ಕಳೆದ ಎರಡು ಮೂರು ದಿನಗಳ ಕಾಲ ಉತ್ತರ ಕನ್ನಡಜಿಲ್ಲೆಯಲ್ಲಿದ್ದೆ. ಅದು ನನ್ನ ಜಿಲ್ಲೆ. ನಾನು ಹುಟ್ಟಿ ಬೆಳೆದ ಜಿಲ್ಲೆ. ಅಲ್ಲಿನ ಕಾಡು, ನದಿಗಳು ಗುಡ್ಡ ಬೆಟ್ಟಗಳು ಎಲ್ಲವೂ ನನ್ನವು ಎಂದು ಅನ್ನಿಸುತ್ತದೆ. ಬೆಂಗಳೂರು ಎಂಬ ಮಾಯಾನಗರಿ ನನ್ನನ್ನು ತಲ್ಲಣಗೊಳಿಸಿದಾಗ ಅಲ್ಲಿಗೆ ಓಡಿ ಹೋಗಬೇಕು ಎಂದು ಅನ್ನಿಸುತ್ತದೆ. ಇಷ್ಟು ವರ್ಷಗಳ ನಂತರವೂ ಬೆಂಗಳೂರು ನನ್ನದು ಎಂದು ಅನ್ನಿಸಿಲ್ಲ. ಹಾಗೆ ಊರು ಬಿಟ್ಟು ಮೂರು ದಶಕಗಳು ಕಳೆದರೂ ಉತ್ತರ ಕನ್ನಡ ಪರಕೀಯವಾಗಿಲ್ಲ.
ಈ ಬಾರಿ ನಾನು ಹೋಗಿದ್ದು ಪತ್ರಕರ್ತ ಗಂಗಾಧರ್ ಕೊಳಗಿಯ ಪುಸ್ತಕ ಬಿಡುಗಡೆಗಾಗಿ. ಆತ ಈಗ ಸಿದ್ಧಾಪುರದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನಾಗಿದ್ದಾನೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಆತನ ವಿಶೇಷ ಲೇಖನಗಳ ಸಂಗ್ರಹ ಸಮಯದ ನಿಜ ವನ್ನು ಹೊರತಂದಿದ್ದಾನೆ. ಅದನ್ನು ನಾನೇ ಬಿಡುಗಡೆ ಮಾದಬೇಕು ಎನ್ನುವುದು ಅವನ ಒತ್ತಾಸೆಯಾಗಿತ್ತು. ಹೀಗಾಗಿ ನಾನು ಉತ್ತರ ಕನ್ನಡಕ್ಕೆ ಹೋಗಿದ್ದು. ಆತನಿಗೆ ನನ್ನ ಮೇಲೆ ಎಷ್ಟು ಪ್ರೀತಿ ಎಂದರೆ ನನ್ನನ್ನು ಆತ ಪತ್ರಿಕೋದ್ಯಮದ ಗುರು ಎಂದು ಕರೆಯುತ್ತಾನೆ. ಆದರೆ ಗುರು ಪರಂಪರೆಯಲ್ಲಿ ಅಷ್ಟಾಗಿ ನಂಬಿಕೆ ನನ್ನಲ್ಲಿ ಇಲ್ಲದಿರುವುದರಿಂದ ಗುರು ಎಂದು ತಕ್ಷಣ ಏನೇನೋ ನೆನಪಾಗುತ್ತದೆ. ರಾಜಕಾರಣಿಗಳ ಭಟ್ಟಂಗಿಗಳಾದ ಗುರುಗಳು, ಕಾವಿಯ ಅಡಿಯಲ್ಲಿ ಕಾಮವನ್ನು ಸಲಹುವ ಗುರುಗಳು. ಆಧ್ಯಾತ್ಮವನ್ನು ಬಿಟ್ಟು ಆತ್ಮವನ್ನು ಮಾರಾಟಕ್ಕೆ ಇಟ್ಟುಕೊಂಡವರು ಎಲ್ಲರೂ ಕಣ್ಣ ಮುಂದೆ ಬರುತ್ತಾರೆ. ಆದರೆ ಯಾರೋ ಪ್ರೀತಿಯಿಂದ ನನ್ನ ಗುರುಗಳು ಎಂದು