Tuesday, November 23, 2010

ಸ್ವಾಮಿಗಳೇ ಎಲ್ಲ ಬಿಟ್ಟು ಬನ್ನಿ, ಪೆಗ್ ಹಾಕಿ ಚರ್ಚೆ ಮಾಡೋಣ...!

ಭಾರತೀಯರ ಬದುಕಿನಲ್ಲಿ ಧರ್ಮ ಎನ್ನುವುದು ಬದುಕುವ ವಿಧಾನ. ಧರ್ಮ ಎನ್ನುವ ಶಬ್ದದ ಮೂಲಧಾತು ದೃ. ದೃ ಎಂದರೆ ಬದುಕನ್ನು ಎತ್ತರಿಸು ಎಂದರ್ಥ. ಬದುಕನ್ನು ಯಾವುದು ಎತ್ತರಿಸುತ್ತದೆಯೋ ಅದೇ ಧರ್ಮ. ಆದರೆ ಈ ಬದುಕನ್ನು ಎತ್ತರಿಸುವುದು ಆಯಾ ಕಾಲಕ್ಕೆ ಬೇರೆ ಬೇರೆಯಾಗಿದೆ. ಆದರೆ ನಮ್ಮ ಬದುಕನ್ನು ಎತ್ತರಿಸುವುದು ಯಾವುದು ? ಅಂತಹ ಸಾರ್ವಕಾಲಿಕ ನಂಬಿಕೆ ಎನ್ನುವುದು ಇದೆಯೆ ? ಸಾರ್ವಕಾಲಿಕ ಬದುಕುವ ವಿಧಾನ ಇದೆಯೆ ?
ನೋಡಿ. ಎಲ್ಲ ಕಾಲದಲ್ಲಿಯೂ ಎಲ್ಲರೂ ಒಪ್ಪಬೇಕಾದ ಕೆಲವು ನಂಬಿಕೆಗಳಿವೆ, ಬದುಕುವ ವಿಧಾನವಿದೆ ನಾವು ನಮ್ಮ ಬದುಕಿನಲ್ಲಿ ಬೇರೆಯವರಿಗೆ ಮೋಸ ಮಾಡಬಾರದು, ಸಮಾಜಕ್ಕೆ ಒಳ್ಳೆಯದಾಗುವಂತೆ ಬದುಕಬೇಕು, ಬೇರೆಯವರಿಗೆ ಧ್ರೋಹವೆಸಗಬಾರದು, ಎಂಬುದು ಎಲ್ಲರೂ ಒಪ್ಪಬೇಕಾದ ಸಾರ್ವಕಾಲಿಕ ನಂಬಿಕೆಯೇ. ಹಾಗೆ ರಾಜ ಧರ್ಮ, ಗ್ರಹಸ್ಥಧರ್ಮ, ಸನ್ಯಾಸಿಗಳ ಧರ್ಮ ಇತ್ಯಾದಿ. ಈ ಸಮಾಜದಲ್ಲಿ ಬೇರೆ ಬೇರೆ ಸ್ಥರಗಳಲ್ಲಿ ಕೆಲಸ ಮಾಡುವವರು ತಮ್ಮ ತಮ್ಮ ಧರ್ಮದ ಪಾಲನೆ ಮಾಡಬೇಕಾಗುತ್ತದೆ. ಆಗಲೇ ಧರ್ಮ ಎಂಬ ಶಬ್ದಕ್ಕೆ ಬೆಲೆ. ಸಮಾಜ ಕೂಡ ಬದುಕುವುದಕ್ಕೆ ಯೋಗ್ಯವಾಗುತ್ತದೆ. ಇಂಥಹ ಸಾರ್ವಕಾಲಿಕ ಧರ್ಮ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಧರ್ಮ ಪೀಠಗಳ ಕೆಲಸ.
ಈ ಮಾತುಗಳನ್ನು ನಾನು ಹೇಳುವುದಕ್ಕೆ ಮೂಲ ಕಾರಣ, ಕಳೆದ ಎರಡು ದಿನಗಳಿಂದ ಕೆಲವು ಮಠಾಧೀಶರು ರಸ್ತೆಗೆ ಇಳಿದಿದ್ದು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಬಾರದು ಎಂದು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು. ಹಾಗೆ ಬಿಜೆಪಿ ವರಿಷ್ಟರನ್ನು ಸಂಪರ್ಕಿಸಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸಿದ್ದು. ಇದಕ್ಕೆಲ್ಲ ಈ ಮಠಾಧೀಶರು ಕೊಡುತ್ತಿರುವ ಕಾರಣ ಯಡಿಯೂರಪ್ಪ ಅವರ ಸರ್ಕಾರ ಲೋಕ ಕಲ್ಯಾಣ ಮಾಡುತ್ತಿದೆ, ಅವರು ಮಾಡಿದ ಅಪರಾಧ ದೊಡ್ಡದಲ್ಲ !
