Friday, July 7, 2023

ಸಿದ್ದರಾಮಯ್ಯ ಬಜೆಟ್. ಇದು ಯಾರ ಪರ ? ಸಮತೋಲನವನ್ನು ಕಾಪಾಡಿದ್ದಾರೆಯೆ ಮುಖ್ಯಮಂತ್ರಿ ?


 


ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರ ಯಾರ ಪರವಾದ ಮುಂಗಡ ಪತ್ರ ? ಈ ಮುಂಗಡ ಪತ್ರ ಯಾವುದಕ್ಕೆ ಆದ್ಯತೆ ನೀಡಿದೆ ಈ ಪ್ರಶ್ನೆಗಳು ಬಹಳ ಮುಖ್ಯವಾದವುಗಳು. ತಮ್ಮ ರಾಜಕೀಯ ಬದುಕಿನಲ್ಲಿ ೧೪ ನೆಯ ಬಾರಿ ಮುಂಗಡಪತ್ರವನ್ನು ಮಂಡಿಸಿದ ಸಿದ್ದರಾಮಯ್ಯನವರ ಆದ್ಯತೆಗಳಲ್ಲಿ ಏನಾದರೂ ಬದಲಾವಣೆ ಆಗಿದೆಯೆ ಎಂಬುದನ್ನು ನೋಡಬೇಕು,

ಮುಂಗಡ ಪತ್ರ ಎನ್ನುವುದು ಕೇವಲ ಆದಾಯ ಮತ್ತು ಖರ್ಚಿನ ಲೆಕ್ಕ ಪತ್ರ ಅಲ್ಲ. ಅದಕ್ಕೂ ಮೀರಿದ ಆದ್ಯತೆ ಇರುವುದು ಸರ್ಕಾರದ ಆದ್ಯತೆಗಳೇನು ? ಸಮಾಜದ ಯಾವ ವರ್ಗಗಳನ್ನು ನೋಡಿಕೊಂಡು ಮುಂಗಡ ಪತ್ರವನ್ನು ರಚಿಸಲಾಗಿದೆ ಮತ್ತು ಹಣಕಾಸಿನ ಹಂಚಿಕೆ ಮಾಡಲಾಗಿದೆ ಎಂಬುದು ಮಹತ್ವದ್ದಾಗಿರುತ್ತದೆ. ಹಾಗೆ ಈ ಮುಂಗಡ ಪತ್ರದಲ್ಲಿ ಅನಿಸರಿಸಲಾದ ತೆರಿಗೆ ನೀತಿ.. ಒಂದು ಸರ್ಕಾರ ತನ್ನ ಆದಾಯವನ್ನು ಯಾವುದರಿಂದ ಪಡೆದುಕೊಳ್ಳುತ್ತಿದೆ ? ಯಾವುದರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ ಎಂಬುದರ ಜೊತೆಗೆ ಆರ್ಥಿಕ ಶಿಸ್ತನ್ನು ಪಾಲಿಸುತ್ತಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ..

ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಇದು ಅತಿ ದೊಡ್ದ ಮುಂಗಡ ಪತ್ರ. ಸುಮಾರು ಗಂಟೆಯ ಕಾಲ ಅವರು ಮುಂಗಡ ಪತ್ರದ ಮಂಡನೆ ಮಾಡಿದರು. ಅವರು ಮಂಡಿಸಿದ ಮುಂಗಡ ಪತ್ರದ ಗಾತ್ರ,೩ ಲಕ್ಷ ೨೭ ಸಾವಿರ ಕೋಟಿಗಳು.. ಈ ಬೃಹತ್ ಗಾತ್ರದ ಮುಂಗಡಪತ್ರದಲ್ಲಿ ಅವರು ಪ್ರತಿ ಶತ ೫೦ ರಷ್ಟು ಹಣವನ್ನು ರಾಜ್ಯದಲ್ಲಿ ತೆರಿಗೆ ಸಂಗ್ರಹದ ಮೂಲಕ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ. ಜಿಎಸ್ಟಿ ದೇಶದಲ್ಲಿ ಜಾರಿಯಾದ ಮೇಲೆ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹದ ಅವಕಾಶಗಳು ಕಡಿಮೆಯಾಗಿವೆ. ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹಿಸಲು ಇರುವ ಅವಕಾಶ ಎಂದರೆ ವಾಣಿಜ್ಯ ತೆರಿಗೆ ಮುದ್ರಾಂಕ, ಪೆಟ್ರೂಲ್ ಮೇಲೆ ಸೆಸ್ ಹಾಗು ಅಬ್ಕಾರಿ.. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೂಲ್ ಮುಟ್ಟುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಯಾಕೆಂದರೆ ಈಗಾಗಲೇ ಪೆಟ್ರೂಲ್ ಬೆಲೆ ಗಗನವನ್ನು ಮುಟ್ಟಿರುವುದರಿಂದ ಮತ್ತೆ ಬೆಲೆ ಹೆಚ್ಚಳವಾದರೆ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅಬ್ಕಾರಿ ಮೇಲಿನ ಸುಂಕವನ್ನು ಪ್ರತಿಶತ ೨೦ ರಷ್ಟು ಹೆಚ್ಚಿಸಿದ್ದಾರೆ. ಇದರಿಂದ ಮದ್ಯ ಪ್ರಿಯರಿಗೆ ಮತ್ತಷ್ಟು ಹೊರೆಯಾಗಲಿದೆ. ಆದರೆ ಯಾರೂ ಕೂಡ ಬಹಿರಂಗವಾಗಿ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದನ್ನು ಟೀಕಿಸುವ ಸ್ಥಿತಿಯಲ್ಲಿ ಇಲ್ಲ. ಕುಡುಕರು ಮಾತ್ರ ಸರ್ಕಾರವನ್ನು ಬೈದುಕೊಂಡು ಮದ್ಯಪಾನ ಮಾಡಬೇಕು ಅಷ್ಟೇ,,

ಇನ್ನು ಉಳಿದಂತೆ ಲಾಣ್ಡ್ ಗೈಡೆನ್ಸ್ ವಾಲ್ಯೂ ವನ್ನು ಪುನರ್ ವಿಮರ್ಶಿಸುವ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ. ಇದರಿಂದಾಗಿ ಸ್ವಲ್ಪ ಮಟ್ಟಿನ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು..

ಉಳಿದಂತೆ ಆದಾಯ ಹಂಚಿಕೆಯಲ್ಲಿ ತಮ್ಮ ಆದ್ಯತೆಯನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.. ಅವರು ತಮ್ಮ ಮುಂಗಡ ಪತ್ರದ ಪ್ರತಿಶತ ೧೨ ರಷ್ಟು ಆದಾಯವನ್ನು ಶಿಕ್ಷಣ ಕ್ಷೇತ್ರಕ್ಕೆ ತೆಗೆದಿರಿಸಿದ್ದಾರೆ. ಇದು ಸ್ವಾಗತಾರ್ಹ.. ಶಿಕ್ಶಣ ಅನ್ನುವುದು ಮುಂದಿನ ಜನಾಂಗವನ್ನು ರೂಪಗೊಳಿಸುವಂತಹುದು.. ಹಾಗೆ ಮಹಿಳಾ ಕಲ್ಯಾಣದ ಬಗ್ಗೆ ಈ ಮುಂಗಡಪತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಗಡ ಪತ್ರದ ಪ್ರತಿಶತ ೭ ರಷ್ಟು ಹಣವನ್ನು ಮಹಿಳಾ ಮತ್ತು ಕಲ್ಯಾಣ ಕ್ಷೇತ್ರ್ರಕ್ಕೆ ತೆಗೆದಿರಸಲಾಗಿದೆ. ಈಗಾಗಲೇ ಶಕ್ತಿ ಯೋಜನೆಯ ಮೂಲಕ ,ಮಹಿಳೆಯರಿಗೆ ಉಚಿತ ಪ್ರವಾಸದ ವ್ಯವಸ್ಥೆ ಮಾಡಿರುವ ಸರ್ಕಾರ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಶಿಕ್ಷಣದ ನಂತರ ಮಹಿಳಾ ಕಲ್ಯಾಣ ತನ್ನ ನಂತರದ ಆದ್ಯತೆ ಎಂಬುದನ್ನು ಸ್ಪಷ್ಟಪಡಿಸಿದೆ..

