Friday, May 7, 2021
send him to jail
Wednesday, March 17, 2021
Swamy and friends
Monday, March 15, 2021
ಸಾಮಾಜಿಕ ಬದುಕು, ನೈತಿಕತೆ ಮತ್ತು ಲೈಂಗಿಕ ಹಗರಣಗಳು
ರಮೇಶ್ ಜಾರಕೀಹೊಳಿ ಅವರ ಸಿಡಿ ಹಗರಣ ಹಲವು ಮುಖ್ಯ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ... ರಾಜಕೀಯ ಮತ್ತು ನೈತಿಕತೆಯ ಪ್ರಶ್ನೆ ಇದರಲ್ಲಿ ಬಹುಮುಖ್ಯವಾದುದು. ಸಾರ್ವಜನಿಕ ಬದುಕಿನಲ್ಲಿ ಇರುವವರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು ಎಂದು ಜನ ಅಪೇಕ್ಷೆಪಡುವುದು ತುಂಬಾ ಸಹಜ.. ಹಾಗೆ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಖಾಸಗಿ ಬದುಕು ಎನ್ನುವುದು ಇರುವುದಿಲ್ಲ. ಅವರ ಖಾಸಗಿ ಬದುಕು ಸಾಮಾಜಿಕ ಆಯಾಮವನ್ನು ಪಡೆದೇ ಪಡೆಯುತ್ತಿದೆ.. ಹೀಗಾಗಿ ರಮೇಶ್ ಜಾರಕೀಹೊಳಿ ಅವರ ಮೇಲಿನ ಆರೋಪವನ್ನು ಈ ಹಿನ್ನೆಲೆಯಲ್ಲಿ ನಾವು ನೋಡಬೇಕಾಗುತ್ತದೆ, ಆದರೆ ಈಗ ಈ ವಿಚಾರ ಸಂಪೂರ್ಣವಾಗಿ ದಾರಿ ತಪ್ಪಿದೆ,, ರಾಜಕಾರಣದಲ್ಲಿ ನೈತಿಕ ದಿವಾಳಿತನದ ಕುರಿತು ಚರ್ಚೆ ನಡೆಯಬೇಕಾಗಿತ್ತು. ಆದರೆ ಈಗ ಸಿಡಿ ಮಾಡಿದವರು ಯಾರು ಎಂಬ ಬಗ್ಗೆಯೇ ತನಿಖಾ ವರದಿಗಳು ಬರಲು ಪ್ರಾರಂಭಿಸಿವೆ.
ಹಾಗೆ ನೋಡಿದರೆ ಇಂತಹ ಆರೋಪಗಳಿಗೆ ಒಳಗಾದ ಮೊದಲ ವ್ಯಕ್ತಿ ಜಾರಕೀಹೊಳಿ ಅಲ್ಲ. ಅವರು , ಅವರು ಕೊನೆಯ ವ್ಯಕ್ತಿಯೂ ಆಗಲಾರರು. ಅಧಿಕಾರ ಹಣ ಬರುವಂತೆ ಮಾಡುತ್ತದೆ ಹಣ ಅನ್ಯ ಮಾರ್ಗಗಳ ಮೂಲಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತದೆ,, ಲೈಂಗಿಕತೆ ನಮ್ಮ ಅವಶ್ಯಕತೆಗಳಲ್ಲಿ ಒಂದಾದರೂ ಈ ಅವಶ್ಯಕತೆಯನ್ನು ನಾವು ಹೇಗೆ ಪೂರೈಸಿಕೊಳ್ಳುತ್ತೇವೆ ಎನ್ನುವುದು ನೈತಿಕತೆಯ ನಿಕಷಕ್ಕೆ ಒಳಗಾಗಲೇ ಬೇಕಾಗುತ್ತದೆ.
ಹಾಗೆ ಒಪ್ಪಿತ ಲೈಂಗಿಕತೆಯನ್ನು ಯಾರೂ ವಿರೋಧಿಸುವುದು ಸಾಧ್ಯವಿಲ್ಲ. ಕಾನೂನು ಸಹ ಒಪ್ಪಿತ ಲೈಂಗಿಕತೆಗೆ ಪುರಸ್ಕಾರ ನೀಡುತ್ತದೆ. ಆದರೆ ಒಂದು ಗಂಡು ಮತ್ತು ಹೆಣ್ಣು ನಡೆಸುವ ಒಪ್ಪಿತ ಲೈಂಗಿಕತೆಯಲ್ಲಿ ಅಧಿಕಾರ ಯಾವ ರೀತಿ ಪ್ರಭಾವ ಭೀರಿದೆ ? ಅಧಿಕಾರನ್ನು ಬಳಸಿಕೊಂಡು ಲೈಂಗಿಕ ಚಟುವಟಿಕೆಗೆ ಭಾಗಿದಾರರನ್ನಾಗಿ ಮಾಡಿಕೊಂಡರೆ ಅದು ಅಪರಾಧ, ರಮೇಶ ಜಾರಕೀಹೊಳಿ ಪ್ರಕರಣದಲ್ಲಿ ಈಗಾಗಲೇ ಆರೋಪಿಸಿದಂತೆ ಕೆಲಸ ಕೊಡಿಸುವ ಭರವಸೆ ನೀಡಿ ಆಕೆಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎನ್ನುವುದು. ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ,
ಕಾನೂನು ಪ್ರಕಾರ ನಡೆಸುವ ಲೈಂಗಿಕ ಚಟುವಟಿಕೆಗೂ ಕಾನೂನು ವಿರುದ್ಧವಾಗಿ ನಡೆಸುವ ಲೈಂಗಿಕ ಚಟುವಟಿಕೆಗೆ ಇರುವ ಈ ವ್ಯತ್ಯಾಸ ಒಂದೆಡೆಯಾದರೆ, ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧವನ್ನು ಅಶ್ಲೀಲತೆಯ ಹಂತಕ್ಕೆ ತೆಗೆದುಕೊಂಡೂ ಹೋಗುವುದು ಮತ್ತು ಅದನ್ನು ಚೀತ್ರಿಕರಿಸುವುದು ಕೂಡ ಸಾಮಾಜಿಕ ಸ್ವಾಸ್ಠ್ಯಕ್ಕೆ ಪೂರಕವಾದುದಲ್ಲ.