ಈಗ ಯಡಿಯೂರಪ್ಪ ಅವರ ಮೇಲೆ ಬಂದ ಭೂಹಗರಣಗಳ ಆರೋಪ ಸಣ್ಣದಲ್ಲ. ಕನಿಷ್ಠ ೧೦ ಪ್ರಕರಣಗಳಿವೆ.ಇವುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಮೇಲ್ನೋಟಕ್ಕೆ ಯಡಿಯೂರಪ್ಪಾಪರಾಧಿ ಎಂಬುದು ಸಾಬೀತಾಗಿದೆ. ಸ್ವಜನ ಪಕ್ಷಪಾತದ ಆರೋಪವನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡು ಭೂಮಿಯನ್ನು ಹಿಂತಿರುಗಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡರೂ ಈ ಮಠಾದೀಶರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರ ಮೇಲೆ ತನಿಖೆಯಾಗಿ ಅವರು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಈ ಮಠಾಧೀಶರು ಹೇಳುತ್ತಾರೆ. ಸಾಧಾರಣವಾಗಿ ಯಾವ ವ್ಯಕ್ತಿಯ ಮೇಲೆ ಆರೋಪ ಬರಲಿ ಆತ ತನಿಖೆ ಮುಗಿಯುವ ವರೆಗೆ ಅಧಿಕಾರದಿಂದ ದೂರವಿರಬೇಕು ಎಂಬುದು ನ್ಯಾಯ ಸಮ್ಮತ. ಆರೋಪ ಒಳಗಾದ ವ್ಯಕ್ತಿ ಅಧಿಕಾರದಲ್ಲಿ ಇದ್ದರೆ ಆತ ದಾಖಲಗಳನ್ನು ನಾಶ ಪಡಿಸುವ ಸಾಧ್ಯತೆ ಇದ್ದೇ ಇರುತ್ತದೆ. ಜೊತೆಗೆ ಆರೋಪ ಮಾಡಿದವರ ಮೇಲೆ ಅಧಿಕಾರದ ಬಲ ಪ್ರಯೋಗವಾಗುವ ಸಾಧ್ಯತೆ ಇರುತ್ತದೆ. ಆಗ ನ್ಯಾಯ ಸಮ್ಮತ ವಿಚಾರಣೆ ನಡೆಯುವುದು ಸಾಧ್ಯವಿಲ್ಲ.
ಇದೆಲ್ಲ ನಮ್ಮ ಸ್ವಾಮೀಜಿಗಳಿಗೆ ಗೊತ್ತಿಲ್ಲವೆ ? ಗೊತ್ತಿದೆ, ಆದರೆ ತಮ್ಮ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಎಂಬುದೇ ಅವರ ಈ ನಿಲುಮೆಗೆ ಕಾರಣ.
ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಎಂದು ನಾವೆಲ್ಲ ನಂಬಿದ್ದೆವು. ಕರ್ನಾಟಕದ ಲಿಂಗಾಯಿತರಿಗೆ ಮಾತ್ರ ಅವರು ಮುಖ್ಯಮಂತ್ರಿಯಲ್ಲ. ಆದರೆ ಯಡಿಯೂರಪ್ಪ ಅವರ ಪರವಾಗಿ ಧರಣಿ ಸತ್ಯಾಗ್ರಹ ನಡೆಸಿದ ಮಠಾಧೀಶರು ನಮ್ಮೆಲ್ಲರ, ಕರ್ನಾಟಕದ ಐದು ಕೋಟಿ ಕನ್ನಡಿಗರ ಮುಖ್ಯಮಂತ್ರಿಯನ್ನು ಬರೇ ಲಿಂಗಾಯಿತರ ಮುಖ್ಯಮಂತ್ರಿಯನ್ನಾಗಿ ಮಾಡಿಬಿಟ್ಟರು. ಕರ್ನಾಟಕದಲ್ಲಿ ೧೧ ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಿಶ್ವ ಮಾನ್ಯ ಬಸವಣ್ಣವರನ್ನು ಲಿಂಗಾಯಿತರಿಗೆ ಸೀಮಿತಗೊಳಿಸಿದವರಿಗೆ ಇದು ದೊಡ್ದ ವಿಚಾರ ಆಗಿರಲಿಕ್ಕಿಲ್ಲ. ಆದರೆ ಕರ್ನಾಟಕದ ಪ್ರಜ್ನಾವಂತರು ಇದನ್ನೆಲ್ಲ ವಿರೋಧಿಸಲೇ ಬೇಕು. ಯಾವುದೇ ಒಬ್ಬ ಮುಖ್ಯಮಂತ್ರಿ ಒಂದು ಜಾತಿಯನ್ನು ಪ್ರತಿನಿಧಿಸುವುದು ಜನತಂತ್ರ ವ್ಯವಸ್ಥೆಯಲ್ಲಿ ಅಪಾಯಕಾರಿ. ಇಂಥಹ ಅಪಾಯಕ್ಕೆ ಕರ್ನಾಟಕವನ್ನು ಒಡ್ದುತ್ತಿರುವುವರು ಮಠಾಧೀಶರು.
ಇದೆಲ್ಲ ಇವರಿಗೆ ಬೇಕಾಗಿತ್ತೆ ?
