವು ಪಡೆದುಕೊಂಡಿತು. ನಂತರದ
ದಿನಗಳಲ್ಲಿ ಸಾರ್ವಜನಿಕರ ಭಾವನೆ ಗಣಪತಿ ಅವರ ಪರವಾಗಿ ರೂಪಗೊಂಡಿತು. ಇದರಲ್ಲಿ ಮಾಧ್ಯಮ ಪ್ರಮುಖ
ಪಾತ್ರ ಒಹಿಸಿತು. ಆದರೆ ಇಡೀ ಪ್ರಕರಣದಲ್ಲಿ ತನಿಖೆ ನಡೆಯುವುದಕ್ಕೆ ಬದಲಾಗಿ ತೀರ್ಮಾನಗಳು
ಹೊರಬಂದವು. ಮಾಧ್ಯಮಗಳು ನೀಡಿದ ತೀರ್ಪನ್ನು ಸಾರ್ವಜನಿಕರು ಒಪ್ಪಿಕೊಂಡರು. ಆದರೆ ಗಣಪತಿ ನೀಡಿದ
ಹೇಳಿಕೆ, ಆ ಹೇಳಿಕೆಯ ಬಗ್ಗೆ ಇರಬೇಕಾದ ಸಂಶಯ ಯಾವುದೂ ಹೊರಕ್ಕೆ ಬರಲೇ ಇಲ್ಲ. ಈ ಪ್ರಕರಣವನ್ನು
ರಾಜಕೀಯಕ್ಕೆ ಬಳಸಿಕೊಂಡ ಪ್ರತಿ ಪಕ್ಷಗಳಾಗಲೀ, ಈ ಬಗ್ಗೆ ಭಾವನಾತ್ಮಕ ತೀರ್ಪು ನೀಡಿದ
ಮಾಧ್ಯಮವಾಗಲೀ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಲೇ ಇಲ್ಲ. ಎಲ್ಲರೂ ಗಣಪತಿ ಅವರ
ಹೇಳಿಕೆಯನ್ನೇ ಸತ್ಯ ಎಂದುಕೊಂಡು ತೀರ್ಪು ನೀಡಿದ ಮೇಲೆ ಆರೋಪ ಹೊತ್ತವರು ಹೊಣೆ ಹೊತ್ತುಕೊಳ್ಳದೇ
ಬೇರೆ ದಾರಿ ಉಳಿಯಲೇ ಇಲ್ಲ.
ಈಗ ಗಣಪತಿ ಅವರು ಆತ್ಮಹತ್ಯೆಗೆ ಮೊದಲು ನೀಡಿದ
ಹೇಳಿಕೆಯನ್ನೇ ನೋಡೋಣ. ಇಂತಹ ಹೇಳಿಕೆಯೊಂದನ್ನು
ಮಾಧ್ಯಮದ ಮುಂದೆ ಯಾವುದೇ ವ್ಯಕ್ತಿ ನೀಡಿದಾಗ ಆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ ವಿವರ
ಪಡೆಯಬೇಕಾದ್ದು ಮಾಧ್ಯಮದ ಕರ್ತವ್ಯ. ಯಾವಾಗ ಗಣಪತಿ ನನಗೇ ಏನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣ
ಎಂದಾಗ ಮಾಧ್ಯಮದವರಾದ ನಾವು ಕೇಳಬೇಕಾದ ಪ್ರಶ್ನೆ ನಿಮ್ಮ ಜನರಲ್ ಆದ ಈ ಹೇಳಿಕೆಗೆ ಇರುವ ಸಾಕ್ಶ್ಯ
ಯಾವುದು ? ಎಂದು. ನಿಮಗೆ ಈ ಮೂವರು ನೀಡಿದ
ಕಿರುಕುಳದ ಬಗ್ಗೆ ವಿವರಣೆ ನೀಡಿ. ಯಾವಾಗ ಯಾವ ಪ್ರಕರಣದಲ್ಲಿ ನಿಮಗೆ ಕಿರುಕುಳ ನೀಡಲಾಯಿತು ?