ಈ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ರಾಜ್ಯದಲ್ಲಿನ ರಾಜಕಾರಣ ಮತ್ತು ಲೈಂಗಿಕ ಹಗರಣದ ಬಹುಮುಖ್ಯ ವಿಚಾರವನ್ಜು ನಾವು ನೋಡಬಹುದು,
ರಾಜ್ಯದಲ್ಲಿ ನಡೆದ ರಾಜಕೀಯ ಲೈಂಗಿಕ ಹಗರಣಗಳನ್ನು ನಾವು ನೋಡುವಾಗ ನಮಗೆ ದೊರಕುವ ಮೊದಲ ಹಗರಣ ನಡೆದಿದ್ದು ೧೯೭೩ ರಲ್ಲಿ.. ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಆರಸು..ಅವರ ಸಂಪುಟದಲ್ಲಿ ಗೃಹ ರಾಜ್ಯ ಸಚಿವರಾಗಿದ್ದವರು ಆರ್. ಡಿ. ಕಿತ್ತೂರ್. ಅವರ ಮೇಲಿದ್ದ ಆರೋಪ ಕಾಣೆಯಾಗಿದ್ದ ಹೆಣ್ಣು ಮಗಳೊಬ್ಬಳು ಸಚಿವ ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬುದು ಆರೋಪ.. ಆರೋಪದ ಕಾರಣದಿಂದ ಕಿತ್ತೂರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಹುಶಃ ಲೈಂಗಿಕ ಹಗರಣದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರೂ ಅವರೇ,,, ಬಹಿರಂಗವಾದ ಮೊದಲ ಪ್ರಕರಣವೂ ಇದೇ.
ಇವತ್ತಿನ ಸಂದರ್ಭದಲ್ಲಿ ಈ ಹಗರಣವನ್ನು ನೋಡುವಾಗ ಇದೊಂದು ದೊಡ್ಡ ಹಗರಣ ಎಂದು ಅನ್ನಿಸುವುದಿಲ್ಲ. ಆಕೆಯ ಮನೆಯಲ್ಲಿ ಇದ್ದಳು ಎನ್ನಲಾದ ಆ ಹೆಣ್ಣು ಮಗಳ ಜೊತೆ ಕಿತ್ತೂರ್ ಬೇರೆ ರೀತಿ ಸಂಬಂಧ ಹೊಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರಲಿಲ್ಲ.. ಆಕೆ ಸಚಿವರ ಮನೆಯಲ್ಲಿ ಇದ್ದರು ಅಷ್ಟೇ.. ಆ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ ಈ ಕತೆ ತುಂಬಾ ಸಿನಿಮೀಯವೂ ರೋಚಕವೂ ಆಗಿದೆ..
ಈ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಂಪೌಂಡ್ ಒಳಗಿನ ಮರದ ಕೆಳಗೆ ನಿಂತಿರುತ್ತಾಳೆ..ಸಚಿವರು ಆಕೆಯನ್ನು ಮನೆಯ ಒಳಗೆ ಕರೆಯುತ್ತಾರೆ. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಸಚಿವ ಕಿತ್ತೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ..೧೯೭೩ ರ ಸಂದರ್ಭದಲ್ಲಿ ಇದ್ದ ನೈತಿಕತೆಯ ವ್ಯಾಖ್ಯೆ ಈಗ ಸಂಪೂರ್ಣವಾಗಿ ಬದಲಾಗಿದೆ. ಆ ಸಂದರ್ಭದಲ್ಲಿ ಸಿಡಿಯ ಸಾಕ್ಷ್ಯ ಇಲ್ಲದಿದ್ದರೂ ಕೇವಲ ಆರೋಪದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿದರು. ಈಗ ಸಿಡಿ ಇದ್ದರೂ ಅದು ನಕಲಿ ಎಂದು ಆರೋಪಿಸಬಹುದು.. ಇದು ನಕಲಿ ಸಿಡಿ ಎಂದು ಮಾಧ್ಯಮಗಳು ವಾದ ಮಾಡಬಹುದು. ಸಚಿವನಾದವನು ತನ್ನ ಸ್ಥಾನದಲ್ಲಿ ಉಳಿದುಕೊಳ್ಳಲು ಯತ್ನ ನಡೆಸಬಹುದು.
ಇದಾದ ನಂತರ ರಾಜಕಾರಣಿಗಳ ಲೈಂಗಿಕ ಹಗರಣ ಬಹಳ ವರ್ಷಗಳ ಕಾಲ ವರದಿಯಾಗಲಿಲ್ಲ.. ೨೦೦೭ ರಲ್ಲಿ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣ ವರದಿಯಾಯಿತು. ಸ್ವಲ್ಪ ಕಾಲ ಬಾರಿ ಸದ್ದು ಮಾಡಿತು. ನರ್ಸ್ ಒಬ್ಬರ ಜೊತೆ ರೇಣುಕಾಚಾರ್ಯ ಚುಂಬನದಲ್ಲಿ ತೊಡಗಿರುವ ದೃಶ್ಯಗಳು ಬಹಿರಂಗಗೊಂಡವು. ಇದು ಭಾರತೀಯ ಜನತಾ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತು. ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಯಿತು.. ಸಾರ್ವಜನಿಕ ಬದುಕಿನಲ್ಲಿ ಇರುವವರು ನೈತಿಕತೆಗೆ ಮಹತ್ವ ನೀಡದಿರುವುದು ಸಾಮಾಜಿಕ ವಲಯದ ಚರ್ಚೆಗೆ ಕಾರಣವಾಯಿತು. ಈ ಆರೋಪದ ನಡುವೆಯೂ ರೇಣುಕಾಚಾರ್ಯ ೨೦೦೮ ರಲ್ಲಿ ಸಚಿವರಾದರು.. ಅವರ ಮೇಲೆ ಬಂದಿದ್ದ ಅನೈತಿಕತ ಸಂಬಂಧದ ಪ್ರಶ್ನೆಯನ್ನು ನೇಪತ್ಯಕ್ಕೆ ಸರಿಸಲಾಯಿತು.
೨೦೦೭ ರ ನಂತರ ಅನೈತಿಕ ಲೈಂಗಿಕತೆ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರತೊಡಗಿದವು. ಇದಕ್ಕೆ ಮಾಧ್ಯಮಗಳು ರಾಜಕಾರಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿದ್ದು ಒಂದು ಕಾರಣವಾದರೆ, ಟ್ಯಾಬಲೈಡ್ ಪತ್ರಿಕೋದ್ಯಮ ಮುಖ್ಯವಾಹಿನಿಗೆ ಬಂದಿದ್ದೂ ಕಾರಣ ಇರಬಹುದು. ಒಟ್ಟಿನಲ್ಲಿ ರಾಜಕಾರಣಿಗಳು ತುಂಬು ಎಚ್ಚರದಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ನಿಜ. ಏನೇ ಇರಲಿ ೨೦೧೦ ರಲ್ಲಿ ಇನ್ನೊಬ್ಬ ಸಚಿವರು ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ..
