Sunday, November 14, 2010

ಪತ್ರಿಕೋದ್ಯಮ ಮತ್ತು ರಾಜಕಾರಣ.......

ನಾನು ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಮೊದಲನೆಯದು ಸಂಯುಕ್ತ ಕರ್ನಾಟಕದಲ್ಲಿ ನಡೆದ ತರಬೇತಿ ಕಾರ್ಯಕ್ರಮ. ಅಲ್ಲಿ ವರದಿಗಾರಿಕೆಯ ಬಗ್ಗೆ ಭಾಷಣ ಮಾಡಲು ಆಹ್ವಾನ ಬಂದಾಗ ನನ್ನಲ್ಲಿ ಮೂಡಿದ್ದು ಧನ್ಯತಾ ಭಾವ. ನಾನು ನನ್ನ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ. ಆ ಪತ್ರಿಕೆ ನನಗೆ ಪತ್ರಿಕೋದ್ಯಮದ ಆ ಆ ಇ ಕಲಿಸಿದ ಪತ್ರಿಕೆ. ಜೊತೆಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಇತಿಹಾಸವೂ ಕೂಡ ಹಾಗೆ.
ಆದರೆ ಅಲ್ಲಿ ಹೋದಾಗ ಏನು ಮಾತನಾಡುವುದು ? ಇವತ್ತಿನ ಪತ್ರಿಕೋದ್ಯಮದ ಬಗ್ಗೆ ಮಾತನಾಡೋಣವೆ ? ಪತ್ರಕರ್ತರ ಬಗ್ಗೆ ಮಾತನಾಡೋಣವೆ ? ಎಂಬ ಗೊಂದಲ. ನಾನು ಹೇಳಿದೆ;
ಪತ್ರಿಕೋದ್ಯಮ ಎನ್ನುವುದರ ಬಗ್ಗೆಯೇ ನನ್ನ ಆಕ್ಷೇಪವಿದೆ. ನಾನು ಇದನ್ನು ಪತ್ರಿಕಾ ವ್ಯವಸಾಯ ಎಂದು ಕರೆಯುತ್ತೇನೆ. ಭಾರತೀಯ ಪತ್ರಿಕಾವೃತ್ತಿ ಉದ್ಯಮ ವಾಗುವ ಉದ್ದೇಶದಿಂದ ಹುಟ್ಟಿದ್ದಲ್ಲ. ಉದ್ಯಮ ಎಂದರೆ ಲಾಭ ನಷ್ಟದ ಮೇಲೆ ನಡೆಯುವಂತಹುದು. ಹೇಗಾದರೂ ಲಾಭ ಗಳಿಸುವುದು ಉದ್ಯಮದ ಗುಣದರ್ಮ. ಆದರೆ ನಮ್ಮಲ್ಲಿ ಪತ್ರಿಕೋದ್ಯಮಕ್ಕೆ ಒಂದು ಪಾವಿತ್ರ್ಯತೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವುದು ಪತ್ರಿಕಾ ವ್ಯವಸಾಯದ ಉದ್ದೇಶವಾಗಿತ್ತು. ನಂತರ ಕೆಲವು ವರ್ಷಗಳ ಕಾಲ ಸ್ವಾತಂತ್ರ್ಯದ ನೆನಪಿನಲ್ಲಿ ಕಾಲ ಕಳೆದ ಪತ್ರಿಕೋದ್ಯಮ ನಂತರದ ದಿನಗಳಲ್ಲಿ ಕಾಂಗ್ರೆಸ್ ವಿರೋಧಿ ಭೂಮಿಕೆಯನ್ನು ನಿರ್ವಹಿಸಿತು. ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದಾಗ ನಿಜವಾದ ಪ್ರತಿ ಪಕ್ಷವಾಗಿ, ಪೋರ್ಥ್ ಎಸ್ಟೇಟ್ ಆಗಿ ಕಾರ್ಯನಿರ್ವಹಿಸಿತು. ಕರ್ನಾಟಕದಲ್ಲಂತೂ ೮೦ ದಶಕದಲ್ಲಿ ಮೂರು ಜನಪರ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಮಾಧ್ಯಮಗಳು. ಆದರೆ ೯೦ ರ ದಶಕದಲ್ಲಿ ಪತ್ರಿಕೋದ್ಯಮ ಬದಲಾಯಿತು. ಹಾಗೆ ಪತ್ರಿಕೋದ್ಯಮಿಗಳು ಬದಲಾದರು.
