Friday, December 9, 2011

ಮುಖ್ಯಮಂತ್ರಿಗಳಿಗೊಂದು ಪತ್ರ: ನೀವು ನೀವೇ ಆಗಿ ಡಿವಿ.


ಯಾರ ನೆರಳು ಯಾರು ? ಯಾರು ಹಿಂದೆ, ಯಾರು ಮುಂದೆ ?

ಈಗ ಕರ್ನಾಟಕದ ರಾಜಕೀಯದಲ್ಲಿ ನೆರಳು ಮತ್ತು ಬೆಳಕಿನಾಟವೊಂದು ನಡೆಯುತ್ತಿದೆ. ಇದರಲ್ಲಿ ನೆರಳಾಗಿರುವವರು ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ. ಈ ಆಟದಲ್ಲಿ ಅವರಿಗೆ ಸೋಲೇ ಅಥವಾ ಗೆಲುವೇ ಎಂಬುದು ಭವಿಷ್ಯಕ್ಕೆ ಬಿಟ್ಟ ವಿಚಾರ. ಆದರೆ ನೆರಳಿಗೆ ಎಂದಿದ್ದರೂ ಸ್ವಂತ ಅಸ್ಥಿತ್ವವಿಲ್ಲ. ಅದು ಎಷ್ಟಿದ್ದರೂ ಬೇರೆಯವರ ನೆರಳು. ಮೂಲ ವಸ್ತು ಇದ್ದರೆ ಮಾತ್ರ ನೆರಳಿಗೆ ಅಸ್ಥಿತ್ವ. ಇದು ನೆರಳಾಗಿರುವವರು ಅರ್ಥ ಮಾಡಿಕೊಳ್ಳಬೇಕಾದ ಸತ್ಯ.
ಸದಾನಂದ ಗೌಡ ಅವರನ್ನು ನಾನು ನೋಡಿದ್ದು ಸುಮಾರು ೨೫ ವರ್ಷಗಳ ಹಿಂದೆ. ಆಗ ಅವರು ರಾಜ್ಯ ವಿಧಾನಸಭೆಯಲ್ಲಿ ಪುತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸದನದಲ್ಲಿ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಯಾವ ವಿಚಾರವೇ ಆಗಲಿ ಅವರು ಚರ್ಚೆಯಲ್ಲಿ ಪಾಲ್ಗೂಳ್ಳುತ್ತಿದ್ದರು. ಸದಾ ನಗುನಗುತ್ತಲೇ ಇರುತ್ತಿದ್ದ ರಾಜಕಾರಣಿ. ನಗುವ ಗಂಡಸನ್ನು ನಂಬಬಾರದು ಎಂಬ ನಾಣ್ನುಡಿ ಅವರಿಗೆ ಅನ್ವಯವಾಗುವಂತಿರಲಿಲ್ಲ.
ವಿಧಾನಸಭೆಯ ಮೊಗಸಾಲೆಯಲ್ಲಿ ಸಿಕ್ಕಾಗಲೆಲ್ಲ ಅವರು ನಗು ನಗುತ್ತಲೇ ಮಾತನಾಡುತ್ತಿದ್ದರು. ನಾನು ದಕ್ಷಿಣ ಕನ್ನಡದ ಅಳಿಯನಾಗಿದ್ದರಿಂದ ಮತ್ತು ಅವರು ಒಂದು ರೀತಿಯಲ್ಲಿ ದೂರದ ಸಂಬಂಧಿಯೂ ಆಗಿದ್ದರಿಂದ ನನ್ನನ್ನು ಅವರು ಭಾವ ಎಂದು ಸಂಭೋಧಿಸುತ್ತಿದ್ದರು. ಇದಾದ ಮೇಲೆ ಕೆಲವು ಸಂದರ್ಭದಲ್ಲಿ ಅವರು ಜೊತೆ ಮಾತನಾಡಿದ್ದು ಉಂಟು. ಈ ಸಲುಗೆಯ ಮೇಲೆ ನಾನು ಅವರಿಗೆ ಭಹಿರಂಗ ಪತ್ರವೊಂದನ್ನು ಬರೆಯುತ್ತಿದ್ದೇನೆ.