ಸ್ನೇಹಿತನ ಹೆಂಡಿತಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಹರತಾಳು ಹಾಲಪ್ಪ ೨೦೧೭ ರಲ್ಲಿ ಈ ಆರೋಪದಿಂದ ಮುಕ್ತರಾದರು, ಹರತಾಳು ಹಾಲಪ್ಪ ಅವರ ಸ್ನೇಹಿತರೇ ತಮ್ಮ ಹೆಂಡತಿಯ ಜೊತೆ ಹಾಲಪ್ಪ ಅವರ ಸಂಬಂಧವಿದೆ ಎಂದು ಆರೋಪ ಮಾಡಿದ್ದರು.
ಈ ಪ್ರಕರಣ ನಡೆದ ಎರಡೇ ವರ್ಷಗಳಲ್ಲಿ ಬೆಳಕಿಗೆ ಬಂದಿದ್ದು ಮೂವರು ಶಾಸಕರು ವಿಧಾನಸಭೆಯಲ್ಲಿ ಇರುವಾಗ ತಮ್ಮ ಮೊಬೈಲ್ ನಲ್ಲಿ ನೀಲಿ ಚಿತ್ರದ ವೀಕ್ಷಣೆ ಮಾಡಿದ್ದು.. ಅವರೆಂದರೇ ಈಗಿನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಕೃಷ್ಣಪಾಲೇಮಾರ್ ಮತ್ತು ಸಿ.ಸಿ. ಪಾಟೀಲ್. ಸಿ. ಸಿ, ಪಾಟೀಲ್ ಈಗ ಸಚಿವರು.
ಈ ಪ್ರಕರಣ ಸಾಕಷ್ಟು ಸದ್ದು ಮಾಡಿತು. ಮತ್ತೆ ಸಾರ್ವಜನಿಕ ಬದುಕಿನಲ್ಲಿ ಇರುವವರ ನೈತಿಕತೆ ಮತ್ತು ಅನೈತಿಕತೆ ಕುರಿತು ಚರ್ಚೆ ನಡೆಯಿತು.. ಹಾಗೆ ಈ ಬಗ್ಗೆ ತನಿಖೆ ನಡೆಸಲು ನೇಮಕವಾದ ಸದನ ಸಮೀತಿ ಲಕ್ಶ್ಮಣ ಸವದಿ ಮತ್ತು ಸಿ.ಸಿ. ಪಾಟೀಲರನ್ನು ಆರೋಪ ಮುಕ್ತರನ್ನಾಗಿ ಮಾಡಿತು, ಪಾಲೇಮಾರ್ ಮಾತ್ರ ತಪ್ಪಿತಸ್ಥರಾದರು.
ಇಷ್ಟಕ್ಕೆ ಶಾಸಕರ ಮೇಲಿನ ಲೈಂಗಿಕ ಹಗರಣ ಆರೋಪ ನಿಲ್ಲಲಿಲ್ಲ. ಕೇವಲ ಒಂದು ವರ್ಷದ ನಂತರ ಪ್ರಕಟವಾದದ್ದು ಇನ್ನೊಂದು ಲೈಂಗಿಕ ಹಗರಣ.. ಅದು ಉಡುಪು ಶಾಸಕ ರಘುಪತಿ ಭಟ್ಟರದು..ಮಹಿಳೆಯೊಬ್ಬಳ ಜೊತೆ ಅವರಿದ್ದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಯಿತು.. ಭಟ್ಟರು ಚುನಾವಣೆಯಿಂದಲೇ ಹಿಂದೆ ಸರಿದರು. ಐದು ವರ್ಷ ವನವಾಸ ಅನುಭವಿಸಿದರು.. ಯಾವಾಗಲೂ ಸಾಮಾನ್ಯ ಜನರಿಗೆ ನೆನಪು ಕಡಿಮೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಟ್ಟರು ಉಡುಪಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು..
೨೦೧೫ ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಶಾಸಕ, ಮಾಜಿ ಸಚಿವ ಎ. ರಾಮದಾಸ್. ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ರಾಮದಾಸ್ ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪವಾಗಿತ್ತು. ಆದರೆ ಈ ಆರೋಪದಿಂದಾಗಿ ರಾಮದಾಸ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ನಂತರ ಈ ಆರೋಪದ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು ರಾಮದಾಸ್ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದರು.
೨೦೧೫ ರ ಈ ಪ್ರಕರಣದ ನಂತರ ೨೦೧೬ ರಲ್ಲಿ ಬೆಳಕಿಗೆ ಬಂದಿದ್ದು ಇನ್ನೊಂದು ಪ್ರಕರಣ..ಈ ಪ್ರಕರಣದ ಆರೋಪಿ ೭೧ ವರ್ಷ ವಯಸ್ಸಿನ ಅಬ್ಕಾರಿ ಸಚಿವರಾಗಿದ್ದ ಎಚ್. ವೈ. ಮೇಟಿ. ಅವರು ಮಹಿಳೆಯೊಬ್ಬರ ಜೊತೆ ನಡೆಸುತ್ತಿದ್ದ ಕ್ಲಿಪಿಂಗ್ ಎಲ್ಲ ವಾಹಿನಿಗಳನ್ನು ತಲುಪಿ ಪ್ರಸಾರವಾಯಿತು. ವರ್ಗಾವಣೆ ಬಯಸಿದ ಮಹಿಳೆಯ ಜೊತೆ ಅವರು ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವರ ಮೇಲಿತ್ತು. ೨೦೧೭ ರಲ್ಲಿ ಸಿಐಡಿ ಈ ಬಗ್ಗೆ ತನಿಖೆ ನಡೆಸಿ ಮೇಟಿ ಅವರನ್ನು ದೋಷಮುಕ್ತರನ್ನಾಗಿ ಮಾಡಿತು..
ಇದಾದ ಮೇಲೆ ಈಗ ಬಹಿರಂಗವಾಗಿದ್ದು ರಮೇಶ್ ಜಾರಕೀಹೊಳಿ ಅವರ ಪ್ರಕರಣ...
ಸ್ವಾತಂತ್ರೋತ್ತರ ಕರ್ನಾಟಕದ ರಾಜಕಿಯ ಇತಿಹಾಸದಲ್ಲಿ ಬಹಿರಂಗಗೊಂಡ ಲೈಗಿಂಕ ಹಗರಣಗಳ ದಾಖಲಿತ ವಿವರಗಳು ಇವಾದರೆ ರಾಜಕೀಯ ನಾಯಕರ ಲೈಂಗಿಕ ಚಟುವಟಿಕೆಗಳ ಬಗ್ಗೆ ಬಹಳಷ್ಟು ಸುದ್ದಿಗಳು ವೈರಲ್ ಆದದ್ದಿದೆ..