ಉಡುಪಿಯ ವಿಶ್ವೇಶ ತೀರ್ಥ ಸ್ವಾಮೀಜಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸುತ್ತಾರೆ. ಅಡ್ವಾಣಿ, ಗಡ್ಕರಿ ಅವರಿಗೆ ಫೋನ್ ಮಾಡಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಮುಂದುವರಿಸಿ ಎನ್ನುತ್ತಾರೆ. ನೂರರ ಗಡಿ ದಾಟಿರುವ ಸಿದ್ದಗಂಗಾ ಸ್ವಾಮೀಜಿ ಯಡಿಯೂರಪ್ಪ ಅವರ ಸರ್ಕಾರ ಅತ್ಯುತ್ತಮ ಸರ್ಕಾರ ಎಂದು ಸರ್ಟಿಫಿಕೇಟ್ ನೀಡುತ್ತಾರೆ. ದಯಾನಂದ ಸ್ವಾಮಿಯವರಂತಹ ಸಣ್ಣ ಪುಟ್ಟ ಸ್ವಾಮಿಗಳು ಪುರ ಭವನದ ಎದುರು ಸುಡು ಬಿಸಿಲಿನಲ್ಲಿ ಧರಣಿ ಕುಳಿತುಕೊಳ್ಳುತ್ತಾರೆ. ಟೀವಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಕೊಳದ ಮಠದ ಶಾಂತವೀರ ಸ್ವಾಮಿಜಿ ಮಠಾಧೀಶರನ್ನು ಎಮ್ ಎಲ್ ಸಿ ಮಾಡಿದರೆ ಸಮಾಜದ ಎಲ್ಲ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ಅಪ್ಪಣೆ ಕೊಡುತ್ತಾರೆ ! ಇವರಿಗೆಲ್ಲ ಇಂಥಹ ಉಮೇದಿ ಬರಲು ಏನು ಕಾರಣ ? ಯಡಿಯೂರಪ್ಪ ಇವರ ಕಾಲಿಗೆ ಬೀಳುತ್ತಾರೆ ಎಂಬುದೇ ? ಅಥವಾ ಸಾರ್ವಜನಿಕ ಹಣವನ್ನು ಮಠಗಳಿಗೆ ಬೇಕಾಬಿಟ್ಟಿ ಹಂಚುತ್ತಾರೆ ಎಂಬುದೇ ?
ಮಠಾಧೀಶರಿಗೆ ಅವರದೇ ಆದ ಕರ್ತವ್ಯಗಳಿವೆ. ಭ್ರಾಹ್ಮಣ ಮಠಾಧೀಶರು ಲೌಕಿಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಲಿಂಗಾಯಿತ ಮಠಾಧೀಶರು ಸಾಮಾಜಿಕ ಕ್ರಾಂತಿಯ ಬಗ್ಗೆ ಚಿಂತನೆ ಮಾಡಬೇಕು.ಸಮಾಜದಲ್ಲಿ ಧರ್ಮ ಭ್ರಷ್ತವಾಗದಂತೆ ನೋಡಿಕೊಳ್ಳಬೇಕು. ತಮ್ಮ ತಮ್ಮ ಶಿಷ್ಯರಿಗೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಉಪದೇಶ ಮಾಡಬೇಕು. ಪರ ಸ್ಥ್ರೀಯರನ್ನು ಕಣ್ಣೆತ್ತಿ ನೋಡದಂತೆ ಬುದ್ದಿ ಮಾತು ಹೇಳಬೇಕು.ಹಣ ಹೊಡೆಯದಂತೆ ನ್ಯಾಯವಾಗಿ ನಡೆದುಕೊಳ್ಳುವಂತೆ ಉಪದೇಶ ಮಾಡುವ ಹೊಣೆಗಾರಿಕೆ ಈ ಮಠಾಧೀಶರಿಗೆ ಇದೆ. ಅದನ್ನು ಬಿಟ್ಟ ಬಹಿರಂಗವಾಗಿ ರಾಜಕೀಯ ಮಾಡಲು ಪ್ರಾರಂಭಿಸಿದರೆ ವೃತ್ತಿ ನಿರತ ರಾಜಕಾರಣಿಗಳಿಗೆ ಏನು ಕೆಲಸ ?
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ವಿರೋಧಿಸುವುದು ಮಠಾಧೀಶರ ಕರ್ತವ್ಯ. ಈ ಮಠಾಧೀಶರು ತಮ್ಮ ಶಿಷ್ಯರು ಹಾದಿ ತಪ್ಪಿದರೆ ಮಾತನಾಡುವುದಿಲ್ಲ. ರೇಣುಕಾಚಾರ್ಯ ಬಹಿರಂಗವಾಗಿ ಕಿಸ್ ನೀಡಿದ್ದು ಈ ಸ್ವಾಮಿಗಳಿಗೆ ಕಾಣುವಿದಿಲ್ಲ. ಯಡಿಯೂರಪ್ಪ ಗ್ರಹಸ್ಥರಾಗಿದ್ದವರು ಗ್ರಹಸ್ಥಶ್ರಮ ಧರ್ಮವನ್ನು ಉಲ್ಲಂಘಿಸಿದ್ದು ಇವರಿಗೆ ಮಹತ್ವದ್ದಾಗುವುದಿಲ್ಲ. ಇದು ಅವರಿಗೆ ಕಾಣಬೇಕಾಗಿತ್ತು. ಯಾಕೆಂದರೆ ಅದೇ ಅವರ ಪೋರ್ಟ್ ಫೋಲಿಯೋ. ಆದರೆ ತಮ್ಮ ಖಾತೆಯ ನಿರ್ವಹಣೆ ಮಾಡಬೇಕಾದವರು ಬೇರೆ ಖಾತೆಗಳಿಗೆ ಕೈ ಹಾಕತೊಡಗಿದ್ದಾರೆ.