ಮಾನ್ಯ ಸದಾನಂದಗೌಡರೆ,

ನಿಮ್ಮನ್ನು ಟೀಕಿಸಲು ನನ್ನ ಬಳಿ ಯಾವ ಕಾರಣವೂ ಇಲ್ಲ. ಆದರೆ ನಿಮ್ಮನ್ನ ನೋಡಿದಾಗ ನನಗೆ ಕೆಲವೊಮ್ಮೆ ಆಯ್ಯೋ ಪಾಪ ಎಂದು ಅನ್ನಿಸುವುದುಂಟು. ಜೊತೆಗೆ ಇವತ್ತಿನ ನಿಮ್ಮ ಸ್ಠಿತಿ ಮತ್ತು ಕರ್ನಾಟಕದ ರಾಜಕಾರಣ ಎಲ್ಲಿಗೆ ಸಾಗಿದೆ, ಸಾಗುತ್ತಿದೆ ಎಂಬ ಪ್ರಶ್ನೆಗೆ ನಾನು ನಿಮ್ಮ ಸ್ಥಿತಿಯಿಂದಲೇ ಉತ್ತರ ಪಡೆದುಕೊಳ್ಳಲು ಯತ್ನಿಸುತ್ತಿದ್ದೇನೆ. ಹೀಗಾಗಿ ನಿಮ್ಮ ಈಗಿನ ಸ್ಥಿತಿ ನನಗೆ ಹೆಚ್ಚು ಪ್ರಸ್ತುತ.
ರಾಜಕಾರಣ ಎಂಬುದು ಎಲ್ಲರಿಗೂ ದಕ್ಕುವುದಲ್ಲ. ಅದು ಒಂದು ಮನಸ್ಥಿತಿ. ಆದ್ದರಿಂದ ಎಲ್ಲ ರಾಜಕಾರಣಿಗಳು ಯಶಸ್ವಿ ರಾಜಕಾರಣಿಯಾಗುವುದಿಲ್ಲ.ಯಶಸ್ವಿ ರಾಜಕಾರಣಿಯಾದವನು ಮೊದಲು ದೇಶವನ್ನು ರಾಜ್ಯವನ್ನು ಅರ್ಥ ಮಾಡಿಕೊಳ್ಳುತ್ತಾನೆ. ನಂತರ ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾನೆ. ಈ ಸಮಾಜದಲ್ಲಿ ತನ್ನ ಪಾತ್ರವೇನು ಎಂಬುದನ್ನು ನಿರ್ಧರಿಸುತ್ತಾನೆ. ಜೊತೆಗೆ ಆತ ಮಹತ್ವಾಕಾಂಕ್ಷಿಯೂ ಆಗಿರುತ್ತಾನೆ. ಇದನ್ನೆಲ್ಲ ಗಮನಿಸಿದರೆ ನಿಜವಾದ ಅರ್ಥದಲ್ಲಿ ನಿಮ್ಮನ್ನು ರಾಜಕಾರಣಿ ಎಂದು ಕರೆಯುವುದಿಲ್ಲ. ಯಾಕೆಂದರೆ, ಇವತ್ತಿನ ರಾಜಕಾರಣಕ್ಕೆ ಬೇಕಾದ ಕೆಲವು ಅರ್ಹತೆಗಳು ನಿಮಗಿಲ್ಲ.
ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎಂದರೆ ನಿಮ್ಮ ಒಳ್ಳೆಯತನವೊಂದೇ ನಿಮ್ಮನ್ನು ಯಶಸ್ವಿ ರಾಜಕಾರಣಿಯನ್ನಾಗಿ ಮಾಡಲಾರದು. ನಿಮಗೆ ನಿಮ್ಮದೇ ಆದ ವ್ಯಕ್ತಿತ್ವ ಬೇಕು.ಗುಲಾಮಗಿರಿಯಲ್ಲಿ ನಾಯಕತ್ವ ಹುಟ್ಟುವುದಿಲ್ಲ. ಜನ ತಮ್ಮ ನಾಯಕನನ್ನು ಆದರ್ಶ ವ್ಯಕ್ತಿಯನ್ನಾಗಿ ನೋಡಲು ಬಯಸುತ್ತಾರೆ. ಅವರಿಗೆ ನಾಯಕ ಎನ್ನುವವ ತಮಗಿಂತ ಎತ್ತರದವ. ಆತನಲ್ಲಿ ತಮ್ಮ ಸಫಲತೆಯನ್ನು ನೋಡುವುದಕ್ಕೆ ಜನ ಬಯಸುತ್ತಾರೆ. ರಾಜಕಾರಣಿ ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಜನ ಇಷ್ಟಪಡುವಂತಹ ಇಮೇಜ್ ಕೂಡ ಮುಖ್ಯ. ಜನ ನಮ್ಮ ಮುಖ್ಯಮಂತ್ರಿಗಳು ಹೀಗೆ ಎಂದು ಮಾತನಾಡುವಂತಾಗಬೇಕು. ಆದರೆ ಜನ ನಿಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂಬುದನ್ನು ನೀವು ಗಮನಿಸಿದ್ದೀರಾ ?
ಜನರ ದೃಷ್ಟಿಯಲ್ಲಿ ನೀವು ಒಳ್ಳೆಯ ಮನುಷ್ಯ. ಇವರಿಗೆ ಕೆಲಸ ಮಾಡುವ ಆಸಕ್ತಿ ಇದೆ ಎಂದು ಜನ ಮಾತನಾಡುತ್ತಾರೆ. ಜೊತೆಗೆ ಇವರು ಯಡಿಯೂರಪ್ಪನವರ ಕಪಿ ಮುಷ್ಟಿಯಲ್ಲಿದ್ದಾರೆ. ಅವರು ಆಡಿಸಿದಂತೆ ಆಡುವ ಬುಗುರಿ ಅವರು. ಸೂತ್ರ ಮಾತ್ರ ಮಾಜಿ ಮುಖ್ಯಮಂತ್ರಿಗಳ ಕೈಯಲ್ಲಿದೆ ಎಂದು ಹೇಳುತ್ತಾರೆ. ಈ ಮಾತು ಸಂಪೂರ್ಣ ಸುಳ್ಳಲ್ಲ ಅಲ್ಲವೆ ? ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮಾಡಲು ಸಾಕಷ್ಟು ಕೆಲಸಗಳಿದ್ದವು. ಆಡಳಿತವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಇದಕ್ಕಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಸೇರಿಕೊಂಡ ಕಳ್ಳ ಅಧಿಕಾರಿಗಳನ್ನು ಬದಲಿಸಬೇಕಾಗಿತ್ತು. ಇದರಿಂದ ನೀವು ಕೆಲಸ ಮಾಡುವುದಕ್ಕಾಗಿ ಬಂದವರು ಎಂಬ ಸಂದೇಶ ಹೋಗುತ್ತಿತ್ತು. ಆದರೆ ನೀವು ಈ ವಿಚಾರದಲ್ಲಿ ಎದೆಗಾರಿಕೆಯನ್ನು ಪ್ರದರ್ಶಿಸಲೇ ಇಲ್ಲ. ಬದಲಾಗಿ ನೀವು ಮಾಡಿದ ಕೆಲವು ಬದಲಾವಣೆಗಳು ಮಾಜಿ ಮುಖ್ಯಮಂತ್ರಿಗಳನ್ನು ಸಂತೋಷದಲ್ಲಿ ಇಡುವುದಕ್ಕಾಗಿಯೇ ಮಾಡಿದ ಬದಲಾವಣೆಗಳು ಎಂಬುದು ಸಣ್ನ ಮಕ್ಕಳಿಗೂ ಗೊತ್ತಾಗುವಂತಿತ್ತು. ನೀವು ಮಾಜಿ ಮುಖ್ಯಮಂತ್ರಿಗಳ ಹಿಡಿತದಲ್ಲೇ ಉಳಿದು ಬಿಟ್ಟಿರಿ.