ಕೆಲವು ರಾಜಕೀಯ ನಾಯಕರ ಮದುವೆಯೇತರ ಸಂಬಂಧಗಳು ಸಾರ್ವಜನಿಕ ಚರ್ಚೆಗೆ ಕಾರಣವೂ ಆಗಿದ್ದವು. ಆದರೆ ಅದ್ಯಾವುದೂ ಕೂಡ ಈಗ ಪ್ರಸ್ತಾಪಿಸಿರುವ ಪ್ರಕರಣಗಳಂತೆ ಹಗರಣ ಆಗಿರಲಿಲ್ಲ. ಅಲ್ಲಿ ಅಧಿಕಾರ ದುರೂಪಯೋಗ ಚೀಟೀಂಗ್ ಅಂತಹ ಆರೋಪವೂ ಇರಲಿಲ್ಲ. ಅದು ಕೇವಲ ಗಂಡು ಹೆಣ್ಣಿನ ಒಪ್ಪಿತ ಲೈಂಗಿಕ ಚಟುವಟಿಕೆ ಮಾತ್ರ ಆಗಿದ್ದವು. ಇಲ್ಲಿ ನೈತಿಕತೆಯ ಪ್ರಶ್ನೆ ಅಷ್ಟು ಮುಖ್ಯ ಆಗಲೇ ಇಲ್ಲ.
ಇಂತಹ ಮದುವೆಯೇತರ ಸಂಬಂಧ ಅಥವಾ ಸ್ನೇಹಿತೆಯರನ್ನು ಹೊಂದಿದ್ದಾರೆ ಎಂದು ಹೇಳಲಾದ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಆರ್. ಗುಂಡೂರಾವ್, ಜೆ. ಎಚ್. ಪಟೇಲರ ಸುತ್ತ ಸಾಕಷ್ಟು ರಂಜನೀಯ ಕಥೆಗಳು ಕೇಳಿ ಬಂದಿದ್ದವು. ಜೊತೆಗೆ ಈ ಸಂಬಂಧಗಳನ್ನು ಒಪ್ಪಿಕೊಂಡ ಈ ಹಿರಿಯ ರಾಜಕಾರಣಿಗಳು ತಾವು ಶ್ರೀರಾಮಚಂದ್ರ ಅಲ್ಲ ಎಂದು ಜನರ ಎದುರು ಸ್ಪಷ್ಟ ಪಡಿಸಿದ್ದರು. ಜೊತೆಗೆ ಇವರ ಈ ಮದುವೆಯೇತರ ಸಂಬಂಧಗಳು ಅಸಹ್ಯ ಹುಟ್ಟಿಸುವಂತೆ ಇರಲಿಲ್ಲ..ಅದು ಸಭ್ಯತೆಯ ಎಲ್ಲೆಯನ್ನೂ ಮೀರಿರಲಿಲ್ಲ..ಜೊತೆಗೆ ಅಧಿಕಾರ ದುರೂಪಯೋಗ ಮಾಡಿ ಲೈಂಗಿಕ ಸುಖ ಪಡೆಯಲು ಯತ್ನಸಿದ ದೂರು ಕೂಡ ಇವರ ಮೇಲಿರಲಿಲ್ಲ. ಅದು ಕೇವಲ ರಂಜನೀಯ ಕಥೆಗಳಾಗಿ ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡವು..
ಆದರೆ ೧೯೭೩ ರ ಆರ್. ಡಿ. ಕಿತ್ತೂರ್ ಅವರ ಪ್ರಕರಣದಿಂದ ರಮೇಶ್ ಜಾರಕೀಹೊಳಿ ವರೆಗಿನ ಲೈಂಗಿಕ ಹಗರಣ ಒಪ್ಪಿತ ಲೈಂಗಿಕ ಚಟುವಟಿಕೆ ಆಗಿರಲಿಲ್ಲ. ಅದು ತಮ್ಮ ಅಧಿಕಾರ ದುರೂಪಯೋಗ ಪಡಿಸಿಕೊಂಡು ಮಹಿಳೆಯನ್ನು ಬಳಸಿಕೊಂಡ ಆರೋಪಗಳಾಗಿವೆ.. ಹೀಗಾಗಿ ಇದು ಕೇವಲ ಗಂಡು ಹೆಣ್ಣಿನ ಸಂಬಂಧಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಆಯಾಮವನ್ನು ಪಡೆಯುತ್ತದೆ. ಈ ಕಾರಣದಿಂದ ಸಾಮಾಜಿಕ ಬದುಕು ಮತ್ತು ನೈತಿಕತೆ ಕುರಿತು ಚರ್ಚೆ ನಡೆಸಲೇಬೇಕಾದ ಅನಿವಾರ್ಯತೆ ಮೂಡಿದೆ.
article published in prajavani
kannadada atanka
Monday, March 8, 2021
good response to my chaanel
Tuesday, February 2, 2021
Friday, November 13, 2020
ರವಿ ಬೆಳಗೆರೆ ಮಾಧರಿಯ ಪತ್ರಿಕೋದ್ಯಮ;; ಮಾಂಸದಂಗಡಿಯ ಮುಂದೆ ಕುಳಿತು....
ರವಿ ಬೆಳಗೆರೆ ಇನ್ನಿಲ್ಲ. . ಈ ಸುದ್ದಿ ಬರುತ್ತಿದ್ದಂತೆ ರವಿ ಬೆಳಗೆರೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹೊರಬಂದವು, ಕೆಲವರು ರವಿ ಬೆಳಗೆರೆಯೊಂದಿಗೆ ಕನ್ನಡ ಪತ್ರಿಕೋದ್ಯಮ ಮುಗಿದೇ ಹೋಯಿತು ಎಂದರು. ರವಿಗೆ ಸಾಹಿತ್ಯದ ಗಾರುಡಿಗ ಎಂದು ಕರೆದರು. ಟಿವಿ ಚಾನಲ್ ಗಳು ಇಡೀ ದಿನ ರವಿಯ ಗುಣಗಾನದಲ್ಲಿ ನಿರತವಾದವು... ರವಿಯ ಸಾಹಿತ್ಯ ಕೃತಿಗಳ ಬಗ್ಗೆ ಭಾರಿ ಭಟ್ಟಂಗಿ ವಿಮರ್ಶೆಗಳು ನಡೆದವು...
