ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್ರದೇಶಗಳು ಖಾಲಿಯಾಗುತ್ತಿವೆ.. ಗ್ರಾಮೀಣ ಪ್ರದೇಶದಲ್ಲಿ ವಯಸ್ಸಾದವರು ಮಾತ್ರ ಉಳಿದುಕೊಳ್ಳುವಂತಾಗಿದೆ.,
ಗ್ರಾಮೀಣ ಆರ್ಥಿಕತೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶದ ಜನರ ಕೈಯಲ್ಲಿ ಹಣವಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾರತವನ್ನು ಉಳಿಸುವುದು ಬಹುದೊಡ್ಡ ಸವಾಲು. ಸರ್ಕಾರ ಈ ವಿಚಾರದಲ್ಲಿ ಲಕ್ಷ್ಯ ಒಹಿಸದಿದ್ದರೆ ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಇಂದು ಮಂಡಿಸಿದ ಮುಂಗಡ ಪತ್ರದ ಬಹುಮುಖ್ಯ ಅಂಶ ಎಂದರೆ ಗ್ರಾಮೀಣ ಭಾರತದ ನಿರ್ಲಕ್ಷ.
ನೀವು ಕಳೆದ ವರ್ಷದ ಅಂಕಿ ಅಂಶಗಳನ್ನೇ ಗಮನಿಸಿ. ಸುಮಾರು ೪೮ ಲಕ್ಷ ಕೋಟಿ ಮುಂಗಡ ಪತ್ರದಲ್ಲಿ ಗ್ರಾಮೀಣ ಭಾರತದ ಯೋಜನೆಗಳಿಗೆ ತೆಗೆದಿರಿಸಿದ್ದು ಸುಮಾರು ೧.೫೨ ಲಕ್ಷ ಕೋಟಿ . ಇದು ತಾರತಮ್ಯವಲ್ಲದೇ ಮತ್ತೇನು ?
ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ ೫೦ ರಷ್ಟು ಜನರಿಗೆ ಕೆಲಸ ನೀಡುವುದು ನಮ್ಮ ಗ್ರಾಮೀಣ ಭಾರತ. ಆದರೆ ಮುಂಗಡ ಪತ್ರದಲ್ಲಿ ಒದಗಿಸುವುದು ನಗಣ್ಯ
ಇವತ್ತು ಮಂಡಿಸಿದ ಮುಂಗಡ ಪತ್ರದಲ್ಲಿ ಒಂದು ಮಹತ್ತರ ಯೋಜನೆಯನ್ನು ಪ್ರಕಟಿಸಲಾಯಿತು. ಅದಿ ಪಿಎಮ್ ಧನ ದಾನ್ಯ ಕೃಷಿ ಯೋಜನೆ. ಈ ಯೋಜನೆಯಂತೆ ಅತಿ ಕಡಿಮೆ ಉತ್ಪಾದನೆ ಇರುವ ಆಯ್ದ ೧೦೦ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆಯಂತೆ.. ಯೋಜನೆಯ ಮೊದಲ ಹಂತದಲ್ಲಿ ೧.೭ ಕೋಟಿ ಜನರಿಗೆ ಲಾಭವಾಗಲಿದೆಯಂತೆ ! ೧೪೦ ಕೋಟಿ ಜನಸಂಖ್ಯೆಯ ದೇಶದಲ್ಲಿ ರೈತರ ಜನಸಂಖ್ಯೆ ಸುಮಾರು ೭೦ ಕೋಟಿ.. ೭ಒ ಕೋಟಿ ರೈತರಲ್ಲಿ ೧.೭ ಕೋಟಿ ರೈತರಿಗೆ ಲಾಭವಾಗುವ ಯೋಜನೆಯಂತೆ..
ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಇನ್ನೊಂದು ಯೋಜನೆಯನ್ನು ಪ್ರಕಟಿಸಿದ್ದಾರೆ. ಇದು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ. ಈ ಯೋಜನೆ ಹೆಚ್ಚಿನ ವಿವರಗಳು ಹೊರಬರಬೇಕಾಗಿದೆ,
ಇದರ ಜೊತೆಗೆ ಕಿಸಾನ್ ಕಾರ್ಡನ ಮಿತಿಯನ್ನು ೫ ಲಕ್ಷ ಕ್ಕೆ ಹೆಚ್ಚಿಸಲಾಗಿದೆ.ಇದು ಮಹಾ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳುತ್ತಿದ್ದಾರೆ.
ಇದು ರೋಗ ಯಾವುದು ಎಂದು ತಿಳೀಯದೇ ಔಷಧ ಕೊಟ್ಟ ಹಾಗೆ. ಗ್ರಾಮೀಣ ಭಾರತ ಮತ್ತು ಆರ್ಥಿಕತೆಯ ಬಗ್ಗೆ ಈ ಸರ್ಕಾರಕ್ಕೆ ಅರ್ಥವಾದಂತಿಲ್ಲ. ಅರ್ಥವಾದರೂ ಅವರ ಆಧ್ಯತೆ ಗ್ರಾಮೀಣ ಭಾರತ ಅಲ್ಲ ಎಂಬುದು ಸ್ಪಷ್ಟ.
ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಇರುವ ಸಂಘರ್ಷದಲ್ಲಿ ಮೋದಿ ಸರ್ಕಾರ ನಗರ ಭಾರತದ ಪರ ಎಂಬುದು ಮುಂಗಡ ಪತ್ರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.
ನಮ್ಮ ದೇಶದಲ್ಲಿ ಜಿಡಿಪಿಯಲ್ಲಿ ಪ್ರತಿಶತ ೧೭ ರಷ್ಟು ಗ್ರಾಮೀಣ ಭಾರತದ ಪಾಲು. ಹಾಗೆ ಗ್ರಾಮೀಣ ಭಾರತದ ಆರ್ಥಿಕ ಬೆಳವಣಿಗೆ ಪ್ರತಿಶತ ೪.೫ ರಷ್ಟಿದೆ. ಹೀಗಿದ್ದರೂ ಗ್ರಾಮೀಣ ಭಾರತಕ್ಕೆ ಮಹತ್ವ ಸಿಗದಂತಾಗಿದೆ,
ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವಿನ ಕಂದಕ ಹೆಚ್ಚುತ್ತಲೇ ಇದೆ. ಜೊತೆಗೆ ಗ್ರಾಮೀಣ ಪ್ರದೇಶದ ಜನರ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಈ ವಲಸೆ ಸಮಸ್ಯೇ ಹೊಸ ಯೋಜನೆಯಿಂದ ಬಗೆಹರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರೂ ಈ ಸಮಸ್ಯೆ ಮೋದಿ ಅವರು ತಿಳಿಷ್ಟು ಸರಳವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಹಣದ ಹರಿವು ಇಲ್ಲದಂತಾಗಿದೆ. ಹೀಗಾಗಿ ಹಳ್ಳಿಯ ರೈತರಲ್ಲಿ ವೆಚ್ಚಕ್ಕೆ ಹಣ ಇಲ್ಲ. ಜೊತೆಗೆ ಕೃಷಿ ಕ್ಷೇತ್ರ ಎಂದೂ ಇಲ್ಲದ ಬಿಕ್ಕಟ್ಟಿನಲ್ಲಿದೆ. ಕೃಷಿ ಉತ್ಪನ್ನಗಳಿಗೆ ವೈಜ್ನಾನಿಕ ಬೆಲೆ ಸಿಗದ ಹೊರತೂ ಕೃಷಿ ಕ್ಷೇತ್ರದ ಸಮಸ್ಯೆ ಬಗೆಹರಿಯಲಾರದು. ಈ ಬೇಡಿಕೆಗೆ ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ.