ಪತ್ರಿಕೋದ್ಯಮದಿಂದ ಈ ಸಮಾಜದಲ್ಲಿ ಇಲ್ಲದಿರುವುದನ್ನು ನಿರೀಕ್ಷಿಸಲಾಗದು. ಅದೂ ಸಹ ಈ ಸಮಾಜದ ಒಂದು ಭಾಗವೇ. ಆದರೆ ಸಮಾಜದ ಭಾಗವಾಗಿಯೂ ಸಮಾಜದ ಹೊರಗೆ ನಿಂತು ನೋಡುವ ಮನಸ್ಥಿತಿ ಪತ್ರಿಕೋದ್ಯಮಕ್ಕೆ ಇರಬೇಕು ಒಂದು ರೀತಿಯಲ್ಲಿ ಪತ್ರಿಕೋದ್ಯಮ ಸಮಾಜದ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡಬೇಕು. ಆದರೆ ಇಂದು ಪತ್ರಿಕೋದ್ಯಮ ಈ ಕಾರ್ಯವನ್ನು ನಿರ್ವಹಿಸುತ್ತಿಲ್ಲ.
ನಾನು ಇನ್ನೊಂದು ಮಾತನ್ನು ಹೇಳಿದೆ. ಲೋಕಾಯುಕ್ತದಂತಹ ಸಂಸ್ಥೆಗಳು ಎಲ್ಲ ಪತ್ರಿಕೋದ್ಯಮಿಗಳ ಮತ್ತು ಪತ್ರಿಕಾ ಸಂಪಾದಕರ ಆಸ್ತಿಯ ಬಗ್ಗೆ ತನಿಖೆ ನಡೆಸಬೇಕು.
ಈ ಮಾತು ಏಷ್ಟು ಜನರಿಗೆ ಇಷ್ಟವಾಯಿತೋ ಗೊತ್ತಿಲ್ಲ. ಆದರೆ ಅಂತಹ ಒಂದು ವ್ಯವಸ್ಥೆ ಬೇಕು ಎಂದು ಹೇಳುವವನು ನಾನು. ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನಾನು ಭ್ರಷ್ಟರಾಗಕೂಡದು. ನಾವು ಭ್ರಷ್ಟರಾದರೆ ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನೈತಿಕ ಹಕ್ಕು ನಮಗೆ ಬರಲಾರದು. ಆದರೆ ಇಂದು ಒಬ್ಬ ಪತ್ರಿಕೋದ್ಯಮಿ ಮತ್ತು ರಾಜಕಾರಣಿಗಳ ನಡುವಿನ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಬಹಳಷ್ಟು ಪತ್ರಿಕೋದ್ಯಮಿಗಳು ರಾಜಕಾರಣಿಗಳಾಗಿದ್ದಾರೆ. ರಾಜಕಾರಣಿಗಳು ಪತ್ರಿಕೋದ್ಯಮಿಗಳಾಗಿದ್ದಾರೆ. ರಾಜಕಾರಣಿಗಳ ಪರವಾಗಿ ಮಧ್ಯಸ್ಥಿಕೆ ನಡೆಸುವ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ರಾಜಕಾರಣಿಗಳಿಗೆ ಭಾಷಣ ಮಾಡಲು ಕಲಿಸಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಿಕಾ ಮಹಾಶಯರು ಕಾಣಸಿಗುತ್ತಾರೆ.
ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಪತ್ರಿಕೆಗಳು ನಿಷ್ಪಕ್ಷಪಾತ ಮತ್ತು ನಿಷ್ಠುರವಾದ ನಿಲುಮೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಸುಳ್ಳನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಅಲ್ಲ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಸ್ನೇಹಿತರೊಬ್ಬರು