ನಡದೇ ಇತ್ತು ರವಿ ಗುಣಗಾನ... ಅವನಲ್ಲಿ ಇರುವ ಇಲ್ಲದಿರುವ ಎಲ್ಲ ಗುಣಗಳನ್ನು ಆರೋಪಿಸಲಾಯಿತು.. ಹಾಗಿದ್ದರೆ ರವಿ ಎಂಥವನು ? ಆತ ಆತ್ಯುತ್ತಮ ಪತ್ರಿಕೋದ್ಯಮಿ ಆಗಿದ್ದನೆ ? ಆತ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬನೆ,, ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ.. ಮೊದಲನೆಯದಾಗಿ ಒಂದು ಮಾತು.. ನಾನು ಅವನನ್ನು ಎಂದೂ ಬಹುವಚನದಲ್ಲಿ ಕರೆದಿಲ್ಲ. ಅವನೂ ನನ್ನನ್ನು ಕರೆಯುತ್ತಿದ್ದುದು ಶಶಿ ಎಂದು ಏಕವಚನದಲ್ಲಿ.ನಾನು ಅವನನ್ನು ರವಿ ಎಂದು ಏಕವಚನದಲ್ಲಿಯೇ ಕರೆಯುತ್ತಿದ್ದೆ. ಹೀಗಾಗಿ ನಾನು ಅವನಿಗೆ ಬಹುವಚನದ ಸಂಬೋಧನೆ ಮಾಡಲಾರೆ...ಕ್ಷಮೆ ಇರಲಿ..
ನಾನು ರವಿ ಬೆಳಗೆರೆಗೆ ಸಂಬಂಧಿಸಿದ ನನ್ನ ಅನುಭವಗಳನ್ನು ಬಿಚ್ಚಿಡುತ್ತಿದ್ದೇನೆ.. ನನ್ನ ಅನುಭವದ ಮೂಲಕ ಅವನನ್ನು ಹುಡುಕುತ್ತಿದ್ದೇನೆ. ನಿಜವಾಗಿ ರವಿ ಬೆಳಗೆರೆ ಎಂಥವನಾಗಿದ್ದ ? ಅವನ ಬದುಕಿನ ನಂಬಿಕೆಗಳು ಏನಾಗಿದ್ದವು ? ಅವನಿಗೆ ಯಾವುದರ ಬಗ್ಗೆ ನಂಬಿಕೆ ಇತ್ತು ? ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಲು ಯತ್ನ ನಡೆಸುತ್ತಿದ್ದೇನೆ. ರವಿ ಒಬ್ಬ ಮಾಂತ್ರಿಕ, ಗಾರುಡಿಗ, ಅಕ್ಷರ ಭ್ರಹ್ಮ ಎಂಬ ಸುಳ್ಳುಗಳನ್ನು ಮಾಧ್ಯಮಗಳು ಹರಡುತ್ತಿರುವ ಈ ಸಂದರ್ಭದಲ್ಲಿ ನಿಜವಾದ ರವಿ ಬೆಳಗೆರೆಯನ್ನು ಹುಡುಕುವ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಜೊತೆಗೆ ಅವನ ಮಾಧರಿಯ ಪತ್ರಿಕೋದ್ಯಮವೇ ನಿಜವಾದ ಪತ್ರಿಕೋದ್ಯಮ ಎಂದು ಇಂದಿನ ಯುವಕರು ನಂಬಿರುವ ಈ ಸಂದರ್ಭದಲ್ಲಿ ಅದಲ್ಲ ಎಂದು ಹೇಳಬೇಕಾದ್ದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಈ ಕರ್ತವ್ಯದಿಂದ ನಾನು ವಿಮುಖನಾಗಲಾರೆ...ಮಾಂಸದಂಗಡಿಯ ವಾರಸುದಾರ ಪತ್ರಿಕೋದ್ಯಮವನ್ನು ತಡೆಯುವ ಉದ್ದೇಶ ಕೂಡ ನನ್ನದಾಗಿದೆ.
ರವಿ ಬೆಳಗೆರೆಯನ್ನು ನಾನು ಮೊದಲು ನೋಡಿದ್ದು ೧೯೮೨ರಲ್ಲಿ.. ಆಗ ಬೆಂಗಳೂರಿನಿಂದ ಮುಂಜಾನೆ ಎಂಬ ಕನ್ನಡ ದಿನ ಪತ್ರಿಕೆ ಬರುತ್ತಿತ್ತು. ಈ ಪತ್ರಿಕೆಯ ಮಾಲಿಕರು ಆರ್. ಗುಂಡೂರಾವ್ ಮತ್ತು ವೀರಪ್ಪ ಮೊಯ್ಲಿ..ಎಸ್. ವಿ. ಜಯಶೀಲರಾವ್ ಈ ಪತ್ರಿಕೆಯ ಸಂಪಾದಕರು. ನಾನು ೬೦೦ ಸಂಬಳ ತೆಗೆದುಕೊಳ್ಳುತ್ತಿದ್ದ ಉಪ ಮುಖ್ಯವರದಿಗಾರ..
ಅದೊಂದು ದಿನ ರವಿ ಬೆಳಗೆರೆ ಎಂಬ ಈ ವ್ಯಕ್ತಿ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿದ್ದ ಮುಂಜಾನೆ ಕಚೇರಿಗೆ ಬಂದಿಳಿದ...ಜಯಶೀಲರಾವ್ ರವಿಗೆ ಕೆಲಸ ನೀಡಿದ್ದರು..
ಇಲ್ಲಿ ಆತ ಕೆಲಸ ಮಾಡಿದ್ದು ಕೆಲವೇ ದಿನಗಳು..ಅಷ್ಟರಲ್ಲಿ ಆತ ಬಹಳಷ್ಟು ಜನರ ತನ್ನ ಪ್ರಭಾವ ಬೀರಿದ್ದ.. ಹಾಗೆ ಹಲವರ ಕಾಲು ಎಳೆಯುತ್ತಿದ್ದ. ರವಿಯಿಂದ ಕಾಲು ಎಳೆಸುಕೊಳ್ಳುತ್ತಿದ್ದವರಲ್ಲಿ ಮುಖ್ಯ ವರದಿಗಾರ ಮುಂಜಾನೆ ಸತ್ಯ ಮುಖ್ಯರು..