ಈ ಮುಂಗಡ ಪತ್ರದಲ್ಲಿ ಐದೂ ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸುವ ತಮ್ಮ ಬದ್ಧತೆಯನ್ನು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ, ಇದಕ್ಕಾಗಿ ೫೨ ಸಾವಿರ ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯ ತೆಗೆದಿಸಿರಿಸಿದ್ದಾರೆ. 

ಸಿದ್ದರಾಮಮಯ್ಯ ತಮ್ಮ ಮುಂಗಡ ಪತ್ರದಲ್ಲಿ ಹಿಂದಿನ ಸರ್ಕಾರದ ಜೊತೆ ತಮ್ಮ ಸರ್ಕಾರವನ್ನು ತುಲನೆ ಮಾಡಿದ್ದಾರೆ. ಈ ಕುರಿತು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.. ಇದರ ಹಿಂದೆ ರಾಜಕೀಯ ಉದ್ದೇಶ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಇಡೀ ಮುಂಗಡ ಪತ್ರ ರಾಜಕೀಯ ಮುಂಗಡ ಪತ್ರ ಎಂಬ ಪ್ರತಿ ಪಕ್ಷಗಳ ವಾದ ಸರಿ ಎನ್ನಿಸುವುದಿಲ್ಲ. ಜೊತೆಗೆ ಮುಂಗಡ ಪತ್ರದಲ್ಲಿ ರಾಜಕೀಯ ನುಸುಳಿರುವುದು ಇದು ಮೊದಲೇನೂ ಅಲ್ಲ. 

ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೇ ಹೋಗಿ ಸಿದ್ದರಾಮಯ್ಯನವರ ಮುಂಗಡ ಪತ್ರವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಅವರಿ ಬಿಜೆಪಿ ಪಕ್ಷವನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು, ಹಿಂದಿನ ಬಿಜೆಪಿ ಸರ್ಕಾರವನ್ನು ಅಪ್ರತ್ಯಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಇದು ಸೋಜಿಗ ಅನ್ನಿಸಿದರೂ ಮುಂಬರುವ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಾಗಿ ಕಾಣುತ್ತದೆ.


ಮಂಗಡ ಪತ್ರದ ಕೆಲವೊಂದು ಮುಖ್ಯ ಅಂಶಗಳು ಹೀಗಿವೆ..

ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. . ಮಕ್ಕಳ ಪ್ರಸ್ತಾಪಿತ ಯೋಜನೆಗಳಿಗೆ 51,220 ಕೋಟಿ ರೂ. ಅನುದಾನ.

10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿಎನ್‌ ಜಿಒಗಳ ಸಹಯೋಗದೊಂದಿಗೆ ಎರಡು ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭ..

ಸೋಲಿಗ ಸಮುದಾಯ, ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟ ಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 50 ಕೋಟಿ ಮೀಸಲು

ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು, ಭೂ ಸಿರಿ ಯೋಜನೆ ಕೈಬಿಟ್ಟ ಯೋಜನೆ, ಶ್ರಮಶಕ್ತಿ ಯೋಜನೆ ಬಂದ್.

ಅನ್ನಭಾಗ್ಯ- 10,000 ಕೋಟಿ ರೂ., ಗೃಹಜ್ಯೋತಿ-13,910 ಕೋಟಿ ರೂ.,ಶಕ್ತಿ ಯೋಜನೆ - 4,000 ಕೋಟಿ ರೂ., ಇಂದಿರಾ ಕ್ಯಾಂಟೀನ್ -100ಕೋಟಿ ರೂ., ನಮ್ಮ ಮೆಟ್ರೋ- 30,000ಕೋಟಿ ರೂ.