ಹೇಳಿದರು. ಇದು ಪತ್ರಕರ್ತರಿಗೆ ಬಿಜೆಪಿ ಸರ್ಕಾರ ನೀಡಿದ ಬೆಂಬಲ ಬೆಲೆ. ಈ ಮಾತು ಸುಳ್ಳಾಗಲಿ ಎಂದು ನಾನು ಆಶಿಸುತ್ತೇನೆ. ಆದರೆ ನಾವು ಆಶಿಸಿದ್ದೆಲ್ಲ ಸುಳ್ಳಾಗುವುದಿಲ್ಲ. ಜೊತೆಗೆ ಬೆಂಬಲ ಬೆಲೆ ಪಡೆದವರ ನಡುವೆ ಕುಳಿತುಕೊಳ್ಳುವ ಪ್ರಾಮಾಣಿಕ ಪತ್ರಕರ್ತರೂ ಮುಸುಕಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಟೀವಿ ವಾಹಿನಿಗಳಲ್ಲಿ ಪತ್ರಕರ್ತರ ಅಥವಾ ತೆರೆಯ ಮೇಲೆ ಬರುವವರಲ್ಲಿ ಅಹಂಕಾರ ಹೆಚ್ಚುತ್ತಿದೆ. ಇದು ಮಾಧ್ಯಮದ ಅಹಂಕಾರ. ಅಕ್ಷರ ಅಹಂಕಾರ. ನಮ್ಮ ಮುಂದೆ ಕುಳಿತವನು ಯಕಶ್ಚಿತ ವ್ಯಕ್ತಿ ಮತ್ತು ಅವನಿಗೆ ಬುದ್ದಿ ಹೇಳುವುದಕ್ಲಾಗಿಯೇ ನಾನು ಈ ಭರತ ಭೂಮಿಯಲ್ಲಿ ಜನ್ಮವೆತ್ತಿ ಈ ಟೀವಿ ಸ್ಟುಡೀಯೋದಲ್ಲಿ ಬಂದು ಕುಳಿತಿದ್ದೇನೆ ಎಂಬ ವರ್ತನೆ.
ಯಾವನು ಇನ್ನೊಬ್ಬನ ಮಾತನ್ನು ಕೇಳಿಸಿಕೊಳ್ಳಲಾರನೋ ಅವನು ಸರ್ವಾಧಿಕಾರಿಯಾಗಿರುತ್ತಾನೆ. ಪತ್ರಿಕೋದ್ಯಮಿ ಸರ್ವಾಧಿಕಾರಿಯಲ್ಲ. ಆತ ಜನರ ಪ್ರತಿನಿಧಿಯಾಗಿರುತ್ತಾನೆ. ಸಮಾಜದ ಸಾಕ್ಷಿ ಪ್ರಜ್ನೆಯಾಗಿರುತ್ತಾನೆ. ಸತ್ಯವನ್ನು ಹೇಳುವ ಪ್ರವಾದಿಯಾಗಿರುತ್ತಾನೆ. ದೊಡ್ಡ ಗಂಟಲಿನಲ್ಲಿ ಕೂಗುವವರು, ಬೇರೆಯವರನ್ನು ಹೀಗಳಿಯುತ್ತ ಚರ್ಚೆ ನಡೆಸುವವರು ಉತ್ತಮ ಪತ್ರಿಕೋದ್ಯಮಿಯಾಗಲಾರರು. ಇಂತವರು ಒಳಗೆ ಠೊಳ್ಳಾಗಿರುತ್ತಾರೆ. ತಮ್ಮ ಠೊಳ್ಳುತನವನ್ನು ಮುಚ್ಚಿಕೊಳ್ಳುವುದಕ್ಕಾಗಿ ಹೊರಗೆ ಇಂಥಹ ಮುಖವಾಡ ಧರಿಸುತ್ತಿರುತ್ತಾರೆ. ಉಪದೇಶಗಳ ಮೂಲಕ ತಮ್ಮ ಭ್ರಷ್ಟತೆಯನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುತ್ತಾರೆ.
ಇವೆಲ್ಲ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನಾನು ಆಡಿದ ಮಾತುಗಳು. ಈ ಮಾತುಗಳನ್ನು ಹೇಳುವಾಗ ನನ್ನಲ್ಲಿ ವಿಷಾಧ ಭಾವವೇನೂ ಇರಲಿಲ್ಲ. ಒಂದು ಸಮಾಜ ತನಗೆ ಬೇಕಾದ್ದನ್ನು ಪಡೆದುಕೊಳ್ಳುತ್ತದೆ. ಗಟ್ಟಿಯಾದದ್ದು ಉಳಿಯುತ್ತದೆ. ಪೊಳ್ಳಾಗಿದ್ದು ಉದುರಿ ಹೋಗುತ್ತದೆ.