ಕೆಲವು ದಿನಗಳ ನಂತರ ಆತ ಮತ್ತೆ ಬಳ್ಳಾರಿಗೆ ತಿರುಗಿ ಹೊರಟ, ಆತನಿಗೆ ಮುಂಜಾನೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಇಷ್ಟ ಇರಲಿಲ್ಲ..ಆತನ ಆದ್ಯತೆಗಳು ಬೇರೆ ಇದ್ದವು. ಅವನಿಗೆ ಆಗಲೇ ಬಹುತೇಕ ಕ್ರೈಮ್ ವರದಿಗಾರರು ಸ್ನೇಹಿತರಾಗಿದ್ದರು. ಬಳ್ಳಾರಿಯಿಂದ ಒಂದು ಕ್ರೈಮ್ ಪತ್ರಿಕೆಯನ್ನು ಹೊರ ತರುವುದು ಅವನ ಉದ್ದೇಶವಾಗಿತ್ತು.. ಅದನ್ನೇ ನಮಗೆಲ್ಲ ಹೇಳಿ ಆತ ಮತ್ತೆ ಬಳ್ಳಾರಿಯ ಬಸ್ ಹತ್ತಿದ..
ಇದಾದ ಮೇಲೆ ಆತ ಬಳ್ಳಾಎರಿಯಿಂದ ವಾರ ಪತ್ರಿಕೆ ತಂದ.. ಅದು ಹಾಯ್ ಬೆಂಗಳೂರು ಮಾದರಿಯಲ್ಲೇ ಇದ್ದ ಪತ್ರಿಕೆ. ಕ್ರೈಮ್ ಸೆಕ್ಸ್, ಭೂಗತ ಜಗತ್ತು ಪತ್ರಿಕೆಯಲ್ಲಿ ವಿಜೃಂಭಿಸುತ್ತಿತ್ತು...
ಇದಾದ ಕೆಲವು ವರ್ಷಗಳ ಒರೆಗೆ ರವಿಯ ಬಳ್ಳಾರಿಯ ಪತ್ರಿಕೋದ್ಯಮದ ಬಗ್ಗೆ ಹಲವು ರಂಜನೀಯ ವರದಿಗಳು ಬರುತ್ತಿದ್ದವು.. ಅಷ್ಟರಲ್ಲಿ ಮುಂಜಾನೆ ಮುಚ್ಚಿ ಹೋಗಿತ್ತು.. ನಾನು ಬೇರೆ ಬೇರೆ ವಾರ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದೆ. ರವಿ ಬೆಳಗೆರೆ ಮರೆತುಹೋಗಿದ್ದ...
ಅದೊಂದು ದಿನ ರವಿ ಮತ್ತೆ ಬೆಂಗಳೂರಿಗೆ ಬಂದಿಳಿದ..ಅವನ ರಾಜಧಾನಿ ಪತ್ರಿಕೋದ್ಯಮ ಮತ್ತೆ ಮುಂದುವರಿಯಿತು..ರಾಜಾಜಿನಗರ ಎಂಟ್ರೆನ್ಸ್ ಬಳಿ ಒಂದು ರೂಮು ಮಾಡಿದ್ದ. ಆಗ ಅವನು ಕೆಲಸ ಮಾಡುತ್ತಿದ್ದುದು ಅಭಿಮಾನಿ ಬಳಗದಲ್ಲಿ... ನಾನು ಅಭಿಮಾನಿಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದೆ..ಹೀಗಾಗಿ ಆತ ನಮ್ಮ ಬಳಗದವನಾಗಿದ್ದ..
ನಾನು ಎಂಬತ್ತರ ದಶಕದ ಕೊನೆಯ ಹೊತ್ತಿಗೆ ಕನ್ನಡ ಪ್ರಭ ಸೇರಿಕೊಂಡಿದ್ದೆ..ಕನ್ನಡ ಪ್ರಭ ಸತ್ಯ ಅವರು ನಮಗೆ ಪತ್ರಿಕೋದ್ಯಮದ ಮಾದರಿಯಾಗಿದ್ದರು.. ಇಮ್ರಾನ್ ಖುರೇಶಿ, ಗಿರೀಷ್ ನಿಕ್ಕಮ್, ಡಿ. ಮಹದೇವಪ್ಪ, ಡಿ. ಉಮಾಪತಿ, ಗರುಡನಗಿರಿ ನಾಗರಾಜ್ ಮೊದಲಾದವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ರಾಜಕೀಯ ವರದಿಗಾರಿಕೆಯತ್ತ ನಾನು ಹೊರಳಿಕೊಂಡಿದ್ದೆ. ರವಿಯ ಪತ್ರಿಕೋದ್ಯಮದ ಮಾದರಿ ಆಗಲೇ ಬೇರೆಯಾಗಿತ್ತು...ಕೆ.ಶಾಮರಾವ್ ಗರಡಿಯಲ್ಲಿ ಆತನಿದ್ದ. ಶಾಮರಾವ್ ಕನ್ನಡದ ಮಹಾನ್ ಪತ್ರಿಕೋದ್ಯಮಿ ಎಂಬುದು ಅವನ ನಂಬಿಕೆಯಾಗಿತ್ತು.. ಆದರೆ ಶಾಮರಾವ್ ದೊಡ್ದ ಪತ್ರಿಕೋದ್ಯಮಿ ಎಂದು ನನಗೆ ಅನ್ನಿಸುತ್ತಿರಲಿಲ್ಲ.ಧ್ವೇಷದ ಪತ್ರಿಕೋದ್ಯಮದಲ್ಲಿ ಶಾಮರಾವ್ ನಂಬಿಕೆ ಇಟ್ಟವರಾಗಿದ್ದರು..