ಎಲ್ಲಿ ಕಿರುಕುಳ ನೀಡಲಾಯಿತು ? ನಿಮಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆ ನೀಡಿದ್ದೇ ಕಿರುಕುಳವೆ
? ಈ ಬಗ್ಗೆ ಈ ಮೊದಲು ಮೇಲಾಧಿಕಾರಿಗಳಾಗಲೀ,
ಸರ್ಕಾರಕ್ಕಾಗಲಿ ದೂರು ನೀಡಿದ್ದೀರಾ ? ದೂರು ನೀಡದಿದ್ದರೆ ಯಾಕೆ ನೀಡಿಲ್ಲ ? ಅದಕ್ಕಿರುವ
ಕಾರಣಗಳಾವವು ?
ಈ ರೀತಿಯ ಯಾವ ಪ್ರಶ್ನೆಗಳನ್ನು ನಾವು ಕೇಳಲಿಲ್ಲ. ಅವರು
ಹೇಳಿದ್ದನ್ನು ಕೇಳಿಸಿಕೊಂಡು ಗಣಪತಿ ಆತ್ಮಹತ್ಯೆ ಮಾಡಿಕೊಂಡ ಮೇಳೆ ಪ್ರಸಾರ ಮಾಡಿದವು. ಜೊತೆಗೆ
ಇದು ಡಾಯಿಂಗ್ ಡಿಕ್ಲರೇಷನ್ ಹೌದೇ ಅಲ್ಲವೇ ಎನ್ನುವ ಬಗ್ಗೆಯೂ ನಾವು ಚರ್ಚೆ ಮಾಡಲಿಲ್ಲ. ಗಣಪತಿ
ಅವರ ಪೂರ್ವಾಪರದ ಬಗ್ಗೆ ಯೋಚಿಸಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರೊಬ್ಬ ಪ್ರಾಮಾಣಿಕ
ಅಧಿಕಾರಿ ಎಂದು ಸರ್ಟಿಫಿಕೆಟ್ ನೀಡಿಬಿಟ್ಟೆವು. ಕಿರುಕುಳ ತಾಳಲಾರದೇ ಪ್ರಾಮಾಣಿಕ ಅಧಿಕಾರಿಯ
ಆತ್ಮಹತ್ಯೆ ಎಂದು ಜನರ ಭಾವನೆಗಳ ಕೆರಳಿಸಿಬಿಟ್ಟೆವು. ದಿನದಿಂದ ದಿನಕ್ಕೆ ಭಾವನೆಯ ಮಹಾಪೂರ
ಹೊಳೆಯಾಗಿ ಹರಿಯಿತು. ಅಲ್ಲಿ ಒಬ್ಬ ತನಿಖಾ ಪತ್ರಿಕೋದ್ಯಮಿಗೆ ಇರಬೇಕಾದ ಸತ್ಯ ನಿಷ್ಟೆ ಎಲ್ಲೂ
ಕಾಣಲಿಲ್ಲ. ತನಿಖೆ ಇಲ್ಲಿದೇ ತೀರ್ಪು ನೀಡುವ ಒಬ್ಬ ನ್ಯಾಯಾಧೀಶರಂತೆ ನಾವು ವರ್ತಿಸಿದೆವು.
ಸಾಧಾರಣವಾಗಿ ನನಗೇ ಏನಾದರೂ ಆದರೆ ಎಂದರೆ ಏನರ್ಥ ? ನನಗೆ
ಬೇರೆಯವರಿಂದ ಏನಾದರೂ ಆದರೆ ಎಂದಲ್ಲವೆ ? ಗಣಪತಿ ನನಗೆ ಏನಾದರೂ ಆದರೆ ಎಂದು ಹೇಳಿದಾಗ
ಬೇರೆಯವರಿಂದ ಸಾವು ಸಂಭವಿಸಿದರೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರ ಕೊನೆಯ ಹೇಳಿಕೆಯಲ್ಲಿ
ತಾವು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಈ ಮೂವರು ಕಾರಣ ಎಂದು ಗಣಪತಿ ಹೇಳಿಲ್ಲ. ತಮಗೆ ಏನಾದರೂ ಸಂಭವಿಸಿದರೆ ಎಂದರೆ ಕೊಲೆ ಮಾಡಿದರೆ,
ಅದಕ್ಕೆ ಇವರು ಕಾರಣ ಎಂದು ಅವರ ಮಾತು ಧ್ವನಿಸುತ್ತದೆ. ಆತ್ಮಹತ್ಯೆಯ ಬಗ್ಗೆ ಏನೂ ಹೇಳದೇ
ಆತ್ಮಹತ್ಯೆ ಮಾಡಿಕೊಂಡಿರುವಾಗ ಇದನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸುವುದು ಸಾಧ್ಯವೆ ?