6 comments:

ಚಿನ್ಮಯ ಭಟ್ said...

ಪತ್ರಿಕಾ ವ್ಯವಸಾಯ!!!!
ಸಕತ್ತಾಗಿದೆ ಗುರುಗಳೆ......
ಆದರೆ.......
ಇಂದಿನ ಮಾಧ್ಯಮ ಜಗತ್ತು ,ಸತ್ಯತೆಯ ನೀರಿಲ್ಲದೆ ಸೊರಗುತ್ತಿದೆಯಲ್ಲಾ ಸಾರ್?
ಯಾವ ನೈತಿಕತೆಯ ಬೀಜವನ್ನು ನಮ್ಮ ಹಿರಿಯರು ಹಾಕಿದ್ದರೋ ಅದರ ಫಲ ಇಂದಿನ ಹೊಟ್ಟೆಬಾಕರಿಗೆ ಸಾಲದಲ್ಲಾ?
ಅದಾವುದೋ ಬೆಲೆತರುವ ಬೆಳೆ ಬೆಳೆಯಲು ಹೋಗುತ್ತಿರುವೆವಲ್ಲ!!!ನಾಟಿಯ ಬಿಟ್ಟು, ಯಾವುದೋ ಹೈಬ್ರಿಡ್ ತಳಿ ಹಾಕಿದ್ದೇವಲ್ಲಾ, ಅದು ಹೇಗೆ ನಮಗೆ ,ಬಲಿಷ್ಟ ಫಲ ನೀಡೀತು?





ಅಶ್ಯತ್ಥಾಮೋ ಹತ: ಕುಂಜರ: ಎಂಬುದನ್ನೆ ನೆಪ ಮಾಡಿ ಕೊಂಡ, ಈಗಿನ ಧರ್ಮ ರಾಯರು ,ಜಾಣ ಕುರುಡು ತೋರಿಸುತ್ತಿದ್ದಾರೆಯೆ??????

ಪ್ರತೀ ಸುದ್ದಿಯೂ ಜನಕ್ಕೆ ಸಿನೆಮಾದಂತೆ ಕಾಣಬೇಕು,ಇಲ್ಲದಿದ್ದರೆ ಅದು ವಿಶೇಷವೇ ಅಲ್ಲ ಅಲ್ಲವೇ?

ಮಹೇಶ ಭಟ್ಟ said...

ಪತ್ರಿಕೋದ್ಯಮ ಮತ್ತು ಪತ್ರಿಕಾ ವ್ಯವಸಾಯ ಇವೆರಡಕ್ಕೂ ವ್ಯತ್ಯಾಸ ಇದೆ. ಇಂದು ಹಣ ಹಾಕಿ ಹಣ ತೆಗೆಯುವ ಒಂದು ಮಾರ್ಗ. ಪತ್ರಿಕೆಯ ಬಗ್ಗೆ ಗಂಧ ಗಾಳಿಯೂ ಇಲ್ಲದವನೂ ಸಹ ಪತ್ರಿಕೆಯಲ್ಲಿ ಹಣ ಮಾಡಬಹುದು ಎಂದರೆ ಪತ್ರಿಕೆ ಸ್ಥಾಪನೆ ಮಾಡುವ ಕಾಲ ಇದು. ಇದನ್ನು ಬಿಟ್ಟು ಇನ್ನೇನನ್ನು ನಿರೀಕ್ಷಿಸಬಹುದದು. ಆದರೂ ಸಮಾಜ ಇಂತಹ ಹಲವಾರು ಸವಾಲುಗಳನ್ನು ಎದುರಿಸಿ ನಿಂತಿದೆ

http://santasajoy-vasudeva.blogspot.com said...