ಆಹಾರ ಇಲಾಖೆ-10,460ಕೋಟಿ ರೂ., ಸಮಾಜ ಕಲ್ಯಾಣ-11,173ಕೋಟಿ ರೂ. , ಬೆಂಗಳೂರು ಅಭಿವೃದ್ಧಿಗೆ -45,000ಕೋಟಿ ರೂ., ಎತ್ತಿನಹೊಳೆ-23,252 ಕೋಟಿ ರೂ., ಕುಡಿಯುವ ನೀರು- 770 ಕೋಟಿ ರೂ., ಶಿಕ್ಷಣ ಇಲಾಖೆ-37,587 ಕೋಟಿ ರೂ. ಅನುದಾನ

ಹಂಪಿ ಸೇರಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ 75 ಕೋಟಿ ರೂ. ಮೀಸಲು, ಮೈಲಾರ, ಗಾಣಗಾಪುರ, ಮಳಖೇಡ ಸೇರಿ ವಿವಿಧ ತಾಣಗಳ ಅಭಿವೃದ್ಧಿ

01:55 PMಇಂಧನ- 22000 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-24,166 ಕೋಟಿ ರೂ., ನೀರಾವರಿ-19,000 ಕೋಟಿ ರೂ., ಗ್ರಾಮೀಣಾಭಿವೃದ್ಧಿ-18,000 ಕೋಟಿ ರೂ., ಸಾರಿಗೆ ಮತ್ತು ಒಳಾಡಳಿತ- 16,000 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ- 5,860 ಕೋಟಿ ರೂ., ಕಂದಾಯ- 16,000 ಕೋಟಿ ರೂ., ಪಶು ಸಂಗೋಪನೆ ಇಲಾಖೆ - 3,024 ಕೋಟಿ ರೂ.

ಓಟ್ಟಿನಲ್ಲಿ ಸಿದ್ದರಾಮಯ್ಯ ಬದಲಾಗಿಲ್ಲ.. ಅವರ ಸಾಮಾಜಿಕ ನ್ಯಾಯದ ನಂಬಿಕೆಯ ಅಡಿಯಲ್ಲಿ ಈ ಮುಂಗಡಪತ್ರವನ್ನು ಸಿದ್ದಪಡಿಸಿದ್ದಾರೆ. ಮಠ ಮಾನ್ಯಗಳಿಗೆ ವ್ಯಯಕ್ತಿಕ ಅನುಧಾನವನ್ನು ನೀಡೀಲ್ಲ. ಬದಲಾಗಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಹಾಗೆ ಜೈನ ಸಮುದಾಯದವರಿಗೆ ಶಕ್ತಿ ತುಂಬುವ ಯತ್ನ ಮಾಡಿದ್ದಾರೆ.. ಹಾಗೆ ನೋಡಿದರೆ ಪ್ರಸಕ್ತ ಸನ್ನಿವೇಶದಲ್ಲಿ ಮುಂಗಡ ಪತ್ರವನ್ನು ಸಿದ್ದಪಡಿಸುವುದು ಅಷ್ಟು ಸುಲಭವಾಗಿರಲಿಲ್ಲ.. ಗ್ಯಾರಂಟಿಗಳ ಅನುಷ್ಟಾನಕ್ಕೆ ಒದಗಿಸಬೇಕಾದ ಹಣವನ್ನು ಹೊಂದಿಸುವುದು ಕಷ್ಟ ಸಾಧ್ಯ ಎನ್ನುವ ಸ್ಥಿತಿ ಇತ್ತು.. ಆದರೆ ಇದೆಲ್ಲವನ್ನೂ ಮುಖ್ಯಮಂತ್ರಿಗಳು ಸಾಧಿಸಿದ್ದಾರೆ. ಸಮತೋಲನದ ಮುಂಗಡ ಪತ್ರವನ್ನು ಮಂಡಿಸಿದ್ದಾರೆ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...