ನಿಮ್ಮ ಸಚಿವ ಸಂಪುಟದಲ್ಲಿ ಇರುವ ಬಹಳಷ್ಟು ಸಚಿವರು, ಯಡಿಯೂರಪ್ಪನವರೇ ತಮ್ಮ ನಾಯಕರು ಎಂದು ಹೇಳಿಕೊಂಡು ಬರುತ್ತಿದ್ದಾರೆ. ನೀವು ಏನಿದ್ದರೂ ತಾತ್ಕಾಲಿಕ ಎಂಬ ಮಾತನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದು ಜನತಂತ್ರ ವಿರೋಧಿ ಮನಸ್ಥಿತಿ ಅಲ್ಲವೆ ? ಸಚಿವ ಸಂಪುಟಕ್ಕೆ ಒಂದು ಜಂಟಿ ಹೊಣೆಗಾರಿಕೆ ಇರುತ್ತದೆ. ಈ ಹೊಣೆಗಾರಿಕೆಯನ್ನು ಮೀರಿ ಹೇಳಿಕೆ ನೀಡುತ್ತಿರುವ ಇಂಥಹ ಸಚವರ ಬಾಯಿ ಮುಚ್ಚಿಸುವ ಕೆಲಸವನ್ನು ನೀವು ಮಾಡಲಿಲ್ಲ.ರೇಣುಕಾಚಾರ್ಯ ಅವರಂತಹ ಜೋಕರುಗಳನ್ನು ಹಿಸಿಕೊಂಡು ಬಂದಿರಿ. ಯಾಕೆ ಮಾಜಿ ಮುಖ್ಯಮಂತ್ರಿಗಳಿಗೆ ಬೇಸರವಾಗಬಹುದು ಎಂಬ ಭಯವೆ ?
ಇಡೀ ಸಚಿವ ಸಂಪುಟಕ್ಕೆ ಯಾವುದೇ ರೀತಿಯ ಫೋಕಸ್ ಇಲ್ಲದ ವಾತಾವರಣ ಈಗ ನಿರ್ಮಾಣವಾಗಿದೆ. ಪ್ರತಿಯೊಬ್ಬ ಸಚಿವರೂ ತಾವೊಬ್ಬ ಸ್ವತಂತ್ರ ಮಾಂಡಲೀಕರು ಎಂಬಂತೆ ವರ್ತಿಸುತ್ತಿದ್ದಾರೆ. ಇವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ನಿಮಗೆ ಯಾಕೆ ಸಾಧ್ಯವಾಗಿಲ್ಲ ?
ಕೆಲವರು ಮನಸ್ಸಿಗೆ ಬಂದಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇದೊಂದು ಸರ್ಕಾರ ಎಂದೇ ಅನ್ನಿಸುತ್ತಿಲ್ಲ. ಜೊತೆಗೆ ಸರ್ಕಾರದ ನೀತಿ ಏನು ಎಂಬುದೇ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಯಾರು ಹೊಣೆಗಾರರು ಗೌಡರೆ ?
ಈಗ ಕನ್ನಡ ಶಾಲೆಗಳನ್ನು ಮುಚ್ಚುವ ವಿಚಾರವನ್ನೇ ತೆಗೆದುಕೊಳ್ಳಿ. ಈ ವಿಚಾರದಲ್ಲಿ ನಾವು ಶಾಲೆಗಳನ್ನು ಮುಚ್ಚುತ್ತಿಲ್ಲ, ವಿಲೀನಗೊಳಿಸುತ್ತಿದ್ದೇವೆ ಎಂದು ನಂಬಿಸುವ ಚಾಣಾಕ್ಷತ ಕೂಡ ನಿಮ್ಮ ಸಚಿವರಲ್ಲಿ ಉಳಿದಿಲ್ಲ. ಈ ಬಗ್ಗೆ ಹಲವೆಡೆ ಪ್ರತಿರೋಧ ಪ್ರಕಟವಾದರೂ ನೀವು ಮುಚ್ಚುವುದಿಲ್ಲ ಎಂದು ಹೇಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಯಾಕೆ ಹೀಗೆ ? ನಿಮಗೆ ನಿಮ್ಮದೇ ಆದ ಸ್ಪಷ್ಟ ನಿರ್ಧಾರ ಇಲ್ಲವೆ ?
