Friday, November 19, 2010

ಹೋಗಿ ಬನ್ನಿ ಯಡಿಯೂರಪ್ಪ... !

ಕರ್ನಾಟಕದ ರಾಜಕಾರಣದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಹೊಲಸು ಎಂದು ಹೇಳಿ ಬಿಡಬಹುದು. ಇದು ಕೇವಲ ಹೊಲಸು ಮಾತ್ರವಲ್ಲ ರಾಜಕಾರಣ ಕೊಳೆತು ನಾರುತ್ತಿದೆ. ಅಧಿಕಾರದಲ್ಲಿ ಇರುವವರು ಎಷ್ಟು ನೀಚರಾಗಬಹುದು ಎಂಬುದನ್ನು ಇವತ್ತಿನ ರಾಜಕಾರಣ ಬಯಲು ಮಾಡಿದೆ. ಒಬ್ಬ ರಾಜಕಾರಣಿಗೆ ಕನಿಷ್ಟ ನೈತಿಕತೆ ಇರದಿದ್ದರೆ ಆಗುವ ಅನಾಹುತ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಿರುವುದನ್ನು ಗಮನಿಸಿದರೆ ಹೇಸಿಗೆಯಾಗುತ್ತದೆ. ಹೇಗಾದರೂ ಮಾಡಿ ನನ್ನನ್ನು ಅಧಿಕಾರದಲ್ಲಿ ಉಳಿಸಿ ಎಂದು ಅವರು ಕಂಡ ಕಂಡವರನ್ನೆಲ್ಲ ಗೋಗರೆಯುತ್ತಿದ್ದಾರೆ. ನಾನು ತಪ್ಪು ಮಾಡಿದ್ದೇನೆ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಶಿಕ್ಷಕರ ಮುಂದೆ ನಿಂತು ಗೋಗರೆಯುವ ಶಾಲಾ ಬಾಲಕನಂತೆ ಅವರು ಕಾಣುತ್ತಾರೆ. ಅವರೀಗ ಪಕ್ಷದ ಹೈಕಮಾಂದ್ ಮುಂದೆ ಕೈಯೊಡ್ಡಿ ಚಡಿ ಏಟು ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಒಬ್ಬ ವ್ಯಕ್ತಿ ನೈತಿಕವಾಗಿ ಅಧಃಪತನಿಕ್ಕೆ ಇಳಿದರೆ ಆಗುವುದು ಹೀಗೆ. ತಮ್ಮ ಕುಟುಂಬದ ಸದಸ್ಯರಿಗೆಲ್ಲ ಭೂ ದಾನ ಮಾಡಿ ಅದು ತಪ್ಪಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಅವರ ಮುಖ ನೋಡುವುದಕ್ಕೂ ಭೇಸರವಾಗುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು, ಹೋರಾಟದ ಮೂಲಕವೇ ಅಧಿಕಾರ ಹಿಡಿದ ನಾಯಕನೊಬ್ಬನ ದುರಂತ ಇದು. ಇದನ್ನು ನೋಡಿದಾಗ ಅವರಿಗೆ ಬೈಯುವುದಕ್ಕೂ ಮನಸ್ಸಾಗುವುದಿಲ್ಲ.
ಯಡಿಯೂರಪ್ಪ ತಪ್ಪಿದ್ದೆಲ್ಲಿ ಎಂದು ಹುಡುಕಲು ಹೋರಟರೆ, ಅವರು ತಪ್ಪದಿರುವುದೆಲ್ಲಿ ಎಂದು ಹುಡುಕುವುದೇ ಸುಲಭ ಎಂದು ಅನ್ನಿಸಿಬಿಡುತ್ತದೆ. ಯಾಕೆಂದರೆ ಅವರ ತಪ್ಪು ಒಂದೆರಡಲ್ಲ, ಮಹಾಭಾರತದ ಕೃಷ್ಟ ಶಿಶುಪಾಲನ ನೂರು ತಪ್ಪಿಗಾಗಿ ಕಾಯುತ್ತಿದ್ದನಂತೆ. ಇಲ್ಲಿ ನಮ್ಮ ಯಡಿಯೂರಪ್ಪ ಸಾವಿರಾರು ತಪ್ಪುಗಳನ್ನು ಮಾಡಿ, ಇವೆಲ್ಲ ಏನು ಅಲ್ಲ ಎಂದು ಮುಖ ಎತ್ತಿಕೊಂಡು ಓಡಾಡುತ್ತಿರುವುದೇ ಒಂದು ಸೋಜಿಗ.