ಹೀಗಿದ್ದರೂ ರವಿಯ ಜೊತೆ ವೈಯಕ್ತಿಕ ಸ್ನೇಹ ಇತ್ತು. ಹಲವು ಬಾರಿ ಇಬ್ಬರೂ ಗುಂಡು ಹಾಕಿ ಚರ್ಚೆ ಮಾಡುತ್ತಿದ್ದೆವು... ಆದರೆ ರವಿಯ ಮನ್ನಸ್ಸಿನ ಒಳಗೆ ಕ್ರೌರ್ಯ ವಿಜೃಂಭಿಸುತ್ತಿದೆ ಎಂದು ನನಗೆ ಅನ್ನಿಸುತ್ತಿತ್ತು.. ಆತ ತನಗೆ ಆಗದವರನ್ನು ಟಾರ್ಗೆಟ್ ಮಾಡುತ್ತಿದ್ದ ರೀತಿ ಅಪಾಯಕಾರಿ ಅನ್ನಿಸುತ್ತಿತ್ತು. ಆತನಿಗೆ ಯಾವುದೇ ಸಿದ್ಧಾಂತ ಮೌಲ್ಯ ಇದೆ ಎಂದು ಅನ್ನಿಸುತ್ತಿರಲಿಲ್ಲ..ಆತನಿಗೆ ಮಹಿಳೆಯರ ಬಗ್ಗೆಯೂ ಅಂತಹ ಗೌರವ ಇರಲಿಲ್ಲ.. ಆತನಿಗೆ ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಇದೆ ಎನ್ನುವುದು ಆತ ಗುಂಡೂ ಹಾಕಿದಾಗ ಹೊರಬಂದು ಬಿಡುತ್ತಿತ್ತು..ಹಾಗೆ ಆತ ಜ್ಯೋತಿಷವನ್ನು ನಂಬುತ್ತಿದ್ದ.. ತನ್ನದು ಮೀನ ರಾಶಿ ಎಂದೂ ಹೇಳುತ್ತಿದ್ದ. ಹಾಗೆ ಮೀನಿನ ಚಿತ್ರವನ್ನು ಹಾಕಿಕೊಳ್ಳುವುದು ಅವನ ಕಾಯ್ಂ ಹವ್ಯಾಸವಾಗಿತ್ತು. ಅಮ್ಮ ಅಮ್ಮ ಎಂದು ಸದಾ ಕನವರಿಸುತ್ತಿದ್ದ ಆತ ನಿಜವಾಗಿ ಅಮ್ಮನನ್ನು ಹುಡುಕುತ್ತಿದ್ದಾನೆಯೇ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಸಿಗುವುದು ಕಷ್ಟವಾಗುತ್ತಿತ್ತು.
ಗುಂಡು ಹಾಕಿದ ಸಂದರ್ಭದಲ್ಲಿ ಆತ ಹಿರಿಯ ಪತ್ರಕರ್ತರನ್ನು ವಾಚಾಮಗೋಚರವಾಗಿ ಬೈಯುತ್ತಿದ್ದ..ಬೇರೆಯವರ ಬಗ್ಗೆ ಅವನ ಬಾಯಲ್ಲಿ ಎಂದೂ ಒಳ್ಳೆಯ ಮಾತು ಬರುತ್ತಿರಲಿಲ್ಲ. ಹಲವಾರು ಹಿರಿಯ ಪತ್ರಕರ್ತರ ಹೆಸರು ಹೇಳಿ ನಾಯಿಗಳನ್ನು ಹೊಡೆದು ಹಾಕಿದ ಉದಾಹರಣೆಗಳೂ ಇದ್ದವು..ನಾನು ಸಾವಕಾಶವಾಗಿ ಅವನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದೆ. ಜೊತೆಗೆ ಕನ್ನಡ ಪ್ರಭ ಕೆಲಸದಲ್ಲಿ ನಾನು ಮುಳುಗಿ ಹೋದೆ.. ಆಗಲೇ ಆತ ಅಪರಾಧ ಜಗತ್ತಿನ ಒಳಗೆ ಪ್ರವೇಶ ಮಾಡಲು ಪ್ರಾರಂಭಿಸಿದ್ದ. ಕ್ರೈಮ್ ವರದಿಗಾರರು ಅವನಿಗೆ ಆಪ್ತರಾದರು, ಹಾಗೆ ಪ್ರೆಸ್ ಕ್ಲಬ್ ಸ್ನೇಹಿತರೂ ಅವನಿಗೆ ದೊರಕಿದರು..
ಅದೊಂದು ದಿನ ಆತ ಬರಹ ರುಚಿಕಟ್ಟಾಗಿರಬೇಕು ಎಂದು ಬರೆದಿದ್ದು ನೋಡಿ ನನಗೆ ಶಾಕ್.. ಬರಹ ರುಚಿಕಟ್ಟಾಗಿರಬೇಕು ಎಂದು ಉಪ್ಪು ಖಾರ ಸೇರಿಸಬೇಕು. ಹಾಗೆ ಸೇರಿಸಿದರೆ ಅದು ಸತ್ಯಕ್ಕೆ ಮಾಡಿದ ಧ್ರೋಹವಾಗುತ್ತದೆ. ನನಗೆ ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆತ ರುಚಿಕಟ್ಟಾಗಿ ಬರೆಯುವ ದಾರಿ ಹಿಡಿದ,,,
ಕರ್ಮವೀರ ಸಂಪಾದಕನಾದ ಮೇಲೆ ಆತ ಭೂಗತಲೋಕದ ಬಗ್ಗೆ ರುಚಿ ಕಟ್ಟಾಗಿ ಬರೆಯತೊಡಗಿದ...ಹೀಗೆ ಬರೆಯುತ್ತ ಸತ್ಯದ ಮುಖದ ಮೇಲೆ ಹೊಡೆದ....ಆತ ಕಥೆಗಾರನೂ ಆಗಿದ್ದರಿಂದ ವರದಿಯಲ್ಲಿ ಕಥೆ ನುಸುಳತೊಡಗಿತು.. ವಾಸ್ತವಯಾವುದು ಕಲ್ಪನೆಯಾವುದು ಎಂಬುದು ಅರ್ಥವಾಗದ ಸ್ಥಿತಿಯನ್ನು ಆತ ನಿರ್ಮಿಸಿಬಿಡುತ್ತಿದ್ದ.ಈ ರೀತಿಯ ಪತ್ರಿಕೋದ್ಯಮ ಮಾಡಬಹುದು ಎಂಬುದು ನನ್ನಂಥವನಿಗೆ ಊಹಿಸಲೂ ಸಾಧ್ಯವಿಲ್ಲದ ವಿಚಾರವಾಗಿತ್ತು..