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತು. ಕೈಗಾರಿಕೀಕರಣದ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳವ ಸರ್ಕಾರದ ಕ್ರಮಕ್ಕೆ ರಾಜ್ಯದ ರೈತರು ಧ್ವನಿ ಎತ್ತಿದ್ದಾರೆ. ಲಾಂಡ್ ಬ್ಯಾಂಕ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಸಿದುಕೊಳ್ಳುವ ಯತ್ನ ನಡೆಯುತ್ತಿರುವುದು ಸರಿಯಾ ? ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನೀತಿ ಬೇಕು ಅಲ್ಲವೆ ? ಆದರೆ ದುರ್ದೈವದ ವಿಚಾರ ಎಂದರೆ ಯಾವುದೇ ಇಲಾಖೆಯಲ್ಲಿ ನೀತಿ ಎನ್ನುವುದು ಇಲ್ಲವೇನೋ ಎಂದು ಅನ್ನಿಸುತ್ತದೆ. ಹಿಂದಿನ ಸರ್ಕಾರದ ಎಲ್ಲ ನೀತಿಗಳನ್ನು ನೀವು ಚಾಚು ತಪ್ಪದೇ ಪಾಲಿಸಿಕೊಂಡು ಬರುವುದಾದರೆ ಈ ಸರ್ಕಾರ ಯಾಕಾದರೂ ಬೇಕು ? ಸ್ವಲ್ಪ ಈ ಬಗ್ಗೆ ಯೋಚಿಸಿ.
ಹಳ್ಳಿ ಮತ್ತು ಪಟ್ಟಣಗಳ ನಡುವಿನ ಅಂತರ ಹೆಚ್ಚುತ್ತಿದೆ. ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಜನ ವಲಸೆ ಬರುವುದು ಹೆಚ್ಚುತ್ತಿದೆ. ನಮ್ಮ ಹಳ್ಳಿಗಳು ಹೊಸದಕ್ಕೆ ಹೊಂದಿಕೊಳ್ಳಲಾರದೆ ಹಳೆಯದನ್ನು ಉಳಿಸಿಕೊಳ್ಳಲಾಗದೇ ನಲುಗುತ್ತಿವೆ. ಮಾನವೀಯ ಸಂಬಂಧಗಳಿಗೆ ಹೆಸರುವಾಸಿಯಾದ ನಮ್ಮ ಹಳ್ಳಿಗಳು ಈಗ ವೈಯಕ್ತಿಕ ಧ್ವೇಷ ಮತ್ತು ಕೆಟ್ಟ ರಾಜಕಾರದ ಅಂಗಳಗಳಾಗಿ ಮಾರ್ಪಡುತ್ತಿವೆ. ಅಧಿಕಾರ ವಿಕೇಂದ್ರೀಕರಣ ಸರಿಯಾಗಿ ಅನುಷ್ಠಾನಕ್ಕೆ ಬರದೇ ನಮ್ಮ ಸ್ಥಳೀಯ ಸರ್ಕಾರಗಳು ಕಾಸು ಹೊಡೆಯುವ ಕೇಂದ್ರಗಳಾಗಿವೆ. ಈ ಬಗ್ಗೆ ನೀವು ಯೋಚಿಸಿದ್ದೀರಾ ?
ಊಟಕ್ಕೆ ಅನ್ನವಿಲ್ಲದಿದ್ದರೂ ಮಕ್ಕಳಿಗೆ ಲಾಫ್ ಟಾಪ್ ಮತ್ತು ಮೊಬೈಲ್ ಅನ್ನು ಕೊಡಿಸುವ ಸ್ಥಿತಿಗೆ ಬಂದಿರುವ ರೈತ ಇಂದಿಗೂ ತನ್ನ ಉತ್ಪನ್ನಗಳಿಗೆ ವೈಜ್ನಾನಿಕ ಬೆಲೆ ಪಡೆಯುತ್ತಿಲ್ಲ. ಮಾರುಕಟ್ಟೆ ಫೋರ್ಸ್ ಗಳು ರೈತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಯಂತ್ರಿತ ಮರುಕಟ್ಟೆಗಳು ಮಧ್ಯವರ್ತಿಗಳ ಹಿಡಿತದಲ್ಲಿವೆ. ಕೃಷಿ ಎನ್ನುವುದು ಬಂಡವಾಳವೂ ವಾಪಸ್ ಬರದ ಸ್ಥಿತಿಯಲ್ಲಿದೆ. ಇದೆಲ್ಲ ನಿಮಗೆ ತಿಳಿಯುವುದಿಲ್ಲವೆ ?