ಯಡಿಯೂರಪ್ಪ ಅವರ ವ್ಯಕ್ತಿತ್ವದಲ್ಲಿ ಇರುವ ದೋಷವೇ ಇದಕ್ಕೆಲ್ಲ ಕಾರಣ. ಅವರಿಗೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಒಂದು ಪ್ರಮುಖ ವಿಚಾರ ಎಂದು ಅನ್ನಿಸುವುದೇ ಇಲ್ಲ. ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕ ನಡವಳಿಕೆಯ ಮಹತ್ವ ಅವರನ್ನು ತಟ್ಟುವುದಿಲ್ಲ. ಯಾಕೆಂದರೆ ಶಿಕಾರಿಪುರದಿಂದ ರಾಜಕಾರಣ ಮಾಡುತ್ತ ಬಂದ ಅವರು ವಿಧಾನಸೌಧದ ಮೆಟ್ಟಿಲು ಏರುವ ಹೊತ್ತಿಗೆ ಆರ್ಥಿಕವಾಗಿ ಸಬಲರಾಗಿ ಬಿಟ್ಟಿದ್ದರು. ಪ್ರತಿ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾಗಲೇ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಅವರ ಆಸ್ತಿ ಹಿಗ್ಗುತ್ತಲೇ ಇತ್ತು. ಅದು ಮುಖ್ಯಮಂತ್ರಿಯಾದ ಮೇಲೆ ಇನ್ನಷ್ಟು ಹೆಚ್ಚಿತು. ಅವರಿಗೆ ಇದೆಲ್ಲ ತಪ್ಪು ಎಂದು ಎಂದೂ ಅನ್ನಿಸಲೇ ಇಲ್ಲ. ತಮ್ಮ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡುವವರೆಲ್ಲ ತಮ್ಮ ಷಡ್ಯಂತ್ರ ನಡೆಸುವವರು ಎಂದು ಭಾವಿಸತೊಡಗಿದರು. ಈಗಲೂ ಅಷ್ಟೇ.
ತಾವು ರಾಜ್ಯದ ಅಧಿಕಾರ ಹಿಡಿಯಲು ತಾವು ರೈತ ಪರವಾಗಿ ನಡೆಸಿದ ಹೋರಾಟವೇ ಕಾರಣ ಎಂಬುದನ್ನು ಅವರು ಮರೆತು ಬಿಟ್ಟರು. ಹಣ ಮತ್ತು ಜಾತಿ ಬೆಂಬಲ ತಮ್ಮನ್ನು ಸಾಯುವವರೆಗೆ ಅಧಿಕಾರದಲ್ಲಿ ಇಡುತ್ತವೆ ಎಂಬ ಭ್ರಮೆಗೆ ಒಳಗಾದರು. ಇದಕ್ಕಾಗಿ ತಮ್ಮ ಜಾತಿಯ ಸ್ವಾಮಿಗಳಿಗೆ ಕಂಡ ಕಂಡಲ್ಲಿ ಕಾಲಿಗೆ ಬೀಳತೊಡಗಿದರು. ಮಠಗಳಿಗೆ ಸಾರ್ವಜನಿಕ ಹಣವನ್ನು ನೀಡಿ ಅವರ ಆಶೀರ್ವಾದ ಪಡೆಯತೊಡಗಿದರು. ಇದೆಲ್ಲ ತಪ್ಪು ಎಂದು ಯಾವೊಬ್ಬ ಸ್ವಾಮಿಯೂ ಅವರಿಗೆ ಹೇಳಲಿಲ್ಲ. ಇನ್ನೊಂದೆಡೆ ಹಣ ಮತ್ತು ಆಸ್ತಿ ಸಂಗ್ರಹದಲ್ಲಿ ತೊಡಗಿದರು. ತಾವು ಇನ್ನೂ ಹಲವು ವರ್ಷಗಳ ಕಾಲ ಅಧಿಕಾರ ನಡೆಸುವ ಕನಸು ಕಾಣತೊಡಗಿದರು.
ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು, ತಮ್ಮ ವಿವಾಹೇತರ ಸಂಬಂಧದ ಸಮಸ್ಯೆಯನ್ನು ಅವರು ಮುಚ್ಚಿಟ್ಟುಕೊಳ್ಲಬೇಕಾಗಿತ್ತು ತಮ್ಮ ಕುಟುಂಬದಿಂದ ಮಕ್ಕಳಿಂದ ಪ್ರತಿರೋಧ ಉಂಟಾಗಬಾರದು ಎಂದು ಮಕ್ಕಳಿಗೆ ಆಸ್ತಿ ಮಾಡಿಕೊಳ್ಳಲಿ ರೆಡ್ ಕಾರ್ಪೆಟ್ ಹಾಸಿದರು. ಯಾವುದೇ ರಾಜಕೀಯ ಸಾಮಾಜಿಕ ಬದುಕಿನ ಗಂಧ ಗಾಳಿ ಇಲ್ಲದ ಇಬ್ಬರು ಪುತ್ರ ರತ್ನರು ಭೂ ಸ್ವಾಹಾ ಯಜ್ನವನ್ನು ನಡೆಸತೊಡಗಿದರು. ತಮ್ಮ ವೈಯಕ್ತಿಕ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಇದನ್ನೆಲ್ಲ ನೋಡಿದರೆ ನೋಡದಂತೆ ಯಡಿಯೂರಪ್ಪ ಕಣ್ನು ಮುಚ್ಚಿ ಕುಳಿತರು. ಹಣ ಮತ್ತು ಅಧಿಕಾರ ಯಡೀಯೂರಪ್ಪನವರ ಒಳಗೆ ಇದ್ದ ಹೋರಾಟಗಾರನನ್ನು ಆಗಲೇ ಹತ್ಯೆ ಮಾಡಿಯಾಗಿತ್ತು. ಅಧಿಕಾರ ಅಮಲಾಗಿ ಅವರ ವ್ಯಕ್ತಿತ್ವವನ್ನು ಆಗಲೇ ಆವರಿಸಿಕೊಂಡು ಬಿಟ್ಟಿತ್ತು.
ಈಗ ಪಕ್ಷದ ವರಿಷ್ಟರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿ ಆಗಿದೆ. ಆದರೆ ಅವರು ಅಧಿಕಾರ ಬಿಡುವುದಿಲ್ಲ ಎಂದು ಹಠ ಮಾಡತೊಡಗಿದ್ದಾರೆ. ಪಕ್ಷದ ವರಿಷ್ಟರಿಗೆ ಷರತ್ತುಗಳನ್ನು ವಿಧಿಸತೊಡಗಿದ್ದಾರೆ. ಹಾಗೆ ನಾನು ಮುಖ್ಯಮಂತ್ರಿಯಾಗಿರಬೇಕು, ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ಅಳುತ್ತಾರೆ. ಅವರ ಈ ಹತಾಶ ಹೇಳಿಕೆಗಳನ್ನು ಗಮನಿಸಿದಾಗ ಈ ದುರಂತ ನಾಯಕ ತಲುಪಿರುವ ಸ್ಥಿತಿಯ ಬಗ್ಗೆ ಬೇಸರವಾಗುತ್ತದೆ. ಅವರು ಮೊದಲ ಬಾರಿ ಮಾಧ್ಯಮದ ಎದುರು ಅತ್ತಾಗ ಇದು ಭಾವೋದ್ವೇಗದ ಪರಮಾವಧಿ ಎಂದು ಅನ್ನಿಸಿತ್ತು. ಆದರೆ ಈಗ ಅವರಿಗೆ ಅಳುವುದೇ ಚಟವಾಗಿ ಬಿಟ್ಟಿದೆ. ಏನೇ ಆದರೂ ಅವರು ಅಳುವುದನ್ನು ನೋಡಿದರೆ ಅವರಿಗೆ ಯಾವುದೋ ರೀತಿಯ ಸಮಸ್ಯೆ ಇರಬೇಕು ಎಂದು ಅನ್ನಿಸುತ್ತದೆ.
ಯಡಿಯೂರಪ್ಪ ಹುಂಬ. ಆದರೆ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರಶ್ನಿಸುವುದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನನ್ನ ನಂಬಿಕೆ ಸುಳ್ಳು ಎಂದು ಈಗ ಅನ್ನಿಸತೊಡಗಿದೆ. ಅವರಿಗೆ ರಾಜ್ಯದ ಅಭಿವೃದ್ಧಿ ಎಂದರೆ ತಮ್ಮ ಮತ್ತು ತಮ್ಮ ಕುಟುಂಬದ ಅಭಿವೃದ್ಧಿ ಮಾತ್ರ.