ಆದರೆ
ಮೊದಲು ನಾವು ಕೇಳಬೇಕಾದ ಪ್ರಶ್ನೆ ಯಾವುದು ಡೈಯಿಂಗ್ ದಿಕ್ಲರೇಷನ್ ಎಂಬದು. ಕಾನೂನು ಡಾಯಿಂಗ್
ಡಿಕ್ಲಲರೇಷನ್ ಬಗ್ಗೆ ಹೀಗೆ ಹೇಳುತ್ತದೆ.
In common law,
a "dying declaration" must have been a statement made by a deceased
person who would otherwise have been a credible witness to their own death by murder or manslaughter, and was
of "settled hopeless expectation of death".
ಕಾನೂನಿನ ಪ್ರಕಾರ ಡೈಯಿಂಗ್ ಡಿಕ್ಲರೇಷನ್ ಎಂದರೇನು ಎಂಬ
ಬಗ್ಗೆ ಸ್ಪಷ್ಟ ವಿವರಣೆ ಇದೆ. ಯಾವುದೇ ವ್ಯಕ್ತಿ ನನಗೆ ಇಂಥವರಿಂದ ಅಪಾಯವಿದೆ ಎಂದು
ಸಾಕ್ಷ್ಯಾಧಾರಗಳ ಮೂಲಕ ಮೊದಲೇ ಹೇಳಿಕೆ ನೀಡಿರಬೇಕು. ಆತ ಹೀಗೆ ಹೇಳಿಕೆ ನೀಡುವಾಗ ಕನಿಷ್ಟ ಒಬ್ಬ
ಸಾಕ್ಶಿಯಾದರೂ ಬಳಿ ಇರಬೇಕು. ಇನ್ನು ಭಾರತೀಯ ಎವಿಡೆನ್ಸ್ ಎಕ್ಟ್ ನ ೩೨ [೧] ಡೈಯಿಂಗ್
ಡಿಕ್ಲರೇಷನ್ ಎಂದರೇನು ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಿದೆ. ಯಾವುದನ್ನು ಡೈಯಿಂಗ್
ಡಿಕ್ಲರೇಷನ್ ಎಂದು ಪರಿಗಣಿಸಬೇಕು ಎಂಬ ಬಗ್ಗೆ ನಿಖರವಾಗಿ ಹೇಳಲಾಗಿದೆ. ಈ ಕಾನೂನಿನಲ್ಲಿ ಯಾವುದೇ
ವ್ಯಕ್ತಿ ಸಾಯುವುದಕ್ಕಿಂತ ಮೊದಲು ನನಗೆ ಇಂಥವರಿಂದ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ
ಅದಕ್ಕೆ ಇವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿರಬೇಕು. ಹೀಗೆ ಹೇಳಿಕೆ ನೀಡುವುದಕ್ಕೂ ಕೆಲವೊಂದು
ನಿಯಮಗಳಿವೆ.
A statement by a
person who is conscious and knows that death is imminent concerning what he or
she believes to be the cause or circumstances of death that can be introduced
into evidence during a trial in certain cases.
ಯಾವುದೇ ವ್ಯಕ್ತಿ ಡೈಯಿಂಗ್ ಡಿಕ್ಲರೇಷನ್ ನೀಡುವಾಗ ಆತ
ಪ್ರಜ್ನೆಯನ್ನು ಕಳೆದುಕೊಂಡಿರಬಾರದು. ಅಂದರೆ ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ
ಸದೃಢನಾಗಿರಬೇಕು. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಆತನ ಹೇಳಿಕೆಯನ್ನು ಡಾಯಿಂಗ್
ಡಿಕ್ಲರೇಷನ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ
ಕಾರಣದಿಂದ ಗಣಪತಿ ನೀಡಿದ ಕೊನೆಯ ಹೇಳಿಕೆ ಡೈಯಿಂಗ್ ಡಿಕ್ಲರೇಷನ್ ಹೌದೋ ಅಲ್ಲವೋ ಎಂಬುದು
ನಿರ್ಧಾರವಾಗುವ ಮೊದಲು ಇದು ಡೈಯಿಂಗ್ ಡಿಕ್ಲರೇಷನ್ ಎಂದೇ ಮಾಧ್ಯಮದವಾರದ ನಾವು ತೀರ್ಮಾನಿಸಿ
ಬಿಟ್ಟೆವು. ಕನಿಷ್ಟ ಈ ಬಗ್ಗೆ ನಾವು ಚರ್ಚೆಯನ್ನೂ ಮಾಡಲಿಲ್ಲ.