ಕರೆದರೆ ಅವರ ಮನಸ್ಸನ್ನು ನೋಯಿಸಲು ಮನಸ್ಸಾಗುವುದಿಲ್ಲ. ಹೀಗಾಗಿ ಗುರು ಪಟ್ಟವನ್ನು ಮೌನವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಅಲ್ಲಿ ನಡೆದಿದ್ದು ರಾಜ್ಯ ಮಟ್ಟದ ಪೌರಾಣಿಕ ನಾಟಕೋತ್ಸವ. ಈ ನಾಟಕೋತ್ಸವದಲ್ಲಿಯೇ ಗಂಗಾಧರನ ಪುಸ್ತಕ ಬಿಡುಗಡೆಯಾಗಿದ್ದು. ನನ್ನ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಶ್ರೀನಿವಾಸ್ ಜಿ ಕಪ್ಪಣ್ಣ. ಅಲ್ಲಿ ನಾನು ಏನು ಮಾತನಾಡಿದೆ ಎಂಬುದು ಅಷ್ಟು ಮುಖ್ಯವಲ್ಲ. ಇವತ್ತಿನ ಪತ್ರಿಕೋದ್ಯಮದ ಬಗ್ಗೆ, ಎಲ್ಲೆಡೆ ಭ್ರಷ್ಟತೆ ಆವರಿಸಿರುವ ಬಗ್ಗೆ ನಾನು ಕೆಲವು ಮಾತುಗಳನ್ನು ಹೇಳಿದೆ. ಆದರೆ ಅಲ್ಲಿ ನಾನು ಸಣ್ಣಿಂದ ನೋಡಿದ ಹಲವರು ಪ್ರೇಕ್ಷಕರಲ್ಲಿ ಕಾಣುತ್ತಿದ್ದರು. ಅಲ್ಲಿ ನನ್ನ ಅಪ್ಪ, ಅಮ್ಮ,ತಮ್ಮ, ನನ್ನ ಜೊತೆ ಓದಿದವರು, ಹಿರಿಯರು, ಸ್ಥಳೀಯ ಪತ್ರಕರ್ತರು ಎಲ್ಲರೂ ಇದ್ದರು. ಅವರೆಲ್ಲರನ್ನು ನೋದುವಾಗ ಅವರಲ್ಲಿ ನನ್ನ ಬಗ್ಗೆ ಇದ್ದ ಪ್ರೀತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತಿತ್ತು.
ಕಾರ್ಯಕ್ರಮ ನಡೆದ ಶಂಕರ ಮಠದ ಧರ್ಮಾಧಿಕಾರಿ ವಿಜಯ್ ಹೆಗಡೆ ತಮ್ಮದೇ ಕಾರ್ಯಕ್ರಮ ಎನ್ನುವಂತೆ ನೋಡಿಕೊಂಡಿದ್ದರು. ವಿಜಯ ಹೆಗಡೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕುಟುಂಬದ ಸದಸ್ಯರು. ಅವರೆಂದೂ ರಾಜಕೀಯದ ಬೆನ್ನು ಬಿದ್ದವರಲ್ಲ. ಚಿಕ್ಕಪ್ಪ ರಾಮಕೃಷ್ಣ ಹೆಗಡೆಯವರ ಹೆಸರು ಹೇಳಿಕೊಂಡು ಬದುಕಲು ಯತ್ನ ನಡೆಸಿದವರಲ್ಲ. ಇಂದು ಸಿದ್ಧಾಪುರದ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಶಂಕರ ಮಠವನ್ನು ಕಟ್ಟಿ ಬೆಳೆಸಿದವರು ಅವರು.