ರಾಜಕಾರಣದವನ್ನು ಅರ್ಥಮಾಡಿಕೊಳ್ಳದವರು, ನೈತಿಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದವರು ಅಧಿಕಾರದ ಗದ್ದುಗೆ ಹಿಡಿಯುವುದರ ಸಮಸ್ಯೆ ಇದು. ಒಬ್ಬ ರಾಜಕಾರಣಿ, ಒಬ್ಬ ಮುಖ್ಯಮಂತ್ರಿ ಹಾಗೂ ಸಚಿವರು ಎಂದರೆ ಅವರು ಸಮಾಜದ ದರ್ಮದರ್ಶಿಗಳು. ಅವರು ಸಾರ್ವಜನಿಕ ಹಣವನ್ನು ಜತನದಿಂದ ಕಾಪಾಡಬೇಕಾಗುತ್ತದೆ. ಅವರಿಗೆಲ್ಲ ಉತ್ತರದಾಯಿತ್ವ ಎನ್ನುವುದು ಇರುತ್ತದೆ. ಇವರು ನಿರ್ವಹಣೆ ಮಾಡುವುದು ಸಾರ್ವಜನಿಕರ ಹಣವನ್ನು. ಈ ಅರಿವು ಪ್ರತಿಯೊಬ್ಬ ರಾಜಕಾರಣಿಗೂ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳದವರು ರಾಜಕಾರಣಿಯಾಗುವುದಕ್ಕೆ ಅರ್ಹರಲ್ಲ.
ಯಡಿಯೂರಪ್ಪ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರಿಗೆ ರಾಜಕೀಯ ಬದುಕಿನಲ್ಲಿ ಇರಬೇಕಾದ ಪ್ರಾಮಾಣಿಕತೆ ಇರಲಿಲ. ಅವರು ಪ್ರಾಮಾಣಿಕತೆ ಮತ್ತು ಮೌಲಿಕ ರಾಜಕಾರಣವನ್ನು ನಂಬುವುದಕ್ಕೆ ಬದಲಾಗಿ ಕಾವಿ ಧರಿಸಿದ ಸ್ವಾಮಿಗಳನ್ನು ನಂಬಿದರು. ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ದೇವರು ತನ್ನ ಕೈ ಬಿಡುವುದಿಲ್ಲ ಎಂದು ನಂಬಿದರು. ಹಣೆಯ ಮೇಲೆ ಕುಂಕುಮದ ಬಟ್ಟು ಇಟ್ಟುಕೊಂಡರೆ, ತಮ್ಮ ಹಣೆ ಬರೆಹ ಚೆನ್ನಾಗಿರುತ್ತದೆ ಎಂದುಕೊಂಡರು. ಆದರೆ ಆ ದೇವರು ಎನ್ನುವವನಿದ್ದರೆ ಆತ ಕೇವಲ ಯಡಿಯೂರಪ್ಪ, ರಾಘವೇಂದ್ರ, ವಿಜೇಂದ್ರ, ಶೋಭಾ ಕರಂದ್ಲಾಜೆ ಎಂಬ ಅವನ ಆಪ್ತ ವರ್ಗದ ರಕ್ಷಣೆಗಾಗಿ ಇದ್ದವನಲ್ಲ. ಅವನು ಈ ಸಮಾಜದಲ್ಲಿ ಇರುವ ಎಲ್ಲರನ್ನೂ ರಕ್ಷಿಸುವಂತಾದರೆ ಮಾತ್ರ ಆತ ದೇವರಾಗಿ ಉಳಿಯುತ್ತಾನೆ. ಆತ ಯಡಿಯೂರಪ್ಪ ಅವರ ಬಾಡಿ ಗಾರ್ಡ್ ಆಗಿ ಮಾತ್ರ ಉಳಿಯಲು ಸಾಧ್ಯವಿಲ್ಲ.
ಈಗ ಯಡಿಯೂರಪ್ಪ ಅವರಿಗೆ ನಾವೆಲ್ಲ ಸೇರಿ ಬೀಳ್ಕೊಡುಗೆ ನೀಡಬೇಕಾಗಿದೆ. ಅವರನ್ನು ಬೀಳ್ಕೊಡುವಾಗ ಕೆಲವೊಂದು ಒಳ್ಳೆಯ ಮಾತುಗಳನ್ನು ಹೇಳಬೇಕು. ಭಾರತೀಯ ಜನತಾ ಪಾರ್ಟಿಗೆ ಮಾಸ್ ಬೇಸ್ ನೀಡಿದವರು ಅವರು. ರೈತರನ್ನು ಸಂಘಟಿಸಿ ಅವರನ್ನು ಪಕ್ಷದ ತೆಕ್ಕೆಗೆ ಎಳೆದು ತಂದವರು ಅವರು.
ಆದರೆ ರಾಜಕಾರಣದಲ್ಲಿ ಇಷ್ಟೇ ಸಾಕಾಗುವುದಿಲ್ಲ ಮಾಡಿದ ಒಳ್ಳೆಯ ಕೆಲಸಗಳು ಕೊನೆಯವರೆಗೂ ಕೈ ಹಿಡಿಯುವುದಿಲ್ಲ. ಇದು ಅವರಿಗೆ ಅರ್ಥವಾಗಲಿ.
ಹೋಗಿ ಬನ್ನಿ ಯಡಿಯೂರಪ್ಪ.