ಇನ್ನೊಂದು ಪ್ರಮುಖ ಅಂಶ ಎಂದರೆ ಒಬ್ಬ ವ್ಯಕ್ತಿ
ಇಂಥವರಿಂದ ತನ್ನ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ ಇಂಥವರೇ ಕಾರಣ ಎಂದು ಸೂಕ್ತ
ಸಾಕ್ಷಾಧಾರ ಮತ್ತು ಸೂಕ್ತ ನಿಯಮಗಳ ಪ್ರಕಾರ ಹೇಳಿಕೆ ನೀಡಿದರೆ ಅದು ಡೈಯಿಂಗ್ ಡಿಕ್ಲರೇಷನ್ ಎಂದು
ಪರಿಗಣಿತವಾಗುತ್ತದೆ. ಆದರೆ ಕಾನೂನಿನಲ್ಲಿ ಸಾವು
ಸಂಭವಿಸಿದರೆ ಎಂದು ಹೇಳಲಾಗಿದೆಯೇ ಹೊರತೂ
ಆತ್ಮಹತ್ಯೆ ಮಾಡಿಕೊಂಡರೆ ಏನು ಎಂಬ ಬಗ್ಗೆ ನಿಖರವಾದ ವಿವರಣೆಗಳಿಲ್ಲ. ಆದರೆ ಸರ್ವೋಚ್ಚ
ನ್ಯಾಯಾಲಯ ನೀಡಿರುವ ಹಲವು ತೀರ್ಪುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಬರೆದು ಇಟ್ಟ ನೋಟ್
ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬಹುದು ಎಂದು ಹೇಳಿದೆ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯ
ನೀಡಿರುವ ತೀರ್ಪುಗಳ ಕಾರಣದಿಂದ ಗಣಪತಿ ನೀಡಿರುವ ಹೇಳಿಕೆಯನ್ನು ಡೈಯಿಂಗ್ ಡಿಕ್ಲರೇಷನ್ ಎಂದು
ಪರಿಗಣಿಸಬಹುದು. ಈ ಬಗ್ಗೆ ಕೂಡ ಚರ್ಚೆ ನಡೆಯುವ
ಅಗತ್ಯವಿತ್ತು. ಆದರೆ ನಾವು ಚರ್ಚೆ ಮಾಡಲಿಲ್ಲ.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರತಿ
ಪಕ್ಷಗಳೂ ಕೂಡ ಇಂತಹ ಯಾವ ಚರ್ಚೆಯನ್ನೂ ಮಾಡದೇ ರಾಜಕೀಯ ಕಾರಣವನ್ನೇ ಮುಂದಿಟ್ಟುಕೊಂಡು ಹೋರಾಟ
ಮಾಡಿದವು. ಗಣಪತಿ ಅವರಿಗೆ ಖಿನ್ನತೆ ಇತ್ತು ಎಂದು
ಸರ್ಕಾರ ಹೇಳಿದ್ದನ್ನು ಮೆಂಟಲ್ ಎಂದು ಅರ್ಥೈಸಿ ಗಣಪತಿ ಅವರು ಮೆಂಟಲ್ ಅಲ್ಲ ಎಂದು
ವಾದಿಸಿದವು. ಆದರೆ ಖಿನ್ನತೆ ಬೇರೆ ಮೆಂಟಲ್
ಆಗುವುದು ಬೇರೆ ಎಂಬ ಸಾಮಾನ್ಯ ಜ್ನಾನ ಕೂಡ ಬಿಜೆಪಿ ನಾಯಕರಿಗೆ ಇರಲಿಲ್ಲ. ಜೊತೆಗೆ ಖಿನ್ನತೆಯಿಂದ ಬಳಲುವವರು ಒಂದೇ ರೀತಿ
ಇರುವುದಿಲ್ಲ. ಒಂದು ದಿನ ಅವರು ಎಲ್ಲರಂತೆ ಇರಬಹುದು. ಮರು ದಿನ ಖಿನ್ನತೆ ಹೆಚ್ಚಬಹುದು. ಈ ಬಗ್ಗೆ ಕೂಡ
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಜ್ನಾನ ಇರಲಿಲ್ಲ.