ನಿಮ್ಮ ಮಾತು ಸತ್ಯ ಶಶಿ ಸಾರ್ ನೂರಕ್ಕೆ ನೂರರಷ್ಟು ಬುದ್ಧಿ ಇಲ್ಲದವರು ತಾವಿದ್ದರೆ ಮಾತ್ರ ಪತ್ರಿಕಾರಂಗ ನಡೆಯುವುದು ಎನ್ನುವ ಮಟ್ಟಿಗೆ ತಮ್ಮನ್ನು ತಾವು ಬೆಳೆಸಿಕೊಂಡಿದ್ದಾರೆ. ಇದೊಂದು ವಿಷಾದಕರ ಸಂಗತಿ. ಬಂದ ಅತಿಥಿ ಮಹೋದಯರ ಬಗ್ಗೆ ನಿರ್ಲಕ್ಷ್ಯ, ನಮ್ಮಿಂದ ಅವರು ಎನ್ನುವ ಹುಂಬತನ ಹೆಚ್ಚಾಗುತ್ತಿದೆ. ಈಗಾಗಲೇ ಜನತೆಗೆ ಮಾಧ್ಯಮದ ಬಗ್ಗೆ ಸಣ್ಣ ಹೇವರಿಕೆ ಆರಂಭ ಆಗಿದೆ. ಅದು ಇನ್ನು ಹೆಚ್ಚಾಗುವ ದಿನಗಳು ದೂರ ಇಲ್ಲ ಆಗ ಜನತೆ ಮಾಧ್ಯಮವನ್ನು ಹಳದಿ ಕಣ್ಣಿಂದ ನೋಡುತ್ತದೆ. ನೀವು ಹೇಳಿದಂತೆ ನಿಷ್ಟಾವಂತ ಪತ್ರಕರ್ತರು ಮಸುಕಾಗಿ ಬಿಡ್ತಾರೆ. ಮೀಡಿಯಾದವರು ತಾವು ವಿಶೇಷ ಎನ್ನುವುದನ್ನು ಮನದಿಂದ ಕಿತ್ತು ಬಿಸಾಡಿದರೆ ಅವರು ವಿಶೇಷವಾಗಿ ಬೆಳಿತಾರೆ ಅಲ್ವ ಸರ್. ರೈಟಪ್ ಇಷ್ಟ ಆಯ್ತು ನನಗೆ :-) ... ಹೇಗಿದ್ದೀರಿ ಸರ್ :-)

shashidhar Bhat said...

ಚಿನ್ಮಯ; ನಾವು ಮಾಧ್ಯಮದಲ್ಲಿ ಕೆಲಸ ಮಾಡುವವರು ರಾಜಕಾರಣಿಗಳಾಗಿದ್ದೇವೆ. ನಮ್ಮಲ್ಲಿ ಕನಿಷ್ಠ ಸಾಮಾಜಿಕ ಕಳಕಳಿ ಇಲ್ಲ. ಫೋರ್ಥ್ ಎಸ್ಟೇಟ್ ಇಂದು ಎಸ್ಟೇಟ್ ಎಜೆಂಟರುಗಳ ತಾಣವಾಗುತ್ತಿದೆ.
ಮಹೇಶ್; ಪತ್ರಿಕೆ ಮತ್ತು ಸಮೂಹ ಮಾಧ್ಯಮದ ಯಜಮಾನರಿಗೆ ಕನಿಷ್ಟ ಬದ್ಧತೆ ಬೇಕು. ಮಾಧ್ಯಮಕ್ಕೂ ಒಂದು ಐಟಿ ಬಿಟಿ ಕಂಪೆನಿಗೂ ಇರುವ ವ್ಯತ್ಯಾಸ ಅವರಿಗೆ ತಿಳಿದಿರಬೇಕು. ಅದಿಲ್ಲದಿದ್ದರೆ ಆಗುವುದು ಹೀಗೆ....

ಜಯಶ್ರೀ;ಚೆನ್ನಾಗಿದ್ದೀನ್ರಿ. ಗಾಂಧೀಜಿ ಪತ್ರಿಕೋದ್ಯಮ ಎಂದರೆ ಸತ್ಯದೆಡೆಗಿನ ದಾರಿ ಎಂದಿದ್ದರು. ಆದರೆ ಇಂದು ನಾವೆಲ್ಲ ನಾವು ಗ್ರಹಿಸಿದ್ದೇ ಪರಮ ಸತ್ಯ ಎನ್ನುವ ಭ್ರಮೆಯಲ್ಲಿ ಇದ್ದೇವೆ. ಆದರೆ ಸತ್ಯ ಎನ್ನುವುದು ಭ್ರಮೆ ಅಲ್ಲ.

ಚಿನ್ಮಯ ಭಟ್ said...

ಸರಿ ಸಾರ್.. ತುಂಬಾ ಧನ್ಯವಾದ ಈ ತರಹದ ಚರ್ಚಾಬರಹಕ್ಕೆ..ಮುಂದುವರೆಯಲಿ!!!
ಬನ್ನಿ ನಮ್ಮನೆಗೂ
http://chinmaysbhat.blogspot.com

manjunath said...

its one of the best article to a giving news paper

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...