ಕೆಲವೊಮ್ಮೆ ಈ ಮಠಾಧೀಶರನ್ನು ನೋಡಿದರೆ ಸಹಾನುಭೂತಿ ಉಂಟಾಗುತ್ತದೆ. ಅವರು ಏನನ್ನೂ ಬಹಿರಂಗವಾಗಿ ಮಾಡುವಂತಿಲ್ಲ. ಎಲ್ಲವನ್ನೂ ಕದ್ದು ಮುಚ್ಚಿ ಮಾಡಬೇಕು. ಹೊರಗಡೆಯ ಇಮೇಜ್ ಅನ್ನೂ ಉಳಿಸುಕೊಳ್ಳಬೇಕು, ಆಸೆಯನ್ನು ತೀರಿಸಿಕೊಳ್ಳಬೇಕು. ಜೊತೆಗೆ ವೇಷಭೂಷಣ. ಮಳೆಯಾಗಲಿ ಬಿಸಿಲಾಗಲಿ, ವೇಷ ಭೂಷಣವನ್ನು ಬದಲಿಸುವಂತಿಲ್ಲ. ಸಂಸ್ಕೃತ ಶ್ಲೋಕ ಮತ್ತು ವಚನಗಳನ್ನು ಬಾಯಿ ಪಾಠ ಮಾಡಿಕೊಂಡಿರಬೇಕು,. ಜನರ ಎದುರು ಭಾಷಣ ಮಾಡುವಾಗ ಬಾಯಿ ಪಾಠ ಮಾಡಿದ್ದನ್ನು ತಪ್ಪಿಲ್ಲದೇ ಹೇಳಬೇಕು. ಇದೆಲ್ಲ ಕಷ್ಟದ ಕೆಲಸವೇ...!
ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟರಾಗಿದ್ದು ಮಾತ್ರವಲ್ಲ, ಪತ್ರಿಕೋದ್ಯಮಿಗಳನ್ನು ಭ್ರಷ್ಟರನ್ನಾಗಿ ಮಾಡಿದರು. ಅಧಿಕಾರಶಾಹಿಯನ್ನು ಭ್ರಷ್ಟರನ್ನಾಗಿಸಿದರು. ಎಲ್ಲೆಡೆ ಲಂಚ ಪ್ರಪಂಚವನ್ನು ಸೃಷ್ಟಿಸಿದರು. ಈಗ ಮಠಾದೀಶರನ್ನು ಭ್ರಷ್ಟ್ರನ್ನಾಗಿ ಮಾಡಿ ಕೈತೊಳೆದುಕೊಂಡರು. ಕೊನೆಗೆ ಎಲ್ಲರೂ ಭ್ರಷ್ಟರೆ, ಅದರಂತೆ ನಾನೂ ಭ್ರಷ್ಟನಾಗಿರಬಹುದು ಎಂದು ಹೇಳಿಕೊಂಡು ಓಡಾಡತೊಡಗಿದರು. ಇದಾದ ಮೇಲೆ ಕೊನೆಯದಾಗಿ ಬಿಜೆಪಿಯ ವರಿಷ್ಠರನ್ನು ಭ್ರಷ್ಟರನ್ನಾಗಿ ಮಾಡಲು ಹೊರಟಿದ್ದಾರೆ. ಅಡ್ವಾಣಿಯಂಥವರ ಕೈ ಬಾಯಿಯನ್ನು ಮುಚ್ಚಿಸಲು ಯತ್ನ ನಡೆಸುತ್ತಿದ್ದಾರೆ.
ಇಂಥವರು ನಮಗೆ ಬೇಕೆ ?
ಧರ್ಮದ ಹೆಸರಿನಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡುತ್ತಿರುವ ಮಠಾದೀಶರು ಈ ಬಗ್ಗೆ ಯೋಚಿಸಬೇಕು. ದೇಶದ ಸಾಮಾನ್ಯ ಜನರೇ ಮಠಾಧೀಶರಿಗೆ ಧರ್ಮ ಮತ್ತು ನೀತಿಬೋಧನೆ ಮಾಡಬೇಕಾದ ಸ್ಥಿತಿಯನ್ನು ನಿರ್ಮಿಸಬಾರದು.
ಕೊನೆಯ ಮಾತು: ಸ್ವಾಮಿಗಳೇ, ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ, ಕಾವಿಯನ್ನು ಕಳಚಿ ಬನ್ನಿ. ಮಠವನ್ನು ತೊರೆದು ಬನ್ನಿ. ರಾಜಕೀಯ ಅಖಾಡಕ್ಕೆ ನೇರವಾಗಿ ಇಳಿದು ಬಿಡಿ. ಸ್ವಾಮೀಜಿಯಾದವರು ಬರೀ ಸ್ವಾಮಿಯಾಗಿ (ಕುಮಾರಸ್ವಾಮಿಯಂತೆ, ಪುಟ್ಟಸ್ವಾಮಿಯಂತೆ !) ನಾವು ನೀವು ಒಂದು ಪೆಗ್ ಹಾಕಿ ಯಡೀಯೂರಪ್ಪ ಇರಬೇಕೆ ಇರಬಾರದೆ ಎಂಬ ಬಗ್ಗೆ ಚರ್ಚೆ ಮಾಡೋಣ. ಓಕೆ ನಾ ?