ಅವರ ಜೊತೆ ನಾನು ಕಳೆದ ಒಂದೆರಡು ತಾಸು ಓಷೋ, ರವಿಶಂಕರ್, ಸ್ವಾಮಿ ರಾಮದೇವ್ ಹೀಗೆ, ಆಧ್ಯಾತ್ಮ, ಯೋಗದ ಬಗ್ಗೆ ಮಾತನಾಡಿದೆವು. ಸಿದ್ಧಾಪುರಕ್ಕೆ ಹೋಗುವುದಕ್ಕೂ ಮೊದಲು ನನ್ನ ಮನಸ್ಸಿನಲ್ಲಿದ್ದುದು ಉತ್ತರ ಕನ್ನಡ ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಹಪಹಪಿಕೆ. ಈ ನನ್ನ ಜಿಲ್ಲೆ ನಮ್ಮ ಆಧುನಿಕ ಪರಿಭಾಷೆಯಲ್ಲಿ ಹೇಳುವಂತೆ ಅಭಿವೃದ್ಧಿಯಾಗಿಲ್ಲ. ಐಟಿ ಬಿಟಿ ಕಂಪೆನಿಗಳು, ನೈಟ್ ಕ್ಲಬ್ ಗಳು ಪಿಜ್ಜಾ ಭರ್ಗರ್ ಧಾಳಿ ಮಾಡಿಲ್ಲ. ಇಲ್ಲಿನ ಜನ ತಮಗೆ ದೊರಕಿದ್ದಕ್ಕೆ ಸಂತೋಷ ಪಡುತ್ತ ಬದುಕುವವರು. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಜನರಂತೆ ಸಾಹಿಸಿಗರೂ ಅಲ್ಲ. ಆದರೆ ಇಲ್ಲಿ ಈಗಲೂ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ಪ್ರವಾಸೋದ್ಯಮ ಒಂದು ಕೈಗಾರಿಕೆಯಾಗಿ ಬೆಳೆದರೆ ಇಲ್ಲಿನ ಆರ್ಥಿಕತೆಯ ರೂಪವೇ ಬದಲಾಗಿ ಬಿಡುತ್ತದೆ. ಪಕ್ಕದ ಗೋವಾಕ್ಕೆ ಬರುವ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುವಂತಾದರೆ ಸಾಕು ಇಲ್ಲಿನ ಚಿತ್ರವೇ ಬದಲಾಗಿ ಹೋಗುತ್ತದೆ.
ನಾನು ಈ ಬಗ್ಗೆ ಸಿರ್ಸಿಯಲ್ಲಿ ಕೆಲವು ಸ್ನೇಹಿತರ ಜೊತೆ ಚರ್ಚೆ ನಡೆಸಿದೆ. ಬೆಂಗಳೂರಿನಲ್ಲಿ ಹಲವು ವರ್ಷ ಮಣ್ಣು ಹೊತ್ತು ಈಗ ಊರಿಗೆ ಹಿಂತಿರುಗಿರುವ ಶಶಿಧರ್ ಭಟ್ ಕೂಡ ಅವರಲ್ಲಿ ಒಬ್ಬರು. ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ಹಲವು ವರ್ಷಗಳ ಕಾಲ ಮಣ್ನು ಹೊತ್ತ ಅವರು ನನ್ನ ಹೆಸರನ್ನು ಇಟ್ಟುಕೊಂಡು ನನ್ನನ್ನೇ ಫಝೀತಿಗೆ ಸಿಕ್ಕಿಸಿದವರು. ಅವರು ಮಠ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೇ ಮಠ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೆಸರು ನನ್ನ ಹೆಸರು ಒಂದೇ ಆದ್ದರಿಂದ ಬೆಂಗಳೂರಿನಿಂದ ಹೊರಗೆ ಹೋದಾಗ ಹಲವರು ನಾನೇ ಅವರೆಂದು ಮಾತನಾಡಿಸಿದ ಹಲವು ಉದಾಹರಣೆಗಳೂ ಉಂಟು.