ಜೊತೆಗೆ ಇನ್ನೊಂದು ಆಶ್ಚರ್ಯದ ವಿಷಯ ಎಂದರೆ ಗಣಪತಿ ಅವರ
ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಿ ಪಕ್ಷಗಳು ಕಲ್ಲಪ್ಪ ಹುಂಡಿಬಾಗ್
ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಯಾಕೆ ? ಡಿ ವೈ ಎಸ್ ಪಿ ಕಲ್ಲಪ್ಪ ಅವರ ಪ್ರಕರಣದಲ್ಲಿ ಭಜರಂಗದಳದ ಕಾರ್ಯಕರ್ತರ
ಹೆಸರುಗಳಿವೆ ಎಂಬ ಕಾರಣಕ್ಕೆ ಇವರು ಮಾತನಾಡುತ್ತಿಲ್ಲವೆ ? ಗೊತ್ತಿಲ್ಲ. ಇದೇ ರಾಜಕೀಯ ನೋಡಿ. ಈ
ತಿಂಗಳ ೩೦ ರ ವರೆಗೆ ನಡೆಯಬೇಕಿದ್ದ ವಿಧಾನ ಮಂಡಲ ಅಧಿವೇಶನ ಈ ಗಲಾಟೆಯಲ್ಲಿ ಮುಳುಗಿ ಮುಗಿದೇ
ಹೋಯಿತು. ಶಾಸನ ರಚನೆಯ ಕೆಲಸ ಮಾಡಬೇಕಿದ್ದ ಸದನದಲ್ಲಿ ತರಾತುರಿಯಲ್ಲಿ ವಿಧೇಯಕಗಳ ಮಂಡನೆಯಾಗಿ
ಅಂಗೀಕಾರವಾಯಿತು.
ಇಂತಹ ವಿಚಾರಗಳಲ್ಲಿ ನಮಗೆಲ್ಲ ಇರುವ ನೋವು ಒಬ್ಬ
ವ್ಯಕ್ತಿ ತಾನೇ ಸಾವನ್ನು ಅಪ್ಪಿಕೊಂಡನಲ್ಲ ಎಂಬುದಕ್ಕಾಗಿ. ಇದನ್ನು ಬಿಟ್ಟರೆ ಬೇರೆ ಕಾರಣಗಳಿಗೆ
ಗಣಪತಿಗೆ ಸಹಾನುಭೂತಿ ವ್ಯಕ್ತಪಡಿಸಲು ಕಾರಣಗಳೇ ಕಾಣುತ್ತಿಲ್ಲ. ಒಬ್ಬ
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವನಿಗೆ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇರಬೇಕು.
ಇಲ್ಲದಿದ್ದರೆ ಆತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಅರ್ಹನಲ್ಲ. ಜೊತೆಗೆ ಇಲಾಖೆ ಎಲ್ಲಿ ಕೆಲಸ
ಮಾಡು ಎಂದು ಸೂಚಿಸುತ್ತದೆಯೋ ಅಲ್ಲಿ ಕೆಲಸ ಮಾಡಬೇಕು. ನಾನು ಕೆಲಸ ಮಾಡುವುದಿಲ್ಲ ಎನ್ನುವುದಾಗಲೀ
ನನಗೆ ಇದೇ ಹುದ್ದೆ ಬೇಕು ಎನ್ನುವುದಾಗಲಿ ಆತನನ್ನು ಈ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ
ಅನರ್ಹನನ್ನಾಗಿ ಮಾಡುತ್ತದೆ.