ನನ್ನಂಥವರು ಪತ್ರಿಕೋದ್ಯಮ ಎಂದರೆ ಸತ್ಯದ ಹುಡುಕಾಟ ಎಂದು ನಂಬಿದವರು.. ಅಲ್ಲಿ ಕಲ್ಪನೆಗೆ ಅವಕಾಶ ಇಲ್ಲ. ವಾಸ್ತವಕ್ಕೆ ಭಾಷಾ ಆಭರಣವನ್ನು ತೊಡಿಸಬೇಕಾದ ಅಗತ್ಯವೂ ಇಲ್ಲ... ಆದರೆ ರವಿಯ ವರದಿಗಾರಿಕೆಯಲ್ಲಿ ಸತ್ಯಕ್ಕಿಂತ ಕಲ್ಪನೆಗೆ ಹೆಚ್ಚಿನ ಮಹತ್ವ ದೊರಕುತ್ತಿತ್ತು. ಆತ ತನ್ನ ಭಾಷೆಯ ಮೇಲಿನ ಹಿಡಿತವನ್ನು ಸತ್ಯವನ್ನು ಮರೆಮಾಚುವುದಕ್ಕೆ ಬಳಸುತ್ತಿದ್ದ.. ಭೂಗತ ಜಗತ್ತು ಕುರಿತ ಅವನ ಬಹುತೇಕ ವರದಿಗಳಲ್ಲಿ ಕಮರ್ಶಿಯಲ್ ಸಿನಿಮಾ ಅಂಶಗಳು ಜಾಸ್ತಿ ಇರುತ್ತಿದ್ದವು.. ಭೂಗತ ಜಗತ್ತಿನ ವ್ಯಕ್ತಿಯೊಬ್ಬನನ್ನು ಆತ ವಿಲನ್ ಎಂದು ಹೇಳುತ್ತಲೇ ಆತನನ್ನು ನಾಯಕನನ್ನಾಗಿ ಮಾಡಿಬಿಡುತ್ತಿದ್ದ. ಆ ಮೂಲಕ ಅವರ ಆಂತರಿಕ ವಲಯವನ್ನು ಪ್ರವೇಶಿಸಿಬಿಡುತ್ತಿದ್ದ..
ಭೂಗತ ಜಗತ್ತಿನ ಜೀವಿಗಳು ತಾವು ಮಾಡಿದ ಕೊಲೆ ದೌರ್ಜನ್ಯಗಳನ್ನು, ಅತ್ಯಾಚಾರವನ್ನು ಹೊರ ಜಗತ್ತಿಗೆ ತಿಳಿಸುತ್ತ ಸಾಮಾನ್ಯ ಜನರಲ್ಲಿ ಭಯವನ್ನು ಉಂಟು ಮಾಡಲಿ ರವಿ ಬೆಳಗೆರೆಯನ್ನು ಬಳಸಿಕೊಳ್ಳತೊಡಗಿದರು..ಆತ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ತುಂಬು ಸಂತೋಷದಿಂದ ಅವರಿಗೆ ವೇದಿಕೆಯನ್ನು ಒದಗಿಸುತ್ತಿದ್ದ..ಭೂಗತ ಜಗತ್ತಿನ ಆಗು ಹೋಗುಗಳಲ್ಲಿ ಮೂಗು ತೂರಿಸತೊಡಗಿದ ರವಿ. ಆಲ್ಲಿನ ಆಗು ಹೋಗುಗಳನ್ನು ತಾನೇ ನಿಯಂತ್ರಿಸುವವನಂತೆ ವ್ಯವಹರಿಸತೊಡಗಿದ. ಹೀಗಾಗಿ ಸ್ನೇಹಿತರಾಗಿದ್ದ ಭೂಗತ ಜಗತ್ತಿನ ಡಾನ್ ಗಳು ಬೇರೆಯಾದರು. ಯಾರು ಯಾರೋ ಒಂದಾದರು..
ಈ ಕುರಿತು ಮುತ್ತಪ್ಪ ರೈ ಒಮ್ಮೆ ನನ್ನ ಬಳಿ ಹೇಳಿದ್ದರು..
ರವಿ ಒಬ್ಬ ಅಪಾಯಕಾರಿ ಪತ್ರಕರ್ತ....!
ಅಗ್ನಿ ಶ್ರೀಧರ್ ಕೂಡ ರವಿ ಬೆಳಗೆರೆ ಕುರಿತು ತುಂಬಾ ನೋವಿನಿಂದ ಮಾತನಾಡುತ್ತಾರೆ. ಯಾಕೆ ಹೀಗಾದ ಎಂದು ಪ್ರಶ್ನಿಸುತ್ತಿದ್ದವರು ಅಗ್ನಿಶ್ರೀಧರ್...
ರವಿ ಹಾಯ್ ಬೆಂಗಳೂರು ಮಾಡಿದ ಮೇಲೆ ಸಂಪೂರ್ಣವಾಗಿ ಬದಲಾಗಲಿಲ್ಲ,, ಬೆತ್ತಲಾದ... ತನ್ನ ಕಡು ಕಷ್ಟದ ದಿನಗಳನ್ನು ಮರೆತು ಬಡತನಕ್ಕೆ ಸೆಡ್ದು ಹೊಡೆಯುವನಂತೆ ಫೀಲ್ಡ್ ಗೆ ಇಳಿದ...ಅವನ ಪತ್ರಿಕೆಯ ಮೂರನೆಯ ಸಂಚಿಕೆ ಹೊರಬರುವ ಹೊತ್ತಿಗೆ ಅವನ ಮೇಲಿದ್ದ ಅಲ್ಪ ಸ್ವಲ್ಪ ನಂಬಿಕೆಯೂ ನನಗೆ ಹೊರಟು ಹೋಗಿತ್ತು.. ಜಾರಕೀಹೊಳಿ ಸಹೋದರರ ಮೇಲೆದ್ದ ಒಂದು ಕೊಲೆ ಆರೋಪ ಪ್ರಕರಣದಲ್ಲಿ ನಡೆದ ಒಂದು ಒಪ್ಪಂದ ಮತ್ತು ಅದರಿಂದ ರವಿ ಮಾಡಿಕೊಂಡ ಲಾಭ ನನಗೆ ಆಘಾತವನ್ನು ಉಂಟು ಮಾಡಿತ್ತು.. ಕೊಣ್ಣೂರು ಮರ್ಡರ್ ಕೇಸ್ ಎಂಬ ಆ ಪ್ರಕರಣ ರವಿಯ ಜೋಳಿಗೆ ತುಂಬಿಸಿತ್ತು..ಈ ನನಗಾದ ಈ ಆಘಾತವನ್ನು ರವಿಗೂ ಹೇಳಿದ್ದೆ.. ನೀನು ಯಾರಿಗೂ ಹೆದರ ಬೇಡ ಕನಿಷ್ಟ ನಿನ್ನ ಆತ್ಮಕ್ಕಾದರೂ ಹೆದರು ಎಂದು ಹೇಳಿದ್ದೆ.
ಆತ ಮುಂದಿನ ಐದು ವರ್ಷ ನನ್ನ ಜೊತೆ ಮಾತನಾಡಿರಲಿಲ್ಲ....!
ಇವತ್ತಿಗೆ ಇಷ್ಟೇ ಸಾಕು... ಇನ್ನೊಮ್ಮೆ ಮುಂದಿನದನ್ನ ಹೇಳ್ತೀನಿ...
AMERICA SUPPORTS PAK#Shashidharbhat#Sudditv#Karnatakapolitics
ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...
-
ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...