ಈ ಶಶಿಧರ್ ಭಟ್ ಊರಿನಲ್ಲಿ ಅಜ್ಜಿ ಮನೆ ಎಂಬ ಹೋಮ್ ಸ್ಟೇ ನಡೆಸುತ್ತಿದ್ದಾರೆ. ಹಾಗೆ ಸಚಿವ ವಿಶ್ವೇಶ್ವರ ಹೆಗಡೆ ಅವರ ಹತ್ತಿರದ ಸಂಬಂಧಿ ಸುಹಾಸ್ ಹೆಗಡೆ ಕೂಡ ಹೊಂ ಸ್ಟೇ ನಡೆಸುತ್ತಿದ್ದಾರೆ. ನಾವು ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದೆವು.ಶಶಿಧರ್ ಭಟ್ಟರ ಮನೆಯ ಹಿಂದೆ ಸೂರ್ಯಾಸ್ಥದ ಗುಡ್ಡದ ಮೇಲೆ ಕುಳಿತು ಮಾತನಾಡಿದೆವು. ಆಗ ನಮ್ಮ ಮನಸ್ಸಿನಲ್ಲಿ ಬಂದ ಆಲೋಚನೆಗಳು ಹಲವು. ಅದನ್ನೆಲ್ಲ ಕಾರ್ಯ ರೂಪಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಕಾರ್ಯ ಯೋಜನೆಯನ್ನು ರೂಪಿಸಬೇಕಾಗಿದೆ, ನಾನು ಕಾರ್ಯ ಯೋಜನೆಯನ್ನು ರೂಪಿಸಿ ಕೋದುವುದಾಗಿ ಅವರಿಗೆ ಹೇಳಿದ್ದೇನೆ. ಇನ್ನೊಂದೆರಡು ದಿನಗಳಲ್ಲಿ ನಾನು ಈ ಕೆಲಸ ಮಾಡಬೇಕಾಗಿದೆ.
ನನ್ನ ಉತ್ತರ ಕನ್ನಡ ಜಿಲ್ಲೆ ಮೊದಲಿನಂತಿಲ್ಲ. ಕಾಡು ಕಡಿಮೆಯಾಗಿದೆ. ಮಳೆ ಮನಸ್ಸಿಗೆ ಬಂದಾಗ ಬರುತ್ತದೆ. ಅಡಿಕೆ ಬೆಲೆಯನ್ನು ನಂಬಿಕೊಳ್ಳುವಂತಿಲ್ಲ. ಆದರೂ ಇಲ್ಲಿನ ಜನ ಯಕ್ಷಗಾನ, ತಾಳ ಮದ್ದಲೆ, ಸಂಗೀತ ಕಚೇರಿಗಳ ನಡುವೆ ಸಂತೃಪ್ತರಾಗಿಯೇ ಬದುಕುತ್ತಿದ್ದಾರೆ. ಇದೇ ಪರಿಸರ, ಇದೇ ಯಕ್ಷಗಾನ, ಸಂಗೀತ ಕಚೇರಿಗಳು ನನ್ನಂಥವನನ್ನು ಬೆಳೆಸಿವೆ. ನಾನು ಅಲ್ಲಿ ಹೇಳಿದೆ;
ನಗೆ ಇಂದು ಸ್ವಲ್ಪ ಮಾತನಾಡಲು ಬರೆಯಲು ಬರುತ್ತಿದ್ದರೆ, ಟೀವಿಯಲ್ಲಿ ಕಾರ್ಯಕ್ರಮ ನಡೆಸಲು, ಧಾರಾವಾಹಿಗಳನ್ನು ನಿರ್ಮಿಸಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ನನ್ನ ಜಿಲ್ಲೆ ಮತ್ತು ಅಲ್ಲಿನ ಪರಿಸರ. ಕಾಡಿನ ಮಧ್ಯೆ ಇದ್ದರೂ ಮಾತನಾಡಲು ಕಲಿಸಿದ್ದೇ ಈ ಜಿಲ್ಲೆ. ನಾನು ಈ ಜಿಲ್ಲೆಗೆ ಇಲ್ಲಿನ ಪರಿಸರಕ್ಕೆ ಇಲ್ಲಿನ ಜನರಿಗೆ ಹೇಗೆ ತಾನೇ ಕೃತಜ್ನತೆ ಸಲ್ಲಿಸಲು ಸಾಧ್ಯ ?