4 comments:

PARAANJAPE K.N. said...

ನಿಮ್ಮ ವಾದಕ್ಕೆ ನನ್ನ ಸಹಮತ ಇದೆ. ಇ೦ತಹ ಭ್ರಷ್ಟ ಮುಖ್ಯಮ೦ತ್ರಿಯ ಬೆನ್ನಿಗೆ ನಿ೦ತಿರುವ ಸ್ವಾಮೀಜಿಗಳ ನಡೆ ಸರ್ವಥಾ ಸರಿಯಲ್ಲ. ಅವರಿಗಿರುವ ಅಲ್ಪಸ್ವಲ್ಪ ಮಾನವನ್ನು ಸ್ವಾಮೀಜಿಗಳು ಕಳಕೊಳ್ಳುತ್ತಾರೆ.

ಮಹೇಶ ಭಟ್ಟ said...

ಕಲಿಯುಗ

Badarinath Palavalli said...

Shamefull act by todays Swamijies. Good article sir.
www.badari-poems.blogspot.com

karanthkv@ said...

ಕೆಲವೊಮ್ಮೇ ನನಗೆ ನಾಚಿಕೆಯಾಗುತ್ತಿದೆ. ನಮ್ಮ ಕಣ್ಣೆದುರೇ ಇ ಸ್ವಾಮಿಗಳು ಏನೆಲ್ಲಾ ಮಾಡುತ್ತಾರೆ!

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...