3 comments:

V.R.BHAT said...

ಹೋಗೂ ಎಂದ್ರೂ ಎದ್ದು ಹೋಗದ ಅಸಾಮಾನ್ಯ ಲಜ್ಜೆಗೆಟ್ಟ ಮಂತ್ರಿಗಳು ಶಾಸಕರು ಸೇರಿ, ವಿಧಾನಸೌಧವನ್ನು ಕುಲಗೆಡಿಸಿ, ರಾಜಕೀಯ ಅಲ್ಪಸ್ವಲ್ಪವಾದರೂ ಇದ್ದ ಮೌಲ್ಯವನ್ನು ಕಸಬಳಿದು ಇನ್ನೇನು ಮಚ್ಚ ಲಾಂಗುಗಳನ್ನು ತಂದು ಹೊಡೆದಾಡಿ ಸಾಯುವುದೊಂದು ಬಾಕಿ ಇದೆ. ನಿಮ್ಮ ಲೇಖನ ಓದಿದೆ, ನೀವು ಜಾಸ್ತಿ ಮಾತನಾಡದವರು ಅಂದಿರಿ, ಜಾಸ್ತಿ ಮಾತನಾಡುವ ನನ್ನನ್ನು ನಿಮ್ಮೊಟ್ಟಿಗೆ ಕುಳಿತುಕೊಳ್ಳಲು ಬಿಡುವಿರೋ ?

Badarinath Palavalli said...

Sir, he is not a chief minister- a "karchief' minister! Nice article about current situation. But sir is it correct that Swamijis protesting for him? He is also not at all respecting party high command.
www.badari-poems.blogspot.com

karanthkv@ said...

ಭಟ್ಟರೇ...ಸರಿಯಾಗಿಯೇ ಹೇಳಿದಿರಿ. ಅವರು ತಮ್ಮ ಮಗನನ್ನು ನಮ್ಮ constituency ಗೆ ನಿಲ್ಲಿಸಿದಾಗಲೇ ತಿಳಿದುಕೊಂಡೆ. ನಮ್ಮ ಪುತ್ತೂರಿನ ರಾಮ ಭಟ್ಟರು ಇದನ್ನು ಊಹಿಸಿದ್ದರೂ ಸಹ! ಅವರು ಕಟ್ಟಿ ಬೆಳಸಿದ ಇಲ್ಲಿನ ಭಾರತೀಯ ಜನತಾ ಪಾರ್ಟಿ ಅಕಸ್ಮಾತ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೂ(ಅವರು ಸಮ್ಮಿಶ್ರ ಸರಕಾರದಲ್ಲಿದ್ದಾಗ ಗಳಿಸಿದ....(?)...ಗಂಟನ್ನು vote ಗಾಗಿ ಕರ್ಚು ಮಾಡಿದ್ದಿರಬೇಕು. ಅದಕ್ಕೇ ಅವರಿಗೆ ಈಗ ಭ್ರಮ ನಿರಸನವಾಗಿರಬೇಕು...! ಏನಂತಿರಿ?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...