ಸಾಧಾರಣವಾಗಿ ಯಾವುದೇ ವಸ್ತುಗಳ ಉತ್ಪಾದಕ ತಾನು ಉತ್ಪಾದಿಸಿದ ವಸ್ತುವಿನ ಬೆಲೆ ನಿಗದಿ ಪಡಿಸುತ್ತಾನೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ನಿಗದಿಯ ಅಧಿಕಾರ ಉತ್ಪಾದಕನಿಗೆ ಇಲ್ಲ. ಅದನ್ನು ಮಾರುಕಟ್ಟೆ ಶಕ್ತಿಗಳು ಮತ್ತು ಮಧ್ಯವರ್ತಿಗಳು ನಿಗದಿ ಪಡಿಸುತ್ತಾರೆ. ಇದೇ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಮೂಲ ಕಾರಣ. ಜೊತೆಗೆ ಹವಾಮಾನದ ಮೇಲೆ ಅವಲಂಬಿತವಾದ ಕೃಷಿಗೆ ಸ್ಟಾಬಿಲಿಟಿ ಅಥವಾ ಸ್ಥಿರತೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಸ್ಠಿರತೆ ತರುವ ಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಟಾನಕ್ಕೆ ತರಬೇಕು. ಅದರೆ ಈ ಮುಂಗಡ ಪತ್ರದಲ್ಲಿ ಯಾವುದೇ ಕಾರ್ಯಕ್ರಮವೂ ಇಲ್ಲ.. ಇದಕ್ಕೆ ಉದಾಹರಣೆಯನ್ನೂ ನಾವು ನೀಡಬಹುದು.. ಟೊಮೆಟೋವನ್ನೆ ತೆಗೆದುಕೊಳ್ಳಿ. ಈ ಬೆಳೆಗೆ ಬೆಲೆ ಸ್ಥಿರತೆಯೇ ಇಲ್ಲ. ಬೆಲೆ ಕುಸಿದಾಗ ರೈತರು ಟೊಮೆಟೋ ತಂದು ರಸ್ತೆಗೆ ಸುರಿಯುತ್ತಾರೆ. ಇದನ್ನು ತಪ್ಪಿಸಲು ಟೋಮೆಟೋ ವನ್ನು ವಾಲ್ಯು ಎಡೆಡ್ ಉತ್ಪನ್ನವಾಗಿ ಪರಿವರ್ತಿಸಿ ಮಾರಾಟ ಮಾಡಬಹುದು. ಇದಕ್ಕಾಗಿ ಕೋಲ್ಡ್ ಸ್ಟೋರೇಜ್ ಗಳನ್ನು ನಿರ್ಮಿಸುವ ಕೆಲಸವನ್ನು ಸರ್ಕಾರ ಮಾಡಬಹುದು. ಇದನ್ನು
ಉದಾಹರಣೆಯಾಗಿ ಹೇಳಿದೆ ಅಷ್ಟೇ>
ಮೋದಿ ಸರ್ಕಾರಕ್ಕೆ ಇಂತಹ ಯಾವುದೇ ಯೋಚನೆ ಯೋಜನೆ ಇಲ್ಲ. ಅವರದ್ದು ಏನಿದ್ದರೂ ಧರ್ಮ ರಾಜಕಾರಣ. ಧರ್ಮ ಮತ್ತು ಕೋಮುವಾದ ತಮ್ಮನ್ನು ಗದ್ದುಗೆಯ ಮೇಲೆ ಕೂಡ್ರಿಸುತ್ತದೆ ಎಂದು ಬಿಜೆಪಿ ನಂಬಿದೆ. ಜೊತೆಗೆ ಕಾರ್ಪುರೇಟ್ ವಲಯದ ಕೈಗೊಂಬೆಯಂತೆ ಈ ಸರ್ಕಾರ ಕೆಲಸ ಮಾಡುತ್ತಿದೆ. ಹೀಗಾಗಿ ಗ್ರಾಮೀಣ ಭಾರತ ಗಾಯಗೊಂಡು ರಕ್ತ ಒಸರುತ್ತಿದೆ.