ಮುಖ್ಯಮಂತ್ರಿಯಾದವನು ರಾಜ ನೀತಿಜ್ನನಾಗಿರಬೇಕು. ಆಥನಿಗೆ ರಾಜ್ಯದ ಬಗ್ಗೆ ಕನಸುಗಳಿರಬೇಕು. ಕನಿಷ್ಟ ತನ್ನ ಮಟ್ಟಿಗಾದರೂ ಕನಸುಗಳನ್ನು ಹೊಂದಿರಬೇಕು. ಆದರೆ ನಿಮ್ಮನ್ನು ನೋಡಿದರೆ ನೀವು ಕನಸುಗಳೆ ಇಲ್ಲದ ವ್ಯಕ್ತಿಯಾಗಿ ಕಾಣುತ್ತೀರಿ. ಆದಷ್ಟ ದಿನ ನಡೆದುಕೊಂಡು ಹೋಗಲಿ ಎಂಬುದು ನಿಮ್ಮ ಮನಸ್ಥಿತಿ ಎಂದು ಅನ್ನಿಸುತ್ತದೆ.
ಈ ನಡುವೆ ನೀವು ವಿಧಾನ ಪರಿಷತ್ತಿನ ಚುನಾವಣೆಗೆ ನಿಲ್ಲದಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಕೇಳಿದ್ದೇನೆ. ನಿಮ್ಮನ್ನು ರಾಜಕೀಯವಾಗಿ ಮುಗಿಸುವ ಯತ್ನ ಕೂಡ ಇದಾಗಿರಬಹುದು. ಅತವಾ ನಿಮ್ಮನ್ನು ದೆಹಲಿಗೆ ಕಳುಹಿಸಿ ಇಲ್ಲಿ ಅಧಿಕಾರ ಹಿಡಿಯುವ ಹುನ್ನಾರವೂ ಇರಬಹುದು. ಇದನ್ನೆಲ್ಲ ನೋಡಿ ನಿಮಗೆ ಸಿಟ್ಟು ಬರುತ್ತಿಲ್ಲವೆ ? ನಿನ್ನೆ ನೀವು ಗಂಗಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ನಿಮ್ಮ ಮುಖ ಪೆಚ್ಚಾಗಿತ್ತು. ನಿಮ್ಮ ಎಂದಿನ ನಗು ಇರಲಿಲ್ಲ. ನಿಜ ನಿಮಗೂ ಇದನ್ನೆಲ್ಲ ನೋಡಿ ಬೇಸರವಾಗಿರಬಹುದು. ಆದರೆ ನೀರಿಗೆ ಇಳಿದ ಮೇಲೆ ಚಳಿಯ ಹಂಗು ಯಾಕೆ ?
ನಿಮಗೆ ಇನ್ನೊಂದು ಮಾತು ಹೇಳಲೇ ಬೇಕು. ಬದುಕಿನಲ್ಲಿ ಆಗಲೀ, ರಾಜಕಾರಣದಲ್ಲಾಗಲೀ ನಮಗೆ ನಮ್ಮದೇ ಆದ ವ್ಯಕ್ತಿತ್ವ ಇರಬೇಕು. ನಾವು ಬೇರೆಯವರ ನೆರಳಾಗಬಾರದು. ತಪ್ಪಿರಲಿ ಒಪ್ಪಿರಲಿ ನಾವು ನಾವೇ. ಅದಕ್ಕಾಗಿ ನಿಮಗೆ ನನ್ನದೊಂದು ಸಲಹೆ. ದಯವಿಟ್ಟು ನೀವು ನೀವೇ ಆಗಲು ಯತ್ನಿಸಿ. ಆಗದೇ ?
ಇವತ್ತಿಗೆ ಇಷ್ಟೆ ಸಾಕು. ಇನ್ನೊಮ್ಮೆ ಮಾತನಾಡೋಣ.

ನಿಮ್ಮ ಹಿತವನ್ನು ಬಯಸುವ
ಶಶಿಧರ್ ಭಟ್

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...