ಹಾಗೆ ತಮ್ಮ ಪದೋನ್ನತಿಗಾಗಿ ಗಣಪತಿ ಎಲ್ಲ ರೀತಿಯಲ್ಲೂ
ಯತ್ನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಹಿರಂಗವಾದ ದೂರವಾಣಿ ಮಾತುಕತೆಯ
ಆಡಿಯೋ ನಿಜವಾಗಿದ್ದರೆ ಅದು ಅವರ ಬಗ್ಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತದೆ. ಆ
ಆಡಿಯೋದಲ್ಲಿ ಗಣಪತಿ ತಮಗೆ ಪ್ರಮೋಷನ್
ಕೊಡಿಸುವಂತೆ ಯಾವುದೋ ಜ್ಯೋತಿಷಿಗೆ ಮನವಿ ಮಾಡುತ್ತಾರೆ. ಬಾಸ್ ಜೊತೆ ಮಾತನಾಡಿ ಎಂದು
ಮನವಿ ಮಾಡಿಕೊಳ್ಳುತ್ತಾರೆ. ಅಂದರೆ ನೀವು ನಿಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಇಲಾಖೆಗೆ
ಸಂಬಂಧವೇ ಇಲ್ಲದ ಜ್ಯೋತಿಷಿಯೊಬ್ಬರ ಮೂಲಕ ಒತ್ತಡ ಹಾಕಿಸುತ್ತೀರಿ ಎಂದಾದರೆ ನಿಮ್ಮನ್ನು
ಪ್ರಾಮಾಣಿಕ ಅಧಿಕಾರಿ ಎಂದು ನಾವು ಹೇಳುವುದು ಸಾಧ್ಯವೇ ? ಗಣಪತಿ ತಮ್ಮ ಕೆಲಸ ಮಾಡಿಸಿಕೊಳ್ಳಲು
ಏನು ಬೇಕಾದರೂ ಮಾಡಲು ಸಿದ್ಧರಿದ್ದರು ಎಂಬುದು ಆಘಾತಕಾರಿ ಅಲ್ಲವೆ ?
ಈ ಲೇಖನ ಬರೆಯುತ್ತಿರುವಾಗ ಯಾವುದೋ ಒಬ್ಬ ಅಧಿಕಾರಿ ತಮ್ಮ
ಮೇಲಾಧಿಕಾರಿ ನೀಡುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ ವರದಿ ಸುದ್ದಿ ವಾಹಿನಿಯೊಂದರಲ್ಲಿ
ಬರುತ್ತಿತ್ತು. ಅವರೂ ಸಹ ತಾವು ಮತ್ತು ತಮ್ಮ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ
ಒಡ್ಡುತ್ತಿದ್ದರು. ಇನ್ನು ಹಲವಾರು ಅಧಿಕಾರಿಗಳು ಸರ್ಕಾರಿ ನೌಕರರು ಇದೇ ರೀತಿಯ ಬೆದರಿಕೆ
ಒಡ್ಡಬಹುದು. ಹಾಗೆ ಗಣಪತಿ ಅವರ ಹೆಂಡತಿ ಕೂಡ ತಮಗೆ ನ್ಯಾಯ ಸಿಗದಿದ್ದರೆ ತಾವು ಗಂಡನ ದಾರಿ
ಹಿಡಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಆತ್ಮ್ಸಹತ್ಯೆ ಮಾಡಿಕೊಳ್ಳುವುದು ಮತ್ತು ಬೆದರಿಗೆ ಒಡ್ಡುವುದು ಸಮೂಹ ಸನ್ನಿಯ ರೂಪ
ಪಡೆದುಕೊಳ್ಳುವ ಅಪಾಯ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಸಾವು ಒಂದು ಸಹಜ ಕ್ರಿಯೆ. ಆದರೆ ಸಾವನ್ನು ಆತ್ಮಹತ್ಯೆ
ಮೂಲಕ ವಿಜೃಂಭಿಸುವುದು ಅಪಾಯಕಾರಿ. ಆತ್ಮಹತ್ಯೆಯ ವೈಭವೀಕರಣ ಬೇರೆಯವರನ್ನು ಆತ್ಮಹತ್ಯೆಗೆ
ಪ್ರೇರೇಪಿಸಬಹುದು. ಯಾರು ಯಾರೋ ಡೆತ್ ನೋಟ್ ಬರೆದಿಟ್ಟು
ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಂಥಹ ಒಂದು ಅಪಾಯಕಾರಿ ಸ್ಥಿತಿಗೆ ನಾವು ತಲುಪಿ
ಬಿಟ್ಟಿದ್ದೇವೆ.
ಕೊನೆಯ ಮಾತು: ಗಣಪತಿ ಅವರ ಆತ್ಮಹತ್ಯೆ ಯಾರು ಯಾರಿಗೆ
ಲಾಭದಾಯಕ ವಾಯಿತು ? ಯಾರು ಯಾರು ಸಾವಿನಿಂದ ಲಾಭ ಪಡೆಯಲು ಯತ್ನ ನಡೆಸಿದರು ? ಈ ಪ್ರಶ್ನೆಗೆ
ಉತ್ತರ ಸಿಕ್ಕರೆ ಪ್ರಕರಣ ಸಂಪೂರ್ಣವಾಗಿ ಬಯಲಾಗುತ್ತದೆ.