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
6 comments:
ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮಗಿರುವ ಅಭಿಮಾನ ಅಕ್ಕರೆಯ ಭಾವನೆಗಳನ್ನು ಓದಿ ತು೦ಬಾ ಖುಶಿಯಾಯಿತು.ನಿಜಕ್ಕು ಅಲ್ಲಿಯ ಜನರ ಸರಳ ಮನಸ್ಸು ಸ೦ಸ್ಕಾರಗಳು ಕಲುಷಿತ ಮನಸ್ಸಿನ ವಾತಾವರಣವನ್ನೂ ನಿರ್ಮಲ ಗೊಳಿಸುವ ಶಕ್ತಿಯನ್ನು ಪಡೆದಿದೆ.
Nice article sir. Your unchaned love towards ur district shows ur personality. I know u personly I know how much u respect all.
One thing sir, whenever a new project planned over Uttara Kannada district. We have seen ecologists starts their protest. Then how can any Govt., welcomes industrialists into such a hurdle atmospher?
Pl. Visit my blog once.
www.badari-poems.blogspot.com
ಶಶಿಧರ ಭಟ್ಟರಿಗೆ ನಮಸ್ಕಾರ,
ನಾನು ಹುಟ್ಟಿದ್ದು ಸಾಗರದಲ್ಲಿ, ಆದರೆ ನನ್ನ ಬಾಲ್ಯ ಕಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಭಟ್ರೆ. ತುಂಬ ಚಂದದ ಊರು ಅದು.
ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ನಿಮ್ಮ ಲೇಖನ ಓದಿ ಬಹಳ ಸಂತೋಷವಾಯಿತು. ಆ ಜಿಲ್ಲೆಗೆ ಏನಾದರೂ ಒಳ್ಳೆಯದು ಮಾಡ್ಡಬೇಕೆಂಬ ನಿಮ್ಮ ಮನಸ್ಸಿನ ಆಸೆ ತಿಳಿದು ಮತ್ತೂ ಸಂತೋಷವಾಯಿತು. ನಾನೂ ಈಗ ಆ ಜಿಲ್ಲೆಯಿಂದ ಭೌತಿಕವಾಗಿ ದೂರವಾಗಿದ್ದೇನೆ - ಬೆಂಗಳೂರಿನಲ್ಲಿದ್ದೇನೆ.
ಆದರೂ ಉತ್ತರ ಕನ್ನಡ ಜಿಲ್ಲೆ ಮನಸ್ಸಿನಿಂದ ದೂರವಾಗಿಲ್ಲ, ಆಗುವುದೂ ಇಲ್ಲ.
ಉತ್ತಮ ಲೇಖನ ಮಾನ್ಯರೇ.
ನಿಮ್ಮ ಯೋಜನೆಗಳು,ಯೋಚನೆಗಳು ಕಾರ್ಯರೂಪಕ್ಕೆ ಬರಲಿ ಎಂಬುದು ನನ್ನ ಹಾರೈಕೆ.
ರಘುಮುಳಿಯ
"जननी जन्मभूमिश्च स्वर्गादपि गरीयसी"
ನಿಜವಾಗ್ಲೂ ನಮ್ಮೂರು-ಜಿಲ್ಲೆ ಸ್ವರ್ಗಕ್ಕಿಂತ ಮಿಗಿಲು.
ನಿಮ್ಮ ನನಸಾದ ಕನಸುಗಳ ನೋಡಲು ಬಯಸುವ
- ಗುರುಪಾದ್ ಹೆಗಡೆ, ಶಿರಸಿ.
Post a Comment